ಅಂಕಣ ಸ್ಪ್ಯಾನಿಷ್ ಗಾದೆಗಳು

ಹುಟ್ಟಿನಿಂದ ಬ್ರಾಹ್ಮಣನಾದರೆ ಸಾಲದು ನಡತೆಯಲ್ಲೂ ಬ್ರಾಹ್ಮಣನಾಗಬೇಕು! 

ನಮ್ಮ ಹುಟ್ಟು ನಮ್ಮ ಕೈಯಲಿಲ್ಲ.  ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹ್ಹೋ ನಾನು ಇಂತಹ ಜಾತಿಗೆ, ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ ನಿಯಂತ್ರಣವಿಲ್ಲ. ಇವುಗಳ ನಡುವಿನ ಜೀವನದಲ್ಲೂ ಕೂಡ ನಮ್ಮ ನಿಯಂತ್ರಣ ಅಷ್ಟಕಷ್ಟೇ. ನಮ್ಮ ಕೈಲಿರುವುದು ಯಾವ ಮಾರ್ಗದಲ್ಲಿ ಬದುಕ ಸಾಗಿಸಬೇಕು ಎನ್ನುವುದಷ್ಟೆ; ನಂತರದ ಪ್ರಯಾಣದಲ್ಲಿ ಎದುರಾಗುವ ಗೆಲುವು ಅಥವಾ ಸೂಲುಗಳಲ್ಲಿ ಕೂಡ ನಮ್ಮ ನಿಯಂತ್ರಣ ಹೇಳಿಕೊಳ್ಳುವಂತದ್ದಲ್ಲ. ನಾವು ಪ್ರಯತ್ನಿಸಬಹದುದಷ್ಟೇ; ಫಲಿತಾಂಶ ನಮ್ಮ ಕೈಯಲಿಲ್ಲ .

ನನ್ನ ಸ್ಪಾನಿಷ್ ಗೆಳೆಯರಿಗೆ ನಮ್ಮ ದೇಶದ ವರ್ಣವ್ಯವಸ್ಥೆ ಬಗ್ಗೆ ಅತಿ ಕುತೂಹಲ. ನಿಮ್ಮ ಸಮಾಜ ಸ್ಥೂಲವಾಗಿ ನಾಲ್ಕು ವಿಭಾಗವಾಗಿ ವಿಭಜಿಸಲಾಗಿದೆ ಅಲ್ವಾ ಎಂದು ಮೊದಲ ಬಾರಿಗೆ ಕಾರ್ಲೋಸ್ ಕೇಳಿದಾಗ ನನಗೆ ಬಹಳ ಆಶ್ಚರ್ಯವಾಗಿತ್ತು. ಕಾರ್ಲೋಸ್ ಗೆ ನಮ್ಮ ಜಾತಿ ಪದ್ದತಿಯ ಬಗ್ಗೆಯೂ ಸಾಕಷ್ಟು ಅರಿವಿತ್ತು. ಒಬ್ಬ ವ್ಯಕ್ತಿ ಯಾವುದೊ ಒಂದು ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಅವನು ಶ್ರೇಷ್ಠ ಅಥವಾ ನಿಕೃಷ್ಟ ಎಂದು ಹೇಳುವುದು ಬಹಳ ತಪ್ಪು. ರಾಜನ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ರಾಜನ ಮಗ ರಾಜನಾಗುವುದು ಕೂಡ ತಪ್ಪು. ನಮ್ಮ ದೇಶದಲ್ಲಿ ನೋಡು ರಾಜನ ಮಕ್ಕಳು ರಾಜರಾಗುತ್ತಾರೆ ಇದು ತಪ್ಪು ಎನ್ನುವುದು ಕಾರ್ಲೋಸ್ ವಾದ. ಜನಸಾಮಾನ್ಯನಲ್ಲಿ  ಶಕ್ತಿಯಿದ್ದರೆ ರಾಜನಾಗಲು ಬೇಕಾಗುವ ಅರ್ಹತೆಗಳಿದ್ದರೆ  ಅವನು ರಾಜನಾಗಬಾರದೇಕೆ?- ಎನ್ನುವುದು ಕಾರ್ಲೋಸ್ ಪ್ರಶ್ನೆ. “ರಂಗ ಹಾಗೆ ನೋಡಲು ಹೋದರೆ ನಾವೆಲ್ಲಾ ಒಂದೇ .. ಇಂದಿಗೂ ನಮ್ಮಲ್ಲಿ ಕೂಡ ರಾಯಲ್ ಬ್ಲಡ್ ಎನ್ನುವ ಪದ ಬಳಸುತ್ತೇವೆ, ಭಾರತವನ್ನು ಮೂರನೇ ದರ್ಜೆ ದೇಶ ಎನ್ನುತ್ತೇವೆ. ಹಾಗೆ ಹೇಳಲು ನಮಗೇನು ಹಕ್ಕಿದೆ? ಅಲ್ಲದೆ ನಾವೇನು ಭಿನ್ನರಲ್ಲ ನಮ್ಮದೂ ಅದೇ ಮನಸ್ಥಿತಿ.  ಆದರೆ ನಿನಗೆ ಗೊತ್ತಾ ನಮ್ಮಲ್ಲಿ  Dime no con quien naces, sino con quien paces. ( ದಿಮೆ ನೋ ಕೋನ್ ಕಿಯೆನ್ ನಾಸೆಸ್ , ಸಿನೋ ಕೋನ್ ಕಿಯೆನ್ ಪಾಸೆಸ್ ) ಎನ್ನುವ ಗಾದೆಯಿದೆ”  ಎಂದ .

ಕುತೂಹಲದಿಂದ ಕಾರ್ಲೋಸ್ ಗಾದೆಯ ಅರ್ಥವೇಳು ಎಂದೇ.  ಯಾವ ಮನೆತನದಲ್ಲಿ ಅಥವಾ ಎಲ್ಲಿ /ಹೇಗೆ ಹುಟ್ಟಿದೆ ಎನ್ನುವುದು ಹೇಳಬೇಡ , ಈಗ ನೀನು ಹೇಗೆ /ಯಾರೊಂದಿಗೆ ನಡೆಯುತ್ತಿದ್ದೀಯ ಎಂದು ತಿಳಿಸು ಸಾಕು; ಎಂದರ್ಥ ಎಂದನು.  ಹೌದು ಈ ಮಾತು ಎಷ್ಟು ಸತ್ಯ ! ಆದರೇನು ಅದನ್ನು ಗೌರವಿಸುವುದು ಬಿಟ್ಟಿದ್ದೇವೆ .

ನಮ್ಮ ಜನ್ಮ ಎಲ್ಲೇ ಆಗಿರಲಿ ನಮ್ಮ ನಡತೆ ನಮ್ಮ ಗುರುತಾಗುತ್ತದೆ ಎನ್ನುವುದು ಸಾರಾಂಶ. ನಮ್ಮಲ್ಲೂ ಹುಟ್ಟಿನಿಂದ ಬ್ರಾಹ್ಮಣನಾದರೆ ಸಾಲದು ನಡತೆಯಲ್ಲೂ ಬ್ರಾಹ್ಮಣನಾಗಬೇಕು  ಎನ್ನುವ ಆಡು ಮಾತಿದೆ. ಅರ್ಥವಿಷ್ಟೆ ತಮ್ಮ ನಡತೆಯಿಂದ ಯಾರು ಬೇಕಾದರೂ ಬ್ರಾಹ್ಮಣ ಎನಿಸಿಕೊಳ್ಳಬಹು .

ಇಂಗ್ಲಿಷ್ ಭಾಷಿಕರು ಇದನ್ನೇ ’Birth is much, but breeding is more’ ಎಂದರು . ಹುಟ್ಟಿಗಿಂತ ಅವರನ್ನು ಬೆಳೆಸುವ ರೀತಿ ಬಹಳ ಮುಖ್ಯ ಎನ್ನುವುದು ಸಾರಾಂಶ .

ಇದನ್ನು ನಮ್ಮ ಪೂರ್ವಜರು ನಮ್ಮ ಹುಟ್ಟು ಕತ್ತಲಲ್ಲಿ ಆಗಿದ್ದರೂ ನಮ್ಮ ನಡೆ ಮಾತ್ರ ಸದಾ ಬೆಳಕಿನ ಕಡೆಗಿರಬೇಕು ಎಂದರು. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಬದುಕು ಮಾತ್ರ ಮುಖ್ಯ ಉಳಿದವೆಲ್ಲ ನಮ್ಮ ಅನುಕೂಲಕ್ಕೆ ಮಾಡಿಕೊಂಡ ಅಥವಾ ಕಟ್ಟಿಕೊಂಡ ತಡೆಗೋಡೆಗಳು ಅಷ್ಟೇ.

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .

Dime  : ಹೇಳು ಎನ್ನುವ ಅರ್ಥ ದಿಮೆ ಎನ್ನುವುದು ಉಚ್ಚಾರಣೆ.

no : ಇಲ್ಲ ಎನ್ನುವುದು ಅರ್ಥ , ನೋ ಎನ್ನುವುದು ಉಚ್ಚಾರಣೆ.

con quien : ಯಾರ ಜೊತೆಗೆ , ಯಾರೊಂದಿಗೆ ಎನ್ನುವ ಅರ್ಥ . ಕೋನ್ ಕಿಯೆನ್ ಎನ್ನುವುದು ಉಚ್ಚಾರಣೆ.

naces : ಹುಟ್ಟು , ಹುಟ್ಟುವುದು , ಹುಟ್ಟಿದ್ದು ಎನ್ನುವ ಅರ್ಥ . ನಾಸೆಸ್ ಎನ್ನುವುದು ಉಚ್ಚಾರಣೆ.

sino  : ಅಲ್ಲದೆ , ಅದಲ್ಲದೆ ಎನ್ನುವ ಅರ್ಥ . ಸಿನೋ ಎನ್ನುವುದು ಉಚ್ಚಾರಣೆ.

paces. : ಓಡಾಡುವುದು , ಹೆಜ್ಜೆಹಾಕುವುದು ಎನ್ನುವ ಅರ್ಥ . ಪಾಸೆಸ್ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!