Featured ಅಂಕಣ

ಪಕೋಡವನ್ನಾದ್ರೂ ಮಾರಿ, ಚಹವನ್ನಾದ್ರೂ ಮಾರಿ, ನಿಮ್ಮನ್ನೇ ನೀವು ಮಾರ್ಕೋಬೇಡಿ!

ಒಂದು ಸಂದರ್ಶನದಲ್ಲಿ ಮೋದಿಜಿ ನಿರುದ್ಯೋಗದ ಕುರಿತು ಮಾತನಾಡುತ್ತಾ ಹೇಳುತ್ತಾರೆ ” ಕೇವಲ ಸರ್ಕಾರಿ ಕೆಲಸ ಅಥವಾ ಕಂಪನಿಯಲ್ಲಿ ಕೆಲಸ ಅಷ್ಟನ್ನೇ ಉದ್ಯೋಗ ಎಂದು ಪರಿಗಣಿಸಲು ಆಗುವುದಿಲ್ಲ. ಸಣ್ಣ ಪುಟ್ಟ ಉದ್ದಿಮೆ ನಡೆಸಿಕೊಂಡು ಹೋದರೂ ಅದು ಉದ್ಯೋಗವೇ. ನಿಮ್ಮ ಸ್ಟುಡಿಯೋ ಎದುರು ಒಬ್ಬ ಪಕೋಡವನ್ನು ಮಾರಿ ದಿನಕ್ಕೆ ಇನ್ನೂರು ರೂಪಾಯಿ ಗಳಿಸಿದರೆ ಅದು ಉದ್ಯೋಗ ಅಲ್ಲವೇ?”. ಈ ಮಾತಿಗೆ ಕೆಲವು ವಿರೋಧ ಪಕ್ಷದ ನಾಯಕರು ಹಾಗೂ ಅವರ ಅನುಯಾಯಿಗಳು ಸಿಡಿದಿದ್ದಾರೆ. “ಮೋದಿಜಿ ನಮ್ಮನ್ನು ಪಕೋಡ ಮಾಡು ಅನ್ನುತ್ತಿದ್ದಾರೆ” ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋದಿಜಿಯವರ ಈ ಹೇಳಿಕೆಯಲ್ಲಿ ತಪ್ಪೇನಿದೆ? ಪಕೋಡ ಮಾಡಿ ಜೀವನ ನಡೆಸುವುದು ತಪ್ಪಾ? ಕೆಲವೊಂದು ನಿದರ್ಶನಗಳನ್ನು ಇಲ್ಲಿ ಇಡುತ್ತೇನೆ. ಬೆಂಗಳೂರಿನ ಬನ್ನೇರುಘಟ್ಟ ರೋಡಿನಲ್ಲಿ ರಾತ್ರಿ ಹೊತ್ತು ಒಬ್ಬ ಚಹಾ ಮಾರಲು ಬರುತ್ತಾನೆ. ರಾತ್ರಿ ಚಹಾ ಮಾರಿ ಬೆಳಿಗ್ಗೆ ಮನೆಗೆ ಹೋಗುತ್ತಾನಂತೆ. ರಾತ್ರಿಯೆಲ್ಲ ಕೆಲಸ ಮಾಡಿ ಬೆಳಿಗ್ಗೆ ಮನೆಗೆ ಹೋಗುವ ಕಾಲ್ ಸೆಂಟರ್ ಉದ್ಯೋಗಿಯ ಹಾಗೆ. ಬಡತನದಲ್ಲಿ ಬೆಳೆದು  ಬಂದವರು ಅವರು, ಬೆಂಗಳೂರಿನಲ್ಲಿ ಅವರ ಹತ್ತಿರ ಇವತ್ತು  ಮೂರು ಮಹಡಿಯ ಮನೆಯಿದೆ.

ಪುಣೆಯಲ್ಲಿ ಒಬ್ಬ ವಡಾಪಾವ್ ಮಾಡುವ ವ್ಯಕ್ತಿಯ ಹತ್ತಿರ ಕೇವಲ ಮನೆ, ಕಾರು ಅಲ್ಲ ಇಡೀ ಕಟ್ಟಡ ಸಂಕೀರ್ಣವೇ ಇದೆ. ಬರೋಡಾದಲ್ಲಿದ್ದಾಗ ನನ್ನ ಗೆಳೆಯರು ಒಂದು ಚಹಾ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ಆ ಚಹಾ ಅಂಗಡಿಯ ಮಾಲೀಕ ನಮ್ಮೊಡನೆ ಮಾತನಾಡುತ್ತಾ ಹೇಳುತ್ತಿದ್ದರು, ‘ಮುಂದಿನ ತಿಂಗಳ ಕೊನೆಗೆ ನನ್ನ ಫ್ಯಾಕ್ಟರಿಯ ಉದ್ಘಾಟನೆ ಇದೆ. ಅದಕ್ಕೆ ದಯವಿಟ್ಟು ನೀವು ಬರಬೇಕು’ ಅಂತ. ಅಷ್ಟು ದೂರ ಯಾಕೆ? ಕಾಮತ್ ಹೋಟೆಲ್ ಸಂಸ್ಥೆಯ ಸಂಸ್ಥಾಪಕರು ಒಂದು ಸಣ್ಣ ಹೋಟೆಲ್ ಇಟ್ಟುಕೊಂಡೇ ಶುರು ಮಾಡಿದ್ದು ಅಲ್ಲವೇ? ಜಗತ್ತಿನಲ್ಲಿ ಇಂದು ಕಾಮತ್ ಹೋಟೆಲ್ ಇಲ್ಲದ ಖಂಡವಿಲ್ಲ. ಕಾಂಚೀಪುರಂನಿಂದ ಐವತ್ತು ಕೀಮಿ ದೂರದಲ್ಲಿ ಒಂದು ಆಸ್ಪತ್ರೆಯಿದೆ. ಎಷ್ಟು ದೊಡ್ಡ ಆಸ್ಪತ್ರೆ ಎಂದರೆ ಸುತ್ತ ಮುತ್ತ ಹತ್ತು ಹಳ್ಳಿಯ ಜನರು ಅಲ್ಲಿಗೇ ಬರುತ್ತಾರೆ. ಅಷ್ಟು ದೊಡ್ಡ ಆಸ್ಪತ್ರೆಯನ್ನು ನಡೆಸುತ್ತಿರುವವರು ಇಬ್ಬರು ಡಾಕ್ಟರ್ ಗಳು. ಅವರನ್ನು ಬೆಳೆಸಿ, ಓದಿಸಿ ವೈದ್ಯರನ್ನಾಗಿ ಮಾಡಿದ್ದು ಅವರ ತಂದೆ. ಇವತ್ತೂ ಆ ದೊಡ್ಡ ಆಸ್ಪತ್ರೆಯ ಕಟ್ಟಡದ ಪಕ್ಕ ಸಣ್ಣದೊಂದು ಮಾಂಸದ ಅಂಗಡಿಯಿದೆ. ತನ್ನದು ಮಾಂಸದ ಅಂಗಡಿ ಇದ್ದರೇನು ಮಕ್ಕಳನ್ನು ಓದಿಸಿ, ಡಾಕ್ಟರನ್ನಾಗಿ ಮಾಡಿ ಆಸ್ಪತ್ರೆ ಕಟ್ಟಿಸಿ ಹತ್ತೂರಿಗೆ ನೆರವಾಗುತ್ತೇನೆ ಎನ್ನುವ ಸಂಕಲ್ಪ ತೊಟ್ಟಿದ್ದರಂತೆ ಒಂದು ಕಾಲದಲ್ಲಿ ಶೇಖ್ ಭಾಯ್. ಅಂಬಾನಿ ಕೆಲಸ ಮಾಡುತ್ತಿದ್ದಿದ್ದು ಪೆಟ್ರೋಲ್ ಬಂಕ್  ಒಂದರಲ್ಲಿ, ಇನ್ನೊಬ್ಬರಿಗೆ ಕೆಲಸ ಮಾಡಿದ್ದು ಸಾಕು ಸ್ವಂತವಾಗಿ ಏನಾದರೂ ಮಾಡೋಣ ಅಂತ ಬಟ್ಟೆ ವ್ಯಾಪಾರ ಶುರು ಮಾಡಿದ ಘಟನೆಯ ಬಗ್ಗೆ ನಾವೆಲ್ಲ ಕೇಳಿದ್ದೇವೆ. ನಂತರ ಧೀರೂಭಾಯಿ ಅಂಬಾನಿ ಭಾರತದ ಕೋಟ್ಯಾಂತರ ಜನರಲ್ಲಿ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡರು. ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟರು. ಇವತ್ತಿನ ನಮ್ಮ ದೇಶದ ಪ್ರಧಾನಿ ಮೋದಿಜಿಯವರು ಚಿಕ್ಕವರಿದ್ದಾಗ ಚಹಾ ಮಾರುತ್ತಿದ್ದರಂತೆ. ಅದೊಂದು ಉದ್ಯೋಗವೇ ಆಗಿತ್ತು ಅಲ್ಲವೇ?  ಇವರೆಲ್ಲ ಶ್ರಮಜೀವಿಗಳು. ಕಳ್ಳತನ ಮಾಡುತ್ತಿಲ್ಲ, ಸುಳ್ಳು ಹೇಳಿ ಜೀವನ ನಡೆಸುತ್ತಿಲ್ಲ. ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದಾರೆ. ಲಾಭ ಸಿಗುತ್ತದೆ ಎಂದು ತಮ್ಮನ್ನು ಮತ್ತೊಬ್ಬರಿಗೆ ಮಾರಿಕೊಂಡಿಲ್ಲ. ದೇವರು ಬುದ್ಧಿ ಕೊಟ್ಟಿದ್ದಾನೆ ಅಂತ ಅದನ್ನು ಸಮಾಜಕ್ಕೆ ಕೆಡಕಾಗುವಂತೆ ಬಳಸಿಕೊಂಡಿಲ್ಲ.

ಇವರದ್ದೆಲ್ಲ ಶ್ರಮದ ಜೀವನ ಹೆಮ್ಮೆಯ ಜೀವನ . ಪಕೋಡಾ ಮಾರುವುದರಲ್ಲಿ, ತರಕಾರಿ ಮಾಡುವುದರಲ್ಲಿ ಅಥವಾ ಒಂದು ಸಣ್ಣ ವ್ಯಾಪಾರ ಮಾಡುವುದರಲ್ಲಿ ತಪ್ಪೇನಿದೆ?

ನಮ್ಮ ಮಾಜಿ ಆರ್ಥಿಕ ಸಚಿವರು ಮೋದಿಜಿಯವರ ಈ ಹೇಳಿಕೆಯನ್ನು ಖಂಡಿಸಿ ಪಕೋಡಾ ಮಾರುವುದನ್ನು ಭಿಕ್ಷೆ ಬೇಡುವುದಕ್ಕೆ ಹೋಲಿಸಿದ್ದಾರೆ! ಮೋದಿಯವರ ಪ್ರಕಾರ ಪಕೋಡಾ ಮಾರುವುದು ಒಂದು ಉದ್ಯೋಗವಾದರೆ ಚಿದಂಬರಂ ಪ್ರಕಾರ ಭಿಕ್ಷಾಟನೆ ಕೂಡ ಒಂದು ಉದ್ಯೋಗವಂತೆ. ಇವರನ್ನು ನಮ್ಮ ದೇಶದ ಮಾಜಿ ಸಚಿವರು ಎನ್ನಲು ಬೇಸರ ಅನಿಸುತ್ತದೆ. ಇವರಿಗೆ ಜೀವನದ ಕಷ್ಟದ ಅನುಭವವೇ ಇಲ್ಲ ಅನಿಸುತ್ತದೆ. ಪಿ ಚಿದಂಬರಂ ಅಷ್ಟೇ ಅಲ್ಲ, ಇವತ್ತು ಪಕೋಡಾ ಮಾಡುವುದೂ ಒಂದು ಉದ್ಯೋಗವೇ? ಎಂದು ಕೇಳುತ್ತಿರುವವರೆಲ್ಲ ಯಾರು ಗೊತ್ತಾ? ಯಾವತ್ತೂ ಒಂದು ಸಣ್ಣ ಉದ್ಯೋಗವನ್ನೂ ಮಾಡದೇ ನಾಯಕರು ಎನಿಸಿಕೊಂಡವರ ಚೇಲಾಗಳು. ತಮ್ಮ ಸ್ವಾರ್ಥಕ್ಕೆ ಕುರುಡಾಗಿ ಒಂದು ಮನೆತನವನ್ನು ಪೂಜಿಸುತ್ತಿರುವವರು. ಇವರಿಗೆಲ್ಲ ಭಾರತ ಮುಂದುವರಿಯುವುದೇ ಬೇಕಿಲ್ಲ. ಇವತ್ತು ಭಾರತದ ಯುವಕರು ರಾಹುಲ್ ಗಾಂಧಿಯಾಗಲು ಬಯಸುವುದಿಲ್ಲ ಯುವಕರಿಗೆ ಮೋದಿಜಿ ಪ್ರೇರಣೆ. ಯಾಕೆಂದರೆ ಅವರು ಬಡತನದ ಬೇಗೆಯಲ್ಲಿ ಕುದಿದು ಪಕ್ವವಾಗಿ ಬೆಳೆದು ಬಂದವರು. ಅಜ್ಜಿ, ಅಜ್ಜ, ಅಪ್ಪ ಮುತ್ತಜ್ಜನ ಹೆಸರಲ್ಲಿ ಇಷ್ಟು ಮೇಲೆ ಬಂದವರಲ್ಲ.‌ ಕೆಲವರಿಗೆ ಜನಸಾಮಾನ್ಯರ ಬಯಕೆಯೇ ಅರ್ಥವಾಗುವುದಿಲ್ಲ. ಅಂತವರ ಪ್ರಕಾರ ನಿಯಮಿತವಾಗಿ ಹಾಗೂ ಸುರಕ್ಷಿತವಾಗಿ ಹಣ ಬರುವ ಕೆಲಸ ಮಾತ್ರ ಉದ್ಯೋಗ. ಇವತ್ತಿನ ಪ್ರತಿ ಯುವಕ ಅಥವಾ ಯುವತಿ ಬಯಸುವುದು ಆರಾಮವಾಗಿ ಹಾಗೂ ನಿಯಮಿತವಾಗಿ ಆದಾಯ ಬರುವ ನೌಕರಿಯಂತೆ! ಇದರ ಅರ್ಥವೇನು ಗೊತ್ತಾ? ಇವರಿಗೆ ನಾವು ಸ್ವಂತ ನಮ್ಮ ಕಾಲ ಮೇಲೆ ನಿಂತು ಬದುಕುವುದು ಬೇಡ. ನಾವೆಲ್ಲ ಬಂಡವಾಳಶಾಹಿಗಳ ಸಾಮ್ರಾಜ್ಯದಲ್ಲಿ ಕೆಲಸ‌ ಮಾಡಬೇಕು. ಮೋದಿಜಿ ಹೇಳಿದ್ದು ಸರಿಯಾದ ಮಾರ್ಗದಲ್ಲಿ ಶ್ರಮಪಟ್ಟು ಯಾವುದೇ ಕೆಲಸ ಮಾಡಿದರೂ ಅದು ಉದ್ಯೋಗ ಮಾಡಿದಂತೆ. ಆದರೆ ಇದು ಕೆಲವು ರಾಜಕಾರಣಿಗಳ ಬುಡಕ್ಕೇ ಕೊಡಲಿ ಏಟು ಹೊಡೆದ ಹಾಗಿದೆ. ಅವರು ಇಲ್ಲಿಯ ತನಕ ಹಾಕಿಕೊಂಡು ಬಂದ ಯೋಜನೆಗಳೆಲ್ಲ ವ್ಯರ್ಥವಾಗತ್ತದೆ. ಬಂಡವಾಳಶಾಹಿಗಳಿಂದ ಅಧಿಕಾರಕ್ಕೆ ಬಂದು ಬಂಡವಾಳಶಾಹಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್ ಸರ್ಕಾರದ ಇಲ್ಲಿಯವರೆಗಿನ ಸಾಧನೆ. ನೆಹರೂ ಅವರಿಂದ ಹಿಡಿದು ಇಂದಿರಾ, ರಾಜೀವ್, ಹಾಗೂ ರಾಹುಲ್ ಗಾಂಧಿಯ ತನಕ ಅವರಿಗೆ ಉದ್ಯೋಗದ ಅನುಭವವೇ ಇಲ್ಲ! ಭ್ರಷ್ಟಾಚಾರವೇ ಇವರ ಬಂಡವಾಳ, ಸಮಾಜವನ್ನು ಒಡೆಯುವುದೇ ಇವರ ಕೆಲಸ. ಇದಕ್ಕೇ ಇಂತವರು ಇಂದು ಮೋದಿಜಿಯವರ ಒಂದು ಉತ್ತಮವಾದ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಬಿಂಬಿಸುತ್ತಿದ್ದಾರೆ.

ಮೋದಿಜಿಯವರ ಹೇಳಿದ್ದರಲ್ಲಿ ಆಳವಾದ ಅರ್ಥವಿದೆ. ಅವರ ಮಾತಿನ ಅರ್ಥ ‘ಸರ್ಕಾರಿ ಕೆಲಸ, ಕಂಪನಿಯಲ್ಲಿ ಕೆಲಸವನ್ನು ಹುಡುಕುತ್ತಾ ಕೂರುವುದಕ್ಕಿಂತ ನಿಮ್ಮದೇ ಒಂದು ವ್ಯಾಪಾರ ಶುರು ಮಾಡಿ’ ಎನ್ನುವುದಾಗಿತ್ತು. ನಮ್ಮ ದೇಶದ ಇತಿಹಾಸವನ್ನು ತೆಗೆದು ನೋಡಿದರೆ ನಮ್ಮ ಸಮಾಜದಲ್ಲಿ ‘ಕೆಲಸ’ ಎನ್ನುವ ಮಾದರಿಯೇ ಇಲ್ಲ. ನಾವು ಯಾವತ್ತೂ ನೌಕರರಾಗಿ ದುಡಿದಿದ್ದೇ ಇಲ್ಲ! ಅದಕ್ಕಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಯಾವತ್ತೂ ಹದಗೆಟ್ಟಿರಲಿಲ್ಲ. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರ ಭಾರತವಾಗಿತ್ತು. ಹದಿನೆಂಟನೆಯ ಶತಮಾನದವರೆಗೂ ಇಡೀ ಜಗತ್ತಿನ 30% ಜಿಡಿಪಿಯ ಪಾಲು ನಮ್ಮ ದೇಶದ್ದಾಗಿತ್ತು. ಬ್ರಿಟಿಷರು ಬಂದು ಲೂಟಿ ನಡೆಸುವ ತನಕ ಭಾರತದಲ್ಲಿ ಬಡತನ ಎನ್ನುವುದೇ ಇರಲಿಲ್ಲ. ನಿರುದ್ಯೋಗ ಎನ್ನುವ ಪದವನ್ನೇ ನಮ್ಮ ಸಮಾಜ ಬಳಸಿರಲಿಲ್ಲ. ಭಾರತದ ಆರ್ಥಿಕ ವ್ಯವಸ್ಥೆಯ ಇತಿಹಾಸವನ್ನು ಇಣುಕಿ ನೋಡಿದಾಗ ನಮ್ಮ ದೇಶದಲ್ಲಿ ವ್ಯಾಪಾರ ಹಾಗೂ ಕೃಷಿಯೇ ಮುಖ್ಯವಾದ ಉದ್ಯೋಗ. ಇವತ್ತಿಗೂ ಸುಮಾರು ಎಂಬತ್ತು ಶೇಕಡಾ ಜನರು ಕೃಷಿ ಹಾಗೂ ವ್ಯಾಪಾರವನ್ನೇ ನಂಬಿದ್ದಾರೆ. ಬ್ರಿಟಿಷರು ನಮ್ಮ ದೇಶಕ್ಕೆ ನೌಕರಿ ಎನ್ನುವ ಒಂದು ರೋಗವನ್ನು ಅಂಟಿಸಿ ಹೋಗಿದ್ದಾರೆ. ಅದನ್ನೇ ನಂತರದ ಸರ್ಕಾರ ಬಳಸಿಕೊಳ್ಳುತ್ತಾ ಬಂದಿದೆ. ನಮ್ಮ ಶೈಕ್ಷಣಿಕ ಪದ್ಧತಿ, ಇವತ್ತಿನ ಸಮಾಜ ಎಲ್ಲವೂ ಆಗ ಬ್ರಿಟನ್‌ನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಯ ಸುತ್ತ ಹೆಣೆಯಲ್ಪಟ್ಟಿದೆ. ಇವತ್ತು ನಮಗೆ ಕಲಿಸುತ್ತಿರುವ ಶಿಕ್ಷಣ ಎರಡು ನೂರು ವರ್ಷದ ಹಳೆಯ ಮಾದರಿ. ನಾವು ಯಾವುದನ್ನು ಜ್ಞಾನ ಎಂದು ಅಧ್ಯಯನ ಮಾಡುತ್ತಿದ್ದೇವೆ ಅವೆಲ್ಲ ಎಷ್ಟೋ ಶತಮಾನಗಳ ಹಳೆಯದು. ಪ್ರತಿ ವರ್ಷ ಎರಡು ಕೋಟಿ ಜನರು ವಿವಿಧ ವಿಶ್ವವಿದ್ಯಾಲಯಗಳಿಂದ ಹೊರಗೆ ಬರುತ್ತಿದ್ದಾರೆ. ಅವರಲ್ಲಿ ಬಹುತೇಕ ಜನರ ಆಶಯ ಒಂದೇ – ನೌಕರಿ ಮಾಡುವುದು. ನೌಕರಿ, ನೌಕರಿ ಎನ್ನುವುದು ಇದೊಂದು ಮಾನಸಿಕ ರೋಗ. ಮಕ್ಕಳು ಹುಟ್ಟಿದ ಮರುಕ್ಷಣವೇ ಅವರಿಗೆ ಒಂದು ನೌಕರಿ ನಿರ್ಧಾರ ಆಗಿ ಬಿಟ್ಟಿರುತ್ತದೆ. ಶಾಲೆಗೆ ಹೋಗುವುದು ಯಾಕಪ್ಪಾ ಎಂದು ಸರ್ವೆ ಮಾಡಿದರೆ ತೊಂಬತ್ತು ಶೇಕಡಾ ಜನರು ಶಾಲೆಗೆ ಹೋಗುವುದು ಅಲ್ಲಿ ಕಲಿತು ಮುಂದೊಂದು ಒಳ್ಳೆಯ ಕೆಲಸ ಮಾಡಲಿಕ್ಕೆ ಎಂದೇ ಉತ್ತರಿಸುತ್ತಾರೆ. ಎಲ್ಲರಿಗೂ ನೌಕರಿ ಕೊಡುತ್ತಾ ಹೋದರೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರು ಯಾರು? ಉದ್ಯಮಗಳು ಇಲ್ಲದೇ ಹೋದರೆ ದೇಶದ ಬೆಳವಣಿಗೆ ಆಗುವುದು ಹೇಗೆ? ಒಂದೆಡೆ ಸಮಾನತೆ ಬರಬೇಕು ಎನ್ನುತ್ತೀರಾ, ಇನ್ನೊಂದು ಕಡೆ ನಾವು ಉದ್ಯಮ ನಡೆಸುವುದಿಲ್ಲ ನಮಗೆ ನೌಕರಿ ಬೇಕು ಎನ್ನುತ್ತೀರಾ. ಒಂದು ಮಾತು ನೆನಪಿರಲಿ, ನೌಕರಿ ಮಾಡುವ ಮಾನಸಿಕತೆ ಇರುವ ತನಕ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವೇ ಇಲ್ಲ.

ಮೋದಿಜಿಯವರು ಹೇಳುವ ಮಾತಿನಲ್ಲಿ ತುಂಬಾ ಅರ್ಥವಿದೆ. ಇಂದು ನಾವು ಉದ್ಯೋಗ ಹಾಗೂ ನಿರುದ್ಯೋಗವನ್ನು ನೋಡುವ ದೃಷ್ಟಿ ಬದಲಾಗಬೇಕು. ಉದ್ಯೋಗ ಅಂದರೆ ಬ್ಯುಸಿನೆಸ್ ಇರಬಹುದು ಅಥವಾ ನೌಕರಿ ಇರಬಹುದು ಆದಾಯ ಬರುವ ಹಾಗಿರಬೇಕು. ಆ ಆದಾಯದಿಂದ ಸಂಸಾರ ಹಾಗೂ ದೇಶ ಎರಡರದ್ದೂ ಬೆಳವಣಿಗೆ ಆಗಬೇಕು. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಎಂಟು ಕೋಟಿಗಿಂತಲೂ ಹೆಚ್ಚು ಸಣ್ಣ ಸಣ್ಣ ಉದ್ದಿಮೆದಾರರು ಸಾಲ ಪಡೆದಿದ್ದಾರೆ. ಒಬ್ಬ ಉದ್ಯಮಿ ಸರಾಸರಿ ಮೂರು ಜನಕ್ಕೆ ಉದ್ಯೋಗ ಕೊಟ್ಟರೂ ಇಪ್ಪತ್ನಾಲ್ಕು ಕೋಟಿ ಜನರಿಗೆ ಉದ್ಯೋಗ ದೊರಕಿದ ಹಾಗಾಗುವುದಿಲ್ಲವೇ? ಮೋದಿಜಿ ಪ್ರತಿಯೊಂದು ಭಾಷಣದಲ್ಲೂ ‘ಭಾರತ ಯುವ ದೇಶ, ನಮ್ಮ ದೇಶದಲ್ಲಿ ಯುವ ಶಕ್ತಿ ಇದೆ, ಇದೇ ನಮ್ಮ ಶಕ್ತಿ’ ಎನ್ನುತ್ತಾರಲ್ಲ ಅದರ ಅರ್ಥವೇನು? ಒಬ್ಬ ಓದಿ ಶಿಕ್ಷಕ ಆಗಬಲ್ಲ, ವೈದ್ಯ ಆಗಬಲ್ಲ, ಅಭಿಯಂತರ ಆಗಬಲ್ಲ, ಲೆಕ್ಕ ಪರಿಶೋಧಕ ಆಗಬಲ್ಲ, ಹೋಟೆಲ್ ಇಡಬಲ್ಲ, ಮೀಡಿಯಾ ನಡೆಸಬಲ್ಲ, ಬ್ಯಾಂಕ್ ನಡೆಸಬಲ್ಲ, ಬಜ್ಜಿ ಮಾರಬಲ್ಲ, ಹಣ್ಣು ಮಾರಬಲ್ಲ, ಕೃಷಿ ಮಾಡಬಲ್ಲ ಹೀಗೆ ಎಲ್ಲರೂ ದಶದಿಕ್ಕುಗಳಲ್ಲಿ ದುಡಿದು ದೇಶವನ್ನು ಬೆಳೆಸುವ ಶಕ್ತಿ ಇದೆ ಎಂದು. ಇದೇ ವಿಚಾರ 1947ರಲ್ಲಿಯೇ ಬಂದಿದ್ದರೆ ಇವತ್ತು ನಿರುದ್ಯೋಗ ಸಮಸ್ಯೆ ಇರುತ್ತಿರಲಿಲ್ಲ. ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಮಾಡುತ್ತಿರುವುದು ಇವತ್ತು ನಮ್ಮ ದೇಶದ ಕಾಂಗ್ರೆಸ್ ನಾಯಕರು ಹೇಳಿದಂತಿದೆ. ದೊಡ್ಡ ದೊಡ್ಡ ಕಂಪನಿಗಳಿಗೆ ಸವಲತ್ತುಗಳನ್ನು ಕೊಟ್ಟು ಜನಸಾಮಾನ್ಯರ ಹತ್ತಿರ ನೌಕರಿ ಮಾಡಲು ಹೇಳುತ್ತಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ಜನರಿಗೆ ಕೆಲಸವನ್ನು ಕೊಡುತ್ತಾರೆ ನಿಜ ಆದರೆ ಅದರಲ್ಲಿ ಅವರ ಲಾಭವೂ ಹೆಚ್ಚುತ್ತದೆ. ಅದೇ ಮೋದಿಜಿ ದೊಡ್ಡ ದೊಡ್ಡ ಕಂಪನಿಗಳಿಗೆ ಸವಲತ್ತು ಹೆಚ್ಚಿಸುವ ಬದಲಾಗಿ ಸಣ್ಣ ಪುಟ್ಟ ಉದ್ದಿಮೆದಾರರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇದರ ಪರಿಣಾಮ ಇನ್ನು ಹತ್ತು ವರ್ಷದ ಮೇಲೆ ಅರಿವಾಗುತ್ತದೆ. ನಮ್ಮ ದೇಶ ರಫ್ತು ಮಾಡುವುದರಲ್ಲಿ ಚೀನಾವನ್ನೇ ಮೀರಿಸಬಹುದು. ನಮ್ಮ ದೇಶ‌‌ ಇತಿಹಾಸದಲ್ಲಿ ಕಂಡಂತೆ ಮತ್ತೊಮ್ಮೆ ಜಗತ್ತಿನ ಅತೀ ಶ್ರೀಮಂತ ದೇಶ ಆಗಬಹುದು.

ಕೇವಲ ನೌಕರಿ ಮಾಡುವ ಮನಸ್ಥಿತಿ ಇರುವ ಜನರಿಂದ ದೇಶ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ದೇಶದ ಬೆಳವಣಿಗೆಯ ಸಾವಿರ ಮೈಲಿನ ಪಯಾಣ ಶುರುವಾಗುವುದು ಒಂದು ಉದ್ಯೋಗ ಎನ್ನುವ ಮೊದಲ ಹೆಜ್ಜೆಯಿಂದ. ಯಾವುದೇ ಆಗಲಿ ನಾವೆಲ್ಲ ಮೊದಲು ಉದ್ಯೋಗವಂತರಾಗಬೇಕು. ಅದಕ್ಕೆ ನೆರವಾಗಲು ಸರ್ಕಾರ ಅನುಕೂಲ ಮಾಡಿಕೊಡಬೇಕು. ಉದಾಹರೆಣೆಗೆ ಒಬ್ಬ ಹಳ್ಳಿಯಿಂದ ಬಾಳೆಹಣ್ಣನ್ನು ಪೇಟೆಗೆ ತಂದು ಮಾರುತ್ತಾನೆ ಅಂದರೆ ರಸ್ತೆಯ ಮಧ್ಯೆ ಬಾಳೆಹಣ್ಣು ಜಕಂ ಆಗಿ ಹಾಳಾಗದಂತೆ ಸರ್ಕಾರ ರಸ್ತೆ ನಿರ್ಮಾಣ ಮಾಡಬೇಕು. ಹೀಗೆಯೇ ನಾವೆಲ್ಲ ಸರ್ಕಾರಿ ನೌಕರಿ, ಇಲ್ಲವೇ ಖಾಸಗಿ ನೌಕರಿ ಸಿಗಲಿಲ್ಲ ಎನ್ನುತ್ತಾ ನಿರಾಶರಾಗದೆ ನಮ್ಮದೇ ಸ್ವಂತ ವ್ಯಾಪಾರ ಶುರು ಮಾಡಬೇಕು. ಇವತ್ತು ನಮ್ಮ ದೇಶದ ಆದಾಯದ ಮುಖ್ಯ ಮೂಲ ಕೃಷಿ ಹಾಗೂ ವ್ಯಾಪಾರ. ಇದು ನಮ್ಮ ಮನಸ್ಸಿನ ಆಳಕ್ಕೆ ಹೋಗಬೇಕು. ಕೃಷಿಯನ್ನು ಬಿಟ್ಟು, ವ್ಯಾಪಾರವನ್ನು ಬಿಟ್ಟು ಎಲ್ಲರೂ ನೌಕರಿಯನ್ನು ಹುಡುಕುತ್ತಾ ಹೊರಟರೆ ನಮ್ಮ ದೇಶ ಒಂದು ಹೆಜ್ಜೆ ಕೂಡಾ ಮುಂದೆ ಹೋಗಲಾರದು. ಸಿಂಗಾಪುರದ‌ ಮಾದರಿಯನ್ನು ನೋಡಿ ಕಲಿಯಬೇಕು. ಫೇಸ್ಬುಕ್, ಗೂಗಲ್ ಇಂತಹ ಕಂಪನಿಯಲ್ಲಿ ಕೆಲಸ ಮಾಡುವ ಬದಲು ಅಂತಹದ್ದೇ ಇನ್ನೊಂದು ಕಂಪನಿ ಹುಟ್ಟಿ ಹಾಕಬೇಕು. KFCಯ ಮಾಲೀಕ ಒಂದು ಕಾಲದಲ್ಲಿ ರಸ್ತೆಯ ಪಕ್ಕ ಚಿಕನ್ ಪಕೋಡ ಮಾಡುತ್ತಿದ್ದ. McDonald ಮಾಲೀಕ ಟೀ ಕಪ್‌ನ್ನು ಮಾರಿ ಬದುಕುತ್ತಿದ್ದ. ಇವತ್ತು McDonald ಜಗತ್ತಿನ ಅತ್ಯಂತ ಯಶಸ್ವಿ ಬ್ರ್ಯಾಂಡ್. ಮೋದಿಜಿ ಹೇಳುವ ಆ ಪಕೋಡಾವಾಲನ ಅಂಗಡಿಯು ನಾಳೆ ಇನ್ನೊಂದು McDonald’s corporation ಆಗಬಹುದು? ನೀವು ಪಕೋಡಾ ಮಾರಿ ಬದುಕಿ ಅಥವಾ ಪೇಪರ್ ಮಾರಿ ಬದುಕಿ, ಅದರಲ್ಲಿ ಹೆಮ್ಮೆಯಿದೆ. ಆದರೆ ಬದುಕಿನಲ್ಲಿ ನಿಮ್ಮನ್ನು ನೀವು ಮಾರಿಕೊಂಡು ಮಾತ್ರ ಬದುಕಬೇಡಿ, ಬುದ್ಧಿಜೀವಿಗಳ ಹಾಗೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!