ಅಂಕಣ

ಹೊಟ್ಟೆಗೂ ಒಳಿತು- ಹವಾಮಾನವೂ ತಂಪು, ಗ್ಲೋಬಲ್ ವಾರ್ಮಿಂಗ್ ಗೆ ಸ್ಪಾನಿಷ್ ಮದ್ದು!

ಹಸಿರು ಮನೆ, ಅಥವಾ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆಗೆ ಇಂಗ್ಲಿಷಿನಲ್ಲಿ ಗ್ರೀನ್ ಹೌಸ್ ಎನ್ನುತ್ತಾರೆ. ಸ್ಪ್ಯಾನಿಷ್’ನಲ್ಲಿ ಅದಕ್ಕೆ ‘ಇನ್ವೆರನದೆರೋ’ ಎನ್ನುತ್ತಾರೆ. ಯಾಕೆ ಈ ಮಾತು ಬಂತೆಂದರೆ, 1980ರಿಂದ ಸ್ಪೇನ್ ದೇಶದ ಒಂದು ರಾಜ್ಯ, ಅಂದಲುಸಿಯಾದ ಒಂದು ನಗರ ಅಲ್ಮೆರಿಯ ಸಮೀಪ, ಸರಿ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಗ್ರೀನ್ ಹೌಸ್ ಗಳನ್ನು ನಿರ್ಮಿಸಲಾಗಿದೆ. ಎಲ್ಲವೂ ಪ್ಲಾಸ್ಟಿಕ್ ಕವರ್’ನಿಂದ ನಿರ್ಮಿತ.

ಇಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಯೂರೋಪಿನ ಅರ್ಧಕ್ಕೂ ಹೆಚ್ಚು ಹಣ್ಣು-ತರಕಾರಿಯ ಬೇಡಿಕೆಯನ್ನು ಇಲ್ಲಿಂದ ಪೂರೈಸಲಾಗುತ್ತದೆ. ಅರ್ಥಾತ್, ಇಲ್ಲಿ ಉತ್ಪಾದನೆ ಆಗುವ ತರಕಾರಿ ಮತ್ತು ಹಣ್ಣು ಎಷ್ಟು ಟನ್ ತೂಗಬಹುದು? ತೂಕ ನಿಖರವಾಗಿ ಗೊತ್ತಿಲ್ಲ. ಆದರೆ ಹಣದ ಮೂಲಕ ವಹಿವಾಟು ಹೇಳುವುದಾದರೆ ಒಂದೂವರೆ -ಎರಡು ಬಿಲಿಯನ್ ಅಮೆರಿಕ ಡಾಲರ್’ನಷ್ಟು. 35 ವರ್ಷಗಳ ಕೆಳಗೆ ಈ ಜಾಗವನ್ನು ಬಂಜರು, ಒಣನೆಲ ಎಂದು ವರ್ಗೀಕರಿಸಿದ್ದನ್ನು ಗಮನಿಸಿದರೆ, ಇಂದಿನ ವಹಿವಾಟಿಗೆ ‘ಭೇಷ್’ ಎನ್ನಲೇಬೇಕು.

ಸ್ಪೇನ್’ನಲ್ಲಿ, ಅಂದಲುಸಿಯಾ ರಾಜ್ಯ ಅತಿ ಹೆಚ್ಚು ಸೆಖೆ ಪ್ರದೇಶ. ಆಫ್ರಿಕಾ ಖಂಡಕ್ಕೆ ಸಮೀಪದಲ್ಲಿ ಇರುವುದು, ಜೊತೆಗೆ ಸಮುದ್ರದ ತೀರದಲ್ಲಿ ಇರುವುದು, ಸೇರಿ ಇಲ್ಲಿ 45ರಿಂದ ಹಲವೊಮ್ಮೆ 50ಡಿಗ್ರಿವರೆಗೂ ಉಷ್ಣಾಂಶ ಹೆಚ್ಚುತ್ತದೆ. ಹೀಗಾಗಿ ವರ್ಷಕ್ಕೆ 200 ಮಿಲಿ ಮೀಟರ್’ಗಿಂತ ಕಡಿಮೆ ಮಳೆ ಆಗುತಿತ್ತು. ಇಲ್ಲಿ ಯಾವುದೇ ಬೆಳೆ ಬೆಳೆಯಲು ಯೋಗ್ಯವಲ್ಲ ಎಂದು ನಿರ್ಧಾರ ಮಾಡಿಯಾಗಿತ್ತು.  1963ರಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್’ನಿಂದ ಮನೆ ನಿರ್ಮಿಸಿ ಹಣ್ಣು ತರಕಾರಿ ಬೆಳೆಯಲು ಶುರುಮಾಡಿದರು. ಅಲ್ಲಿ ಸಿಕ್ಕ ಸಣ್ಣ ಯಶಸ್ಸು ಸರಕಾರ, ಯೂನಿವರ್ಸಿಟಿಗಳ ಸಹಯೋಗ, ಖಾಸಗಿ ಕಂಪನಿಗಳ ಸಹಭಾಗಿತ್ವ ಎಲ್ಲವುಗಳ ಮಿಲನದಿಂದ ಇಂದು ಈ ಜಾಗ ‘ ಮಾರ್ ದೇ ಪ್ಲಾಸ್ಟಿಕೊ’ ( ಪ್ಲಾಸ್ಟಿಕ್ ಸಾಗರ ) ಎಂದು ಪ್ರಸಿದ್ಧಿ ಪಡೆದಿದೆ. ಇದು ಜಗತ್ತಿನ ಅತಿ ದೊಡ್ಡ ಗ್ರೀನ್ ಹೌಸ್ ಕೂಡ.

ಪ್ರಯೋಗದಿಂದ ಬರಿ ಹಣಕಾಸು ಗಳಿಸಿದ್ದಷ್ಟೇ ಹೆಗ್ಗಳಿಕೆ ಅಲ್ಲ. ಅದಕ್ಕೂ ಮೀರಿದ ಲಾಭ ಏನೆಂದರೆ, ಕಳೆದ ಹತ್ತು ವರ್ಷದಲ್ಲಿ ಇಲ್ಲಿನ ಉಷ್ಣಾಂಶ ಕೂಡ ಬೇರೆಡೆಗೆ ಹೋಲಿಸಿದರೆ ಕಡಿಮೆ ಆಗಿದೆ. ಗ್ಲೋಬಲ್ ವಾರ್ಮಿಂಗ್ ಎನ್ನುವ ಪೆಡಂಭೂತಕ್ಕೆ ಗ್ರೀನ್ ಹೌಸ್ ‘ಮದ್ದು’ ಎನ್ನುವುದು ಅಲ್ಮೆರಿಯ ಯೂನಿವರ್ಸಿಟಿ ಪ್ರೊಫೆಸರ್’ಗಳ ಅಂಬೋಣ.

ಬೆಳಕಿನ ಕೆಳಗೆ ಕತ್ತಲೆ ಎನ್ನುವ ಒಂದು ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಾಗೆ ಇಷ್ಟೆಲ್ಲಾ ಒಳಿತುಗಳ ನಡುವೆ ಇಲ್ಲಿಯೂ ಒಂದು ಕಪ್ಪು ಚುಕ್ಕೆ ಇದೆ. ಸೆಖೆಯ ಕಾರಣ ಈ ಗ್ರೀನ್ ಹೌಸ್ ನಲ್ಲಿ ಕೆಲಸ ಮಾಡಲು ಯಾವ ಸ್ಪ್ಯಾನಿಷ್ ಪ್ರಜೆಯು ರೆಡಿ ಇಲ್ಲ. ಹೀಗಾಗಿ ಆಫ್ರಿಕಾದಿಂದ ಬಂದ ವಲಸೆ ಕಾರ್ಮಿಕರು, ಅಕ್ರಮ ವಲಸಿಗರು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಾರೆ. ‘ನಮಗೆ ಸ್ಪ್ಯಾನಿಷ್ ಪ್ರಜೆಗಳಿಗೆ ಸಿಗುವ ಸವಲತ್ತು, ಸಂಬಳ ಕೊಡುವುದಿಲ್ಲ. ಹೀಗಾಗಿ ಅವರ ವ್ಯವಹಾರ ಲಾಭದಾಯಕ ಆಗಿರುವುದರಲ್ಲಿ ಅತಿಶಯ ಏನು?’ ಎನ್ನುವುದು ಬಡ ಕೂಲಿಕಾರರ ಪ್ರಶ್ನೆ.

ಗ್ಲೋಬಲ್ ವಾರ್ಮಿಂಗ್ ಕಂಟ್ರೋಲ್ ಮಾಡಲು ಮತ್ತು ಉತ್ತಮ ಫಸಲು ಪಡೆಯಲು ಈ ವಿಧಾನ ಫಲಪ್ರದ. ನಮ್ಮ ಸರಕಾರ, ಜನ ಇದರತ್ತ ಚಿತ್ತ ಹರಿಸುವರೆ?

(ಚಿತ್ರಕೃಪೆ- ಗಾರ್ಡಿಯನ್, ಜಿಯಾಗ್ರಫಿ ಫೀಲ್ಡ್ ವರ್ಕ್ಸ್, ಎಫ್ ಸ್ಟಾಪರ್ಸ್)

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!