Featured ಅಂಕಣ

ಪಾಠ ಕಲಿಯಲು ಎಷ್ಟು ಪದ್ಮಾವತಿಯರು ಸಾಯಬೇಕು?

ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’, ಚಿತ್ರದ ಸುತ್ತ ಅನವಶ್ಯಕ ವಿವಾದಗಳು ಸುತ್ತಿಕೊಂಡಿದೆ. ಚಿತ್ರದಲ್ಲಿನ  ಚರ್ಚೆಯಾಗಬೇಕಿರುವ ವಿಷಯವೇ ಬೇರೆ. ನಡೆಯುತ್ತಿರುವ ವಿವಾದವೇ ಬೇರೆ. ಇತಿಹಾಸಕ್ಕೆ ಚ್ಯುತಿ ಬಾರದಿರಲಿ ಎಂಬ ಕಾರಣದಿಂದ ಇತಿಹಾಸ ತಜ್ಞರಾದ ಸತ್ಯೋಜಾತ ಭಟ್ಟರವರು ಫೇಸ್’ಬುಕ್’ನಲ್ಲಿ ಹಂಚಿಕೊಂಡ ನಿಜವಾದ ಇತಿಹಾಸದ ಘಟನೆಯನ್ನು ಅವರ ಭಾಷೆಯಲ್ಲಿಯೇ ಹಂಚಿಕೊಳ್ಳುತ್ತಿದ್ದೇನೆ:

“ಸುಮಾರು 1296-1316 ರವರೆಗೆ ದೆಹಲಿಯನ್ನಾಳಿದ ಅಸಹನೀಯ ಕ್ರೂರಿ ಅಲ್ಲಾವುದ್ದೀನ್ ಖಿಲ್ಜಿ. ಜಲಾಲುದ್ದೀನ್ ಖಿಲ್ಜಿಯ ಅಳಿಯ ಮತ್ತು ಆತನ ಉತ್ತರಾಧಿಕಾರಿ. ಈತ ದೆಹಲಿ ಸುಲ್ತಾನರಲ್ಲೆಲ್ಲ ಅತಿ ಕ್ರೂರಿ ಮತ್ತು ಮತಾಂಧ, ಕಾಮಾಂಧನಾಗಿದ್ದ. ಭಾರತದಲ್ಲಿ ವಿಶಾಲ ಮಹಮ್ಮದೀಯ ಸಾಮ್ರಾಜ್ಯವನ್ನು ಸ್ಥಾಪಿಸಲೆತ್ನಿಸಿದವರಲ್ಲಿ ಮೊದಲಿಗ. ದಕ್ಷಿಣದ ಹಿಂದೂರಾಜ್ಯಗಳ ಮೇಲೆ ಮೊಟ್ಟಮೊದಲು ಮಹಮ್ಮದೀಯರ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದ ಎಂದು ತಿಳಿದು ಬರುತ್ತದೆ. ಇವನ ಇಪ್ಪತ್ತು ವರ್ಷಗಳ ಆಳ್ವಿಕೆ ಭಯೋತ್ಪಾದನೆಯ ರಕ್ತಪಾತದ ಕಾಲವಾಗಿತ್ತು. ಮಹಾತ್ವಾಕಾಂಕ್ಷಿಯಾದ ಅಲ್ಲಾವುದ್ದೀನನಿಗೆ ಒಂದು ಹೊಸ ಮತವನ್ನು ಸ್ಥಾಪಿಸಬೇಕೆಂಬ ಹಾಗೂ ಅಲೆಕ್ಸಾಂಡರನಂತೆ ಪ್ರಪಂಚವನ್ನೇ ಗೆಲ್ಲಬೇಕೆಂಬ ಆಕಾಂಕ್ಷೆಗಳು ಹುಟ್ಟಿದವು. ಆಗ ಅಲ್ಲಾ ಉಲ್ ಮುಲ್ಕ್ ಎಂಬ ತನ್ನ ಆಪ್ತ ಖಾಜಿಯು ಕೆಟ್ಟ ಸಲಹೆಯಂತೆ ಈ ಎರಡು ಅಭಿಲಾಷೆಗಳನ್ನೂ ಕೈಬಿಟ್ಟು ಹಿಂದೂಸ್ಥಾನವನ್ನೆಲ್ಲ ಜಯಿಸಲು ಉದ್ಯುಕ್ತನಾದ. 1305ರ ವೇಳೆಗೆ ಇಡೀ ಉತ್ತರ ಹಿಂದೂಸ್ಥಾನದಲ್ಲಿ ಖಿಲ್ಜಿ ಸಾಮ್ರಾಜ್ಯ ಏರ್ಪಟ್ಟಿತು. ಅನಂತರ ಅಲ್ಲಾವುದ್ದೀನ್ ರಾಜಕೀಯ ಮತ್ತು ಆರ್ಥಿಕ ಲೋಭದಿಂದ ದಕ್ಷಿಣದ ಕಡೆಗೆ ತನ್ನ ಗಮನ ಹರಿಸಿದ. ದಕ್ಷಿಣ ರಾಜ್ಯಗಳ ಆಕ್ರಮಣಕ್ಕೆ ತನ್ನ ಆಪ್ತ ಗುಲಾಮನಾದ ಮಲಿಕ್ ಕಾಫರ್ನನ್ನು ನೇಮಿಸಿದ. ಈತ ತನ್ನ ಮೊದಲ ದಾಳಿಯಲ್ಲಿ ರಾಜ ರಾಮಚಂದ್ರನ ದೇವಗಿರಿಯನ್ನು ಮುತ್ತಿ ಕೊಳ್ಳೆಹೊಡೆದ. ನಂತರದ ದಂಡಯಾತ್ರೆಯಲ್ಲಿ ವಾರಂಗಲ್ಲಿನ ಪ್ರತಾಪರುದ್ರನನ್ನು ಸೋಲಿಸಿದ. 1313ರಲ್ಲಿ ಹೊಯ್ಸಳ 3ನೆಯ ವೀರಬಲ್ಲಾಳನನ್ನು ಸೋಲಿಸಿ ದೋರಸಮುದ್ರವನ್ನು ಕೊಳ್ಳೆ ಹೊಡೆದ. ಮಧುರೆ ಹಾಗೂ ರಾಮೇಶ್ವರದವರೆಗೂ ದಂಡೆತ್ತಿ ಹೋಗಿ ಪಾಂಡ್ಯರನ್ನು ಸೋಲಿಸಿ ವಿಶೇಷವಾದ ಐಶ್ವರ್ಯವನ್ನು ದೋಚಿದ. ಈ ದಂಡಯಾತ್ರೆಗಳಿಂದ ಅದೆಷ್ಟೋ ಮಂದಿ ಮಡಿದರು, ಅನೇಕ ಪಟ್ಟಣಗಳು ಹಾಗೂ ದೇವಾಲಯಗಳು ನಾಶವಾದವು. ಅಪಾರ ಸಂಪತ್ತು ಸುಲ್ತಾನನ ವಶವಾಯಿತು. ಹಿಂದೂಗಳು ದಂಗೆಯೇಳಬಹುದೆಂಬ ಭೀತಿಯಿಂದ ಅವರ ಮೇಲೆ ಇಲ್ಲ ಸಲ್ಲದ ಅಪಾದನೆ ಹೊರಿಸಿ ಹಿಂಸಿಸಿದ. ಅಲ್ಲದೇ ತೆರಲಸಾಧ್ಯವಾದ ತೆರಿಗೆಗಳನ್ನು ವಿಧಿಸಿದ. ಮಹಮ್ಮದೀಯರಲ್ಲಿಯೇ ಆಡಳಿತದ ವಿರುದ್ಧ ಅಸಮಾಧಾನವೂ ಹಿಂದೂಗಳಲ್ಲಿ ಕಡು ಬಡತನ ಮತ್ತು ಅಸಹಾಯಕತೆಯ ನೋವು ಅಂದಿನ ಸಾಮಾಜಿಕ ಸ್ಥಿತಿಯ ನೈಜ ಪ್ರತಿಬಿಂಬಗಳಾಗಿದ್ದುವು. ಕ್ರೂರಿಯಾದ ಅಲ್ಲಾವುದ್ದೀನನ ಅಂತ್ಯ ದುಃಖಮಯವಾಗಿತ್ತು. ಅತಿಭೋಗದಿಂದ ಅವನ ಆರೋಗ್ಯ ಕೆಟ್ಟಿತ್ತು. ಸಲಿಂಗ ಕಾಮಿಯಾದ ಅಲ್ಲಾವುದ್ದೀನ ಇಹದಲ್ಲಿಯೇ ನರಕವನ್ನನುಭವಿಸಿದ. ಅರಮನೆಯಲ್ಲಿಯೇ ಆಂತರಿಕ ಕಲಹಗಳು ಉದ್ಭವಿಸಿ ದಂಗೆಗಳಾದವು. ಕೊನೆಗೆ ಮಲಿಕ್ ಕಾಫರ್ ಅಲ್ಲಾವುದ್ದೀನನನ್ನು ಕೊಲೆ ಮಾಡಿ ಸಿಂಹಾಸನವೇರಿದ. ಆದರೆ ಒಂದು ತಿಂಗಳಲ್ಲೇ ಕಾಫರನ ಕೊಲೆಯಾಗಿ ಅಲ್ಲಾವುದ್ದೀನನ ಮಗ ಕುತುಬ್ ಉದ್ದೀನ್ 1316ರಲ್ಲಿ ಸುಲ್ತಾನನಾದ.

ಸಿಂಹಳದ ರಾಜಾ ಗಂಧರ್ವಸೇನನಿಗೆ ಮಗಳಾಗಿದ್ದವಳು ಪದ್ಮಿನಿ. ಅವಳನ್ನು ಪದ್ಮಾವತಿ ಎಂದೂ ಕರೆಯುತ್ತಿದ್ದರು. ಅತಿಶಯ ಸೌಂದರ್ಯದ ಖನಿ. ಆಕೆಯ ಸೌಂದರ್ಯದ ವರ್ಣನೆ ಪ್ರಪಂಚದೆಲ್ಲೆಡೆ ಪ್ರಚಾರದಲ್ಲಿತ್ತು. ಪದ್ಮಾವತಿಯ ಹತ್ತಿರ ‘ಹಿರಾಮಣಿ’ ಎನ್ನುವ ಮಾತನಾಡುವ ಗಿಳಿಯಿತ್ತಂತೆ. ಒಮ್ಮೆ ಬೇಟೆಗಾರನೊಬ್ಬನ ಬಲೆಗೆ ಬಿದ್ದ ಗಿಳಿ ಹೇಗೋ ಮೇದಾಪತ್ ಅಥವಾ ಮೇವಾಡದ ರತ್ನಸಿಂಹನೆನ್ನುವ ರಾಜನ ಬಳಿ ಬಂದು ಸೇರಿತು. ರಾವಲ್ ಶಾಖೆಯ ಗುಹಿಲ ವಂಶದ ಚಿತ್ರಕೂಟವನ್ನಾಳಿದ ಅರಸು. ಇವನಿಗೆ ಈಗಾಗಲೆ ನಾಗಮತಿ ಎನ್ನುವ ರಾಜಕುಮಾರಿಯೊಡನೆ ಮದುವೆಯಾಗಿತ್ತು. ಗಿಳಿಯ ಬಾಯಿಂದ ಕೇಳಿದ ಪದ್ಮಾವತಿಯ ಸೌಂದರ್ಯದ ಕುರಿತಾದ ಸ್ತುತಿಗೆ ಮಾರುಹೋದ ರತ್ನಸಿಂಹ ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ತನ್ನ ಹದಿನಾರು ಸಾವಿರ ಸೈನಿಕರೊಡನೆ ಸಮುದ್ರದಾಟಿ ವೇಷಾಂತರದಿಂದ ಸಿಂಹಳಕ್ಕೆ ಬಂದ ರತ್ನಸಿಂಹ ಪದ್ಮಾವತಿಯ ಭೇಟಿಗಾಗಿ ಅದೆಷ್ಟೋ ದಿನ ಕಾಯುತ್ತಾನೆ. ಅವಳ ಭೇಟಿಯಾಗದೇ ಹತಾಶನಾಗಿದ್ದ. ಆಗ ಒಂದು ದಿನ ಅವನ ಕನಸಿನಲ್ಲಿ ಶಿವಪಾರ್ವತಿಯರು ಕಾಣಿಸಿಕೊಂಡು “ಸಿಂಹಳವನ್ನು ಯುದ್ಧದಲ್ಲಿ ಗೆದ್ದು ಪದ್ಮಾವತಿಯನ್ನು ತನ್ನವಳಾಗಿಸಿ”ಕೊಳ್ಳುವಂತೆ ಸಂದೇಶ ಕೊಟ್ಟರಂತೆ. ಯುದ್ಧದಲ್ಲಿ ಸಿಂಹಳದ ದೊರೆ ಗಂಧರ್ವಸೇನನಿಗೆ ರತ್ನಸಿಂಹನ ಪರಾಕ್ರಮದ ಅರಿವಾಯ್ತು. ಅಂಥ ವೀರನ ಮನೆಗೆ ತನ್ನ ಮಗಳು ಸೇರುವುದು ಭಾಗ್ಯವೆಂದುಕೊಂಡು ಸಂತೋಷದಿಂದ ಪದ್ಮಾವತಿಯನ್ನು ಧಾರೆಯೆರೆದುಕೊಟ್ಟ. ಮಾತ್ರವಲ್ಲ ಅವಳ ಹದಿನಾರು ಸಾವಿರ ಗೆಳತಿಯರನ್ನು ರತ್ನಸಿಂಹನ ಜೊತೆ ಬಂದ ಸೈನಿಕರ ಜೊತೆ ಮದುವೆ ಮಾಡಿಸಿದ. ಮೇವಾಡಕ್ಕೆ ತಿರುಗಿ ಬಂದ ರತ್ನಸಿಂಹ ತನ್ನಿಬ್ಬರು ರಾಣಿಯರಾದ ನಾಗಮತಿ ಹಾಗೂ ಪದ್ಮಾವತಿಯರೊಡನೆ ಸುಖವಾಗಿ ಸಂಸಾರ ಮಾಡಿದ.

ಮೇವಾಡದ ರತ್ನಸಿಂಹನ ಆಸ್ಥಾನದಲ್ಲಿ ರಾಘವ ಚೈತನ್ಯನೆಂಬ ಮಂತ್ರವಾದಿಯೊಬ್ಬ ಇದ್ದ. ಒಮ್ಮೆ ಅದ್ಯಾಕೋ ವಾಮಾಚಾರದಲ್ಲಿ ಪಾಲ್ಗೊಂಡ ರಾಘವಚೈತನ್ಯನನ್ನು ರತ್ನಸಿಂಹ ಗಡಿಪಾರು ಮಾಡುತ್ತಾನೆ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ರಾಘವಚೈತನ್ಯ ನೇರವಾಗಿ ದೆಹಲಿಗೆ ತೆರಳಿ ಅಲ್ಲಾವುದ್ದೀನ್ ಖಿಲ್ಜಿಯ ಸ್ನೇಹ ಸಂಪಾದಿಸುತ್ತಾನೆ. ಶತ್ರುವಿನ ಶತ್ರು ಮಿತ್ರನಾಗುತ್ತಾನೆ. ರಾಣಿ ಪದ್ಮಾವತಿಯ ಸೌಂದರ್ಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ಎದುರು ಹೊಗಳಿ ಮೇವಾಡವನ್ನು ಮುತ್ತಿ ಪದ್ಮಿನಿಯನ್ನು ವಶಪಡಿಸಿಕೊಳ್ಳುವಂತೆ ಕಿವಿಯೂದುತ್ತಾನೆ. ಖಿಲ್ಜಿ ಮೊದಲೇ ಕಾಮುಕವ್ಯಾಘ್ರ. ಖಿಲ್ಜಿಗೆ ಹೆಣ್ಣು ಮತ್ತು ಗಂಡುಗಳ ವ್ಯತ್ಯಾಸವೇ ಗೊತ್ತಿರಲಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಸೇರಿ ಅವನ ಅಖಾಡಾದಲ್ಲಿದ್ದವರು ಕಡಿಮೆ ಅಂದರೂ ಎಪ್ಪತ್ತು ಸಾವಿರ ಮಂದಿ. ಅದರಲ್ಲೂ ಅವನಿಗೆ ಅತ್ಯಂತ ಪ್ರೀತಿಪಾತ್ರಳಾದವಳು, ಛೀ…. ಆದವನು ಚಾಂದರಾಮ. ಗುಜರಾತಿನ ಬಚ್ಚಾ ಬಾಝಿ ಮಾರ್ಕೇಟಿನಲ್ಲಿ ಚಾಂದರಾಮನನ್ನು ನೋಡಿದ ಕೂಡಲೆ ಖಿಲ್ಜಿಗೆ ಪ್ರೇಮಂಕುರವಾಗುತ್ತದೆ. (ಬಚ್ಚಾಬಾಝಿ ಎಂಬುದು ಅಫ್ಘಾನಿಸ್ತಾನದಿಂದ ಭಾರತದ ಒಳಪ್ರವೇಶಿಸಿದ್ದು. ದಾಳಿಕಾರರು ತಮ್ಮ ದಾಹ ತೀರಿಸಿಕೊಳ್ಳಲು ಪುರುಷ ನರ್ತಕರು ಹಾಗೂ ಗಂಡುಮಕ್ಕಳನ್ನು ಸ್ತ್ರೀವೇಷ ತೊಡಿಸಿ ತಮ್ಮೊಡನೆ ಕರೆತರುತ್ತಿದ್ದರು. ಇದು ಮುಂದೆ ಮುಘಲರ ಕಾಲದಲ್ಲಿ ದೊಡ್ಡ ದಂಧೆಯಾಗಿಯೇ ಬೆಳೆಯಿತು. ಈಗಲೂ ಸಹ ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಪರಿವರ್ತನೆ ಮಾಡಿಕೊಂಡು ನೇಮಿಸಿಕೊಳ್ಳುವ ಪದ್ಧತಿ ಅಪಘಾನಿಸ್ಥಾನದಂತಹ ಪ್ರದೇಶದಲ್ಲಿದೆ). ಚಾಂದರಾಮ್’ನನ್ನು ಸಾವಿರ ವರಹಗಳನ್ನು ಕೊಟ್ಟು ಖರೀದಿಸಿದ್ದರಿಂದ ಇವನಿಗೆ “ಹಜಾರಿ ದಿನಾರಿ” ಎಂಬ ಹೆಸರು ಅಂಟಿಕೊಂಡಿತು. ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿದ ಖಿಲ್ಜಿ ಅವನನ್ನು ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾವುದ್ದೀನನಿಗೆ ಪ್ರೀತಿ ಎಷ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್.

ಅಲ್ಲಾದ್ದೀನ್ ಖಿಲ್ಜಿಗೆ ಪದ್ಮಿನಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂದು ಮೇವಾಡದ ರಾಜ ರತ್ನಸಿಂಹನಿಗೆ ಸಂದೇಶ ಕಳುಹಿಸಿದ. ರತ್ನಸಿಂಹನಿಗೆ ಈಗ ನಿಜವಾಗಲೂ ಸಂದಿಗ್ಧ. ದೆಹಲಿಯ ಸುಲ್ತಾನನಿಗೆ ಹೆಂಡತಿಯನ್ನು ತೋರಿಸುವುದಕ್ಕೆ ಒಪ್ಪಿಕೊಳ್ಳುವುದು ಹೇಗೆ? ಒಪ್ಪಿಕೊಳ್ಳದಿದ್ದರೆ ಸುಲ್ತಾನ ಸುಮ್ಮನೇ ಬಿಟ್ಟಾನಾ? ಹೀಗೆ ಚಿಂತಾಕ್ರಾಂತನಾದ. ಕೊನೆಗೆ ಒಂದು ಉಪಾಯ ಮಾಡಿದ ಕೊನೆಗೆ ಕನ್ನಡಿಯಲ್ಲಿ ಅವಳ ಮುಖ ತೋರಿಸಲು ಒಪ್ಪಿರುವುದಾಗಿ ತಿಳಿಸಿದ. ಉತ್ತರ ಸ್ವೀಕರಿಸಿದವನೇ ಖಿಲ್ಜಿಯು ಮೇವಾಡಕ್ಕೆ ಬಂದ. ಅಲ್ಲಿ ಕನ್ನಡಿಯಲ್ಲಿ ಪದ್ಮಿನಿಯ ಮುಖ ನೋಡಿದವನೇ ಹೌಹಾರಿಬಿದ್ದ. ತನ್ನ ಜನಾನಾದಲ್ಲಿದ್ದ ಎಲ್ಲರನ್ನು ಒಟ್ಟು ಸೇರಿಸಿದರೂ ಇವಳಂಥ ಒಬ್ಬ ಸುಂದರಿ ಹುಟ್ಟಲಾರಳೆಂದು ಅವನಿಗೆ ಮನವರಿಕೆಯಾಯ್ತು. ಹೇಗಾದರೂ ಮಾಡಿ ಪದ್ಮಿನಿಯನ್ನು, ಮೇವಾಡವನ್ನು ವಶಪಡಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದವನೇ ರತ್ನಸಿಂಹನನ್ನು ಹೊಗಳಿ ದೆಹಲಿಗೆ ಮರುಪ್ರಯಾಣ ಬೆಳೆಸುವುದಾಗಿ ತಿಳಿಸಿದ. ರಾಜಮರ್ಯಾದೆಯಂತೆ ಅವನನ್ನು ಕೋಟೆಯ ದ್ವಾರದವರೆಗೆ ಬೀಳ್ಕೊಡಲು ಬಂದ ರತ್ನಸಿಂಹನನ್ನು ಮೊದಲೇ ತಯಾರಿದ್ದ ಖಿಲ್ಜಿಯ ಸೈನಿಕರು ಮುಗಿಬಿದ್ದು ಬಂಧಿಸಿದರು. ಇನ್ನು ಹತ್ತು ದಿನಗಳಲ್ಲಿ ಪದ್ಮಿನಿ ತನ್ನವಳಾಗದಿದ್ದರೆ ರತ್ನಸಿಂಹ ತಲೆ ಕಡಿದು ಕಳುಹಿಸುವುದಾಗಿ ಖಿಲ್ಜಿ ಬೆದರಿಕೆ ಹಾಕಿದ.

ಇತ್ತ ಪದ್ಮಿನಿ ಮೇವಾಡದ ಸೇನಾಪತಿ ಗೋರಾನ ಜೊತೆ ಒಂದು ತಂತ್ರ ರಚಿಸಿದಳು. ಸೈನಿಕ ಪಹರೆ ಇಲ್ಲದೆ ತನ್ನ ಪತಿಯನ್ನು ಸಂಧಿಸಲು ಅವಕಾಶ ನೀಡಿದರೆ ತಾನು ತನ್ನ ಏಳುನೂರು ಸಖಿಯರೊಡನೆ ದಿಲ್ಲಿಗೆ ಬಂದು ನಿನ್ನವಳಾಗುವುದಾಗಿ ತಿಳಿಸಿದಳು. ಒಬ್ಬಳ ಜೊತೆ ಇನ್ನೂ ಏಳುನೂರು ಸಿಕ್ಕರೆ ಲಾಭವೇ ತಾನೆ ಎಂದು ಖಿಲ್ಜಿ ಮರು ಮಾತಾಡದೇ ಒಪ್ಪಿಕೊಂಡ.

ಆದರೆ ನಡೆದಿದ್ದೇ ಬೇರೆ. ಏಳುನೂರು ಪಲ್ಲಕಿಗಳಲ್ಲಿ ಪ್ರತಿ ಪಲ್ಲಕ್ಕಿಯಲ್ಲೂ ವೇಷ ಮರೆಸಿಕೊಂಡ ಸಶಸ್ತ್ರ ಸೈನಿಕರು ಜೊತೆಗೆ ನಾಲ್ಕು ಹೊರುವವರು ಒಟ್ಟೂ ಮೂರೂವರೆ ಸಾವಿರ ಮಂದಿ ಗೋರಾಬಾದಲರ ನೇತೃತ್ವದಲ್ಲಿ ದಿಲ್ಲಿ ತಲುಪಿದರು. ಕೊಟ್ಟ ಮಾತಿನಂತೆ ಖಿಲ್ಜಿ ಪಲ್ಲಕ್ಕಿಯಲ್ಲಿದ್ದ ಪದ್ಮಿನಿಗೆ ರತ್ನಸಿಂಹನನ್ನು ಭೇಟಿಯಾಗಲು ಅವಕಾಶ ಕೊಟ್ಟ. ಆದರೆ ಪಲ್ಲಕಿಯಲ್ಲಿ ಅವಳಿದ್ದರೆ ತಾನೆ? ಸೈನಿಕರು ರಾಣನನ್ನು ಸೆರೆಯಿಂದ ಬಿಡಿಸಿ ಮೇವಾಡದತ್ತ ಕರೆದೊಯ್ದರು. ಸುದ್ದಿ ಖಿಲ್ಜಿಯ ದಂಡನಾಯಕ ಜಾಫರನಿಗೆ ತಲುಪಿತು. ಆತ ಸೈನ್ಯ ಸಜ್ಜುಗೊಳಿಸಿ ರತ್ನಸಿಂಹನ ಬೆನ್ನಟ್ಟಿದ್ದ. ಆದರೆ ಅವರ ಎದುರಾದದ್ದು ರಾಜಸ್ಥಾನ ಕಂಡ ಎರಡು ಅಪ್ರತಿಮ ವೀರಮಣಿಗಳಾದ ಗೋರಾಬಾದಲರು.

ಗೋರಾಬಾದಲರ ಶೌರ್ಯದೆದುರು ಖಿಲ್ಜಿಯ ಖಡ್ಗಗಳು ಕತ್ತರಿಸಿ ಬಿದ್ದವು. ಅವರನ್ನು ತಡೆವರಿಲ್ಲದೆ ದೆಹಲಿಯ ಕೋಟೆಗಳು ತತ್ತರಿಸಿ ಬಿದ್ದವು. ಲಕ್ಷ ಲಕ್ಷ ಸೈನಿಕರು ಗೋರಾಬಾದಲರ ಕತ್ತಿಗೆ ಸಿಕ್ಕು ತರಿದು ಹೋದರು. ಎದುರಿಂದ ಗೆಲ್ಲಲಾಗದೇ ಹಿಂದಿನಿಂದ ಗೋರಾನ ಕಾಲಿಗೆ ಕತ್ತಿ ಬೀಸಿದನಂತೆ ಜಾಫರ್. ಕೆಳಗೆ ಬಿದ್ದವನ ಕುತ್ತಿಗೆಗೆ ಪ್ರಹಾರ ಮಾಡಿದ.  ಕುತ್ತಿಗೆಯಿಲ್ಲದ ಗೋರಾನ ದೇಹ ವೈರಿಗಳ ಮೇಲೆ ಮುಗಿಬಿತ್ತಂತೆ. ಮುಂದಿನ ಹೊಡೆತಕ್ಕೆ ಜಾಫರ ನಿರ್ಜೀವನಾಗಿದ್ದ.

ಚಿಕ್ಕಪ್ಪ ಗೋರಾನ ದೇಹ ಆರೀತಿ ಹೋರಾಡುವುದನ್ನು ನೋಡಿ ಬಾದಲ್ ತಾನೇನು ಕಡಿಮೆ ಎಂದು ಮಹಾರುದ್ರನಂತೆ ದೆಹಲಿಯ ಸೈನಿಕರ ಮೇಲೆರಗಿದ. ಪ್ರಳಯಭಯಂಕರ ಜ್ವಾಲಾಮುಖಿ ಬಾಯ್ದೆರೆದಂತೆ, ಭೀಕರ ಚಂಡಮಾರುತ ಅಪ್ಪಳಿಸಿದಂತೆ ಬಾದಲ್ ದೆಹಲಿಯ ಸೈನಿಕರ ಮೇಲೆ ಮುಗಿಬಿದ್ದ. ಹೊಟ್ಟೆ ಬಗೆದು ಕರುಳು ಹೊರ ಬಂದಿದ್ದರೂ ತನ್ನ ಪಗಡಿಯನ್ನು ಬಿಚ್ಚಿ ಹೊಟ್ಟೆಗೆ ಕಟ್ಟಿ ಹೋರಾಡುತ್ತಿದ್ದಾನೆ ಬಾದಲ್.

ಆದರೆ……

ಕೊನೆಗೂ ಆಗುವುದೇ ಆಯಿತು. ತಮ್ಮ ಕಣಕಣದ ರಕ್ತವನ್ನೂ ಯುದ್ಧಭೂಮಿಯಲ್ಲಿ ಬಿತ್ತಿದ ಗೋರಾಬಾದಲರು ಭಾರತಮಾತೆಯ ಮಣ್ಣಿನಲ್ಲಿ ಒಂದಾಗಿ ಹೋದರು. ಅತ್ತ ರತ್ನಸಿಂಹ ಸುರಕ್ಷಿತವಾಗಿ ಮೇವಾಡ ತಲುಪಿದ್ದ.

ಈ ಸೋಲಿನ ಅವಮಾನದಿಂದ ಚೇತರಿಸಿಕೊಳ್ಳುವುದು ಅಲ್ಲಾವುದ್ದೀನನಿಗೆ ಬಹಳ ಕಷ್ಟವಾಯಿತು. ಮುಂದಿನ ವರ್ಷ ಆತ ಭಾರೀ ಸೈನ್ಯದೊಡನೆ ಚಿತ್ತೂರಿಗೆ ಬಂದು ಘನಘೋರವಾದ ಧಾಳಿ ಮಾಡಿದ. ಇತರೇ ರಜಪೂತರ ಸಹಾಯ ಪಡೆಯಲು ರತ್ನಸಿಂಹ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಿತ್ತೂರು ಏಳು ತಿಂಗಳುಗಳ ಕಾಲ ಏಕಾಂಗಿಯಾಗಿ ಹೋರಾಡಬೇಕಾಯಿತು. ಕೋಟೆಯಲ್ಲಿದ್ದ ಆಹಾರದ ದಾಸ್ತಾನು ಖಾಲಿಯಾಗಿತ್ತು. ಇನ್ನು ಉಳಿಯುವುದು ಕಷ್ಟವೆಂದು ಕಂಡುಬಂದಾಗ ರತ್ನಸಿಂಹ ಮತ್ತವನ ಸೈನಿಕರು ಕೋಟೆಯ ಬಾಗಿಲನ್ನು ತೆರೆದು, ಸುಲ್ತಾನನ ಸೈನ್ಯದ ಮೇಲೆ ಬಿದ್ದು ಪ್ರಾಣವಿರುವವರೆಗೂ ಹೋರಾಡಿ ಹುತಾತ್ಮರಾದರು.

ಇತ್ತ ಚಿತ್ರಕೂಟ(ಚಿತ್ತೋರ್‌ಗಢ್) ಕೋಟೆಯೊಳಗೆ ಪದ್ಮಿನಿ ಮತ್ತವಳ ಸಖಿಯರು ವಿಶಾಲವಾದ ಅಗ್ನಿಕುಂಡವನ್ನು ಸಿದ್ಧಪಡಿಸಿ ಅದರಲ್ಲಿ ಧುಮುಕಿ ಜೋಹರ್ ಆಚರಿಸಿದರು.ಕೋಟೆ ಗೆದ್ದ ವಿಜಯೋತ್ಸಾಹದಲ್ಲಿ ಒಳಬಂದ ಖಿಲ್ಜಿಗೆ ಕಂಡಿದ್ದು ಬೂದಿಗಳ ರಾಶಿಯಷ್ಟೆ. ತಮ್ಮ ಆತ್ಮಬಲ, ಧರ್ಮಬಲಗಳ ಅಪ್ರತಿಮ ಉಪಮೆಯಾಗಿ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿ ಹೋದಳು.

ಮೇವಾಡದ ಚಿತ್ತೋರ್‌ಗಢ್ ಕೋಟೆ ಮೂರು ಬಾರಿ ಜೋಹರ್ ಅನ್ನು ಕಂಡಿದೆ. ಖಿಲ್ಜಿಯ ಆಕ್ರಮಣವಾದಾಗ ಪದ್ಮಿನಿಯು ಆತ್ಮಾರ್ಪಣೆ ಮಾಡಿಕೊಂಡದ್ದು ಮೊದಲ ಬಾರಿ. ರಾಣಾ ಸಂಗನ ಕಾಲದಲ್ಲಿ ಬಹದೂರ್ ಷಾ ಜಾಫರನ ಆಕ್ರಮಣವಾದಾಗ ರಾಣಿ ಕರ್ಣಾವತಿಯದ್ದು ಎರಡನೇ ಬಾರಿ ಹಾಗೂ ರಾಣಾ ಉದಯ ಸಿಂಗನು ಅಕ್ಬರನೆದುರು ಸೋತಾಗ ಮೂರನೇ ಬಾರಿ .

ಇದು ನಿಜವಾದ ಇತಿಹಾಸ. ಪದ್ಮಾವತ್ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿಯವರು ಇತಿಹಾಸಕ್ಕೆ ಹೆಚ್ಚಿನ ಧಕ್ಕೆ ಬಾರದಂತೆ ಚಿತ್ರೀಕರಿಸಿದ್ದಾರೆ. ವ್ಯಾಪಾರ ದೃಷ್ಟಿಯಲ್ಲಿ ಹಾಡು ನೃತ್ಯಗಳು ಮತ್ತು ಭಾವೋದ್ವೇಗ ನಾಟಕೀಯ ದೃಶ್ಯಗಳನ್ನು ಹೊರತುಪಡಿಸಿದರೆ, ಗಂಭೀರ ವಿಷಯಗಳಿಂದ  ಹಳಿ ತಪ್ಪದಂತೆ ನೋಡಿಕೊಳ್ಳಲಾಗಿದೆ. ಅಳ್ಳುವುದ್ದಿನ್ ಖಿಲ್ಜಿ ಮತ್ತು ಪದ್ಮಾವತಿಯರು ಯಾವುದೇ ದೃಶ್ಯದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ ಮತ್ತು ಅವರ ನಡುವೆ ಸಂಭಾಷಣೆಗಳು ಇಲ್ಲ. ರಜಪೂತರನ್ನು ಕಪಟ ಮೋಸಗಳಿಲ್ಲದ ಆದರ್ಶ ವ್ಯಕಿಗಳನ್ನಾಗಿ ತೋರಿಸಾಗಿದೆ. ಆದರೂ ಕರ್ಣಿ ಸೇನಾ ಸಂಘವರು ಸಂಜಯ ಲೀಲಾ ಬನ್ಸಾಲಿಯವರ ಮೇಲೆ ಹಲ್ಲೆ ನಡೆಸಿದ್ದೇಕೆ, ಗಲಭೆ ಮೂಲಕ ಸಾರ್ವಜನಿಕ ಅಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದ್ದೇಕೆ ಎಂದು ಅರ್ಥವಾಗುವುದಿಲ್ಲ. ಕಾರಣವಿಲ್ಲದೆ ಕರ್ಣಿ ಸೇನಾ ಸಂಘದವರು ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ, ರಜಪೂತರೇ ತಲೆತಗ್ಗಿಸುವಂತಿದೆ. ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳಲ್ಲೇ ಗಲಭೆಯಾಗುತ್ತಿರುವುದನ್ನು ಗಮನಿಸಿದರೆ, ಇದು ಬಿಜೆಪಿಯನ್ನು ಹಳಿಯಲು ಮಾಡಿರುವ ರಾಜಕೀಯ ತಂತ್ರವೇ  ಎಂಬ ಅನುಮಾನ ಮೂಡಿಬರುತ್ತದೆ. ಇಂತಹ ಅರ್ಥವಿಲ್ಲದ  ಗಲಭೆಯನ್ನು, ಬಿಜೆಪಿ ಸರಕಾರಗಳು ಉಕ್ಕಿನ ಕೈನಿಂದ ನಿಯಂತ್ರಸಿದ್ದರೆ, ಪಕ್ಷಕ್ಕೂ ಮತ್ತು  ಹಿಂದು ಸಂಘಟನೆಗಳಿಗೆ ಮುಜುಗರವಾಗುವುದನ್ನು ತಪ್ಪಿಸಬಹುದಿತ್ತು ಎಂದು ಅನಿಸದೇ ಇರದು . ಇಂತಹ ಗಲಭೆಗಳು ಮತ್ತು ಪ್ರತಿಭಟನೆಗಳು,  ಹಿಂದೂ ಸಂಸೃತಿಯನ್ನು ಪ್ರತಿನಿಧಿಸುವುದಿಲ್ಲ ಎಂಬ ಸಂದೇಶ ಕೊಡಲೇಬೇಕು. ಇಲ್ಲವಾದರೆ ಹಿಂದುಗಳ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದು ಅಲ್ಲದೆ,  ಬೇರೆ ಧರ್ಮದವರ ನಡತೆ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಳ್ಳುತ್ತೇವೆ.

ಅಲ್ಲಾವುದಿನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಮುಸ್ಲಿಂ ದೊರೆಗಳ ಮೋಸ ಧಗ, ಸಮಯ ಸಾಧಕ ನಡವಳಿಕೆ, ಕಾಮ ತೃಷೆ, ಸಲಿಂಗ ಕಾಮಗಳನ್ನೂ ನೈಜ ನಟನೆಯಿಂದ ನಟಿಸಿ, ಮನಗೆಲ್ಲುವ ರಣವೀರ್ ಚಿತ್ರದ ನಿಜವಾದ ನಾಯಕ. ಚಿತ್ರದಲ್ಲಿ  ರಣವೀರ್ ನಾಟ್ಯ ಮತ್ತು ನಟನೆ ಅದ್ಭುತವಾಗಿದ್ದರೂ , ಖಿಲ್ಜಿ   ಖಳನಾಯಕ ಎಂಬುದನ್ನು ಮರೆಯಬಾರದು. ಖಿಲ್ಜಿಯಿಂದ ಟಿಪ್ಪು ಸುಲ್ತಾನನವರೆಗಿನ  ಮುಸ್ಲಿಂ ದೊರೆಗಳ ನೈಜ ಇತಿಹಾಸ ತಿರುಚಿದ, ಇಂದಿನ  ಸೆಕ್ಯುಲರ್  ಪಠ್ಯ ಪುಸ್ತಕಗಳಲ್ಲಿ ಸಿಗುವುದಿಲ್ಲ. ಮುಸ್ಲಿಂ ದೊರೆಗಳ ಮತಾಂಧತೆ, ಹಿಂದೂ ಪ್ರಜೆಗಳನ್ನು ಕ್ರೂರವಾಗಿ ನಡೆಸಿಕೊಳ್ಳುವ ಪರಿಯನ್ನು, ಇಂದಿನ ಜನಾಂಗದವರು  ಇಂತಹ ಸಿನಿಮಾಗಳಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ.

ಪದ್ಮಾವತಿಯ ಪತಿ ರತನ್ ಸಿಂಗ್  ಪಾತ್ರದಲ್ಲಿ ನಟಿಸಿರುವ ಶಾಹಿದ್ ಕಪೂರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ರಜಪೂತ ರಾಜರ  ಅತಿ ಆದರ್ಶ ಕಿರಿಕಿರಿ ಉಂಟುಮಾಡುತ್ತದೆ. ಖಿಲ್ಜಿಯನ್ನು ಸುಲಭವಾಗಿ ಕೊಲ್ಲಲು ಅವಕಾಶಗಳು ಮತ್ತೆಮತ್ತೆ ಬಂದರೂ, ‘ರಾಜ ಧರ್ಮ’ ಪಾಲಿಸಲು ಹೋಗಿ, ಪದ್ಮಾವತಿಯ ಸಾವಿಗೆ ಮಾತ್ರವಲ್ಲದೆ ಸಾವಿರಾರು ಪ್ರಜೆಗಳ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ರತನ್ ಸಿಂಗ್ ಎಷ್ಟೇ ಆದರ್ಶ ಪುರುಷನಾಗಿದ್ದರೂ, ಅವನ ಮೇಲೆ ಮುಸ್ಲಿಂ  ಅಕ್ರಮಣವಾದಾಗ, ಇತರೆ ಹಿಂದೂ ರಾಜರುಗಳು ಸಹಾಯಕ್ಕೆ ಬರುವುದಿಲ್ಲ. ರತನ್ ಸಿಂಗ್’ನ ಅತಿ ಆದರ್ಶ ರಾಜ್ಯದ ಅವನತಿಗೆ ಎಡೆ ಮಾಡಿಕೊಡುತ್ತದೆ.   ಏಕೋ ರತನ್ ಸಿಂಗ್ ನೋಡಿದರೆ, ಗಾಂಧಿಜೀಯವರು ನೆನಪಾಗುತ್ತಾರೆ. ಸ್ವತಂತ್ರ ನಂತರ  ಗಾಂಧಿಜೀಯವರು, ಭಾರತಕ್ಕೆ ಸೈನ್ಯದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಏಕೆಂದರೆ ಅವರಿಗೆ ಪಾಕಿಸ್ತಾನವನ್ನು ಕೂಡ ಅಹಿಂಸೆಯಿಂದ ಜಯಿಸಬಹುದು ಎಂಬ ಬಲವಾದ ನಂಬಿಕೆ ಇತ್ತು. ಗಾಂಧಿಜೀಯವರ ಜೀವಿತ ಕಾಲದಲ್ಲಿ, ಬ್ರಿಟಿಷರ ಬದಲಿಗೆ ಮೊಘಲರು ಆಡಳಿತ ನಡೆಸುತ್ತಿದ್ದರೆ, ಗಾಂಧಿಜೀಯವರ ಅಹಿಂಸೆ ಚಳುವಳಿ ಕೆಲಸ ಮಾಡುತ್ತಿತ್ತೇ? ಎಂಬ ಆಲೋಚನೆ ಬರುತ್ತದೆ. ಮುಸ್ಲಿಂ ದೊರೆಗಳ ವಿರುದ್ಧ, ಚಳುವಳಿ ಮಾಡಿದ ಮೊದಲ ದಿನವೇ ಗಾಂಧಿಜೀಯವರನ್ನು ಆನೆಯ ಕಾಲಿನ ಕೆಳಗೆ ತುಳಿಸಿ ಸಹಿಸುತ್ತಿದ್ದರೋ ಏನೋ. ನಾಗರೀಕ ಬ್ರಿಟಿಷರು ಕನಿಷ್ಠ ಪಕ್ಷ, ಕೆಲವೊಂದು  ನಾಯಕರೊಂದಿಗೆ ನಾಗರಿಕವಾಗಿ ನಡೆದುಕೊಂಡಿದ್ದಾರೆ. ಇಲ್ಲವಾದರೆ ನೆಹರುರವರು ಜೈಲಿನಲ್ಲಿ ಇದ್ದುಕೊಂಡು ಬೃಹತ್ ಗ್ರಂಥಗಳನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಕಲಿಯಬೇಕಾದ ಪಾಠವೆಂದರೆ ‘ನಾಗರಿಕರ ಮುಂದೆ ಮಾತ್ರ, ನಾಗರೀಕ ಹೋರಾಟ’.   

ಸ್ವತಃ ಹಿಂದೂ ಆಗಿದ್ದರೂ, ವೈಯಕ್ತಿಕ ಲಾಭಕ್ಕಾಗಿ ಖಿಲ್ಜಿಗೆ ಸಹಾಯ ಮಾಡುವ ರಾಘವ ಚೈತನ್ಯ, ಕೊನೆಗೆ  ತಾನೂ  ಸಾಯುವುದು ಅಲ್ಲದೆ, ಉದಾತ್ತ ಸಂಸ್ಕಾರದ  ಚಿತ್ತೋರ್ ರಾಜ್ಯದ ಅವನತಿಗೆ ಕಾರಣನಾಗುತ್ತಾನೆ. ವೈಯಕ್ತಿಕ ಲಾಭಕ್ಕಾಗಿ ಬಿಳಿ ಟೋಪಿ ಧರಿಸಿ, ಬಿರಿಯಾನಿ ರಾಜಕಾರಣ ಮಾಡುವ ರಾಜಕಾರಣಿಗಳು ರಾಘವ ಚೈತನ್ಯನನ್ನು, ಇನ್ನೂ ಜೀವಂತ ಇಟ್ಟಿದ್ದಾರೆ ಎನ್ನಿಸುತ್ತದೆ.

‘ಭಾರ್ಯಾ ರೂಪವತಿ ಶತ್ರು’ ಎನ್ನುವ ಹಾಗೆ, ಪದ್ಮಾವತಿಯ ರೂಪವೇ ಇಡೀ ಸಾಮ್ರಾಜ್ಯಕ್ಕೆ ಶತ್ರುವಾಗುತ್ತದೆ.   ಮುಸ್ಲಿಂ ದೊರೆಗಳ ಅಂತಃಪುರದ ದಾಸಿಯಾಗುವುದಕ್ಕಿಂತ,  ಬಲಿದಾನವೇ ಮೇಲು ಎಂದು ತೀರ್ಮಾನಿಸುವ ಪದ್ಮಾವತಿ, ಪತಿ ಮರಣಿಸಿದ ಮೇಲೆ ಅಗ್ನಿ ಪ್ರವೇಶ ಮಾಡುತ್ತಾಳೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದ್ದು, ಭಾರತದಲ್ಲಿ ಮುಸ್ಲಿಂ ಆಕ್ರಮಣ ಮುಂಚೆ ಸತಿ ಪದ್ಧತಿ ಇರಲಿಲ್ಲ. ಮುಸ್ಲಿಂ ಆಕ್ರಮಣ ಕಾಲಘಟ್ಟದಲ್ಲಿ, ಯುದ್ಧಾನಂತರ  ನಡೆಯುತ್ತಿದ್ದ ಅತ್ಯಾಚಾರಕ್ಕೆ, ಮಹಿಳೆಯರು  ಕಂಡುಕೊಂಡ ಮಾರ್ಗವೇ  ಜೋಹರ್. ತದನಂತರದಲ್ಲಿ ಸತಿ ಪದ್ಧತಿಯಾಗಿ ಮುಂದುವರೆದಿದ್ದು ದುರಾದೃಷ್ಟ. ಶತ್ರುಗಳಿಂದ ಮಾನಭಂಗವಾಗುವುದರಿಂದ ಪಾರಾಗಲು, ಸ್ವಯಂಪ್ರೇರಿತ ಅಗ್ನಿ ಪ್ರವೇಶಕ್ಕೆ ‘ಜೋಹರ್’ ಎಂದರೆ, ಪತಿ ತೀರಿಕೊಂಡಾಗ ಬಲವಂತ ಅಗ್ನಿ ಪ್ರವೇಶಕ್ಕೆ ಹೆಸರು ‘ಸತಿ’ಪದ್ಧತಿ. ಸ್ವತಂತ್ರ ನಂತರ   ಸತಿಪದ್ಧತಿ ಕೊನೆಗೊಂಡರೂ, ಹಿಂದೂ ಮಹಿಳೆಯರ ಮೇಲಿನ ಆಕ್ರಮಣ ಬೇರೊಂದು ರೂಪಗಳನ್ನು ಪಡೆದುಕೊಂಡಿದೆ. ಕೇರಳ ಮತ್ತು ಕರಾವಳಿ ಜನರ ಅನುಭವದಲ್ಲಿ, ಆಕ್ರಮಣದ  ಮೃದುರೂಪ ‘ಲವ್ ಜಿಹಾದ್’. ಲವ್ ಜಿಹಾದ್ ಹೆಸರಿನಲ್ಲಿ ಮಕ್ಕಳನ್ನು ಕಳೆದುಕೊಂಡ , ಹೆತ್ತವರ ಉಳಿದ ಬದುಕು ಕೆಂಡದ ಮೇಲಿನ ನಡಿಗೆಯೇ .  

ಒಟ್ಟಿನಲ್ಲಿ ಕಾಲ ಬದಲಾಗಿದ್ದರೂ, ಪಾತ್ರಗಳು ಇನ್ನೂ ಜೀವಂತವಾಗಿದೆ. ಇತಿಹಾಸದಿಂದ ಪಾಠ ಕಲಿಯದೇ ಇದ್ದರೆ, ಇತಿಹಾಸ ಮರುಕಳಿಸುತ್ತದೆ.  ಇತಿಹಾಸದ ಇಂತಹ ಘಟನೆಗಳನ್ನು ಬೆಳ್ಳಿಪರದೆ  ಮೇಲೆ ಪುನರ್ ರಚಿಸಿದ ಸಂಜಯ್ ಲೀಲಾ ಬನ್ಸಾಲಿಯವರಿಗೆ ಅಭಿನಂದನೆಗಳು .

  

Facebook ಕಾಮೆಂಟ್ಸ್

ಲೇಖಕರ ಕುರಿತು

Dayananda Linge Gowda

ರೇಡಿಯೊಲೊಜಿಸ್ಟ್
ಲೇಖಕರು ಮತ್ತು ಕಾದಂಬರಿಕಾರರು

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!