ಅಂಕಣ ಸ್ಪ್ಯಾನಿಷ್ ಗಾದೆಗಳು

ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.!

ಜೀವನ ಎನ್ನುವುದು ಬಹು ದೊಡ್ಡದು . ಈ ಜಗತ್ತಿನಲ್ಲಿ ಹುಟ್ಟಿರುವ ಸಖಲ ಜೀವಿಗಳೂ ತಮಗೆ ತೋಚಿದ ರೀತಿಯಲ್ಲಿ ಜೀವಿಸುತ್ತಾ ಬಂದಿವೆ . ಮನುಷ್ಯ ಪ್ರಾಣಿ ಮಾತ್ರ ತನ್ನ ಬುದ್ದಿ ಶಕ್ತಿಯ ಪ್ರಯೋಗದಿಂದ ತನ್ನ ಬದುಕು ಹೀಗೀಗಿರಬೇಕು ಎನ್ನುವ ಮಜಲುಗಳನ್ನ ಸಿದ್ದಪಡಿಸಿದ್ದಾನೆ , ಮತ್ತು ಮುಕ್ಕಾಲು ಪಾಲು ಈ ರೇಖೆಯಲ್ಲೇ ನಡೆಯುತ್ತಲೂ ಇದ್ದಾನೆ . ಇಂತಿಪ್ಪ ಜೀವನದಲ್ಲಿ ಎಲ್ಲಾ ಸಮಯವೂ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ . ಜೀವನದ ಯಾವುದಾದರೊಂದು ಹಂತದಲ್ಲಿ ಕೆಟ್ಟ ಸಮಯ ಕೂಡ ನಾವು ಎದುರಿಸಬೇಕಾಗುತ್ತದೆ . ಉತ್ತಮ ಅಥವಾ ಒಳ್ಳೆಯ ಸಮಯದಲ್ಲಿ ಹೆಚ್ಚು ಸಂಯಮ ಇಲ್ಲದಿದ್ದರೂ ಹೇಗೋ ನಡೆದು ಹೋಗುತ್ತದೆ. ಆದರೆ ಕೆಟ್ಟ ಸಮಯದಲ್ಲಿ ಮಾತ್ರ ಸಂಯಮ ಹೆಜ್ಜೆ ಹೆಜ್ಜೆಗೂ ಮಹತ್ವ ವಹಿಸುತ್ತದೆ . ಹಾಗೆಯೇ ಒಳ್ಳೆಯ ದಿನಗಳು ಕಳೆದದ್ದು ತಿಳಿಯುವುದೇ ಇಲ್ಲ, ಆದರೆ ಕೆಟ್ಟ ದಿನಗಳು ಮಾತ್ರ ಮುಗಿಯುವುದೇ ಇಲ್ಲವೇನೂ ಎನ್ನುವ ಸಂಶಯ ಹುಟ್ಟಿಸುವಷ್ಟು ಧೀರ್ಘವಾಗುತ್ತವೆ .
೯೯ ಕ್ಕೆ ಸ್ಪೇನ್ ದೇಶದ ತಲುಪಿದಾಗ ಅಲ್ಲಿನ ಕರೆನ್ಸಿ ಪೆಸೆಟಾ. ಎರಡು ಸಾವಿರದ ಒಂದನೇ ಇಸವಿಯಿಂದ ಅಲ್ಲಿ ಯುರೋ ಕರೆನ್ಸಿ ಶುರುವಾಯಿತು . ಯುರೋ ಕರೆನ್ಸಿ ಶುರುವಾದ ಮರು ದಿನದಿಂದ ಅಲ್ಲಿನ ಜೀವನ ಕ್ರಮ ಬದಲಾಯಿತು. ವರ್ಷವೆರೆಡು ಕಳೆಯುವುದರಲ್ಲಿ ಪೆಸೆಟಾ ಟೈಮ್ನ’ಲ್ಲಿದ್ದ ಬೆಲೆಗಳು ದುಪಟ್ಟಾಗಿದ್ದವು. ಜೊತೆಗೆ ವೇತನ ಕೂಡ. ಆದರೇನು ಉಳಿತಾಯ ಎನ್ನುವುದು ಹಿಂಬದಿಯ ಸೀಟಿನಲ್ಲಿ ಆಸೀನವಾಯಿತು. ಸಮಾಜ ಬದುಕುವ ರೀತಿ ಬದಲಾಯಿತು. ಕೇವಲ ಐದು ವರ್ಷದಲ್ಲಿ ಸಮಾಜ ಅತ್ಯಂತ ಹೆಚ್ಚು ಸಿರಿವಂತಿಕೆಯಿಂದ ಕೂಡಿ ಬದುಕಿನ ಮಟ್ಟ ಇನ್ನೊಂದು ಹಂತಕ್ಕೆ ಏರಿತ್ತು . ಈ ನಾಗಾಲೋಟ ೨೦೦೭ ರ ವರೆಗೂ ಕಡಿವಾಣವಿಲ್ಲದ ಕುದುರೆಯಂತೆ ಓಡಿತು . ನಂತರದ ದಿನಗಳು ನಿಧಾನವಾಗಿ ವೇಗ ಕಳೆದುಕೊಳ್ಳತೊಡಗಿತು . ೨೦೦೯ ರ ನಂತರವಂತೂ ಸಮಾಜ ಕುಸಿತ ಕಾಣ ತೊಡಗಿತು . ಅಂಗಡಿ ಮುಂಗಟ್ಟುಗಳಲ್ಲಿ ಮತ್ತು ಸಣ್ಣ ಪುಟ್ಟ ಉದ್ದಿಮೆದಾರರ ಬಾಯಲ್ಲಿ ಒಂದೇ ಮಂತ್ರ  ‘ Al mal tiempo, buena cara ‘ ( ಅಲ್ ಮಾಲ್ ತಿಯಂಪೊ , ಬ್ವೆನ ಕಾರ .)  ಈ ಪದವನ್ನ ಹೋದಲೆಲ್ಲಾ ಕೇಳಿ ಅದೇನೆಂದು ತಿಳಿಯುವ ಕುತೂಹಲದಿಂದ ನಮ್ಮ ಕಛೇರಿಗೆ ಬರುತ್ತಿದ್ದ ಇಂಟರ್ನಲ್ ಆಡಿಟರ್ ಅಂತೊನಿಯೊ ಅವರನ್ನ ಕೇಳಿದೆ . ಕೆಟ್ಟ ಸಮಯದಲ್ಲಿ ಮುಖದ ಮೇಲೆ ನಗು ಮಾಸದಿರಲಿ ಅಥವಾ ಕೆಟ್ಟ ಸಮಯ ಎನ್ನುವುದನ್ನ ಮುಖದಲ್ಲಿ ತೋರಿಸುವುದು ಬೇಡ. ಏನೂ ಆಗಿಲ್ಲ ಎನ್ನುವ ಒಳ್ಳೆಯ ಮುಖವನ್ನು ತೋರಿಸಬೇಕು ಎನ್ನುವ ಅರ್ಥ ಕೊಡುತ್ತದೆ ಎಂದರು . ಮುಂದುವರಿದು ಕೆಟ್ಟ ಸಮಯ ಎಲ್ಲರಿಗೂ ಬರುತ್ತದೆ ಆಗ ಕೋಪ ಬರುವುದು ಕೂಡ ಸಹಜ. ಆಗ ಒರಟು ಮಾತು ಬರುವುದು ಕೂಡ ಅಷ್ಟೇ ಸಹಜ. ಆಗ ಅದು ಹೊಡೆದಾಟಕ್ಕೆ ಕೆಡುಕಿಗೆ ದಾರಿ ಮಾಡಿಕೊಡುತ್ತದೆ . ಇವೆಲಕ್ಕೆ ಸಮಾಧಾನದ ಉತ್ತರವೆಂದರೆ ಮುಖದಲ್ಲಿ ನಗೆ ಮಾಸದಂತೆ ನೋಡಿಕೊಳ್ಳುವುದು ಎಂದರು . ಎಷ್ಟು ನಿಜ ಅನ್ನಿಸಿತು . ನಮ್ಮ ಕನ್ನಡ ನಾಣ್ನುಡಿ “ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು” ತಕ್ಷಣ ನೆನಪಿಗೆ ಬಂತು . ಕೆಟ್ಟ ಸಮಯದಲ್ಲಿ ಯಾರಾದರೂ ಸಿಡುಕಿನಿಂದ ಏನಾದರೂ ಅಂದರೆ ನಕ್ಕು ಸುಮ್ಮನೆ ಹೋಗುವುದು ಲೇಸು. ಮಾತಿಗೆ ಮಾತು ಬೆಳಸಿ ಕೆಡುಕು ಮಾಡಿಕೊಳ್ಳಬೇಡ ಎನ್ನುವ ನಮ್ಮ ಹಿರಿಯರೂ ಕೆಟ್ಟ ಸಮಯದಲ್ಲಿ ಒಳ್ಳೆಯ ಮುಖದಿಂದಿರು ಎನ್ನುವ ಸ್ಪಾನಿಷ್ ಹಿರಿಯರ ಚಿಂತನೆಯಲ್ಲಿನ ಸಾಮ್ಯತೆ ಬೆರಗುಗೊಳಿಸುತ್ತದೆ .
ಇದನ್ನೇ ಇಂಗ್ಲಿಷ್ ಭಾಷಿಕರು “When life gives you lemons, make lemonade” ಎನ್ನುತ್ತಾರೆ .  ಜೀವನ ನಿನಗೆ ಕಷ್ಟ ಕೊಟ್ಟರೆ ಅದನ್ನ ಹಳಿಯುತ್ತ ಕೂರುವ ಬದಲು ಆ ಸನ್ನಿವೇಶದಲ್ಲೂ ಹೇಗೆ ಲಾಭ ಮಾಡಬಹದು ಅಥವಾ ಬದುಕಬಹುದು ಎನ್ನುವುದನ್ನ ಕಲಿ ಎನ್ನುವ ಅರ್ಥ ನೀಡುತ್ತದೆ . ಅವರು ಹೇಳುವ ರೀತಿಯಲ್ಲಿ ಬದಲಾವಣೆ ಇರಬಹದು. ಕಷ್ಟದ ಸನ್ನಿವೇಶವನ್ನ ತಾಳ್ಮೆಯಿಂದ ನಿಭಾಯಿಸಿ ., ಮುಖದಲ್ಲಿ ನಗು ಮಾಸದಂತೆ ಎಚ್ಚರವಹಿಸಿ ಎನ್ನುವ ಎಚ್ಚರಿಕೆಯ ಮಾತು ಎಲ್ಲಾ ಭಾಷೆಯ ಗಾದೆಗಳಲ್ಲಿ ಅನುರುಣಿಸುವ ಸಾಮಾನ್ಯ ಕೊಂಡಿ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 
Al mal   : ಆ ಕೆಟ್ಟ .. ಕೆಟ್ಟದಾದ ಎನ್ನುವ ಅರ್ಥ . ಅಲ್ ಮಾಲ್ ಎನ್ನುವುದು ಉಚ್ಚಾರಣೆ 
tiempo  : ವೇಳೆ , ಟೈಮ್ ಎನ್ನುವುದು ಅರ್ಥ . ತಿಯಂಪೊ ಎನ್ನುವುದು ಉಚ್ಚಾರಣೆ . 
 buena   : ಒಳ್ಳೆಯ .. ಉತ್ತಮ ಎನ್ನುವ ಅರ್ಥ ಕೊಡುತ್ತದೆ .ಬ್ವೆನ ಎನ್ನುವುದು ಉಚ್ಚಾರಣೆ .  
cara    :   ಮುಖ ಎನ್ನುವ ಅರ್ಥ ಕೊಡುತ್ತದೆ .   ಕಾರ ಎನ್ನುವುದು ಉಚ್ಚಾರಣೆ . 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!