Featured ಅಂಕಣ

ಮಂತ್ರಕ್ಕಿಂತ ಉಗುಳು ಜಾಸ್ತಿ !

ಸ್ಪಾನಿಷ್ ಗಾದೆಗಳು ವಿಶ್ವ ಮಾನವತೆಯನ್ನ ಸಾರಲು ನನಗೆ ಸಿಕ್ಕಿರುವ ಒಂದು ನೆವವಷ್ಟೇ . ಅದೇಕೆ ಎಂದು ಸ್ಪಾನಿಷ್ ಗಾದೆಗಳನ್ನ ಓದುತ್ತ ಬಂದಿರುವವರಿಗೆ ವಿಶೇಷವಾಗಿ ವಿವರಿಸುವ  ಅವಶ್ಯಕತೆಯಿಲ್ಲ . ದೇಶ -ಭಾಷೆ – ಕಾಲವನ್ನ ಮೀರಿ ಮನುಷ್ಯನ ಭಾವನೆಗಳು ಒಂದೇ ಎಂದು ಉದಾಹರಣೆ ಸಹಿತ ಹೇಳುವುದು ಇಲ್ಲಿನ ಉದ್ದೇಶ . ಇರಲಿ . ಇನ್ನೊಂದು ವರ್ಷ ನಮ್ಮ ಕೈ ಜಾರಿ ಹೋಗಿದೆ ! ಅಂದುಕೊಂಡ ಕೆಲಸವನ್ನ ಅಷ್ಟೋ ಇಷ್ಟೋ ಮಾಡಿ ಮುಗಿಸಿದವರ ಮನಸ್ಸಿನಲ್ಲಿ ಒಂದಷ್ಟು ಧನ್ಯತಾ ಭಾವವಿರುತ್ತದೆ . ಉಳಿದವರ ಬದುಕು ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವಂತಾಗಿರುತ್ತದೆ .

ನಮ್ಮಲ್ಲಿ ನಾನು ಏನೇನೊ  ಸಾಧಿಸಿ ಬಿಡುತ್ತೇನೆ ಎಂದು ಬೊಗಳೆ ಹೊಡೆಯುವರ ಸಂಖ್ಯೆ ಬಹಳವಿದೆ. ಆದರೆ ಪ್ರಾಯೋಗಿಕವಾಗಿ ಅವರ ಸಾಧನೆ ಅವರಾಡಿದ ಮಾತಿನ ಕಾಲು ಭಾಗದಷ್ಟು ಇರುವುದಿಲ್ಲ . ಇಂತವರ ನೋಡಿ ಹುಟ್ಟಿದ ಗಾದೆ ಅಥವಾ ಆಡುಮಾತು ‘ ಮಂತ್ರಕ್ಕಿಂತ ಉಗುಳು ಜಾಸ್ತಿ ‘ . ಅಂದರೆ  ಬಾಯಲ್ಲಿ ಮಂತ್ರ ಹೊರಡುವುದಕ್ಕಿಂತ ಹೆಚ್ಚಾಗಿ ಬರಿ ಉಗುಳು ಬರುವಂತೆ ಕೇವಲ ಹೇಳಿಕೆಗಳಿಂದ ಮನುಷ್ಯ ಏನನ್ನೂ ಸಾಧಿಸಲಾರ ಎನ್ನುವ ಅರ್ಥದಲ್ಲಿ ಈ ಗಾದೆಯನ್ನ ನಮ್ಮ ಹಿರಿಯರು ಹೇಳಿದ್ದಾರೆ . ಸಾಮಾನ್ಯವಾಗಿ ಯಾರಾದರೂ ಒಬ್ಬ ವ್ಯಕ್ತಿ  ಬರಿ ಮಾತನ್ನ ಆಡುತ್ತಾ ಅದನ್ನ ಕೃತಿಯಲ್ಲಿ ಮಾಡದೆ ಇದ್ದಾಗ ಅಂತವನನ್ನ ಕುರಿತು ಈ ಗಾದೆಯನ್ನ ಆಡು ಮಾತಿನಲ್ಲಿ ಬಳಸುವುದು ಇಂದಿಗೂ ಕಾಣಬಹದು .

ಮೇಲಿನ ಸಾಲುಗಳಲ್ಲಿ ಹೇಳಿದಂತೆ ಇಂತಹ ಮಾತುಗಳು ಲೋಕಮಾನ್ಯ. ಇವಕ್ಕೆ ಕಾಲ ಮತ್ತು ಗಡಿಯ ಕೋಳ ತೊಡಿಸಲು ಆಗದು . ಸ್ಪಾನಿಷ್ ಭಾಷಿಕರಲ್ಲಿ Mucho ruido y pocas nueces. (ಮುಚೊ  ರುಯಿದೋ ಈ ಪೋಕಾಸ್ ನ್ಯೂಸೆಸ್ ) ಎನ್ನುವ ಮಾತಿದೆ . ಹೆಚ್ಚು ಶಬ್ದ ಕಡಿಮೆ ಕಾಳು ಎನ್ನುವ ಅರ್ಥ ಕೊಡುತ್ತದೆ . ಇದರ ಒಳಾರ್ಥವನ್ನ ಶೋಧಿಸುತ್ತಾ ಹೋದರೆ ಇದು ನಮ್ಮ ಮಂತ್ರಕ್ಕಿಂತ ಉಗುಳು ಜಾಸ್ತಿ ನೀಡುವ ಅರ್ಥವನ್ನೇ ನೀಡುತ್ತದೆ . ಮಾಡುವುದಕ್ಕಿಂತ ಹೇಳಿಕೊಂಡು ಓಡಾಡುವರ ಸಂಖ್ಯೆ ಸ್ಪ್ಯಾನಿಷ್ನವರಲ್ಲೂ ಹೇರಳವಾಗಿದೆ ಎನ್ನುವುದನ್ನ ಈ ಗಾದೆ ಮಾತು ಪುಷ್ಟಿಕರಿಸುತ್ತದೆ .

ಇನ್ನು ಇಂಗ್ಲಿಷ್ ಭಾಷಿಕರು ಕೂಡ ಈ ವಿಶಯದಲ್ಲಿ ಹಿಂದೆ ಬಿದ್ದಿಲ್ಲ . ಶೇಕ್ಸಪಿಯರ್ ‘ Much Ado About Nothing.” ಎನ್ನುವ ಪದವನ್ನ ತನ್ನ ನಾಟಕಗಳಲ್ಲಿ ಬಳಸಿದ್ದಾನೆ . ಸಾಮಾನ್ಯವಾಗಿ ಜನರಲ್ಲಿ  ‘Lots of noise, very few nuts.’ ಎನ್ನುವುದು ಹೆಚ್ಚು ಪ್ರಚಲಿತದಲ್ಲಿರುವ ನಾಣ್ನುಡಿ . ರಾಜಕಾರಿಣಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಾರೆ. ಆದರೆ ಅದರಲ್ಲಿ ಹೇಳಿದ ಕೆಲವು ಅಂಶಗಳನ್ನ ಕೂಡ ಅವರು ಪೂರೈಸುವುದಿಲ್ಲ . ಇಂತಹ ರಾಜಕಾರಿಣಿಗಳನ್ನ ನೋಡಿ ‘All bark and no bite.’  ಎನ್ನುವ ಮಾತು ಕೂಡ ಇಲ್ಲಿ ಹೇಳುತ್ತಾರೆ . ನಾವು ಕೂಡ ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುತ್ತೇವೆ . ಕೆಲಸ ಮಾಡುವರು ಹೆಚ್ಚು ಮಾತನಾಡದೆ ತಮ್ಮ ಕೆಲಸ ಮಾಡುತ್ತಾರೆ ಎನ್ನುವುದು ಎಲ್ಲಾ ಭಾಷೆಗಳ ಗಾದೆಯ ಸಾರಾಂಶ .

ಇಂದು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ . ನಾವು ಕೂಡ ಮಾತಿಗಿಂತ ಕೃತಿ ಮೇಲು ಎನ್ನುವ ಆಡುಮಾತನ್ನ ಸಾಕಾರಗೊಳಿಸೋಣವೇ ? ಉಗುಳಿಗಿಂತ ಮಂತ್ರ ಹೆಚ್ಚಾಗುವ ಕಡೆ ಗಮನ ನೀಡೋಣವೇ ?

 

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .

Mucho   :  much , ಹೆಚ್ಚು ಎನ್ನುವ ಅರ್ಥ . ಮುಚೊ ಎನ್ನುವುದು ಉಚ್ಚಾರಣೆ .

ruido   : ಶಬ್ದ ಎನ್ನುವ ಅರ್ಥ . ರುಯಿದೋ ಎನ್ನುವುದು ಉಚ್ಚಾರಣೆ .

y  : ಮತ್ತು ಎನ್ನುವ ಅರ್ಥ . ಈ ಎನ್ನುವುದು ಉಚ್ಚಾರಣೆ .

pocas   :  ಕಡಿಮೆ ಎನ್ನುವ ಅರ್ಥ . ಪೋಕಾಸ್ ಎನ್ನುವುದು ಉಚ್ಚಾರಣೆ .

nueces  : ನಟ್ಸ್ (ಬೀಜ / ಕಾಳು ) ಎನ್ನುವ ಅರ್ಥ ಕೊಡುತ್ತದೆ . ನ್ಯೂಸೆಸ್ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!