ಅಂಕಣ

ಬೇಸರ – ೧

ಬೇಸರ… ಬಹುಶಃ ಈ ಪದವನ್ನು ಪ್ರಯೋಗಿಸದ ಮನುಷ್ಯನೇ ಇಲ್ಲ. ಬೇಸರ ಎಂಬುದು ಮನಸ್ಸಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ.   ಈ ಅನಿಸಿಕೆಯ ಸಂದರ್ಭದಲ್ಲಿ ಮನಸ್ಸು ಇರೊ ವಾತಾವರಣದಿಂದ ಬೇರೊಂದು ಏನೊ ಬಯಸುತ್ತಿರುತ್ತದೆ.  ಏನು ಎತ್ತಾ ಎಂದು ನಿರ್ಧರಿಸುವುದು ಕಷ್ಟ.  ಅವರವರ ಅಂತರಂಗದ ಇಚ್ಛೆಗೆ ಒಳಪಟ್ಟಿರುತ್ತದೆ.  ಕೆಲವರಿಗೆ ಒಂದಷ್ಟು ಸುತ್ತಾಡೋದು ಇಷ್ಟ.  ಇನ್ನು ಕೆಲವರಿಗೆ ಯಾರ ಜೊತೆಯಾದರೂ ಒಂದಷ್ಟೊತ್ತು ಮಾತನಾಡೋಣ ಅನ್ನಿಸಿದರೆ ಇನ್ನು ಕೆಲವರಿರುತ್ತಾರೆ, ಹೊದ್ದುಕೊಂಡು ಮಲಗೋದು ಇಷ್ಟ ಎನ್ನುವವರು.

ಆದರೆ ಇವೆಲ್ಲಕ್ಕೂ ಭಿನ್ನ ಇನ್ನೊಂದು ರೀತಿ ಬೇಸರ.  ಈ ಬೇಸರಕ್ಕೆ ಏನೂ ಮಾಡಲು ಮನಸ್ಸಿಲ್ಲ. ಓದು, ಬರಹ, ತಿರುಗೋದು, ಮಲಗೋದು ಅಥವಾ ಮನೆಯಲ್ಲಿಯ ಡಬ್ಬಾ ಎಲ್ಲಾ ಹುಡುಕಿ ಸಿಕ್ಕಿದ್ದು ತಿನ್ನೋದು.  ಇದಕ್ಕೆ ಬೇಸರ ಅನ್ನಬೇಕೊ ಅಥವಾ ಹಪಹಪಿ ಅನ್ನಬೇಕೊ ತಿಳಿತಿಲ್ಲ.  ಕೂತಲ್ಲಿಂದ ಏಳೋದೂ ಬೇಡಾ.  ಏನೂ ಮಾಡೋದೂ ಬೇಡಾ.  ಸುಮ್ಮನೆ online ನಲ್ಲಿ ಒಂದಷ್ಟು ಕುಟಕತಾ ಕೂತರೂ ಸಮಾಧಾನ ಇಲ್ಲ.  ಫೇಸ್’ಬುಕ್ ನೋಡಲೂ, ಅಲ್ಲಿ ಒಂದಷ್ಟು ಕಮೆಂಟು, ಲೈಕು ಹಾಕಲೂ  ಮನಸ್ಸು ಒಪ್ಪೋಲ್ಲ.  ಮತ್ತಿನ್ನೇನು ಬೇಕಪ್ಪಾ ನಿನಗೆ?  ಮನಸ್ಸನ್ನು ಕೇಳಿದರೆ ಯಾರ್ಯಾರದ್ದೊ ನೆನಪುಗಳು ತಲೆ ತುಂಬಾ ಸುತ್ತಕೊಳ್ಳೋದು ಗ್ಯಾರಂಟಿ.  ಹಂಗೆ ವ್ಯಾಟ್ಸ್’ಆಪ್ ಕಡೆ ಗಮನ ಹೋಗುತ್ತದೆ.  ಅಲ್ಲಿ ಬಂದಿರೊ ಅವನು ಇವನಿಗೆ ಕಳಿಸಿದ್ದು ಇವಳು ಅವನಿಗೆ ಕಳಿಸಿದ್ದು ಅದೇ ರಾಗ ಅದೇ ಹಾಡು.  ಇದೂ ಬೇಡ ಎನಿಸಿಬಿಡುತ್ತದೆ.  ಎಲ್ಲಾ ಡಿಲೀಟೋ ಡಿಲೀಟು.  ಮತ್ತೆ?

ನೋಡೋಣ ಯರಾದರೂ onlineನಲ್ಲಿ ಇದ್ದಾರಾ?  ಇದ್ದಾರೆ.  ಆದರೆ ಇವರ ಬಳಿ ಮಾತಾಡಬೇಕು ಅನಿಸ್ತಿಲ್ವೆ!  ಹಂಗೆ ನೋಡ್ತಾ ನೋಡ್ತಾ ಪುಕ್ಕಟೆ call ಇದೆಯಲ್ಲಾ ಮಾಡೋಣ.  ತಗೋತಾರಾ ಅಂತ.  ಹಂಗೆ Hello ಅಂತೀವಿ ಚಾಟಲ್ಲಿ.  ಬಂತು ಡಬ್ಬಲ್ ಗೀಟು.  ಸರಿ ಪರವಾಗಿಲ್ಲ.  ಹೊಡಿ call ಮನಸ್ಸಿನ ಮಾತು. ಹೋಗಿ ಹೋಗಿ ನಮ್ಮ ಕೈಲಿದೆಯೆ?  ಅದರ ತಾಳಕ್ಕೆ ತಕ್ಕಂತೆ ಕುಣಿಯೋದೆ ನಮ್ಮ ಕರ್ಮ ಆಗಿರುವಾಗ ಶಿರಸಾವಹಿಸಿ ಅದರ ಮಾತು ಕೇಳದೆ ಗತಿ ಇಲ್ಲ.

ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ  “ಇಂದ್ರಿಯ ನಿಗ್ರಹ ಮಾಡಬೇಕು” ಎಂದು.   ಅದು ಹೇಗೆ?  ಸಾಧ್ಯ ಆಗ್ತಿಲ್ವೆ.  ಹೇಳೋಕೆ ನಮ್ಮ ದೇಹದ ಇಂದ್ರಿಯಗಳು.  ಯಾವತ್ತಾದರೂ ನಾವು ಹೇಳಿದಂತೆ ಕೇಳುತ್ತಾ?  ಕೇಳಿದರೂ ಒಂದು ದಿನ ಅಥವಾ ಎರಡು ದಿನ.  ಪುನಃ ಎಲ್ಲ ಮರೆತು ಮತ್ತದಕ್ಕೆ ದಾಸರಾಗಿ ಬಿಡುತ್ತೇವೆ.

ಉದಾ :  ದೇಹಕ್ಕೆ ರೋಗ ಬಂದ ಹೊಸದರಲ್ಲಿ ಶಿಸ್ತು .  ಒಂದಷ್ಟು ದಿನವಷ್ಟೆ.  ಬಂದ ರೋಗ ತಿನ್ನಬೇಡಾ ಅದೂ ಇದೂ ಅಂತಂದ್ರೂ ಡಾಕ್ಟರ್ ಮಾತು ಕಿವಿಯಲ್ಲಿ ಎಚ್ಚರಿಸುತ್ತಾ ಇದ್ರೂ ಚಪಲದ ಬಾಯಿ ಇದೊಂದು ಸಾರಿ, ಚೂರೇ ಚೂರು ಅಂತ ಇನ್ನೇಲ್ಲೊ ಹೇಳಿದ “ಒಂದು ಚೂರು ತಿಂದರೆ ಏನೂ ಆಗೋಲ್ಲ” ಅಂದ ಮಾತನ್ನೇ ಪ್ರತಿಪಾಧಿಸಿಕೊಂಡು ಯಾರೂ ಇಲ್ಲದಾಗ ತಿಂದು ಸಂತೃಪ್ತಿಪಟ್ಟುಕೊಳ್ಳೋಲ್ವೆ ಸಂಭಾವಿತರ ಸೋಗು ಹಾಕಿ!  ಇನ್ನಿತರ ಇಂದ್ರಿಯಗಳ ವಿಷಯಗಳಲ್ಲೂ ಇದೇ ಗತಿ.  ಹೀಗೆ ಅಂದುಕೊಂಡು ಅಂದುಕೊಂಡೆ ಈ ನಿಗ್ರಹ ಎಂಬುದನ್ನು ಮರೆತು ಬದುಕುವ ಬದುಕಲ್ಲಿ ಪರಮಾತ್ಮ ಹೇಳಿದಂತೆ ನಡೆದುಕೊಳ್ಳೋದು ಅಥವಾ ಸಾಧಿಸೋದು ಕಠಿಣದ ಮಾತು.  ಅದೆಷ್ಟು ಸಾಧನೆ ಬೇಕು ಸಂತನಾಗಲು!

*ಟ್ರಿಂಗ್ ಟ್ರಿಂಗ್ online ಕಣ್ಣು ಕಂಡರೂ call ತಗೋತಿಲ್ವೆ.  “Please call me”  ಅಂತ ಮತ್ತೆ ಚಾಟ್ ಮಾಡಿದ್ರೆ ” Why? ” ಅಂತೆ.   ಸಿಟ್ಟು ನೆತ್ತಿ ಹತ್ತಿ ಬರೋದು ಸ್ವಾಭಾವಿಕ ತಾನೆ?  ಅದೂ ಆತ್ಮೀಯರಲ್ಲಿ ಈ ಸಲುಗೆ ತಗೋಳೋದು.  ಅರ್ಥ ಮಾಡ್ಕೊಳಲ್ವೆ.  ಸರಿ “Bye” ಅಂತಂದು ಮೊಬೈಲ್ ಬಿಸಾಕಿ ಅದರ ಮೇಲೆ ಸಿಟ್ಟು ತೀರಿಸಿಕೊಂಡಿದ್ದು ಯಾರು ತಾನೆ ಮಾಡಿರದೆ ಇರಲಿಕ್ಕಿಲ್ಲ!

ಈ ಅನುಭವ ನೋಡಿ ಈ ಬೇಸರ ಅನ್ನುವ ಪದ ಬಿಸಾಕಿ ಮನಸ್ಸು ಇನ್ನೊಂದು ವಿಷಯಕ್ಕೆ ಅಂಟಾಕಿಕೊಂಡುಬಿಡುತ್ತದೆ.  ಅದೆ ಏನು ಗೊತ್ತಾ ನಾವು ಯಾರಿಗೆ call ಮಾಡಿ ಮಾತಾಡಬೇಕು ಅಂದುಕೊಂಡಿರುತ್ತೇವೊ ಅವರೊಂದಿಗೆ ಇದುವರೆಗೆ ನಡೆದುಕೊಂಡು ಬಂದ ನೆನಪು, ದಿನಚರಿ, ಅವರ ಸ್ವಭಾವ ಇತ್ಯಾದಿ.  ಸಮಯ ಕಳೆದಂತೆ ಮನಸ್ಸು ತಿಳಿಯಾಗಿ ನಮ್ಮ ಬುದ್ಧಿಗೆ ನಾವು ನಗೋದು ಗ್ಯಾರಂಟಿ.  ಏಕೆಂದರೆ ಆ ವ್ಯಕ್ತಿಯ ಬಗ್ಗೆ ನಮಗಷ್ಟು ನಂಬಿಕೆ ಇರುತ್ತದೆ.  ಅದಕ್ಕೆ ಈ ಮನಸ್ಸಿಗೆ ಅವರ ಹತ್ತಿರವೆ ಮಾತಾಡಬೇಕು ಅನಿಸಿರುತ್ತದೆ.   ಮನಸ್ಸು ತಪ್ಪು ಹುಡುಕುವುದು ಬಿಟ್ಟು ರಾಜಿಯಾಗಿ ಬಿಡುತ್ತದೆ.  ಹ್ಯಾಗೆ ಅಂತೀರಾ?

ಅಯ್ಯೋ! ದೇವರೆ ಎಂತಾ ಹುಚ್ಚು ಯೋಚನೆ.  ನಮಗೇನೊ ಬೇರೆ ಕೆಲಸ ಇಲ್ಲ ಸುಮ್ಮನೆ ಮನಸ್ಸು ಕೆಡಿಸಿಕೊಂಡು ಬೇಸರ ಅಂತ ಇನ್ನೊಬ್ಬರಿಗೆ ತೊಂದರೆ ಕೊಡೋದು ಎಷ್ಟು ಸರಿ?  ದೂರದಲ್ಲಿ ಇರುವವರಿಗೆ ನಮ್ಮ ಮನಸ್ಸನ್ನು ತಿಳದುಕೊಳ್ಳಲು ಅವರೇನು ಸಂಜಯನೆ ಮಹಾಭಾರತ ಯುದ್ಧ ನಡೆಯುವಾಗ ದೃತರಾಷ್ಟ್ರನಿಗೆ ತನ್ನ ದಿವ್ಯದೃಷ್ಟಿಯಿಂದ ಅಲ್ಲಿಯ ವರದಿಗಳೆಲ್ಲ ಕೂತಲ್ಲಿಂದಲೆ ತಿಳಿದು ಹೇಳುವಂತೆ!

ಅಷ್ಟಕ್ಕೂ ಒಂದೊಮ್ಮೆ call ತಗೊಂಡರೂ ಏನು ಮಾತಾಡುತ್ತಿದ್ದೆ?  ಅಂತ ಅಗತ್ಯ ವಿಷಯ ಏನಿತ್ತು?  ಸರಿ ” ಬೇಸರ ಬಂತು ಅದಕ್ಕೆ call ಮಾಡಿ ಅಂದೆ ” ಅಂದರೆ ಅವರಾದರೂ ಏನು ಹೇಳೋಕೆ ಸಾಧ್ಯ?  “ಮನೆಯಲ್ಲಿ ಯಾರೂ ಇಲ್ವಾ?  ಸ್ವಲ್ಪ ಎಲ್ಲಾದರೂ ಹೋಗಿ ಬಾ.  ಇಲ್ಲಾ ಏನಾದರೂ ಬರಿ, ಓದು.  ಟೀವಿ ನೋಡು ಅದೂ ಇದೂ.”  ಇಷ್ಟೇ ತಾನೆ ಹೇಳೋದು.  ಇದಕ್ಯಾಕೆ call ಮಾಡಿ ಇನ್ನೊಬ್ಬರ ತಲೆ ತಿನ್ನೋದು?  ತೆಪ್ಪಗೆ ನಿನ್ನಷ್ಟಕ್ಕೆ ನೀನಿರೋದು ಕಲಿತುಕೊ.

ಈ ತಿಳುವಳಿಕೆ ತಲೆಲಿ ಹೊಕ್ಕಿದ್ದೇ ತಡ ಮನಸ್ಸು ಹಗುರವಾಗಿ ಒಂದು ದೀರ್ಘ ನಿಟ್ಟುಸಿರಿನೊಂದಿಗೆ ನನ್ನದೇನೂ ನಡೆಯೋದಿಲ್ಲ ಅನಿಸಿಯೊ ಏನೊ ಅಲ್ಲಿಂದ ದೇಹ ಮೆಲ್ಲಗೆದ್ದು ಮಾಮೂಲಿ ಸ್ಥಿತಿಗೆ ಬಂದು ಇನ್ನಿತರ ಕೆಲಸದಲ್ಲಿ ಮಗ್ನವಾಗುತ್ತದೆ.  ಇದು ಎಷ್ಟು ಸೋಜಿಗ!   ಮಂಕುಬೂದಿ ಎರಚಿಕೊಂಡು  ತಾನು ಅಂದುಕೊಂಡಿದ್ದೆ ಸರಿ ಅಂತ ಒಂದು ಹಂತದಲ್ಲಿ ಪ್ರತಿಪಾದಿಸುವದು.  ಮತ್ತೆ ಅರೆಕ್ಷಣ ಸಾಕು ಸರಿ ತಪ್ಪುಗಳನ್ನು ವಿಶ್ಲೇಷಿಸಿ ಸಮಾಧಾನಗೊಳ್ಳಲು.  ಅಯ್ಯೋ! ಮನಸ್ಸೆ ಎಂತಾ ವಿಚಿತ್ರ ನೀನು.!!

ಬೇಕಿತ್ತಾ ಇದೆಲ್ಲಾ.  ಮಾಡೋಕೆ ಬೇಕಾದಷ್ಟು ಕೆಲಸ ಇತ್ತು.  ಓದೋಕೆ ಬೇಕಾದಷ್ಟು ಪುಸ್ತಕಗಳು ಇತ್ತು.  ಇನ್ನು ಮಾತಾಡಬೇಕು ಅಂದರೆ ಬೇರೆಯವರ್ಯಾರೂ ಸಿಗಲಿಲ್ವಾ?  ಎಲ್ಲಾ ಇದ್ದರೂ ಯಾಕೆ ಈ ಹಠ?  ನೋಡು ಎಷ್ಟು ಸಮಯ ಹಾಳು.  ಕಳೆದ ಸಮಯ ಮತ್ತೆ ಸಿಗಲು ಸಾಧ್ಯವಾ?  ಎಂತೆಲ್ಲಾ ವಿಚಾರ ಮತ್ತದೇ ಮನಸ್ಸಿಗೆ.  ಪರಿತಪಿಸೋದೂ ತಾನೆ ಹಠ ಮಾಡೋದೂ ತಾನೆ.

ಅಬ್ಬಾ! ಬೇಸರವೆಂಬ ಪದ ಆಗಾಗ ಸುತ್ತಿಕೊಳ್ಳುವ ಮನಸ್ಸೆ ನಿನ್ನ ನಿಗ್ರಹದಲ್ಲಿರಿಸಿಕೊಂಡು ಇರುವ ಸಮಯ ವ್ಯರ್ಥಗೊಳಿಸಿಕೊಳ್ಳದೆ ಬದುಕೋದೆ ನಿಜವಾದ ಬದುಕು.  ಇದು ಸತ್ಯ.  ಗುರಿ ಮುಟ್ಟುವ ಛಲ ಮುಕ್ತಗೊಳಿಸಿಕೊಳ್ಳಬೇಕು.  ಹಿರಿಯರ ನಾಣ್ಣುಡಿಯಂತೆ “ಈಜಬೇಕು ಇದ್ದು ಜಯಿಸಬೇಕು.”

ಮುಂದುವರಿಯುವುದು.

  • Geetha Hegade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!