ಬದುಕಿನಲ್ಲಿ ಬದಲಾವಣೆ ಸಹಜ. ಆದರೆ ಪ್ರತಿ ಬದಲಾವಣೆಯೂ ಅದರದೇ ಆದ ನೋವು ಕೊಡದೆ ಬಿಡುವುದಿಲ್ಲ. ’Every change brings in pain’ ಎನ್ನುವ ವಾಕ್ಯವನ್ನು ಇಂಗ್ಲಿಷ್ ಭಾಷಿಕರು ಬಹಳವಾಗಿ ಬಳಸುತ್ತಾರೆ. ನೋವು ಎಂದು ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅದು ಇನ್ನೊಂದು ದೊಡ್ಡ ನೋವಾಗುತ್ತದೆ. ಬದುಕು ತೆರೆದುಕೊಂಡ ಹಾಗೆ ನಡೆದುಕೊಂಡು ಹೋಗಬೇಕು ಎನ್ನುವುದು ನಾನು ಪಾಲಿಸಿಕೊಂಡು ಬಂದಿರುವ ನಿಯಮ. ಆ ನನ್ನ ನಿಯಮ ‘ ಸ್ಪೇನ್ ., ಸ್ಪಾನಿಷ್ ‘ ಪದಗಳನ್ನು ಕೇಳಿರದ ನನ್ನನ್ನು ಸ್ಪೇನ್ ದೇಶಕ್ಕೆ ತಂದು ಬಿಡುತ್ತದೆ. ಮೊದಲ ಮೂರ್ನಾಲ್ಕು ತಿಂಗಳು ಭಾಷೆ ಬರದೆ, ಸ್ನೇಹಿತರು ಇಲ್ಲದೆ ಪೂರ್ಣ ಮಾಂಸಾಹಾರಿ ದೇಶದಲ್ಲಿ ಪುಳಿಚಾರಾಗಿ ಬದುಕುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ಮಾತನಾಡಲು ಕೂಡ ಯಾರೂ ಇಲ್ಲದ ಪರಿಸ್ಥಿತಿ. ವಾರ ಪೂರ್ತಿ ಹೇಗೋ ಕಳೆದು ಹೋಗುತ್ತಿತ್ತು; ವಾರಾಂತ್ಯ ಕಳೆಯುವುದು ಅತ್ಯಂತ ನೋವಿನ ವಿಷಯವಾಗಿತ್ತು. ಆಗೆಲ್ಲಾ ಸ್ಪೇನ್ (spain)ನಲ್ಲಿ ಎಸ್ ಅಕ್ಷರ ತೆಗೆದರೆ ಉಳಿಯುವುದು ಪೈನ್; ಅಂದರೆ ನೋವು ಈ ದೇಶ ನನಗೆ ಬರಿ ನೋವು ನೀಡುತ್ತಿದೆ ಎಂದುಕೊಳ್ಳುತ್ತಿದೆ. ನನ್ನ ಮನಸ್ಥಿತಿಯನ್ನು ಅರಿತವನಂತೆ ಗೆಳೆಯ ಇಮಿಲಿಯೊ ಇಮೇನಸ್ ‘ರಂಗಾ ಬೇಜಾರು ಮಾಡಿಕೊಳ್ಳಬೇಡ “Dios, que da la llaga, da la medicina” ಎನ್ನುವ ಸಾಂತ್ವನ ಹೇಳುತ್ತಿದ್ದ. ನನ್ನ ಪುಣ್ಯಕ್ಕೆ ನನಗೆ ಸಿಕ್ಕ ಗೆಳೆಯರು ಉತ್ತಮ ಸಂಸ್ಕಾರ ಹೊಂದಿದವರಾಗಿದ್ದರು. ನನ್ನಂತೆ ನಾಳಿನ ಬಗ್ಗೆ ಭರವಸೆ ಉಳ್ಳವರಾಗಿದ್ದರು. ‘ದಿಯೋಸ್ ಕೆ ದಾ ಲ ಯಾಗ, ದಾ ಲ ಮೆಡಿಸಿನ’ ಅಂದರೆ ಕಷ್ಟ ಅಥವಾ ಕಹಿಯನ್ನು ಕೊಟ್ಟ ದೇವರು ಅದಕ್ಕೆ ಪರಿಹಾರವಾಗಿ ಔಷದ ಕೊಟ್ಟೆ ಕೊಡುತ್ತಾನೆ ಎನ್ನುವುದು ಯಥಾವತ್ತು ಅರ್ಥ. ಇದರ ಒಳಾರ್ಥ ಕೂಡ ತೀರಾ ಭಿನ್ನವೇನಲ್ಲ. ಕಷ್ಟ ಕೊಡುವ ದೇವರು ಅದಕೊಂದು ಪರಿಹಾರ ಕೂಡ ಇಟ್ಟಿರುತ್ತಾನೆ ಎನ್ನುವುದು ಸ್ಪಾನಿಶರ ನಂಬಿಕೆ .
ಬದುಕು ಎಷ್ಟು ಸರಳ ಅಲ್ವಾ? ನಮ್ಮ ನಂಬಿಕೆಗಳು ಜಗತ್ತಿನ ಮುಕ್ಕಾಲು ಪಾಲು ಜನರ ನಂಬಿಕೆಗಳ ಜೊತೆ ತಾಳೆ ಹಾಕಿಕೊಂಡರೆ! ನನ್ನ ಮಟ್ಟಿಗಂತೂ ಬುದ್ದಿ ಬಂದಾಗಿನಿಂದ ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ? ಎನ್ನುವ ಮಾತನ್ನ ಕೇಳಿಕೊಂಡು ಬಂದಿದ್ದೇನೆ. ಈ ಆಡುಮಾತು ಕೂಡ ಹೇಳುವುದು ಅದೆ ಕಷ್ಟ ಬಂತೆಂದು ಅಂಜುವುದು ಬೇಡ, ಕಷ್ಟ ಕೊಟ್ಟ ದೇವರು ಅದಕ್ಕೊಂದು ದಾರಿಯನ್ನ ಅಥವಾ ಪರಿಹಾರವನ್ನ ಕೂಡ ಖಂಡಿತ ನೀಡುತ್ತಾನೆ. ನಮ್ಮ ಹಿರಿಯರ ಮತ್ತು ಆಗಿನ ಸಮಕಾಲೀನ ಜಗತ್ತಿನ ಮುಕ್ಕಾಲು ಪಾಲು ಹಿರಿಯರ ಚಿಂತನೆಗಳು ಹೆಚ್ಚು ಕಡಿಮೆ ಒಂದೇ ಆಗಿದ್ದವು ಬದುಕು ಸರಳವಾಗಿತ್ತು .
ಇಂಗ್ಲಿಷ್ ಭಾಷಿಕರು God sends cold according to clothes ಅಥವಾ “God sends cold after clothes.” ಎನ್ನುವ ಮಾತಿದೆ. ಅಂದರೆ ಕಷ್ಟವನ್ನ ನಮ್ಮ ಅನುಭವಿಸುವ ಅಥವಾ ಸಹಿಸುವ ಶಕ್ತಿಗೆ ಅನುಗುಣವಾಗೇ ನೀಡುತ್ತಾನೆ ಎನ್ನುವ ಅರ್ಥ. ಅಲ್ಲದೆ ಪರಿಹಾರ ತಿಳಿಸಿ ನಂತರ ಕಷ್ಟವನ್ನ ಕೊಡುತ್ತಾನೆ ಎನ್ನುವ ಅರ್ಥ ಬರುವ ಮಾತು ಕೂಡ ಇಲ್ಲಿದೆ.
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Dios: ದೇವರು ಎನ್ನುವ ಅರ್ಥ, ದಿಯೋಸ್ ಎನ್ನುವುದು ಉಚ್ಚಾರಣೆ.
que da la: ಕೊಡುವ, ಕೊಡುತ್ತಾನೆ ಎನ್ನುವ ಅರ್ಥ ನೀಡುತ್ತದೆ. ಕೆ ದಾ ಲ
llaga: ಕಹಿ ಅಥವಾ ಕಷ್ಟ ಎನ್ನುವ ಅರ್ಥ ನೀಡುತ್ತದೆ. ಯಾಗ ಎನ್ನುವುದು ಉಚ್ಚಾರಣೆ.
medicina: ಔಷಧ ಎನ್ನುವುದು ನಿಘಂಟು ಅರ್ಥ. ಪರಿಹಾರ ಎನ್ನುವುದು ಸಾಂಧರ್ಬಿಕ ಅರ್ಥ. ಮೆಡಿಸಿನ ಎನ್ನುವುದು ಉಚ್ಚಾರಣೆ.