ಅಂಕಣ

ಮುಂದಿನ ಚುನಾವಣೆ ನಂತರ  ಕರ್ನಾಟಕಕ್ಕೆ ಅಚ್ಛೆದಿನ್ ಬರಲಿ

2018ರಲ್ಲಿ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ (WHO) ನೀಡಿರುವ ಸ್ಥಾನಗಳ ಪ್ರಕಾರ, ಸ್ವಿಟ್ಜರ್’ಲ್ಯಾಂಡ್  ಮೊದಲನೇ ಸ್ಥಾನ ಗಳಿಸಿದೆ. ಪ್ರಪಂಚದಲ್ಲಿಯೇ, ಅತೀ ಹೆಚ್ಚು ತಲಾ ಆದಾಯ  ಹೊಂದಿರುವ   ಅಮೆರಿಕ,  ೩೦ನೇ  ಸ್ಥಾನದಲ್ಲಿ ಇದ್ದರೆ,  ಭಾರತದ ಸ್ಥಾನ  ೧೫೪.

ಸ್ವಿಟ್ಜರ್’ಲ್ಯಾಂಡ್ ಪ್ರಥಮ ಸ್ಥಾನ ಗಳಿಸಿದ್ದರೂ, ಅಲ್ಲಿ ಚಿಕಿತ್ಸೆ ಉಚಿತವಲ್ಲ. ಪ್ರತಿಯೊಬ್ಬ ದೇಶದ ಪ್ರಜೆಯೂ, ಪ್ರಾಥಮಿಕ ಹಂತದ  ಆರೋಗ್ಯ ವಿಮೆ ಮಾಡಿಸುವುದು ಅಲ್ಲಿ ಕಡ್ಡಾಯವಾಗಿದೆ  (ವಾಹನ ವಿಮೆ ಕಡ್ಡಾಯ ಮಾಡಿದಂತೆ). ಕಡಿಮೆ ಆದಾಯ ಹೊಂದಿರುವರಿಗೆ, ಸಬ್ಸಿಡಿ ಕೊಟ್ಟು, ವಿಮೆಯ ಕಂತು  ಅವರ ಆದಾಯದ  ೧೦% ಮೀರದ ಹಾಗೆ, ಸರಕಾರ ನೋಡಿಕೊಳ್ಳುತ್ತದೆ. ವಿಮಾ  ಕಂಪನಿಯವರು  ಪ್ರಾಥಮಿಕ ವಿಮೆಗೆ  ಯಾವುದೇ ಪೂರ್ವ ಷರತ್ತು ವಿಧಿಸುವಂತಿಲ್ಲ. ಸ್ವಿಟ್ಜರ್’ಲ್ಯಾಂಡ್ನ ಪ್ರಜೆಗೆ, ವಿಮಾ ಕಂಪನಿಯವರು ಪ್ರತಿ ಬಾರಿ ಚಿಕಿತ್ಸೆ ಅಗತ್ಯ ಬಿದ್ದಾಗ, ವೆಚ್ಚದ ಸಿಂಹಭಾಗವನ್ನು ಪಾವತಿ ಮಾಡುತ್ತಾರೆ.  ಮಿಕ್ಕಿದ ಸಣ್ಣ  ಮೊತ್ತವನ್ನು ರೋಗಿಯು ಭರಿಸಬೇಕು. ಇದರಿಂದ ವಿಮೆಯ ಅತಿಯಾದ ಉಪಯೋಗ ಅಥವಾ  ದುರುಪಯೋಗ ಕಡಿಮೆ ಮಾಡಬಹುದು.  ಪ್ರೈವೇಟ್ ವಾರ್ಡುಗಳಲ್ಲಿ ಚಿಕಿತ್ಸೆ ಬಯಸುವವರು, ಸ್ವಲ್ಪ ಹೆಚ್ಚಿನ ಹಣ ಕೊಟ್ಟು, ಮುಂದಿನ ಹಂತದ ವಿಮೆ ಮಾಡಿಸುವ ಅವಕಾಶ ಕಲ್ಪಿಸಲಾಗಿದೆ.

ಸ್ವಿಟ್ಜರ್’ಲ್ಯಾಂಡ್ನಲ್ಲಿ ಮೂರೂ ಬಗೆಯ ಆಸ್ಪತ್ರೆಗಳಿವೆ. ಅವುಗಳೆಂದರೆ ಸಂಪೂರ್ಣ ಸರ್ಕಾರೀ ಆಸ್ಪತ್ರೆಗಳು, ಅರೆ ಸರ್ಕಾರೀ-ಅರೆ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು. ಸ್ವಿಟ್ಜರ್’ಲ್ಯಾಂಡ್ನ ಪ್ರಜೆಗಳು ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಸ್ವಿಟ್ಜರ್’ಲ್ಯಾಂಡ್ನ ಸರ್ಕಾರದ ನಿಯಮಾವಳಿಗಳು ಪ್ರಜೆಗಳ ಮತ್ತು ಆಸ್ಪತ್ರೆಗಳ ಜವಾಬ್ದಾರಿ ಮಾತ್ರವಲ್ಲದೆ, ವಿಮಾ ಕಂಪನಿಗಳ ಜವಾಬ್ದಾರಿ  ಹೆಚ್ಚಿಸುವ ನಿಟ್ಟಿನಲ್ಲಿ ಇರುವುದರಿಂದ, ಆರೋಗ್ಯ ವೆಚ್ಚವನ್ನು ನಿಯಂತ್ರಗೊಳಿಸುವಲ್ಲಿ  ಮುಖ್ಯ ಪಾತ್ರ ವಹಿಸುತ್ತಿದೆ. ವಿಮಾ ಕಂಪನಿಗಳು ಪ್ರಾಥಮಿಕ ಹಂತದ ವಿಮೆಯಲ್ಲಿ ಲಾಭಗಳಿಸುವಂತಿಲ್ಲ. ಆಸ್ಪತ್ರೆಗಳ ಬೆಲೆಗಳ ಮೇಲೂ ಸ್ವಿಟ್ಜರ್’ಲ್ಯಾಂಡ್ ಸರಕಾರ ನಿಯಂತ್ರಣ ಹೊಂದಿದೆ. ಇವೆಲ್ಲಾ ಕಾರಣಗಳಿಂದ ಜಿಡಿಪಿಯ ೧೧ % ನ್ನು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುವ ಸ್ವಿಟ್ಜರ್’ಲ್ಯಾಂಡ್, ೧೭% ಖರ್ಚುಮಾಡುವ ಅಮೆರಿಕಾಕ್ಕಿಂತ ಮುಂದಿದೆ. ಇದರ ಅರ್ಥ ಸ್ವಿಟ್ಜರ್’ಲ್ಯಾಂಡ್ ಹಣವನ್ನು, ಅಮೆರಿಕಾಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಖರ್ಚು ಮಾಡುತ್ತಿದೆ. ಕಡಿಮೆ ಹಣಕ್ಕೆ ಹೆಚ್ಚಿನ ಪ್ರಯೋಜನ ಸಿಗುವಂತೆ ಆರೋಗ್ಯ ಕ್ಷೇತ್ರವನ್ನು   ರೂಪಿಸಿದೆ.

ಕೆಲವು ವಾರಗಳ ಹಿಂದೆ, ವಿಶ್ವವಾಣಿಯಲ್ಲಿ, ಡಾ. ಕಿರಣ್ ಸೂರ್ಯರವರು ಭಾರತದ ಪರ್ಯಾಯ ಆರೋಗ್ಯ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಲೇಖನ ಬರೆದಿದ್ದರು. ಅವರು ಭಾರತೀಯ ರೈಲುಗಳನ್ನು ಉದಾಹರಣೆ ಕೊಟ್ಟಿದ್ದರು. ಒಂದೇ ರೈಲಿನಲ್ಲಿ  ಮೊದಲ ದರ್ಜೆ, ವಾತಾನುಕೂಲಿ ದರ್ಜೆ, ಸಾಮಾನ್ಯ ದರ್ಜೆ ಎಂಬ ವಿವಿಧ ಸ್ತರಗಳು  ಇರುವಂತೆ, ನಮ್ಮ ಸರಕಾರಿ ಆಸ್ಪತ್ರೆಗಳು ಎಲ್ಲಾ ಸ್ತರಗಳನ್ನು ಹೊಂದಿರಬೇಕು. ಪ್ರತಿಯೊಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಸಾಮಾನ್ಯ ಹಾಸಿಗೆಗಳು, ಅರೆ ಪ್ರೈವೇಟ್ ವಾರ್ಡುಗಳು, ಪ್ರೈವೇಟ್ ವಾರ್ಡುಗಳು ಮತ್ತು ಐಷರಾಮಿ ಕೋಣೆಗಳು ಇರುವಂತೆ ನಿರ್ಮಿಸಬೇಕು. ಸಾಮಾನ್ಯ ವಾರ್ಡುಗಳಲಿ ಚಿಕಿತ್ಸೆ ಪಡೆಯುವರಿಗೆ ಅತಿಕಡಿಮೆ ದರದಲ್ಲಿ  ಮತ್ತು ಇತರ ವರ್ಗದಲ್ಲಿ ಚಿಕಿತ್ಸೆ ಪಡೆಯುವರಿಗೆ,   ಸ್ಪರ್ಧಾತ್ಮಕ ದರದಲ್ಲಿ ಚಿಕಿತ್ಸೆ ನೀಡುವಂತೆ ಇರಬೇಕು. ಆಗ ಸರ್ಕಾರೀ ಆಸ್ಪತ್ರೆಗಳಿಗೆ ಆದಾಯವು ಬರುವುದು ಅಲ್ಲದೆ ಖಾಸಗಿ ಆಸ್ಪತ್ರೆಗಳ ಬೆಲೆ ನಿಯಂತ್ರಣಕ್ಕೆ ಅವಕಾಶ ದೊರೆಯುತ್ತದೆ.

ರಾಜಕೀಯ ಪಕ್ಷಗಳು  ಮುಂದಿನ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಲು ಹೊಸ ಹೊಸ ತರಹದ ಐಡಿಯಾ ಗಳಿಗೆ ಹುಡುಕುತ್ತಿದ್ದಾರೆ . ಉಪೇಂದ್ರ ರವಂತೂ ತಜ್ಞರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳಿಗೆ ಹುಡುಕಿ ಕೊಂಡು ಹೋಗಿ ಸಲಹೆ ಬೇಡುತ್ತಿದ್ದಾರೆ . ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಪರವಾಗಿಲ್ಲ .ಕರ್ನಾಟಕದ ಎಲ್ಲಾ ರಾಜಕೀಯ  ಪಕ್ಷಗಳಿಗೆ ಜನರ ಪರವಾಗಿ , ಆರೋಗ್ಯ ಕ್ಷೇತ್ರದಲ್ಲಿ ಆಗಬೇಕಿರುವ ಕೆಲವೊಂದು  ಕೆಲಸಗಳ ಬಗ್ಗೆ , ಈ ಲೇಖನದ ಮೂಲಕ ಬೇಡಿಕೆ ಇಡುತ್ತಿದ್ದೇವೆ. ಇದು ಪಕ್ಷಗಳ ಪ್ರಣಾಳಿಕೆ ತಯಾರಿಸಲು ಪ್ರಯೋಜನವಾಗಬಹುದು

ಮಾದರಿ ಆರೋಗ್ಯ ವ್ಯವಸ್ಥೆಯಲ್ಲಿ ಎಲ್ಲಾ ವರ್ಗದ ಜನರಿಗೂ, ಎಲ್ಲಾ ರೀತಿಯ  ಚಿಕಿತ್ಸೆಗಳೂ   ಉಚಿತವಾಗಿ ಸಿಗಬೇಕು. ಚಿಕಿತ್ಸೆಯಷ್ಟೇ ಅಲ್ಲದೆ ಚಿಕಿತ್ಸೆ  ಗುಣಮಟ್ಟದಿಂದ ಕೂಡಿರಬೇಕು ಮತ್ತು ಸರಿಯಾದ ಸಮಯಕ್ಕೆ ಸಿಗುವಂತಿರಬೇಕು.  ಆದರೆ ಮಾದರಿ ಆರೋಗ್ಯ ವ್ಯವಸ್ಥೆ ನನಸಾಗದ  ಕನಸು ಎಂದರೆ ತಪ್ಪಾಗಲಾರದು. ಈ ಮಾದರಿ ವ್ಯವಸ್ಥೆಯನ್ನು ಸಾಧಿಸುವುದು ಇರಲಿ, ಗುರಿಯ ಹತ್ತಿರಕ್ಕೂ ಪ್ರಪಂಚದ ಯಾವುದೇ ದೇಶವು ಹೋಗುವುದಕ್ಕೆ ಸಾಧ್ಯವಾಗಿಲ್ಲ. ಎಲ್ಲಾ ರೋಗಗಳಿಗೂ  ಚಿಕಿತ್ಸೆ ಉಚಿತವಾಗಿದ್ದರೆ, ದುರುಪಯೋಗ ಹೆಚ್ಚಾಗಿ, ಆಸ್ಪತ್ರೆಗಳ ಮೇಲಿನ ಅತಿಯಾದ ಕೆಲಸದ ಒತ್ತಡ ಮತ್ತು ಸರ್ಕಾರಗಳಿಗೆ ಆರ್ಥಿಕ ಹೊರೆ  ತರುತ್ತವೆ. ಉಚಿತ ಚಿಕಿತ್ಸೆ ಸಿಗುವ ದೇಶಗಳಲ್ಲಿ  ತುರ್ತು ಚಿಕಿತ್ಸೆಗಳು   ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬ ಅಸಮಾಧಾನ ಸಾಮಾನ್ಯ, ಇಲ್ಲವೇ ಚಿಕಿತ್ಸೆ  ಕಳಪೆ ಗುಣಮಟ್ಟದಿಂದ  ಕೂಡಿರುತ್ತದೆ ಎಂಬ ದೂರು ಇದೆ.  ತದ್ವಿರುದ್ದವಾಗಿ  ತಕ್ಷಣಕ್ಕೆ, ಎಲ್ಲಾ ಚಿಕಿತ್ಸೆ ದೊರಕುವ  ದೇಶಗಳಲ್ಲಿ ಚಿಕಿತ್ಸೆ ದುಬಾರಿಯಾಗಿರುತ್ತದೆ .

ಲೇಖನದಲ್ಲಿ ಗುರಿ ಮುಟ್ಟಲಾಗದ ಕನಸಿನ  ಮಾದರಿ ಬಗ್ಗೆ ಚರ್ಚಿಸದೆ, ಕರ್ನಾಟಕ ದಲ್ಲಿ ಕಾರ್ಯ ರೂಪಕ್ಕೆ ತರಬಹುದಾದ   ಯೋಜನೆಗಳನ್ನು ಮಾತ್ರ ಚರ್ಚಿಸುತ್ತಿದ್ದೇವೆ

೧) ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾ: ಪ್ರಸ್ತುತ ಜಿಡಿಪಿಯ ೩% ರ ಆಸುಪಾಸು  ಖರ್ಚು ಮಾಡುತ್ತಿರುವ ಸರ್ಕಾರ, ಆರೋಗ್ಯ ಕ್ಷೇತ್ರದ ಅನುದಾನವನ್ನು ಕನಿಷ್ಠ ೬%ಕ್ಕೆ  ಹೆಚ್ಚಿಸಬೇಕು.  ಹಣವಿಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಅಸಾಧ್ಯ . ಸರಕಾರ ಹಣ ಭ್ರಷ್ಟಾಚಾರದಲ್ಲಿ ಸೋರಿ ಹೋಗದೆ, ಪ್ರತಿಯೊಂದು ಪೈಸೆಯನ್ನು ಸದ್ವಿನಿಯೋಗ ಮಾಡಲು ಹೆಚ್ಚಿನ ಕ್ರಮದ ಆವಶ್ಯಕತೆ ಇದೆ.

೨) ಕಡ್ಡಾಯ ಪ್ರಾಥಮಿಕ ಆರೋಗ್ಯ ವಿಮೆ: ಕರ್ನಾಟದ ಎಲ್ಲಾ ಪ್ರಜೆಗಳನ್ನು  ಕಡ್ಡಾಯವಾಗಿ ಪ್ರಾಥಮಿಕ ಹಂತದ ವಿಮೆಯ ಜಾಲದಲ್ಲಿ ತರಬೇಕು. ಪ್ರಾಥಮಿಕ ಹಂತದ ವಿಮೆಯ ಮೂಲಕ  ಪ್ರತಿಯೊಬ್ಬ ಕರ್ನಾಟದ ಪ್ರಜೆಗಳಿಗೆ, ಅಪಘಾತದಂತಹ  ತುರ್ತುಪರಿಸ್ಥಿಯಲ್ಲಿ    ಯಾವುದೇ ಆಸ್ಪತ್ರೆಗಳಲ್ಲಿ  ಉಚಿತವಾಗಿ ಚಿಕಿತ್ಸೆ  ಪಡೆಯಲು ಸಾಧ್ಯವಾಗಬೇಕು. ಹೆರಿಗೆ ಮತ್ತು ನವಜಾತ ಶಿಶುಗಳ ಚಿಕಿತ್ಸೆಯನ್ನು ಪ್ರಾಥಮಿಕ ಹಂತದ ವಿಮೆಯ ಒಳಗೆ ತಂದರೆ, ವರ್ಷಕ್ಕೆ ೫೦,೦೦೦ ಕ್ಕಿಂತ ಹೆಚ್ಚು ಸಾವುಗಳನ್ನು ತಡೆಯಲು ಸಾಧ್ಯವಾಗುತ್ತದೆ.

೩) ಜಿಲ್ಲಾ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು: ಪ್ರತಿಯೊಂದು ಜಿಲ್ಲೆಯಲ್ಲೂ, ಸ್ವಾಯತ್ತತೆ ಹೊಂದಿರುವ  ಸರಕಾರಿ ಸೂಪರ್ ಸ್ಪೆಷಾಲಿಟಿ ಕೇಂದ್ರಗಳು ಇರಬೇಕು. ಈ ಸೂಪರ್ ಸ್ಪೆಷಾಲಿಟಿ ಕೇಂದ್ರಗಳಲ್ಲಿ, ಎಲ್ಲಾ ಸ್ತರಗಳ ಜನರಿಗೂ ಒಪ್ಪುವಂತೆ,  ಸಾಮಾನ್ಯ ಹಾಸಿಗಳು, ಅರೆ ಪ್ರೈವೇಟ್ ವಾರ್ಡುಗಳು, ಪ್ರೈವೇಟ್ ವಾರ್ಡುಗಳು ಮತ್ತು ಐಷರಾಮಿ ಕೋಣೆಗಳು ಇರುವಂತೆ ನಿರ್ಮಿಸಬೇಕು.  ಇಂತಹ  ಜಿಲ್ಲಾ ಆಸ್ಪತ್ರೆಗಳ ದರಗಳು ಸ್ಪರ್ಧಾರ್ತ್ಮಕವಾಗಿದ್ದರೆ,  ಖಾಸಗಿ ಆಸ್ಪತ್ರೆಗಳ ದರಗಳನ್ನು ಪರೋಕ್ಷವಾಗಿ ನಿಯಂತ್ರಿಸಬಹುದು. ಹಣ ಪಡೆದು ಸೇವೆ ಕೊಡುವುದರಿಂದ ಸರಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾದರೆ, ಸಿಬ್ಬಂದಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡುವ ಜವಾಬ್ದಾರಿ ಇರುತ್ತದೆ.  ಜನರಿಗೆ ಕೂಡ  ಸರಿಯಾದ ಬೆಲೆಗೆ  ಚಿಕಿತ್ಸೆ ಸಿಗುತ್ತದೆ.

೪)ರಾಜ್ಯ ಮಟ್ಟದ  ಮೂರನೇ ಹಂತದ ಆಸ್ಪತ್ರೆಗಳು:  ಹೃದಯ ರೋಗಗಳಿಗೆ ‘ಜಯದೇವ’ ಮತ್ತು ಮೆದುಳು-ನರ ರೋಗಗಳಿಗೆ   ನಿಮ್ಹಾನ್ಸ್’ನಂತಹ ಆಸ್ಪತ್ರೆಗಳಂತೆ ,  ಮೂರರನೇ ಮಟ್ಟದ (TERTIARY ) ಆರೋಗ್ಯ  ಕೇಂದ್ರಗಳನ್ನು, ಮಾನವನ ಪ್ರತಿಯೊಂದು ಅಂಗಗಳಿಗೂ ವಿಶೇಷವಾದ ಆಸ್ಪತ್ರೆಗಳನ್ನು, ರೋಗಿಗಳ  ಸಂಖ್ಯೆಗನುಗುಣವಾಗಿ ನಿರ್ಮಿಸಬೇಕು.

೫) ತೆರಿಗೆ ವಿನಾಯತಿ:  ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಒಳರೋಗಿಗಳ ಚಿಕಿತ್ಸೆಯ ಬಿಲ್ಲಿನ  ಸಿಂಹ ಪಾಲು (೭೦ %) ,ಔಷಧಿಗಳು ಮತ್ತು ಆಸ್ಪತ್ರೆಯ ಉಪಕರಣಗಳಿಂದ ಬರುತ್ತದೆ. ಒಟ್ಟು ಮೊತ್ತದಲ್ಲಿ ವೈದ್ಯರ ಸೇವೆಯ ದರ ೧೦% ಮಾತ್ರ. ಸರ್ವರಿಗೂ ಉಚಿತ ಚಿಕಿತ್ಸೆ ನೀಡಲು ಸರಕಾರಕ್ಕೆ ಸಾಧ್ಯವಿಲ್ಲದ ಕಾರಣ, ಆಸ್ಪತ್ರೆಯಲ್ಲಿ ಬಳಸುವ ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡುವತ್ತ ಗಮನ ಕೊಡಬೇಕು. ಸೂಜಿ-ಸಿರಿಂಜುಗಳಿಂದ ಹಿಡಿದು ‘ಎಂ.ಆರ್.ಐ.’ ಸ್ಕ್ಯಾನ್ ವರೆಗಿನ ಉಪಕರಣಗಳಿಗೆ ತೆರಿಗೆ ವಿನಾಯತಿ ಸಿಕ್ಕರೆ, ಚಿಕಿತ್ಸೆಯ ದರಗಳಲ್ಲಿ ಗಣನೀಯ ಇಳಿತ ಕಾಣಬಹುದು.

೬) ಕಾನೂನು:  ಮಹಾರಾಷ್ಟ್ರದಲ್ಲಿರುವಂತೆ ರಕ್ತ ಪರೀಕ್ಷೆ /ಸ್ಕ್ಯಾನಿಂಗ್ ಗಳಿಂದ ವೈದ್ಯರಿಗೆ ‘ಹಿಸ್ಸೆ  (cuts)’ ಪಡೆಯುವುದನ್ನು ನಿಷೇಧಿಸುವ ಕಾನೂನು ತರಬೇಕು. ಇದರಿಂದ ಲ್ಯಾಬ್ ಮತ್ತು ವೈದ್ಯರ ಅನೈತಿಕ ವ್ಯವಹಾರಗಳಿಗೆ ಕಡಿವಾಣ ಬೀಳುತ್ತದೆ. ಇದರಿಂದ ಅನವಶ್ಯಕ ಪರೀಕ್ಷೆಗಳಿಗೆ ಕಡಿವಾಣ ಬಿದ್ದು, ಚಿಕಿತ್ಸೆಯ ಹೊರೆ ಕಡಿಮೆಯಾಗುತ್ತದೆ. ಖಾಸಗಿ ಆಸ್ಪತ್ರೆಗಲ್ಲಿ ವಹಿವಾಟು ಆಧಾರಿತ ಸಂಬಳ /ಪ್ರೋತ್ಸಾಹ ಧನದ ನೀಡುವ ಪದ್ಧತಿಯನ್ನು ನಿಷೇಧಿಸುವಂತೆ ಕಠಿಣ ಕಾನೂನುಗಳ ಆವಶ್ಯಕತೆ ಇದೆ.

೭)ಸಂಚಾರಿ ಆಸ್ಪತ್ರೆಗಳು:  ಹಳ್ಳಿಗಾಡಿನಲ್ಲಿ ವೈದ್ಯರ ಕೊರತೆ ನೀಗಿಸಲು, ಎಲ್ಲಾ ವೈದ್ಯರಿಗೆ   ಕಡ್ಡಾಯ ಸೇವೆಯನ್ನು ಜಾರಿಗೆ ತರಬೇಕು. ಕಡ್ಡಾಯ ಸೇವೆಯಿಂದಲೂ ವೈದ್ಯರ ಕೊರತೆ ತುಂಬಿಸಲಾಗದಿದ್ದರೆ,  ಸಂಚಾರಿ ಆಸ್ಪತ್ರೆಗಳ   ಮೂಲಕ,  ಇಲ್ಲವೇ, ಖಾಸಗಿ ವೈದ್ಯರ ನೆರವಿನಿಂದ ಹಳ್ಳಿಗಾಡಿನಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು.

೯)ಸೇವಾ ಮನೋಭಾ: ಪ್ರಸ್ತುತ ಸರಕಾರಿ ಆಸ್ಪತ್ರೆಗಳ ಸೇವೆಗಳ ಗುಣಮಟ್ಟದ ಬಗ್ಗೆ ಜನರಲ್ಲಿ ನಿರಾಶೆ ಮನೆ ಮಾಡಿದೆ. ಈ ಪರಿಸ್ಥಿತಿಗೆ ಆಸ್ಪತ್ರೆಯ ಜವಾನರಿಂದ ಹಿಡಿದು ವೈದ್ಯಾಧಿಕಾರಿಗಳವರೆಗೆ ಎಲ್ಲರೂ ಕಾರಣರಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ಮನೋಬಲವನ್ನು ಹೆಚ್ಚಿಸುವ ಮತ್ತು ಆರೋಗ್ಯ ಸೇವೆಯ ಗೌರವವನ್ನು ಹೆಚ್ಚುವಂತೆ ಕೆಲಸ ಪ್ರೇರಿಸುವ ಕೆಲಸವನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಧಾರ್ಮಿಕ ಗುರುಗಳ, ವ್ಯಕಿತ್ವ ವಿಕಸನ ಉಪನ್ಯಾಸಕರ, ಪ್ರಸಿದ್ಧ ವ್ಯಕ್ತಿಗಳ ಉಪನ್ಯಾಸಗಳ ಮೂಲಕ ಆಸ್ಪತ್ರೆಯ ವಾತಾವರಣವನ್ನು ಧನಾತ್ಮಕವಾಗಿ ಬದಲಿಸಬೇಕಾಗಿದೆ .

೮)ಮುನ್ನೆಚ್ಚರಿಕೆಯ ಕ್ರಮಗಳು:  ಸರ್ಕಾರ ಜಲ ಮಾಲಿನ್ಯ, ವಾಯು ಮಾಲಿನ್ಯ, ಆಹಾರ ಮಾಲಿನ್ಯದ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಮಾಲಿನ್ಯಗಳು ಪರೋಕ್ಷವಾಗಿ ಆರೋಗ್ಯದ ಹೊರೆ ಹೆಚ್ಚಿಸುತ್ತವೆ.  ಪ್ರಜೆಗಳು ಯೋಗ, ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಂಡರ, ಮುಂದೆ ಅದು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತವೆ. ಆಹಾರ ಸೇವನಾ ಪದ್ದತಿ, ಧೂಮಪಾನ ಮತ್ತು ಮಧ್ಯಪಾನದಂತಹ ಅಭ್ಯಾಸಗಳ ಬಗ್ಗೆ  ಸರ್ಕಾರ ನಿಯಂತ್ರಣ  ಸಾಧಿಸಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Dayananda Linge Gowda

ರೇಡಿಯೊಲೊಜಿಸ್ಟ್
ಲೇಖಕರು ಮತ್ತು ಕಾದಂಬರಿಕಾರರು

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!