Featured ಅಂಕಣ

ನೀರಿನ ಹಾಗೆ ಬದುಕುವುದನ್ನು ಕಲಿಯಬೇಕು

ಪ್ರತಿ ದಿನ, ಪ್ರತಿ ಕ್ಷಣ ಒತ್ತಡದ ಬದುಕು. ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭ್ರಮೆ. ಆಕ್ಸ್‌ಫರ್ಡ್, ಹಾರ್ವರ್ಡ್, ಐಎಎಮ್ ಇಂತಹ ಕಾಲೇಜಿಗೆ ಹೋಗಿ ಓದಿ ಮುಗಿಸಿದ ಮೇಲೂ ಬದುಕಿನಲ್ಲಿ ಸಾರ್ಥಕತೆಯ ಕುರಿತು ಸಂಶಯ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ, ಕೋಟ್ಯಂತರ ರೂಪಾಯಿಗಳ ವ್ಯವಹಾರ, ನಿಮ್ಮದೇ ಕಂಪನಿ, ಗಗನಚುಂಬಿ ಟವರ್‌ಗಳಲ್ಲಿ ಮನೆ, ಕಪ್ಪು ಕಾರು ಹೀಗೆ ಜೀವನದಲ್ಲಿ ಎಷ್ಟೇ ಇದ್ದರೂ ಇನ್ನು ಸಾಕು ಎನ್ನುವ ಸಂಪೂರ್ಣ ಭಾವ ಇರುವುದಿಲ್ಲ. ಮತ್ತೂ ಇನ್ನೇನೋ ಇದೆ ಅದು ನನಗೆ ಬೇಕು ಎನ್ನುವ ಮರಿಚೀಕೆ ನಮ್ಮನ್ನು ಓಡಿಸುತ್ತದೆ. ಓಡುತ್ತಾ ಓಡುತ್ತಾ ಬಯಕೆಗಳ ದಾಹ ಹೆಚ್ಚುತ್ತಾ ಹೋಗುತ್ತದೆ. ನಿಂತು ನೆಮ್ಮದಿಯ ನೀರು ಕುಡಿದು ಹೋಗುವಷ್ಟೂ ತಾಳ್ಮೆ ಇರುವುದಿಲ್ಲ. ಗೆಲುವಿನ ಮಡಿಲಲ್ಲಿ ಮಲಗಿ ಆನಂದಿಸಿ ಗೊತ್ತೇ ಇಲ್ಲ, ಮಡಿಲಿನಿಂದ ಬೇಕೂ ಅಂತ ಹೊರಗೆ ಬಂದು ಮುಗಿಯದ ಸ್ಪರ್ಧೆಯಲ್ಲಿ ಮತ್ತೆ ಓಡುವುದು. ನೆರಳು ಸಿಕ್ಕಾಗ ನಿಂತು ನೆಮ್ಮದಿಯ ಉಸಿರು ಬಿಡುವ ಮನಸ್ಸೇ ಇಲ್ಲ. ಬಿಸಿಲಿನಲ್ಲೇ ಬದುಕು ಅಂದುಕೊಂಡಿದ್ದೇವೆ. ಎಷ್ಟೂ ಅಂತ ಕ್ರಮಿಸೋಣ? ಕೋಪ, ಉದ್ರೇಕ, ಅಸೂಯೆ, ಪಿತೂರಿ ನಮ್ಮೊಳಗೆ ಕಂಪಿಸುತ್ತಿರುತ್ತದೆ. ಹತಾಶೆಯ ಗುಂಡಿಗಳು, ವಿಫಲತೆಯ ಮುಳ್ಳುಗಳು, ವಿರೋಧದ ಕಲ್ಲುಗಳು ದಾರಿಯುದ್ದಕ್ಕೂ ಇರುವಾಗ ಶಾಂತತೆಯಿಂದ ಜೀವನದಲ್ಲಿ ಹರಿದು ಹೋಗುವುದಾದರೂ ಹೇಗೆ? ಯಾರದ್ದೋ ಬಯಕೆಯ ಪರ್ವತದಲ್ಲಿ ಜನ್ಮತಾಳುತ್ತೇವೆ, ಯಾರದೋ ಬಯಕೆಗೆ ದುಡಿದು ಕೊನೆಗೆ ಸಂಸಾರದ ಸಾಗರದಲ್ಲಿ ಸೇರಿ ಬದುಕು ಮುಗಿದು ಹೋಗುತ್ತದೆ, ನನಗೇನು ಬಂತು ಈ ಬದುಕಿನಲ್ಲಿ? ಹೇಗೆ ಬದುಕಲಿ ನಾನು ಖುಷಿಯಿಂದ, ನೆಮ್ಮದಿಯಿಂದ? ಚೀನಾದ ತತ್ವಜ್ಞಾನಿಯಾದ ತಾವೋ ತೇ ಚಿಂಗ್ ಹೇಳುತ್ತಾರೆ – ‘ನೀರಿನ ಹಾಗೆ ಬದುಕಬೇಕು’ ಎಂದು. ಈ ಒಂದು ಸಾಲನ್ನು ನಾವು ಅರ್ಥ ಮಾಡಿಕೊಂಡರೆ ಸಾಕು, ನಮ್ಮ ಇಡೀ ಕಷ್ಟದ ಜೀವನವೇ ಸುಖದ ಸಾಗರವಾಗಿ ಪರಿವರ್ತನೆಯಾಗಬಹುದು. ಈ ಮಾತನ್ನು ಅವರು ಇವತ್ತೋ ಅಥವಾ ನಿನ್ನೆಯೋ ಹೇಳಿಲ್ಲ ಎರಡು ಸಾವಿರದ ಆರುನೂರು ವರ್ಷಗಳ ಹಿಂದೆಯೇ ಹೇಳಿದ್ದರು. ಇದನ್ನೇ ಆಧರಿಸಿ ಒಂದು ‘ಟೆಡ್ ಟಾಕ್’ ನಲ್ಲಿ ರೆಯಮಂಡ್ ಟಾಂಗ್ ಎನ್ನುವಾತ ನೀರಿನ ಹಾಗೆ ಬದುಕುವುದರಲ್ಲಿರುವ ಮಹತ್ವವನ್ನು ಹೇಳುತ್ತಾರೆ. ನೀರಿನ ಬದುಕು ಎಷ್ಟು ಸರಳ; ಆದರೆ ಅಂತಹ ಬದುಕನ್ನು ಮನುಷ್ಯನಲ್ಲಿ ನೋಡಲು ಸಿಗುವುದು ಬಹಳ ವಿರಳ‌.  ವಿಶೇಷ ಅಂದರೆ ಯಶಸ್ವೀ ವ್ಯಕ್ತಿಗಳ ಬದುಕಿನ ಚಿತ್ರಣವನ್ನು ನೋಡುತ್ತಾ ಹೋದರೆ ಅವರು ನೀರಿನ ಹಾಗೆ ಬದುಕಿದ್ದರು ಎನ್ನುವ ಸೂಕ್ಷ್ಮವಾದ ವಿಚಾರ ಗ್ರಹಿಕೆಗೆ ಬರುತ್ತದೆ. ಬದುಕಿನಲ್ಲಿ ಒತ್ತಡ ಹೆಚ್ಚಾದಾಗಲೆಲ್ಲ ನೀರಿನಂತೆ ಬದುಕುವ ಸಂಕಲ್ಪ ಮಾಡಿಕೊಂಡರೆ ಸಾಕು, ಎಲ್ಲವೂ ನಿಧಾನವಾಗಿ ಸರಿಯಾಗುತ್ತಾ ಹೋಗುತ್ತದೆ. ಹೃದಯ ಬಡಿತ ಸಾಮಾನ್ಯವಾಗುತ್ತದೆ, ತಲೆನೋವು ಕಡಿಮೆಯಾಗುತ್ತದೆ, ಮನಸ್ಸಿನಲ್ಲಿಯ ಹೆದರಿಕೆ ಅಳಿಸಿಹೋಹುತ್ತದೆ. ನೀರು ಹೇಗೆ ನಮ್ಮ ದೇಹದ ಬಹುಪಾಲು ಆವರಿಸಿದೆಯೋ ಹಾಗೆಯೇ ಮನಸ್ಸನ್ನು ಆವರಿಸಿಕೊಳ್ಳಬೇಕು. ಎಲ್ಲವೂ ಆಗ ನೀರಿನಲ್ಲಿ ಕರಗಿ ಹೋಗುತ್ತದೆ. ಹಾಗಿದ್ದರೆ ನೀರಿನ ಬದುಕಿನ ವಿಶೇಷತೆ ಏನು? ನೀರು ಬದುಕಿಗೆ ಎಷ್ಟು ಮುಖ್ಯ ಎನ್ನುವುದು ಗೊತ್ತು ಆದರೆ ನೀರಿನ ಹಾಗೆ ಬದುಕುವುದು ಅಂದರೇನು?

ಪ್ರತಿಫಲಕ್ಕೆ ಕುರಿತಾದ ನೂರೆಂಟು ಪ್ರಶ್ನೆಗಳು ನೀರಿಗೆ ಇಲ್ಲ!
ದೂರದಿಂದ ಕಾಣುವ ಆಕಾಶದೆತ್ತರಕ್ಕೆ ಹರಡಿರುವ ಹಸಿರು ಮರಗಳ ಸಾಲುಗಳನ್ನು ನೋಡಿದಾಗ ಕಣ್ಣಿಗೆ ಎಷ್ಟು ತಂಪೆನಿಸುತ್ತದೆ. ಮೋಡವನ್ನು ತಡೆಯುವಷ್ಟು ಎತ್ತರಕ್ಕೆ ಬೆಳೆದ ದಟ್ಟವಾದ ಅರಣ್ಯಕ್ಕೆ ಜೀವ ಅಂರ್ತಜಲ. ಜಲದೇವಿ ಎಲ್ಲಿಂದೋ ಹರಿದು ಬಂದು ನೆಲದ ಆಳಕ್ಕೆ ಹೋಗಿ ಪ್ರತಿಯೊಂದು ಗಿಡ, ಮರ, ಪೊದೆಗಳಿಗೆ ಜೀವ ಕೊಡುತ್ತದೆ. ಅರಣ್ಯದಲ್ಲಿರುವ ಸಹಸ್ರಾರು ಜೀವಿಗಳಿಗೆ ನೆಲೆ ಬೇಕು ಅಂದರೆ ಅಲ್ಲಿ ನೀರು ಬೇಕೇ ಬೇಕು. ನಾವು ಒಂದು ಕೆಲಸ ಮಾಡಬೇಕು ಅಂದರೂ ಕೂಡ ಹತ್ತು ಸಲ ಯೋಚನೆ ಮಾಡುತ್ತೆವೆ. ಇತ್ತೀಚೆಗೆ ನಮ್ಮಲ್ಲಿ ‘ಎಟೆಂಷನ್ ಗಳಿಕೆಯ ಸಿಂಡ್ರೋಮ್’ ಅತಿಯಾಗಿದೆ. ಕೆಲಸ ಮಾಡುವುದಕ್ಕೂ ಮುನ್ನ, ನಮ್ಮ ಕೆಲಸವನ್ನು ಯಾರಾದರೂ ಗುರುತಿಸುತ್ತಾರಾ? ಕೆಲಸಕ್ಕೆ ತಕ್ಕ ಸಂಭಾವನೆ ಸಿಗಬಹುದಾ? ಎನ್ನುವ ಆತಂಕ ಶುರುವಾಗುತ್ತದೆ. ಪ್ರತಿಫಲಕ್ಕೆ ಕುರಿತಾದ ನೂರೆಂಟು ಪ್ರಶ್ನೆಗಳು ಜೀವನದ ಒತ್ತಡವನ್ನು ಅನಾವಶ್ಯಕವಾಗಿ ಹೆಚ್ಚಿಸುತ್ತದೆ. ಅದೇ ನೀರು, ತನ್ನ ಸಾಧ‌ನೆಯನ್ನು ಎಂದಾದರೂ ಹೇಳಿಕೊಂಡಿದೆಯಾ? ತಾನು ಭೂಮಿಯ ಆಳದಲ್ಲಿ ಹೋಗಿ ಬೇರುಗಳಿಗೆ ಮೊಲೆಯುಣಿಸುತ್ತೇನೆ ಎಂದು ಜಗತ್ತಿನ ಗಮನ ಸೆಳೆಯಲು ಚಡಪಡಿಸುತ್ತದೆಯಾ? ಕಾಡಿನಲ್ಲಿ ಕಾಣದ ವಿಷಯ ಒಂದಾದರೆ ನಾಡಿನಲ್ಲಿ ಬೆಂದು ಹೋಗುವ ವಿಷಯ ಇನ್ನೊಂದು. ನೀರಿಲ್ಲದೆ ನಾಡಿಲ್ಲ. ಮಳೆಯಿಲ್ಲದೆ ಬೆಳೆಯಿಲ್ಲ. ಬೆಳೆಯಿಲ್ಲದೆ ಲೋಕಕ್ಕೆ ಅನ್ನವಿಲ್ಲ. ಮಳೆ, ಬೆಳೆ, ಅನ್ನ, ಜೀವನ ಎಲ್ಲದಕ್ಕೂ ಮೂಲ ನೀರು. ಬಿಸಿಲಿನಲ್ಲಿ ಕುದಿದು ಆವಿಯಾಗಿ ಬಾನನ್ನು ಸೇರಿ ಕೊನೆಗೆ ಮಳೆ ಹನಿಯಾಗಿ ಭೂಮಿಯ ದಾಹವನ್ನು ತಣಿಸುತ್ತದೆ ನೀರು. ತಾನು ಮಾಡಿದ ಈ  ಉಪಕಾರಕ್ಕೆ ಎಂದಾದರೂ ನೀರು ಪ್ರತಿಫಲವನ್ನು ಅಪೇಕ್ಷಿಸಿದೆಯಾ? ನೀರು ಹೇಗೆ ತಾನು ಹರಿಯುತ್ತಾ ಅಕ್ಕ ಪಕ್ಕದ ಎಲ್ಲ ಹೊಲ ಗದ್ದೆಗಳ ಹಸಿವನ್ನು ತಣಿಸುತ್ತಾ ಹೋಗುತ್ತದೆ. ಇದನ್ನು ನೋಡಿ ನಾವು ಎಷ್ಟೊಂದು ಕಲಿಯುವುದಿದೆ. ನಮ್ಮ ಬದುಕಿನಲ್ಲಿ ಅದೆಷ್ಟೋ ಕೆಲಸಗಳನ್ನು ನಾವು ಮಾಡುತ್ತೇವೆ ಕೆಲವೊಮ್ಮೆ ಅದಕ್ಕೆ ಪ್ರತಿಫಲ ಸಿಗುತ್ತದೆ ಇನ್ನು ಕೆಲವೊಮ್ಮೆ ಜನರು ಮರೆತುಬಿಡುತ್ತಾರೆ. ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಆ ಕ್ಷಣಕ್ಕೆ ಸಿಗಲಿಲ್ಲ ಎಂದು ಕೆಲಸ ಮಾಡುವುದನ್ನೇ ಬಿಟ್ಟರೆ ಹೇಗೆ? ಪ್ರತಿಫಲಾಪೇಕ್ಷೆಯೇ ಒತ್ತಡಕ್ಕೆ ಮೂಲ ಕಾರಣ. ಇನ್ನೊಬ್ಬರಿಗೆ ಏನೂ ಲಾಭವಿಲ್ಲದೆ ಸಹಾಯ ಮಾಡಿದರೆ ನನಗೇನು ಬಂತು ಎಂದು ಹತಾಶರಾಗಿ ಸ್ವಾರ್ಥದ ಬದುಕನ್ನು ಹೆಣೆಯುವುದರಲ್ಲಿ ಸಾಧನೆ ಏನಿದೆ?

ನೀರು ಹುಟ್ಟಿ ಹರಿದು ಸಾಗರವ ಸೇರುವ ತನಕ ಪರೋಪಕಾರಿ!
ಬದುಕಿನಲ್ಲಿ ಅವಕಾಶ ಸಿಕ್ಕಾಗಲೆಲ್ಲ ನೀರಿನ ಹಾಗೆ ಸಹಾಯಕ್ಕೆ ನಿಲ್ಲಬೇಕು. ನೀರು ಸುಮ್ಮನೆ ಹರಿದು ಹೋದರೆ ಪೋಲಾಗುತ್ತದೆ, ಬುಡದಲ್ಲಿ ತುಂಬಿ ನಿಂತರೆ ಬೇರು ಕೊಳೆತು ಹೋಗುತ್ತದೆ. ಅದಕ್ಕೆ ನೀರು ಎಷ್ಟು ಬೇಕೋ ಅಷ್ಟೇ ತನ್ನ ಸಹಾಯವನ್ನು ಮುಂದಕ್ಕೆ ಚಾಚುತ್ತದೆ. ನಾವು ಮಾಡುವ ಸಹಾಯವೂ ಕೂಡ ಮಿತವಾಗಿ ಹಿತವಾಗಿರಬೇಕು. ಇವತ್ತು ನೀರು ಇಲ್ಲ ಅಂದರೆ ಜಗತ್ತನ್ನು ಕಲ್ಪಿಸುವುದಕ್ಕೂ ಶಕ್ಯವಿಲ್ಲ. ನೀರಿನ ಉಪಕಾರವನ್ನು ಯಾರಾದರೂ ನೆನೆಯುತ್ತಾರೆಯೇ? ಕೆಲಸ ಆದ ಮೇಲೆ ಕಾರ್ಖಾನೆಯಿಂದ ಹೊರಕ್ಕೆ ಚೆಲ್ಲುತ್ತಾರೆ, ಮಗುವನ್ನು ಸ್ನಾನ ಮಾಡಿಸಿ ನೀರನ್ನು ಎಸೆಯುತ್ತಾರೆ, ನೀರನ್ನು ಮಾರಿ ಬದುಕುತ್ತಾರೆ, ಬೆವರು ಹರಿಸಿ ಬಂದ ಹಣದಲ್ಲಿ ಮಜಾ ಮಾಡುವ ಹೆಸರಲ್ಲಿ ನೀರನ್ನು ಪೋಲು ಮಾಡುತ್ತಾರೆ. ನಾವು ನೀರಿಗೆ ಎಷ್ಟೇ ಅಗೌರವ ತೋರಿಸಿದರೂ ಅದಕ್ಕೆ ಯಾವುದೇ ಬೇಸರವಿಲ್ಲ. ಅದು ಉದ್ಭವಿಸಿದ್ದೇ ಪರೋಪಕಾರಕ್ಕೆ. ನಮ್ಮ ಬದುಕೂ ಅಷ್ಟೇ. ಜೀವನದ ದಾರಿಯುದ್ದಕ್ಕೂ ಪರೋಪಕಾರಿಯಾಗಿ ಬದುಕುವುದು ಮನುಜನ ಧರ್ಮ. ಕೇವಲ ಪ್ರತಿಫಲಾಪೇಕ್ಷೆಗೆ ಬದುಕುವುದು ವ್ಯರ್ಥ ಜೀವನ. ನಮ್ಮ ಹತ್ತಿರ ಸಾಧ್ಯವಾದಷ್ಟು ಸಹಾಯವನ್ನು ಪರರಿಗೆ ಮಾಡುತ್ತಾ ಹೋಗಬೇಕು. ಇವತ್ತಲ್ಲ ನಾಳೆ ಒಂದಲ್ಲಾ ಒಂದು ದಿನ ನಮಗೆ ಆ ಪುಣ್ಯ ತಿರುಗಿ ಬಂದೇ ಬರುತ್ತದೆ. ಇವತ್ತು ಒಂದು ಸಣ್ಣ ಕೆಲಸ ಮಾಡುವಾಗಲೂ ಕೂಡ ಲಾಭವೆಷ್ಟು ಎಂದು ಲೆಕ್ಕ ಹಾಕುತ್ತೇವೆ. ಲೆಕ್ಕದಲ್ಲೇ ನಮ್ಮ ಅರ್ಧ ಜೀವನ ಕಳೆದು ಹೋಗುತ್ತದೆ. ನಮ್ಮ ದುಃಖಕ್ಕೆ ಮೂಲ‌ಕಾರಣ ಅಂದರೆ ಲೆಕ್ಕಾಚಾರದ ಜೀವನ. ನಾವು ನೀರಿನ ಹಾಗೆ ನಿರಾಳವಾಗಿ ಬದುಕುವುದನ್ನೇ ಮರೆತಿದ್ದೇವೆ. ಇವತ್ತಿಗೂ ಹಳ್ಳಿಗಳಲ್ಲಿ ಜನರು ಸುಖದಿಂದ ಇರಲು ಕಾರಣ ಅಂದರೆ ‘ಕೇಳಿ ಬಂದವರಿಗೆ ನೆರವು ಕೊಡಬೇಕು’ ಎಂಬ ನಿಲುವು. ಅಲ್ಲಿಯ ಜನರು ಯಾವಾಗಲೇ  ಕೇಳಿ ಸಹಾಯಕ್ಕೆ ಬರಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇಂತಹ ಪರಿಸರ ಶಹರದಲ್ಲಿ ಮಾಯವಾಗಿದೆ. ಸಿಮೆಂಟಿನ ಗೋಡೆಗಳಲ್ಲಿ ಏಕಾಂತ ಸೃಷ್ಟಿಯಾಗಿ ಒಬ್ಬರು ಇನ್ನೊಬ್ಬರನ್ನು ನೋಡಿಯೋ ನೋಡದಂತೆ ಬದುಕುತ್ತಾರೆ. ನಮ್ಮ ಸುತ್ತಲಿನ ಇಂತಹ ಸ್ವಾರ್ಥದ ಜೀವನ ಬದಲಾಗಬೇಕು, ನೋಡುತ್ತ ನೋಡುತ್ತ ಮರೆತುಹೋದ ಸುಖದ ಬದುಕು ಮತ್ತೆ ನೆನಪಾಗಬೇಕು. ನಾಲ್ಕುದಿನದ ಬದುಕಿನಲ್ಲಿ ಎಷ್ಟು ಲಾಭ, ಎಷ್ಟು ನಷ್ಟ ಅಂತ ಲೆಕ್ಕ ಮಾಡುತ್ತೀರಾ? ಅತೀ ಹೆಚ್ಚು ಬದ್ಧತೆಗೆ ಒಳಪಡದೆ, ಹೊರಗಿನ ಪ್ರಪಂಚಕ್ಕೆ ಹಾಗೂ ನನಗೆ ಏನೂ ಸಂಬಂಧಿ ಇಲ್ಲವೇ ಇಲ್ಲ ಎನ್ನುವಂತೆ ಸುಮ್ಮನಿರದೆ ಆದಷ್ಟು ಸಹಾಯ ಮಾಡುತ್ತಾ ಖುಷಿಯಲ್ಲಿ ಬದುಕಬೇಕು. ಸಹಾಯ ಮಾಡುವುದರಲ್ಲಿ ಸಿಗುವ ಖುಷಿಗೆ ವರ್ಣನೆ ಅಸಾಧ್ಯ.

ಕೋಪ, ತಾಪವಿಲ್ಲದ ಸಾಂಗತ್ಯದ ಬದುಕನ್ನು ನೀರಿನಿಂದ ಕಲಿಯಬೇಕು
ಇವತ್ತು ಹೊಂದಿಕೊಂಡು ಬದುಕುವುದೇ ಜನರಿಗೆ ಕಷ್ಟವಾಗಿದೆ. ಕಛೇರಿಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಜನರಿಗೆ ತಮ್ಮದೇ ಆದ ಒಂದು ಖಾಸಗಿತನ ಬೇಕೆನಿಸುತ್ತದೆ. ಮನುಷ್ಯ ಸಂಘಜೀವಿ, ಆತ ಏಕಾಂತದಲ್ಲಿ ಬದುಕಲಾರ. ಹೀಗಾಗಿಯೇ ಆತ ಸಮಾಜವನ್ನು ಕಟ್ಟಿಕೊಂಡು ಬದುಕಲು ಶುರುಮಾಡಿದ್ದು. ಇಂದು ಸಮಾಜ ಚೂರು ಚೂರಾಗಿ ಒಡೆದು ಹೋಗುತ್ತಿದೆ. ಜಾತಿ, ಧರ್ಮ, ಬಡವ, ಶ್ರೀಮಂತ ಹೀಗೆ ಜನರು ದೂರ ದೂರ ಹೋಗುತ್ತಿದ್ದಾರೆ. ಇಂತಹ ಸನ್ನಿವೇಶಗಳೇ ನಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತಿವೆ. ನಾವು ಸದೃಢ ಮಾನಸಿಕ ಆರೋಗ್ಯ ಹೊಂದಲು ನೀರಿನಂತೆ ಬದುಕಬೇಕು. ಸರಾಗವಾಗಿ ಹರಿಯುತ್ತಿರುವ ನೀರಿನ ಎದುರು ಕಲ್ಲುಗಳು ಬಂದರೆ ಅದಕ್ಕೆ ಸಿಟ್ಟು ಬರುವುದೇ? ಇಲ್ಲ. ಕಲ್ಲಿನ ಸುತ್ತ ಶಾಂತ ರೀತಿಯಲ್ಲಿ ಸುತ್ತಿಕೊಂಡು ಮುಂದೆ ಹೋಗುತ್ತದೆ. ಕಲ್ಲಿನ ಜೊತೆ ಜಗಳ ಮಾಡುತ್ತಾ ಕೂತಿದ್ದರೆ ಅಲ್ಲೇ ನಿಂತು ಕೊಳೆತುಬಿಡುತ್ತಿತ್ತು. ಎಲ್ಲೇ ಏನೇ ಅಡತಡೆಗಳು ಬರಲಿ, ಒಂದು ಪರಿಹಾರ ಕಂಡುಕೊಂಡು ಮುಂದೆ ಹೋಗುತ್ತಿರುತ್ತದೆ. ಸಿಟ್ಟು, ಸಿಡುಕು, ಜಗಳ ಇವೆಲ್ಲ ಎಲ್ಲಿದೆ? ನೀರು ಹುಟ್ಟುವುದು ಎಲ್ಲೋ ಆಮೇಲೆ ಸೇರುವುದು ಇನ್ನೆಲ್ಲೋ ಆ ನಡುವೆ ಅದೆಷ್ಟು ವಸ್ತುಗಳೊಂದಿಗೆ ಸೇರಿ ಬದುಕುತ್ತದೆ ಅಲ್ಲವೆ? ಹರಿದು ಬರುವಾಗ ಕಲ್ಲುಗಳು, ಮಣ್ಣುಗಳು, ಮುಳ್ಳುಗಳು, ಕೊಳಚೆ, ಹಳ್ಳ, ಕೊಳ್ಳ ಎಲ್ಲವೂ ಬಂದು ಸೇರುತ್ತದೆ. ಒಂದು ಕಡೆ ಝರಿಯಾಗಿ ಹರಿದರೆ ಇನ್ನೊಂದು ಕಡೆ ಕಾಲುವೆಯಲ್ಲಿ ಸರಸರನೆ ಹೋಗುತ್ತದೆ. ನದಿಯಲ್ಲಿ ಸಿಹಿಯಾಗಿ, ಸಾಗರದಲ್ಲಿ ಉಪ್ಪಾಗಿ ಬದುಕುತ್ತದೆ. ಊರು, ಕೇರಿ, ಶಹರ, ಕಾಡು, ಮೇಡು ಎನ್ನದೆ ಕಂಡಲ್ಲಿ ದಾರಿ ಮಾಡಿಕೊಂಡು ಹೋಗುತ್ತದೆ. ಸಾಗರದಲ್ಲಿ ಅದೆಷ್ಟೋ ಜೀವಜಂತುಗಳು ಸೇರಿಕೊಂಡಿವೆ. ಸುನಾಮಿ, ಚಂಡಮಾರುತ ಎಲ್ಲವೂ ಅಲ್ಲೇ ಅಡಗಿವೆ. ಆದರೂ ಒಮ್ಮೆಯೂ ನನಗೆ ಇದಾವುದೂ ಬೇಡ ಎಂದು ಹೊರಗೆ ಎಸೆದಿಲ್ಲ ತಾನೆ? ನೀರು ತಾನು ಬೇರೆ ಇದ್ದುಬಿಡುತ್ತೇನೆ ಎಂದು ಕೂತರೆ ಜಗತ್ತು ಹೇಗಿರಬಹುದು? ನೀರಿನಿಂದ ನಾವು ಹೊಂದಿಕೊಂಡು ಬಾಳುವುದನ್ನ ಕಲಿಯಬೇಕು. ಅದರ ಹಾಗೆ ಸಾಮರಸ್ಯದಲ್ಲಿ ನಾವು ಬದುಕಬೇಕು. ಸಮಾಜವು ಕೊಳದಂತೆ! ಮೀನು, ಕೆಪ್ಪೆ, ಹಾವು, ಹರಿಣ, ಹೂವು, ಹಸಿರು ಎಲ್ಲವೂ ಇರುತ್ತವೆ ಅದರೊಡನೆ ನಾವು ಒಂದಾಗಿ ಬದುಕಬೇಕು. ಹಾವು ಹರಿದರೆ ನೀರು ವಿಷವಾಗುವುದೇ? ಹಸಿರು ಹರಡಿಕೊಂಡರೆ ನೀರು ಹಸಿರಾಗುವುದೇ? ಮೀನುಗಳು ಓಡಾಡಿದರೆ ನೀರು ಒಡೆದು ಹೋಗುವುದೇ? ಎಲ್ಲವನ್ನೂ ತನ್ನೊಡನೆ ಸೇರಿಸಿ ಬದುಕುತ್ತದೆ. ನಾವು ಕೂಡ ಯಾರನ್ನೂ ದ್ವೇಷದಿದಂದ ನೋಡದೆ ಪ್ರೀತಿಯಿಂದ ಬದುಕಬೇಕು. ದುಷ್ಟರು, ಕಳ್ಳರು ಇವರೆಲ್ಲ ಬಂದಾಗ ಆದಷ್ಟು ಅವರಿಂದ ದೂರ ಸರಿಯಬೇಕು. ಯಾರೇ ನಮ್ಮೆದುರು ಬಂದು ಹೋದರೂ ನಮ್ಮ ಗುಣ ಬದಲಾಗಬಾರದು, ನಿರ್ಮಲ ನೀರಿನ ಹಾಗೆ ಮನಸ್ಸು ಯಾವಾಗಲೂ ಸ್ವಚ್ಛವಾಗಿರಬೇಕು. ಕಷ್ಟ ಎನಿಸುತ್ತದೆ, ಇದು ಇವತ್ತಿನ ಸಮಾಜದಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತದೆ ಆದರೆ ಒಮ್ಮೆ ಬದುಕಿ ನೋಡಬೇಕು. ಕೆಲವೊಂದು ಅನುಭವಕ್ಕೆ ಮಾತ್ರ ದೊರಕಬಲ್ಲ ಸತ್ಯ. ಹೇಳುವುದರಿಂದ ಕೇಳುವುದರಿಂದ ಬರಲು ಸಾಧ್ಯವಿಲ್ಲ.

ನೀರಿಗೆ ತಾನು, ತನ್ನದು ಎನ್ನುವ ಅಹಂ ಇಲ್ಲ:
ನೆಮ್ಮದಿಯಿಂದ ಬದುಕಲು ನಾವು ಮೊದಲು ನಮ್ಮಲ್ಲಿಯ ಅಹಂ‌ ಬಿಡಬೇಕು.  ನಾನೇ ದೊಡ್ಡವನು, ನನಗೇ ಎಲ್ಲವೂ ಗೊತ್ತು, ಇನ್ನೊಬ್ಬರಿಂದ ಕಲಿಯುವುದು ಏನಿದೆ? ಇವೆಲ್ಲ ನೆಮ್ಮದಿಯ ಬದುಕಿಗೆ ಬೇಡವಾದದ್ದು. ಇಂತಹ ಮಾನಸಿಕ ಪ್ರವೃತ್ತಿ ಬೆಳೆಯುತ್ತಾ ಹೋದಂತೆ ನಮ್ಮೊಳಗೆ ಒಂದುತರಹದ ಅಸಮಾಧಾನ ಹೆಚ್ಚುತ್ತಾ ಹೋಗುತ್ತದೆ. ಗರ್ವವು ವಿನಾಕಾರಣ ನಮ್ಮಲ್ಲಿಯ ಮಾನಸಿಕ ತೂಕವನ್ನು ಹೆಚ್ಚಿಸುತ್ತದೆ. ಆಕಾಶದೆತ್ತರಕ್ಕೆ ಬೆಳೆಯಲು ಇಂತಹ ತೂಕ ಕಡಿಮೆ ಇದ್ದಷ್ಟು ಒಳ್ಳೆಯದು. ಅದಕ್ಕೆ ನೀರಿನ ಹಾಗೆ ನಮ್ಮಲ್ಲಿ ಒಂದು ರೀತಿಯ ತೆರೆದ ಮನಸ್ಸು ಅರಳಬೇಕು. ಕರಾಟೆ ಜಗತ್ತಿನ ದಂತಕಥೆಯಾಗಿರುವ ಬ್ರೂಸ್‌ ಲೀ ಏನು ಹೇಳುತ್ತಾರೆ ಗೊತ್ತಾ? “Empty your mind, be formless. Shapeless, like water. If you put water into a cup, it becomes the cup. You put water into a bottle and it becomes the bottle. You put it in a teapot, it becomes the teapot. Now, water can flow or it can crash. Be water, my friend.” ನೀರು ಎಂದಿಗೂ ಒಂದೇ ರೂಪದಲ್ಲಿ ಇರುವುದಿಲ್ಲ. ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಕುದಿಸಿದರೆ ಆವಿಯಾಗುತ್ತದೆ, ತಣಿಸಿದರೆ ಮಂಜಾಗುತ್ತದೆ, ಸಾಮಾನ್ಯವಾಗಿ ದ್ರವ ರೂಪದಲ್ಲಿರುತ್ತದೆ. ನಾವೂ ಕೂಡ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರಬೇಕು. ನಾನು ಇವತ್ತು ಇದ್ದ ಹಾಗೆ ನಾಳೆಯೂ ಇರುತ್ತೇನೆ ಎಂದರೆ ಯಾರೂ ಕೇಳುವುದಿಲ್ಲ. ಇಂದು ಸಮಾಜದಲ್ಲಿ ನಾವು ಹಲವಾರು ಮುಖವಾಡವನ್ನು ಹಾಕಬೇಕಾಗುತ್ತದೆ. ಮನೆಯಲ್ಲಿ ತಂದೆ, ತಾಯಿ, ಗಂಡ, ಹೆಂಡತಿ ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ ಯಾವುದೋ ಒಂದು ಪಾತ್ರವಿರುತ್ತದೆ, ಆಫೀಸ್ ನಲ್ಲಿ ಇನ್ನೊಂದು ಪಾತ್ರ, ಗೆಳೆಯರ ನಡುವೆ ಮತ್ತೊಂದು ಪಾತ್ರ ಹೀಗೆ ತಾಸಿಗೊಮ್ಮೆ ಬದಲಾಗುತ್ತದೆ. ಪರಿಸ್ಥಿತಿ ಹೇಗೆ ಇರಲಿ ನಾನು ಮಾತ್ರ ಬದಲಾಗಲಾರೆ, ಎಲ್ಲ ಕಡೆ ನನಗೆ ಬೇಕಾದ ಹಾಗೆ ಇರುವೆ  ಎನ್ನುವ ಮಂಡು ವಾದವೇ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ನಾವು ಯಾರಿಗೆ ಬಗ್ಗದೇ ಹೋದರೂ ಕಾಲಕ್ಕೆ ಬಗ್ಗಲೇ‌ ಬೇಕು. ಯಾವುದೇ ಪರಿಸ್ಥಿತಿ ಕೆಟ್ಟದಿರುವುದಿಲ್ಲ. ಒಳ್ಳೆಯ ಹಾಗು ಕೆಟ್ಟ ಸಮಯ ಅಂತ ಇರುವುದಿಲ್ಲ. ನಾವು ಸಮಯಕ್ಕೆ ಸ್ಪಂದಿಸಿದ ಹಾಗಿರುತ್ತದೆ. ಅದೃಷ್ಟ ಯಾವಾಗಲೂ ನಮ್ಮ ಹಿಂದೆಯೇ ಇರುತ್ತದೆ. ನಾವು ಅದು ಯಾವ ರೂಪದಲ್ಲಿ ಬಂದಿದೆ ಅನ್ನುವುದನ್ನು ಗ್ರಹಿಸಿ ನಮ್ಮನ್ನು ನಾವು ಬದಲಾಯಿಸಿಕೊಂಡರೆ ಅದೃಷ್ಟ ನಮ್ಮದಾಗುತ್ತದೆ. ನಮ್ಮಲ್ಲಿ ಆಗುವ ತಪ್ಪು ಅಂದರೆ ನಾವು ಬೇಗನೆ ಒಂದು ಘನ ರೂಪ ತಾಳಿಬಿಡುತ್ತೇವೆ. ನಂತರ ಬದಲಾಗಲು ನಾವು ತಯಾರಿರುವುದಿಲ್ಲ. ಆದರೆ ಇವತ್ತು ಜಗತ್ತಿನ ಡೈನಾಮಿಕ್ಸ್ ಬದಲಾಗಿದೆ. ಕಾಲೇಜಿನಲ್ಲಿ ಹೆಚ್ಚು ಅಂಕ ಪಡೆದ ವ್ಯಕ್ತಿ ಕೆಲಸದಲ್ಲೂ ಯಶಸ್ಸು ಪಡೆಯುತ್ತಾನೆ ಎನ್ನುವುದು ಸತ್ಯವಲ್ಲ. ಕಾಲೇಜಿನ ಬದುಕೇ ಬೇರೆ ಕಂಪನಿಯ ಜೀವನವೇ ಬೇರೆ. ಸರ್ಕಾರಿ ನೌಕರಿ ಬೇರೆ, ಖಾಸಗಿ ಕಂಪನಿಯ ರೀತಿ ಬೇರೆ, ವ್ಯಾಪಾರ ಮಾಡುವ ಕ್ರಮವೇ ಬೇರೆ. ನಾವು ಎಲ್ಲಿದ್ದೇವೆ ಎನ್ನುವುದರ ಮೂಲಕ ನಾವು ನಮ್ಮ ನಡವಳಿಕೆಯನ್ನು ರೂಪಾಂತರಗೊಳಿಸಿಕೊಳ್ಳಬೇಕು. ಹಾಗೆಯೇ ಯಾರೊಡನೆ ವ್ಯವಹಾರ ನಡೆಸುತ್ತೇವೆ ಎನ್ನುವುದು ಕೂಡ ಅಷ್ಟೇ ಮುಖ್ಯ. ನಮ್ಮ ವೃತ್ತಿ, ನಮ್ಮ ವ್ಯವಹಾರ, ನಮ್ಮ ಆಸಕ್ತಿ, ನಮ್ಮ ಜವಾಬ್ದಾರಿ ಇವೆಲ್ಲವೂ ಒಂದೇ ತರಹದಲ್ಲಿ ಇರುವುದಿಲ್ಲ. ನೀರಿನ ಹಾಗೆ ಪರಿಸರಕ್ಕೆ ಹೊಂದಿಕೊಂಡು ಬದಲಾಗಿ ಬದುಕುವುದನ್ನು ಕಲಿತರೆ ನಮ್ಮ ಸುತ್ತಲಿನ ಒತ್ತಡ ಕಡಿಮೆಯಾಗುತ್ತದೆ. ಪ್ರತಿಯೊಂದು ಪಾತ್ರದಲ್ಲಿ ಕಂಡ ಗೆಲುವನ್ನು ಸಂಭ್ರಮಿಸುತ್ತಾ ಹೋದರೆ ಸಾರ್ಥಕತೆಯು ನಮ್ಮನ್ನು ಆವರಿಸಿಕೊಂಡು ಸಂತೃಪ್ತಿ ಸಿಗುತ್ತದೆ. ಬದುಕಿನಲ್ಲಿ ಒತ್ತಡ ಹೆಚ್ಚಾದಾಗ, ಹತಾಶೆ ಮೂಡಿದಾಗ ಇನ್ನೇನು ಮಾಡಬೇಕು ಎನ್ನುವುದು ಗೊತ್ತಾಗದೇ ಹೋದಾಗ ನೀರನ್ನು ನೆನೆಸಿಕೊಳ್ಳಬೇಕು. ನೀರಿನ ಹಾಗೆ ಬದುಕಬೇಕು.


– ವಿಕ್ರಮ ಜೋಷಿ

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!