ಅಂಕಣ

ಬೇಸರ – ೨

ರಾತ್ರಿಯ ನೀರವ ಮೌನ.  ದಿಂಬಿಗೆ ತಲೆಕೊಟ್ಟು ಅದೆಷ್ಟು ಹೊತ್ತಾಯಿತು.  ನಿದ್ದೆ ಹತ್ತಿರ ಸುಳಿಯವಲ್ಲದು.  ಮನಸ್ಸು ಏನೇನೊ ಸಾಧಿಸುವ ಯೋಚನೆಯಲ್ಲಿ ನನ್ನ ಬೇಗ ಮಲಗು ಬೇಗ ಎದ್ದೇಳು ಅಂತ ಮಾಮೂಲಿ ದಿನಕ್ಕಿಂತ ಕೊಂಚ ಏನು ಸುಮಾರು ಬೇಗನೆ ಮಲಗಿಸಿತ್ತು.  ತಲೆ ತುಂಬಾ ಹಾಳಾದ್ದು ಯೋಚನೆಗಳು, ಬೇಡ ಬೇಡಾ ಎಂದರೂ ಮಲಗಿದಾಗಲೆ ಬಂದುಬಿಡುತ್ತವೆ.   ಸಮಸ್ಯೆಗಳು ನಾ ಮೊದಲು ಬರ್ಲಾ ನೀ ಮೊದಲು ಹೋಗ್ತೀಯಾ ಎಂದು ತಮ್ಮ ತಮ್ಮಲ್ಲೆ ಕಿಚಾಯಿಸಿಕೊಳ್ಳುತ್ತವೆ.   ಕತ್ತು ನೋವು ಬಂದು ದಿಂಬು ತೆಗೆದು ಪಕ್ಕಕ್ಕೆ ಬಿಸಾಕಿದ್ದು ಇವತ್ತೊಂದೆ ಅಲ್ಲ ಸಾಕಷ್ಟು ದಿನ ಮಾಡಿಯಾಗಿದೆ.  ಲೆಕ್ಕ ಇಟ್ಟಿಲ್ಲ.  ಇದೆಲ್ಲ ಮಾಮೂಲು ಈ ಅವಸ್ಥೆಯಲ್ಲಿ.  ಆದರೆ ಇವತ್ತು ಸ್ಪೆಷಲ್ ಅಂತ ನನ್ನ ಭಾವನೆ.

ಬರಿತಾ ಬರಿತಾ ಶ್ರೀಕೃಷ್ಣ ಪರಮಾತ್ಮನ ಮಾತು ನಾನೂ ಜಾರಿಗೆ ತರಬೇಕು ಅನ್ನೋ ನಿರ್ಧಾರ ಮನಸ್ಸು ಹೇಳಿದ್ದೇನೊ ಸರಿ.  ಕಡ್ಡಿಯನ್ನು ಗುಡ್ಡ ಮಾಡಿ ಅದೇ ಚಿಂತೆಯಲ್ಲಿ ಒದ್ದಾಡಿ ಬರೊ ನಿದ್ದೆನೂ ಹಾಳುಮಾಡಿ ಕೊನೆಗೆ ಉರಿ ಕಣ್ಣಲ್ಲಿ ಓದೋಕೂ ಆಗದೆ ರಾತ್ರಿ ತಿಂದ ಚಪಾತಿನೊ ಮುದ್ದೆನೊ ಎಂತದೊ ಒಂದು ಎಲ್ಲಾ ಜಾಗರಣೆಯಲ್ಲಿ ಸೊರಗಿ ಹಸಿವು ಅಂದು ಮತ್ತದೆ ಅಡುಗೆ ಮನೆಗೆ ಬೆಕ್ಕಿನಂತೆ ಸೇರಿ ಮೆಲ್ಲಗೆ ಡಬ್ಬಾ ಮುಚ್ಚಲಾ ತೆಗೆಯುವಾಗೆಲ್ಲ ಮಗಳ ಮಾತು ಜ್ಞಾಪಕಕ್ಕೆ ಬಂದು ಕಿಸಕ್ಕನೆ ನಕ್ಕು ಥ್ಯಾಂಕ್ಸ್ ಮಗಳೆ ನೀ ಅಂದಿದ್ದು ನಿಜಾ.

“ಅಮ್ಮಾ ಮನೆಯಲ್ಲಿ ಯಾವಾಗಲೂ ತಿಂಡಿ ಏನಾದರೂ ಇಟ್ಕೊಂಡಿರು, ಆಮೇಲೆ ಏನೂ ಸಿಕ್ಕಲಿಲ್ಲ ರಾತ್ರಿ ನಿದ್ದೆ ಬರದೆ ಹಸಿವಾದಾಗ. ಅದಕ್ಕೆ ಚಾಕಲೆಟ್ ತಿಂದೆ ಅಂತ ಸುಳ್ಳು ನೆಪ ಹೇಳ್ಬೇಡಾ. ನೀ ಹಿಂಗೆಲ್ಲಾ ಮಾಡಿದರೆ ಮನೆಗೆ ಚಾಕ್ಲೆಟ್ ತರೋದೆ ಇಲ್ಲ.  ಆಫೀಸ್ನಲ್ಲಿ ಸಿಗೋದೆಲ್ಲ ಅಲ್ಲೆ ಹಂಚಿ ಬಂದ್ಬಿಡ್ತೀನಿ ನೋಡು.  ಕಳ್ಳೀ…”   ಹಂಗೂ ಕದ್ದು ತಿಂದಿದ್ದು ಅವಳಿಗೆ ಗೊತ್ತೇ ಆಗೋಲ್ಲ.

ನಿಶಾಚರಳಂತೆ ರಾತ್ರಿ ಪಯಣ ತನ್ನಷ್ಟಕ್ಕೆ ನಡೆಯುತ್ತಿದ್ದರೂ ಈ ಮನಸಿಗೆ ಮಾತ್ರ ಬೇಜಾರು ಹೇಳೋದೆ ಇಲ್ಲ. ಈಗೊಂದು ಎರಡುಮೂರು ವರ್ಷಗಳಿಂದ ಇರಬಹುದು.  ಬರೆಯೊ ಹುಚ್ಚು ಹಿಡಿದು ಹೊತ್ತಿಲ್ಲ ಗೊತ್ತಿಲ್ಲ.  ಗೀಚತಾ ಗೀಚತಾ ಗಂಟೆ ಏನು ನಿದ್ದೆನೂ ಮರೆತು ಹೊತ್ತೊತ್ತಿಗೆ ನಿದ್ದೆ ಮಾಡೋದು ಮರೆತೇಹೋಗಿದೆ.  ಅದು ರೂಢಿನೂ ಆಗಿ ರಾತ್ರಿ ಒಬ್ಬಳೆ ಕಳೆಯೋದು ನಂಗೇನು ಬೇಜಾರಿಲ್ಲಪ್ಪಾ ಅನ್ನುತ್ತೆ ಮನಸ್ಸು.  ಸರಿ ಹೋಯ್ತು.  ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು.  ಖಂಡಿತಾ ಈ ಅವಸ್ಥೆ ನನಗೆ ಫೆವಿಕಾಲಂತೆ ಅಂಟಿಕೊಂಡು ಬಿಟ್ಟಿದೆ.  ತಲೆಗೆ ಬಂದ ವಿಷಯ ಅದೇನೆ ಇರಲಿ, ಎಷ್ಟೊತ್ತಾದರೂ ಆಗಲಿ ಬರೆದು ಮುಗಿಸಲೇ ಬೇಕು.  ಕೊನೆಯಲ್ಲಿ ದಿನಾಂಕ, ಸಮಯ ಅಚ್ಚೊತ್ತಿ ಮತ್ತೊಮ್ಮೆ ಮಗದೊಮ್ಮೆ ಓದಿ, ಖುಷಿಯಾಗಿ, ಮುಗುಳ್ನಕ್ಕು ಅದಕ್ಕೆ ತಕ್ಕ ಚಿತ್ರ ಗೂಗಲ್ಲೆಲ್ಲಾ ಹುಡುಕಿ ಬ್ಲಾಗಾಯಣದಲ್ಲಿ ಹಾಕಿ ಮತ್ತಲ್ಲಿ ಬಂದು ನೋಡಿ ನನ್ನ ಬೆನ್ನು ನಾನೆ ತಟ್ಟಿಕೊಳ್ಳುವುದು..  ಇಷ್ಟೆಲ್ಲಾ ಮಾಡುವುದು ಈ ಮನಸಿಗದೆಷ್ಟು ಆತುರ,ತಾಳ್ಮೆ, ಗಡಿಬಿಡಿ, ಸಂತಸ, ಸಂಭ್ರಮ.  ಏನ್ ಕೇಳ್ತೀರಾ?  ಆಹಾ! ಜೀವನ ನಂದನವನವಂತೆ!

ಆಗೆಲ್ಲಾ ನನಗೆ ಮಲಗಿದಾಗ ಯೋಚನೆ ಬೆಳಗ್ಗೆ ಹೇಗಪ್ಪಾ ಬೇಗ ಏಳೋದೂ?  ಕಣ್ಣು ಕೂಡ್ತಾ ಕೂಡ್ತಾ ಹೇಳುವ ಮಾತು ಮನಸಿನದು ” ಸ್ವಲ್ಪ ಲೇಟಾಗಿ ಎದ್ದರಾಯ್ತಪ್ಪಾ.  ಅದರಲ್ಲೇನು?  ಇಡೀ ದಿನ ಮನೆಯಲ್ಲಿ ತಾನೆ ಇರೋದು.  ಮಾಡ್ಕೊ ನಿಂಗೆ ಬೇಕಾಗಿದ್ದೆಲ್ಲ..  ಅದೆ ವಾಕಿಂಗೂ, ಯೋಗ ಅದೂ ಇದೂ.”  ಹೀಗೆ ಹೇಳಿದ್ದೆ ತಡ ಹಾರೊ ಮಂಗನಿಗೆ ಏಣಿ ಹಾಕಿ ಕೊಟ್ಟಂತಾಗಿ ಪೊಗದಸ್ತಾಗಿ ಢಣ್ ಅನ್ನದ ಗಂಟೆ ಎಬ್ಬಿಸೋರು ಯಾರಿಲ್ಲದಾಗ ಬೆಳಗ್ಗೆ ಎಂಟಾದರೂ ನಿದ್ದೆ ಹೋದ ದಿನ ಎಷ್ಟಿವೆಯೊ!  ಆದರೆ ನನ್ನ ಬಂಟಾ ಕುಯ್ ಕುಯ್ ಅಂದ ದಿನ ಹಗಲೆಲ್ಲ ಮೆಳ್ಳೆಗಣ್ಣು ಮತ್ತದೆ ಬೇಸರ ಸೋಂಬೇರಿತನ.

ಹಾಂ, ಈಗ ಸಿಕ್ಕಿತು ಬೇಸರಕ್ಕೆ ಇನ್ನೊಂದು ಕಾರಣ.  ನಿದ್ದೆ ಸರಿಯಾಗಿ ಇಲ್ಲದಿದ್ದರೂ ನಾವು ದಿನದ ಕೆಲಸದಲ್ಲಿ ಉತ್ಸಾಹ ಕಳೆದುಕೊಂಡು ಬಿಡುತ್ತೇವೆ.  ನಿಜ ತಾನೆ?  ಹೌದು ಅನ್ನಲೇಬೇಕು.  ಯಾಕೆಂದರೆ ದೇಹಕ್ಕೆ ನಿದ್ದೆ ತುಂಬಾ ತುಂಬಾ ಮುಖ್ಯ.  ರಾತ್ರಿಯ ನಿದ್ದೆ ಸರಿಯಾಗಿ ಆದರೆ ಹಗಲೆಲ್ಲ ದೇಹ ಉತ್ಸಾಹದಿಂದ ಇರುತ್ತದೆ.  ಇದೂ ಕೂಡ ಎಲ್ಲರ ಅನುಭವಕ್ಕೆ ಬಂದಿರೋದೆ.  ನಾನಂತೂ ಸಖತ್ ಅನುಭವಿಸಿಬಿಟ್ಟಿದ್ದೇನೆ ಇಷ್ಟು ವರ್ಷದಲ್ಲಿ.  ಆಗೆಲ್ಲ ಒಂದೇ ದುಃಖ ಛೆ! ರಾತ್ರಿನೂ ಸಮಯ ಹಾಳಾಯ್ತು ಹಗಲಿನ ಸಮಯವೂ ಎಕ್ಕುಟ್ಟೋಯ್ತು.  ಯಾವಾಗ ನಾನೇನೂ ಬರೆಯಲಾಗದೆ ಅಥವಾ ಓದಲೂ ಆಗದೇ ಕಳೆದ ರಾತ್ರಿಯ ದಿನಗಳಲ್ಲಿ ಹೀಗೆ ಅಂದುಕೊಂಡಿದ್ದೂ ಇದೆ.

ಈಗ ಹೇಳಿ ; ಎಷ್ಟು ಜಿದ್ದಿಗೆ ಬಿದ್ದರೂ ನಿದ್ದೆ ಮಾತ್ರ ಬಲೂ ಸೂಕ್ಷ್ಮ ಅಲ್ವಾ?  ಸ್ವಲ್ಪ ಅಡೆತಡೆ ಆದರೂ ಅದೆಲ್ಲಿ ಮಂಗಮಾಯ ಆಗುತ್ತೊ ನಾ ಕಾಣೆ.   ಹಗಲಲ್ಲಿ ತೆಗೆದುಕೊಂಡ ನಿರ್ಧಾರ ರಾತ್ರಿ ನಿದ್ದೆಯನ್ನು ನುಂಗುಹಾಕಿದರೆ ನಾನೇನು ಮಾಡಲಿ?  ಮನಸ್ಸನ್ನು ಕೇಳಿದರೆ ಹೇಳುತ್ತೆ ಇನ್ನೂ ಇದೆಯಲ್ಲಾ ಕಾಲ, ಬಿಟ್ಟಾಕು!

ಅದಕ್ಕೆ ಶ್ರೀ ಕೃಷ್ಣ ಪರಮಾತ್ಮನ ಉಪದೇಶ ಪಾಲಿಸೊ ವಿಷಯದಲ್ಲಿ. ಇನ್ನೂ ಕುಂಟತಾ ಇರೋದು.

 

Geetha Hegade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!