ಅಂಕಣ

ಆರ್ಥಿಕ ಸುಧಾರಣೆ ಜನರ ಬದುಕಿಗೆ ಬರುವುದು ಯಾವಾಗ?

ಪ್ರಬಲ ರಾಜಕೀಯ ನಾಯಕರು

ಅಮೇರಿಕಾ, ಚೀನಾ, ಜಪಾನ್, ಯುರೋಪ್, ಹಾಗೂ ಭಾರತ ಈ ಎಲ್ಲ ದೇಶಗಳು ಒಂದೇ ಸಮಯದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿವೆ. ಬಹಳ ದಶಕಗಳ ನಂತರ‌ ಜಗತ್ತಿನ ಎಲ್ಲಾ ಇಂಜಿನ್’ಗಳು ಒಟ್ಟಿಗೇ ಫೈರಿಂಗ್ ಆದಂತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಜಗತ್ತಿನ ಮುಖ್ಯವಾದ ರಾಷ್ಟ್ರಗಳಲ್ಲಿ ಪ್ರಭಾವಶಾಲಿ ರಾಜಕೀಯ ನಾಯಕರು ಅಧಿಕಾರದಲ್ಲಿದ್ದಾರೆ. ಅದಲ್ಲದೆ ನಾಯಕರ‌ ಪ್ರಭಾವದಿಂದಾಗಿ ಆ ದೇಶಗಳಲ್ಲಿ ಪ್ರಬಲ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಿದೆ. ಇದಕ್ಕೆ ಪೂರಕವೆಂಬಂತೆ ಇಂದು ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಬೆಳಕಿನ ವೇಗದಲ್ಲಿ ಸಾಗುತ್ತಿದೆ. ಇವೆಲ್ಲವನ್ನೂ ಒಂದೇ ಸಮಕ್ಷೇತ್ರದಲ್ಲಿಟ್ಟು ನೋಡಿದಾಗ ಏನನಿಸುತ್ತದೆ? ಬೆಳವಣಿಗೆ ಕಾಣುತ್ತಿದೆ, ಜಗತ್ತಿನ ಅರ್ಥವ್ಯವಸ್ಥೆ ಇನ್ನು ಕೆಲಕಾಲವಂತೂ ಭದ್ರವಾಗಿದೆ  ಎನ್ನುವ ವಿಶ್ವಾಸ ಮೂಡುತ್ತದೆ ಅಲ್ಲವೆ? ಯುರೋಪಿನಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯಾಗಿ ೧% ಗೆ ಇಳಿದಿದೆ, ಹಾಗೆಯೇ ಜಪಾನಿನ ನಿರುದ್ಯೋಗದ ಪ್ರಮಾಣ 2.8%ಗೆ ಇಳಿದಿದೆ. ಈ ವರ್ಷ ಚೀನಾ ಹಾಗೂ ಭಾರತದ ಜಿಡಿಪಿ ಬೆಳವಣಿಗೆ ಶೇಕಡಾ 6.7%ರಷ್ಟಾಗಿದೆ‌. ಅಮೇರಿಕಾದಲ್ಲಿ ಹಣದುಬ್ಬರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.2%ಕಡಿಮೆಯಾಗಿದೆ.  ಅಮೇರಿಕಾದ ಪಬ್ಲಿಕ್ ಕಂಪನಿಗಳ ಷೇರಿನ ಬೇಲೆ $12.4 ಟ್ರಿಲಿಯನ್ ಡಾಲರಿನಷ್ಟು ಹೆಚ್ಚಿದೆ. ಒಂದೇ ಸವನೆ ಹೆಚ್ಚುತ್ತಿರುವ ಷೇರು ಮಾರುಕಟ್ಟೆಯ ಅಂಕಿಅಂಶಗಳು ಜನರಲ್ಲಿ ಬೆಳವಣಿಗೆಯ ಬಗ್ಗೆ ಮೂಡಿರುವ ವಿಶ್ವಾಸವನ್ನು ತೋರಿಸುತ್ತಿದೆ. ಅಮೇರಿಕಾದ S&P 500 19% ಶೇಕಡಾ ಹೆಚ್ಚಿದರೆ, Dow Jones ಇಂಡಸ್ಟ್ರಿಯಲ್ ಎವರೇಜ್ 25% ಹೆಚ್ಚಿದೆ. ಕೇವಲ ಅಮೇರಿಕಾ ಒಂದಲ್ಲ ಜಗತ್ತಿನ ಹಲವಾರು ದೇಶಗಳು ಈ ಬೆಳವಣಿಗೆಯ ಹೊಸಕಿರಣವನ್ನ ಕಂಡಿವೆ. ಅರ್ಜೆಂಟೈನಾದ ಹಣದುಬ್ಬರ ಸುಮಾರು 20%ಇದ್ದಾಗಲೂ ಕೂಡ  ಷೇರು ಮಾರುಕಟ್ಟೆ 77% ಹೆಚ್ಚಿದೆ. ನೈಜೀರಿಯಾ ಹಾಗೂ ಟರ್ಕಿ ಎರಡೂ ದೇಶಗಳಲ್ಲಿ ಮಾರುಕಟ್ಟೆ ಸುಮಾರು 50%ಹೆಚ್ಚಿದೆ. ಚೀನಾದ ಷೇರು ಮಾರುಕಟ್ಟೆಯಲ್ಲಿ ಅಷ್ಟೇನೂ ಬೆಳವಣಿಗೆ ಕಾಣದೇ ಹೋದರು ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ ಸುಮಾರು35% ಶೇಕಡಾ ಬೆಳವಣಿಗೆ ಆಗಿದೆ. ಚೀನಾದ ಜಿಡಿಪಿಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಕಡಿಮೆ ಬೆಳವಣಿಗೆ ಆಗಿರಬಹುದು ಆದರೆ ಎಷ್ಟು ಊಹಿಸಿದ್ದರೋ ಅದಕ್ಕಿಂತಲೂ ಹೆಚ್ಚಿಗೆ ಬೆಳವಣಿಗೆಯಾಗಿದೆ. ಕತಾರ್ ಮಾತ್ರ ಈ ಎಲ್ಲ ಮಾರುಕಟ್ಟೆಗಿಂತ ಹೊರತಾಗಿದೆ. ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ಆರೋಪದೊಂದಿಗೆ ತನ್ನ ನೆರೆಯ ದೇಶಗಳೊಂದಿಗೆ ಸಂಬಂಧ ಕಳೆದುಕೊಂಡ ಕಾರಣಕ್ಕೆ ಕತಾರ್ ಅರ್ಥ ವ್ಯವಸ್ಥೆ ಕುಸಿದಿದೆ. ಅದು ಬೇರೆಯೇ ವಿಷಯ. ಹೀಗೆ ಒಟ್ಟಾರೆ 2017ನೇ ಇಸ್ವಿ ಆರ್ಥಿಕ ದೃಷ್ಟಿಯಿಂದ ನೋಡಿದರೆ ಒಳ್ಳೆಯ ವರ್ಷವಾಗಿ ಬಂದು ಹೋಯಿತು. ಅತ್ತ ಉತ್ತರ ಕೋರಿಯಾದ ಕಿಮ್ ಮಿಸೈಲ್ ಉಡಾವಣೆ ಮಾಡುತ್ತೇನೆ ಎನ್ನಲಿ, ಅಣ್ವಸ್ತ್ರ ಪರೀಕ್ಷೆ ಮಾಡುತ್ತೇನೆ ಎಂದು ಹೆದರಿಸಲಿ ಯಾವುದೇ ಪರಿಣಾಮ ಆಗಲಿಲ್ಲ. ಅಮೇರಿಕಾದಲ್ಲಿ ಬಂದ ಚಂಡಮಾರುತಗಳು, ರಷ್ಯಾ ಹಾಗೂ ಅಮೇರಿಕಾದ ಬೇಹುಗಾರಿಕೆಗಳು, ಚೀನಾ ಹಾಗೂ ಜಪಾನಿನ ದ್ವೇಷದ ಜ್ವಾಲಾಮುಖಿಗಳು, ಭಯೋತ್ಪಾದಕರ ಅಮಾನುಷ ಹಲ್ಲೆಗಳು, ದಾಳಿಗಳು ಯಾವುದೂ ಆರ್ಥಿಕ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗಿಲ್ಲ. ವಿಶೇಷ ಅಂದರೆ ವರ್ಷದ ಮಧ್ಯ ಭಾಗದಲ್ಲಿ ‘ಭಾರತದ ಎಕಾನಮಿ ಸರ್ವನಾಶ ಆಗುತ್ತಿದೆ’ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ ವಿಷಯ ಏನು ಗೊತ್ತಾ? ಫೋರ್ಬ್ಸ್‌ ಪತ್ರಿಕೆಯು ವರದಿಯ ಪ್ರಕಾರ 2018 ರ ಕೊನೆಯಲ್ಲಿ ಭಾರತವು ಜಗತ್ತಿನ ಐದನೇ ಪ್ರಬಲ ಎಕಾನಮಿ ಆಗಲಿದೆ.

ಹಿನ್ನೋಟ 

ಭಾರತದಲ್ಲಿನ ಒಂದು ವರ್ಷದ ಆರ್ಥಿಕ ಪರಿಸ್ಥಿತಿಯ ಹಿನ್ನೋಟವನ್ನೊಮ್ಮೆ ಮಾಡೋಣವೇ? 2016 ಇಸ್ವಿಯ ಕೊನೆಯಲ್ಲಿ ಡಿಮಾನಿಟೈಜೇಷನ್ ಘೋಷಣೆಯಾಗಿತ್ತು. ಹೀಗಾಗಿ 2017 ಇಸವಿಯೇ ಪ್ರಾರಂಭವೇ ಒಂದು ತರಹದ ಡಲ್‌ ಆಗಿತ್ತು. 7% ಕ್ಕಿಂತಲೂ ಹೆಚ್ಚಿದ್ದ ಜಿಡಿಪಿ ಬೆಳವಣಿಗೆ ಇದರಿಂದಾಗಿ ಕುಸಿಯತೊಡಗಿತು. ಅಂತರಾಷ್ಟ್ರೀಯ ಹಣಕಾಸು ನಿಧಿಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ7.2% ಬೆಳವಣಿಗೆ ಆಗಬೇಕಿತ್ತು ಆದರೆ ಹಾಗೆ ಆಗಿಲ್ಲ. ಡಿಮಾನಿಟೈಜೇಷನ್ ಇಡೀ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಜಗತ್ತಿನಲ್ಲಿ ಇಷ್ಟು ದೊಡ್ಡ ಜನಸಂಖ್ಯೆಯಿರುವ ದೇಶದಲ್ಲಿ ಹತಾಟ್ಟನೆ ಡಿಮಾನಿಟೈಜೇಷನ್ ನಿರ್ಧಾರ ತರುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ರೀತಿಯಲ್ಲಿ ಸರ್ಕಾರ ಆತ್ಮಹತ್ಯೆಗೆ ಪ್ರಯತ್ನ ಪಟ್ಟಷ್ಟೇ ಅಪಾಯಕಾರಿಯಾಗಿತ್ತು. ಉತ್ತರ ಪ್ರದೇಶದ ಚುನಾವಣೆ ಟರ್ನಿಂಗ ಪಾಯಿಂಟ್. ಜನರಿಗೆ ಕೇಂದ್ರ ಸರ್ಕಾರ ಉತ್ತರ ಪ್ರದೇಶದಂತಹ ವಿಶಾಲವಾದ ರಾಜ್ಯದಲ್ಲಿ ಭರ್ಜರಿ ಬಹುಮತ ಪಡೆದಿದ್ದು ಒಂದು ತರಹದ ಆತ್ಮವಿಶ್ವಾಸ ಹೆಚ್ಚಿಸಿತು. ಹೀಗೆ ಡಿಮಾನಿಟೈಜೇಷನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಎಕಾನಮಿ ಮೇಲೆ ಬರೆ ಹಾಕಿದ್ದು ಜಿಎಸ್‌ಟಿ ಬಿಲ್ಲ್. ಮಾರುಕಟ್ಟೆಯಲ್ಲಿ ಒಂದು ತರಹದ ಕೋಲಾಹಲ ಸೃಷ್ಟಿಯಾಯಿತು. ಹಳೆಯ ಸ್ಟಾಕ್, ಹೊಸಬೆಲೆ, ತಂತ್ರಜ್ಞಾನದ ಅಳವಡಿಕೆ, ರೆಜಿಸ್ಟ್ರೆಷನ್ ಹೀಗೆ ವ್ಯಾಪಾರಿಗಳು ಕಷ್ಟ ಪಡಬೇಕಾಗಿ ಬಂತು. ಇದರ ಫಲವೇ ಜಿಡಿಪಿಯಲ್ಲಿನ ಕುಸಿತ. ವರ್ಷದ ಎರಡನೇಯ ಕ್ವಾರ್ಟರ್ ನಲ್ಲಿ ಜಿ.ಡಿ.ಪಿ. ಕುಸಿದು 5.7% ತನಕ ಮುಟ್ಟಿತ್ತು. ಒಂದು ಕಡೆ ಜಿಡಿಪಿ ಕುಸಿಯುತ್ತಿತ್ತು ಆದರೆ ಷೇರು ಮಾರುಕಟ್ಟೆ ಏರುತ್ತಿತ್ತು. ಇನ್ನಾವುದೇ ಸರ್ಕಾರವಾಗಿದ್ದರೂ ಇಷ್ಟು ರಿಸ್ಕ್ ತಗೆದುಕೊಳ್ಳುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ. ನಮ್ಮದು ಚಿಕ್ಕ ಪುಟ್ಟ ದೇಶವಲ್ಲ. ಜನಸಂಖ್ಯೆಯಲ್ಲಿ ಇಡೀ ಜಗತ್ತಿನ ಎರಡನೇ ದೊಡ್ಡ ರಾಷ್ಟ್ರ. ಜಿ.ಎಸ್‌.ಟಿ., ಡಿಮಾನಿಟೈಜೇಷನ್ ನಂತಹ ನಿರ್ಧಾರಗಳು ನೂರಾ ಮೂವತ್ತು ಕೋಟಿ ಜನರ ಬದುಕಿನ ಮೇಲೆ ಪ್ರಭಾವ ಬೀರಿತ್ತು. ನಮ್ಮ ಜನರ ದೇಶಪ್ರೇಮ ಮೆಚ್ಚಲೇ ಬೇಕು, ಇಂತಹ ಕಷ್ಟ ಹಾಗೂ ನಷ್ಟದ ಸಮಯದಲ್ಲಿ ಕೂಡ ಎಕಾನಾಮಿಯನ್ನು ಸರ್ವನಾಶಮಾಡುವಷ್ಟಾಗಲಿ, ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಷ್ಟಾಗಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸರ್ಕಾರದ ನಿಲುವಿಗೆ ಜನರ ಸಮ್ಮತಿಯಿತ್ತು. ಕಷ್ಟ ಹಾಗೂ ನಷ್ಟ ಏನಿದ್ದರೂ ಸ್ವಲ್ಪ ಸಮಯದ ಮಟ್ಟಿಗೆ ಎನ್ನುವ ಅರಿವು ಸಾಮಾನ್ಯ ಜನರಲ್ಲಿ ಮೂಡಿತ್ತು. ಇಂತಹ ಒಂದು ಮನಸ್ಥಿತಿಯನ್ನು ಜನರಲ್ಲಿ ಮೂಡಿಸಿದ ಶ್ರೇಯ ಮೋದಿಜಿಯವರದ್ದಾಗಿತ್ತು. ಎಷ್ಟು ಜನ ಗಮನಿಸಿದ್ದಾರೋ ಗೊತ್ತಿಲ್ಲ, ಮೋದಿಜಿ ಅಧಿಕಾರಕ್ಕೆ ಬಂದ ಮೊದಲ ಎರಡು ವರ್ಷದಲ್ಲಿ ‘ಅವರು ಕೇವಲ ಭಾಷಣ ಮಾಡುತ್ತಾರೆ’ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿತ್ತು. ಅವರು ಮೊದಲ ಎರಡು ವರ್ಷ ಕೆಲಸ ಮಾಡಿದ್ದು ಜನರ ಮನಸ್ಸಿನ ಮೇಲೆ. ಜನರಲ್ಲಿ ದೇಶಪ್ರೆಮವನ್ನು ಜಾಗ್ರತಗೊಳಿಸಿದ್ದರು. ಮೋದಿಯವರು ತಮ್ಮ ಭಾಷಣದಿಂದ ನೂರಾ ಮೂವತ್ತು ಕೋಟಿ ಜನರ ಮೇಲೆ ಯಾವ ರೀತಿಯ ಪ್ರಭಾವ ಬೀರಿದರು ಎನ್ನುವುದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನ ಮಾಡಬೇಕು. ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಅದನ್ನು ಅಂಕಿಅಂಶಗಳ ಅರ್ಥಶಾಸ್ತ್ರವಲ್ಲ ಬದಲಾಗಿ ವರ್ತನೆಯ ಅರ್ಥಶಾಸ್ತ್ರ(behavioral economics)ದ ಆ್ಯಂಗಲ್ಲಿನಲ್ಲಿ ನೋಡಬೇಕು. ಆವಾಗ ಎಲ್ಲವೂ ಸ್ಪಷ್ಟವಾಗುತ್ತದೆ. ವರ್ಷದ ನಡುವೆ ಕುಸಿದರೂ ಭಾರತದ ಅರ್ಥ ವ್ಯವಸ್ಥೆ ವರ್ಷದ‌ ಕೊನೆಯ ಹೊತ್ತಿಗೆ ಚೇತರಿಸಿಕೊಂಡಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ಟೀಲ್, ಮೆಟಲ್ ಕಂಪನಿಗಳ ಷೇರ್ ಗ್ರೋತ್ 44%, ಶಿಪ್ಪಿಂಗ್ ಇಂಡಸ್ಟ್ರಿ ಷೇರ್ ಬೆಲೆಯಲ್ಲಿ ಬೆಳವಣಿಗೆ 63%, ರಾಸಾಯನಿಕ ಗೊಬ್ಬರದ ಕಂಪನಿಗಳ ಷೇರ್ ಬೆಲೆಯಲ್ಲಿ 46% ಬೆಳವಣಿಗೆಯಾಗಿತ್ತು. ಮ್ಯೂಚುಯಲ್‌ ಫಂಡ್‌ ನಲ್ಲಿ ಕ್ಯಾಶ್ ಇನ್ ಫ್ಲೋ ಫೆಬ್ರವರಿಯಲ್ಲಿ ಎರಡು ಸಾವಿರ ಕೋಟಿ ಇದ್ದಿದ್ದು ಅಗಸ್ಟ್ ಬರುವ ವೇಳೆಗೆ ಹನ್ನೊಂದು ಸಾವಿರ ಕೋಟಿಯಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಬೆಳವಣಿಗೆ ಎಷ್ಟಾಗಿದೆ ಎನ್ನುವುದಕ್ಕೆ ರಾಕೇಶ್ ಜುಂಜುನ್ವಾಲಾ ಎನ್ನುವರು ಒಂದೇ ದಿನದಲ್ಲಿ 875 ಕೋಟಿ ಹಣ ಸಂಪಾದಿಸಿದ್ದೇ ಒಳ್ಳೆಯ ಉದಾಹರಣೆ. ಕಳೆದ ಜನವರಿಯಲ್ಲಿ 26,500 ರಷ್ಟಿದ್ದ BSESENSEX ಡಿಸೆಂಬರ್ ಕೊನೆಯಲ್ಲಿ 34,000 ತಲುಪಿತ್ತು. ಈ ಅಂಕಿಅಂಶಗಳು ನಮ್ಮ ದೇಶದ ಅರ್ಥ ವ್ಯವಸ್ಥೆಯ ಮೇಲೆ‌ ಜನರಿಗಿರುವ ಭರವಸೆ ಅಪ್ರತ್ಯಕ್ಷವಾಗಿ ತೋರಿಸುತ್ತದೆ. ಈ ತರಹದ ಬೆಳವಣಿಗೆ ಮುಂದಿನ ವರ್ಷ ಕೂಡ ಮುಂದುವರಿಯುತ್ತದೆ ಎನ್ನುತ್ತಾರೆ ಪರಿಣಿತರು.

 

ಬೆಳೆಯುತ್ತಿರುವ ವೇಗ

ಇವತ್ತಿನ ಬೆಳವಣಿಗೆಯ ವೇಗವನ್ನು ನೋಡಿದರೆ 2018 ಮುಗಿಯುವುದರೊಳಗೆ ಭಾರತವು ಅಮೇರಿಕಾ, ಚೈನಾ, ಜಪಾನ್ ಹಾಗೂ ಜರ್ಮನಿಯ ನಂತರ ಜಗತ್ತಿನ ಐದನೇಯ ಪ್ರಬಲ ಎಕಾನಮಿ ಆಗಿ ಬೆಳೆಯಲಿದೆ. ಮೋದಿ ಸರ್ಕಾರ ಬಂದಾಗಿನಿಂದ ಭಾರತದ ಎಕಾನಮಿ30% ಹೆಚ್ಚಿದೆ ಎಂಬುದನ್ನು ಐಎಮ್ಎಫ್ ಹೇಳುತ್ತದೆ. ವಿಶ್ವ ಸಂಸ್ಥೆಯ Ease of doing business ರ‌್ಯಾಂಕಿಂಗನಲ್ಲಿ ಭಾರತಕ್ಕೆ ಉತ್ತಮ ಸ್ಥಾನ ಸಿಕ್ಕಿದೆ. ಮೂಡಿ ವರದಿಯಲ್ಲಿ ಭಾರತದ ಬಗ್ಗೆ ಮೂಡ್ ಬದಲಾಗಿದೆ. ಅದು ಭಾರತಕ್ಕೆ ತನ್ನ ರೇಟಿಂಗ್ ಹೆಚ್ಚಿಸಿದೆ. ಇವೆಲ್ಲದರ ಸಾರ ಅಂದರೆ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವೇಗವಾಗಿ ಬದಲಾಗುತ್ತಿದೆ. ಇಂತಹ ಬದಲಾವಣೆ ತರಬೇಕು ಅಂದರೆ ಅದಕ್ಕೆ ಕಾರಣ ಡಿಮಾನಿಟೈಜೇಷನ್, ಜಿಎಸ್‌ಟಿ ಹಾಗೂ ಬ್ಯಾಂಕರಪ್ಸಿ ಕೋಡ್’ನಂತಹ 37 ಇನ್ನಿತರೆ ಸುಧಾರಣೆಗಳು. ಆರಂಭದಲ್ಲಿ ಕೆಲವು ದಿನ ಇದರಿಂದ ಜನರಿಗೆ ತೊಂದರೆ ಆಗಬಹುದು ಆದರೆ ದೇಶದ ಬೆಳವಣಿಗೆಗೆ ಇದು ಅವಶ್ಯಕ.  2014ರಲ್ಲಿ ಭಾರತವು ಇಟಲಿ, ಬ್ರೆಜಿಲ್, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ ಇವೆಲ್ಲಕ್ಕಿಂತ ಹಿಂದೆ ಇತ್ತು. ಇವತ್ತು ಭಾರತದ ಒಟ್ಟೂ ಜಿ.ಡಿ.ಪಿ. ಈ ಎಲ್ಲ ದೇಶಕ್ಕಿಂತಲೂ ಹೆಚ್ಚಿದೆ. 2014ರಲ್ಲಿ ಎರಡು ಟ್ರಿಲಿಯನ್ ಡಾಲರ್ ಇದ್ದ ಒಟ್ಟೂ ಜಿಡಿಪಿ 2017ರಲ್ಲಿ 2.5 ಟ್ರಿಲಿಯನ್ ಡಾಲರ್ ಆಗಿದೆ. 2020ರೊಳಗೆ ಭಾರತದ ಒಟ್ಟೂ ಜಿಡಿಪಿ 3.5ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ನಮ್ಮ ಬದುಕಿನಲ್ಲಿ ಯಾಕೆ ಅಷ್ಟೊಂದು ಬದಲಾವಣೆ ಆಗಿಲ್ಲ? ದೇಶದ ಬೆಳವಣಿಗೆ ಆದರೆ ಅದರ ಸಮನಾಗಿ ಜನರ ಬದುಕಿನಲ್ಲಿ ಯಾಕೆ ಬೆಳವಣಿಗೆ ಆಗುವುದಿಲ್ಲ? ಇಂತಹ ಪ್ರಶ್ನೆಗಳು ನಮ್ಮನ್ನೆಲ್ಲ ಇವತ್ತು ಕಾಡುತ್ತಿದೆ. ದೇಶದ ಒಟ್ಟೂ ಜಿಡಿಪಿಯ ಲೆಕ್ಕಾಚಾರ ಬೇರೆ, ಜನರ ಪರ್ ಕ್ಯಾಪಿಟಾ ಜಿಡಿಪಿಯ ಲೆಕ್ಕಾಚಾರ ಬೇರೆ. ಇಟಲಿ, ಪ್ರಾನ್ಸ್,ಬ್ರೆಜಿಲ್ ಹಾಗೂ ಇಂಗ್ಲೆಂಡ್ ದೇಶಕ್ಕಿಂತ ನಮ್ಮ ದೇಶದ ಒಟ್ಟೂ ಜಿಡಿಪಿ ಹೆಚ್ಚಿರಬಹುದು ಆದರೆ ಅವರ ಜೀವನಮಟ್ಟವನ್ನು ನಮ್ಮೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಬ್ರೆಜಿಲ್‌ನ ಪರ್ ಕ್ಯಾಪಿಟಾ ಜಿಡಿಪಿ ನಮ್ಮ ದೇಶಕ್ಕಿಂತ ಐದು ಪಟ್ಟು ಹೆಚ್ಚಿದೆ ಗೊತ್ತಾ? ಅದೇ ಜನಸಂಖ್ಯೆ, ಇಂಗ್ಲೆಂಡ್, ಬ್ರೆಜಿಲ್, ಇಟಲಿ, ಪ್ರಾನ್ಸ್ ಇವೆಲ್ಲವನ್ನೂ ಒಟ್ಟೂ ಗೂಡಿಸಿದರೆ ಅದರ ಮೂರು ಪಟ್ಟಿದೆ. ಈ ತರಹದ ಜನಸಂಖ್ಯೆ ಇರುವಾಗ ಜಿಡಿಪಿಯ ಪದಗಳಲ್ಲಿ ದೇಶದ ಎಕಾನಮಿಯು ಏರುತ್ತದೆ ಆದರೆ ಜನರ ಜೀವನಮಟ್ಟದಲ್ಲಿ ಅಷ್ಟೇನು ವ್ಯತ್ಯಾಸ ಕಂಡುಬರುವುದಿಲ್ಲ. ಹೀಗಾಗಿ ಜೀರ್ಣಿಸಿಕೊಳ್ಳಲು ಇದೊಂದು ಕ್ಲಿಷ್ಟಕರವಾದ ವಿಷಯ.  ಹೀಗಾಗಿ ನಮ್ಮ ದೇಶ ಜಗತ್ತಿನ ಐದನೆಯ ಪ್ರಬಲ ಎಕಾನಮಿ ಆಗಬಹುದು ಆದರೆ ಅಷ್ಟಕ್ಕೇ ಹೆಮ್ಮೆಯಿಂದ ನಿಲ್ಲುವ ಹಾಗಿಲ್ಲ. ಅದರಿಂದ ನನಗೆ ನಿಮಗೆ ಎಷ್ಟು ಪ್ರಮಾಣದಲ್ಲಿ ಲಾಭವಾಗುತ್ತದೆ ಎನ್ನುವ ವಿಷಯ ಯೋಚಿಸಬೇಕಾದದ್ದು. ದೇಶದ ಎಕಾನಾಮಿಯ ಜೊತೆಗೆ ಮೋದಿ ಸರ್ಕಾರ ನಿಜವಾಗಿಯೂ ಜನರ ಜೀವನದ ಮಟ್ಟವನ್ನು ಹೆಚ್ಚಿಸಬೇಕು. ಅಂದರೆ ದೇಶದ ಜನಸಂಖ್ಯೆಯ ಸ್ಫೋಟವನ್ನು ತಡೆಯಲು ಡಿಮಾನಿಟೈಜೇಷನ್ ತರಹದ ಕಡಕ್ ನಿರ್ಧಾರ ತರಲೇಬೇಕು. ಭಾರತದ ಪ್ರತಿ ಮಹಿಳೆಗೆ ಸರಾಸರಿ 2.43 ಮಕ್ಕಳಿದ್ದಾರೆ. ಬಹಳಷ್ಟು ಕುಟುಂಬದಲ್ಲಿ ಆದಾಯಕ್ಕೆ ಆಧಾರ ಕೇವಲ ಗಂಡಸು. ಇವೆಲ್ಲ ನಮ್ಮ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಜನಸಂಖ್ಯಾ ನಿಯಂತ್ರಣವೊಂದೇ ದೇಶದ ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸಬಲ್ಲ ರಾಮಬಾಣ ಎನ್ನುವುದನ್ನು ಏಷ್ಯಾದ ಮುಂದುವರಿದ ರಾಷ್ಟ್ರಗಳು ಅರ್ಥಮಾಡಿಕೊಂಡಿವೆ. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಜನಸಂಖ್ಯೆಯ ನಿಯಂತ್ರಣ ಒತ್ತಾಯಪೂರ್ವಕವಾಗಿ ನಡೆದರೆ ಅದರ ಪರಿಣಾಮವೇ ಬೇರೆ. ನಮ್ಮ ದೇಶದಂತಹ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರದಲ್ಲಂತೂ ಇದು ಅಸಾಧ್ಯ. ಇದನ್ನು ಕೇವಲ ಮನಸ್ಸನ್ನು ಪರಿವರ್ತನೆ ಮಾಡುವುದರಿಂದ ಮಾತ್ರ ಸಾಧ್ಯ. ಹೆಚ್ಚು ಜನರು ಕೆಲಸಕ್ಕೆ ಹೋಗುವುದು, ಒಂದು ಮನೆಗೆ ಒಂದು ಮಗು ಎಂದು ಪಾಲಕರೇ ಸ್ವಯಂಪ್ರೇರಿತವಾಗಿ ನಿರ್ಧಾರಿಸುವುದು, ಅಥವಾ ಮದುವೆಯ ವಯಸ್ಸನ್ನು ಮುಂದೂಡುವುದು ಇಂತಹ ನಿಲುವುಗಳು ವ್ಯಾಪಕವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಿ ಜನಜೀವನದ ಮಟ್ಟವನ್ನು ಏರಿಸಬಲ್ಲದು. ಈ ನಿಟ್ಟಿನಲ್ಲಿ ಈ ವರ್ಷ ದೇಶದ ಎಕಾನಾಮಿಕ್ ಡೆವಲಪ್‌ಮೆಂಟ್ ಜೊತೆ ಜನರ ಜೀವನಮಟ್ಟವನ್ನು ಸುಧಾರಿಸಲು ಸರ್ಕಾರ ಯಾವ ನಿರ್ಧಾರ ತಗೆದುಕೊಳ್ಳಬಹುದು ಎಂಬುದನ್ನು ಕಾದು‌ನೋಡಬೇಕು.

ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಬರಹ..

 

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!