ಅಂಕಣ ಸ್ಪ್ಯಾನಿಷ್ ಗಾದೆಗಳು

ಮನೆ ಗೆದ್ದು ಮಾರು ಗೆಲ್ಲು !

ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ?  ಅಲ್ಲವೇ? ಆದರೇನು ಸಮಾಜದಲ್ಲಿ ಇಂತಹ ವ್ಯಕ್ತಿಗಳ ಸಂಖ್ಯೆ ಬಹಳವಿದೆ. ಇದು ಇಂದಿನ ಕತೆ ಎಂದು ಬೇಸರಿಸುವ ಅವಶ್ಯಕತೆಯಿಲ್ಲ. ಏಕೆಂದರೆ ನಮ್ಮ ಹಿರಿಯರು ‘ಮನೆ ಗೆದ್ದು ಮಾರು ಗೆಲ್ಲು’ ಎನ್ನುವ ಒಂದು ನುಡಿಯನ್ನು ನಮಗೆ ಹೇಳಿದ್ದಾರೆ. ಅಂದರೆ ಅರ್ಥ ಅಂದಿನ ಸಮಾಜದಲ್ಲೂ ಇಂತಹ ಭೂಪರ ಸಂಖ್ಯೆ ಬಹಳಷ್ಟಿದ್ದಿರಲೇಬೇಕು! ಈ ಆಡು ಮಾತಿನ ಅರ್ಥ: ಸಮಾಜದ ತಪ್ಪನ್ನು ತಿದ್ದುವ ಮೊದಲು ನಿನ್ನ ತಪ್ಪ ತಿದ್ದಿಕೋ ಎನ್ನುವುದೇ ಆಗಿದೆ. ಇದನ್ನು ನಮ್ಮ ದಾಸರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮನಿಮ್ಮ ಮನವ ಸಂತೈಸಿಕೊಳ್ಳಿ’ ಎಂದರು. ಜಗತ್ತಿನ ಬಡತನ ಹೋಗಲಾಡಿಸಲು ಅಥವಾ ಜಗತ್ತಿನ ಅಜ್ಞಾನ ಹೋಗಲಾಡಿಸಲು ಹೊರಟವನು ಮೊದಲು ತಾನು ಅದರಿಂದ ಮುಕ್ತನಾಗಿರಬೇಕು ಎನ್ನುವುದು ಉದ್ದೇಶ. ಈ ಆಶಯವನ್ನು ಮೀರಿದ ವ್ಯಕ್ತಿಯನ್ನು ‘ಮನೆಗೆ ಮಾರಿ ಊರಿಗೆ ಉಪಕಾರಿ’ ಎಂದು ಹೀಗೆಳೆಯುವುದು ನಮ್ಮ ಸಮಾಜದಲ್ಲಿ ಸಾಮಾನ್ಯ.

ನಮ್ಮಲಿರುವ ಸಾಮ್ಯತೆ ನೋಡಿ ಸ್ಪೇನ್’ನಲ್ಲಿ ಕೂಡ ನಮ್ಮ ಆಡುಮಾತಿನ ಭಾವಾರ್ಥವನ್ನು ನೀಡುವ  ‘la caridad bien entendida empieza por uno mismo.’ (ಲ ಕಾರಿದಾದ್ ಬಿಯನ್ ಇಂತೆಂದಿದ ಎಂಪಿಯೇಸ ಪೋರ್ ಉನೋ ಮಿಸ್ಮೋ ) ಮಾತಿದೆ. ‘ದಾನ ಧರ್ಮದ ಮಾಡುವುದಾದರೆ ಅದು ನಿನ್ನಿಂದಲೇ ಶುರುವಾಗಲಿ’ ಎನ್ನುವ ಅರ್ಥ ನೀಡುತ್ತದೆ. ಪಾಶ್ಚಾತ್ಯರಲ್ಲಿ ಸ್ವಸುಖಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಇಲ್ಲಿ ದಾನ ಮಾಡುವುದಕ್ಕೆ ಮುಂಚೆ ನೀನು ನಿನ್ನ ಎಲ್ಲಾ ಬೇಕುಗಳ ಪೂರೈಸಿಕೊ ಎನ್ನುವ ಅರ್ಥದಲ್ಲಿ ಹೇಳಲಾಗಿದೆ. ಮನುಷ್ಯ ತಾನು ಖುಷಿಯಾಗಿರದೆ ಮತ್ತೊಬ್ಬರ ಹೇಗೆ ತಾನೇ ಖುಷಿಯಾಗಿಡಲು ಸಾಧ್ಯ? ನಿನ್ನಲ್ಲಿ ತೃಪ್ತಿಯಿಲ್ಲದೆ ಬೇರೆಯವರಿಗೆ ದಾನ ಮಾಡಲು ಹೇಗೆ ಸಾಧ್ಯ? ಹೀಗಾಗಿ ಮೊದಲು ನೀನು ಪೂರ್ಣ ತೃಪ್ತನಾಗು ಉಳಿದದ್ದು ನಂತರದ್ದು ಎನ್ನುವುದು ಈ ಆಡು ಮಾತುಗಳ ಸಾರಾಂಶ.

ಇನ್ನು ಇಂಗ್ಲಿಷ್ ಭಾಷಿಕರು ಕೂಡ ನಮಗಿಂತ ಈ ವಿಷಯದಲ್ಲೂ ಭಿನ್ನವಾಗೇನು ಯೋಚಿಸುವುದಿಲ್ಲ ಅವರು ಹೇಳುತ್ತಾರೆ charity begins at home ಎಂದು. ನಿನ್ನ ಕುಟುಂಬದವರ ಹೊಟ್ಟೆ ಮೊದಲು ತುಂಬಿಸು ಅವರನ್ನು ಇನ್ನಿಲ್ಲದಂತೆ ಪ್ರೀತಿಸು ಅವರ ಸಕಲ ಕಷ್ಟದಲ್ಲಿ ಭಾಗಿಯಾಗು ನಂತರವೂ ಶಕ್ತಿಯಿದೆ ಎನಿಸಿದರೆ ದಾನ ಧರ್ಮ ಮಾಡು ಎನ್ನುವುದು ಅರ್ಥ.

ಇಲ್ಲಿ ಬಾಹ್ಯವಾಗಿ ದಾನ ಧರ್ಮದ ಹೇಳಿಕೆ ಜೊತೆಗೆ ಆಂತರಿಕವಾಗಿ ಕೂಡ ನಿನ್ನ ತಪ್ಪುಗಳ ಸರಿಪಡಿಸಿಕೊಂಡು ನಂತರ ಬೇರೆಯವರ ತಪ್ಪಿನ ಬಗ್ಗೆ ಮಾತನಾಡು ಎನ್ನುವ ಎರಡು ಸಂದೇಶವನ್ನು ಈ ಆಡು ಮಾತುಗಳು ನೀಡಿವೆ. ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದು ನಮ್ಮ ಮೇಲಿದೆ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 

‘la caridad   : ಚಾರಿಟಿ , ದಾನ ಎನ್ನುವ ಅರ್ಥ ಕೊಡುತ್ತದೆ. ಕಾರಿದಾದ್ ಎನ್ನುವುದು ಉಚ್ಚಾರಣೆ.

bien: ಒಳ್ಳೆಯ, ಗುಡ್ ಎನ್ನುವ ಅರ್ಥ. ಇಲ್ಲಿನ ಸಂಧರ್ಭದಲ್ಲಿ ಬೆಸ್ಟ್ ಎನ್ನುವ ಅರ್ಥ ಕೊಡುತ್ತದೆ. ಬಿಯನ್ ಎನ್ನುವುದು ಉಚ್ಚಾರಣೆ

entendida: ಅಂಡರ್ಸ್ಟುಡ್, ಅರ್ಥ ಮಾಡಿಕೊಳ್ಳುವುದು ಎನ್ನುವ ಅರ್ಥ.  ಇಂತೆಂದಿದ ಎನ್ನುವುದು ಉಚ್ಚಾರಣೆ.

empieza: ಶುರು , ಶುರುಮಾಡು ಎನ್ನುವ ಅರ್ಥ. ಎಂಪಿಯೇಸ ಎನ್ನುವುದು ಉಚ್ಚಾರಣೆ.

por uno mismo. : ಬೈ ಒನ್ ಸೆಲ್ಫ್. ಅವರಿಂದಲೇ, ಯಾರು ಶುರು ಮಾಡುತ್ತಾರೋ ಅವರಿಂದಲೇ ಎನ್ನುವ ಅರ್ಥ. ಪೋರ್ ಉನೋ ಮಿಸ್ಮೋ ಎನ್ನುವುದು ಉಚ್ಚಾರಣೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!