ಅಂಕಣ

ನಮ್ಮೂರ ಹುಡುಗ ಪ್ರಶಾಂತ ಅವರ ಬ್ಯಾಂಟಿಗ್ ನೋಡಿದ್ದೀರಾ? ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಂಕಲ್ಪ!

ಪ್ರಶಾಂತ್ ನಾಯ್ಕ್ ಎನ್ನುವ ಈ ಯುವಕ ಹೊನ್ನಾವರ ತಾಲ್ಲೂಕಿನ ಕರ್ಕಿಯವರು. ನಮ್ಮ ನಿಮ್ಮ ಹಾಗೆಯೇ ಅವರ ಹತ್ತಿರ ಬದುಕಿನಲ್ಲಿ ಕನಸುಗಳ ಅರಮನೆಯೇ ಇದೆ. ಒಂದೊಳ್ಳೆಯ ಖಾಸಗಿ ಕಂಪನಿಯಲ್ಲಿ ಕೆಲಸ ಇದೆ. ವಿಕೇಂಡ್ ಬೈಕಲ್ಲಿ ಸುತ್ತಾಡಬಹುದು, ಮಾಲ್ ಗಳಿಗೆ ಹೋಗಿ ಶಾಪಿಂಗ್ ಮಾಡಬಹುದು, ಮಿಡನೈಟ್ ತನಕ ಮೂವಿ ನೋಡುತ್ತಾ ಕಾಲಹರಣ ಮಾಡಬಹುದು. ಆದರೆ ಅವರು ಇಂದು ಎಲ್ಲರಿಗಿಂತ ವಿಭಿನ್ನವಾದ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ತಾಲೂಕಿನಲ್ಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. “ಅವರೇನು ಮಹಾ, ಗೆಲ್ಲುವುದು ಅಷ್ಟರಲ್ಲಿಯೇ ಇದೆ ಬಿಡಿ. ನಾವೂ ಬೇಕಾದರೂ ನಿಲ್ಲಬಹುದು”  ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡವರು ಬಹಳಷ್ಟು ಜನರಿದ್ದಾರೆ. ಅಷ್ಟು ಸುಲಭವೇ ಆಗಿದ್ದರೆ ಇವತ್ತು ನಮ್ಮ ದೇಶದ ರಾಜಕೀಯ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ವಿದ್ಯಾವಂತ ಯುವಕರು ಇಂದು ರಾಜಕೀಯಕ್ಕೆ ಯಾಕೆ ಬರುತ್ತಿಲ್ಲ. ಪ್ರಶಾಂತನಂತವರು ಇನ್ನೆಷ್ಟು ಜನರಿದ್ದಾರೆ? ಕೆಲಸಕ್ಕೆ ರಜೆ ಹಾಕಿ, ಉರಿ ಬಿಸಿಲಿನಲ್ಲಿ ಊರು, ಕೇರಿ ತಿರುಗುವುದು ಎಷ್ಟು ಕಷ್ಟ ಅಲ್ಲವೇ? ಪ್ರಶಾಂತ ಅವರ ಸಾಮಾಜಿಕ ಕಳಕಳಿ ನೋಡಿ ನನಗೆ ನನ್ನ ಮೇಲೆ ಮುಜುಗರ ಆಗುತ್ತದೆ. ಒಬ್ಬನಾದರೂ ರಾಜಕೀಯಕ್ಕೆ ಇಳಿದು ಸಿಸ್ಟಮನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಿದ್ದಾನಲ್ಲ. ಕೆಲವೊಮ್ಮೆ A/C ರೂಮಿನಲ್ಲಿ ಕೂತು ದೇಶ ಹಾಗಾಗಿದೆ, ದೇಶ ಹೀಗಾಗಿದೆ ಎನ್ನುವ ಬದಲು ಅವರ ಜೊತೆ ಕೈ ಜೋಡಿಸಬಹುದಿತ್ತಲ್ಲ ಎಂಬ ವಿಚಾರ ಬರುತ್ತದೆ. ಇಂದು ‘ದೊಡ್ಡ ಕಂಪನಿಯಲ್ಲಿ ಕೆಸಲ ಸಿಕ್ಕಿತು ಅಂದರೆ ಜೀವನ ಆರಾಮು’ ಎನ್ನುವ ಆ ಒಂದು ಮಾತಿನಂತೆ ಎಷ್ಟೇ ಸಾಮರ್ಥ್ಯ ಇದ್ದರೂ ಮೊದಲಿಗೆ ದೊಡ್ಡ ದೊಡ್ಡ ಪಕ್ಷಗಳಲ್ಲಿಯೇ ಟಿಕೇಟ್ ಬೇಕು, ಒಮ್ಮೆ ನಿಂತರೆ ಗೆದ್ದು ಬರಲೇ ಬೇಕು ಎನ್ನುವ ಅಪೇಕ್ಷೆ ಅಭ್ಯರ್ಥಿಗಳಲ್ಲಿ ಇರುತ್ತದೆ. ಅದಲ್ಲದೆ ಒಬ್ಬ ವ್ಯಕ್ತಿ ಚುನಾವಣೆಗೆ ನಿಲ್ಲಬೇಕು ಅಂದರೆ ಆತ ಮೊದಲಿನಿಂದಲೂ ಸಣ್ಣ ಪುಟ್ಟ ಚುನಾವಣೆಯಲ್ಲಿ ನಿಂತು ಗೆದ್ದು ಬಂದ ಅನುಭವ ಇರಬೇಕು, ಇಲ್ಲವೇ ಆಗರ್ಭ ಶ್ರೀಮಂತನಾಗಿರಬೇಕು. ಇದು ಸಾಮಾನ್ಯವಾಗಿ ಪಕ್ಷದವರು ಟಿಕೇಟ್ ಕೊಡುವ ಮೊದಲು ವಿಚಾರ ಮಾಡುವ ರೀತಿ. ಇದು ನಿಜವೇ ಆಗಿದ್ದರೆ ನರೇಂದ್ರ ಮೋದಿಜಿ ದೇಶದ ಪ್ರಧಾನಿ ಆಗುತ್ತಲೇ ಇರಲಿಲ್ಲ. ಅವರು ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಅದು ಅವರ ಮೊದಲ ಚುನಾವಣೆ. ಶಾಲೆಯಲ್ಲಿ, ಕಾಲೇಜಿನಲ್ಲಿ, ಮಂಡಲ ಪಂಚಾಯತ ಚುನಾವಣೆ ಸಹಿತ ಸ್ಪರ್ಧಿಸಿರಲಿಲ್ಲ. ಸಮುದ್ರದಲ್ಲಿ ಮಾಣಿಕ್ಯ ಸಿಗುವುದು ಹೀಗೆಯೇ!

ರಾಜಕೀಯ ಎನ್ನುವುದು ಕೇವಲ ಗೆಲುವು ಹಾಗೂ ಸೋಲಿನಲ್ಲಿ ಸಮಾಪ್ತವಾಗುವುದಿಲ್ಲ. ಆಡಳಿತ ಪಕ್ಷ ಹೇಗೆ ಕಾರ್ಯ ನಿರ್ವಹಿಸುತ್ತದೆಯೋ ಹಾಗೆಯೇ ವಿರೋಧ ಪಕ್ಷವೂ ಅಷ್ಟೇ ಸಕ್ರೀಯ ಹಾಗೂ ಚುರುಕಾಗಿರಬೇಕು. ಪ್ರಜಾಪ್ರಭುತ್ವದ ಉಸಿರು ಇದರಲ್ಲೇ ಇದೆ. ಇಲ್ಲವಾದರೆ ಅದು ಸರ್ವಾಧಿಕಾರತ್ವದಲ್ಲಿ ಕೊನೆಗೊಳ್ಳುತ್ತದೆ. ಒಂದು ಕ್ಷೇತ್ರದಲ್ಲಿ ಗೆದ್ದವರು ಮಾತ್ರ ಮುಖ್ಯ ಅಂತಲ್ಲ, ಅವರ ಆಡಳಿತವನ್ನು ಪ್ರಶ್ನಿಸುವವರೂ ಬೇಕು. ಇಂದು ಜನ ಆಯ್ಕೆ ಆಗುತ್ತಾರೆ, ಜನರನ್ನು ಮರೆಯುತ್ತಾರೆ. ಸೋತವರು ಮುಂದಿನ ಚುನಾವಣೆ ಬರುವ ತನಕ ಮತ್ತೆ ತಲೆ ತೋರಿಸುವುದಿಲ್ಲ. ಪ್ರಶಾಂತ ಹೇಳುತ್ತಾರೆ, “ಜನರ ಪ್ರೀತಿ ವಿಶ್ವಾಸ ನೋಡಿ ನನಗೆ ಗೆಲುವು ಇದೆ ಎನಿಸುತ್ತಿದೆ. ಸೋಲು ಹಾಗೂ ಗೆಲುವುಗಳನ್ನು ಮೀರಿದ ರಾಜಕಾರಣ ತನ್ನದು” ಎಂದು. ಹೊನ್ನಾವರ ಹಾಗೂ ಕುಮುಟಾ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣದ ಬಗ್ಗೆ ಹೇಳಬೇಕಿಲ್ಲ. ಅಥವಾ ಅಲ್ಲಿ ಮನೆತನದ ರಾಜಕೀಯದ ಬಗ್ಗೆಯೂ ಪ್ರತ್ಯೇಕವಾಗಿ ಬರೆಯಬೇಕಿಲ್ಲ. ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ. ಇದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅಲ್ಲಿ ಜನಕ್ಕೆ ಪರ್ಯಾಯ ಇಲ್ಲವಲ್ಲ! ಕಳೆದ ಮೂವತ್ತು ವರ್ಷಗಳಲ್ಲಿ ಆ ಕ್ಷೇತ್ರದಲ್ಲಿ ಏನು ಬದಲಾವಣೆ ಆಗಿದೆ? ಕೆಲವು ಗುಟುಕಾ ಅಂಗಡಿಗಳು ಮೊಬೈಲ್ ಅಂಗಡಿ ಆಗಿವೆ ಬಿಟ್ಟರೆ ಮತ್ತೇನು ಆಗಿಲ್ಲ. ಕುಮಟಾ ಹೊನ್ನಾವರದಲ್ಲಿ ಸರಿಯಾದ ಆಸ್ಪತ್ರೆಯಿಲ್ಲ. ಪ್ರಶಾಂತ್ ಕೇಳುತ್ತಾರೆ, “ಮಣಿಪಾಲ್ ಹೋಗುವಾಗ ರಸ್ತೆಯ ಮೇಲೆ ಇನ್ನೆಷ್ಟು ಜೀವ ಹೋಗಬೇಕು?” ನಿಜ ಅಲ್ವಾ? ಯಾಕೆ ಅಲ್ಲಿರುವ ಶಾಸಕರು ಕೆಲಸ ಮಾಡುತ್ತಿಲ್ಲ? ನಿದ್ದೆ‌ಮಾಡುತ್ತಿರುವವರನ್ನು ರಾಜಕೀಯ ಪುಡಾರಿಗಳು ಯಾಕೆ ಪ್ರಶ್ನಿಸುತ್ತಿಲ್ಲ? ಇಂತಹ ಹಲವಾರು ಸನ್ನಿವೇಶಗಳಿವೆ.
ನನಗನಿಸಿದ ಹಾಗೆ ಈ ಕ್ಷೇತ್ರದಲ್ಲಿ ಮೊದಲ‌ ಪ್ರನಾಳಿಕೆ ಬಿಡುಗಡೆ ಮಾಡಿದ್ದು ಪ್ರಶಾಂತ್ ನಾಯ್ಕ್. ಕೆಲವು ಪಕ್ಷಗಳಂತೂ ಚುನಾವಣೆಯ ಎರಡು ದಿನದ ಮುಂಚೆ ಕ್ಷೇತ್ರದ ಪ್ರನಾಳಿಕೆ ಬಿಡುಗಡೆ ಮಾಡಿವೆ. ಅದೆಂತಹ ಸೊಕ್ಕು. ಏನೇ ಮಾಡಲಿ ನಮ್ಮನ್ನು ಕೇಳುವವರು ಯಾರು? ಜನರು ತಮಗೇ ಮತ ನೀಡುತ್ತಾರೆ ಎಂದು ವಿಚಾರ ಮಾಡುತ್ತಿದ್ದಾರೆಯೇ? ರಸ್ತೆ ಕಾಮಗಾರಿ, ಸಾರಿಗೆ ವ್ಯವಸ್ಥೆ, ಉಚ್ಛ ಶಿಕ್ಷಣ, ಉದ್ಯೋಗಿಕರಣ, ಮೀನುಗಾರಿಕೆ, ಕುಡಿಯುವ ನೀರು, ಇತ್ಯಾದಿ ನಮ್ಮ ಕ್ಷೇತ್ರದ ಸಮಸ್ಯೆಗಳು. ಇದರ ಕುರಿತು ಎಷ್ಟು ಚರ್ಚೆ ನಡೆದಿವೆ? ಅವರು ಬರುತ್ತಾರೆ, ಇವರು ಹೋಗುತ್ತಾರೆ, ಅವರು ಇವರಿಗೆ ಬೈಯ್ಯುವುದು, ಇವರು ಅವರಿಗೆ ಬೈಯ್ಯುವುದು ಮುಗಿಯಿತು ಭಾಷಣ, ಇಷ್ಟೇ ಪ್ರಚಾರ. ಪ್ರಶಾಂತ ಮನೆ ಮನೆಗೆ ಹೋಗಿ ಅಲ್ಲಿಯ ಸಮಸ್ಯೆ ಅರಿತು, ನೋಡಿ ಬಂದಿದ್ದಾರೆ. ಕರೆ ಮಾಡಿದಾಗ ಹೇಳಿದರು, ‘ ಇಲ್ಲಿಯ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಅಭ್ಯರ್ಥಿಗಳೇ ಇಲ್ಲ’ ಎಂದು. ಜನರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದ ಮೇಲೆ ಲಕ್ಷ, ಕೋಟಿ ಖರ್ಚು ಮಾಡಿ ಪ್ರಚಾರ ಮಾಡಿದರೇನು ಬಂತು? ಕುಮಟಾದ ಸುತ್ತ ಮುತ್ತ ಎಷ್ಟೊಂದು ನದಿ, ಕೊಳಗಳಿವೆ. ಇದೇನು ಬಯಲು ಸೀಮೆಯಾ? ಬೇಸಿಗೆಯಲ್ಲಿ ಬೆಳಿಗ್ಗೆ ಎರಡು ತಾಸು ಅಷ್ಟೇ ನೀರು ಸರಬರಾಜು ಮಾಡುತ್ತಾರಂತೆ! ಇದನ್ನೆಲ್ಲ ಸರಿಮಾಡಲು ವಿಶ್ವ ವಿಖ್ಯಾತ ವಿಜ್ಞಾನಿಗಳು ಬೇಡ, ನಮ್ಮಲ್ಲೆ ಒಬ್ಬ ಒಳ್ಳೆಯ ಮನಸ್ಸುಳ್ಳ, ಆಸಕ್ತಿ ಇರುವ ಪ್ರಜ್ಞಾವಂತ ಪ್ರಜೆ ಬೇಕು. ಪ್ರಶಾಂತ್ ನಾಯ್ಕ ಈ ತರಹದ ಭರವಸೆಯ ಸೆಲೆಯೊಂದನ್ನು ತೋರಿದ್ದಾರೆ. ಕುಮಟಾ ಹಾಗೂ ಹೊನ್ನಾವರದಲ್ಲಿ ಎಷ್ಟು ಇಂಜಿನಿಯರಿಂಗ್ ಕಾಲೇಜಿದೆ? ಎಷ್ಟು ಮೆಡಿಕಲ್ ಕಾಲೇಜುಗಳಿವೆ? ಎಷ್ಟು ಕೈಗಾರಿಕೆ ಇದೆ? ಎಷ್ಟು ಪ್ರವಾಸಿತಾಣಗಳ ಬೆಳವಣಿಗೆ ಆಗಿದೆ? ನಮ್ಮ ಕ್ಷೇತ್ರದಲ್ಲಿ ಯಾವ ನೈಸರ್ಗಿಕ ಸಂಪನ್ಮೂಲಗಳ ಕೊರತೆ (ನೀರು, ಜಲ, ಗಾಳಿ) ಇದೆ? ಒಂದು ಸುಸಜ್ಜಿತ ಕ್ರೀಡಾಂಗಣ ಇದೆಯೇ? ಇಲೆಕ್ಟ್ರಾನಿಕ್ ಗ್ರಂಥಾಲಯ ಇದೆಯೇ? ಒಳ್ಳೆಯ ಆಧುನಿಕ ಮಾರುಕಟ್ಟೆ ಇದೆಯೇ? ಇದನ್ನೆಲ್ಲ ಗ್ರಹಿಸಿ ಅದನ್ನು ಸಾರ್ವಜನಿಕರಿಗೆ ಒದಗಿಸಿಕೊಡಬಲ್ಲವರೊಬ್ಬರು ಬೇಕು. ಅದು‌ ಆಲದಮರದಂತಿರುವ ದೊಡ್ಡಪಕ್ಷವೊಂದರ ಕೆಳಗೆ ‘ಬೆಳೆಯದೆ’ ನಿಂತಿರುವ ಸಸಿಯಿಂದ ಸಾಧ್ಯವಿಲ್ಲ. ಆಕಾಶದ ಕೆಳಗೆ ಬಿತ್ತಿರುವ ಬೀಜ ನಾಳೆ ಮರವಾಗಿ ಬೆಳೆದು ನೆರಳನ್ನು ಕೊಡಬಹುದು, ಹಣ್ಣನ್ನೂ ನೀಡಬಲ್ಲದು. ಪ್ರಶಾಂತ್ ನಂತಹ ಪ್ರತಿಭೆಗೆ ಅವಕಾಶ ಸಿಗಬೇಕು. ಅಮೇರಿಕಾದಲ್ಲಿ ಸಿವಿಲ್ ರೈಟ್ಸ್ ಮೂವ್ಮೆಂಟ್ ಶರುವಾಗಿದ್ದು, ಅಮೇರಿಕ ಬದಲಾವಣೆ ಕಂಡಿದ್ದು ದೊಡ್ಡ ನಾಯಕರಿಂದಲ್ಲ, ನಿಪುಣರಿಂದಲ್ಲ, ಒಬ್ಬ ಸಾಮಾನ್ಯ ಮಹಿಳೆ ತನ್ನ ಹಕ್ಕಿಗೆ ಹೋರಾಟ ನಡೆಸಿದ್ದರಿಂದ. ಬದಲಾವಣೆ‌ ಆಗುವುದು ಸಾಮಾನ್ಯ ವ್ಯಕ್ತಿಗಳ ಅಸಾಮಾನ್ಯ ಸಂಕಲ್ಪದಿಂದ.
‘ಮೊದಲ ಹೆಜ್ಜೆಗೆ ಲಕ್ಷ ಹೆಜ್ಜೆಗಳು ಕೂಡಲಿ’ ಎನ್ನುವ ಸ್ಲೋಗನ್ ಇಟ್ಟುಕೊಂಡು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆಗೆ ಬ್ಯಾಟಿಂಗ್‌ ಮಾಡಲು ಕಣಕ್ಕಿಳಿದಿದ್ದಾರೆ. ಊರೂರು ಅಲೆದು, ಮನೆ ಮನೆಗೆ ಭೇಟಿ ಕೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಅವರ ಪ್ರಚಾರದಲ್ಲಿ ಮತ ಯಾಚನೆಯ ಜೊತೆ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು, ಮನವರಿಕೆ ಮಾಡಿಸುವುದು ಇದೂ ಮುಖ್ಯವಾಗಿದೆ. ಇವತ್ತಿನ ತನಕ ಯಾರೆಲ್ಲ ರಾಜಕಾರಣಿಗಳು ಬಂದಿದ್ದಾರಲ್ಲ ಅವರೆಲ್ಲ ಹೇಳಿದ್ದು ತಮಗೆ ಮತ‌ನೀಡಿ ಅಂತ. ಆದರೆ ಇವರು ಹೇಳುತ್ತಿದ್ದಾರೆ ‘ಮೊದಲು ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ. ನನ್ನ ಪ್ರನಾಳಿಕೆ ನೋಡಿ, ನಿಮಗೆ ಸರಿ ಎನಿಸಿದರೆ ಮತ ನೀಡಿ’ ಎಂದು. ಇಪ್ಪತ್ತೊಂಬತ್ತು ವರ್ಷದೊಳಗೆ ಇಷ್ಟೊಂದು ಪ್ರಭುತ್ವ ಪಡೆದಿದ್ದಾನೆ ಅಂದರೆ ಪ್ರಶಾಂತನಲ್ಲಿ ಹುಟ್ಟು ನಾಯಕತ್ವ ಇದೆ. “ಇಪ್ಪತ್ತೊಂಬತ್ತರಲ್ಲಿ ನೀರಲ್ಲಿ ಬಿದ್ದು ಈಜುವುದನ್ನು ಕಲಿಯದೇ ಎಂಬತ್ತರಲ್ಲಿ ಕಲಿಯಲೇ” ಎನ್ನುತ್ತಾರೆ. ನಾವೆಲ್ಲ ಮೊದಲ ಹೆಜ್ಜೆ ಇಡಲೇ ಸಾವಿರ ಸಲ ವಿಚಾರ ಮಾಡುತ್ತೇವೆ. ಇಂತಹ ಇನ್ನೂರು ಜನರು ಪ್ರತಿ ರಾಜ್ಯದಲ್ಲೂ ಮುಂದೆ ಬರಬೇಕು. ಅವರ ಒಂದು ಹೆಜ್ಜೆಗೆ ಲಕ್ಷ ಹೆಜ್ಜೆಗಳು ಜೊತೆಯಾಗಬೇಕು. ದೇಶ ಹೇಗೆ ಬದಲಾಗುವುದು ನೋಡಿ. ಮೋದಿಜಿಯವರ ಕನಸೂ ಇದೆ, ದೇಶ ಬೆಳೆಯಬೇಕು. ಅಭಿವೃದ್ಧಿಯು ಈ ನೆಲದಲ್ಲಿ ಮತ್ತೊಮ್ಮೆ ಬೀಡು ಬಿಡಬೇಕು. ಒಂದು‌ ವಿಷಯ ನೆನಪಿರಲಿ, ಬದುಕಿನ ಯಾವುದೇ ಪ್ರಯತ್ನವಿರಲಿ ಹಾಳಾಗಿ ಹೋಗುವುದಿಲ್ಲ. ಸೋಲು, ಗೆಲುವು ನಾವು ನೋಡುವ ದೃಷ್ಟಿ ಅಷ್ಟೇ. ಪ್ರಯತ್ನಗಳೇ ನಮಗೆ‌ ಪಾಠಗಳು. ಇಂದು ಪ್ರಶಾಂತ ನಮ್ಮ ಕ್ಷೇತ್ರದಲ್ಲಿ ಗೆದ್ದು ಬರಲಿ ಎನ್ನುವ ಹಾರೈಕೆ ನಮ್ಮದೆಲ್ಲರದ್ದು. ಅನುಭವದ ಕೊರತೆ ಇದೆ ನಿಜ, ಊರಿನಲ್ಲಿರುವ ಹಿರಿಯರು ಇರುವುದೇತಕೆ? ಗೆದ್ದು ಬಂದರೆ ಪ್ರಶಾಂತ ಅವರಿಗೆ ಅವರು ಮಾಡುವ ಕೆಲಸದಲ್ಲಿ ಹಿರಿಯರ, ಅನುಭವಿಗಳ ಮಾರ್ಗದರ್ಶನ ಸಿಗದೇ ಇರದು. ಇಷ್ಟು ವರ್ಷ ನೋಡಾಗಿದೆ, ಮತ್ತದೇ ದ್ವೇಷದ ರಾಜಕಾರಣ, ನೋಟಿನ ರಾಜಕಾರಣ, ಹೆಂಡದ ರಾಜಕಾರಣ, ಮನೆತನದ ರಾಜಕಾರಣ ಬೇಕೆ? ಹಳೆಯ ನೀರು ಹರಿದು ಹೋಗಿ ಹೊಸ ನೀರು ಕೆರೆಯ ತುಂಬಲಿ. ಕಡಲಲ್ಲಿ ಹೊಸ ತೆರೆಯ ಅಬ್ಬರವು ಕೇಳಿಸಲಿ. ದಿಗಂತದಲ್ಲಿ ಹೊಸ ಕಿರಣವು ಮೂಡಲಿ! ಪ್ರಶಾಂತನ ಪ್ರಯತ್ನ ಫಲಕಾರಿಯಾಗಿ ಗೆದ್ದು ಬರಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!