Uncategorized

ಬದಲಾವಣೆಯ ಓಟದಲ್ಲಿ…

ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ  ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಹಿಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು (ಫೋಟೋ) ವಾರಗಟ್ಟಲೆ ಕಾದು ಸಾವಿರಾರು ರೂಪಾಯಿಗಳನ್ನು ಸುರಿದಿರುವುದೂ ಉಂಟು, ಅಂಗೈಯಂಚಿನ ವಸ್ತುವೊದರಲ್ಲಿ (ಮೊಬೈಲ್) ಇಂತಹ ಲಕ್ಷಾಂತರ ಪ್ರತಿಬಿಂಬಗಳನ್ನು ಫ್ರೀ-ಆಫ್-ಕಾಸ್ಟ್’ನಲ್ಲಿ ಏಕಕಾಲಕ್ಕೆ ತೆಗೆದಿರುವುದೂ ಉಂಟು! ವರ್ಷಗಳ ಕಾಲ ಕಾಲು ಸವೆಸಿ ನಡೆದು ದಣಿದು ದೂರದ ಊರೊಂದನ್ನು ಸೇರಿರುವುದೂ ಉಂಟು, ಇಂದು ಅದೇ ಊರನ್ನು ಘಂಟೆಯೊಂದರಲ್ಲಿ ತಲುಪಿ ತೋರಿಸಿರುವುದೂ ಉಂಟು! ದುಡಿಯುವ ನೆಪದಲ್ಲಿ ಮನೆಬಿಡುವ ಅಪ್ಪ ವರ್ಷಾನುಗಟ್ಟಲೆ ಮನೆಯವರನ್ನು ಕಾಣದೆ ಪರಿತಪಿಸಿರುವುದೂ ಉಂಟು, ಇಂದು ದಿನದ ಇಪ್ಪನಾಲ್ಕೂ ಘಂಟೆಯೂ ಖಂಡಾಂತರ ದೂರದಿಂದ ಆತನ ಮೊಮ್ಮಕ್ಕಳೊಟ್ಟಿಗೆ ನೋಡುತ್ತಾ ನಲಿಯುತ್ತ  ಮಾತಾಡಿರುವುದೂ ಉಂಟು! ಅದೆಷ್ಟೇ ಅರಚಾಡಿದರೂ ಗುಂಪುಗಳೆರಡನ್ನು ಬಡಿದಾಡಿಸಲಾಗದಿರುವುದೂ ಉಂಟು, ಒಂದು ಶೇರ್ಎಂಬ  ಭ್ರಮಲೋಕದ ಬಟನ್ ಅನ್ನು ಒತ್ತಿ ಕೋಮುಗಳಲ್ಲಿ ಬೆಂಕಿಯ ಜ್ವಾಲೆಯನ್ನು ಹೊತ್ತಿರಿಸಿರುವುದೂ ಉಂಟು!! ಒಟ್ಟಿನಲ್ಲಿ ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಅವಧಿಯಲ್ಲಿ ಮಾನವ ಕಂಡಷ್ಟು ಬದಲಾವಣೆ ಇತಿಹಾಸದ ಯಾವೊಂದು ಕಾಲಘಟ್ಟದಲ್ಲೂ ಆತ ಕಂಡಿರಲು ಸಾಧ್ಯವಿಲ್ಲ. ಬೆಂಕಿಯ ಭಯದಲ್ಲೇ ಬದುಕುತ್ತಿದ್ದ ಆತ ಅದೇ ಬೆಂಕಿಯನ್ನು ತನ್ನ ಗುಲಾಮನಂತೆ ಮಾಡಿಕೊಳ್ಳಲು ಶತಮಾನಗಳ ಕಾಲ ಹೆಣಗಾಡಿದ ಆ ಕಾಲವೆಲ್ಲಿ, ಹೊಸದೊಂದು ಅನ್ವೇಷಣೆ ಜನಮಾನಸದ ರೀತಿ ನೀತಿಯನ್ನೇ ನಿಮಿಷಮಾತ್ರದಲ್ಲಿ ಬದಲಾಯಿಸುವ ಇಂದಿನ ಕಾಲವೆಲ್ಲಿ?! ಬದಲಾವಣೆಗಳೆಂಬುದು ಹೀಗೆ ಮಿಂಚಿನ ವೇಗದಲ್ಲಿ ಇಂದು ಆಗುವುದಾದರೆ ಪ್ರಸ್ತುತ ಜಾರಿಯಲ್ಲಿರುವ ಅದೆಷ್ಟೋ ವಸ್ತುಗಳು/ಟೆಕ್ನಾಲಜಿಗಳು ಸಹ  ಕಣ್ಮರೆಯಾಗಿ ಆ ಜಾಗದಲ್ಲಿ ಮತ್ಯಾವುದೋ ವಸ್ತು/ಟೆಕ್ನಾಲಜಿಗಳು ಮುಂದೊಂದು ದಿನ ಬಂದು ಕೂರುವುದಂತೂ ಸುಳ್ಳಲ್ಲ. ಹೀಗೆ ಕೆಲಕಾಲದಿಂದ ನಮ್ಮ ಜೀವನದ ಸಂಗಾತಿಗಿಂತಲೂ ಹತ್ತಿರವಾಗಿದ್ದೂ ಇಂದು ಹೊಸತನದ ಭರದಲ್ಲಿ ನಶಿಸಿಹೋಗುತ್ತಿರುವ, ಕಾಲ ಸರಿದಂತೆ ಮುಂದೆಂದೂ ಬಾರದ/ಕಾಣದ ಕೆಲವು ವಸ್ತುಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಮುದ್ರಣ ಮಾಧ್ಯಮ :
ಆ ಒಂದು ದಿನವಿತ್ತು. ಬೆಳಗೆದ್ದು ಆಟ, ಓಟ ಹಾಗು ಮತ್ತಿತರ ನಿತ್ಯಕರ್ಮಗಳನ್ನು ಮುಗಿಸಿ ರೆಡಿಯಾಗಿ ಮನೆಯ ಹಾಲಿಗೋ ಅಥವಾ ಬಾಗಿಲ ಮುಂದಿನ ಎಳೆಬಿಸಿಲ ಹೊಳಪಿಗೂ ಕುರ್ಚಿಯೊಂದನ್ನು ಎಳೆದು ತಂದು ಕೂತರೆ ಕೈಯಲ್ಲಿ ಎರಡು ವಸ್ತುಗಳು  ಇದ್ದಿರಲೇಬೇಕಿದ್ದಿತು. ಒಂದು ಟೀ ಅಥವಾ ಕಾಫಿಯ ಲೋಟವರಾದರೆ ಇನ್ನೊಂದು ಚುರುಮುರು ಸದ್ದಿನೊಂದಿಗೆ ಜಗತ್ತಿನ ಮಿನಿ ದರ್ಶನವನ್ನು ಮಾಡಿಸುತ್ತಿದ್ದ ದಿನಪತ್ರಿಕೆ. ಕೆಲವರು ತಾಸುಗಳ ಕಾಲ ತಮ್ಮನ್ನು ತಾವು ದಿನಪತ್ರಿಕೆಯೊಳಗೆ ಮುಳುಗಿಸಿಕೊಂಡರೆ ಇನ್ನು ಕೆಲವರು ತಮ್ಮ ಮನೆಯಾಕೆಯ ಅರಚುವಿಕೆಗೋ, ಮಕ್ಕಳ ಉಪಟಳಕ್ಕೋ ಅಥವಾ ಮತ್ಯಾವುದೋ ದಿನದ ಜಂಜಾಟಗಳಿಗೋ ಮಣಿದು ಸಾಧ್ಯವಾದಷ್ಟು ವಿಷಯಗಳನ್ನೆಲ್ಲ ಗಬಗಬನೆ ಓದಿ, ಮಿಕ್ಕುಳಿದ ವಿಷಯಗಳನ್ನು ಹೀರಿಕೊಳ್ಳುವ ಚಟಕ್ಕೆ ಬದುಕುಳಿದ ಪುಟಗಳನ್ನು ತಮ್ಮ ಕೆಲಸದ  ಬ್ಯಾಗಿನೊಳಗೆ ಸುರುಳಿ ಸುತ್ತಿ ತೂರಿಸಿಕೊಂಡು ಬಸ್ಸನ್ನೇ ಓದುವ ಸ್ಥಳವಾಗಿ ಮಾಡಿಕೊಂಡು, ಮಧ್ಯಾಹ್ನದ ಕೊಂಚ ಬಿಡುವಿನ ವೇಳೆಯಲ್ಲಿಯೂ ತಮ್ಮ ಊರಗಲ ಕೈಯನ್ನು ಚಾಚಿ ತಮ್ಮನು ತಾವು ಪತ್ರಿಕೆಯೊಳಗೆ ಕಳೆದುಕೊಂಡುಬಿಡುತ್ತಿದ್ದರು. ನಾವು ಚಿಕ್ಕವರಿದ್ದಾಗ ಅಥವಾ ತೀರಾ ಇತ್ತೀಚೆಗೂ ಕಾಣಸಿಗುವ ವಿದ್ಯಮಾನವಿದು. ಆದರೆ ಇನ್ನೊಂದಿಷ್ಟು ವಸಂತಗಳಲ್ಲಿ ಇವೆಲ್ಲ ಘಳಿಗೆಗಳು, ತವಕಗಳು ಕೇವಲ ನೆನಪಾಗಿ ಮಾತ್ರವಷ್ಟೇ ಉಳಿಯುತ್ತವೆ ಎಂದರೆ ನಾವು ನಂಬಲೇಬೇಕು! ಇಂದಿನ ಇಂಟರ್ನೆಟ್ಟಿನ ಮಾಯಾಜಾಲದದಲ್ಲಿ ನಮ್ಮ ಕೈಗೆಟುಕದ ವಸ್ತುವೊಂದಿಲ್ಲ. ಅಂತಹ ಮಹಾಸಾಗರದಲ್ಲಿ ದಿನಪತ್ರಿಕೆ ಎಂಬುದು ಯಾವ ಮಹಾ. ಅದಾಗಲೇ ಪ್ರಸ್ತುತ ಜಾರಿಯಲ್ಲಿರುವ ಬಹುತೇಕ ಪತ್ರಿಕೆಗಳು ತಮ್ಮ ತಮ್ಮ ಆನ್ಲೈನ್ ವೆಬ್ಸೈಟ್ಗಳನ್ನು ನಿರ್ಮಿಸಿಕೊಂಡು ಮುಂದಿನ ದಿನಗಳಿಗೆ ಸಜ್ಜಾಗಿವೆ. ಕ್ಷಣ ಕ್ಷಣದ ಬ್ರೇಕಿಂಗ್ ಸುದ್ದಿಗಳು, ಲಕ್ಷಾಂತರ ಭಿನ್ನ-ಭಿನ್ನ ಬಗೆಯ ವಿಷಯಗಳು ಕೈಯಂಚಿನಲ್ಲಿ ಸಿಗುವ ಸುಲಭ ಮಾರ್ಗವಿರುವಾಗ ಟೆಕ್ನಾಲಜಿಯ ನೆಪದಲ್ಲಿ ಕೊಂಚ ಸೊಂಬೇರಿಯಾಗಬಯಸುವ (ಪರಿಸರ ಸಂರಕ್ಷಣೆಯ ಸದುದ್ದೇಶವನ್ನೂ ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ) ಮಾನವ ಪತ್ರಿಕೆಗಳನ್ನು ಕೊಂಡು ತೆರೆದು ಕಷ್ಟ ಪಟ್ಟು ಓದುವುದು ಮುಗಿದು ಹೋದ ಅಧ್ಯಾಯವೆಂದೇ ಅನ್ನಬಹುದು! ಇನ್ನು ಮೊಬೈಲ್ ಫೋನುಗಳ ಸಂತೆಯಲ್ಲಿ ಪುಸ್ತಕಗಳಿಗೂ ಬಂದೊದಗಿರುವ ಆವಸ್ಥೆ ಹೆಚ್ಚು ಕಡಿಮೆ ಇಂತಹದ್ದೇ ಎಂದರೆ ಸುಳ್ಳಾಗದು. ಸರ್ವವೂ ಮೊಬೈಲ್ ಮಯವಾಗಿರುವಾಗ ಕೆಜಿಗಟ್ಟಲೆ ತೂಕದ ಪುಸ್ತಕಗಳನ್ನು ಕೊಂಡು, ಓದಿ ಮನೆಯ ಕಪಾಟಿನಲ್ಲಿ ಜೋಡಿಸಿಡುವುದು, ಆಗೊಮ್ಮೆ ಈಗೊಮ್ಮೆ ತೆಗೆದು ಧೂಳೊರೆಸುವ ಕಾರ್ಯದಲ್ಲಿ ಮಗದೊಮ್ಮೆ ಒಂದೆರೆಡು ಪುಟಗಳ ಓದಿನಲ್ಲಿ ತೊಡಗಿ, ಆಸಕ್ತಿ ಮೂಡಿ, ಇಡೀ ಪುಸ್ತಕವನ್ನೇ ಮತ್ತೊಮ್ಮೆ ತಿರುವಿಹಾಕಿ ಆನಂದಪಡುತಿದ್ದದ್ದು ಇನ್ನು ಕಳೆದುಹೋದ ನನಪುಗಳೆಂದೇ ಎನ್ನಬಹುದು! ಜೊತೆಗೆ ಪ್ರಿಂಟರ್ ಗಳು, ಕ್ಸೆರಾಕ್ಸ್ ಮಷೀನ್ಗಳು ಅಷ್ಟೇ ಏಕೆ ಸಂಪೂರ್ಣ ಖಾಯಂಪ್ರತಿಗಳ(HardCopies) ಕಾಲವೇ ಕೊನೆಗೊಳ್ಳುವ ಕಾಲ ಬಹುಬೇಗನೆ ಸಮೀಪಿಸುತ್ತಿದೆ ಎಂಬುದನ್ನು ಬಾಂಡ್ ಪೇಪರಿನಲ್ಲಿ ಬೇಕಾದರೂ ಕೂಡ ಬರೆದುಕೊಡಬಹುದು!

ಕರೆನ್ಸಿ ನೋಟುಗಳು:
ಸತ್ತ ಮೇಲೆ ದುಡ್ಡನ್ನೇನು ತಲೆಯಮೇಲೆ ಹೊತ್ತುಕೊಂಡು ಹೋಗಲಾಗುವುದಿಲ್ಲಎಂಬ ಪ್ರಸಿದ್ಧ ನಾಣ್ನುಡಿ ಸುಳ್ಳಾಗುವ ಕಾಲ ಸಮಿಪಿಸುತ್ತಿದೆ!  ಡಿಜಿಟಲೀಕರಣದ ಈ ಹೊಸ ಜಮಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಬಗೆಯ ನೋಟುಗಳು, ನಾಣ್ಯಗಳು ಮರೆಯಾಗಿ ಕೇವಲ ಆನ್ಲೈನ್ ಮುಖಾಂತರದ ಹಣವನ್ನು ಕಾಣುವ ದಿನಗಳು ಅದಾಗಲೇ ಬಹುಪಾಲು  ಜನರ ದಿನಚರಿಯಲ್ಲಿ ಒಂದಾಗತೊಡಗಿದೆ. ಅದಾಗಲೇ ಗೋಪ್ಯನಾಣ್ಯ (ಬಿಟ್ ಕರೆನ್ಸಿ) ಗಳೆಂಬ ಆನ್ಲೈನ್ ಕರೆನ್ಸಿಗಳು ಮಾರುಕಟ್ಟೆಯನ್ನು ಅವರಿಸುತ್ತಿವೆ. ಇದು ಸಾಂಪ್ರದಾಯಿಕ ಹಣಕಾಸು ವ್ಯವಹಾರಗಳಿಗೆ ತೀರಾ ಭಿನ್ನವಾಗಿದ್ದು, ವಿಕೇಂದ್ರೀಕೃತ (ಬ್ಯಾಂಕ್ ಅಥವಾ ಮತ್ಯಾವುದೇ ಹಣಕಾಸು ಸಂಸ್ಥೆಗಳ ಅಧೀನಕ್ಕೆ ಒಳಪಟ್ಟಿರದ ಒಂದು ಜಾಲ) ಮಾದರಿಯನ್ನು ಒಳಗೊಂಡಿದೆ. ಇಡೀ ಪ್ರಪಂಚದಾದ್ಯಂತ ಏಕ ಮಾತ್ರದ ಡಿಜಿಟಲ್ ಕರೆನ್ಸಿಯ ರೂಪ! ಇನ್ನೇನಿದ್ದರೂ ಇಂತಹ ಡಿಜಿಟಲ್ ಕರೆನ್ಸಿಗಳು ಹಾಗು ಡಿಜಿಟಲ್ ವ್ಯವಸ್ಥೆ ಎಲ್ಲಾ ವರ್ಗದ ಜನರಿಗೆ ಅದೆಷ್ಟು ಬೇಗನೆ ತಲುಪಲಿದೆ ಎಂಬುದು ಮಾತ್ರವೇ ಆಗಿದೆ. ಡಿಜಿಟಲೀಕರಣ ಕೇವಲ ನೋಟುಗಳ ಕಾಟವನು ತಪ್ಪಿಸುವುದಲ್ಲದೆ ಪಾರದರ್ಶಕ ವ್ಯವಹಾರಗಳಿಗೂ ಇಂಬು ಕೊಡುತ್ತದೆ. ಆದರಿಂದಲೇ  ಹತ್ತಾರು ದೇಶಗಳು ತಮ್ಮ ಪ್ರಜೆಗಳಿಗೆ ಆದಷ್ಟು ಬೇಗನೆ ಸಂಪೂರ್ಣ ಆನ್ಲೈನ್ ಟ್ರಾನ್ಸಾಕ್ಷನ್ಸ್ ಗಳಿಗೆ ಸಿದ್ಧರಾಗಲು ಹುರಿದುಂಬಿಸುತ್ತಿವೆ. ಆಗ ತನ್ನ ತಾತನ ಕಾಲದಿಂದ ಕೂಡಿಟ್ಟ ಹಣದ ರಾಶಿಯನ್ನು ಹೆಣದೊಟ್ಟಿಗೆಯೆ ಮಲಗಿಸಿ ಕಳಿಸಬೇಕಾಗುವುದೇನೋ ಯಾರು ಬಲ್ಲರು?!

ಕ್ಯಾಮೆರಾ :
ಆಧುನೀಕರಣವೆನ್ನುವ ಓಟದ ಮುಂದೆ ವೇಗೋತ್ಕರ್ಷವೂ ನಿಧಾನವೆಂದೆನಿಸುವುದು ಕ್ಯಾಮರಾಗಳ ಬಗ್ಗೆ ಯೋಚಿಸಿದಾಗ. ಹೆಚ್ಚೇನೂ ಅಲ್ಲ ಕೇವಲ ದಶಕಗಳ ಹಿಂದಷ್ಟೇ ನಾವುಗಳು ಕ್ಯಾಮೆರಾ ಒಂದನ್ನು ಕೊಂಡರೆ ಜೊತೆಗೆ ಸಣ್ಣ ನಶ್ಯಡಬ್ಬಿಯ ಆಕಾರದ ರೀಲುಗಳಿಗೂ ಕಾಸು ಚೆಲ್ಲಬೇಕಿದ್ದಿತು. ಫೋಟೋಗಳನ್ನು ತೆಗೆದ ನಂತರ ಮತ್ತೆ ಅದೇ ಅಂಗಡಿಗೆ ಓಟ ಕಿತ್ತು, ಮತ್ತೊಂದಿಷ್ಟು ಹಣವನ್ನು, ಸಮಯವನ್ನು ತೆತ್ತು ಕಾಯಂಪ್ರತಿಯೊಂದನ್ನು ಪಡೆಯುವಷ್ಟರಲ್ಲಿ ಸಾಕು ಸಾಕಪ್ಪ ಎಂದನಿಸುತಿತ್ತು. ಇವೆಲ್ಲ ಕಿರಿಕಿರಿಗಳಿಗೂ ಬ್ರೇಕ್ ಹಾಕಿದಂತೆ ಬಂದದ್ದೇ ಡಿಜಿಟಲ್ ಕ್ಯಾಮೆರಾಗಳು. ಎಲ್ಲೆಂದರಲ್ಲಿ ಸಮಾದಾನವಾಗುವವರೆಗೂ ಚಕ ಚಕನೆ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಕಂಪ್ಯೂಟರ್ಗಳಿಗೆ ಜೋಡಿಸಿದರೆ ಸಾಕು. ನೂರು, ಸಾವಿರ ಫೋಟೋಗಳ ರಾಶಿ ಯಾವುದೇ ತೊಳೆಯುವಿಕೆ, ಹೊಳೆಯುವಿಕೆ ಎಂಬ ತಾಪತ್ರಯವಿಲ್ಲದೆ ಪರದೆಯ ತುಂಬ ಮೂಡಿಬಿಡುತ್ತವೆ. ಪರಿಣಾಮ ಒಂದುಕಾಲದಲ್ಲಿ ಐಶಾರಾಮತೆಯ ವಸ್ತುಗಳಲ್ಲಿ ಒಂದೆನಿಸಿದ್ದ ರೀಲ್ ಕ್ಯಾಮೆರಾಗಳು ಇಂದು ಮರೆಯಾಗಿವೆ. ಅಂದ ಮಾತ್ರಕ್ಕೆ ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಕ್ಯಾಮೆರಾಗಳೇನೂ ಶಾಶ್ವತವಲ್ಲ. ಮೊಬೈಲ್ ಫೋನುಗಳ ಭರಾಟೆಯಲ್ಲಿ ಅವುಗಳೂ ನಶಿಸುವ ಅಂಚಿನಲ್ಲಿವೆ. ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಉತ್ಕೃಷ್ಟವಾದ ಮೊಬೈಲ್ ಕ್ಯಾಮೆರಾಗಳು ಇಂದು ಮಾರುಕಟ್ಟೆಗೆ ಬಂದಿವೆ. ಸಕಲವೂ ಅಂಗೈಯಷ್ಟಿನ ಮೊಬೈಲ್ ಒಂದರಲ್ಲೆ ಸಿಗುತ್ತಿರುವಾಗ ಸಾವಿರಾರು ರೂಪಾಯಿಗಳನ್ನು ಕ್ಯಾಮೆರಾಗಳಿಗೆ ಪ್ರತ್ಯೇಕವಾಗಿ ಸುರಿಯುವುದು ಇನ್ನು ಮುಂದೆ ಹಾಸ್ಯಾಸ್ಪದವೆಂದೆನಿಸದಿರದು. ಅದೇನೇ ಇರಲಿ ಇಂದಿನ ನಾವುಗಳು ಕಪ್ಪುಬಿಳುಪಿನ ಕಾಯಂಪ್ರತಿಯ ಕಾಲದಿಂದ ಸೆಲ್ಫಿ ಎಂಬ ಹೊಸ ಪದವನ್ನೇ ಹುಟ್ಟಿಹಾಕಿದ ಯುಗಗಳೆರಡನ್ನೂ ಕಂಡು ಅನುಭವಿಸಿದ್ದೇವೆ. ಪುಳಕಗೊಂಡಿದ್ದೇವೆ.

ಫ್ಲಾಪಿ ಡಿಸ್ಕ್, ಸಿಡಿ ಡ್ರೈವ್ ಹಾಗು ಪೆನ್ ಡ್ರೈವ್ :
ಒಂದು ಸಣ್ಣಗಾತ್ರದ ಡಾಟಾವನ್ನು ಸೇವ್ ಮಾಡಲು ಇಡೀ ಕೋಣೆಯ ಗಾತ್ರದ ಯಂತ್ರವನ್ನು ಬಳಸುತ್ತಿದ್ದ ದಿನಗಳು ಕೆಲವರಿಗೆ ತಿಳಿದಿರಬಹುದು. ಅವೇ ದಿನಗಳು ಬರಬರುತ್ತ ಸಿಡಿ ಡ್ರೈವ್, ಫ್ಲಾಪಿ ಡಿಸ್ಕ್, ಪೆನ್ ಡ್ರೈವ್, ಹಾರ್ಡ್ ಡ್ರೈವ್, ಮೆಮೊರಿ ಕಾರ್ಡ್ ಗಳೆಂಬ ಸೂಕ್ಷ್ಮಾತಿಸೂಕ್ಷ್ಮ ಶೇಖರಣ ವಿಧಾನಗಳನ್ನು ಕಂಡುಕೊಂಡವು. ಅಂದು ಒಂದು ಕೋಣೆಯ ಗಾತ್ರದ ಯಂತ್ರದಲ್ಲಿ ಏನನ್ನು ಶೇಖರಿಸಿ ಇಡಬಹುದಿದ್ದಿತೋ ಇಂದು ಅದೇ ಡಾಟಾವನ್ನು ಕೇವಲ ಕಿರುಬೆರಳ ಉಗುರಿನ ಗಾತ್ರದ ಚಿಪ್ಪಿನಲ್ಲಿ ಉದುಗಿಸಿಡಬಹುದು! ಹೀಗೆಯೇ ಮುಂದುವರೆದರೆ ಮುಂದೇನು ಎಂಬುವವರಿಗೆ ಪ್ರಸ್ತುತ ಸಂಶೋಧನ ವಲಯ ನೀಡಿದ ಉತ್ತರ ಕ್ಲೌಡ್ ಸ್ಟೋರೇಜ್‘. ಹಾಲಿ ಚಾಲ್ತಿಯಲ್ಲಿರುವ ಭಾಗಶಃ ಎಲ್ಲ ಬಗೆಯ ಶೇಖರಣ ವಿಧಾನಗಳು ಇನ್ನು ಮುಂದೆ ವರ್ಚುಯಲ್ ‘ (ಆನ್ಲೈನ್ ಸರ್ವರ್ ಗಳಲ್ಲಿ ಶೇಖರಿಸಿಡುವ ವಿಧಾನ) ಆಗಲಿವೆ. ಅದಾಗಲೇ ಅದೆಷ್ಟೋ ಕಂಪ್ಯೂಟರ್ಗಳಲ್ಲಿ USB ಪೋರ್ಟ್ಗಳೇ ಬರುತ್ತಿಲ್ಲವೆಂದರೆ ಕ್ಲೌಡ್ ಸ್ಟೋರೇಜ್ಗಳ ಮೇಲಿನ ನಂಬಿಕೆ ಅದೆಷ್ಟರ ಮಟ್ಟಿಗೆ ಗಟ್ಟಿಯಿದೆ ಎಂಬುದನ್ನು ಊಹಿಸಬಹುದು. ಒಟ್ಟಿನಲ್ಲಿ ದಶಕಗಳ ಹಿಂದಷ್ಟೇ ಕಂಪ್ಯೂಟರ್ ಒಂದನ್ನು ತನ್ನ ಮನೆಯ ಟೇಬಲ್ಲಿನ ಮೇಲೆ ಕಾಣುವುದೇ ಯಾವುದೊ ಜನ್ಮದ ಪುಣ್ಯವೆಂದು ಭಾವಿಸಿದ್ದ ಮಕ್ಕಳು ಇಂದು ಅದೇ ಕಂಪ್ಯೂಟರನ್ನು ನೋಟ್ ಬುಕ್ಕಿನಂತೆ ಮಡಚಿ (ಸಂಕುಚಿತಗೊಂಡ ಶೇಖರಣ ವಿಧಾನದಿಂದ) ಬ್ಯಾಗಿನೊಳಗೆ ಗಿಡುಗಿಕೊಂಡು ಎಲ್ಲೆಂದರಲ್ಲಿ ಸುತ್ತಬಹುದಿತ್ತು ಎಂಬುದನ್ನು ಅಂದು ತಮ್ಮ ಕನಸಿನಲ್ಲೂ ಊಹಿಸಿರಲು ಸಾಧ್ಯವಿಲ್ಲವೆಂದೆನಿಸುತ್ತದೆ.

ಗಣಕಯ೦ತ್ರ (Calculator) :
ಕ್ಯಾಲ್ಕುಲೇಟರ್ ಎಂದ ಮಾತ್ರಕ್ಕೆ ಬಹುಪಾಲು ಮಂದಿಗೆ ನೆನಪು ಬರುವುದು 0.7734 (HELLO), 4377 (HELL) ಹಾಗು ಇನ್ನು ಕೆಲವು ಅಡಲ್ಟ್ರಿ (ಆಗಿನ ಕಾಲಕ್ಕೆ!) ಅರ್ಥವನ್ನು ಬಿತ್ತುವ ಅಂಕೆಯಿಂದ ಮೂಡುವ ಪದಗಳು. ಎದೆ ಜೇಬಿನ ಒಳಗೆ ಪರೀಕ್ಷೆಗೆ ಕೊಂಡೊಯ್ಯಲು ಮನೆಯವರಿಗೆಲ್ಲ ಕಾಟ ಕೊಟ್ಟು, ಅತ್ತು ಒದ್ದಾಡಿ ಪಡೆದುಕೊಂಡು ಕೊನೆಗೆ ಹೆಚ್ಚಾಗಿ ಅವುಗಳಲ್ಲಿ ಮಾಡುತ್ತಿದ್ದದ್ದು ಇಂತಹ ಸರ್ಕಸ್ಗಳನ್ನೇ! ಇನ್ನು ಕೆಲವರು ಪರೀಕ್ಷೆಯಲ್ಲಿ ಕಾಪಿ-ಗೀಪಿ ಒಡೆಯಲು ಹೇಗಾದರೂ ಸಾಧ್ಯವಿದೆಯೇ ಎಂದು ದಿನವೆಲ್ಲ ಗೋಳಾಡಿ ಆಗಿನ ಕಾಲಕ್ಕೆ ಇವುಗಳ ಮೇಲೆ ಪಿಎಚ್ಡಿ ಗಳನ್ನೂ ಮಾಡಿರುವವರೂ ಉಂಟು. ಒಟ್ಟಿನಲ್ಲಿ ಕ್ಲಿಷ್ಟ ಲೆಕ್ಕಾಚಾರಗಳ ಸ್ಪಷ್ಟ ನಿವಾರಕನಾಗಿ ಜನಸಾಗರದಲ್ಲಿ ಬೆರೆತು ಹೋಗಿದ್ದ ಈ ಕ್ಯಾಲ್ಕುಲೇಟರ್ ಇಂದು ಮೂಲೆಗುಂಪಾಗುತ್ತಿವೆ. ಇವುಗಳ ರಿಪ್ಲೇಸೆಮೆಂಟ್ ಸಹ ಸರ್ವವ್ಯಾಪಿ ಸಂಪನ್ನರಾದ ಮೊಬೈಲ್ ಮಹಾಶಯರುಗಳೇ.  ಹೇಗೆ, ಏನು ಎಂಬುದರ ವಿವರಣೆಯನ್ನೇನು ಹೆಚ್ಚಾಗಿ  ಹೇಳುವ ಅಗತ್ಯವಿಲ್ಲ.

ಲ್ಯಾಂಡ್ ಲೈನ್ ಫೋನುಗಳು:
ಬೋರ್ವೆಲ್ಲಿನ ಕುತ್ತಿಗೆಯನ್ನು ಹಿಡಿದೆಳೆದು, ಶಾವಿಗೆ ಅಂತಹ ವೈರುಗಳನ್ನು ಅದರ ಬುಡದಲ್ಲಿ ರಾಶಿರಾಶಿಯಾಗಿ ಚೆಲ್ಲಿ, ಮಳೆಗಾಲದಲ್ಲಿ ಸತ್ತೂ ಬದುಕಿದಂತೆ ಆಗೊಮ್ಮೆ ಈಗೊಮ್ಮೆ ಜೀವವನ್ನು ಪಡೆದುಕೊಳ್ಳುತ್ತಾ ಇರುತ್ತಿದ್ದ ಇವುಗಳು ಇಷ್ಟು ಬೇಗನೆ ತೆರೆಮರೆಗೆ ಸರಿದವೆಂದರೆ ನಂಬಲಸಾಧ್ಯ. ಕರೆಂಟು ಕಂಬಗಳಂತೆ ಇವುಗಳಿಗೇ ಪ್ರತ್ಯೇಕವಾದ ಕಂಬಗಳನ್ನು ನೆಡಿಸಿ, ಕಾಡು, ಹಳ್ಳ, ತೋಟವನ್ನೆಲ್ಲ ದಾಟಿಕೊಂಡು ಬರುತ್ತಿದ್ದ ಇವುಗಳ ಜಾಲ ಇಂದು ಕೇವಲ ಆಫೀಸ್ ಗಳಿಗೆ ಮಾತ್ರ ಸೀಮಿತವಾಗಿದೆ ಅಷ್ಟೇ. ಅತ್ತ ಕಡೆಯಿಂದ ಸತ್ತು ಬಿದ್ದಿರುವ ಮತ್ತೊಂದು ಫೋನಿಗೆ ಫೋನಾಯಿಸಿದಾಗ ಬರುತ್ತಿದ್ದ ಟೋನ್ ಗಳನ್ನೇ ಇಂಪಾದ ಸಂಗೀತವೇನೋ ಎಂಬುವ ಮಟ್ಟಿಗೆ ಕೇಳುತ್ತಾ ಹಿರಿಯರಲೊಬ್ಬರು ಬೈಯುವವರೆಗೂ ಕಿವಿಯ ಮೇಲೆ ಒತ್ತಿಕೊಂಡ ರಿಸೀವರ್ ಅನ್ನು ಕೆಳಗಿಡದ ಆ ದಿನಗಳನ್ನು ನೆನೆದರೆ ಇಂದು ಹೊಟ್ಟೆ ಬಿರಿಯುವಷ್ಟು ನಗು ಬರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಮತ್ತದೇ ಮೊಬೈಲ್ ಫೋನುಗಳ ಭರಾಟೆಯಲ್ಲಿ ಲ್ಯಾಂಡ್ ಲೈನ್ ಗಳೆಂಬ ಇಪ್ಪತ್ತನೇ ಶತಮಾನದ ಅದ್ಭುತ ಅನ್ವೇಷಣೆಯೊಂದು ಇಂದು ತೆರೆಮರೆಗೆ ಸರಿದಿದೆ.  

ಹೀಗೆ ದಿನ ಕಳೆದಂತೆ ನಾವುಗಳು ಯಾವುದನ್ನು ಅತ್ಯುತ್ತಮವೆಂದು ಭಾವಿಸಿರುತ್ತೇವೆಯೋ ನಾಳೆಯೇ ಅದು ನಮಗೆ ಬೇಡವಾಗಿಬಿಟ್ಟಿರುತ್ತದೆ. ಇದೆ ಸ್ಥಿತ್ಯಂತರದ ಯುಗ. ಸ್ಲೇಟು-ಬಳಪ, ಬ್ಯಾಗು-ಪುಸ್ತಕ, ಭೂಪಟಗಳು, ಡಿವಿಡಿ ಪ್ಲೇಯರ್ಗಳು,  ಟೇಪ್ ರೆಕಾರ್ಡ್ಸ್ಗಳು, ಅಷ್ಟೇ ಅಲ್ಲದೆ ಫ್ಯಾಕ್ಸ್ ಮಷೀನ್ಗಳೂ, ವಾಚುಗಳೂ ಇಂದು ವಿದಾಯದ ವೇಳೆಯಲ್ಲಿವೆ. ಇನ್ನು ಕೊಂಚ ದೂರಾಲೋಚನೆ ಮಾಡಿದರೆ ಮಾನವನ ಮಾತುಗಳು, ಬರೆಯುವ ಲಿಪಿಗಳು, ಹೊರಾಂಗಣ ಆಟೋಟಗಳು ಕೊನೆಕೊನೆಗೆ ಆತನ ಬದಲಿಗೆ ಯಂತ್ರಗಳೇ ಈ ಜಗತ್ತನ್ನು ಅವರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಆಗಿನ ಕಾಲದಲ್ಲಿ ಎಲ್ಲವೂ ಎಲ್ಲರಿಗೂ ಸಿಗುತ್ತಿರಲಿಲ್ಲ. ಆದರಿಂದಲೋ ಏನೋ ಮಾನವ ತನ್ನಲ್ಲಿದ್ದ ಚಿಕ್ಕ ಪುಟ್ಟ ವಸ್ತುಗಳಲ್ಲೇ ಸಂತೋಷಪಡುತ್ತಿದ್ದ. ಸುಖಿಯಾಗಿರುತ್ತಿದ್ದ. ವಾರಕ್ಕೊಮ್ಮೆ ಬರುತ್ತಿದ್ದ ಚಲನಚಿತ್ರ ವೀಕ್ಷಣೆಗೇ ಮಿಕ್ಕಿದ ಆರು ದಿನಗಳು ವಾದ ಸಂವಾದಗಳು ನಡೆಯುತ್ತಿದ್ದವು. ದೂರದ ಊರಿನಿಂದ ಅಪ್ಪನೋ, ಅಕ್ಕನೋ,ತಮ್ಮನ್ನೂ ಬರೆಯುತ್ತಿದ್ದ ಕಾಗದದ ನಿರೀಕ್ಷೆಯ ಸಂತೋಷವೆಲ್ಲಿ? ಒಂದು ನಿಮಿಷವೂ ನಮ್ಮವರು ಆಫ್ ಲೈನ್ಆದರೆ ಪ್ರಾಣಪಕ್ಷಿಯೇ ಹಾರಿಹೋದಂತೆ ಆಡುವ ಇಂದಿನ ಕಾಲದಲ್ಲಿ ಅಂದು ತಿಂಗಳುಗಟ್ಟಲೆ ಯಾವುದೇ ಮೊಬೈಲ್, ಇಂಟರ್ನೆಟ್ ಗಳೆಂಬ ಆಧಾರಗಳಿಲ್ಲದಯೇ ಮನೆಯಿಂದ ಹೊರಗಿರುತ್ತಿದ್ದಾಗ ಇರುತ್ತಿದ್ದ ಧೈರ್ಯವೆಲ್ಲಿ? ಒಟ್ಟಿನಲ್ಲಿ ಪ್ರಸ್ತುತ ಮಾನವನಿಗೆ ಕ್ಷಣಮಾತ್ರದಲ್ಲಿ ಮನಸ್ಸಿಗೆ  ಬೇಕೆನಿಸಿದ್ದು ದೊರೆಯತೊಡಗಿದೆ. ಇರದಿರುವುದನ್ನು ಪಡೆಯುವುದರಲ್ಲೇ ಜೀವನದ ಖುಷಿ ಎಂಬುದು ಅಡಗಿದೆ. ಆದರೆ ಇಂದು ಬೇಕಿರದ್ದನ್ನೂ ಬೇಕಾಗಿರುವುದಕ್ಕಿಂತ ಹೆಚ್ಚಾಗಿಯೇ ಪಡೆದುಕೊಂಡಿರುವ ಮಾನವನ ಮುಂದಿನ ದಿನಗಳು ಗುರಿಯಿರದ ನಡೆಯಂತಾದರೂ ಸುಳ್ಳಾಗದು. ಮೊಬೈಲ್ ಇಂಟರ್ನೆಟ್ಗಳೆಂಬ ಶತಮಾನದ ಅನ್ವೇಷಣೆಗಳು ಮಿಕ್ಕುಳಿದ ಇನ್ನೂ ಅದೆಷ್ಟು ವಸ್ತುಗಳನ್ನು ಬದಲಾಯಿಸುತ್ತವೆಯೋ ಅಥವಾ ಬದಲಾವಣೆಯ ಕಾಲದಲ್ಲಿ ಅವುಗಳೇ ಬದಲಾಗಿ ಬೇರೊಂದು ರೂಪವನ್ನು ಧರಿಸುತ್ತವೆಯೋ ಕಾದು ನೋಡಬೇಕು ಎಂದಿದೆ ಸ್ಥಿತ್ಯಂತರದ ಕಾಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!