Featured ಅಂಕಣ

ನಾಡು ನುಡಿಗಾಗಿ ಸರ್ಕಾರ ಸಂಘಟನೆಗಳ ಕರ್ತವ್ಯಗಳೇನು?

ಕನ್ನಡದ ಉದ್ಧಾರಕ್ಕೆ ಏನು ಮಾಡಬೇಕು ಎಂಬುದು ದಿನೇ ದಿನೇ ಗೋಜಲು ಗೋಜಲಾಗಿಯೇ ಉಳಿದಿದೆ. ಬಳಸದ ಭಾಷೆ ಅಳಿಯುವುದು ಖಚಿತ. ಇಡಿಯ ಜಗತ್ತಿನಲ್ಲಿ ಒಟ್ಟು ೭೦೦೦ ಭಾಷೆಗಳು ಪ್ರಸ್ತುತವಾಗಿ ಮಾತಾಡಲ್ಪಡುತ್ತಿವೆ. ಇದರಲ್ಲಿನ ಬಹುತೇಕ ಭಾಷೆಗಳು ಅಳಿವಿನಂಚಿನಲ್ಲಿವೆ.  ಒಂದು ಅಂದಾಜಿನ ಪ್ರಕಾರ ಪ್ರಸ್ತುತವಾಗಿ ಮಾತಾಡುತ್ತಿರುವ ಭಾಷೆಯ ಶೇಕಡಾ ೯೦ರಷ್ಟು ಭಾಷೆಗಳು ೨೦೫೦ರಷ್ಟರ ಹೊತ್ತಿಗೆ ಅಳಿದು ಹೋಗುತ್ತವೆ ಕಾರಣ ಮಾತಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಕನ್ನಡದ ಪರಿಸ್ಥಿತಿ ಬೇರೆಯೇ ಆಗಿದೆ. ಇಲ್ಲಿ ಮಾತಾಡುವವರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಭಾಷೆಯೊಂದಿಗೆ ರಾಜಕಾರಣದ ಸಲ್ಲದ ಮೈತ್ರಿ ಏರ್ಪಟ್ಟು ಭಾಷೆಯ ಬೆಳವಣಿಗೆ ಕುಂಠಿತವಾಗಿದೆ. ಅದಕ್ಕೆ ಪುಷ್ಟಿ ಕೊಡಲು ಕೆಲವು ರಾಜಕೀಯ ಪ್ರೇರಿತ ಕನ್ನಡ ಸಂಘಟನೆಗಳು ಬೆನ್ನಿಗೆ ನಿಂತಿವೆ. ಇದು ಸದ್ಯದ ಒಂದೇ ಸರ್ಕಾರದ ಕುರಿತಾದ ಮಾತಲ್ಲ ಹಿಂದೆ ಆಳಿಹೋದ ಎಲ್ಲ ಸರ್ಕಾರಗಳೂ ಇದಕ್ಕೆ ಹೊರತಲ್ಲ.

ನಿಜಕ್ಕೂ ಸರ್ಕಾರ ಮತ್ತು ಸಂಘಟನೆಗಳು ಭಾಷೆ ಮತ್ತು ನಾಡಿನ ಉಳಿವಿಗಾಗಿ ಮಾಡಬೇಕಾದದ್ದು ಏನು?

ಸರ್ಕಾರಿ ಶಾಲೆಯಲ್ಲಿ‌ನ ಮಕ್ಕಳಿಗೆ ಶೂ , ಮೊಟ್ಟೆ ವಿತರಣೆಯಂಥ ನಾಲ್ಕು ದಿನಕ್ಕಾಗುವ ಯೋಜನೆಗಳ ಬದಲು ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡುವ ಕೆಲಸ ಮಾಡಬೇಕು. ನಾನ್ಯಾಕೆ ಇದನ್ನಿಲ್ಲಿ ಉಲ್ಲೇಖಿಸುತ್ತಿದ್ದೇನೆ ಅಂದರೆ ಕನ್ನಡ ಶಾಲೆಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಹಲವು ಸರ್ಕಾರಿ ಶಾಲೆಗಳು (೧೦ ಕ್ಕೂ ಕಡಿಮೆ ಮಕ್ಕಳ ದಾಖಲಾತಿ ಇರುವ)  ಸಮೀಪದ ಶಾಲೆಗಳೊಂದಿಗೆ ಸೇರಿಸಲಾಗುತ್ತಿದೆ. ಇದರಲ್ಲಿನ ಹೆಚ್ಚು ಶಾಲೆಗಳು ಕನ್ನಡ ಮಾಧ್ಯಮದ್ದೇ ಆಗಿವೆ. ಸರ್ಕಾರ ಇಂಥ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಬದಲು ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿತು. ವೋಟ್’ಬ್ಯಾಂಕ್ ರಾಜಕಾರಣದ ಮುಸುಕಿನಲ್ಲಿ ತೆರೆಬಿದ್ದ ಕನ್ನಡದ ಶಾಲೆಗಳ ಉದ್ಧಾರ ಯಾರ ಹೊಣೆ. ಹೋದರೆ ಹೋಗಲಿ ಹೊಸ ಪಠ್ಯಪುಸ್ತಕಗಳೂ ಶಾಲೆಯನ್ನು ಸೇರಲು ವಿಳಂಬಗೊಂಡು ಸರ್ಕಾರಿ ಶಾಲೆಗಳ ಮೇಲಿನ ಭರವಸೆ ಮತ್ತಷ್ಟು ಕುಗ್ಗಿಹೋಯಿತು. ಕನ್ನಡವನ್ನು ಕಲಿಕೆಯಲ್ಲಿಯೇ ಉಳಿಸಲಾಗದ ಸರ್ಕಾರ ದೇವಾಲಯದಲ್ಲಿನ ಸಂಸ್ಕೃತದ ಮೇಲೆ ಕೆಂಗಣ್ಣು ಬೀರಿ ಅಲ್ಲಿ ಕನ್ನಡದ ಸಂಪ್ರೋಕ್ಷಣೆ ಮಾಡಲು ಮುಂದಾಗಿದೆ. ಯಾವುದೋ ದೇಶದ ಅರೆಬಿಕ್ ಭಾಷೆಯ ಉದ್ಧಾರಕ್ಕೆ ಅವಕಾಶ ಕೊಡುತ್ತಿದೆ. ನಮ್ಮದೇ ದೇಶದ ಹಿಂದಿ ಹೇರಿಕೆಯಾಗಿ ಕಾಣುತ್ತಿದೆ .

ಇದು ಶಾಲೆಯ ವಿಚಾರವಾದರೆ ಇನ್ನು ಸಾಹಿತ್ಯದ ವಿಚಾರ ಮಾತನಾಡಲೇಬೇಕು. ಜಾತಿಯ ಸಂಕೋಲೆಯಿಂದ ಮುಕ್ತವಾದ ಸಮಾಜವನ್ನು ಕಟ್ಟುವ ಇಚ್ಛೆ ಹೊಂದಿದ್ದ ವಚನಕಾರರ ಜಾತಿಯನ್ನು ಹುಡುಕಿ ತೆಗೆದು ಅವರ ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಅವರ ವಚನಗಳು ಅರ್ಧದಷ್ಟು ಭಾಗ ಇನ್ನೂ ಜನರಿಗೆ ತಲುಪಿಲ್ಲ. ಆ ಕೆಲಸಕ್ಕೆ ಸರ್ಕಾರ ಮುಂದಡಿಯಿಡಬೇಕು. ಮೊದಲಿಂದ ಇಲ್ಲಿಯವರೆಗಿನ ಯಾವ ಸಾಹಿತ್ಯ ಕೃತಿಗಳು ಲಭ್ಯವಿಲ್ಲವೋ ಅವೆಲ್ಲ ಕೃತಿಗಳ ಮರುಮುದ್ರಣ ಮಾಡಿ ಬೇರೆ ಭಾಷೆಗಳಿಗೂ ತರ್ಜುಮೆಗೊಳಿಸಿ ದಶದಿಶೆಗಳಿಗೂ ಕನ್ನಡದ ಕಂಪನ್ನು ಪಸರಿಸಬೇಕು. ಸಾಹಿತ್ಯ ಸಮ್ಮೇಳನಗಳಂತೂ ಸರ್ಕಾರಿ ಒಡ್ಡೋಲಗದಂತಾಗಿವೆ. ಗೋಷ್ಟಿಯ ವಿಚಾರಗಳಂತೂ ಅವೇ ಚರ್ವಿತಚರ್ವಣ. ಅಲ್ಲಿ ಸನ್ಮಾನಿತ ಮತ್ತು ವೇದಿಕೆ ಏರಿದಂತ ಸಾಹಿತಿಗಳಿಗೆ ಬಡತನ, ಶೋಷಣೆ, ಪುರೋಹಿತಷಾಹಿ , ಸಮಾನತೆ , ಹಸಿವು ಪದಗಳ ಹೊರತಾಗಿ ಮಾತಾಡಿ ಮತ್ತು ಸಾಹಿತ್ಯ ರಚಿಸಿ ಎಂದೇನಾದರೂ ಕಟ್ಟಳೆ ವಿಧಿಸಿ ಬಿಡಿ ನೋಡೋಣ. ಅಕ್ಷರ ಜಾತ್ರೆಯ ವೇದಿಕೆಯಲ್ಲಿಯೇ ಈ ಸಾಹಿತಿಗಳಿಗೆ ಶಾಶ್ವತ ಅಕ್ಷರ ಸಂನ್ಯಾಸ ದೀಕ್ಷೆ ಕೊಡಬೇಕಾದೀತು. ದುಂದುವೆಚ್ಚದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಬದಲು ಅದೇ ಮೊತ್ತದಲ್ಲಿ ಕನ್ನಡದ ಬಗೆಗಿನ ಸಾಕ್ಷ್ಯಚಿತ್ರಗಳನ್ನು, ಕನ್ನಡದ ಪುರಾತನ ಇತಿಹಾಸಕ್ಕೆ ಕನ್ನಡಿ ಹಿಡಿಯುವಂತಿರುವ ವಸ್ತು ಸಂಗ್ರಹಾಲಯಗಳನ್ನೋ, ಕೆಲವು ಕುಗ್ರಾಮಗಳಿಗೆ ಗ್ರಂಥಾಲಯಗಳನ್ನೋ ನಿರ್ಮಿಸಬೇಕು. ಇಲ್ಲವೇ ಕನ್ನಡದ ಶ್ರೇಷ್ಟ ಸಾಹಿತಿಗಳ  ನೆನಪನ್ನು ಚಿರಸ್ಥಾಯಿಯಾಗಿ ಇಡಬಲ್ಲ ಕವಿಶೈಲ, ಥೀಮ್‌ ಪಾರ್ಕ್‌, ಸಾಧನಕೇರಿಯ ಬೇಂದ್ರೆಯವರ ಮನೆಯಂಥ ಮನೆಗಳು ನಿರ್ಮಾಣವಾಗಬೇಕು. ಅದರಿಂದ  ಪ್ರವಾಸೋದ್ಯಮಕ್ಕೂ ಲಾಭ.

ಕರ್ನಾಟಕದುದ್ದಕ್ಕೂ ಹುಡುಕಿ ತೆಗೆದರೆ ಇನ್ನೂ ಎಷ್ಟೋ ಪ್ರವಾಸಿ ಕ್ಷೇತ್ರಗಳನ್ನು ಹುಡುಕಿ ತೆಗೆಯಬಹುದು. ಪ್ರವಾಸದ ಆಸಕ್ತಿಯಿರುವವರಿಗೆ ಬೇಸಿಗೆ ಮಳೆ ಮತ್ತು ಚಳಿಗಾಲವೆಂಬ ತ್ರಿಕಾಲಕ್ಕೂ ಸಲ್ಲುವ ಕ್ಷೇತ್ರಗಳು ರಾಜ್ಯಾದ್ಯಂತ ಇವೆ. ಇಂಥ ಪ್ರವಾಸಿ ತಾಣಗಳನ್ನು ಉಳಿಸಿಕೊಳ್ಳುವುದೂ ಕೂಡಾ ಕನ್ನಡದ ಅಸ್ಮಿತೆಯನ್ನು ಉಳಿಸಿದಂತೆ.  ಉತ್ತರ ಕರ್ನಾಟಕದ ಹಲವು ಪ್ರವಾಸಿ ಕೇಂದ್ರಗಳೆಡೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರವಾಸಿ ಕೇಂದ್ರಗಳ ಸುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸುವ ಕನಿಷ್ಟ ಕಾಳಜಿಯನ್ನು ಸರ್ಕಾರ ಮರೆತಂತಿದೆ. ನಮ್ಮ ಐತಿಹ್ಯವನ್ನು ಸಾರುವ ಈ ಕ್ಷೇತ್ರಗಳನ್ನು  ಮೊದಲಿದ್ದಂತೆಯೇ ಅಥವಾ ಅದಕ್ಕಿಂತಲೂ ಚೆನ್ನಾಗಿ ಮುಂದಿನ ಪೀಳಿಗೆಗೆ ರವಾನಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ಐತಿಹಾಸಿಕ ಸ್ಥಳಗಳ ಪಕ್ಕ ಮಾಹಿತಿ ಫಲಕದಂತೆಯೇ ಅಲ್ಲಿಯೇ ಒಂದು ಕೊಠಡಿಯ ವ್ಯವಸ್ಥೆ ಮಾಡಿ ಅಲ್ಲಿ ಆ ಸ್ಥಳಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡುವ ವ್ಯವಸ್ಥೆ  ಮಾಡಬೇಕಿದೆ. ಪ್ರವಾಸಿ ಸ್ಥಳಗಳಲ್ಲಿನ ಯಾತ್ರಿ ನಿವಾಸದ ಗುಣಮಟ್ಟ ಹೆಚ್ಚಿಸಬೇಕಿದೆ. ಯಾತ್ರಿ ನಿವಾಸ ಇಲ್ಲದ ಜಾಗಗಳಲ್ಲಿ ಅವುಗಳ ನಿರ್ಮಾಣವಾಗಬೇಕಿದೆ.

ಕರ್ನಾಟಕ ಸದ್ಯಕ್ಕೆ ಎದುರಿಸುತ್ತಿರುವ ಸಮಸ್ಯೆ ಬರ(ಈ ವರ್ಷ ಕೊಂಚ ಮಳೆಯಾಗಿದೆ) ಮತ್ತು  ಮಳೆಯಾದಾಗ ಮಳೆ ನೀರಿನ ಕಳಪೆ ನಿರ್ವಹಣೆ. ಮಳೆ ಬಾರದಿರುವ ಕುರಿತು ಹವಾಮಾನ ಇಲಾಖೆಯವರು ಪ್ರತಿ ವರ್ಷ ಸಾಕಷ್ಟು ಮೊದಲೇ ತಿಳಿಸಿದ್ದರೂ ನಮ್ಮ ವಿಳಂಬ ನೀತಿ ಮತ್ತು ನಿರ್ಲಕ್ಷ್ಯದಿಂದ ಬರ ನಿರ್ವಹಣೆ ಕಷ್ಟಸಾಧ್ಯವಾಗಿದೆ. ರಾಜ್ಯದ ಪಶ್ಚಿಮ ಗಡಿಗಂಟಿರುವ ಕರಾವಳಿಯಲ್ಲಿ ಒಂದಷ್ಟು ನಿರ್ಲವಣಾಗಾರಗಳನ್ನು ತೆಗೆಯಬೇಕು. ಇಂಥ ಘಟಕಗಳಿಗೆ ಆಗುವ ಖರ್ಚು ವೆಚ್ಚಗಳು ಜಾಸ್ತಿಯಾಗಿದ್ದರೂ ಸದ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಗುರುತಿಸಿ ಬರ ನಿರ್ವಹಣೆಗೆ ಮಾಡುತ್ತಿರುವ ಖರ್ಚು ಮತ್ತು ಬರಪೀಡಿತ ಪ್ರದೇಶಗಳಿಗೆ ಕೊಡುತ್ತಿರುವ ಪರಿಹಾರ ಧನಗಳಿಗೆ ಸರಿಸಮವಾಗಬಲ್ಲದು. ನಿರ್ಲವಣಾಗಾರಗಳ ನಿರ್ಮಾಣ ವೆಚ್ಚ ಜಾಸ್ತಿ ಎನಿಸಿದರೆ ರಾಜ್ಯದುದ್ದಕ್ಕೂ ಇರುವ ಕೆರೆ ಕಲ್ಯಾಣಿಗಳ ಹೂಳೆತ್ತುವ ಕೆಲಸಕ್ಕಾದರೂ ಕೈ ಹಾಕಬೇಕಿದೆ. ಬೆಂಗಳೂರಿನಲ್ಲಿನ ವರ್ತೂರ ಕೆರೆಯೊಂದೆ ಬೆಂಗಳೂರಿನ ನೀರಿನವಶ್ಯಕತೆಯ ಸಿಂಹಪಾಲನ್ನು ಪರಿಹರಿಸಬಲ್ಲದು ಎಂದು ವರದಿಯೊಂದು ಸಾಭೀತು ಪಡಿಸಿದೆ. ಬೆಂಗಳೂರಿನ ಎಲ್ಲ ಕೆರೆಗಳನ್ನು ಶುದ್ಧಿಕರಿಸಿದರೆ ಕಾವೇರಿಯ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ ಅಲ್ಲದೇ ದೊಡ್ಡ ಮಟ್ಟದ ಮಳೆಯಾದಾಗ ಮಳೆ ನೀರನ್ನು ಕಾಪಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಇಂಥ ದೀರ್ಘಕಾಲಕ್ಕಾಗುವ ಯೋಜನೆಗಳು ಯಾಕೆ ಸರ್ಕಾರದ ಅರಿವಿನ ಪರಿಧಿಗೆ ಬರುವುದಿಲ್ಲ? ಎತ್ತಿನ ಹೊಳೆಯಂತಹ ಅಪ್ರಾಯೋಗಿಕ ಯೋಜನೆಗಳಿಗೆ ಯಾಕೆ ಕೈ ಹಾಕುತ್ತಿದೆ?

ಇವೆಲ್ಲಾ ಸರ್ಕಾರದ ಭಾಗವಾದರೆ ಸಂಘಟನೆಗಳ ಕರ್ತವ್ಯಗಳೂ ಹಲವಿವೆ. ಪ್ರತಿ ಸಂಘಟನೆ ತಾನು ಮಾಡುವ ಪ್ರತಿಭಟನೆ ಪಕ್ಷಾತೀತವಾಗಿದೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಜರೂರತ್ತಿದೆ. ಒಂದು ಪ್ರತಿಭಟನೆಯ ಪ್ರತಿಫಲ ದೀರ್ಘ ಕಾಲಕ್ಕೆ ಸಲ್ಲುವಂತಿರಬೇಕು. ಜಿಮ್’ಗಳಲ್ಲಿನ ಹಿಂದಿ ಹಾಡು ನಿಲ್ಲಿಸುವುದೇ ಕನ್ನಡದ ಗೆಲುವಲ್ಲ. ಜಿಮ್’ನಲ್ಲಿ ಕನ್ನಡದ ಹಾಡು ಐದು ನಿಮಿಷದ್ದು ಶಾಲೆಗಳಲ್ಲಿ ಕನ್ನಡ ಉಳಿದರೆ ಮತ್ತೊಂದು ಪೀಳಿಗೆಗೆ ಕನ್ನಡ ಉಳಿಸಿದಂತೆ. ಕನ್ನಡ ಮಾತಾಡಿದ ಮಿಷನರಿ ಸ್ಕೂಲಿನ ಮಗು ದಂಡ ತೆತ್ತು ಬರುತ್ತಿದೆ. ಕನ್ನಡ ಕಿಲೋಮೀಟರ್ ಕಲ್ಲುಗಳ ಮೇಲೆ ಉಳಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಿಷನರಿ ಸ್ಕೂಲುಗಳ ಕಪ್ಪು ಹಲಗೆಯ ಮೇಲೆ ಉಳಿಸುವುದಾಗಿದೆ. ಕನ್ನಡಕ್ಕೆ ಅಧಿಕೃತ ಧ್ವಜ ಹೊಂದುವುದಕ್ಕಿಂತ ತುರ್ತಾಗಿ ಕನ್ನಡದ ಅಲಭ್ಯ ಸಾಹಿತ್ಯದ ಮರುಮುದ್ರಣಗೊಳಿಸಿ ಎಲ್ಲೆಡೆ ಹರಡಬೇಕಾಗಿದೆ. ಕಾವೇರಿ ಮಹದಾಯಿಯಂಥ ನದಿ ನೀರಿನ ಹಂಚಿಕೆಗಳು ಪ್ರತಿವರ್ಷ ರಾಜಕಾರಣದ ವಸ್ತುವಾಗುವುದರ ಬದಲು ಒಂದು ಶಾಶ್ವತ ಒಪ್ಪಂದ ಮಾಡಿಕೊಳ್ಳುವಂತೆ ಕನ್ನಡ ಸಂಘಟನೆಗಳು ಸರ್ಕಾರಕ್ಕೆ ಒತ್ತಡ ತರಬೇಕಿದೆ. ಒಂದು ವೇಳೆ ಬರ ಬಡಿದರೆ ಕೆರೆ ಶುದ್ಧೀಕರಣದಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಸರ್ಕಾರಕ್ಕೆ ಭಿನ್ನಹಿಸಬೇಕಾಗಿದೆ.

ಕನ್ನಡವನ್ನು ಅಳಿದು ಹೋದ ಭಾಷಾ ಪಟ್ಟಿಯಲ್ಲಿ ನೋಡಬಾರದು ಎಂಬ ಇಚ್ಛೆ ಇದ್ದರೆ ಸರ್ಕಾರಗಳು( ಯಾವುದೇ ಪಕ್ಷದ್ದಾಗಿರಲಿ) ಸ್ವ ಇಚ್ಚೆಯಿಂದ ಇಂಥ ಕೆಲಸಗಳಿಗೆ ಮುಂದಾಗಬೇಕು. ಸಂಘಟನೆಗಳು ಇಂಥ ಯೋಜನೆಗಳನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ಕನ್ನಡ ಭಾಷೆ ಶಾಶ್ವತವಾಗಿ ಉಳಿಯಬೇಕು. ನಾಡು ಸಮೃದ್ಧವಾಗಿ ಇರಬೇಕು ಎಂಬುದರಲ್ಲಿ ನಮ್ಮ ವೈಯುಕ್ತಿಕ ಕೆಲಸಗಳೇನು ಎಂಬುದನ್ನು ಮರೆಯದಿರೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!