ಜಗತ್ತಿನಲ್ಲಿ ಹುಬ್ಬೇರಿಸುವ ಯಾವ ಕೆಲಸವೇ ಇರಲಿ ಅದನ್ನು ಒಂದೇ ದಿನದಲ್ಲಿ ಮಾಡಿದ ಉದಾಹರಣೆ ಕಂಡಿದ್ದೀರಾ? ನಲ್ಲಿಯ ಕೆಳಗಿನ ಕಲ್ಲನ್ನು ಗಮನಿಸಿ ನೋಡಿ ಅಲ್ಲೊಂದು ಸಣ್ಣ ಹಳ್ಳ ಬಿದ್ದಿರುತ್ತದೆ . ಅದು ಸೃಷ್ಟಿಯಾದದ್ದು ಒಂದು ದಿನದಲ್ಲಿ ಖಂಡಿತಾ ಅಲ್ಲ . ಎಷ್ಟೋ ವರ್ಷಗಳು ಒಂದೊಂದು ಹನಿ ಬಿದ್ದು ಆ ಹಳ್ಳವನ್ನು ಸೃಷ್ಟಿಸಿದೆ . ನೀವು ಅದೇ ನಲ್ಲಿಯ ನೀರನ್ನು ಅದೆಷ್ಟೇ ಪ್ರಬಲವಾಗಿ ಬಿಡಿ ಹತ್ತಾರು ಗಂಟೆಯೇ ಬಿಡಿ ಅಲ್ಲಿ ಅಂತಹ ಮತ್ತೊಂದು ಹಳ್ಳವನ್ನು ಸೃಷ್ಟಿಸಲಾಗದು . ಆದರೆ ಸ್ವಾರಸ್ಯ ನೋಡಿ ಹೆಚ್ಚಿನ ಶಕ್ತಿಯ ವ್ಯಯವಿಲ್ಲದೆ ಪ್ರತಿ ದಿನ ಬಿದ್ದ ಸಣ್ಣ ಹನಿಗಳು ಹಲವಾರು ವರ್ಷಗಳಲ್ಲಿ ಕಲ್ಲನ್ನು ಕರಗಿಸಿಬಿಡುತ್ತವೆ. ಇಷ್ಟೆಲ್ಲಾ ಹೇಳುವುದರ ಅರ್ಥ ಇಷ್ಟೇ ಕೆರೆಯೋ , ಬಿಂದಿಗೆಯೂ ಸಣ್ಣ ಸಣ್ಣ ಹನಿಗಳು ಸೇರಿಯೇ ತುಂಬಬೇಕು. ಸಣ್ಣ ಹನಿ ಎಂದು ನಿರ್ಲಕ್ಷಿಸುವಂತಿಲ್ಲ . ಇದನ್ನು ಅರಿತ ನಮ್ಮ ಹಿರಿಯರು ಅದಕ್ಕೆ ಹನಿ ಹನಿ ಗೂಡಿದರೆ ಹಳ್ಳ ಎಂದು ಸಣ್ಣ ಸಣ್ಣ ವಿಷಯದ , ವಸ್ತುಗಳ ಮಹತ್ತ್ವವನ್ನು ನಮಗೆ ತಿಳಿಸಿದ್ದು . ಒಂದು ಸೇರದಿದ್ದರೆ ತೊಂಬತೊಂಬತ್ತು ನೂರಾಗುವುದಿಲ್ಲ ! ನೂರೆನಿಸಿಕೊಳ್ಳಲು ಒಂದು ಬೇಕೇ ಬೇಕು ಒಂದರ ಮಹತ್ತ್ವ ತಿಳಿಯುವುದು ಇಂತಹ ಸಮಯದಲ್ಲೇ ! ಇದನ್ನು ನಮ್ಮ ಬದುಕಿಗೆ ಹೋಲಿಸಿಕೊಂಡರು ಸಿಗುವ ಫಲಿತಾಂಶ ಮಾತ್ರ ಅದೇ ಆಗಿರುತ್ತದೆ . ರೋಮ್ ಸಾಮ್ರಾಜ್ಯವನ್ನು ಒಂದು ದಿನದಲ್ಲಿ ಕಟ್ಟಲಾಗಲಿಲ್ಲ ಅಲ್ಲವೇ? ಹಾಗೆಯೇ ಬದುಕಿನಲ್ಲಿ ಎಲ್ಲವೂ ಹಂತಹಂತವಾಗಿ ನಿಧಾನವಾಗಿ ಮಾಡಿದರೆ ಸಿಗುವ ಫಲಿತಾಂಶ ಒಳ್ಳೆಯದಾಗಿರುತ್ತದೆ.
ಸ್ಪಾನಿಷ್ ಭಾಷಿಕರು ಇದನ್ನೇ ಪೊಕೊ ಅ ಪೊಕೊ ಸೆ ಹಾಸೆನ್ ಲಾಸ್ ಕೊಸಾಸ್ (“poco a poco, se hacen las cosas”.) ಸ್ವಲ್ಪ ಸ್ವಲ್ಪ ಮಾಡೋಣ ಕೆಲಸ ಎನ್ನುವ ಅರ್ಥ ನೀಡುತ್ತದೆ . ಒಳಾರ್ಥ ಸ್ಟೆಪ್ ಬೈ ಸ್ಟೆಪ್ ಮಾಡುವ ಕೆಲಸ ಒಮ್ಮೆಲೆ ಧಿಡೀರ್ ಮಾಡುವ ಕೆಲಸಕ್ಕಿಂತ ಹೆಚ್ಚು ಯಶಸ್ಸು ನೀಡುತ್ತದೆ ಎನ್ನುತ್ತದೆ . ಕತಲಾನ್ ಭಾಷಿಕರು
De mica en mica s’omple la pica ಎನ್ನುತ್ತಾರೆ . ಹನಿ ಹನಿಗೂಡಿ ಪಾತ್ರೆ ತುಂಬಿತು ಎನ್ನುವ ಅರ್ಥವನ್ನು ನೀಡುತ್ತದೆ.
ಇದನ್ನೇ ಇಂಗ್ಲಿಷ್ ಭಾಷಿಕರು Many a mickle makes a muckle. ಎನ್ನುತ್ತಾರೆ . ಭಾಷೆ ಒಂದು ಸಂವಹನ ಮಾಧ್ಯಮ ಅಷ್ಟೇ . ವಿವಿಧ ಭಾಷೆಯಲ್ಲಿ ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿರುವ ಬದುಕಿನ ಪಾಠ ಮಾತ್ರ ನಿತ್ಯ ನೂತನ ಅವಕ್ಕೆ ಭಾಷೆ , ಸರಹದ್ದು ಮತ್ತು ಧರ್ಮ ಅಡ್ಡಿ ಮಾಡದೆ ಹೋಗಿರುವುದು ಅಚ್ಚರಿಯ ವಿಷಯ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
Poco : ಸ್ವಲ್ಪ ಎನ್ನುವ ಅರ್ಥ ಕೊಡುತ್ತದೆ . ಪೊಕೊ ಎನ್ನುವುದು ಉಚ್ಚಾರಣೆ . ಪೊಕೊ ಅ ಪೊಕೊ ಅಂದರೆ ಸ್ವಲ್ಪ ಸ್ವಲ್ಪ ಎನ್ನುವ ಅರ್ಥ ನೀಡುತ್ತದೆ .
se : ಈ ಪದದ ಅರ್ಥ ವಾಕ್ಯಕ್ಕೆ ತಕ್ಕಂತೆ ಬದಲಾಗುತ್ತದೆ . ಇಲ್ಲಿನ ಸನ್ನಿವೇಶದಲ್ಲಿ ಅದು, ಅದನ್ನು ಎನ್ನುವ ಅರ್ಥ ಕೊಡುತ್ತದೆ . ಸೆ ಎನ್ನುವುದು ಉಚ್ಚಾರಣೆ .
hacen : ಟು ಡು ಅಥವಾ ಮಾಡು , ಮಾಡುವುದು ಎನ್ನುವ ಅರ್ಥ . ಹಾಸೆನ್ ಎನ್ನುವುದು ಉಚ್ಚಾರಣೆ .
las : ಇಂಗ್ಲಿಷ್ ನ ದಿ ಎನ್ನುವ ಅರ್ಥ . ಲಾಸ್ ಎನ್ನುವುದು ಉಚ್ಚಾರಣೆ .
cosas : ವಸ್ತು ಎನ್ನುವ ಅರ್ಥ ಈ ಸನ್ನಿವೇಶದಲ್ಲಿ ಕೆಲಸ ಎನ್ನುವ ಅರ್ಥ ಕೊಡುತ್ತದೆ . ಕೊಸಾಸ್ ಎನ್ನುವುದು ಉಚ್ಚಾರಣೆ .