ಅಂಕಣ

ಹರಿಯ ಭಕ್ತರಿಗೆ ಹರಿ – ಹರನ ಭಕ್ತರಿಗೆ ಹರ: ಖಿದ್ರಾಪುರ ಕೊಪೇಶ್ವರ- ಸಾಂಸ್ಕೃತಿಕ ಧರೋವರ

“ದೇವರ ಅನಂತತೆಯು ನಿಗೂಢವಲ್ಲ, ಇದು ಕೇವಲ ಅಗಾಧವಾಗಿರುತ್ತದೆ; ರಹಸ್ಯವಾಗಿಲ್ಲ, ಆದರೆ ಅಗ್ರಾಹ್ಯವಲ್ಲ; ಇದು ಶುದ್ಧ ಅನಂತತೆ, ಶುದ್ಧ ಶೋಧಿಸಲಾಗದ ಸಮುದ್ರದ ಕತ್ತಲೆಯಾಗಿದೆ” “ಮಾನವನ ಅನಂತ ಮುಖ ಭಾವನೆಗಳ ಪ್ರಬಲ ಪ್ರವಾಹವು ಕಲೆಯ ರೂಪದಲ್ಲಿ ಹೊರಬೀಳುವುದುಇವು ವಿಕ್ಟೋರಿಯನ್ ಯುಗದ ಪ್ರಮುಖ ಇಂಗ್ಲಿಷ್ ಕಲಾ ವಿಮರ್ಶಕ, ಕಲಾ ಪೋಷಕ, ಜಲವರ್ಣಕಾರ ಮತ್ತು ಸಾಮಾಜಿಕ ಚಿಂತಕ ಜಾನ್ ರಸ್ಕಿನ್ರ  ಪ್ರಸಿದ್ಧ ಮಾತುಗಳು.

ಜಾನ್ ರಾಸ್ಕಿನ್’ರ  ಮಾತುಗಳನ್ನು ಅಕ್ಷರಶಃ ಪುಷ್ಟೀಕರಿಸುವ ಕಲಾಕೃತಿಗಳ, ದೇಗುಲಗಳ ಹಾಗೂ ಭವ್ಯ ಸಂಸ್ಕೃತಿಯ ಬೀಡೇ ನಮ್ಮ ಭಾರತ. ನಮ್ಮ ದೇಶದ ಸಾ೦ಸ್ಕೃತಿಕ ಧರೋವರಗಳಾಗಿ ಪಡೆಯಬೇಕಾದ ಪ್ರಾಮುಖ್ಯತೆಯನ್ನು ಪಡೆಯದೇ  ಹೆಚ್ಚು ಬೆಳಕಿಗೆ ಬಾರದೇ ಇರುವ ಅನೇಕ  ಪುರಾತನ ದೇವಾಲಯಗಳ ಪೈಕಿ ಖಿದ್ರಾಪುರದ ‘ಕೊಪೇಶ್ವರ ದೇವಾಲಯ’ವೂ ಒಂದು. ಚಿಕ್ಕೋಡಿಯಿಂದ ೩೫ಕಿ.ಮೀ ಹಾಗೂ ಕೊಲ್ಹಾಪುರದಿಂದ ೭೫ಕಿ.ಮೀ ದೂರದಲ್ಲಿರುವ ಕರ್ನಾಟಕ  ಮಹಾರಾಷ್ಟ್ರ ಗಡಿ ಭಾಗದ ಗ್ರಾಮ ಖಿದ್ರಾಪುರ. ಖಿದ್ರಾಪುರದ ಕೃಷ್ಣಾ ತೀರದಲ್ಲಿ ಬಾದಾಮಿಯ ಚಾಲುಕ್ಯರಿಂದ ೭ನೇ ಶತಮಾನದಲ್ಲಿ ನಿರ್ಮಿತವಾದ ಭವ್ಯ ಕಲಾತ್ಮಕ ಮತ್ತು ಅನನ್ಯ ಮಂದಿರ ಈ ‘ಕೊಪೇಶ್ವರ ದೇವಾಲಯ’.

ಹಿನ್ನೆಲೆ

ಈ ದೇವಲಯಕ್ಕೊಂದು ಪೌರಾಣಿಕ ಹಿನ್ನಲೆ ಉಂಟು. ದಕ್ಷ ರಾಜನ ಮಗಳಾದ ಸತಿ ಭಗವಾನ್ ಶಿವನನ್ನು ವರಿಸುತ್ತಾಳೆ. ಈ ಸತಿಯ ತಂದೆ ದಕ್ಷ ರಾಜನಿಗೆ ಶಿವನನ್ನು ಕಂಡರೆ ಆಗಿ ಬರುತ್ತಿರಲಿಲ್ಲ. ಒಮ್ಮೆ ದಕ್ಷ ತನ್ನ ಆಸ್ಥಾನದಲ್ಲಿ ಯಜ್ಞವೊಂದನ್ನು ಏರ್ಪಡಿಸಿ ಉದ್ದೇಶಪೂರ್ವಕವಾಗಿಯೇ ಶಿವ ಮತ್ತು ಸತಿಯರನ್ನು ಅವ್ಹಾನಿಸಲಿಲ್ಲ. ತವರಿನ ಮಮತೆಯಿಂದ ಕರೆಯದಿದ್ದರೂ ದಕ್ಷನ ಯಜ್ಞಕ್ಕೆ ಸತಿಯು ನಂದಿಯ ಮೇಲೆ ಕುಳಿತು ತವರಿಗೆ ಆಗಮಿಸುತ್ತಾಳೆ. ಆದರೆ ದಕ್ಷ ಸತಿಯ ಮುಂದೆ ಪತಿಯಾದ ಶಿವನನ್ನು ನಿಂದಿಸಿ ಹೀಯಾಳಿಸುತ್ತಾನೆ, ಅವಮಾನ ತಾಳಲಾರದೆ ಸತಿ ಯಜ್ಞ ಕುಂಡಕ್ಕೆ ಹಾರಿ ಆಹುತಿಯಾಗಿ ಬಿಡುತ್ತಾಳೆ. ಕೋಪೋದ್ರಿಕ್ತನಾದ ಶಿವ ಅಲ್ಲಿಗೆ ಆಗಮಿಸಿ  ದಕ್ಷನ  ಶಿರಚ್ಚೆಧಿಸುತ್ತಾನೆ. ಅಲ್ಲಿರುವ ಇತರ ದೇವತೆಗಳು ಶಿವನ ಸಿಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಸ್ಥಳಕ್ಕೆ ಕರೆತರಲಾಗಿ, ಕೃಷ್ಣೆಯ ಒಡಲಲ್ಲಿ  ತನ್ನ ಜಟವನ್ನು (ಕೂದಲು) ಭೂಮಾತೆಯ ಮೇಲೆ ಅಪ್ಪಳಿಸಿ  ಶಿವ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ. ಅದಕ್ಕಾಗಿಯೇ ಈ ದೇವಾಲಯದ ಹೆಸರು ‘ಕೊಪೇಶ್ವರ ದೇವಾಲಯ’. ಶಿವನನ್ನು ಶಾಂತಗೊಳಿಸಿದ ವಿಷ್ಣುವಿನ ವಿಗ್ರಹವನ್ನು `ಧೋಪೆಶ್ವರ’ ಎಂದು ಕರೆದು  ಲಿಂಗದ ರೂಪದಲ್ಲಿ ಇಲ್ಲಿ ಸ್ಥಾಪಿಸಲಾಗಿದೆ. ಕೊಪೇಶ್ವರ ದೇವಾಲಯದಲ್ಲಿ ಲಿಂಗರೂಪದಲ್ಲಿ ವಿಷ್ಣುವಿನ ಇರುವಿಕೆಯ ಕುರಿತು ಇನ್ನೊಂದು ಸ್ವಾರಸ್ಯಕರ ಕಥೆಯಿದೆ. ಕೇವಲ ಶಿವ ಸಂಸ್ಥಾನಗಳಾದ ಕೊಪೇಶ್ವರ ಮತ್ತು ಸುತ್ತಲಿನ ಇನ್ನೆರಡು ಶಿವಲಿಂಗಗಳ ದರ್ಶನ ಪಡೆದ ಭಕ್ತರೆಲ್ಲ ಸ್ವರ್ಗಕ್ಕೆ ಹೋಗುತ್ತಾರೆಂದು ಶಿವನ ವರವಿತ್ತಂತೆ. ಇದರಿಂದ ಸ್ವರ್ಗಕ್ಕೆ ಬರುವರ ಸಂಖ್ಯೆ ಹೆಚ್ಚಾಗಿ ದೇವತೆಗಳನ್ನು ಚಿಂತೆಗೀಡು ಮಾಡಿತ್ತಂತೆ, ಆಗ ದೇವತೆಗಳೆಲ್ಲ ಸೇರಿ ವಿಷ್ಣುವಿನ ಮೊರೆಹೊಕ್ಕು ಶಿವನ ವರದಿಂದ ಉದ್ಭವಿಸಿದ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟರಂತೆ. ಆಗ ವಿಷ್ಣುವು  ಕೊಪೆಶ್ವರ ದೇವಾಲಯಕ್ಕೆ  ಆಗಮಿಸಿ ಧೋಪೆಶ್ವರನಾಗಿ ಲಿಂಗರೂಪದಲ್ಲಿ ಶಿವನ ಪಕ್ಕದಲ್ಲಿ ವಿರಾಜಮಾನನಾಗಿ, ವ್ಯಾವರ್ತವಾಗಿ (exclusively) ಶಿವ ಸಂಸ್ಥಾನವಾಗಿದ್ದ  ‘ಕೊಪೆಶ್ವರ ದೇವಾಲಯ’ವನ್ನು  ವಿಷ್ಣುಸಹಿತವಾದ ಶಿವಾಲಯವಾಗಿಸುತ್ತಾನೆ. ಇದರಿಂದ ಸ್ವರ್ಗಕ್ಕೆ ಬರುವವರ ಸಂಖ್ಯೆ ಕಡಿಮೆಯಾಯಿತಂತೆ!! ಈ ದೇವಸ್ಥಾನದ ಇನ್ನೊಂದು ವಿಶಿಷ್ಟತೆಯೆಂದರೆ  ಇಲ್ಲಿ ಶಿವನ ವಾಹನವಾದ ನ೦ದಿಯ ವಿಗ್ರಹವಿಲ್ಲ! ಬಹುಶಃ ನಂದಿಯಿಲ್ಲದ ಶಿವಾಲಯವನ್ನು ನಾವೆಲ್ಲೂ ನೋಡಿರಲಿಕ್ಕಿಲ್ಲ.

 

ವಿನ್ಯಾಸ

ಕೊಪೇಶ್ವರ ದೇವಾಲಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಇವುಗಳು ಹಜಾರದ  (ಮುಖಮಂಟಪ) ಮೂಲಕ ಅಂತರ್ಸಂಪರ್ಕಿಸಲ್ಪಟ್ಟಿವೆ. ನಾವು ಪ್ರವೇಶಿಸುವ ದೇವಾಲಯದ ಮೊದಲ ವಿನ್ಯಾಸವೇ ಸ್ವರ್ಗ ಮಂಟಪ, ಅದ್ಭುತ ಕೆತ್ತನೆಯುಳ್ಳ  ಕಂಬಗಳಿಂದ ಅಲಂಕೃತ, ವರ್ತುಳಾಕರದಲ್ಲಿ ನಿರ್ಮಿಸಲ್ಪಟ್ಟ  ಆಕಾಶಕ್ಕೆ ತೆರೆದುಕೊಂಡಿರುವ ಮೇಲ್ಛಾವಣಿಯುಳ್ಳ ದೇವಸ್ಥಾನದ ಮುಂಭಾಗದ ಪ್ರಾಂಗಣವೇ ಸ್ವರ್ಗಮಂಟಪ.

ವರ್ತುಲಾಕಾರದ ತೆರೆದ ಮೇಲ್ಛಾವಣಿ  ಪೂರ್ಣಿಮೆಯ ಚಂದ್ರನ ಬಿಂಬದಂತೆ ಗೋಚರಿಸುತ್ತದೆ.ಇಲ್ಲಿ ರಾಜ ತನ್ನ ಮಂತ್ರಿಗಳೊಡನೆ ಹಾಗೂ ಆಸ್ಥಾನ ಪಂಡಿತರೊಡನೆ ಕುಳಿತು ಚರ್ಚಿಸುತ್ತಿದ್ದನಂತೆ.  ಸ್ವರ್ಗ ಮಂಟಪದ ವಾಸ್ತುಶಿಲ್ಪ ವಿಶಿಷ್ಟವಾಗಿದೆ. ಪ್ರತಿಯೊಂದು ಸ್ತಂಭವನ್ನು ಚದರ, ಷಟ್ಕೋನ ಮತ್ತು ಆಕ್ಟಾಗನ್  ಹೀಗೆ ವಿವಿಧ ಆಕಾರಗಳಲ್ಲಿ ಕೆತ್ತಲಾಗಿದೆ. ಶಂಕುವಿನಾಕಾರದ ಗರ್ಭಗುಡಿಯು ವಿಶಿಷ್ಟವಾಗಿದೆ, ಕೋಪೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣು (ಧೋಪೆಶ್ವರ) ಹಾಗೂ ಕೋಪೇಶ್ವರ (ಶಿವ) ಲಿಂಗಗಳಿವೆ. ಗರ್ಭಗುಡಿಯ  ದ್ವಾರದಲ್ಲಿ ಜಯವಿಜಯರ ಸುಂದರ ವಿಗ್ರಹಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಮೈಯಲ್ಲಿ ಆನೆಗಳ ಮೇಲೆ ಆಭೂಷಣ ಹಾಗೂ ಆಯುಧಗಳಿಂದ ವಿಜೃಂಭಿಸುವ ಅನೇಕ ದೇವತೆಗಳ ವಿಗ್ರಹಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಸುಮಾರು ೯೨ ಆನೆಗಳ ವಿಗ್ರಹಗಳನ್ನು ದೇವಸ್ಥಾನದ ಹೊರಮೈಯಲ್ಲಿ ಕೆತ್ತಲಾಗಿದೆ. ಕೆಳಭಾಗದಲ್ಲಿ ಕೆತ್ತಲ್ಪಟ್ಟಿರುವ ಆನೆಗಳು ದೇವಸ್ಥಾನದ ಭಾರ ಹೊತ್ತಿವೆಯೇನೋ ಎಂದು ಭಾಸವಾಗುತ್ತದೆ. ಮಾನವನ ವಿವಿಧ ಭಾವಭಂಗಿಗಳನ್ನು ಶಿಲ್ಪಿಗಳು ತಮ್ಮ ಕಲಾಕೃತಿಯಲ್ಲಿ ಸೆರೆಹಿಡಿದು ಜೀವತುಂಬಿದ ಕೆತ್ತನೆಗಳು ಅದ್ಭುತವಾಗಿವೆ. ಬೇಲೂರು ಹಳೆಬೀಡಿನಂತೆ ಇಲ್ಲಿಯೂ ದರ್ಪಣ ಸುಂದರಿಯನ್ನು, ರಾಮಾಯಣ ಮಹಾಭಾರತದ ವಿವಿಧ ಪ್ರಸಂಗಗಳನ್ನು ಶಿಲ್ಪಕಾರರು ದೇವಾಲಯದ ಸುತ್ತಲೂ ತಮ್ಮ ಕೆತ್ತನೆಗಳಲ್ಲಿ ಬಳಸಿಕೊಂಡಿದ್ದಾರೆ.  ಶಿವನ ಪರಮ ಭಕ್ತನಾದ ಕೀರ್ತಿಸುರ ಎಂಬ್ಬೊಬ್ಬ ರಾಕ್ಷಸನಿಗೆ ಅನಂತ ಹಸಿವಿನ ವರವಿತ್ತ೦ತೆ! ಎಷ್ಟು ತಿಂದರೂ ಮತ್ತಷ್ಟು ಬಕ್ಕರಿಸುವ ಬಕಾಸುರತೆಯಿಂದ ಕೊನೆಗೆ ತನ್ನ ದೇಹವನ್ನೇ ತಿಂದನ೦ತೆ, ಆಗ ಉಳಿದದ್ದು ‘ಕೀರ್ತಿಮುಖ’ವೆಂದು ಕರೆಯಲ್ಪಡುವ ಕೇವಲ ಆತನ ಮುಖ ಮಾತ್ರ. ಶಿವ ತನ್ನ ದೇವಸ್ಥಾನಗಳಲ್ಲಿ ಕೀರ್ತಿಸುರನಿಗೆ ಸ್ಥಾನ ಕಲ್ಪಿಸಿದನಂತೆ. ಈ ಕೀರ್ತಿಸುರನ ಕೀರ್ತಿಮುಖವನ್ನು ಅತ್ಯಂತ ಚಾಕಚಕ್ಯತೆಯಿಂದ ಕೋಪೇಶ್ವರ ದೇವಾಲಯದ ಕೆತ್ತನೆಗಳಲ್ಲಿ ಬಿಂಬಿಸಲಾಗಿದೆ.

ಚಾಲುಕ್ಯರಿಂದ ನಿರ್ಮಿತವಾದ ಈ ದೇವಾಲಯದ ಅನೇಕ ವಿಗ್ರಹಗಳು ಪರಕೀಯರ ದಾಳಿಯಿಂದಾಗಿ ಭಗ್ನವಾಗಿವೆ. ೧೨ನೇ ಶತಮಾನದಲ್ಲಿ ಶಿಲಾಹಾರ ಮತ್ತು ಯಾದವ ಮನೆತನದ ರಾಜರು ಈ ದೇವಾಲಯವನ್ನು ನವೀಕರಣಗೊಳಿಸಿದರೆಂದು ನಂಬಲಾಗಿದೆ. ಅದ್ಭುತ ಶಿಲ್ಪ ಕಲಾಕೃತಿಗಳನ್ನೊಳಗೊಂಡ ಕರ್ನಾಟಕದ ಚಾಲುಕ್ಯರಿಂದ ನಿರ್ಮಿತವಾದ ಮಹಾರಾಷ್ಟ್ರದ ಉತ್ಕೃಷ್ಟ ವಾಸ್ತುಶಿಲ್ಪಗಳಲ್ಲೋ೦ದಾದ  ಖಿದ್ರಾಪುರದ ಕೋಪೇಶ್ವರ ದೇವಾಲಯ ಒಮ್ಮೆ ನೋಡಲೇಬೇಕಾದ ಸ್ಥಳ.              

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!