ಅಂಕಣ ಸ್ಪ್ಯಾನಿಷ್ ಗಾದೆಗಳು

ಮಾತಿಗಿಂತ ಕೃತಿ ಮೇಲು!

ಸ್ಪಾನಿಷರಲ್ಲಿ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ ‘ ಎನ್ನುವ ಮಾತಿದ. ಅದನ್ನು ಸ್ಪಾನಿಷ್’ನಲ್ಲಿ El movimiento se demuestra andando. (ಎಲ್ ಮೊವಿಮಿಯೆಂತೊ ಸೆ ಡೆಮೊಸ್ತ್ರ ಅಂದಾಂದೋ ) ಎನ್ನುತ್ತಾರೆ. ಯಾವುದಾದರೂ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಬಗ್ಗೆ ಬಹಳ ಹೊತ್ತು ಚರ್ಚೆ ಆಗುತ್ತಲೇ ಇದ್ದು; ಮತ್ತು ಯಾವುದೇ ರೀತಿಯ ನಿರ್ಧಾರಕ್ಕೆ ಬರಲು ಆಗದಿದ್ದಾಗ ಸಾಮಾನ್ಯವಾಗಿ ಈ ಮಾತನ್ನು ಬಳಸುತ್ತಾರೆ. ಅರ್ಥ ಇಷ್ಟೇ ನೀನು ಸರಿ ನಾನು ಸರಿ ಅನ್ನುವುದು ಬೇಡ ಮಾಡಿದ ಕೆಲಸವೇ ಮಾತಾಡಲಿ ಎನ್ನುವುದು. ಅಂದರೆ ಮಾಡಿದ ಕೆಲಸ ಯಶಸ್ವಿಯಾಗಿ ಅದನ್ನ ಜನರು ಒಪ್ಪಿದರೆ ಸರಿ-ತಪ್ಪುಗಳ ಗೋಜಿಗೆ ಆಸ್ಪದವಿಲ್ಲ ಎನ್ನುವುದು ಮತ್ತು ಅದನ್ನ ಎಲ್ಲರೂ ಒಪ್ಪಲೇಬೇಕು ಎನ್ನುವುದು ಸಾರಾಂಶ.

ಹಾಗಾದರೆ ‘ಚಲನೆ ಸರಿಯಾಗಿದೆ ಎನ್ನುವುದು ನಡಿಗೆಯಿಂದ ತಿಳಿಯುತ್ತದೆ’ ಎನ್ನುವ ಮಾತೇಕೆ ಬಂತು? ಮೂಲತಃ ಇದು ಗ್ರೀಸ್ ದೇಶದಿಂದ ಬಂದ ಗಾದೆ. ಇದನ್ನು ಎಲ್ಲಾ ಲ್ಯಾಟಿನ್ ಭಾಷಿಕರು ಯಥಾವತ್ತಾಗಿ ಅಳವಡಿಸಿಕೊಂಡಿರುವುದು ಸಾದೃಶ. ಇದರ ಹಿಂದೆ ಒಂದು ಸಣ್ಣ ಕಥೆಯಿದೆ.  ಅದೇನೆಂದರೆ ಗ್ರೀಕ್ ತತ್ತ್ವಜ್ಞಾನಿ ಮತ್ತು ವೃತ್ತಿಯಿಂದ ವೈದ್ಯನೂ ಆಗಿದ್ದ  Zenón de Elea ಎನ್ನುವ ವ್ಯಕ್ತಿ, ತನ್ನ ಬಳಿ ಕಾಲು ನೋವಿನಿಂದ ಬಳಲುತ್ತಿದ್ದ ಬಂದ ರೋಗಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಗುಣ ಪಡಿಸುತ್ತಾನೆ. ಆದರೆ ಅವನ ಸಮಕಾಲೀನ ವೈದ್ಯರು ಚಿಕಿತ್ಸೆಯ ಬಗ್ಗೆ ಚಕಾರ ಎತ್ತುತ್ತಾರೆ. ಎಷ್ಟೇ ಹೇಳಿದರೂ ಅವರು ಒಪ್ಪುವ ಮನಸ್ಥಿತಿ ತೋರದಿದ್ದಾಗ  ಬೇಸತ್ತು Zenón ಆತನ ಚಲನೆ ಸರಿಯಿದೆಯೇ ಇಲ್ಲವೇ ಎನ್ನುವುದನ್ನು ಆತನ ನಡಿಗೆ ತೋರಿಸುತ್ತದೆಯೇ ಹೊರತು ನಮ್ಮ ಚರ್ಚೆಯಲ್ಲ ಎನ್ನುತ್ತಾನೆ. ಅದು ಎಂತಹ ಪರಿಣಾಮವುಳ್ಳ ಮಾತಾಯಿತು ಎಂದರೆ ಸಾವಿರಾರು ವರ್ಷಗಳ ನಂತರವೂ ನಿಲ್ಲದ ಚರ್ಚೆಗೆ ಕೊನೆ ಹಾಡಲು ಬಳಸುವ ಆಡುಮಾತಾಯಿತು. ಶಸ್ತ್ರ ಚಿಕಿತ್ಸೆ ಸರಿಯಾಗಿಲ್ಲ ಎಂದು ಯಾರು ಎಷ್ಟೇ ಬೊಬ್ಬೆ ಹೊಡೆಯಲಿ ಬಿಡು, ರೋಗಿ ಎದ್ದು ಸರಾಗವಾಗಿ ನಡೆದಾಡಿದರೆ ಅಲ್ಲಿಗೆ ಶಸ್ತ್ರಚಿಕಿತ್ಸೆ ಫಲಕಾರಿ ಆಗಿದೆ ಅಲ್ಲವೇ?

ನಮ್ಮಲ್ಲಿ ಕೂಡ ನಾವು ಎಷ್ಟೇ ಮಾತಾಡಲಿ ಅದಕ್ಕಿಂತ ನಮ್ಮ ಕೆಲಸ ಉತ್ಕೃಷ್ಟವಾಗಿರಬೇಕು. ಆಗ ಯಾರು ಕೂಡ ನಮ್ಮೆಡೆಗೆ ಬೆರಳು ಮಾಡಿ ತೋರಿಸುವ ಧೈರ್ಯ ಮಾಡಲಾರರು ಎನ್ನುವ ಅರ್ಥ ಕೊಡುವ ಮಾತಿಗಿಂತ ಕೃತಿ ಮೇಲು ಎನ್ನುವ ಗಾದೆ ಇದೆ. ನಮ್ಮ ದಾರ್ಶನಿಕರು ಗ್ರೀಕ್ ದಾರ್ಶನಿಕರು ಈ ಪದವನ್ನು ಉಚ್ಚರಿಸುವ ಬಹಳ ಮುಂಚೆಯೇ ಇಂತಹ ಅಣಿಮುತ್ತುಗಳನ್ನು ಹೇಳಿದ್ದರು ಎನ್ನುವುದು ನಮ್ಮ ಸಂಸ್ಕೃತಿ ಮತ್ತು ನಾಗರೀಕತೆ ಎಷ್ಟು ಹಳೆಯದು ಮತ್ತು ಎಷ್ಟು ಬೇಗ ವಿಕಸನಗೊಂಡಿತ್ತು ಎನ್ನುವುದರ ಅನಾವರಣ ಮಾಡುತ್ತದೆ. ನಮ್ಮ ಬಗ್ಗೆ ನಾವು ಸ್ವ ತುತ್ತೂರಿ ಊದುವ ಅವಶ್ಯಕತೆ ಕೂಡ ಇಲ್ಲ. ನಮ್ಮ ಪರವಾಗಿ ನಮ್ಮ ಕೆಲಸ ಮಾತನಾಡಬೇಕು ಎನ್ನುವ ಉದಾತ್ತ ನೀತಿ ಕೂಡ ಈ ಗಾದೆ ಮಾತಿನಲ್ಲಿ ಅಡಗಿದೆ. ಇದನ್ನು ಹಿಂದಿಗಿಂತ ಇಂದು ಹೆಚ್ಚು ಅಳವಡಿಸಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಇರಲಿ. 

 ಇನ್ನು ಇಂಗ್ಲಿಷ್ ಭಾಷಿಕರು ಕೂಡ ಈ ವಿಷಯದಲ್ಲಿ ನಮಗಿಂತ ಭಿನ್ನ ನಿಲುವೇನೂ ಹೊಂದಿಲ್ಲ. ಅವರು ಹೇಳುತ್ತಾರೆ Actions speak louder than words / voice. ಇದರಲ್ಲೂ ನಮ್ಮ ಮಾತಿಗಿಂತ ಕೃತಿ ಲೇಸು ಎನ್ನುವ ಗಾದೆಮಾತಿನ ಘಮಲು ನಿಮ್ಮ ಮೂಗಿಗೆ ಅಡರಿದರೆ ಅದು ಸರಿಯಾಗಿದೆ.

ಮೂಲತಃ ಮನುಷ್ಯನೆಂಬುವ ಪ್ರಾಣಿ ಒಂದೇ! ನಗು, ಅಳು, ಸೀನು, ಹಸಿವು; ತನ್ನವರ ಕುರಿತು ಅಕ್ಕರೆ, ದ್ವೇಷ, ಭಯ, ಹೀಗೆ ನಮ್ಮನ್ನು ಬೆಸೆಯುವ ಗುಣಗಳ ಪಟ್ಟಿ ನಮ್ಮನ್ನು ಒಡೆಯುವ ಪಟ್ಟಿಗಿಂತ ಬಹಳ ದೊಡ್ಡದು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆಯಷ್ಟೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 

El movimiento : ಚಲನೆ ಎನ್ನುವುದು ಅರ್ಥ. ಎಲ್ ಮೊವಿಮಿಯೆಂತೊ ಎನ್ನುವುದು ಉಚ್ಚಾರಣೆ.

se demuestra :  ತೋರಿಸು, ಸಾಬೀತು ಪಡಿಸು ಎನ್ನುವ ಅರ್ಥ ಕೊಡುತ್ತದೆ . ಸೆ ಡೆಮೊಸ್ತ್ರ  ಎನ್ನುವುದು ಉಚ್ಚಾರಣೆ.

andando  : ನಡೆ , ನಡಿಗೆ ಅಥವಾ ನಡೆಯುವುದು ಎನ್ನುವ ಅರ್ಥ ಕೊಡುತ್ತದೆ. ಅಂದಾಂದೋ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!