ಅಂಕಣ

ನಕಲಿ ವಿಮರ್ಶೆಗಳ ಅಸಲಿಯತ್ತು!

ವಾರಾಂತ್ಯದಲ್ಲಿ ಕುಟುಂಬದೊಡನೆ ಅಥವಾ ಸಂಗಾತಿಯೊಡನೆ ಸುಸಜ್ಜಿತ ರೆಸ್ಟೋರೆಂಟೊ೦ದರಲ್ಲಿ ನೆಚ್ಚಿನ ವ್ಯಂಜನಗಳ ಸವಿಯನ್ನು ಆಸ್ವಾದಿಸಲು  ಹೋಗುವ ತಯಾರಿಯಲ್ಲಿದ್ದು, ಅಸಲಿನಲ್ಲಿ ಅಂತರಜಾಲದಲ್ಲಿ ರೀವ್ಹಿವ್ ನೋಡಿ ಕಾಯ್ದಿರಿಸಿದ ಇಂತಹ ರೆಸ್ಟೋರೆಂಟ್ ಅಸ್ತಿತ್ವದಲ್ಲೇ ಇಲ್ಲದ್ದು ನಿಮಗೆ ತಿಳಿದರೆ ಏನು ಮಾಡುವಿರಿ? ಹೀಗಾಗಲು ಸಾಧ್ಯವೇ ಎಂದು ಹುಬ್ಬೇರಿಸಬೇಡಿ.

ಸಮೀಕ್ಷೆಯೊಂದರ ಅಂಕಿ ಅಂಶಗಳ ಪ್ರಕಾರ ವಿಶ್ವಾದ್ಯಂತ 97% ನಗರ ಪ್ರದೇಶಗಳ ಜನರು, ಯಾವುದೇ ವಸ್ತುವನ್ನು ಖರೀದಿಸುವಾಗಾಗಲಿ, ಹೊಟೇಲ್ ಮುಂಗಡ ಕಾಯ್ದಿರಿಸುವಾಗಾಗಲಿ, ರೆಸ್ಟೋರೆಂಟ್’ಗೆ ಊಟಕ್ಕೆ ಹೋಗುವಗಾಗಲಿ ಹಾಗೂ ವಾಹನ ಖರೀದಿಸುವಾಗಾಗಲಿ ಆನ್ ಲೈನ್ ರಿವ್ಹೀವ್’ಗಳನ್ನು ಓದಿಯೇ ಮುಂದುವರೆಯುತ್ತಾರೆ.  ಈ ರಿವ್ಹೀವ್’ಗಳನ್ನು ಓದಿ ನಾವು ಖರೀದಿಸುವ ಉತ್ಪನ್ನದ ವಿಶ್ವಾಸರ್ಹತೆ, ಗುಣಮಟ್ಟ ಮತ್ತು ಭರವಸೆಯ ಕುರಿತು ಅಮೂಲ್ಯ ಮಾಹಿತಿಯನ್ನು ಕಲೆಹಾಕಿ ನಂತರ ಮುಂದುವರೆಯುತ್ತೇವೆ. ಆದರೆ ಈ ಕುತಂತ್ರ ಮತ್ತು ಮೋಸಗಾರಿಕೆಯ ಯುಗದಲ್ಲಿ ಗ್ರಾಹಕರ ನಂಬಿಕೆಗೆ ಪಾತ್ರವಾದ ಆನ್ ಲೈನ್ ರಿವ್ಹೀವ್’ಗಳಲ್ಲೂ ಫೇಕ್ ರಿವ್ಹೀವ್’ಗಳ  ಕಲಬೆರಕೆಯ ಕುಚೋದ್ಯ ಪ್ರಾರಂಭವಾಗಿದೆ. ಬಹಳಷ್ಟು ಕಂಪನಿಗಳು ಇಂತಹ ಫೇಕ್ ರಿವ್ಹೀವ್’ಗಳ ಸಹಾಯದಿಂದ ಗ್ರಾಹಕರ ಭರವಸೆಯೊಂದಿಗೆ ಚೆಲ್ಲಾಟವಾಡಿ ತಮ್ಮ ಬೊಕ್ಕಸ ತುಂಬಿಕೊಳ್ಳುತ್ತಿವೆ. ಹೇಗೆ ಸಂಪರ್ಕ ಕ್ರಾಂತಿಯ ಈ ಯುಗದಲ್ಲಿ ಫೇಕ್ ನ್ಯೂಸ್’ನ ಹಾವಳಿ ಚತುರ್ದಿಕ್ಕುಗಳಲ್ಲಿ ಪಸರಿಸಿದೆಯೋ, ಅದೇ ರೀತಿ ಫೇಕ್ ರಿವ್ಹೀವ್’ಗಳ ಹಾವಳಿಯೂ ಜಾಲತಾಣಗಳಲ್ಲಿ ಸದ್ದಿಲ್ಲದೇ ಮನೆ ಮಾಡಿದೆ.

ಗ್ಲೋಬಲ್ ಇನ್ಫರ್ಮೇಷನ್ ಮೇಜರ್ಮೆಂಟ್ ಕಂಪನಿ ನೀಲ್ಸನ್’ನ ಅಂಕಿ ಅಂಶಗಳ ಪ್ರಕಾರ ವಿಶ್ವಾದ್ಯಂತ 68% ಜನರು ಕಣ್ಣು ಮುಚ್ಚಿ ಆನ್ ಲೈನ್ ರಿವ್ಹೀವ್’ಗಳನ್ನು ನಂಬುತ್ತಾರೆ! ಅದೇ ರೀತಿ ಏಶೀಯ ಪೆಸಿಫಿಕ್’ನಲ್ಲಿ ಈ ರೀತಿ ನಂಬುವವರ ಸಂಖ್ಯೆ 70% ಮೀರಿದೆ. ಕಳೆದ ವರ್ಷ ಪ್ರಕಟಿತ  ಏಶೀಯ ಪೆಸಿಫಿಕ್ ಫ್ರಾಡ್ ಇನ್ಸೈಟ್ಸ್ ರಿಪೋರ್ಟ್’ನಲ್ಲಿ ಉಲ್ಲೇಖಿಸಿದಂತೆ ಭಾರತದಲ್ಲಿ ಪ್ರತಿ ಎರಡನೆಯ ವ್ಯಕ್ತಿ ಫೇಕ್ ಆನ್ ಲೈನ್ ರಿವ್ಹೀವ್’ಗಳು ಸೇರಿದಂತೆ ಯಾವುದಾದರೊಂದು ರೀತಿಯ ಅಂತರ್ಜಾಲದ ಆನ್ ಲೈನ್ ಮೋಸಗಾರಿಕೆಗೆ ಬಲಿಯಾಗಿದ್ದಾನೆ. ಡಿಜಿಟಲ್ ಮೋಸಗಾರಿಕೆಗೆ ತುತ್ತಾದ ಏಶೀಯ ಪೆಸಿಫಿಕ್ ದೇಶಗಳಲ್ಲಿ  ಇಂಡೋನೇಷಿಯಾದ ತರುವಾಯ ಭಾರತ ದ್ವಿತಿಯ ಸ್ಥಾನದಲ್ಲಿದೆ.

ಅಂತರಜಾಲದ ಕರಾಳ ಮುಖವೆಂಬಂತೆ ಯಾವುದೇ ಸಾಮಾನ್ಯ ಸೇವೆಯ ಕುರಿತು ಒಳ್ಳೆಯ ಅಥವಾ ಕೆಟ್ಟ ಅಭಿಪ್ರಾಯ ಮೂಡಿಸುವ ರೀವ್ಹಿವ್’ಗಳನ್ನು ಬರೆಯುವ ಸಲುವಾಗಿಯೇ ಕೆಲ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಫೇಕ್  ರೀವ್ಹಿವ್ ಬರೆಯುವ ಷಾರ್ಪ್ ಶೂಟರ್’ಗಳನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿ ಅವರಿಗೆ ಹಣ ಅಥವಾ ಉಡುಗರೆಗಳನ್ನು ತಲುಪಿಸಲಾಗುತ್ತದೆ. ಈ ಗೋಲ್’ಮಾಲ್ ಅರಿಯದ ಮುಗ್ಧ ಗ್ರಾಹಕರ ನಂಬಿಕೆಗೆ ದ್ರೋಹಬಗೆಯಲಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳ  ವೆಬ್ಸೈಟ್’ಗಳೂ ಈ ರೀತಿಯ ಫೇಕ್ ರೀವ್ಹಿವ್’ಗಳಿ೦ದ ಹೊರತಾಗಿಲ್ಲ, ಆದರೆ ಬಹುತೇಕವಾಗಿ ಇದರಲ್ಲಿ ಕಂಪನಿಯ ಕೈವಾಡದ ಇರದೇ, ಈ ವೆಬ್ಸೈಟ್’ಗಳ ಮುಖಾಂತರ ತಮ್ಮ ಉತ್ಪನ್ನಗಳನ್ನು ಮಾರುವ ವ್ಯಾಪಾರಿಗಳ (ವೆಂಡರ್’ಗಳ) ಕುಕೃತ್ಯವಿದಾಗಿರಬಹುದು.

ಈ ಫೇಕ್  ರೀವ್ಹಿವ್’ಗಳ ಕಾಳ ಧಂದೆಯನ್ನು ಬೆತ್ತಲು ಮಾಡಿದ್ದು ವೂಬಾ ಬಟ್ಲರ್ ಎಂಬ ವ್ಯಕ್ತಿ.  ವೂಬಾ ಬಟ್ಲರ್ ಒಬ್ಬ ಫ್ರೀಲಾನ್ಸ್(ಸ್ವತಂತ್ರ) ಲೇಖಕ. ಈತ ಒಂದು ಕಾಲದಲ್ಲಿ ಪ್ರಖ್ಯಾತ ಜಾಲತಾಣ ಟ್ರಿಪ್ ಎಡ್ವೈಸರ್’ನಲ್ಲಿ ರೆಸ್ಟೋರೆಂಟ್’ಗಳಿಗೆ ಫೇಕ್  ರೀವ್ಹಿವ್ ಬರೆಯುತ್ತಿದ್ದ! ಈ ಅನೈತಿಕ ಮೋಸಗಾರಿಕೆಯನ್ನು ಬಯಲಿಗೆಳೆಯಲು ಬಟ್ಲರ್ ಅನುಸರಿಸಿದ ವಿಧಾನವು ವಿಚಿತ್ರವಾದದ್ದು, ವಾಸ್ತವಿಕವಾಗಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟೊ೦ದನ್ನು ಜಾಲತಾಣಗಳಲ್ಲಿ ತೇಲಿ ಬಿಟ್ಟ. ಬಟ್ಲರ್ ತನ್ನದೇ ಮನೆಯ ವಿಳಾಸವನ್ನು ಬಳಸಿ “ದಿ ಶೆಡ್ ಐಟ್ ಡಲ್ವಿಚ್” ಎಂಬ ಫರ್ಜಿ ರೆಸ್ಟೋರೆಂಟ್ ಪ್ರಾರಂಭಿಸಿದ. ತರುವಾಯ ಈತ ತನ್ನ ರೆಸ್ಟೋರೆಂಟ್ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿಸಿ, ಅದರಲ್ಲಿ ಬಾಯಲ್ಲಿ ನೀರು ಬರಿಸುವ ಅನೇಕ ಭಕ್ಷ ಭೋಜ್ಯಗಳ ನಕಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ. ಈ  ವೆಬ್ಸೈಟ್’ನಲ್ಲಿ ತಥಾಕಥಿತ ರೆಸ್ಟೋರೆಂಟ್’ನ ವೈಶಿಷ್ಟಗಳ ಕುರಿತು ಪ್ರಶಂಸಿಸುತ್ತಾ, ಗ್ರಾಹಕರ ಮೂಡ್’ಗೆ ಅನುಗುಣವಾಗಿ ಇಲ್ಲಿ ಭೋಜನ/ಆಹಾರ ದೊರೆಯುವದೆಂದು ಬರೆಯಲಾಯಿತು. ಆಮೇಲೆ ಬಟ್ಲರ್ ಅಸ್ತಿತ್ವದಲ್ಲೇ ಇಲ್ಲದ ಈ ರೆಸ್ಟೋರೆಂಟ್’ನ್ನು  ಪ್ರಯಾಣಿಕರ ನೆಚ್ಚಿನ ಜಾಲತಾಣ ಟ್ರಿಪ್ ಎಡ್ವೈಸರ್’ನಲ್ಲಿ ತನ್ನದೇ ಫೋನ್ ನಂಬರ್ ನೀಡಿ ನೋಂದಾಯಿಸಿದ. ಕೆಲ ದಿನಗಳ ತರುವಾಯ ಟ್ರಿಪ್ ಎಡ್ವೈಸರ್ ತನ್ನ ರೆಸ್ಟೋರೆಂಟ್’ಗಳ ಪಟ್ಟಿಯಲ್ಲಿ ಇದನ್ನು ಪ್ರಕಟಿಸಿತು. ಮುಂದೆ ಬಟ್ಲರ್ ತನ್ನ ಸ್ನೇಹಿತರ ನೆರವಿನಿಂದ ಈ ಫರ್ಜಿ ರೆಸ್ಟೋರೆಂಟ್’ನ  ವೈಶಿಷ್ಟ್ಯಗಳ ಕುರಿತು ಫೇಕ್ (ಖೊಟ್ಟಿ) ರೀವ್ಹಿವ್’ಗಳನ್ನು ಬರೆಸಿದ. ಈ ರೆಸ್ಟೋರೆಂಟ್’ನ ವೆಬ್ಸೈಟ್’ನಲ್ಲಿ ಕೇವಲ ‘ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಮಾತ್ರ ಮತ್ತು ಬುಕಿಂಗ್ ಕೇವಲ ಫೋನ ಮುಖಾಂತರವಷ್ಟೆ’ ಎಂದು ಬರೆಸಲಾಗಿತ್ತು. ಸುರುವಾತಿನ ದಿನಗಳಲ್ಲಿ ಟ್ರಿಪ್ ಎಡ್ವೈಸರ್’ನ ರ್ಯಾಂಕಿಂಗ್’ನಲ್ಲಿ 18190  ಸ್ಥಾನದಲ್ಲಿದ್ದ ಈ ರೆಸ್ಟೋರೆಂಟ್ ಖೊಟ್ಟಿ ರೀವ್ಹಿವ್’ಗಳ ಸಹಾಯದಿಂದ ನೋಡು ನೋಡುತ್ತಿದ್ದಂತೆ 30ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಗ್ರಾಹಕರು ರೆಸ್ಟೋರೆಂಟ್ ಬುಕ್ಕಿಂಗ್’ಗೆ ಫೋನ್ ಮಾಡಿದಾಗ ಪ್ರತಿ ಬಾರಿ ಅವರನ್ನು (ವೇಟಿಂಗ್ ಲಿಸ್ಟ್) ಪ್ರತೀಕ್ಷಾ ಪಟ್ಟಿಯಲ್ಲಿಡಲಾಗುತ್ತಿತ್ತು. ಜನರಿಗೆ ಸಂಶಯ ಬಾರದಿರಲೆಂದು  ಮಧ್ಯದಲ್ಲಿ ಫೇಕ್ ರೀವ್ಹಿವ್’ಗಳ ಮುಖಾಂತರ “ಅಂತಿಮವಾಗಿ ಎರಡು ವಾರಗಳ ಪ್ರತೀಕ್ಷೆಯ ನಂತರ   ನಮ್ಮ ಭಾಗ್ಯದ ಬಾಗಿಲು ತೆರೆದು ಇಂತಹ ಅದ್ಭುತ ರೆಸ್ಟೋರೆಂಟ್’ನಲ್ಲಿ ಊಟಮಾಡುವ ಸೌಭಾಗ್ಯ ಒದಗಿ ಬಂತು” ಎಂಬಿತ್ಯಾದಿ ಸಾಲುಗಳನ್ನು ಬರೆಸಲಾಗುತ್ತಿತ್ತು. ಈ ರೀತಿಯ ಆಕರ್ಷಣೀಯ (ಫೇಕ್) ರೀವ್ಹಿವ್’ಗಳನ್ನು ಓದಿ ಈ ಫರ್ಜಿ ರೆಸ್ಟೋರೆಂಟ್ ಕುರಿತು ಜನರ  ಕುತೂಹಲ/ಉತ್ಸಾಹ ಇಮ್ಮಡಿಯಾಗಿತ್ತು! ಬಹುಶಃ ಲಂಡನ್’ನಲ್ಲಿ ಹೊಸದೊಂದು ರೇಸ್ಟೋರೆಂಟ್ ಪ್ರಾರಂಭವಾಗಿದ್ದು, ಅದು ಯಾವಾಗಲೂ ತುಂಬಿ ತುಳುಕುತಿದ್ದು, ಮುಂಗಡವಾಗಿ ಬುಕಿಂಗ್ ಮಾಡಿ ಕನಿಷ್ಠ ಪಕ್ಷ ಎರಡರಿಂದ ಮೂರು ವಾರ ತಮ್ಮ ಸರದಿಗಾಗಿ ಕಾಯಬೇಕೆಂದು ಜನ ನಂಬಲಾರಂಭಿಸಿದ್ದರು! ವಿಚಿತ್ರವೆಂದರೆ ಅಸಲಿಗೆ ಅಸ್ತಿತ್ವದಲ್ಲೇ ಇಲ್ಲದ ಅಸಲಿ ಅತಿಥಿಗಳ ಈ ನಕಲಿ ರೆಸ್ಟೋರೆಂಟ್ ಟ್ರಿಪ್ ಎಡ್ವೈಸರ್’ನಲ್ಲಿ  ನೊಂದಾಯಿಸಲ್ಪಟ್ಟ ಕೇವಲ ಏಳು ತಿಂಗಳಲ್ಲಿ ಲಂಡನ್’ನ ನಂಬರ-1 ರೆಸ್ಟೋರೆಂಟ್ ಆಗಿತ್ತು!

ಟಿ.ವಿ.  ಚಾನಲ್’ಗಳು ಸಾಲು ಸಾಲಾಗಿ  ಫೇಕ್ ರೀವ್ಹಿವ್’ಗಳ ಕಾಳ ಸಂತೆಯ ಕುರಿತು ವೂಬಾ ಬಟ್ಲರ್’ರನ್ನು ಸಂದರ್ಶಿಸಿ, ವಿಖ್ಯಾತ ಈ-ಕಾಮರ್ಸ್ ವೆಬ್ಸೈಟ್’ಗಳ ಪ್ರತಿಕ್ರಿಯೆ ಕೋರಿದವು. ಆದರೆ ಅದಕ್ಕೆ ಇನ್ನೂ ತೃಪ್ತಿದಾಯಕ ಉತ್ತರಗಳು ದೊರಕಿಲ್ಲ. ಹಾಗಾದರೆ ಈ ಫೇಕ್ ರೀವ್ಹಿವ್’ಗಳನ್ನು ಗುರುತಿಸುವದು ಸಾಧ್ಯವಿಲ್ಲವಾ? ಮೊದಲನೆಯದಾಗಿ ಫೇಕ್ ರೀವ್ಹಿವ್ ಬರೆಯುವವರು ತಮ್ಮ ಕುರಿತಾದ ಸ್ಪಷ್ಟ ವಿವರಗಳನ್ನು ನೀಡಿರುವದಿಲ್ಲ, ಈ ರೀತಿ ಫೇಕ್ ರೀವ್ಹಿವ್ ಬರೆಯುವರ ರೀವ್ಹಿವ್’ಗಳು ಸಮತೋಲಿತವಾಗಿರದೇ ವಿವೇಕರಹಿತ,ವೈಪರೀತ್ಯದಿಂದ ಕೂಡಿದ್ದಾಗಿರುತ್ತವೆ. ಏಕೆಂದರೆ ಇಂಥವರು ಉತ್ಪನ್ನಗಳನ್ನು ಉಪಯೋಗಿಸದೇ, ರೆಸ್ಟೋರೆಂಟ್’ನ ಸ್ವಾದವನ್ನು ಅನುಭವಿಸದೇ ರೀವ್ಹಿವ್ ಬರೆಯುತ್ತಾರೆ ಹಾಗೂ ಇವರಿಗೆ ಉತ್ಪನ್ನವೊಂದನ್ನು ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಬಿಂಬಿಸಲೆಂದೆ ಹಣ ದೊರೆಯುವದು. ಹಾಗಾಗಿ ಇವರ ರೀವ್ಹಿವ್’ಗಳು ವಸ್ತುನಿಷ್ಟವಾಗಿರುವದಿಲ್ಲ.ಯಾವುದೇ ಒಂದು ಉತ್ಪನ್ನದ ಕುರಿತು ಒಮ್ಮಿಲೆ  ಅನೇಕ ರೀವ್ಹಿವ್’ಗಳು ಕಂಡುಬಂದಲ್ಲಿ ಅಂತಹ ಉತ್ಪನ್ನಗಳ ಕುರಿತು ಕೂಲಂಕುಷವಾಗಿ ವಿಚಾರಿಸಿಯೇ ಖರೀದಿಸುವದು ಒಳಿತು. ಫೇಕ್ ರೀವ್ಹಿವ್’ಗಳ ಸಹಾಯದಿಂದ ನಿಕೃಷ್ಟ ಗುಣಮಟ್ಟದ ಉತ್ಪನ್ನಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡ್ ಆಗಲು ಸಹಕಾರಿಯಾಗುತ್ತದೆ. ಫೇಕ್ ರೀವ್ಹಿವ್’ಗಳಲ್ಲಿ ಉತ್ಪನ್ನದ ಕುರಿತು ಕನಿಷ್ಠ ಮಾಹಿತಿ ನೀಡಲಾಗುತ್ತದೆ, ಪ್ರಡಕ್ಟ್’ನ ನ್ಯೂನತೆ ಅಥವಾ ಉತ್ಕೃಷ್ಟತೆಯ ವಿವರಗಳು ಲಭ್ಯವಿರುವದಿಲ್ಲ. ಈ ರೀತಿಯ ರೀವ್ಹಿವ್’ಗಳು ಯಾವುದೇ ಉತ್ಪನ್ನಕ್ಕೂ ಹೊಂದಿಕೆಯಾಗುತ್ತವೆ ಮತ್ತು ನೈಜವಾಗಿ ಪ್ರಡಕ್ಟ್’ನ್ನು ಬಳಸಿ, ಅನುಭವಿಸಿ ಬರೆದಂತೆ ಭಾಸವಾಗುವದಿಲ್ಲ. ಫೇಕ್ ರೀವ್ಹಿವ್ ಬರೆಯುವವರು ಬಹುತೇಕವಾಗಿ ಸಣ್ಣ ವಾಕ್ಯಗಳನ್ನು ಬಳಸುತ್ತಾರೆ. ಮಾನಸಿಕ ತಜ್ಞರು ಹೇಳುವಂತೆ ಸತ್ಯಕ್ಕಿಂತ ಸುಳ್ಳು ಹೇಳುವಾಗ ಅಥವಾ ಬರೆಯುವಾಗ ಜಾಸ್ತಿ ತಲೆ ಕೆಡಸಿಕೊಳ್ಳಬೇಕಾಗುತ್ತದೆ. ಫೇಕ್ ರೀವ್ಹಿವ್’ರಗಳು ಬಳುಸುವ ಶಬ್ದಾವಳಿ ಮೇಲೆ ಸುಳ್ಳಿನ ಪರಿಣಾಮವನ್ನು ಸ್ಪಷ್ಟವಾಗಿ ಗುರುತಿಸಬಹುದು.  ಫೇಕ್ ರೀವ್ಹಿವ್ ಬರೆಯುವವರ ವಾಕ್ಯಗಳು ವ್ಯಾಕರಣ ಬದ್ಧವಾಗಿರುವದಿಲ್ಲ.

ಫೇಕ್ ರೀವ್ಹಿವ್’ಗಳಾಗಲಿ, ಫೇಕ್ ನ್ಯೂಸ್ ಆಗಲಿ ಜನರ ಭರವಸೆಗೆ ಭಂಗ ತರುವ ಕೆಲಸ ಮಾಡುತ್ತವೆ, ಆದರೆ ಇವುಗಳನ್ನು ಗುರುತಿಸುವದು ಅಷ್ಟು ಸುಲಭವಲ್ಲ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ದಿನವೇ ಮೊಬೈಲ್ ಅಥವಾ ಟಿ.ವಿ. ಯೊಂದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರೀವ್ಹಿವ್’ಗಳ ಮಹಾಪೂರ ಉಕ್ಕಿ ಬಂದರೆ, ಹಣದಾಸೆಗೆ ಗುತ್ತಿಗೆ ರೀವ್ಹಿವ್’ರಗಳು ಬಳಸದೆ ಬರೆದ ರೀವ್ಹಿವ್ ಅಲ್ಲದೇ ಮತ್ತೆನ್ನೇನು ಆಗಿರಲು ಸಾಧ್ಯ? ಹೇಳಿದ್ದು, ಕೇಳಿದ್ದು ಸುಳ್ಳಿದ್ದರೂ ಇರಬಹುದು, ನಾವು ಇಂತಹ ಫೇಕ್ ರೀವ್ಹಿವ್’ಗಳ ನಯವಂಚನೆಗೆ ಒಳಗಾಗದೆ  ಸತರ್ಕರಾಗಿ, ನಿಧಾನಿಸಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಶ್ರೀನಿವಾಸ.ನಾ.ಪಂಚಮುಖಿ   

(ವಿಶ್ವವಾಣಿ ಪ್ರಕಟಿತ ಬರಹ)

    

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!