ಅಂಕಣ

ಕಲಿಯುವವರಿಗೆ ಆಸ್ಪತ್ರೆಯೆಂಬುದು ಅಧ್ಯಾತ್ಮ ಕೇಂದ್ರ

ಬದುಕಿನಿಂದ ಸಾವಿನೆಡೆಗೆ ನಡೆಯುವ ಜನರನ್ನು ವೈದ್ಯರುಗಳು ನೋಡಿದಷ್ಟು, ಬೇರೆ ಯಾರು ನೋಡುವುದಕ್ಕೆ ಸಾಧ್ಯವಿಲ್ಲ. ಪೊಲೀಸರಾಗಲಿ, ಸೈನಿಕರಾಗಲಿ ನಮಗೆ ಆಗುವ ಮನ್ವಂತರದ ದರ್ಶನದ ಲೆಕ್ಕಕ್ಕೆ ಹತ್ತಿರವೂ ಬರಲಾರರು. ಸಾವು ಸಂಭವಿಸಿದ ನಂತರ ನೋಡುವ ಬಗ್ಗೆ ನಾನು ಹೇಳುತ್ತಿಲ್ಲ, ಸಾವಿನ ಹೊಸ್ತಿಲನ್ನು ದಾಟುವವರ ಬಗ್ಗೆ ಹೇಳುತ್ತಿದ್ದೇನೆ. ನಾವು ಸಾವಿನ ಹತ್ತಿರವಿದ್ದೇವೆ ಎಂದು ಕೆಲವರಿಗೆ ಮಾಹಿತಿ ಇದ್ದರೆ, ಕೆಲವರಿಗೆ ಅದರ ಬಗ್ಗೆ ಸಣ್ಣ ಸುಳಿವೂ ಇರುವುದಿಲ್ಲ. ಈ ಎರಡೂ ವರ್ಗಗಳು ನಡೆದುಕೊಳ್ಳುವ ರೀತಿಯಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಸಾವು ಹತ್ತಿರವಿದೆ ಎಂದು ಗೊತ್ತಾದ ರೋಗಿಗಳು, ತಮ್ಮ ನಡತೆಯಲ್ಲಿ ಬಹಳ ಬದಲಾವಣೆ ತಂದುಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ ದ್ವೇಷ, ಅಸೂಯೆ, ಹಣ ಎಲ್ಲಾ ಸಣ್ಣದಾಗಿ ಕಾಣತೊಡಗಿದರೆ, ಪ್ರೀತಿಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ಹೋಗುತ್ತದೆ. ಅದೇ ತಾವು ಸಾವಿನ ದವಡೆಯಲ್ಲಿದ್ದೇವೆ ಎಂಬ ಅರಿವಿಲ್ಲದ ರೋಗಿಗಳು ಎಂದಿನಂತೆ ನಡೆದುಕೊಳ್ಳುತ್ತಾರೆ. ಅದು ಕೆಲವೊಮ್ಮೆ ನಮಗೆ ನಗು ತರಿಸುತ್ತದೆ. ಕೋಪ-ತಾಪ,ದ್ವೇಷಗಳಿಂದ ಇವರು ಸಾಧಿಸುವುದಾದರು ಏನು ಎಂಬ ಪ್ರಶ್ನೆ ಅವರು ಸತ್ತಾಗ ನಮಗೆ ಮೂಡದೇ ಇರದು.ಕೆಲವೊಂದು ಘಟನೆಗಳು ಯಾವ ಜೇನ್ ಕಥೆಗಳಿಗಿಂತಲೂ ಕಡಿಮೆ ಏನಿಲ್ಲ. ಜನರು ನಾವು ಶಾಶ್ವತವಾಗಿ ಬದುಕುತ್ತೇವೆ ಎಂದು ತಿಳಿದು ನಡೆದುಕೊಳ್ಳುವ ರೀತಿ, ಹಣಕ್ಕೋಸ್ಕರ ಆರೋಗ್ಯ ಹಾಳುಮಾಡಿಕೊಳ್ಳುವುದು,ಮತ್ತೆ ಆರೋಗ್ಯಕ್ಕೋಸ್ಕರ ಹಣ ಚೆಲ್ಲುವುದು ವಿಚಿತ್ರವೆನಿಸುತ್ತದೆ. ಜೀವನ ಸಾಕ್ಷಾತ್ಕಾರ ಆಗುವುದು ಇಂತಘಟನೆಗಳಿಂದಲೇ. ಅತಂಹ ಒಂದಿಷ್ಟು  ಘಟನೆಗಳನ್ನು ನೋಡೋಣ .

****
ದೃಶ್ಯ-1

ಅವಳಿಗೆ 70 ವರ್ಷ, ಅವಳ ಗಂಡನಿಗೆ 80 ವರ್ಷ ವಯಸ್ಸಿರಬಹುದು, ಖಾಯಿಲೆಯಿಂದ ಅವಳು ಸಾವಿನ ಅಂಚಿನಲ್ಲಿ ಇದ್ದಾಳೆ. ಮಕ್ಕಳೆಲ್ಲಾ ದೂರದೂರಿನಲ್ಲಿ ಇದ್ದಾರೆ. ಒಂದೆರಡು ದಿನದಲ್ಲಿ ಸಾಯಬಹುದು ಎಂಬ ಅನುಮಾನ ಅವಳಲ್ಲಿ ಕಾಡುತ್ತಿದೆ. ಅವಳನ್ನು ನೋಡಲು ಬಂದ ಗಂಡನನ್ನು ನೋಡಿ ಅವಳಿಗೆ ಕಣ್ಣೀರುಬರುತ್ತದೆ.
“ರೀ ಎಷ್ಟು ಸೊರಗಿ ಹೋಗಿದ್ದೀರಿ. ನಿಮಗೆ ಮುದ್ದೆ, ಸೊಪ್ಪಿನ ಸಾರು ಇಲ್ಲದಿದ್ದರೆ ಊಟವೇ ಹೋಗುವುದಿಲ್ಲ ಅಂತ ಗೊತ್ತು. ನಾನು ಸರಿಯಾಗಿದ್ದರೆ, ನಾನು ಮಾಡಿಹಾಕುತ್ತಿದ್ದೆ. ಏನು ಮಾಡುವುದು ಹಾಳಾದ ಖಾಯಿಲೆ. ನಾನೇನಾದರು ಸತ್ತರೆ, ಒಳ್ಳೆ ಹುಡುಗಿ ನೋಡಿ ಇನ್ನೊಂದು ಮದುವೆಯಾಗಿ, ಮದುವೆಯಾಗುವುದಕ್ಕೂ ಮುಂಚೆಸರಿಯಾಗಿ ವಿಚಾರಿಸಿ. ಏಕೆಂದರೆ ಈಗಿನ ಕಾಲದ ಹುಡುಗಿಯರಿಗೆ ಮುದ್ದೆ ಮಾಡುವುದಕ್ಕೆ ಬರುವುದಿಲ್ಲ.”
ಅಜ್ಜನಿಗೆ ಕಣ್ಣೀರು ತಡೆದು ನಿಲ್ಲಿಸಲು ಆಗಲಿಲ್ಲ. ಅವಳಿಗೆ ತನ್ನ ಕಣ್ಣೀರು ಕಾಣದಿರಲಿ ಅಂತ ಅಲ್ಲಿಂದ ಹೊರಟ.
“ರೀ ಎಲ್ಲಿಗೆ ಹೋಗಿತ್ತಿದ್ದೀರಿ.?” ಹೆಂಡತಿ ಕೇಳಿದಳು.
“ಮದುವೆಗೆ ಹುಡುಗಿ ನೋಡಲಿಕ್ಕೆ…!”

***
ದೃಶ್ಯ-2

ಅವಳಿಗೆ ಸ್ತನದ ಕ್ಯಾನ್ಸರ್ ರೋಗ. ಅದು ಎಲ್ಲಾ ಬೇರೆ ಅಂಗಾಂಗಗಳಿಗೂ ಹರಡಿತ್ತು. ಏನೂ ಮಾಡುವ ಹಾಗಿಲ್ಲ. ಕ್ಯಾನ್ಸರ್ ಮೂಳೆಗೆ ಹರಡಿದ್ದರಿಂದ ಅಸಾಧ್ಯ ನೋವು. ನಾವು ಎಷ್ಟೇ ನೋವಿನ ಮಾತ್ರೆ ಕೊಟ್ಟರೂ ಕಡಿಮೆಯಾಗುತ್ತಿರಲಿಲ್ಲ.
“ಡಾಕ್ಟ್ರೆ, ನನ್ನ ಹೆಂಡತಿಗೆ ಈ ಸ್ಟೇಜಿನಲ್ಲಿ ಏನಾದರು ಚಿಕಿತ್ಸೆ ಇದೆಯೇ.?”
“ಇದು ಕೊನೆ ಹಂತದ ಕ್ಯಾನ್ಸರ್. ಏನೂ ಮಾಡುವುದಕ್ಕೆ ಆಗುವುದಿಲ್ಲ”
“ಅವಳ ನೋವನ್ನು ನಾನು ನೋಡುವುದಕ್ಕೆ ಆಗುವುದಿಲ್ಲ ಡಾಕ್ಟರ್. ಹೇಗೂ ಅವಳು ಉಳಿಯುವುದಿಲ್ಲ, ಏನಾದರು ಚುಚ್ಚುಮದ್ದು ಕೊಟ್ಟು ಸಾಯಿಸಿಬಿಡಿ”
“ದಯಾ ಮರಣಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ”
“ಹಾಗಾದರೆ, ಅವಳು ಸಾಯುವವರೆಗೂ ಹೀಗೇ ನರಳಬೇಕೆ ?”
“ನನ್ನ ಕೈಲಿ ಏನೂ ಮಾಡುವ ಹಾಗಿಲ್ಲ. ನನ್ನ ಕೈಗಳನ್ನು ಕಾನೂನು ಕಟ್ಟಿ ಹಾಕಿದೆ”
ಅವನಿಗೆ ನಿರಾಶೆಯಾಗಿತ್ತು. ಅವನು ಮನದಲ್ಲಿ ಏನೋ ತೀರ್ಮಾನಿಸಿದ ಹಾಗಿತ್ತು.
ಮಾರನೆಯ ದಿನ ರೌಂಡ್ ಗೆ ಬಂದಾಗ ಅವಳು ಸತ್ತು ಹೋಗಿದ್ದಳು. ಕ್ಯಾನ್ಸರ್ ಎಲ್ಲಾ ಕಡೆ ವ್ಯಾಪಿಸಿದ್ದರೂ, ನನ್ನ ಪ್ರಕಾರ ಅವಳು ಕನಿಷ್ಠ ಎರಡು ತಿಂಗಳು ಬದುಕಿರಬೇಕಾಗಿತ್ತು. ಅಷ್ಟು ಬೇಗ ಹೇಗೆ ಸತ್ತು ಹೋದಳು ಎಂದು ಗೊತ್ತಾಗಲಿಲ್ಲ. ಗಂಡನ ಮುಖ ನೋಡಿದೆ, ಅವನು ನನ್ನ ಕಣ್ಣುಗಳನ್ನು ಎದುರಿಸಲಾಗದೆ, ಬೇರೆಡೆ ನೋಡುತ್ತಿದ್ದ.

***
ದೃಶ್ಯ-3

“ನಿಮಗೆ ರಕ್ತ ಕಣಗಳ ಕ್ಯಾನ್ಸರ್ ಇದೆ, ನೀವು ಯ್ಯಾವ ರೀತಿ ಚಿಕಿತ್ಸೆಗೆ ಸ್ಪಂದಿಸುತ್ತೀರ ಎನ್ನುವುದರ ಮೇಲೆ,ನೀವು ಎಷ್ಟು ವರ್ಷ ಬದುಕಬಹುದು ಎಂದು ಹೇಳಲು ಸಾಧ್ಯ.”
“ಧನ್ಯವಾದಗಳು. ಡಾಕ್ಟರ್” ಅವರ ಮುಖದ ನಗು ಮಾಸಲಿಲ್ಲ.
“ನಿಮಗೆ ಕ್ಯಾನ್ಸರ್ ಇದೆ ಎಂದು ಹೇಳಿದ ಮೇಲೂ, ಧನ್ಯವಾದ  ಹೇಳಿದ ಮೊದಲ ರೋಗಿ ನೀವು. ನಿಮಗೆ ಸಾವಿನ ಭಯವಾಗುವುದಿಲ್ಲವೇ?”
“ಸಾಮಾನ್ಯವಾಗಿ ಜನರು ಹೇಗೆ ಬೇಕಾದರು ಸಾಯಬಹುದು. ಕಾರಿನಲ್ಲಿ ಹೋಗುವಾಗ ಅಪಘಾತವಾಗಿ ಸಾಯಬಹುದು, ಬಸ್ಸು ಹಳ್ಳಕ್ಕೆ ಬಿದ್ದು ಸಾಯಬಹುದು, ವಿಮಾನ ಅಪಘಾತದಲ್ಲಿ ಸಾಯಬಹುದು, ಕೊಲೆಯಾಗಿಸಾಯಬಹುದು, ಹೃದಯಾಘಾತವಾಗಿ ಮಲಗಿದ್ದಲ್ಲೇ ಸಾಯಬಹುದು. ಯುದ್ಧದ ಸಮಯದಲ್ಲಿ ಬಹಳಷ್ಟು ನಾಗರಿಕರೂ ಸೈನಿಕರು ಸತ್ತಿದ್ದಾರೆ. ಹಾಗೆ ನೋಡಿದರೆ, ಹಾಗೆ ಸುಳಿವಿಲ್ಲದೆ ಬರುವ ಸಾವಿನ ಸಂಖ್ಯೆಗೆ ಹೋಲಿಸಿದರೆ, ಕ್ಯಾನ್ಸರ್’ನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ. ಅದಕ್ಕೆ ಜನಸಾಮಾನ್ಯರಿಗಿಲ್ಲದ ಸಾವಿನಭಯ ನನಗೇಕೆ? ಕಡೇಪಕ್ಷ , ನನಗೆ ಸಾವು ಹತ್ತಿರದಲ್ಲಿದೆ ಅಂತ ಗೊತ್ತು, ಬಹಳಷ್ತು ಜನರಿಗೆ ಅದು ಗೊತ್ತಿಲ್ಲ,ಆದ್ದರಿಂದ ನಾನು ‘ಲಕ್ಕಿ ‘ ಅನ್ನಿಸುತ್ತದೆ. ಏಕೆಂದರೆ ಬಾಕಿ ಉಳಿದಿರುವ ಕೆಲಸವನ್ನು ಮಾಡಿ ಮುಗಿಸಬಹುದು ನಾನು, ತಡ ಮಾಡುವ ಹಾಗಿಲ್ಲ.ಬೇರೆಯವರಿಗೆ ಆ ಅವಕಾಶವೂ ಇರುವುದಿಲ್ಲ ”

***
ದೃಶ್ಯ-4

“ಡಾಕ್ಟರ್ ಅಮ್ಮ ಹೇಗಿದ್ದಾರೆ.?”
“ಒಂದು ವಾರದ ಹಿಂದೆ ಅವರ ಆರೋಗ್ಯ ತೀರ ಹದಗೆಟ್ಟು ಹೋಗಿತ್ತು. ಬದುಕುವುದು ಸಾಧ್ಯವೇ ಇಲ್ಲ ಅನ್ನುವ ಹಾಗಿತ್ತು. ನಾವು ಎಲ್ಲಾ ಆಸೆಗಳನ್ನು ಬಿಟ್ಟುಬಿಟ್ಟಿದ್ದೆವು. ಆದರೆ ನೀವು ಬಂದ ಮೇಲೆ, ಅವರು ಅನಿರೀಕ್ಷಿತವಾಗಿ ಚೇತರಿಸಿಕೊಂಡಿದ್ದಾರೆ. ಅಮೆರಿಕಾದಿಂದ ಬಹಳ ವರ್ಷದ ನಂತರ ಬಂದ ಮಗನನ್ನು ನೋಡಿ ಅವರಿಗೆ ಬಹಳಷ್ಟು ಸಂತೋಷವಾಗಿದೆ. ಆದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ”
ಇದನ್ನು ಹೇಳುತ್ತಲೇ ಮಗನ ಮುಖ ಬಾಡಿ ಹೋಯಿತು.
“ಅಮ್ಮ ಇನ್ನೆರಡು ದಿನದಲ್ಲಿ ಸಾಯುತ್ತಾರೆ ಅಂತ ಸುದ್ದಿಕೇಳಿ, ಎರಡು ವಾರದ ರಜೆಯ ಮೇಲೆ ಅಮೇರಿಕಾದಿಂದ ಬಂದಿದ್ದೇನೆ, ಎರಡು ವಾರದಲ್ಲಿ ಶ್ರಾದ್ದವೂ ಮುಗಿಯುತ್ತದೆ ಅಂತ ಲೆಕ್ಕ ಹಾಕಿ ಬಂದಿದ್ದೆ. ಆದರೆ ಇಲ್ಲಿ………..ಏನು ಮಾಡುವುದು ಗೊತ್ತಾಗುತ್ತಿಲ್ಲ. ರಜೆ ಬೇರೆ ಮುಗಿಯುತ್ತಿದೆ, ಛೇ…”

***
ದೃಶ್ಯ-5
“ಡಾಕ್ಟ್ರೆ, ನಾಳೆ ನನ್ನನ್ನು ಡಿಸ್ಟಾರ್ಜ್ ಮಾಡಿಬಿಡಿ ನಾಳೆ ನಾನು ಮನೆಗೆ ಹೋಗಲೇಬೇಕು.”
“ನಿಮ್ಮ ತಪಾಸಣೆ ಮತ್ತು ಚಿಕಿತ್ಸೆ ಇನ್ನೂ ಮುಗಿದಿಲ್ಲ.”
“ಇಲ್ಲ ನಾನು ನಾಳೆ ಹೋಗಲೇಬೇಕು. ನನ್ನ ಮಗ ನನ್ನ ಮಾನ ತೆಗಲಿಕ್ಕೆ ನಿಂತವ್ನೆ . ಯ್ಯಾವುದೊ ಹೊಲೇರ್ ಹುಡುಗಿನ ನಾಳೆ ರಿಜಿಸ್ಟರ್ ಮದುವೆ ಆಗ್ತೀನಿ ಅಂತ ಹೇಳ್ತಾ ಇದ್ದಾನಂತೆ. ಆ ಹುಡುಗಿಯ ಮನೆಯವರ ಹತ್ತಿರ ಚಿಕ್ಕಾಸು ಹುಟ್ಟುವುದಿಲ್ಲ, ಅಂತ ಹೇಳಿದರೂ ಕೇಳ್ತಾ ಇಲ್ಲ. ಒಟ್ಟಿನಲ್ಲಿ ನಮ್ಮ ಮನೆ ಮಾನ-ಮರ್ಯಾದೆ, ಹಣ ಎಲ್ಲಾ ಹಾಳು ಮಾಡಲೆಂದೇ ಹುಟ್ಟಿಕೊಂಡವ್ನೆ ನನ್ಮಗ. ಅವನಿಗೆ ಒಂದು ಬುದ್ದಿ ಕಲಿಸಬೇಕು. ಹುಡುಗಿ ಕಡೆಯವರಿಗೆ ಒಂದು ಕೈ ನೋಡಿಕೊಂಡು, ನನ್ನ ಮಗನನ್ನು ಬಿಡಿಸಿಕೊಂಡು ಬರಬೇಕು………”

ಮಾತನಾಡುತ್ತಲೇ, ಬಿಪಿ  ಜಾಸ್ತಿ ಆಗಿ, ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಐಸಿಯು  ಗೆ ಸಾಗಿಸಿದೆವು. ಆದರೂ ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲ.

***

ದೃಶ್ಯ -6

ಮನಸ್ಸಿಕೆ  ಏಕೋ ಕಸಿವಿಸಿ. ಏನೂ ಮಾಡಲು ಮನಸಿಲ್ಲ. ನನ್ನ ಜೇವನದಲ್ಲಿ ಏನೂ ಸರಿ ಇಲ್ಲ ಅನಿಸುತ್ತಾ ಇದೆ. ಮನಸ್ಸಿಗೆ ತೃಪ್ತಿ ಎನ್ನುವುದೇ ಇಲ್ಲಾ. ಕೆಲವೊಮ್ಮೆ ಎಲ್ಲಾ ಬಿಟ್ಟು ದೂರ ದೂರ ಹೋಗಬೇಕು ಅನಿಸುತ್ತದೆ. ಹಿಮಾಲಯದಲ್ಲಿ ಯಾರಿಗೂ ಕಾಣದಂತೆ ಬದುಕಬೇಕು ಅನಿಸುತ್ತಾ ಇದೆ. ಕೆಲವೊಮ್ಮೆಯಂತೂ ಆತ್ಮ ಹತ್ಯೆ ಮಾಡಿಕೊಳ್ಳಲೇ ಅಂತ ಜಿಗುಪ್ಸೆ ಉಂಟಾಗುತ್ತದೆ. ಬಾಗಿಲ ಸದ್ದಾಯಿತು.

‘ಒಳಗೆ ಬರಬಹುದೇ ಡಾಕ್ಟರ್ ‘ ಪರಿಚಿತ ಧ್ವನಿ.

‘ಬನ್ನಿ. ಹೇಗಿದ್ದೀರಾ ‘

ಗಾಲಿ ಕುರ್ಚಿ ಯನ್ನು ತಾನೇ ತಳ್ಳುತ್ತ ಒಳಗೆ ಬಂದರು ಹಳೆಯ ರೋಗಿಯೊಬ್ಬರು.

ಕಾನ್ಸರ್ ಬಂದು ಒಂದು ಕಾಲು ಕಳೆದು ಕೊಂಡಿದ್ದಾರೆ. ಕಿಮೋಥೆರಫಿ ತೆಗೆದು ಕೊಂಡು ದೇಹ ಕೃಶವಾಗಿದೆ, ಔಷಧ ಪರಿಣಾಮದಿಂದ  ತಲೆಯ ಮೇಲಿ ಕೂದಲು ಉದುರಿ ಹೋಗಿದೆ. ಅದು ಗೊತ್ತಾಗದೆ ಇರಲೆಂದು  ತಲೆಯನ್ನು ಬೋಳಿಸಿ ಕೊಂಡಿದ್ದಾರೆ. ಇಷ್ಟೆಲ್ಲ ಆದರೂ ನಗು ಸ್ವಲ್ಪವೂ  ಮಾಸಿಲ್ಲ. ಬಟ್ಟೆ ಶುಭ್ರವಾಗಿ ಧರಿಸುತ್ತಾರೆ. ಜೀವನ ಶ್ರದ್ದೆ ಒಂದಿಂಚು ಕಡಿಮೆಯಾಗಿಲ್ಲ.

‘ಡಾಕ್ಟರೇ, ನನ್ನ ಸಂಗೀತ ಕಚೇರಿ ಇದೆ ನಾಳೆ. ತಮಗೆ ಬರಲು ಸಾಧ್ಯವೇ?’ ಎಂದು ಆಹ್ವಾನ ಪತ್ರಿಕೆ ಕೊಟ್ಟರು.

ನನ್ನನ್ನೇ ನಾನು ನೋಡಿಕೊಂಡೆ. ನನಗೆ ಕಾಲು ಸರಿಯಾಗಿದೆ. ದೇಹ ಸರಿಯಾಗಿದೆ. ದೇವರು ಶಾರೀರಿಕ ರೋಗವಂತೂ ಕೊಟ್ಟಿಲ್ಲ. ನಾನು ಈ ರೋಗಿಗಿಂತ  ಅದೃಷ್ಟವಂತ ಅನಿಸಿತು. ಆದರೂ ರೋಗಿಯು ನನಗಿಂತ ಹೆಚ್ಚು ಆನಂದವಾಗಿದ್ದಾನೆ ಎನ್ನಿಸಿತು!

 

Facebook ಕಾಮೆಂಟ್ಸ್

ಲೇಖಕರ ಕುರಿತು

Dayananda Linge Gowda

ರೇಡಿಯೊಲೊಜಿಸ್ಟ್
ಲೇಖಕರು ಮತ್ತು ಕಾದಂಬರಿಕಾರರು

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!