“ಮುಕ್ತ ಮುಕ್ತ ನೆನಪಾದರೆ ಇವರ ಮುಖ ಕಣ್ಣ ಮುಂದೆ ಬರುತ್ತದೆ” fbಯಲ್ಲಿ ಈ ಒಂದು ಪ್ರತಿಕ್ರಿಯೆಗೆ ನನ್ನ ಕೈ ಸೇರಿತು “ನಾವಲ್ಲ” ಪುಸ್ತಕ. ಅದೂ ಚಂದದ ಆತ್ಮೀಯ ಒಕ್ಕಣೆಯೊಂದಿಗೆ ಶ್ರೀ ಸೇತುರಾಮ್ ರವರಿಂದ.
ನಿಜಕ್ಕೂ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ. ಆದರೆ ಪುಸ್ತಕ ಓದಬೇಕಲ್ಲಾ? ಏಕೆಂದರೆ ಪುಸ್ತಕ ಓದುವ ಗೀಳು ನನ್ನ ಬಿಟ್ಟೋಗಿ ಸುಮಾರು ಎರಡು ಮೂರು ವರ್ಷಗಳೇ ಆಗಿತ್ತು. ಮೊದಲೆಲ್ಲ ಸ್ಕೂಲ್ ಪುಸ್ತಕದ ಮಧ್ಯೆ ಕೂಡಾ ಕಾದಂಬರಿ ಅಡಗಿಸಿಟ್ಟುಕೊಂಡು ಅಪ್ಪನ ಕಣ್ಣು ತಪ್ಪಿಸಿ ಚಪ್ಪರಿಸಿದವಳು ನಾನು. ಓದುವ ಹುಚ್ಚು ತುಂಬಾ ವರ್ಷಗಳವರೆಗೆ ಮುಂದುವರೆದಿತ್ತು. ಯಾವಾಗ ಸಂಸಾರದ ಬಂಧನಕ್ಕೆ ಒಳಗಾದೆನೋ ಆಫೀಸು ಸಂಸಾರ ಇದರಲ್ಲೇ ಮುಳುಗಿ ಹೋದೆ. ಅದೂ ಇದೂ ಪತ್ರಿಕೆಗಳನ್ನು ಓದುವುದು ಬಿಟ್ಟರೆ ಇನ್ನೇನೂ ಓದುತ್ತಿರಲಿಲ್ಲ. ನಂತರದ ದಿನಗಳಲ್ಲಿ ಈ ಬರೆಯುವ ಗೀಳು ಯಾವಾಗ ಹೆಚ್ಚು ಅಂಟಿಕೊಂಡಿತೊ ಅಂದಿನಿಂದ ಪೇಪರ್ ಕೂಡಾ ಓದಲು ಸಾಧ್ಯವಾಗದ ಮಟ್ಟಿಗೆ ನಾನಾದೆ. ಯಾವುದಾದರೂ ಒಂದು ಶಬ್ದ ಓದಿನ ಮಧ್ಯೆ ಮನ ತಟ್ಟಿದರೆ ಸಾಕು ಅಲ್ಲೊಂದು ಬರಹ ಹುಟ್ಟಿ ಹಿಡಿದ ಪುಸ್ತಕ ಪಕ್ಕಕ್ಕೆ ಇಡುವಂತಾಗುತ್ತದೆ. ಇತ್ತೀಚೆಗೆ ಬಹುಶಃ ನಾನು ಏನಾದರೊಂದು ಬರೆಯದೇ ಇರುವ ದಿನಗಳೇ ಇಲ್ಲವೇನೊ ಅಂತಾಗಿದೆ.
ಆದರೆ ‘ನಾವಲ್ಲ’ ಆರು ಕಥೆಯನ್ನೊಳಗೊಂಡ ಪುಸ್ತಕ ಕೈಗೆ ಬಂದ ದಿನ ತಕ್ಷಣ ಓದಲು ಕುಳಿತಾಗ ನನ್ನನ್ನೇ ನಾನು ಮರೆತಿದ್ದೆ. ಇದು ಸುಳ್ಳಲ್ಲ; ಹಾಗಿದೆ ಅವರು ಬರೆದ ಕಥೆಗಳು, ಅವರ ಬರವಣಿಗೆ ಶೈಲಿ. ನಾನು ಓದುತ್ತಿಲ್ಲ, ಇಲ್ಲೇ ಮುಂದೆ ಕುಳಿತು ನಡೆದ ಘಟನೆಯನ್ನು ಲೇಖಕರಾದ ಶ್ರೀ ಸೇತುರಾಮರವರೇ ಹೇಳುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿತ್ತು.
‘ಮುಕ್ತ ಮುಕ್ತ’ ದಾರಾವಾಹಿಯಲ್ಲಿ ಅವರು ವಹಿಸಿದ ಪಾತ್ರಕ್ಕೆ ಹೇಗೆ ಜೀವ ತುಂಬಿದ್ದರೊ – ಇಲ್ಲೊಂದು ಮಾತು ನಾ ಹೇಳಲೇ ಬೇಕು. ಈ ದಾರಾವಾಹಿ ನನಗೆ ನಿರಂತರವಾಗಿ ನೋಡಲು ಆಗುತ್ತಿರಲಿಲ್ಲವಾದರೂ ಆಗಾಗ ನೋಡಿದಾಗ “ಇವನೊಂದು ಪೆದ್ದಪ್ಪಾ, ನಗೋದು ನೋಡು ಮೂವತ್ತೆರಡು ಹಲ್ಲು ಕಾಣಬೇಕು” ಅಂತ ಬಯ್ಕೊಂಡಿದ್ದೆ. ಆಮೇಲೆ ಆಮೇಲೆ ಅವರ ನಟನೆ ನನ್ನ ಮನಸ್ಸು ಕಟ್ಟಿ ಹಾಕಿತ್ತು. ದಾರಾವಾಹಿ ನೋಡುವಾಗ ನಟನೆ ಅನ್ನುವುದು ಮರೆಸುವಷ್ಟು ಅವರು ಆ ಪಾತ್ರದಲ್ಲಿ ಲೀನವಾಗಿರುವುದು ಈ ಕಥೆಗಳಲ್ಲೂ ಕಂಡೆ. ಅವರು ಮಾತಾಡುವುದು, ನಟಿಸುವುದು, ಬರೆಯುವುದು ಎಲ್ಲವನ್ನೂ ತುಲನೆ ಮಾಡಿ ನೋಡಿದಾಗ ಅವರಿರೋದೇ ಹಾಗೆ ಎಂಬಂತೆ ಭಾಸವಾಗುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ನಾನು ಅವರನ್ನು ಭೇಟಿಯಾಗಬೇಕು ಅನಿಸುತ್ತಿದೆ.
ನಾನು ಹೈಸ್ಕೂಲ್ ಓದುತ್ತಿರುವಾಗ ಕನ್ನಡ ಮಾಸ್ತರು ಒಂದು ಮಾತು ಹೇಳಿದ್ದರು – “ನೀವು ಯಾವುದೇ ಪುಸ್ತಕ ಮೊದಲು ಓದುವಾಗ ಎಲ್ಲವನ್ನೂ ಒಮ್ಮೆ ತಿರುವಿ ಹಾಕಿ. ಆ ಪುಸ್ತಕ ಬರೆದವರ ಬಗ್ಗೆ ಮಾಹಿತಿಯನ್ನೂ ಅರಿಯುವುದು ಮುಖ್ಯ.” ಅಂದಿನಿಂದ ಈ ರೂಢಿ ನನ್ನಲ್ಲೂ ಮನೆ ಮಾಡಿದೆ. ಅದೇನೊ ಗೊತ್ತಿಲ್ಲ ಯಾವುದೇ ಪುಸ್ತಕ ಕೈಗೆ ಬರಲಿ ಕೊನೆಯಿಂದ ಮೊದಲಿನವರೆ ಹಾಳೆ ತಿರುವಿ ಕಣ್ಣಾಡಿಸುವುದು. ಹೀಗೆ ಮಾಡಿದರೇನೆ ಸಮಾಧಾನ.
ಲೇಖಕರ ಮಾತು – “ಇಲ್ಲಿ ಓದುತ್ತಿರುವಾಗ ಗಕ್ಕನೆ ನನ್ನ ಮನಸ್ಸು ಅಲ್ಲಿಯ ಒಂದೆರಡು ಸಾಲುಗಳ ಮೇಲೆ ನಿಂತಿತು. ” ಅಲ್ಲಿಯ ಭ್ರಷ್ಟತೆ ಮನಸ್ಸು ಕಾಡಿ ಅದು ಅನಾಗರಿಕರ ಕಾಡು ಮತ್ತು ಹೊರಗಿನ ಪ್ರಪಂಚ ಅದರಲ್ಲೂ ಸಾಹಿತಿ – ಕಲಾವಿದರ ಪ್ರಪಂಚ ನಾಗರಿಕರ ಕಾಡು, ಸಾಹಿತಿಗಳ ಬೀಡು… ಹಾಗಾಗಿ ಅಲ್ಲಿ ಬಿಟ್ಟು ಇಲ್ಲಿ ಬಂದೆ , ಭ್ರಮೆ ಬೇಗ ಹರೀತು, ಅಲ್ಲಿಗೂ ಇಲ್ಲಿಗೂ ಯಾವ ವ್ಯತ್ಯಾಸವಿರಲಿಲ್ಲ…..” ಓದುತ್ತ ನಗು ಬಂತು, ಮನೆಯಲ್ಲಿ ಗಲಾಟೆ ಅಂತ ಹಿಂದೊಬ್ಬ ಸಂತೆಗೆ ಹೋದ್ನಂತೆ” ಈ ಗಾದೆನೂ ನೆನಪಾಯಿತು.
ನಾನೂ ಕೂಡಾ ಕೆಲಸಕ್ಕೆ ಸೇರಿದಾಗ ನನ್ನ ಐವತ್ತೆರಡನೇ ವರ್ಷಕ್ಕೆಲ್ಲ ರಿಟೈರ್ಡಮೆಂಟ್ ತಗೊಂಡು ಊರೂರು ಸುತ್ತಬೇಕು, ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತ ಲೆಕ್ಕಾಚಾರ ಹಾಕಿದ್ದೆ. ಅದೇ ರೀತಿ ರಿಟೈರ್ಡಮೆಂಟ್ ಕೂಡಾ ತಗೊಂಡೆ. ಆದರೆ ಆರೋಗ್ಯದಿಂದಲ್ಲ, ಅನಾರೋಗ್ಯ ಕಾಡಿತ್ತು, ಅನಿವಾರ್ಯವಾಯಿತು ಕೆಲಸ ಬಿಟ್ಟೆ. ಅಂದುಕೊಂಡಂತೆ ಊರು ಸುತ್ತೋ ಶಕ್ತಿ ಕಳಕೊಂಡರೂ ಮನೆಯ ಮೂಲೆ ಸೇರಿದ ದೇಹ ಮನಸ್ಸು ಬರವಣಿಗೆಯತ್ತ ವಾಲಿತು.
ಇನ್ನೊಂದು ಕಡೆ “ಕಾರಣವೇ ಇಲ್ಲದೆ, ಅವರುಗಳ ತಪ್ಪೇ ಇಲ್ಲದೆ, ಚಾರಿತ್ರ ವಧೆ ಮಾಡಿಸಿಕೊಂಡಂತಹ ……” ಎಷ್ಟು ಸತ್ಯವಾದ ಮಾತು. ಇಂತಹ ಒದ್ದಾಣ ಅನುಭವಿಸಿದ, ಅನುಭವಿಸುತ್ತಿರುವ ಹೆಣ್ಣುಗಳು ಎಷ್ಟಿವೆಯೊ ಈ ಜಗತ್ತಿನಲ್ಲಿ!! ಅಂತಹ ಸಮಯದಲ್ಲಿ ನಾನು ಅಸಹಾಯಕಳಾಗಿ ಸಾಕಷ್ಟು ಒದ್ದಾಡಿದ ನೆನಪಾಗಿ ಕಣ್ಣು ತುಂಬಿ ಬಂತು. ಅವರ ಸಾಂತ್ವನದ ಮಾತುಗಳು ನನ್ನ ಬದುಕಿಗೆ ಎಷ್ಟು ಹತ್ತಿರವಾಗಿದೆಯಲ್ಲಾ ಅನಿಸಿತು. ಹುಬೇ ಹುಬೇ ಹೂವಾಗಿ ಬರೆಯುವುದು ಹೇಗೆಂದು ಇವರು ಬರೆಯುವ ಶೈಲಿ ನೋಡಿದಾಗ ಗೊತ್ತಾಗುತ್ತದೆ. ಈ ಶೈಲಿ ಎಲ್ಲರಿಗೂ ಏನು ಹೆಚ್ಚಿನ ಬರಹಗಾರರಿಗೆ ಸಾಧ್ಯ ಇಲ್ಲ ಅನ್ನುವುದು ನನ್ನ ವಾದ.
ಇನ್ನು ಲೇಖಕರು ತಮ್ಮ ಅನುಭವದ ಮಾತುಗಳನ್ನು ಬಹಳ ಯಥಾವತ್ತಾಗಿ ಕಥೆಯಲ್ಲಿ ಬರೆದಿದ್ದಾರೆ ಆರು ಕಥೆಗಳನ್ನು ಒಳಗೊಂಡ ’ನಾವಲ್ಲ’ ಪುಸ್ತಕದಲ್ಲಿ – ’ಮೋಕ್ಷ’ ಕಥೆಯಲ್ಲಿ ಮಠಾಧಿಪತಿಗಳ ಒಳ ಮನಸ್ಸಿನ ಬವಣೆ ಓದಿ ‘ಅಯ್ಯೋ’ ಅಂದ್ಕೊಂಡೆ. ಕಾರಣ ನನ್ನ ಊಹೆಯಲ್ಲಿ ಮಠಾಧಿಪತಿಗಳೆಂದರೆ ಎಷ್ಟು ಆರಾಂ ಜೀವನವಪ್ಪಾ! ಏನೂ ಕೆಲಸವಿಲ್ಲ ಬೊಗಸವಿಲ್ಲ, ಕಾರಲ್ಲಿ ಓಡಾಟ, ಎಲ್ಲರಿಂದ ಅಭೂತಪೂರ್ವ ಮರ್ಯಾದೆ ಇತ್ಯಾದಿ. ಆದರೆ ಈ ಕಥೆ ಓದಿ ಆಂತರಿಕ ಒದ್ದಾಟದ ಅರಿವಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ವಾ? ಎಷ್ಟೊಂದು ಸೂಕ್ಷ್ಮ ವಾಸ್ತವದ ಸತ್ಯ ಅಡಗಿದೆ ಈ ಕಥೆಯಲ್ಲಿ!
‘ಮೌನಿ ‘ ಕಥೆ ಓದುತ್ತ ನಾನೂ ಮೌನವಾಗಿಬಿಟ್ಟೆ. ತಲೆಯಲ್ಲಿ ಹುಳ ಬಿಟ್ಟಾಂಗಾ಼ಯಿತು. ನನ್ನ ರಕ್ತ ಸಂಬಂಧದವಳ ಹಿನ್ನೆಲೆ ಕಥೆ ಹೆಚ್ಚು ಕಡಿಮೆ ಈ ಕಥೆಗೆ ಬಹಳ ಹತ್ತಿರವಾಗಿದೆ. ಮೊದಲು ವಯಸ್ಸಾಗ್ತಾ ಇದೆ ಮದುವೆ ಆಗಿಲ್ವಲ್ಲಾ ಅಂತ ಚಿಂತೆ, ಆ ನಂತರ ಮದುವೆಯಾಗಿ ಆರು ವರ್ಷ ಆಯಿತು ಇನ್ನೂ ಒಂದು ಹೆತ್ತಿಲ್ಲ ಅಂತ ಎಲ್ಲರೂ ಸೇರಿ ಜರೆಯುವಾಗ ಪ್ರತಿಭಟಿಸಲಾಗದೆ ಹೆಚ್ಚು ಹೆಚ್ಚು ಮೌನಿಯಾಗುತ್ತ ಒಳಗೊಳಗೆ ಕೊರಗಿ ಜೀವ ಶವದಂತಾದಾಗ ಇನ್ನೇನು ಮುಗಿತು ಇವಳ ಕತೆ ಅಂದುಕೊಂಡ ದಿನಗಳಲ್ಲಿ ಈ ಕಥೆಯಲ್ಲಿ ಕೇಳಿದಂತೆ “ಮಕ್ಳಾಯ್ತೇನೆ ಮಂದಾಕಿನಿ?” ಕೇಳಿದವನಿಗೆ ಕೆನ್ನೆಗೆ ಭಾರಿಸುವ ಪರಿಸ್ಥಿತಿ ಮಾತ್ರ ಬಂದಿಲ್ಲ. ಕೊನೆಗೂ ಒಂದು ಗಂಡು ಮಗು ಹೆತ್ತು ಕೊಟ್ಟಳು. ಬಹುಶಃ ನಾವು ಹತ್ತಿರದಿಂದ ನೋಡಿದ ಘಟನಾವಳಿಗಳು ನಾವು ಓದುವ ಪುಸ್ತಕದಲ್ಲಿ ಸಿಕ್ಕರೆ ಓದುತ್ತ ಓದುತ್ತ ಅಲ್ಲೇ ಮುಳುಗಿ ಹೋಗುತ್ತೇವೆ ಅನ್ನುವುದಂತೂ ಅನುಭವಕ್ಕೆ ಬಂತು. ಕಥೆ ಓದಿ ಮುಗಿಸಿದರೂ ಅದೇ ಗುಂಗು ನನ್ನ ಇಡೀ ದಿನ ಕಾಡದೇ ಬಿಡಲಿಲ್ಲ.
ಒಂಬತ್ತು ತಿಂಗಳು ಅನುಭವಿಸುವ ಕಿರಿ ಕಿರಿ, ಯಾತನೆ, ತ್ರಾಸು ಕೈ ತುಂಬ ಸಂಬಳ ತೆಗೆದುಕೊಂಡು ಓಡಾಡುವ ಈಗಿನ ಮಂದಿ ಹೇಳ್ತಾರಲ್ಲ “ಓಹ್,ಹೊಸಾ ಪ್ರೊಜೆಕ್ಟ,ಎಷ್ಟು ಕೆಲಸ ಅಬ್ಬಾ!” ಅಂದಾಗೆಲ್ಲಾ ನಾನಂದುಕೊಳ್ಳೋದು ಹೆಣ್ಣು ಮಕ್ಕಳನ್ನು ಉದ್ದೇಶಿಸಿ “ಇದೇನು ಪ್ರೊಜೆಕ್ಟು, ಮದುವೆಯಾಗಿ ಆಮೇಲಿದೆ ದೀರ್ಘ ಪ್ರಾಜೆಕ್ಟ, ನೀವೊಬ್ಬರೆ ಅನುಭವಿಸಬೇಕಾಗಿದ್ದು”. ಅಮ್ಮನ ಕಷ್ಟ, ಅವಳ ಕರುಳ ತುಡಿತ, ಒಳ ಮಾತು, ತನಗೇನಾದರೂ ಪರವಾಗಿಲ್ಲ ತನ್ನ ಮಕ್ಕಳು ಚೆನ್ನಾಗಿ ಇರಬೇಕು ಎಂಬ ಭಾವ ಇವೆಲ್ಲ ಅರ್ಥ ಆಗಬೇಕು ಅಂದರೆ ಮಗಳೂ ಅಮ್ಮನಾಗ ಬೇಕು ಎಂಬುದು ನನ್ನ ಅನಿಸಿಕೆ. ಆದರೆ “ಸ್ಮಾರಕ” ಕಥೆ ಓದಿದಾಗ ಅವಳ ಅಸಹಾಯಕತೆ, ತನ್ನದಲ್ಲದ ತಪ್ಪನ್ನು ಒಪ್ಪಿಕೊಂಡ ಪರಿ ವ್ಯಥೆ ತರಿಸಿತು. ಹೆತ್ತಮ್ಮನ ಒಳಗುದಿ ಅರಿಯದ ಹೆಣ್ಣು ಮಕ್ಕಳ ಬಾಯಲ್ಲಿ ಬರೋ ಮಾತೇ ಇದು? ಅಪ್ಪ ಒಳ್ಳೆಯವನು,ಅಮ್ಮ ಕೆಟ್ಟೋಳು. ಚಿಕ್ಕವಳಿರುವಾಗ ದಿನಾ ಪ್ಲೇ ಹೋಮಲ್ಲಿ ಬಿಟ್ಟು ನಾನು ಆಫೀಸಿಗೆ ಹೋಗುವಾಗ ನನ್ನ ಮಗಳೂ ಹೀಗೆಯೇ ಹೇಳುತ್ತಿದ್ದಳು. ಇಲ್ಲೇನು ತನ್ನಜ್ಜಿ ಮನೆಗೆ ರಜೆಯಲ್ಲಿ ಹೋದಾಗಲೂ ಇದೇ ಮಾತು ಎಲ್ಲರಲ್ಲೂ ಹೇಳಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ಲು. ಆದರೆ ಬೆಳೆಯುತ್ತ ಹೋದಂತೆ ಹೆಣ್ಣು ಮಕ್ಕಳು ಹೆಚ್ಚು ಅರಿಯುವುದು , ಅಂಟಿಕೊಳ್ಳುವುದು ಅಮ್ಮನನ್ನೇ. ಇಲ್ಲಿ ಸ್ವಲ್ಪ ಬೇರೆಯೇ ಕಥೆ ಇದೆ. ಹೀಗೂ ಉಂಟಾ ಅಂತನಿಸಿತು. ಛೆ! ಇರಲಿಕ್ಕಿಲ್ಲ, ಅಂತ ಲೇಖಕರನ್ನೇ ದೂರುವಂತಾಯಿತು. ಆಮೇಲೆ ಗಮನಕ್ಕೆ ಬಂತು ಓಹ್! ಇದು ಕಥೆಯಲ್ವಾ. ಕಥೆಯಲ್ಲಿ ಏನು ಬೇಕಾದರೂ ಆಗಬಹುದು. ನೋಡಿ ಓದುತ್ತ ಕಥೆಯಲ್ಲಿ ಹೇಗೆ ತಲ್ಲೀನವಾಗಿಸುತ್ತಾರೆ ಲೇಖಕರು. ಸೂಪರ್.
ಯಾರಿರಲಿ ಇಲ್ಲದಿರಲಿ ಹೆಂಗಸರಿಗೆ ಬಂಗಾರದ ಮೇಲಿರೊ ವ್ಯಾಮೋಹ ಕಡಿಮೆ ಆಗುವುದು ಅಪರೂಪ. ಹಾಗೆಯೆ ಹೆತ್ತವರ ಕಳೆದುಕೊಂಡ ದುಃಖ ಇರಲಿ ಇಲ್ಲದಿರಲಿ ಅವರ ಆಸ್ತಿಯ ಕುರಿತು ಮಕ್ಕಳು ಲೆಕ್ಕಾಚಾರ ಹಾಕುವುದು ವಾಸ್ತವದ ಸತ್ಯ ಅಂತಲೇ ಹೇಳಬಹುದು. ಏನೂ ಆಸ್ತಿ ಇಲ್ಲದಿದ್ದರೆ ಒಳಗೊಳಗೆ ಬಯ್ಕೊಳೊದು ಮೌನದಲ್ಲಿ . “ಸಂಭವಾಮಿ” ಕಥೆಯಲ್ಲಿ ಬುದ್ದಿವಂತ ತಂದೆಯಿಂದ ಆಸ್ಥಿಯ ಬಗೆಗಿನ ಲೆಕ್ಕಾಚಾರ, ಮಗನಿಂದಲೇ ಕರ್ಮಾಚರಣೆ ಮಾಡಿಸಲು ಹಾಕಿದ ಕೋಳ ಅಬ್ಬಾ! ಲೇಖಕರ ತಲೆಯೆ? ಎಷ್ಟು ಜಾಣ್ಮೆಯಿಂದ ಕಥೆಯಲ್ಲಿ ವಾಸ್ತವದ ಚಿತ್ರಣ ವ್ಯಕ್ಪಡಿಸಿದ್ದಾರೆ! ಹಾಗೆಯೆ ಬದುಕಿದ್ದಾಗ ಮಾಡದ ವೆಚ್ಚ ಅವರು ತೀರಿಕೊಂಡಾಗ ಸಾಲ ಸೋಲ ಮಾಡಿಯಾದರೂ ಶಾಸ್ತ್ರ ಸಂಪ್ರದಾಯ ಮಾಡುವುದು ಮತ್ತು ಬದುಕಿದ್ದಾಗ ಮಾಡಿದ ತಮ್ಮ ಕರ್ಮ ಇದ್ದವರಿಂದ ಮಾಡಿಸಿ ಕಳಕೊಳ್ಳುವ ವಿಚಾರ ಕಥೆಯುದ್ದಕ್ಕೂ ಕಾಣಬಹುದು.
“ಹೆಣ್ಣು ಹೆಣ್ಣೇ…ಕುದ್ದಷ್ಟೂ ಬೇಯುತ್ತೆ, ಬೆಂದಷ್ಟೂ ಮೆತ್ತಗಾಗುತ್ತೆ, ಮೆತ್ತಗಾದಷ್ಟೂ ಅಪ್ಯಾಯಮಾನವೂ ಆಗುತ್ತೆ” ಕಾತ್ಯಾಯಿನಿ ಕಥೆ ಓದುತ್ತಿದ್ದಂತೆ ಯಾವ ಹೆಣ್ಣಾದರೂ ಈ ಸಾಲನ್ನು ಮತ್ತೆ ಮತ್ತೆ ಓದದೇ ಇರುವುದಿಲ್ಲ. ಎಷ್ಟು ಸತ್ಯ ಅಡಗಿದೆ! ಸಿಹಿ ಖಾರ ಬದುಕಿಗೊಂದು ಉಪಮೆ. “ಬಡವರ ಮನೆಯಲ್ಲಿ ಹೆಣ್ಣು ಹುಟ್ಟಬಾರದು” ಇದಂತೂ ಅಪ್ಪಟ ಸತ್ಯ. “ಬಡವರದು ಉಡಿದಾರಕ್ಕಿಲ್ಲದ ಬದುಕು. ಶ್ರೀಮಂತರದು ಮೆರೆದಾಡುವ ಬದುಕು.” ಹೀಗನ್ನುತ್ತಿದ್ದ ನನ್ನಜ್ದಿಯ ಮಾತುಗಳು ನೆನಪಾಯ್ತು. ಗಂಡ ಎದುರಿಗೆ ಇದ್ದರೂ ಕೇವಲ ಪ್ರದರ್ಶನದ ಬೊಂಬೆಯಂತೆ ಬದುಕ ಬೇಕಾದ ಕಾತ್ಯಾಯಿನಿಯ ಪರಿಸ್ಥಿತಿ ಕೊನೆಗೆ ಅವನ ಉಳಿಸಿಕೊಳ್ಳಲು ತನ್ನ ಗೆಳೆಯನೆದುರು ಅಂಗಲಾಚಿ(ಸವಾಲೂ ಅನಿಸಿತು)ಕೇಸು ನಡೆಸೆನ್ನುವ ಸನ್ನಿವೇಶ, ಅಲ್ಲಿ ಅವಳ ಗಂಡನ ಅವತಾರ ಮರುಕಳಿಸಿ ಆದ ಸೋಲು ಮತ್ತೆ ಮಗನ ಹೆಳವತನದಿಂದ ಕೇಸಿಂದ ಬಿಡುಗಡೆ ಮತ್ತದೇ ಗಂಡನ ಮೆರೆದಾಟ ಕೊನೆಯಲ್ಲಿ ಮಾಡಿದ್ದುಣ್ಣೊ ಮಾರಾಯಾ ಎಂಬಲ್ಲಿಗೆ ಪರಿಸಮಾಪ್ತಿ ಒಂದು ದೀರ್ಘ ನಿಟ್ಟುಸಿರು ಓದಿ ಮುಗಿಸಿದಾಗ. ಆದರೆ ಕಾತ್ಯಾಯಿನಿ ಮತ್ತು ಅವಳ ಸ್ನೇಹಿತನೊಂದಿಗಿನ ಸಂಬಂಧ ಮೇರು ಸ್ಥರದಲ್ಲೇ ಇರಿಸುವ ಕಥೆಯ ಶೈಲಿ ಅಮೋಘ.
ಈ ಕಥಾ ಸಂಕಲನಕ್ಕೆ “ನಾವಲ್ಲ” ಅಂತ ಯಾಕೆ ಹೆಸರಿಟ್ಟರು? ” ನಾವಲ್ಲ” ಈ ಕಥೆ ಓದಿದಾಗಲೂ ಅರ್ಥನೇ ಆಗಲಿಲ್ಲ. ಬಹುಶಃ ‘ನಂಗೊತ್ತಿಲ್ಲ, ನಾವಲ್ಲ’ ಅಂತ ಮನುಷ್ಯ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಸ್ವಭಾವ ಇಲ್ಲಿ ಎತ್ತಿ ಹಿಡಿದಿರಬೇಕು. ಅದೇನೆ ಇರಲಿ ಒಟ್ಟಿನಲ್ಲಿ ಹೆಣ್ಣಿನ ಶೋಷಣೆಗಳ ಸ್ವರೂಪ ಈ ಕಥೆಗಳಲ್ಲಿ ಅತ್ಯಂತ ಆಳವಾಗಿ ಅಲ್ಲಲ್ಲಿ ಆಡು ಭಾಷೆಗಳೊಂದಿಗೆ ಬರೆದಿರುವುದು ವಿಶೇಷ. ವೇಗವಾಗಿ ಓದಿಸಿಕೊಂಡು ಹೋಗುವ ಉತ್ತಮ ಪುಸ್ತಕ ಎಂಬುವುದರಲ್ಲಿ ಎರಡು ಮಾತಿಲ್ಲ.
- Geetha Hegde