ಅಂಕಣ

ಬಹುವ್ಯಕ್ತಿತ್ವ ಅಸ್ವಸ್ಥತೆಯೆಂಬ ಮನೋವ್ಯಾಧಿ…

ಅವಳ ವಯಸ್ಸು ಸುಮಾರು 22 ವರ್ಷ. ಸ್ನಾತಕೋತ್ತರ ಪದವಿಯಲ್ಲಿ ತತ್ತ್ವಜ್ಞಾನವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡಿದ್ದಳು. ಮೊದಲಿನಿಂದಲೂ ತತ್ತ್ವಜ್ಞಾನ ಮತ್ತು ಇತಿಹಾಸಗಳಲ್ಲಿ ಅತಿಯಾದ ಆಸಕ್ತಿಯಿದ್ದ ಅವಳು, ಅದರಲ್ಲಿ ಸ್ವಲ್ಪ ಅತೀ ಅನ್ನಿಸುವಷ್ಟರಮಟ್ಟಿಗೆ ಬೆರೆತುಹೋಗಿದ್ದಳು. ಅವಳ ಬಾಲ್ಯವೂ ಅಷ್ಟೇನೂ ಹಿತಕರವಾಗಿರದೇ, ತನ್ನವರಿಂದಲೇ ಹಿಂಸೆ, ಲೈಂಗಿಕ ಕಿರುಕುಳ ಇಂತಹ ಕಷ್ಟದಲ್ಲಿಯೇ ಕಳೆದು ಹೋಗಿತ್ತು. ತಾಯಿ ಇಲ್ಲದ ಅವಳಿಗೆ, ತಂದೆ ತೋರಿಸುತ್ತಿದ್ದ ಕಾಳಜಿಯೂ ಅಷ್ಟಕಷ್ಟೇ. ಇವೆಲ್ಲ ಅವಳ ಮನಸ್ಸಿನ ಮೇಲೆ ನಿಧಾನಗತಿಯ ವಿಷದ ತರ, ಪರಿಣಾಮ ಬೀರುತ್ತಲೇ ಸಾಗಿತ್ತು. ಹೀಗಾಗಿ ಅವಳು ಓದುತ್ತಿರುವ ವಿಷಯದಲ್ಲಿ ಯಾವುದೇ ಕಷ್ಟದ ಸನ್ನಿವೇಶವಿರುವ ಕಥೆ ಅಥವಾ ಅಂತಹ ಕಷ್ಟವನ್ನು ಎದುರಿಸುತ್ತಿರುವ ವ್ಯಕ್ತಿಯ ಬಗ್ಗೆ ಬಂದಾಗ, ಆ ವ್ಯಕ್ತಿ ತಾನೇ ಎಂದು ಕಲ್ಪಿಸಿಕೊಳ್ಳುತ್ತಿದ್ದಳು. ಇನ್ನೊಂದು ಅರ್ಥದಲ್ಲಿ, ಅವಳಿಗೇ ತಿಳಿಯದಂತೆ ಆ ವ್ಯಕ್ತಿಯೇ ಅವಳಾಗಿ ಬಿಡುತ್ತಿದ್ದಳು. ಕೇವಲ ಇಷ್ಟೇ ಅಲ್ಲ ಅತಿಯಾದ ಭಾವೋದ್ರೇಕ, ಖಿನ್ನತೆ, ಭ್ರಮೆ, ನಿದ್ದೆಯಲ್ಲಿ ನಡೆದಾಡುವುದು ಹೀಗೆ ಅನೇಕ ರೀತಿಯ ಅಸಮಂಜಸ ಬದಲಾವಣೆಗಳು ಅವಳಲ್ಲಿ ಕಾಣ ಸಿಕೊಂಡವು. ದಿನಕಳೆದಂತೆ 4 ರಿಂದ 5 ತೆರನಾದ ವ್ಯಕ್ತಿತ್ವ ಅವಳಲ್ಲಿ ಕಾಣಿಸಿಕೊಳ್ಳತೊಡಗಿದವು. ಪಾಪ ಅವಳಿಗೆ ಇದರ ಅರಿವೇ ಇರುತ್ತಿರಲಿಲ್ಲ. ಅವಳನ್ನು ಪರೀಕ್ಷಿಸಿದ ಮನೋವೈದ್ಯರು, ಅವಳ ವೃತ್ತಾಂತವನ್ನೆಲ್ಲಾ ಕೂಲಂಕುಷವಾಗಿ ಅಧ್ಯಯನ ಮಾಡಿ ಅವಳ ಈ ಅಸಮಂಜಸ ವರ್ತನೆಗೆ “ಬಹು ವ್ಯಕ್ತಿತ್ವ ಅಸ್ವಸ್ಥತೆ” ಅಥವಾ “ವಿಘಟಿತ ಗುರುತಿನ ಅಸ್ವಸ್ಥತೆ” (Multiple Personality Disorder or Dissociatvie Identity Disorder) ಎಂದು ಹೆಸರಿಸಿದರು. ಇದೊಂದು ಮಾನಸಿಕ ಅಸ್ವಸ್ಥತೆ ಅಥವಾ ಮಾನಸಿಕ ಖಾಯಿಲೆ ಎಂದು ಹೇಳಿದರು.

ಇದೊಂದು ವಿಚಿತ್ರ ರೀತಿಯ ಮಾನಸಿಕ ಖಾಯಿಲೆ. ಈ ಖಾಯಿಲೆ ಇರುವ ವ್ಯಕ್ತಿಯಲ್ಲಿ ನಾವು ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಕ್ತಿತ್ವವನ್ನು ಕಾಣಬಹುದಾಗಿದೆ. ಈ ಮಾನಸಿಕ ಖಾಯಿಲೆ ಹೊಂದಿರುವವರು, ನಾನು ಮೇಲೆ ಹೇಳಿದ ಕಥೆಯಲ್ಲಿರುವಂತೆಯೇ ಬಹುಪಾಲು ವರ್ತಿಸುತ್ತಾರೆ. ಆದರೆ ಸಂಪೂರ್ಣವಾಗಿ ಹಾಗೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಲಕ್ಷಣಗಳು ಮೇಲೆ ತಿಳಿಸಿದಂತೆ ಇದ್ದರೂ, ಆ ವ್ಯಕ್ತಿಯ ವ್ಯಕ್ತಿತ್ವದ ಆಧಾರದ ಮೇಲೆ, ಹಾಗೂ ಅವರು ಎದುರಿಸುತ್ತಿರುವ ಸನ್ನಿವೇಶದ ಮೇಲೆ ಅವನ/ಅವಳ ವರ್ತನೆ ಭಿನ್ನವಾಗಿರುವ ಸಾಧ್ಯತೆ ಇದೆ. ಹಾಗಾದರೆ “ಬಹು ವ್ಯಕ್ತಿತ್ವ ಅಸ್ವಸ್ಥತೆ” ಎಂಬುದಕ್ಕೆ ನಿರ್ಧಿಷ್ಟ ಅರ್ಥವೇನು ಎಂಬುದನ್ನು ನಾವು ಮೊದಲು ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಮನಃಶಾಸ್ತ್ರಜ್ಞರು ಹಾಗೂ ಮನೋವೈದ್ಯರ ಪ್ರಕಾರ “ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿತ್ವದಿಂದ ತನ್ನನ್ನು ಗುರುತಿಸಿಕೊಳ್ಳುತ್ತಿದ್ದು, ತನ್ನ ನಿಜವಾದ ವ್ಯಕ್ತಿತ್ವದ ಬಗ್ಗೆ ಪರಿವೆಯೇ ಇಲ್ಲದೇ, ಹಾಗೂ ಪದೇ, ಪದೇ ಬದಲಾಗುತ್ತಿರುವ ತನ್ನ ವ್ಯಕ್ತಿತ್ವದ ಬಗ್ಗೆಯೂ ತಿಳಿಯದಿರುವ ಒಂದು ಮಾನಸಿಕ ಸ್ಥಿತಿ. ಹಾಗೂ ಇದು ಆತನ ಬಾಹ್ಯ ವರ್ತನೆಯ ಮೇಲೆ ನಿರಂತರ ಪ್ರಭಾವ ಬೀರುತ್ತಲೇ ಇರುತ್ತದೆ, ಆದರೆ ಆ ವ್ಯಕ್ತಿಗೆ ತಾನೇನು ಮಾಡಿದೆ, ಅಥವಾ ಮಾಡುತ್ತಿರುವೆ ಎಂಬುದರ ಕುರಿತು ಗುರುತಿಸಲು ಅಸಮರ್ಥನಾಗಿರುತ್ತಾನೆ/ಳೆ”. ಇಂತಹ ವ್ಯಕ್ತಿತ್ವವನ್ನೇ ಅಧಾರವಾಗಿಟ್ಟುಕೊಂಡು, ಇಂದು ಹಲವಾರು ಸಿನಿಮಾಗಳನ್ನು ಮಾಡಿರುವುದು ನಿಮಗೆಲ್ಲಾ ತಿಳಿದದ್ದೇ. ಉದಾಹರಣೆಗೆ ಕನ್ನಡದಲ್ಲಿ “ಆಪ್ತಮಿತ್ರ”, ತಮಿಳಿನಲ್ಲಿ “ಅನಿಯನ್” ಸಿನಿಮಾಗಳು, ಈ ಬಹು ವ್ಯಕ್ತಿತ್ವ ಅಸ್ವಸ್ಥತೆಯ ಕುರಿತದ್ದೇ ಆಗಿದೆ. ಹಾಗಾದರೆ, ಈ ಖಾಯಿಲೆಯ ಪ್ರಮುಖ ಲಕ್ಷಣಗಳೇನು ಹಾಗೂ ಈ ಮಾನಸಿಕ ಖಾಯಿಲೆಗೆ ಪ್ರಮುಖ ಕಾರಣಗಳೇನು ಎಂಬುದರ ಕುರಿತು ಸ್ವಲ್ಪ ಗಮನ ಹರಿಸಿದರೆ, ಇದರ ಕುರಿತಾದ ಒಂದು ಸ್ಪಷ್ಟ ಪರಿಕಲ್ಪನೆ ನಮ್ಮಲ್ಲಿ ಮೂಡಲು ಸಾಧ್ಯ. ಈ ಖಾಯಿಲೆಯನ್ನು ಹೊಂದಿರುವ ವ್ಯಕ್ತಿಯಲ್ಲಿ ಕಂಡುಬರುವ ಪ್ರಮುಖ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೆಂದರೆ,

ವ್ಯಕ್ತಿಯು ಸದಾ ಖಿನ್ನತೆಯಿಂದ ಇರುವುದು

ಆತ್ಮಹತ್ಯಾ ಪೃವೃತ್ತಿ

ನಿದ್ದೆಯ ಖಾಯಿಲೆ ( ನಿದ್ರಾಹೀನತೆ, ನಿದ್ದೆಯಲ್ಲಿ ನಡೆಯುವುದು ಇತ್ಯಾದಿ)

ಅತಿಯಾದ ಆತಂಕ, ಆಕ್ರಮಣಶೀಲತೆ, ಭಯದಿಂದ ಇರುವುದು

ಮಾದಕ ಮತ್ತು ಮದ್ಯ ವ್ಯಸನ

ವ್ಯಕ್ತಿಯು ಸದಾ ಭ್ರಮೆಯಲ್ಲಿಯೇ ಇರುವುದು

ತಿನ್ನುವ ಖಾಯಿಲೆ

ಜ್ಞಾಪಕ ಶಕ್ತಿಯ ಸಮಸ್ಯೆ ಅಥವಾ ಕೊರತೆ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಿನ್ನ ಧ್ವನಿ ಮತ್ತು ಭಿನ್ನ ವರ್ತನೆ. ಇತ್ಯಾದಿ..

 ಇವುಗಳು “ಬಹು ವ್ಯಕ್ತಿತ್ವ ಅಸ್ವಸ್ಥತೆ” ಯನ್ನು ಹೊಂದಿರುವ ವ್ಯಕ್ತಿಯಲ್ಲಿ ಪ್ರಮುಖವಾಗಿ ಕಂಡುಬರುವ ಮಾನಸಿಕ ಲಕ್ಷಣಗಳು. ಮನೋವೈದ್ಯರ ಪ್ರಕಾರ ಈ ಮಾನಸಿಕ ಖಾಯಿಲೆಯನ್ನು ಗುರುತಿಸುವುದು ಸ್ವಲ್ಪ ಕಷ್ಟಕರ ಎಂಬುದು ಅವರ ಅಭಿಪ್ರಾಯ. ಇದನ್ನು ಗುರುತಿಸಲು ಕೇವಲ ಲಕ್ಷಣವೊಂದನ್ನು ನೋಡಿದರೆ ಸಾಲದು, ಕಾರಣಗಳೂ ಕೂಡ ತುಂಬಾ ಮುಖ್ಯವಾಗಿರುತ್ತದೆ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಏಕೆಂದರೆ, ಕಾರಣಗಳು ಮತ್ತು ಈಗಿರುವ ಲಕ್ಷಣಗಳನ್ನು ತಾಳೆ ಹಾಕಿ ನೋಡಿದಾಗ, ಇಂತದ್ದೇ ರೋಗ ಎಂದು ಸುಲಭವಾಗಿ ಪತ್ತೆ ಮಾಡಬಹುದೆಂಬುದು ತಜ್ಞರ ಸಹಮತ. ಅದು ನಿಜವೂ ಕೂಡ. ಬಹು ವ್ಯಕ್ತಿತ್ವ ಅಸ್ವಸ್ಥತೆಗೆ ಪ್ರಮುಖ ಕಾರಣಗಳೇನು ಎಂಬುದನ್ನು ನೋಡಿದಾಗ ನಿಮಗೇ ತಿಳಿಯುವುದು.

ಬಾಲ್ಯದ ಕಹಿ ಘಟನೆಗಳು : ಮುಖ್ಯವಾಗಿ ವ್ಯಕ್ತಿಯ ಬಾಲ್ಯದ ಘಟನೆಗಳು, ಪ್ರೌಢಾವಸ್ಥೆಯಲ್ಲಿ ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಬಾಲ್ಯಾವಸ್ಥೆಯಲ್ಲಿನ ಲೈಂಗಿಕ ಕಿರುಕುಳ, ದೈಹಿಕ ಅಥವಾ ಮಾನಸಿಕ ಹಿಂಸೆ, ಮತ್ತು ಇನ್ಯಾವುದೇ ತರ ಮನಸಿನ ಮೇಲೆ ಗಂಭೀರ ಪರಿಣಾಮ ಬೀರುವ ಘಟನೆಗಳು, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವು ಇವುಗಳು ಆ ವ್ಯಕ್ತಿಯ ಮನಸಿನ ಮೂಲೆಯಲ್ಲಿ ಅಳಿಸಲಾಗದ ನೋವಾಗಿ ಹಾಗೆಯೇ ಕುಳಿತು, ಅವರ ವ್ಯಕ್ತಿತ್ವದ ಮೇಲೆ ವಿಷದಂತೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. “ಬಹು ವ್ಯಕ್ತಿತ್ವ ಅಸ್ವಸ್ಥತೆಗೆ ಇದು ಬಹು ಮುಖ್ಯ ಕಾರಣ..

ಪದೇ-ಪದೇ ಎದುರಾಗುವ ನಿರಾಸೆ, ಸೋಲು : ಕೆಲವೊಮ್ಮೆ ನಮ್ಮ ಎಷ್ಟೋ ಆಸೆಗಳು ನೆರವೇರದೇ ನಿರಾಸೆಯಾಗುತ್ತವೆ. ಬಯಕೆಗಳು ಬಯಕೆಗಳಾಗೇ ಉಳಿದು, ಮನದಲ್ಲಿ ಹತಾಶೆ ಮೂಡುತ್ತದೆ. ಇಂತಹ ಸೋಲು, ಹತಾಶೆಗಳು ಪದೇ-ಪದೇ ಎದುರಾದಾಗ ವ್ಯಕ್ತಿಯ ಮನಸ್ಸು ಹತಾಶೆಯಲ್ಲಿ ಬೆಂದು, ತನ್ನ ಬಯಕೆಯನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಲೇಬೇಕೆಂದು ಅನ್ಯ ಮಾರ್ಗವನ್ನು ನೋಡತೊಡುಗುತ್ತಾನೆ. ಕೆಲವೊಮ್ಮೆ ಇದು ಆ ವ್ಯಕ್ತಿಯಲ್ಲಿ ಮತ್ತೊಂದು ವ್ಯಕ್ತಿತ್ವವನ್ನೇ ಅವರಿಗೆ ಅರಿವಿಲ್ಲದೇ ಸೃಷ್ಠಿಸಿಬಿಡುತ್ತದೆ.

 ಈ ಮೇಲಿನ ಎರಡು ಕಾರಣಗಳೇ ಮುಖ್ಯವಾಗಿ ಈ ತರಹದ ಮಾನಸಿಕ ವ್ಯಾಧಿಯನ್ನು ತರಬಲ್ಲದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದರಲ್ಲೂ ಈಗಾಗಲೇ ದಾಖಲಾಗಿರುವ ಇಂತಹ ಮನೋರೋಗಿಗಳಲ್ಲಿ, ಬಾಲ್ಯದ ಕಹಿ ಘಟನೆಯೇ ಪ್ರಮುಖ ಕಾರಣವಾಗಿದೆ ಎಂದು ಹಲವು ಮನೋವೈದ್ಯರು, ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಮಾನಸಿಕ ರೋಗಿಗಳ ಸಂಖ್ಯೆ ಅತೀ ವಿರಳ, ಹೊರದೇಶಗಳಲ್ಲಿ ಇದರ ಸಂಖ್ಯೆ ಹೆಚ್ಚು ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ. ಒಟ್ಟಿನಲ್ಲಿ ಈ ಬಹು ವ್ಯಕ್ತಿತ್ವ ಅಸ್ವಸ್ಥತೆಯ ಬಗ್ಗೆ, ಮಾನಸಿಕ ತಜ್ಞರಲ್ಲೇ ಭಿನ್ನ ಅಭಿಪ್ರಾಯಗಳೂ ಇವೆ. ಇದರ ಕುರಿತು ಅಧ್ಯಯನ ಮಾಡುತ್ತಾ ಸಾಗಿದರೆ, ಬೇರೆ, ಬೇರೆ ತಜ್ಞರ, ಭಿನ್ನ  ಅಭಿಪ್ರಾಯಗಳು ತೆರೆದುಕೊಳ್ಳುತ್ತದೆ. ಕೆಲವು ತಜ್ಞರ ಪ್ರಕಾರ “ವಿಘಟಿತ ಗುರುತಿ ಅಸ್ವಸ್ಥತೆ” (Dissociatvie Identity Disorder)  ಹಾಗೂ “ಬಹುವ್ಯಕ್ತಿತ್ವ ಅಸ್ವಸ್ಥತೆ” (Multiple Personality Disorder) ಎರಡೂ ಒಂದೇ, “ವಿಘಟಿತ ಗುರುತಿ ಅಸ್ವಸ್ಥತೆ”ಯಲ್ಲೇ “ಬಹು ವ್ಯಕ್ತಿತ್ವ ಅಸ್ವಸ್ಥತೆ” ಯೂ ಕಾಣ ಸಿಕೊಳ್ಳುತ್ತದೆ ಎಂಬುದಾದರೆ, ಇನ್ನೂ ಕೆಲವು ತಜ್ಞರ ಪ್ರಕಾರ, ಇವರಡೂ ಬೇರೆ, ಬೇರೆ ಎಂಬುದಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಇದರ ಕುರಿತು ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇದೆ. ಅದೇನೆ ಇದ್ದರೂ, ಒಬ್ಬ ವ್ಯಕ್ತಿಯಲ್ಲಿ ಮೂಲ ವ್ಯಕ್ತಿತ್ವವನ್ನು ಹೊರತುಪಡಿಸಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಕ್ತಿತ್ವಗಳು ಕಾಣ ಸಿಕೊಳ್ಳುವುದನ್ನು ನಾವು “ಬಹು ವ್ಯಕ್ತಿತ್ವ ಅಸ್ವಸ್ಥತೆ” ಎಂದು ಸರಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಕೊನೆಯದಾಗಿ ಈ ಮನೋರೋಗಕ್ಕೆ ಚಿಕಿತ್ಸೆ ಇದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಚಿಕಿತ್ಸೆಯೇನೋ ಇದೆ, ಆದರೆ ಬಹು ದೀರ್ಘಕಾಲ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ರೋಗಿ ಸಂಪೂರ್ಣವಾಗಿ ಗುಣಮುಖವಾಗಲೂಬಹುದು ಅಥವಾ ಆಗದೆಯೂ ಇರಬಹುದು. ಹೀಗೇ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಮಾಹಿತಿ ಕೃಪೆ ; ಗೂಗಲ್‍ನಿಂದ                                      

 

Facebook ಕಾಮೆಂಟ್ಸ್

ಲೇಖಕರ ಕುರಿತು

Manu Vaidya

Hails from Sirsi and presently working at Snehakunja Trust, Ksarakod, Honnavar.

Hobby: Reading books, Writing poem, story, and articles. Writing a column named 'Mana-Dani’ in “Sirsi siri” news paper.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!