ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ! ಅಂದುಕೊಂಡ ಕೆಲಸವನ್ನ ಅಷ್ಟೋ ಇಷ್ಟೋ ಮಾಡಿ ಮುಗಿಸಿದವರ ಮನಸ್ಸಿನಲ್ಲಿ ಒಂದಷ್ಟು ಧನ್ಯತಾ ಭಾವವಿರುತ್ತದೆ . ಉಳಿದವರ ಬದುಕು ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವಂತಾಗಿರುತ್ತದೆ .
ನಮ್ಮಲ್ಲಿ ನಾನು ಏನೇನೊ ಸಾಧಿಸಿ ಬಿಡುತ್ತೇನೆ ಎಂದು ಬೊಗಳೆ ಹೊಡೆಯುವರ ಸಂಖ್ಯೆ ಬಹಳವಿದೆ. ಆದರೆ ಪ್ರಾಯೋಗಿಕವಾಗಿ ಅವರ ಸಾಧನೆ ಅವರಾಡಿದ ಮಾತಿನ ಕಾಲು ಭಾಗದಷ್ಟು ಇರುವುದಿಲ್ಲ . ಇಂತವರ ನೋಡಿ ಹುಟ್ಟಿದ ಗಾದೆ ಅಥವಾ ಆಡುಮಾತು ‘ ಮಂತ್ರಕ್ಕಿಂತ ಉಗುಳು ಜಾಸ್ತಿ ‘ . ಅಂದರೆ ಬಾಯಲ್ಲಿ ಮಂತ್ರ ಹೊರಡುವುದಕ್ಕಿಂತ ಹೆಚ್ಚಾಗಿ ಬರಿ ಉಗುಳು ಬರುವಂತೆ ಕೇವಲ ಹೇಳಿಕೆಗಳಿಂದ ಮನುಷ್ಯ ಏನನ್ನೂ ಸಾಧಿಸಲಾರ ಎನ್ನುವ ಅರ್ಥದಲ್ಲಿ ಈ ಗಾದೆಯನ್ನ ನಮ್ಮ ಹಿರಿಯರು ಹೇಳಿದ್ದಾರೆ . ಸಾಮಾನ್ಯವಾಗಿ ಯಾರಾದರೂ ಒಬ್ಬ ವ್ಯಕ್ತಿ ಬರಿ ಮಾತನ್ನ ಆಡುತ್ತಾ ಅದನ್ನ ಕೃತಿಯಲ್ಲಿ ಮಾಡದೆ ಇದ್ದಾಗ ಅಂತವನನ್ನ ಕುರಿತು ಈ ಗಾದೆಯನ್ನ ಆಡು ಮಾತಿನಲ್ಲಿ ಬಳಸುವುದು ಇಂದಿಗೂ ಕಾಣಬಹದು .
ಮೇಲಿನ ಸಾಲುಗಳಲ್ಲಿ ಹೇಳಿದಂತೆ ಇಂತಹ ಮಾತುಗಳು ಲೋಕಮಾನ್ಯ. ಇವಕ್ಕೆ ಕಾಲ ಮತ್ತು ಗಡಿಯ ಕೋಳ ತೊಡಿಸಲು ಆಗದು . ಸ್ಪಾನಿಷ್ ಭಾಷಿಕರಲ್ಲಿ Mucho ruido y pocas nueces. (ಮುಚೊ ರುಯಿದೋ ಈ ಪೋಕಾಸ್ ನ್ಯೂಸೆಸ್ ) ಎನ್ನುವ ಮಾತಿದೆ . ಹೆಚ್ಚು ಶಬ್ದ ಕಡಿಮೆ ಕಾಳು ಎನ್ನುವ ಅರ್ಥ ಕೊಡುತ್ತದೆ . ಇದರ ಒಳಾರ್ಥವನ್ನ ಶೋಧಿಸುತ್ತಾ ಹೋದರೆ ಇದು ನಮ್ಮ ಮಂತ್ರಕ್ಕಿಂತ ಉಗುಳು ಜಾಸ್ತಿ ನೀಡುವ ಅರ್ಥವನ್ನೇ ನೀಡುತ್ತದೆ . ಮಾಡುವುದಕ್ಕಿಂತ ಹೇಳಿಕೊಂಡು ಓಡಾಡುವರ ಸಂಖ್ಯೆ ಸ್ಪ್ಯಾನಿಷ್ನವರಲ್ಲೂ ಹೇರಳವಾಗಿದೆ ಎನ್ನುವುದನ್ನ ಈ ಗಾದೆ ಮಾತು ಪುಷ್ಟಿಕರಿಸುತ್ತದೆ .
ಇನ್ನು ಇಂಗ್ಲಿಷ್ ಭಾಷಿಕರು ಕೂಡ ಈ ವಿಶಯದಲ್ಲಿ ಹಿಂದೆ ಬಿದ್ದಿಲ್ಲ . ಶೇಕ್ಸಪಿಯರ್ ‘ Much Ado About Nothing.” ಎನ್ನುವ ಪದವನ್ನ ತನ್ನ ನಾಟಕಗಳಲ್ಲಿ ಬಳಸಿದ್ದಾನೆ . ಸಾಮಾನ್ಯವಾಗಿ ಜನರಲ್ಲಿ ‘Lots of noise, very few nuts.’ ಎನ್ನುವುದು ಹೆಚ್ಚು ಪ್ರಚಲಿತದಲ್ಲಿರುವ ನಾಣ್ನುಡಿ . ರಾಜಕಾರಿಣಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಾರೆ. ಆದರೆ ಅದರಲ್ಲಿ ಹೇಳಿದ ಕೆಲವು ಅಂಶಗಳನ್ನ ಕೂಡ ಅವರು ಪೂರೈಸುವುದಿಲ್ಲ . ಇಂತಹ ರಾಜಕಾರಿಣಿಗಳನ್ನ ನೋಡಿ ‘All bark and no bite.’ ಎನ್ನುವ ಮಾತು ಕೂಡ ಇಲ್ಲಿ ಹೇಳುತ್ತಾರೆ . ನಾವು ಕೂಡ ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುತ್ತೇವೆ . ಕೆಲಸ ಮಾಡುವರು ಹೆಚ್ಚು ಮಾತನಾಡದೆ ತಮ್ಮ ಕೆಲಸ ಮಾಡುತ್ತಾರೆ ಎನ್ನುವುದು ಎಲ್ಲಾ ಭಾಷೆಗಳ ಗಾದೆಯ ಸಾರಾಂಶ .
ಇಂದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ . ನಾವು ಕೂಡ ಮಾತಿಗಿಂತ ಕೃತಿ ಮೇಲು ಎನ್ನುವ ಆಡುಮಾತನ್ನ ಸಾಕಾರಗೊಳಿಸೋಣವೇ ? ಉಗುಳಿಗಿಂತ ಮಂತ್ರ ಹೆಚ್ಚಾಗುವ ಕಡೆ ಗಮನ ನೀಡೋಣವೇ ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
Mucho : much , ಹೆಚ್ಚು ಎನ್ನುವ ಅರ್ಥ . ಮುಚೊ ಎನ್ನುವುದು ಉಚ್ಚಾರಣೆ .
ruido : ಶಬ್ದ ಎನ್ನುವ ಅರ್ಥ . ರುಯಿದೋ ಎನ್ನುವುದು ಉಚ್ಚಾರಣೆ .
y : ಮತ್ತು ಎನ್ನುವ ಅರ್ಥ . ಈ ಎನ್ನುವುದು ಉಚ್ಚಾರಣೆ .
pocas : ಕಡಿಮೆ ಎನ್ನುವ ಅರ್ಥ . ಪೋಕಾಸ್ ಎನ್ನುವುದು ಉಚ್ಚಾರಣೆ .
nueces : ನಟ್ಸ್ (ಬೀಜ / ಕಾಳು ) ಎನ್ನುವ ಅರ್ಥ ಕೊಡುತ್ತದೆ . ನ್ಯೂಸೆಸ್ ಎನ್ನುವುದು ಉಚ್ಚಾರಣೆ .