ಅಂಕಣ ಸ್ಪ್ಯಾನಿಷ್ ಗಾದೆಗಳು

ಮಂತ್ರಕ್ಕಿಂತ ಉಗುಳು ಜಾಸ್ತಿ!

ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಗಾದೆ ನಮ್ಮಲ್ಲಿ ಹಾಸ್ಯದಿಂದ ಬಳಸುತ್ತೇವೆ. ಸ್ಪಷ್ಟವಾಗಿ ಮಂತ್ರ ಬಾಯಿಂದ ಹೊರಡುವುದರ ಬದಲು ಉಗಳು ಜಾಸ್ತಿ ಬರುತ್ತದೆ – ಅಂದರೆ ಮಂತ್ರ ಹೇಳುವನಿಗೆ ಅದರ ಮೇಲಿನ ಪಾಂಡಿತ್ಯ ಅಷ್ಟಕಷ್ಟೇ ಎನ್ನುವ ಅರ್ಥದಲ್ಲಿ ಇದನ್ನ ಬಳಸುತ್ತೇವೆ. ಹಾಗೆ ನೋಡಲು ಹೋದರೆ ಈ ಗಾದೆ ಪಾಂಡಿತ್ಯವಿರದ ಪುರೋಹಿತನ ಕುರಿತು ಶುರುವಾದರೂ, ನಂತರದ ದಿನಗಳಲ್ಲಿ ಯಾರಾದರೂ ತಮ್ಮ ಮಿತಿಯ ಮೀರಿ ತಮ್ಮ ಬಗ್ಗೆ ಹೇಳಿಕೊಳ್ಳಲು ಅಥವಾ ತಮ್ಮಲ್ಲಿ ಇಲ್ಲದ ಪಾಂಡಿತ್ಯ ಅಥವಾ ನೈಪುಣ್ಯತೆ ಇದೆ ಎಂದು ತೋರಿಸಲು ಹೊರಟಾಗ ಅಂತವರನ್ನ ಕುರಿತು ಕೂಡ ಈ ಮಾತನ್ನ ಬಳಸು ಶುರುಮಾಡಿದ್ದಾರೆ. ಇವೆಲ್ಲದರ ಅರ್ಥ ಮೂಲವಾಗಿ ಯಾವ ಕೆಲಸ ಮಾಡಬೇಕು ಎಂದು ಯಾರನ್ನ ಕರೆಸಿರುತ್ತೇವೆ; ಅದನ್ನ ಬಿಟ್ಟು ಬೇರಲ್ಲ ಮಾಡುವ ನೈಪುಣ್ಯತೆ ಇರುವರನ್ನ ಇವರು ಮಂತ್ರಕ್ಕಿಂತ ಉಗುಳು ಜಾಸ್ತಿ ಗುಂಪಿಗೆ ಸೇರಿದವರು ಎನ್ನುವಷ್ಟು.

ಇಂದಿನ ದಿನಗಳಲ್ಲಿ ಸಾಮಾಜಿಕ ತಾಣದಲ್ಲಿ ಬಜೆಟ್ ದಿನ ಎಲ್ಲರೂ ಬಜೆಟ್ ವಿಶ್ಲೇಷಣೆ ಮಾಡುತ್ತಾರೆ, ಹಾಗೆಯೇ ರಾಜಕೀಯ ವಿಶ್ಲೇಷಕರಿಗೂ ಕಡಿಮೆಯಿಲ್ಲ. ಇಂತಹವರಲ್ಲಿ ತೊಂಬತ್ತು ಪ್ರತಿಶತ ಮಂತ್ರಕ್ಕಿಂತ ಉಗುಳು ಜಾಸ್ತಿ ಜಾತಿಗೆ ಸೇರಿದವರು ಅನ್ನುವುದು ಬೇಸರ ತರಿಸುವ ಸತ್ಯ ಸಂಗತಿ .ಮನುಷ್ಯನ ಹಲವು ಹತ್ತು ಮೂಲಭೂತ ಗುಣಗಳಂತೆ ಇದು ಕೂಡ ಸರ್ವವ್ಯಾಪಿ ಮತ್ತು ಸರ್ವ ಕಾಲದಲ್ಲೂ ಇರುವಂತದದ್ದು .

ಸ್ಪೇನ್ ದೇಶದಲ್ಲಿ ಇಂತಹ ಸಮಯದಲ್ಲಿ No es tan bravo el león como lo pintan ( ನೋ ಏಸ್ ತಾನ್ ಬ್ರಾವೊ ಎಲ್ ಲಿಯೋನ್ ಕೊಮೊ ಲೊ ಪಿಂತಾನ್ )ಎನ್ನುತ್ತಾರೆ.  ಸಿಂಹವನ್ನ ಎಷ್ಟು ಕೆಚ್ಚೆದೆಯ ಪ್ರಾಣಿ ಎಂದು ಬಿಂಬಿಸಿದ್ದರೂ ಅದು ಅಷ್ಟೇನೂ ಇಲ್ಲ ಎನ್ನುವುದು ಸರಳ ಅನುವಾದದ ಅರ್ಥ. ಒಬ್ಬ ವ್ಯಕ್ತಿಯಿರಬಹದು ಅಥವಾ ಸಂಸ್ಥೆಯಿರಬಹದು ಅದರ ಬಗ್ಗೆ ಜನರಲ್ಲಿ ಒಂದು ರೀತಿಯ ಭಾವನೆ ಕಟ್ಟಿಕೊಡಲು ತರಾವರಿ ಕಥೆಯನ್ನ ಸೃಷ್ಟಿಸಿ ಅವರನ್ನ ಇಂದ್ರ ಚಂದ್ರ ಅಥವಾ ದೇವೆಂದ್ರ ಅಂತ ಹೇಳಬಹದು. ಆದರೇನು ಒಮ್ಮೆ ಭೇಟಿಯಾದ ನಂತರ ಜನರಿಗೆ ಈತನ ಬಗ್ಗೆ ಕೇಳಿದ ಗುಣಗಳು ಇವನಲ್ಲಿ ಇಲ್ಲ ಎನ್ನುವುದನ್ನ ಬಹುಬೇಗ ಅರಿತುಕೊಳ್ಳುತ್ತಾರೆ. ಇದು ಗಾದೆಯ ಭಾವಾರ್ಥ.

ಇನ್ನು ಇಂಗ್ಲಿಷ್ ಭಾಷಿಕರು “his bark is worse than his bite.” ಎನ್ನುತ್ತಾರೆ . The lion is not as fierce as he is made out to be ಎನ್ನುವುದು ಇನ್ನೊಂದು ಅವತರಣಿಕೆ. ಇಲ್ಲೂ ಭಾಷೆ ಬೇರೆಯಾದರೂ ಇದನ್ನ ಬಳಸುವ ಸನ್ನಿವೇಶ ಮಾತ್ರ ಒಂದೇ . ಕಚ್ಚಿ ಬಿಡುತ್ತೇನೆ ಎಂದು ಕೂಗಾಡುವುದು ಕಚ್ಚುವುದಕ್ಕಿಂತ ಹೆಚ್ಚು ನೋವು ಕೊಡುತ್ತದೆ ಎನ್ನುವ ಅರ್ಥ. ಸರಳವಾಗಿ ಹೇಳಬೇಕಂದರೆ ಸ್ಪ್ಯಾನಿಷ್ ಗಾದೆಯಲ್ಲಿ ಇದೆ ಅರ್ಥವನ್ನ ಕೊಡಲು ಉದಾಹರಣೆಗೆ ಪ್ರತಿಮೆಯ ಬಳಕೆಯಾಗಿದೆ.  ಆದರೆ ಇಂಗ್ಲಿಷ್ ನಲ್ಲಿ ಕನ್ನಡದ ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವುದಕ್ಕೆ ಅಂತ್ಯಂತ ನಿಕಟವಾಗಿ ಹೊಂದುವಂತೆ ಯಾವುದೇ ಉಪಮೆಯ ಬಳಕೆಯಿಲ್ಲದೆ ಹೇಳಿದ್ದಾರೆ.

ಇದನ್ನ ಹಾಸ್ಯದಿಂದ ಮುಗಿಸಬೇಕೆಂದರೆ ‘ನಾವೆಲ್ಲ ಅಂತ್ಯದಲ್ಲಿ ಒಂದೇ … ಮಂತ್ರಕ್ಕಿಂತ ಉಗುಳು ಜಾಸ್ತಿ ಜಾತಿಯವರು’ ಎನ್ನಬಹದು. ಸಾಮಾಜಿಕ ಜಾಲತಾಣ ಯುಗದಲ್ಲಿ ಈ ರೀತಿ ಅಂದದ್ದು ಅತಿಶಯೋಕ್ತಿ ಅನ್ನಿಸುವುದಿಲ್ಲ ಎನ್ನುವ ನಂಬಿಕೆ ನನ್ನದು .

ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ

No: ಇಲ್ಲ ಎನ್ನುವ ಅರ್ಥ. ನೋ ಎನ್ನುವುದು ಉಚ್ಚಾರಣೆ.

es tan: ಅಂದು ಕೊಂಡಷ್ಟು. ಹೇಳಿದಷ್ಟು ಎನ್ನುವ ಅರ್ಥ. ಏಸ್ ತಾನ್ ಎನ್ನುವುದು ಉಚ್ಚಾರಣೆ.

bravo: ಬ್ರೇವ್, ಕೆಚ್ಚದೆಯ, ಧೈರ್ಯವಂತ ಎನ್ನುವ ಅರ್ಥ. ಬ್ರಾವೊ ಎನ್ನುವುದು ಉಚ್ಚಾರಣೆ.

el león ” ಸಿಂಹ ಎನ್ನುವ ಅರ್ಥ. ಎಲ್ ಲಿಯೋನ್ ಎನ್ನುವುದು ಉಚ್ಚಾರಣೆ.

como lo pintan : ಹೇಗೆ ಬಣ್ಣ ಹಚ್ಚಿದಷ್ಟು, ವರ್ಣಿಸಿದಷ್ಟು ಎನ್ನುವ ಅರ್ಥ. ಕೊಮೊ ಲೊ ಪಿಂತಾನ್  ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!