ಅಂಕಣ

ಗೃಹಇಲಾಖೆ ಇನ್ನೆಷ್ಟು ಬಲಿ ಬೇಕು??

ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ತಿಂಗಳಿಗೊಂದು ಸುದ್ಧಿ ಖಾಯಂ. ಬಿ.ಜೆ.ಪಿ. ಕಾರ್ಯಕರ್ತನ ಕಗ್ಗೊಲೆ , ಜೆ.ಡಿ.ಎಸ್ ಕಾರ್ಯಕರ್ತನ ಕಗ್ಗೊಲೆ, ಗೋರಕ್ಷಕರ ಕೊಲೆ, ಎಡಪಂಕ್ತಿಯರ ಕೊಲೆ, ಬಲಪಂಕ್ತಿಯರ ಕೊಲೆ. ಸುದ್ದಿವಾಹಿನಿಗಳಲ್ಲಿ ಕೊಲೆಯದ್ದೆ ಸುದ್ದಿ. ಕೊಲೆಯಾದ ಮೇಲೆ ಅದರ ಚರ್ಚೆ. ಇವೆಲ್ಲವೂ ಕರ್ನಾಟಕವನ್ನು ಐದು ವರ್ಷಗಳ ಕಾಲ ಸೂತಕದಲ್ಲೆ ಕೂರಿಸಿದೆ ಅನ್ನುವ ಭಾವ ಕಾಡುತ್ತಿದೆ.

ಕಲಬುರ್ಗಿಯವರ ಕೊಲೆಯಾದಾಗ, ಸುಮಾರು 22 ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಸರ್ಕಾರ ಸಂಪೂರ್ಣ ವಿಫಲವಾಯಿತು. ಅದರ ಗುಪ್ತಚರ ಇಲಾಖೆಯಂತು ಸಪ್ತಸಾಗರದಾಚೆಗೆ ಹೋಗಿ ಸುಪ್ತಾವಸ್ತೆಯಲ್ಲಿ ಇರುವಂತೆ ತೋರುತ್ತಿದೆ. ಕೊಲೆಯ ಪೂರ್ವೋತ್ತರ ಘಟನೆಗಳ ವಿವರಣೆಯನ್ನು, ಸೂಕ್ಷ್ಮವಿಚಾರಗಳನ್ನು ಸರ್ಕಾರಕ್ಕೆ ತಲುಪಿಸಲು ಗುಪ್ತಚರ ಇಲಾಖೆ ಎಡವಿತೆ? ಅಥವಾ ಗುಪ್ತಚರ ಇಲಾಖೆ ಮಾಹಿತಿ ಕೊಟ್ಟರು ಸರ್ಕಾರ ಮೌನವಹಿಸಿತೇ? ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡಿದವೇ? ಅಂತಹ ಘಟನೆಗಳನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಯಿತೇ? ಅಥವಾ ಸರ್ಕಾರಕ್ಕೆ ಆಸಕ್ತಿ ಇಲ್ಲವೇ? ಕೋಮುಗಲಬೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಯಿತೆ? ಮಂಗಳೂರು, ದಕ್ಷಿಣಕನ್ನಡ, ಉತ್ತರಕನ್ನಡ ಹಾಗೂ ಹೊನ್ನಾವರ ಹೀಗೆ ಹಲವು ಕಡೆ ಕೋಮುಗಲಭೆಗಳನ್ನು ನಿಯಂತ್ರಿಸುವ ಬದಲು ಬೆಳೆಯಲು ಬಿಟ್ಟು ಪರಿಸ್ಥಿತಿಯನ್ನು ಮತಷ್ಟು ಗಂಭೀರ ಗೊಳಿಸಿತೆ? ವಿರೋಧಪಕ್ಷ ಆರೋಪಿಸುವಂತೆ ಸರ್ಕಾರ ಸರಣಿ  ಹಿಂದೂಕಾರ್ಯಕರ್ತರ ಕೊಲೆಗಳನ್ನು ನಿರ್ಲಕ್ಷಿಸಿತೆ? ರಾಜಕೀಯ ಲಾಭ ನಷ್ಟಗಳ ಲೆಕ್ಕಚಾರದಲ್ಲಿ ಸಾವುಗಳ ಲೆಕ್ಕ ಸಿಗಲಿಲ್ಲವೇ ಈ ರಾಜಕೀಯ ಪಕ್ಷಗಳಿಗೆ?

ಬೃಹತ್ ಪ್ರತಿಭಟನೆ ಮಾಡುವ ಭಾರತೀಯ ಜನತಾ ಪಕ್ಷ ಒಬ್ಬ ಕಾರ್ಯಕರ್ತನ ಕೊಲೆಯಾದ ಕೂಡಲೆ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಕೇಂದ್ರದ ಮೇಲೆ ಒತ್ತಡಹಾಕಿ ಅವರು ಆರೋಪಿಸುವ ಸಂಘಟನೆಗಳನ್ನು ನಿಷೇಧಿಸಬಹುದಿತ್ತು. ಕಪ್ಪುಪಟ್ಟಿಗೆ ಸೇರಿಸಬಹುದಿತ್ತು. ಅಧಿವೇಶನದಲ್ಲಿ ಎಲ್ಲಾ ಸಂಸದರು ಒಟ್ಟಿಗೆ ಸದನದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಹೇಳಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ ಎಂದು ಹೇಳಿ ಭಯೋತ್ಪಾದಕ ಸಂಘಟನೆಗಳ ನಂಟಿರುವ ಸಂಘಟನೆಗಳ ಹೆಸರನ್ನು ಬೆಡುಗಡೆಮಾಡಿ ದೇಶಾದ್ಯಂತ ಅಂತಹ ಸಂಘಟನೆಗಳನ್ನು ನಿಯಂತ್ರಣದಲ್ಲಿರುವ ಪ್ರಯತ್ನ ಮಾಡಬಹುದಿತ್ತು. ಆದರೆ ಅವರೂ ಮಾಡಿದ್ದು ಅದೇ ರಾಜಕಾರಣ, ಅದೇ ಗಲಭೆ, ಅದೇ ಪ್ರತಿಭಟನೆ. ಕಾನೂನಾತ್ಮಕವಾಗಿ ಹೋರಾಡಿ ಅಂತಹ ಸಂಘಟನೆಗಳ ಹುಟ್ಟಡಗಿಸುವದು ಬಿಟ್ಟು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಬೀದಿ ಪ್ರತಿಭಟನೆ ಮತ್ತು ಒಂದು ದಿನದ ಬಂದ್. ಮೊದಲೆರಡು ಕಾರ್ಯಕರ್ತರ ಕೊಲೆಯಾದ ಕೂಡಲೇ ಎಚ್ಚೆತ್ತಿದ್ದರೆ ಮುಂದಾದ ಇಪ್ಪತ್ತು ಕೊಲೆಯನ್ನಾದರೂ ತಡೆಯಬಹುದಿತ್ತು. ಇದರತ್ತ ಗಮನ ಹರಿಸಲಿಲ್ಲ. ಅಂದಿನ ಹೋರಾಟ ಅಂದಿಗೆ ಮುಂದೆ ಮತ್ತೊಂದು ಹೋರಾಟ ಅಷ್ಟೆ. ಇಷ್ಟಕ್ಕೆ ಸೀಮಿತವಾಗಿ ಹೋಯಿತಾ ಇವರ ಹೋರಾಟ? ಈ ವಿಷಯವನ್ನು ಮಾಧ್ಯಮದಲ್ಲಿ ಗಂಟೆಗಟ್ಟಲೆ ಚರ್ಚೆಮಾಡುವ ಇವರು  ವಿಧಾನ ಪರಿಷತ್ ಮತ್ತು ವಿಧಾನಸಭೆಯ ಅಧಿವೇಶನಗಳಲ್ಲಿ ಮಾನ್ಯ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರನ್ನು ಹಾಗೂ ಗೃಹಸಚಿವರನ್ನು ನೇರವಾಗಿ ಪ್ರಶ್ನಿಸಿ ಅದೆಷ್ಟು ಬಾರಿ ಚರ್ಚಿಸಿದ್ದಾರೆ? ಕಾರ್ಯಕರ್ತರ ಮುಂದೆ ಭಾವನಾತ್ಮಕವಾಗಿ ಏರುಧ್ವನಿಯಲ್ಲಿ ಮಾತನಾಡುವ ನಾಯಕರು ಐದುವರ್ಷದಿಂದ ಸರ್ಕಾರದ ಮೇಲೆ ಮೃದುಧೋರಣೆ ತೋರಿದ್ದಾದರೂ ಯಾಕೆ?? ಸರ್ಕಾರದ ಅದೆಷ್ಟು ಹಗರಣಗಳನ್ನು, ಭ್ರಷ್ಟಾಚಾರಗಳನ್ನು, ಧೋರಣೆಗಳನ್ನು ಒಬ್ಬೊಂಟಿಯಾಗಿ ಅಧಿವೇಶನದಲ್ಲಿ ಸಾಬೀತುಮಾಡಿದೆ? ಮಾಧ್ಯಮದಲ್ಲಿ ಭ್ರಷ್ಟಸರ್ಕಾರ, ಕೊಲೆಗಡುಕಸರ್ಕಾರ ಎಂದು ಜರಿಯುವ ಇವರು ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲಿ ಯಾವುದನ್ನು ಸಾಬೀತು ಮಾಡಿಲ್ಲ. ಒಂದು ಜವಾಬ್ಧಾರಿಯುತ ವಿರೋಧಪಕ್ಷವಾಗಿ ವಿಫಲವಾಗಿ ಈಗ ಭಾವನಾತ್ಮಕವಾಗಿ ಜನರ ಮನಗೆಲ್ಲಲು ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆಯ ಎಂಬ ಅನುಮಾನವು ಸಾರ್ವಜನಿಕರಲ್ಲಿದೆ.

ಏನೇ ಆಗಲಿ ಸೈಧ್ಧಾಂತಿಕ ವಿರೋಧಗಳು ಸೈಧ್ಧಾಂತಿಕ ನೆಲೆಗಟ್ಟಿನಲ್ಲೆ ಬಗೆಹರಿಯಬೇಕು. ವೇದಿಕೆಯ ಮಾತಿನಲ್ಲಿ ನಿಮ್ಮ ಕೃತಿಗಳಲ್ಲಿ ನಿಮ್ಮ ಸೈಧ್ಧಾಂತಿಕ ಒಳಿತನ್ನು ತೋರಿಸಬೇಕು. ಸೈಧ್ಧಾಂತಿಕ ಧ್ವೇಷಗಳು ವ್ಯಕ್ತಿಗಳ ಜೀವವನ್ನು ತೆಗೆಯಬಾರದು. ಜೀವತೆಗೆಯುವ ಸಿದ್ಧಾಂತವನ್ನು ಯಾವ ಸಿದ್ಧಾಂತವು ಬೆಂಬಲಿಸುವುದಿಲ್ಲ. ರಾಜ್ಯದಲ್ಲಿ ಸೈಧ್ಧಾಂತಿಕ ಸಂಘರ್ಷಗಳು ನಡೆದು ಕೊಲೆಗಳಾಗಿ ತದನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶಾಂತಿ ಸುವ್ಯವಸ್ಥೆ ಹದಗೆಡುವವರೆಗೂ ಗೃಹಇಲಾಖೆ ನೀರವ ಮೌನ ತಾಳುವುದು ಮಾತ್ರ ಶೋಚನೀಯ. ಈ ಮೃತ ಗೃಹಇಲಾಖೆಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕೋ ತಿಳಿಯುತ್ತಿಲ್ಲ. ಈ ಸರ್ಕಾರದ ಅತ್ಯಂತ ನಿಷ್ಕ್ರಿಯ ಇಲಾಖೆಯೆಂದರೆ ಅದು ಗೃಹಇಲಾಖೆಯೇ ಇರಬೇಕು. ಅದು ಸರಿದಾರಿಗೆ ಬರುವವರೆಗೂ ಸಾರ್ವಜನಿಕರು ಇಂತಹ ಘಟನೆಗಳನ್ನು ಮಾಧ್ಯಮದಲ್ಲಿ ಸಿದ್ಧಾಂತಕ್ಕಾಗಿ ಸತ್ತ ಅಮಾಯಕರನ್ನು ನೋಡಿ ಕೊರಗುವುದಷ್ಟೆ ಮನಗೆ ಒದಗಿರುವ ಭಾಗ್ಯ.

ಸರ್ಕಾರವಂತು ಈ ಸರದಿಯ ಆಡಳಿತಾವಧಿಯ ಸಂಧ್ಯಾಕಾಲದ ಮುಸ್ಸಂಜೆಯಲ್ಲಿ ಕೈಚಲ್ಲಿ ಕುಳಿತಿದೆ. ಮುಂಬರುವ ಸರ್ಕಾರವಾದರೂ ಕರ್ನಾಟಕವನ್ನು ಕೊಲೆಗಡುಕರ ನಾಡೆಂದು ಕುಖ್ಯಾತಿಗೆ ತಲುಪದ ಹಾಗೆ ಸುವರ್ಣಕರ್ನಾಟಕವನ್ನು ಕಾಪಾಡಲಿ ಎಂಬುದಷ್ಟೆ ಕನ್ನಡಿಗರ ಕೋರಿಕೆ. ಕೊಲೆಸುಲಿಗೆಗಳು ಕರ್ನಾಟಕದ ಅಸ್ಮಿತೆಯಾಗಬಾರದು. ನಮ್ಮ ಆಡಳಿತ, ವಿಕಾಸ, ನೂತನ ಅಭಿವೃಧ್ಧಿ ಕ್ರಾಂತಿಗಳು ನಮ್ಮ ಅಸ್ಮಿತೆಯಾಗಬೇಕು. ಮುಂಬರುವ ಸರ್ಕಾರವನ್ನು ಆರಿಸುವ ಜವಾಬ್ಧಾರಿಯು ನಮ್ಮದೆ. ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಬರುವ ಸರ್ಕಾರಗಳು ಪ್ರಾಮಾಣಿಕವಾಗಿರುತ್ತವೆ. ಅಳಿವು – ಉಳಿವು ಎಲ್ಲ ಇರುವುದು ನಮ್ಮ ಕೈಯಲ್ಲೆ.

ಪುನೀತ್.ಜಿ.ಕೂಡ್ಲೂರು.

puneethjoies@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!