Featured ಅಂಕಣ

ಸೋಶಿಯೋ ಥ್ರಿಲ್ಲರ್ ಅನ್ನಬಹುದಾದ – Miss Laila Armed and Dangerous

“ಕವರ್ ನೋಡು, ಈ ಮನುಷ್ಯ ಸಂಘವನ್ನು ಲೇವಡಿ ಮಾಡೋಕೆ ಈ ಪುಸ್ತಕ ಬರ್ದಿದಾನೆ”

“ಓದದೇ ಹೇಗೆ ಹೇಳ್ತೀಯಾ ನೀನು?”

“ಸರಿಯಾಗಿ ಗಮನವಿಟ್ಟು ನೋಡು ಅಲ್ಲಿ..”

“ಎಲ್ಲಿ?”

“ಅಲ್ಲೇ, ಖಾಕಿ ಸ್ಕರ್ಟ್ ಹಾಕಿರೋ ಹುಡುಗಿ, ಅವಳ ಕೂದಲು ಗಾಳಿಗೆ ಹಾರ್ತಾ ಇದೆ. ಅಂದರೆ ಮಾಡರ್ನ್. ಅವಳು ಧ್ವಜ ವಂದನೆ ಮಾಡ್ತಾ ಇದಾಳೆ. ಅಂದ್ರೆ‌ ಇದು ತಮಾಷೆ ಮಾಡೋಕಂತಾನೇ ಮಾಡಿರೋದು.”

“ಅಲ್ಲ ಮಾರಾಯ ಒಳಗೇನಿದೆ ಓದಿಲ್ಲ, ಕತೆ ಏನು ಗೊತ್ತಿಲ್ಲ. ಬರೀ ಕವರ್ ಪೇಜ್ ನೋಡ್ಕೊಂಡು ಇದು ಹಿಂಗೇ ಇರೋದು ಅಂತಿಯಲ್ಲ.”

“ಓದ್ಬೇಕು ಅಂತ ಇದಿಯಾ? ನೋಡಿದ್ರೆ ಗೊತ್ತಾಗಲ್ವಾ? ಬರೆದವನ ಹೆಸರು ನೋಡು. ಮನು ಜೋಸೆಫ್. ಪುರ್ಬು,ಕ್ರಿಶ್ಚಿಯನ್ . ಅದರಲ್ಲೂ ಪತ್ರಕರ್ತ, ಹಿಂಗೆ ತಮಾಷೆ ಮಾಡೋದು ಅವರಿಗೆ ಗಂಜಿ ತಂದುಕೊಡುತ್ತೆ.”

“ಯಾಕೆ ನಾವು ಓದದೆ ನಿರ್ಣಯಕ್ಕೆ ಬರೋದು ಸುಮ್ನೇ? ಓದೇ ಬಿಡುವ.”

“ಆಯ್ತಪ್ಪ.ಓದುವ. ನಾ ಹೇಳಿದ್ದು ಸುಳ್ಳಾಗಲ್ಲ. ನೋಡು ಬೇಕಾದ್ರೆ”

                                         ****

ಕಳೆದ ಸೆಪ್ಟೆಂಬರನಲ್ಲಿ ಬಿಡುಗಡೆಯಾದ ಮನು ಜೋಸೆಫ್ ರ ಮೂರನೇ ಕಾದಂಬರಿ ‘miss laila, armed and dangerous’ ಇಂತಹದ್ದೊಂದು ಪ್ರಶ್ನೆಯನ್ನು ನನ್ನಲ್ಲಿ ಹುಟ್ಟುಹಾಕಿತ್ತು. ಉತ್ತರಕ್ಕೆ ಓದದೆ ದಾರಿಯೇ ಇರಲಿಲ್ಲ. ಹಾಗಂತ ‘ಏನೋ ಬರೀತಾರೆ ಬಿಡು’ ಅನ್ನುವ ಹಾಗೂ ಇಲ್ಲ. ಅವರ ಈ ಹಿಂದಿನ ‘serious men’ ಮತ್ತು ‘illicit happiness of other people’ ಎರಡೂ ಮಧ್ಯಮವರ್ಗದ ಭಾರತವ ತನ್ನ ನಿರೂಪಣೆಯಲ್ಲಿ ಗಾಢವಾಗಿ ಹೌದು ಅನ್ನಿಸುವಂತೆ ಹಿಡಿದಿಟ್ಟಿತ್ತು. ಕುತೂಹಲಕ್ಕಾದರೂ ಓದಬೇಕಿತ್ತು.

ಹೌದು. ಇದು ಅವರ ಹಿಂದಿನಕಾದಂಬರಿಗಳಂತಿಲ್ಲ. ಇಲ್ಲಿ ಕತೆ ನಾಗಾಲೋಟದಲ್ಲಿ ಓಡುತ್ತದೆ. ಸಂಭಾಷಣೆಗಳು ಚುರುಕಾಗಿವೆ.

ಸ್ಥೂಲವಾಗಿ ಹೇಳುವುದಾದರೆ ಕತೆ ಹೀಗೆ:

ದಾಮೋದರಭಾಯಿ‌ ಮತ್ತವರ ಪಕ್ಷ ಚುನಾವಣೆಯಲ್ಲಿ ಪಾರಮ್ಯ ಮೆರೆದ ದಿನ ಮುಂಬಯಿಯಲ್ಲಿ ಕಟ್ಟಡವೊಂದು ಕುಸಿಯುತ್ತದೆ. ಅದರಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬನ ರಕ್ಷಣೆ ಮಾಡಬೇಕಾಗಿದೆ.ಆದರೆ ಅವನು ಸಿಲುಕಿಕೊಂಡ ಜಾಗಕ್ಕೆ ಹೋಗಲು ಪುಟ್ಟ ದೇಹದ ಮನುಷ್ಯರಿಗೆ ಮಾತ್ರ ಸಾಧ್ಯ. ಪೋಲೀಸರಲ್ಲಿ ಯಾರಿದ್ದಾರೆ ಆ ಕ್ಷಣಕ್ಕೆ ಅಂತವರು? ಸಹಾಯಕ್ಕೆಂದು ಅಲ್ಲೇ ಇದ್ದ ಮೆಡಿಕಲ್ ವಿದ್ಯಾರ್ಥಿನಿ ಅಖಿಲಾ, ಅಖಿಲಾ ಅಯ್ಯರ್ ತಾನಾಗೇ ಒಳಹೋಗುತ್ತಾಳೆ.

ಅಖಿಲಾ ಅಯ್ಯರ್ ‘ಯೂ ಟ್ಯೂಬ್ ಪ್ರಾಂಕ್ ಸ್ಟಾರ್’. ದಾಮೋದರ ಭಾಯಿ ಆಲಿಯಾಸ್ ದಾಮೋ, ಬುದ್ಧಿಜೀವಿಗಳ ಹಿಪಾಕ್ರಸಿ, ರೈತ ಪರ ಹೋರಾಟಗಾರರ ಪ್ರಶಸ್ತಿ ಆಸೆ ಎಲ್ಲವನ್ನೂ ಆಡಿಕೊಳ್ಳುತ್ತಾಳೆ. ಅದಕ್ಕಾಗಿ ದೇಶಭಕ್ತರಿಂದ ಏಟು ತಿಂದು ಸುಧಾರಿಸಿಕೊಳ್ಳುತ್ತಿದ್ದಾಳಷ್ಟೆ. ಅವಳ ಅಪ್ಪ ಕ್ರಾಂತಿಯ ಮಾತಾಡುವ ಶ್ರೀಮಂತ, ಅವಳ ಅಮ್ಮ ಆಗಾಗ ಮಾಯವಾಗುತ್ತಿದ್ದ ಸರ್ಕಾರ ಹುಡುಕುತ್ತಿದ್ದ ಕ್ರಾಂತಿಕಾರಿ, ಇಂತಹದೇ ಒಂದು ಮಾಯವಾದ ಸಂದರ್ಭದಲ್ಲಿ ಕಾಡಿನಲ್ಲಿ ಮಿದುಳು ಜ್ವರ ಹಿಡಿಸಿಕೊಂಡು ಬಂದು ಸತ್ತವಳು. ಅಖಿಲಾನಿಗೆ ಚಿಕ್ಕವಳಿದ್ದಾಗ ಅಮ್ಮನ ಹಾದಿ ಕಾಯುವುದೇ ಕೆಲಸ. ಈಗ ಬಚಾವ್.ದಾರಿ ಕಾಯಬೇಕಿಲ್ಲ.ಅಮ್ಮ ಸತ್ತು ಹೋಗಿದ್ದಾಳೆ. ಇಂತಿಪ್ಪ ಹುಡುಗಿ ಈಗ ರಕ್ಷಣಾ ಕೆಲಸಕ್ಕೆ ಹೊರಟಿದ್ದಾಳೆ.

ಒಳ ಸಿಕ್ಕಿಬಿದ್ದವನ ರಕ್ಷಣೆ ಸುಲಭವಲ್ಲ. ಅವನ‌ ಕಾಲಿನ ಮೇಲೆ ಸಿಮೆಂಟಿನ ಬೀಮ್ ಒಂದು ಬಿದ್ದಿದೆ. ಅದರ ನಡುವೆ ಅವನೇನೋ ಹೇಳ್ತಾ ಇದಾನೆ. ಸಾವಿನ ಕಾಲದ ಪಾಪನಿವೇದನೆಯಾ? ಒಂದು ಮುಸ್ಲಿಂ ಗಂಡು ಹೆಣ್ಣಿನ ಜೋಡಿ, ಭಯೋತ್ಪಾದನಾ ಕೃತ್ಯಕ್ಕೆ ಹೊರಟಿದೆ ಅಂತ. ಪೋಲಿಸರು ಅಲರ್ಟ್ ಆಗುತ್ತಾರೆ. ಆದರೆ ಆ ಕಟ್ಟಡದಲ್ಲಿ ಯಾರೂ ಮುಸ್ಲಿಮರಿಲ್ಲ! ಹಾಗಾದರೆ ಯಾರೀತ? ಭಯೋತ್ಪಾದನಾ ಕೃತ್ಯ ನಡೆಸಲು ಹೊರಟ ಉಗ್ರರು ಎಲ್ಲಿದ್ದಾರೆ?

ಯಾವುದೂ ಸ್ಪಷ್ಟವಿಲ್ಲ!

ಅವನು ಮುಕುಂದನ್. ಮಲಯಾಳಿ ಇಂಟಲಿಜನ್ಸ್ ಆಫೀಸರ್. ಅವನಿಗೆ ಆದೇಶವಾಗಿದೆ. ಜಮೀಲ್ ಅನ್ನುವವನ ಹಿಂಬಾಲಿಸಬೇಕು ಅವನ ದಾರಿ ಮಧ್ಯದಲ್ಲಿ ಎತ್ತಾಕಿಕೊಂಡು ಹೋಗಬೇಕು, ಅವನು ಶಂಕಿತ ಭಯೋತ್ಪಾದಕ. ಆದರೊಂದು ಸಮಸ್ಯೆ ಶುರುವಾಗಿದೆ. ದಾರಿಮಧ್ಯದಲ್ಲಿ ಹುಡುಗಿಯೊಂದು ಅವನ ಕಾರಿಗೆ ಹತ್ತಿಕೊಂಡಿದ್ದಾಳೆ. ಈಗ ಅವನ‌ ಎತ್ಕೊಂಡರೆ ಅವಳು ಸಾಕ್ಷಿಯಾಗ್ತಾಳೆ. ಇಬ್ಬರನ್ನೂ ಎತ್ತಿಕೊಂಡರೆ ಹುಡುಗಿಯನ್ನು ಎಂತ ಮಾಡುವುದು? ಅಥವಾ.. ಅವಳೂ ಭಯೋತ್ಪಾದಕಿಯಾ?

ದಾಮೋದರಬಾಯಿ ಅಂದರೆ ದೇವರೇ! ಹಿಂದೂಗಳ ಮನಸಲ್ಲಿ ಏನಿದೆ ಅದನ್ನು ಕಾರ್ಯರೂಪಕ್ಕೆ ತರಲು ಅವತಾರ ಎತ್ತಿ ಬಂದವರು. ಗುಜರಾತಿನ ಮುಖ್ಯಮಂತ್ರಿಯಾಗಿ ಸಾಕ್ಷಿ ಇಲ್ಲದಿದ್ದರೂ ಅವರ ಆಳ್ವಿಕೆಯಲ್ಲೇ ಅಲ್ವಾ ದರಿದ್ರ ಮುಸ್ಲಿಮರ ಕೊಂದದ್ದು. ಎರಡು ಬಾರಿ ಮುಖ್ಯಮಂತ್ರಿ ಆದ ಕೂಡಲೇ ಅವರನ್ನು ಪ್ರಧಾನಿ ಸ್ಥಾನಕ್ಕೆ ನಿಲ್ಲಿಸಬೇಕೆಂಬ ಕೂಗು ಎದ್ದಿತು. ಈಗೀಗ ಅವರು ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುವುದಿಲ್ಲ. ಅರೆ ಬಾಗಿ ಕೈ ಕೆಳಗೆ ಮಾಡಿ ಎದೆ ಮುಟ್ತಾರೆ ಅಷ್ಟೇ! ಸಂಘದ ಸಕ್ರಿಯ ಕಾರ್ಯಕರ್ತ ಈಗ ಹಿಂದೂ ಹೃದಯ ಸಾಮ್ರಾಟ. ಅಂತಹವರನ್ನು ಕೊಲ್ಲಲೇನಾದರೂ ಸಂಚು?

ಲೈಲಾನ ತಂಗಿ ಆಯೇಶಾ. ಕ್ಲಾಸಲ್ಲಿ ‘ಮನೇಲಿ ನಂಗೆ ಆರು ಜನ ಅಕ್ಕಂದಿರು’ ಅರೆಕ್ಷಣ ತಡೆದು ‘ಮತ್ತೊಬ್ಬ ಅಣ್ಣ’ ಅನ್ನುವಾಗ ಕ್ಲಾಸ್ ಗೊಳ್ಳೆನ್ನುತ್ತದೆ. ‘ಇನ್ನೂ ಯಾರಾದರೂ ಬಿಟ್ಟು ಹೋಗಿದ್ದಾರಾ?’ ಅಂತ ಟೀಚರ್ ಕೂಡ ನಗುವಲ್ಲಿ ಭಾಗಿಯಾಗುತ್ತಾರೆ. ಅವಳಿಗೆ ಗೊತ್ತಿದೆ.ತನ್ನ ಜಾತಿಯಲ್ಲಿ ‌ಮಕ್ಕಳು ಜಾಸ್ತಿ.ಕೊಳಕು ಜಾಸ್ತಿ ಅಂತ. ದಾಮೋದರ ಭಾಯಿ ಕಂಡರೆ ಅವಳು ಮಾತ್ರವಲ್ಲ ಅವಳ ಸಮಾಜದವರೂ ಹೆದರುತ್ತಾರೆ. ಆದರೆ ಅವಳಿಗೆ ಅಕ್ಕ ಲೈಲಾ ಆ ಜಮೀಲನೊಂದಿಗೆ ತಿರುಗಾಡುವುದು ಇಷ್ಟವಿಲ್ಲ. ಅವಳ ಅಮ್ಮನಿಗೂ.ಅಪ್ಪ ಸತ್ತ ಮೇಲೆ ಇದೆಲ್ಲ ಶುರು ಆಗಿದ್ದು. ಅಕ್ಕ ಏನಾದರೂ ತಪ್ಪು ಮಾಡ್ತಾ ಇದಾಳಾ?

******

ಮನು ಜೋಸೆಫ್ ಈ ಕಾದಂಬರಿಯಲ್ಲಿ ಅಕ್ಷರಶಃ ತಂತಿಯ ಮೇಲಿನ‌ ನಡಿಗೆ ಮಾಡಿದ್ದಾರೆ. ಎಲ್ಲೂ ಹೆಸರು ಹೇಳದಿದ್ದರೂ ಕಳೆದ ಹದಿನೇಳು ವರ್ಷಗಳಿಂದ ಭಾರತದಲ್ಲಿ ಜೀವನ‌ ನಡೆಸುತ್ತಿರುವವರಿಗೆ ಈ ಕಾದಂಬರಿಯ ಕೇಂದ್ರ ಪಾತ್ರ ಯಾರೂ ಅಂತ ಗೊತ್ತಾಗುತ್ತದೆ. ಗುಜರಾತ್ ಗಲಭೆ ಅದರಲ್ಲೂ ಇಶ್ರತ್ ಜಹಾನ್ ಎನ್ ಕೌಂಟರ್ ಈ ರೀತಿಯಾಗೂ ಪತ್ರಕರ್ತನ ಕಾಡುತ್ತಾ ಅನಿಸುತ್ತದೆ. ಇಲ್ಲಿ ಎಲ್ಲರನ್ನೂ ತಂದಿದ್ದಾರೆ. ಮುಸ್ಲಿಂ, ಹಿಂದೂ,ನಂಬಿಕೆ,ಮೋದಿ,ಅಮಿತ್ ಶಾ,ಅಜಿತ್ ಡೋವಲ್, ಇಶ್ರತ್ ಜಹಾನ್ ಎನ್ಕೌಂಟರ್, ಗುಜರಾತ್ ಗಲಭೆ, ಚುನಾವಣೆ, ಬುದ್ಧಿಜೀವಿಗಳು ಎಲ್ಲವೂ. ಕತೆ ಒಂದು ದಿನದಲ್ಲಿ ‌ನಡೆಯುವುದರಿಂದ ಸಹಜವಾಗೇ ವೇಗವಾಗಿ ನಡೆಯುತ್ತದೆ. ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ಬರೆಯಲು ಹೋದರೂ ತಾಕುವಲ್ಲಿ ತಾಕುತ್ತದೆ.ಹಾಗಾಗಿ ಎರಡೂ ಕಡೆಯವರಿಗೂ ಸಿಟ್ಟು, ನಗು ಬರುತ್ತದೆ.

ಒಂದೊಳ್ಳೆಯ ಕಾದಂಬರಿ. ಸೋಶಿಯೋ ಥ್ರಿಲ್ಲರ್ ಅನ್ನಬಹುದು.

ನಿಜ ಘಟನೆಗಳನ್ನೇ ಹೇಳಿದ್ದಾರಾ? ಅದನ್ನು ಅವರೂ ಹೇಳುವುದಿಲ್ಲ ನಾವೂ ಕೇಳಬಾರದು!

 

  • ಪ್ರಶಾಂತ್ ಭಟ್
  • pra7373@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!