ಅಂಕಣ ಸ್ಪ್ಯಾನಿಷ್ ಗಾದೆಗಳು

ಆಳಾಗಿ ದುಡಿ ,ಹಸಿದು ತಿನ್ನು !

ಹಸಿದಾಗ ತಿನ್ನುವುದು ಸಂಸ್ಕೃತಿ, ಹಸಿವಿಲ್ಲದೆ ತಿನ್ನುವುದು ವಿಕೃತಿ ಎನ್ನುವುದು ಸನಾತನ ಹಿಂದೂ ಧರ್ಮದಲ್ಲಿ ಹೇಳಿರುವ ಮಾತು. ಹಸಿವಿಲ್ಲದೆ ತಿನ್ನುವುದರಿಂದ ಮುಖ್ಯವಾಗಿ ಮತ್ತೊಬ್ಬ ಹಸಿದವನ ಅನ್ನ ಕಸಿದ ಹಾಗೆ ಆಗುತ್ತದೆ. ಜೊತೆಗೆ ಹೆಚ್ಚು ತಿಂದವನ ಆರೋಗ್ಯ ಕೂಡ ಕೆಡುತ್ತದೆ. ಮಿತಾಹಾರ ಬದುಕಿಗೆ ಒಳ್ಳೆಯದು ಎನ್ನುವುದು ನಮ್ಮ ಎಲ್ಲಾ ಹಿರಿಯರು ಕಾಲದಿಂದ ಕಾಲಕ್ಕೆ ಹೇಳುತ್ತಲೇ ಬಂದಿದ್ದಾರೆ. ಬದುಕಲು ಎಷ್ಟು ಬೇಕು ಅಷ್ಟು ತಿನ್ನಬೇಕು; ಜಾಸ್ತಿಯೂ ಆಗಬಾರದು ಕಡಿಮೆಯೂ ಆಗಬಾರದು. ಊಟದ ಮಹತ್ವವನ್ನು ಸಾರಲು ‘ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎನ್ನುವ ಗಾದೆ ಮಾತನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ. ಸರಿ ಪ್ರಮಾಣದಲ್ಲಿ ಆಹಾರ ತಿಂದರೆ ನಮಗೆ ಯಾವುದೇ ರೋಗರುಜಿನಗಳ ಕಾಟವಿರುವುದಿಲ್ಲ. ಊಟ ಹೆಚ್ಚಾದರೆ ಬೊಜ್ಜು ಸಂಗ್ರಹವಾಗುತ್ತದೆ. ಕ್ರಮೇಣ ಅದು ಎಲ್ಲಾ ರೋಗಗಳಿಗೆ ಆಹ್ವಾನ ನೀಡುತ್ತದೆ. ಎಷ್ಟು ಊಟ ಸರಿ ಪ್ರಮಾಣ ಎನ್ನುವುದು ನಿಜವಾಗಿಯೂ ನಿಖರವಾಗಿ ಉತ್ತರಿಸಲಾಗದ ಪ್ರಶ್ನೆ. ಜಗತ್ತಿನ ಎಲ್ಲಾ ಜನರಿಗೂ ಇಷ್ಟೇ ಆಹಾರ ಎಂದು ಹೇಳುವಂತಿಲ್ಲ. ವ್ಯಕ್ತಿಯಿಂದ ವಕ್ತಿಗೆ ಬದಲಾಗುತ್ತದೆ. ಹೀಗಾಗಿ ಮಿತಾಹಾರ ಎನ್ನುವುದು ಎಷ್ಟು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ ಹಸಿವಾದಾಗ ಮಾತ್ರ ತಿನ್ನಬೇಕು. ಹಸಿವಿಲ್ಲದೆ ತಿನ್ನುವುದು ನಮ್ಮ ಆರೋಗ್ಯಕ್ಕೆ ನಾವೇ ಕೊಡಲಿ ಪೆಟ್ಟು ಕೊಟ್ಟಂತೆ ಎನ್ನುವುದು ಮಾತ್ರ ಎಲ್ಲರಿಗೂ ಅನ್ವಯ.

ಎಲ್ಲಿಯವರೆಗೆ ನಮ್ಮ ಸಮಾಜ ‘ಹಸಿದಾಗ ಮಾತ್ರ ತಿನ್ನುವ ‘ ಪದ್ಧತಿ ಪಾಲಿಸುತ್ತಿತ್ತೋ ಎಲ್ಲವೂ ಸರಿ ಇತ್ತು. ಈಗ ವಿಶ್ವದ ಎಲ್ಲೆಡೆ ಮಾಲ್’ಗಳ ಹಾವಳಿ ಶುರುವಾಗಿ ದಿನದ ಎಲ್ಲಾ ಹೊತ್ತಿನಲ್ಲೂ ಜನ ತಿನ್ನುತ್ತಲೇ ಇರುವುದು ಕಾಣುತ್ತಿದ್ದೇವೆ. ಇದರ ಜೊತೆಗೆ ಕಂಡು ಕೇಳರಿಯದ ಚಿತ್ರವಿಚಿತ್ರ ರೋಗಗಳು ಕೂಡ ನಮ್ಮ ಜೀವನದಲ್ಲಿ ಸ್ಥಾನ ಪಡೆಯುತ್ತಿವೆ. ಇದಕ್ಕೆಲ್ಲ ಮದ್ದು ಸರಿಯಾದ ಆಹಾರ ಪದ್ಧತಿ ಅನುಸರಿಸುವುದು. ಆಹಾರ ಕ್ರಮ ಬಲ್ಲವನಿಗೆ ಹೇಗೆ ರೋಗದ ಭಯವಿರುವುದಿಲ್ಲವೋ; ಹಾಗೆಯೇ ಉತ್ತಮ ಮಾತುಗಾರನಿಗೆ ಇನ್ನೊಬ್ಬರ ಜೊತೆಗೆ ಜಗಳದ ಭಯ ಕೂಡ ಇರುವುದಿಲ್ಲ ಎನ್ನುವುದನ್ನು ನಮ್ಮ ಹಿರಿಯರು ಸರಳ ಮಾತುಗಳಲ್ಲಿ ನಮಗೆ ತಿಳಿಸಿ ಹೇಳಿದ್ದಾರೆ .

ಸ್ಪೇನ್ ದೇಶದ ಗಾದೆಗಳು ಕೂಡ ಹೆಚ್ಚು ಕಡಿಮೆ ನಮ್ಮ ಗಾದೆಗಳ ಆಸುಪಾಸಿನಲ್ಲಿ ಸುತ್ತುಹಾಕುತ್ತವೆ. ಇಲ್ಲಿನ ಜನ  “Comer sin apetito hace daño y es delito” (ಕೊಮೆರ್ ಸಿನ್ ಅಪೇತಿತೊ ಹಾಸೆ ದಾನ್ಯೋ  ಯಿ  ಈಸ್ ದೆಲಿತೋ) ಅರ್ಥ ಮಾತ್ರ ಸೇಮ್ !’ ಹಸಿವಿಲ್ಲದೆ ತಿಂದರೆ ನೋವುಂಟು ಮಾಡುತ್ತದೆ ಮತ್ತು ಅದು ಅಪರಾಧ’ ಎನ್ನುವುದು ಯಥಾವತ್ತು ಅನುವಾದ. ಇದರ ಒಳಾರ್ಥ ಕೊಡುವ ಅರ್ಥ ಕೂಡ ಅದೇ ಆಗಿದೆ. ಹಸಿವಿಲ್ಲದೆ ತಿನ್ನುವುದು ಎಲ್ಲಾ ಧರ್ಮದಲ್ಲಿ, ಜನರಲ್ಲಿ ಅಪರಾಧ ಎನ್ನುವಂತೆ ಬಿಂಬಿಸಲಾಗಿತ್ತು. ಪ್ರಾಣಿ ವಲಯದಲ್ಲಿ ಕೂಡ ಇಂದಿಗೂ ಅವುಗಳು ಹಸಿವಿಲ್ಲದೆ ಭೇಟೆ ಆಡುವುದಿಲ್ಲ, ತಿನ್ನುವುದಿಲ್ಲ. ಆದರೆ ಮನುಷ್ಯ ಪ್ರಾಣಿ ಬದಲಾಗಿದ್ದಾನೆ. ಬದಲಾದ ತನ್ನ ನಡವಳಿಕೆಗೆ ಸರಿಯಾದ ಬೆಲೆಯನ್ನು ತರುತ್ತಿದ್ದಾನೆ. ಇನ್ನಾದರೂ ಎಚ್ಚರಗೊಂಡು ಹಸಿದಾಗ ಮಾತ್ರ ತಿನ್ನುವ ವಿವೇಚನೆ ಬೆಳಸಿಕೊಳ್ಳಬೇಕಿದೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

Comer: ತಿನ್ನು, ತಿನ್ನುವುದು ಎನ್ನುವ ಅರ್ಥ. ಕೊಮೆರ್ ಎನ್ನುವುದು ಉಚ್ಚಾರಣೆ.

sin apetito: ಹಸಿವಿಲ್ಲದೆ ಎನ್ನುವ ಅರ್ಥ. ಸಿನ್ ಅಪೇತಿತೊ ಎನ್ನುವುದು ಉಚ್ಚಾರಣೆ.

hace daño: ನೋವುಂಟು ಮಾಡುತ್ತದೆ. ಇಟ್ ಹರ್ಟ್ಸ್  ಎನ್ನುವ ಅರ್ಥ.  ಹಾಸೆ ದಾನ್ಯೋ ಎನ್ನುವುದು ಉಚ್ಚಾರಣೆ.

y : ಅಥವಾ / ಮತ್ತು ಎನ್ನುವ ಅರ್ಥ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಇಲ್ಲಿನ ಸನ್ನಿವೇಶದಲ್ಲಿ ಮತ್ತು ಎನ್ನುವ ಅರ್ಥ ಕೊಡುತ್ತದೆ.’ ಯಿ ‘ ಎನ್ನುವುದು ಉಚ್ಚಾರಣೆ.

es delito: ಅಪರಾಧ ಅಥವಾ ಮಾಡಬಾರದ ಕೆಲಸ ಎನ್ನುವ ಅರ್ಥ ಕೊಡುತ್ತದೆ.  ಈಸ್ ದೆಲಿತೋ  ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!