ಬಾರ್ಸಿಲೋನಾ ನಗರಕ್ಕೆ ಕೆಲಸ – ಬದುಕು ಅರಸಿ ಬಂದು ವರ್ಷವೂ ತುಂಬಿರಲಿಲ್ಲ . ಹೇಗೋ ಕಷ್ಟಪಟ್ಟು ಸ್ಪಾನಿಷ್ ಭಾಷೆಯನ್ನು ಸಂವಹನಕ್ಕೆ ಬೇಕಾದಷ್ಟು ಕಲಿತಿದ್ದೆ. ಅಲ್ಲಿನ ಕಥೆ, ಕವನ, ಕಾದಂಬರಿಗಳ ಓದಬೇಕೆನ್ನುವ ಬಯಕೆ, ಅಲ್ಲಿಗೂ ನಮ್ಮ ಕನ್ನಡ ನಾಡಿಗೂ ಒಂದು ಸಾಂಸ್ಕೃತಿಕ ಸೇತುವೆ ಬೆಸೆಯಬೇಕೆನ್ನುವ ಯಾವ ಬಯಕೆಯೂ ಇಲ್ಲದ ಹೊಸದಾಗಿ ಕಾಣುತಿದ್ದ ಬದುಕನ್ನು ಹಸಿಹಸಿಯಾಗಿ ಆಸ್ವಾದಿಸುವುದಷ್ಟೆ ಬದುಕಾಗಿತ್ತು.
ಎರಡು ಸಾವಿರ ಇಸವಿಯ ಆಗಸ್ಟ್ ತಿಂಗಳ ಒಂದು ದಿನ. ನಗರದ ಕೇಂದ್ರ ಭಾಗಕ್ಕೆ ಹೋಗಲು ಟ್ಯಾಕ್ಸಿ ಹಿಡಿದೆ. ಡ್ರೈವರ್’ನ ಕುರಿತು ಎಷ್ಟು ವರ್ಷದಿಂದ ಈ ವೃತ್ತಿಯಲ್ಲಿದ್ದೀಯಾ? ಎಷ್ಟು ಗಂಟೆ ಕೆಲಸ ಮಾಡುತ್ತೀಯಾ? ಮುಂತಾದವುಗಳ ಕುರಿತು ಮಾತನಾಡುತ್ತಿದ್ದೆ. ಮಾತಿನ ಮಧ್ಯದಲ್ಲಿ ಆತ ನನ್ನ ಕುರಿತು ನಿನಗಿಲ್ಲಿ ಎಷ್ಟು ವರ್ಷ ಆಯ್ತು? ಎಂದ ನಾನು ವರ್ಷ ಇನ್ನೂ ತುಂಬಿಲ್ಲ ಎಂದೆ . ಅವನು ಆಶ್ಚರ್ಯಚಕಿತನಾಗಿ ನೀನು ಸ್ಪಾನಿಷ್ ಭಾಷೆಯನ್ನ ಚೆನ್ನಾಗಿ ಮಾತನಾಡುತ್ತೀಯ ಎಂದ. ನಾನು ತುಸು ಸಂಕೋಚದಿಂದ ಇಲ್ಲಿಲ್ಲ … ಇನ್ನು ಕಲಿಯುವುದಕ್ಕೆ ಬಹಳಷ್ಟಿದೆ ಎಂದೆ. ಅವನು “ನೋ ಪಸ ನಾದ ತಿಯೋ ಕೊಮಿಯಂದೋ ಎಂತ್ರ ಲಾ ಗಾನ (Comiendo entra la gana.)” ಎಂದ. ನನಗೆ ಇದು ಹೊಸ ಪದ. ಅದರ ಮೂಲಾರ್ಥ ತಿಳಿಯಲಿಲ್ಲ . ಹಾಗೆಂದರೇನು ಎಂದು ಅವನನ್ನೇ ಕೇಳಿದೆ. ಆತ ಇದು ರೇಫರಾನ್ ಸ್ಪಾನ್ಯೋಲ್ ( ಸ್ಪಾನಿಷ್ ಗಾದೆ ) ಎಂದ . ಪ್ರವಾಸಿಗರಾಗಿ ಹೋದರೆ ತಿಳಿಯದ ದೇಶದ ಇನ್ನೊಂದು ಮುಖ ಕಂಡಿತು.
ನಮ್ಮಲ್ಲಿ ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ ಎನ್ನುವ ಮಾತಿದೆ . ನನಗೆ ಬರುವುದಿಲ್ಲ ಎಂದು ಕೂತರೆ ಏನೂ ಬರುವುದಿಲ್ಲ ಹೇಗೋ ಏನೋ ಶುರು ಮಾಡಿದರೆ ಸಾಕು ಉಳಿದದ್ದು ತಾನಾಗೇ ಆಗುತ್ತದೆ ಎನ್ನುವ ಅರ್ಥ ಈ ಗಾದೆ ಮಾತು ನೀಡುತ್ತದೆ. ಒಂದು ಭಾಷೆ ಒಂದೊಂದೆ ಪದ ಸೇರಿ ಭಾಷೆಯಾಗುತ್ತದೆ ಅದು ನಿತ್ಯ ಒಪ್ಪೊತ್ತಿನಲ್ಲಿ ಭಾಷೆಯಾಗಿ ಬೆಳೆಯಲಿಲ್ಲ ಹಾಗೆಯೆ ಹಾಡಿನ ರಾಗ ಎಷ್ಟೇ ಕಷ್ಟವಿರಲಿ ಹಾಡುತ್ತ ಹಾಡುತ್ತ ನಮ್ಮ ಬಯಕೆಯ ರಾಗ ಮೂಡುತ್ತದೆ. ಅಥವಾ ಸಂಪೂರ್ಣವಾಗುತ್ತದೆ ಎನ್ನುವುದು ಈ ಮಾತಿನ ಅರ್ಥ. ಬಾರ್ಸಿಲೋನಾ ದಲ್ಲಿ ಸಿಕ್ಕ ಟ್ಯಾಕ್ಸಿ ಡ್ರೈವರ್ ಹೇಳಿದ ಮಾತಿನ ಅರ್ಥವೂ ಕೂಡ ಮುಕ್ಕಾಲು ಪಾಲು ಇದೆ ಅರ್ಥವನ್ನ ನೀಡುತ್ತದೆ. ತಿನ್ನುತ್ತಾ ಹಸಿವು ಹೆಚ್ಚುತ್ತದೆ ಅಥವಾ ತಿನ್ನಲು ಶುರು ಮಾಡಿದ ಮೇಲೆ ಆಸೆ ಶುರುವಾಗುತ್ತದೆ ಎನ್ನುವುದು ನಿಘಂಟಿನ ಅರ್ಥ. ನನಗಿಷ್ಟವಿಲ್ಲ ಎಂದೂ ಅಥವಾ ಅದು ನನಗೆ ಬರುವುದಿಲ್ಲ ಎಂದು ಸುಮ್ಮನೆ ಕುಳಿತರೆ ಅದು ನಮ್ಮಿಂದ ಸಾಧ್ಯವಾಗುವುದೇ ಇಲ್ಲ. ಒಳ್ಳೆಯ ಮನಸ್ಸಿನಿಂದ ಕೆಲಸ ಶುರು ಮಾಡಿದರೆ ನಂತರ ಆ ಕೆಲಸದಲ್ಲಿ ಆಸೆ, ಆಸಕ್ತಿ, ಯಶಸ್ಸು ಸಿಗುತ್ತದೆ ಎನ್ನುವುದು ಒಳಾರ್ಥ .
ಇನ್ನು ಇಂಗ್ಲಿಷ್ ಭಾಷಿಕರು Appetite comes with eating ಎನ್ನುವ ನಾಣ್ಣುಡಿಯನ್ನು ಬಳಸುತ್ತಾರೆ. ಇಲ್ಲಿಯೂ ಮೇಲ್ನೋಟಕ್ಕೆ ಊಟದ ಬಗ್ಗೆ ಮಾತನಾಡಿದರೂ ಅಂತರಾರ್ಥದಲ್ಲಿ ಕೆಲಸ ಮಾಡುವುದರಿಂದ ಇನ್ನಷ್ಟು ಕೆಲಸ ಮಾಡಬೇಕೆನ್ನುವ ಹಸಿವು ಬರುತ್ತದೆ ಎನ್ನುವುದೇ ಆಗಿದೆ.
ಹೆಚ್ಚಿನ ಭಾಷೆ ಕಲಿಯುತ್ತಾ ಹೋದಂತೆಲ್ಲಾ ಮತ್ತು ಅಲ್ಲಿನ ಗಾದೆಗಳನ್ನು, ಆಡು ಮಾತುಗಳನ್ನು ಕಲಿಯುತ್ತ ಹೋದಂತೆ ನಾವು ವಾಸಿಸುವ ಮರ ಬೇರೆಯಿರಬಹದು, ನಮ್ಮ ಧ್ವನಿ ಬೇರೆಯಿರಬಹದು, ನೋಡಲು ಕೂಡ ಒಂದೇ ರೀತಿಯಲ್ಲಿ ಇಲ್ಲ. ಆದರೂ ನಮ್ಮ ಮನಸ್ಸಿನ ಭಾವನೆಗಳು ವಿಶಾಲ ಭಾವದಿಂದ ನೋಡಿದರೆ ನಾವೆಲ್ಲ ಒಂದೇ ಗೂಡಿನ ಹಕ್ಕಿಗಳು ಎನ್ನುವ ಅರಿವಾಗುತ್ತದೆ. ಸಂಕುಚಿತೆಯ ಸಂಕೋಲೆ ಕಳಚಿಡಬೇಕಷ್ಟೆ.
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Comiendo : ತಿನ್ನು .., ತಿನ್ನುತ್ತಾ ಎನ್ನುವ ಅರ್ಥ ಕೊಡುತ್ತದೆ . ಕೊಮಿಯಂದೋ ಎನ್ನುವುದು ಉಚ್ಚಾರಣೆ.
entra : ಬರುತ್ತದೆ .., ಒಳಗೆ ಬಾ ಎನ್ನುವ ಅರ್ಥ . ಎಂತ್ರ ಎನ್ನುವುದು ಉಚ್ಚಾರಣೆ.
la : ಇಂಗ್ಲಿಷ್ ನ ದಿ ಎನ್ನುವ ಅರ್ಥ . ಲಾ ಎನ್ನುವುದು ಉಚ್ಚಾರಣೆ.
gana : ಇಲ್ಲಿ ಆಸೆ ಎನ್ನುವ ಅರ್ಥ ಕೊಡುತ್ತದೆ . ಆಸಕ್ತಿ ಎನ್ನುವ ಅರ್ಥ ಕೂಡ ಸಂಧರ್ಭಕ್ಕೆ ತಕ್ಕಂತೆ ಬಳಸಬಹದು. ಗಾನ ಎನ್ನುವುದು ಉಚ್ಚಾರಣೆ.