ಬಣ್ಣ.. ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ… ಈ ಹಾಡನ್ನು ಕೇಳದವರೇ ಇಲ್ಲವೇನೋ. ನೀವು ಕೂತಲ್ಲೇ ಕಣ್ಣು ಮುಚ್ಚಿಕೊಂಡು ಬಣ್ಣಗಳೇ ಇಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಳ್ಳಿ! ಛೆ…ಎಂತಹ ನೀರಸ ಪರಿಸರ, ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಸ್ತುವಿನಿಂದ ವಸ್ತುವಿಗೆ ಭಿನ್ನತೆಯೇ ಇಲ್ಲ. ಬರೀ ಸ್ಪರ್ಶ ಮಾತ್ರದಿಂದಲೇ ವಸ್ತುಗಳನ್ನರಿಯಬೇಕು. ಕವಿಯಂತೂ ರಸಮಯವಾಗಿ ಕಾವ್ಯವನ್ನು ಬರೆಯಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಈ ಪ್ರಕೃತಿ ಮಾತೆ ಅಂದವಾಗಿ ಕಾಣುವುದು ಈ ಬಣ್ಣಗಳ ಕಾರಣದಿಂದಾಗಿ. ಅಷ್ಟಕ್ಕೂ ಈ ಪ್ರಕೃತಿ ಏಕೆ ಇಷ್ಟೊಂದು ವರ್ಣಮಯವಾಗಿದೆ? ಎಲ್ಲಾ ಪ್ರಾಣಿಗಳಿಗೂ ಈ ಜಗತ್ತು ಇಷ್ಟೇ ರಂಗುರಂಗಾಗಿ ಕಾಣಿಸುತ್ತದೆಯೆ?
ಸೂರ್ಯನಿಂದ ನಮಗೆ ಬರುವ ಬೆಳಕು ಹಲವು ವಿಕಿರಣಗಳ ಆಗರ. ಈ ವಿಕಿರಣಗಳನ್ನು ಅವುಗಳ ತರಂಗದೂರ (wavelength)ದ ಆಧಾರದ ಮೇಲೆ ದೃಗ್ಗೋಚರ ಬೆಳಕು, ನೇರಳಾತೀತ ಕಿರಣ, ಅವಗೆಂಪು ಕಿರಣ ಹೀಗೆ ಹಲವು ವಿಕಿರಣಗಳಾಗಿ ವಿಭಾಗಿಸಬಹುದು. ಇವುಗಳಲ್ಲಿ ಮನುಷ್ಯನ ಕಣ್ಣಿಗೆ ಕಾಣುವ ತರಂಗದೂರದ ವ್ಯಾಪ್ತಿಯ ಬೆಳಕನ್ನು ದೃಗ್ಗೋಚರ ಬೆಳಕು ಎನ್ನುತ್ತೇವೆ. ಇದು ನೇರಳೆ, ನೀಲ, ನೀಲಿ, ಹಸಿರು, ಹಳದಿ, ಕಿತ್ತಳೆ ಹಾಗೂ ಕೆಂಪು ಈ ಏಳು ಬಣ್ಣಗಳ ಸಂಗಮದ ಫಲ. ಇದರಲ್ಲಿರುವ ಪ್ರತಿಯೊಂದು ಬಣ್ಣಕ್ಕೂ ನಿರ್ದಿಷ್ಟವಾದ ತರಂಗದೂರವಿದೆ.
ಸೂರ್ಯನಿಂದ ಬಂದ ಬೆಳಕು ಯಾವುದೇ ಒಂದು ವಸ್ತುವಿನ ಮೇಲೆ ಬಿದ್ದಾಗ ಆ ವಸ್ತುವು ತನ್ನ ಗುಣಕ್ಕನುಗುಣವಾಗಿ ಒಂದು ನಿರ್ದಿಷ್ಟ ತರಂಗದೂರದ ಬೆಳಕನ್ನು ಪ್ರತಿಫಲಿಸಿ ಉಳಿದ ಬೆಳಕನ್ನು ಹೀರಿಕೊಳ್ಳುತ್ತದೆ. ಹೀಗೆ ಪ್ರತಿಫಲಿಸಲ್ಪಟ್ಟ ನಿರ್ದಿಷ್ಟ ತರಂಗದೂರ ಯಾವ ಬಣ್ಣವನ್ನು ಪ್ರತಿನಿಧಿಸುತ್ತದೆಯೋ ನಮಗೆ ವಸ್ತುವು ಆ ಬಣ್ಣದಿಂದ ಗೋಚರಿಸುತ್ತದೆ. ಉದಾಹರಣೆಗೆ ಹಸಿರು ಬಣ್ಣದ ತರಂಗದೂರ ೫೫೦ ನ್ಯಾನೋ ಮೀಟರ್ (೧೦-೯ ಮೀಟರ್). ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕಿನಲ್ಲಿ ೫೫೦ ನ್ಯಾನೋ ಮೀಟರ್ ತರಂಗದೂರದ ಕಿರಣವನ್ನು ಪ್ರತಿಫಲಿಸಿ ಉಳಿದ ಕಿರಣಗಳನ್ನು ಹೀರಿಕೊಂಡರೆ ಆ ವಸ್ತುವು ಹಸಿರಾಗಿ ಕಾಣಿಸುತ್ತದೆ. ಕೆಲವೊಮ್ಮೆ ವಸ್ತುಗಳು ಒಂದಕ್ಕಿಂತ ಹೆಚ್ಚು ತರಂಗದೂರವನ್ನು ಪ್ರತಿಫಲಿಸುತ್ತವೆ, ಆಗ ಆ ವಸ್ತುವು ಪ್ರತಿಫಲಿಸಲ್ಪಟ್ಟ ತರಂಗದೂರಗಳ ಮಿಶ್ರಣದಿಂದ ಯಾವ ಬಣ್ಣ ಉಂಟಾಗುತ್ತದೆಯೋ ಆ ಬಣ್ಣದಲ್ಲಿ ನಮಗೆ ಗೋಚರಿಸುತ್ತದೆ.
ಈ ಬಣ್ಣಗಳನ್ನು ನಮ್ಮ ಕಣ್ಣುಗಳು ಹೇಗೆ ಗ್ರಹಿಸುತ್ತವೆ? ಎಲ್ಲಾ ಪ್ರಾಣಿಗಳಿಗೂ ಈ ಜಗತ್ತು ನಮಗೆ ಕಾಣಿಸುವಂತೆಯೇ ಕಾಣಿಸುತ್ತದೆಯೇ? ಅಥವಾ ಅವುಗಳ ವರ್ಣಗ್ರಹಿಕೆಗೂ, ನಮ್ಮ ವರ್ಣಗ್ರಹಿಕೆಗೂ ಏನಾದರೂ ವ್ಯತ್ಯಾಸವಿದೆಯೇ? ಹೌದು, ಎಲ್ಲಾ ಪ್ರಾಣಿಗಳಿಗೂ ಈ ಜಗತ್ತು ನಮಗೆ ಕಂಡಷ್ಟು ಸುಂದರವಾಗಿ ಕಾಣುವುದಿಲ್ಲ. ಇನ್ನು ಕೆಲವು ಪ್ರಾಣಿಗಳಿಗೆ ಜಗತ್ತು ನಮಗಿಂತಲೂ ವರ್ಣಮಯವಾಗಿ ಕಾಣಿಸುತ್ತದೆ. ಬಣ್ಣಗಳ ಗ್ರಹಿಕೆಗೆಂದೇ ನಮ್ಮ ಕಣ್ಣುಗಳಲ್ಲಿ ಕೋನ್’ಗಳೆಂಬ ರಚನೆಗಳಿವೆ. ಸಾಮಾನ್ಯ ಮನುಷ್ಯನ ಕಣ್ಣಿನಲ್ಲಿ ಸರಾಸರಿ ಇಂತಹ ೬-೭ ಮಿಲಿಯನ್ ಕೋನ್’ಗಳಿರುತ್ತವೆ. ವಸ್ತುವಿನಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಮ್ಮ ಕಣ್ಣಿನ ಮೇಲೆ ಬಿದ್ದಾಗ ಈ ಕೋನ್ ಗಳು ಆ ಬೆಳಕಿನ ಬಣ್ಣದ ಬಗೆಗಿನ ಮಾಹಿತಿಯನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸಿ ಆಪ್ಟಿಕ್ ನರ್ವ್’ಗಳ ಮೂಲಕ ಮೆದುಳಿನ ಕಾರ್ಟೆಕ್ಸ್ ಭಾಗಕ್ಕೆ ಕಳುಹಿಸಿಕೊಡುತ್ತವೆ. ತಕ್ಷಣ ಮೆದುಳು ಆ ಬಣ್ಣವನ್ನು ಗುರುತಿಸುತ್ತದೆ. ಇದು ಕ್ಷಣ ಮಾತ್ರದಲ್ಲಿ ನಡೆಯುವ ಕ್ರಿಯೆ. ನೀವು ವಸ್ತುವನ್ನು ಕಂಡ ತತ್ ಕ್ಷಣದಲ್ಲಿ ನಿಮಗೆ ಬಣ್ಣದ ಗ್ರಹಿಕೆಯಾಗುತ್ತದೆ ಅಲ್ಲವೆ? ಅಂದಮೇಲೆ ಈ ಕ್ರಿಯೆಯ ವೇಗವನ್ನು ನೀವೇ ಊಹಿಸಿಕೊಳ್ಳಿ!
ಮನುಷ್ಯನ ಕಣ್ಣಿನಲ್ಲಿರುವ ಕೋನ್ ಗಳು ಕೇವಲ ದೃಗ್ಗೋಚರ ಬೆಳಕನ್ನು ಮಾತ್ರ ಗುರುತಿಸಲು ಶಕ್ಯ. ಅದೇ ಬೇರೆ ಕೆಲವು ಪ್ರಾಣಿಗಳಲ್ಲಿನ ಕೋನ್ ಗಳು ದೃಗ್ಗೋಚರ ಬೆಳಕಿನೊಂದಿಗೆ ಬೇರೆ ತರಂಗದೂರದ ಬೆಳಕನ್ನೂ ಗುರುತಿಸುತ್ತವೆ. ಈ ಕಾರಣದಿಂದಾಗಿ ಈ ಜಗತ್ತು ಅವುಗಳಿಗೆ ನಮಗಿಂತಲೂ ವರ್ಣಮಯವಾಗಿ ಕಾಣುತ್ತದೆ. ಇನ್ನು ಕೆಲವು ಪ್ರಾಣಿಗಳಲ್ಲಿನ ಕೋನ್ ಗಳು ಮನುಷ್ಯನಿಗಿಂತಲೂ ಕಡಿಮೆ ಬಣಗಳನ್ನು ಗುರುತಿಸುತ್ತವೆ. ಉದಾಹರಣೆಗೆ ಕೆಲವು ಬಗೆಯ ಜೇಡಗಳು ಹಾಗೂ ಜೇನ್ನೊಣಗಳು ದೃಗ್ಗೋಚರ ಬೆಳಕಿನ ಕೆಲವು ಬಣ್ಣಗಳೊಂದಿಗೆ ನೇರಳಾತೀತ ಬೆಳಕನ್ನೂ ಗ್ರಹಿಸುತ್ತವೆ. ಈ ಕಾರಣದಿಂದಾಗಿ ಅವು ಈ ಪ್ರಕೃತಿಯನ್ನು ನಮಗಿಂತಲೂ ರಂಗುರಂಗಾಗಿ ನೋಡಲು ಸಾಧ್ಯ. ಈ ಪ್ರಾಣಿಗಳಲ್ಲಿ ಕವಿಗಳೇನಾದರೂ ಇದ್ದಿದ್ದರೆ, ಈ ಪ್ರಕೃತಿಯನ್ನು ಮನುಷ್ಯನಿಗಿಂತಲೂ ಚೆನ್ನಾಗಿ ವರ್ಣಿಸುತ್ತಿದ್ದವು! ಇವುಗಳೇನಾದರೂ ನಾಗರಿಕವಾಗಿದ್ದರೆ ನಮಗಿಂತಲೂ ಹೆಚ್ಚಾಗಿ ವರ್ಣಭೇದ ನೀತಿಯನ್ನು ಪಾಲಿಸುತ್ತಿದ್ದವು! ಇನ್ನು ಕೆಲವು ಬಗೆಯ ಮೀನುಗಳು ಹಾಗೂ ಏಡಿಗಳಿಗೆ ಈ ಜಗತ್ತು ಕೇವಲ ಕೆಂಪು ಹಾಗೂ ನೀಲಿ ಬಣ್ಣಗಳಲ್ಲಿ ಕಾಣಿಸುತ್ತದೆ.
ಈ ಬಣ್ಣಗಳ ಬಗ್ಗೆ ಮಾತನಾಡುವಾಗ ನಾನು ನಿಮಗೆ ಇವುಗಳ ಬಗ್ಗೆ ಇನ್ನೊಂದು ಸ್ವಾರಸ್ಯಕರವಾದ ವಿಚಾರವನ್ನು ಹೇಳಲೇಬೇಕು. ನಿಮಗೆಲ್ಲಾ ಈ ಜಗತ್ತು ರಂಗುರಂಗಾಗಿ ಕಾಣುತ್ತದಲ್ಲವೇ? ವಾಸ್ತವದಲ್ಲಿ ಮಾನವನ ಕಣ್ಣು ದೃಗ್ಗೋಚರ ಬೆಳಕನ್ನು ಮಾತ್ರ ಗ್ರಹಿಸುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆನಷ್ಟೇ? ಆದರೆ ಇನ್ನೂ ಸ್ವಾರಸ್ಯವೆಂದರೆ ಮಾನವನ ಕಣ್ಣು ಕೇವಲ ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳನ್ನು ಮಾತ್ರ ಗ್ರಹಿಸುವ ಶಕ್ತಿಯನ್ನು ಹೊಂದಿದೆ. ಈ ಬಣ್ಣಗಳನ್ನು ನಾವು ಮೂಲ ಬಣ್ಣಗಳು ಎಂದು ಕರೆಯುತ್ತೇವೆ. ಈ ಪ್ರಕೃತಿಯಲ್ಲಿ ನಮಗೆ ಕಾಣುವ ಉಳಿದೆಲ್ಲಾ ಬಣ್ಣಗಳೂ ಈ ಮೂಲ ಬಣ್ಣಗಳ ಮಿಶ್ರಣದಿಂದ ಉಂಟಾದವುಗಳು. ಉದಾಹರಣೆಗೆ ನಮಗೆ ಕಾಣುವ ಹಳದಿ ಬಣ್ಣವು ಕೆಂಪು ಹಾಗೂ ಹಸಿರು ಬಣ್ಣಗಳ ಮಿಶ್ರಣದ ಫಲ. ಈ ಮೂಲ ಬಣ್ಣಗಳೂ ಸಹ ಪ್ರಾಣಿಯಿಂದ ಪ್ರಾಣಿಗೆ ಬದಲಾಗುತ್ತವೆ. ಕಪ್ಪೆಗೆ ಈ ಮೂಲ ಬಣ್ಣಗಳ ಸಂಖ್ಯೆ ಐದು. ಈ ಐದು ಬಣ್ಣಗಳ ಮಿಶ್ರಣದಿಂದಾಗಿ ಕಪ್ಪೆಗೆ ಈ ಪ್ರಪಂಚ ಇನ್ನೆಷ್ಟು ವರ್ಣಮಯವಾಗಿ ಕಾಣುತ್ತಿರಬಹುದು!
ಒಟ್ಟಿನಲ್ಲಿ ಈ ರಂಗಿನಾಟದ ಕಾರಣದಿಂದಾಗಿ ಬೇರೆ ಪ್ರಾಣಿಗಳಿಗೆ ಈ ಪ್ರಪಂಚ ಹೇಗೆ ಕಾಣುತ್ತದೆಯೋ ಗೊತ್ತಿಲ್ಲ. ನಮ್ಮ ಮನೆಯಲ್ಲಿರುವ ನಾಯಿ, ಬೆಕ್ಕು ದನಗಳಿಗೆ ನಾವು ಸುಂದರವಾಗಿ ಕಾಣಿಸುತ್ತೇವೆಯೋ, ಕುರೂಪಿಗಳಾಗಿ ಕಾಣಿಸುತ್ತೇವೆಯೋ ಯಾರಿಗೆ ಗೊತ್ತು! ಯಾವ ಪ್ರಾಣಿಗೆ ಹೇಗೆಯೇ ಕಾಣಲಿ, ತಮಗೆ ಕಂಡದ್ದೇ ಸತ್ಯ ಎನ್ನುವ ರೀತಿಯಲ್ಲಿ ಪ್ರಪಂಚವನ್ನು ನೋಡುವುದು ಎಲ್ಲಾ ಪ್ರಾಣಿಗಳಲ್ಲೂ ಇರುವ ಮನೋಧರ್ಮ. ಅದಕ್ಕೇ ಅಲ್ಲವೇ “ದೃಷ್ಟಿಯಂತೆ ಸೃಷ್ಟಿ” ಎಂಬ ಮಾತು ಹುಟ್ಟಿಕೊಂಡದ್ದು.
ವೀರೇಂದ್ರ ನಾಯಕ್, ಚಿತ್ರಬೈಲು