Uncategorized

‘ದಶಾವತಾರ’

‘ದಶಾವತಾರ’-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ

ಸಂಪಾದಕರು: ರಾಜು ಹೆಗಡೆ

ಮುದ್ರಣವರ್ಷ: ೨೦೧೮, ಪುಟಗಳು: ೯೪, ಬೆಲೆ: ರೂ. ೮೦-೦೦

ಪ್ರಕಾಶಕರು: ಶರ್ವಿಲ್ ಪಬ್ಲಿಷರ್ಸ್ ನಂ ೨, ಮೆಣಸಿನಕಾಯಿ ಓಣಿ,

ಮಂಗಳವಾರ ಪೇಟೆ, ಧಾರವಾಡ-೫೮೦೦೦೧

ಹೊನ್ನಾವರ ತಾಲೂಕಿನ ಮಾಗೋಡು ರಾಮ ಹೆಗಡೆ(೧೯೩೫-೨೦೧೬)ಯವರ ಆತ್ಮಕಥೆ ‘ದಶಾವತಾರ’. ಈ ಆತ್ಮಕಥನಕ್ಕೆ ‘ದಶಾವತಾರ’ಎಂದು ನಾಮಕರಣ ಮಾಡಿದವರು ಸಂಪಾದಕರಾದ ರಾಜು ಹೆಗಡೆಯವರು ಎನ್ನುವುದು ನನ್ನ ಊಹೆ. ಏಕೆಂದರೆ ಅಡ್ಡಾದಿಡ್ಡಿಯಾಗಿದ್ದ ಹಸ್ತಪ್ರತಿಗೆ ಹಸ್ತಸ್ಪರ್ಶ ನೀಡಿ ಅದರ ರೂಪ ಮತ್ತು ತೇಜಸ್ಸು ಹೆಚ್ಚಿಸಿ ಪ್ರಕಟಣಯೋಗ್ಯ ಮಾಡಿದವರು ರಾಜು ಹೆಗಡೆಯವರು. ರಾಜು ಹೆಗಡೆ ಮಾಗೋಡು ರಾಮ ಹೆಗಡೆಯವರ ಮಗ. ಸ್ವತಃ ಕವಿ, ಕತೆಗಾರ ಮತ್ತು ಪ್ರಬಂಧಕಾರ. ‘ದಶಾವತಾರ’ದ  ಸಂಪಾದನೆಯಲ್ಲಿ ರಾಜು ಹೆಗಡೆ ತೋರಿಸಿದ ಮುತುವರ್ಜಿ ಶ್ಲಾಘನೀಯವಾಗಿದೆ.

ಮಾಗೋಡು ರಾಮ ಹೆಗಡೆಯವರು ಬದುಕಿದ್ದು ‘ಹುಚ್ಚು ಮನಸ್ಸಿನ ಹತ್ತು ಮುಖ’ದಲ್ಲಿ. ಬಾಲ್ಯ ಕಳೆದದ್ದು ಅಸಾಧ್ಯವಾದ ಬಡತನದಲ್ಲಿ. ಚಿಟ್ಟಾಣಿಯ ದೊಡ್ಡಿ ಹೆಗಡೆಯ ಮಾಣಿಯಾಗಿ. ಶಾಲೆಯಲ್ಲಿ ಕಲಿತದ್ದು ಕಡಿಮೆ. ಯಾರುಯಾರದೊ ಮನೆಯಲ್ಲಿ ಕೆಲಸ ಮಾಡುತ್ತ ವೀಳ್ಯದೆಲೆ ಸಾಕುತ್ತ ಕಳೆದ ಬಾಲ್ಯ. ಯೌವನಕ್ಕೆ ಕಾಲಿಡುವ ವರೆಗೂ ಬರಿಗಾಲ ಓಡಾಟದ ಭಾಗ್ಯ. ಜೊತೆಗೆ ಚಿತ್ತಾಣಿಯ ಓರಗೆಯ ರಾಮಚಂದ್ರ ಹೆಗಡೆಯ ಜೊತೆಗೆ ಬಯಲಾಟ ಮತ್ತು ತಾಳಮದ್ದಳೆಗೆ ಹೋಗುವ ಖುಶಿಯಿದ್ದರೂ ಅಪ್ಪ ದೊಡ್ಡಿ ಹೆಗಡೆಯಿಂದ ಸಿಕ್ಕುತ್ತಿದ್ದದ್ದು ಬಾಯಿತುಂಬ ಬೈಗಳ. ತಾಯಿ ತೀರಿಕೊಂಡು ಅಡುಗೆಯ ಕೆಲಸವೂ ಈ ಮಾಣಿಯದೇ. ತನಗೆ ಕುಣಿತ ಸಾಲದೆಂದು ಅಂತಿಮವಾಗಿ ಪ್ರಸಂಗಗಳಲ್ಲಿ ಅರ್ಥಧಾರಿಯಾಗುವದನ್ನು ಒಪ್ಪಿಕೊಂಡರೂ ಗೆಳೆಯ ಚಿಟ್ಟಾಣಿ ರಾಮಚಂದ್ರನ ಸೊಗಸಾದ ಪಾತ್ರ ನೋಡಿ ಸಂತಸಗೊಳ್ಳುತ್ತಿದ್ದ ನಿಷ್ಕಲ್ಮಶ ಮನಸ್ಸಿನ ರಾಮ ಹೆಗಡೆಯ ಹಣೆಬರಹ ಬದಲಾದದ್ದು ಮಾಗೋಡಿನ ಮನೆಯೊಂದಕ್ಕೆ ಮನೆ ಅಳಿಯನಾಗಿ ಹೋದ ನಂತರವೇ. ಹೀಗೆ ಆಸ್ತಿವಂತನಾಗಿ ಚಿಟ್ಟಾಣಿಯ ಮಾಣಿ ಮಾಗೋಡು ರಾಮ ಹೆಗಡೆಯಾಗುತ್ತಾರೆ. ವಧೂಪರೀಕ್ಷೆಯ ದಿನ ಹುಡುಗಿಯನ್ನು ನೋಡಿ ರಾಮ ಹೆಗಡೆಯವರ ಮುಖ ಚಪ್ಪೆಯಾಗುತ್ತದೆ. ಬದುಕಿನುದ್ದಕ್ಕೂ ಅವರು ಆ ಮುಖ ಹೊತ್ತೇ ದಾಂಪತ್ಯದ ರಥ ಓಡಿಸುತ್ತಾರೆ. ಆದರೂ ಅವರ ಬದುಕಿನಲ್ಲಿ ಕಾಮನಬಿಲ್ಲಿನ ಬಣ್ಣವೇನೂ ಕಡಿಮೆಯಾಗಿರುವುದಿಲ್ಲ.

ರಾಮ ಹೆಗಡೆಯವರಿಗೆ ತೋಟವನ್ನು ಅಭಿವೃದ್ಧಿ ಮಾಡಬೇಕು, ತಾನೂ ನಾಲ್ಕು ಕಾಸು ಕಾಣಬೇಕು ಎನ್ನುವ ಆಶೆ. ಅದಕ್ಕಾಗಿ ಮಾಗೋಡಿನ ತೋಟವನ್ನು ವಿಸ್ತರಿಸುತ್ತಾರೆ, ಅಭಿವೃದ್ಧಿ ಮಾಡುತ್ತಾರೆ; ಸೊಸೈಟಿಗಳಲ್ಲಿ, ಪರಿಚಿತರಲ್ಲಿ ಸಾಲ ಮಾಡುತ್ತಾರೆ. ಊರಿನ ರಾಜಕೀಯಗಳು ಬೇಡವೆಂದರೂ ಗಂಟು ಬೀಳುತ್ತವೆ. ಗ್ರಾಮ ಪಂಚಾಯತ, ಹೈಸ್ಕೂಲು, ತಾಲೂಕಾ ಪಂಚಾಯತ, ಕಾಂಗ್ರೆಸ್, ಜನತಾ ಪಕ್ಷ, ವಿಧಾನ ಸಭೆಗೆ ನಡೆಯುವ ಚುನಾವಣೆಗಳು ಹೀಗೆ ಎಲ್ಲದರಲ್ಲೂ ಅವರು ಇರಬೇಕು; ಏಕೆಂದರೆ ರಾಮ ಹೆಗಡೆ ದೊಡ್ಡ ಮಾತುಗಾರ. ಆದರೆ  ತಾಲೂಕಾ ಪಂಚಾಯತಕ್ಕಿಂತ ಮೇಲಿನ ರಾಜಕೀಯ ಹುದ್ದೆಯಿಂದ ಸದಾ ವಂಚಿತರಾಗಿಯೇ ಉಳಿಯುತ್ತಾರೆ. ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಜೆ.ಎಚ್.ಪಟೇಲ್ ಎಲ್ಲರಿಗೂ ಚುನಾವಣೆ ಬಂತೆಂದರೆ ರಾಮ ಹೆಗಡೆ ಬೇಕು ಎನ್ನುವಷ್ಟು ಅವರ ಖದರು. ಆದರೆ ಎಂದು ಕೂಡ ರಾಮ ಹೆಗಡೆಯವರು ಈ ನಾಯಕರ ಬಾಗಿಲು ಕಾಯ್ದು ತನ್ನ ಯಾವ ವೈಯಕ್ತಿಕ ಕೆಲಸವನ್ನೂ ಮಾಡಿಕೊಳ್ಳುವುದಿಲ್ಲ.

ಮಾಗೋಡು ರಾಮ ಹೆಗಡೆಯವರ ದೌರ್ಬಲ್ಯವೆಂದರೆ ‘ಹೆಗಡೇರೆ’ ಎಂದು ಕೈಮುಗಿದು ಬಂದವರಿಗೆ ಕಿಂಚಿತ್ತೂ ಸ್ವಾರ್ಥವಿಲ್ಲದೆ ನೆರವಾಗುವುದು. ಭೂಸುಧಾರಣಾ ಕಾನೂನು ಬಂದಾಗ ಆಸುಪಾಸಿನ ನೂರಾರು ಗೇಣಿದಾರ ರೈತರು ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೆಗಡೆಯವರು ಲಾಂಚು ಹತ್ತಿ ಹೊನ್ನಾವರಕ್ಕೆ ಹೊರಟರೆಂದರೆ ಅವರ ಹಿಂದೆ ಒಂದು ಗುಂಪೇ ಇರುತ್ತಿತ್ತು. ಅವರ ಮತ್ತೊಂದು ಅವತಾರ, ಎರಡು ದೋಣಿ ಖರೀದಿಸಿ ಅವುಗಳಲ್ಲಿ ಎಂಜಿನ್ ಇಟ್ಟುಕೊಂಡು ರಾತ್ರಿ ರೈತರ ಜಮೀನಿಗೆ ನೀರುಣಿಸುವ ಉದ್ಯೋಗ ಮಾಡಿದ್ದು, ‘ದಶಾವತಾರ’ದಲ್ಲಿ ಸ್ವಲ್ಪ ಹೆಚ್ಚು ವಿಸ್ತಾರವಾದ ದಾಖಲೆ ಸಿಗುವುದು ರಾಮ ಹೆಗಡೆಯವರ ಆಟದ ಮೇಳದ ವ್ಯವಹಾರದ ಬಗ್ಗೆ. ಅವರು ಉದಾರಿ, ಸಾಹಸಿ, ಕನಸುಗಾರ, ಕಲಾಪ್ರೇಮಿ, ಮಿತ್ರವತ್ಸಲ, ಬರಿಗೈಛಲಗಾರ. ಕೋರ್ಟು-ಕಚೇರಿಗಳಿಗೆ ಅಲೆದ ಅನುಭವಸ್ಥ. ಅವರ ಬಲು ದೊಡ್ಡ ಸಾಹಸ ಆಟದ ಮೇಳದ್ದು. ಮೊದಲು ಮೇಳದ ಮೆನೆಜರ್ ಆದರು, ಆಮೇಲೆ ಮೇಳವನ್ನು ತಾನೇ ವಹಿಸಿಕೊಂಡು ಯಜಮಾನರೂ ಆದರು. ಆದರೆ ಮೇಳದ ಮೇಲೆ ಸರಿಯಾಗಿ ನಿಗಾ ಇಡದೆ ದೊಡ್ಡ ಸಾಲಗಾರರಾದರು. ಹೊಂದಾಣಿಕೆಯಿಲ್ಲದ ಕಲಾವಿದರು, ಸಮಯಸಾಧಕ ವ್ಯವಸ್ಥಾಪಕರು, ಬುದ್ಧಿ ಹೇಳದ ಗೆಳೆಯರು,  ಇವೆಲ್ಲ ಸೇರಿ ರಾಮ ಹೆಗಡೆ ಆರ್ಥಿಕವಾಗಿ ದಿವಾಳಿಯಾದದ್ದು ಈ ಆತ್ಮಕಥನದಲ್ಲಿ ವಿಸ್ತಾರವಾದ ಭಾಗ. ಆದರೆ ರಾಮ ಹೆಗಡೆಯವರು ಸೋತು ಮಾಗೋಡು ಸೇರಿದ್ದು ಮೇಳದಿಂದಲ್ಲ. ಹೊನ್ನಾವರದಲ್ಲಿ ಹೋಟೆಲ್ ಉದ್ಯಮಕ್ಕೆ ತೊಡಗಿ ಅಲ್ಲಿಯೂ ಕೈಸುಟ್ಟುಕೊಂಡ ನಂತರವಷ್ಟೆ ಅವರು ಮರಳಿದ್ದು, ಮಾಗೋಡಿಗೆ.

ರಾಮ ಹೆಗಡೆಯವರು ತಾನು ನಿಸ್ವಾರ್ಥದಿಂದ ಮಾಡಿದ ಜನಸೇವೆಯನ್ನು ಆ ಆ ಸಂದರ್ಭಗಳಲ್ಲಿ ಚರ್ಚಿಸುತ್ತಾರೆ. ತನ್ನ ವೈಫಲ್ಯ-ದೌರ್ಬಲ್ಯಗಳನ್ನೂ ದಾಖಲಿಸುತ್ತ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ. ಅವರಿಗೆ ತಾನು ಬದುಕಿನಲ್ಲಿ ಸೋತ ಬಗ್ಗೆ ದುಃಖವಿಲ್ಲ, ಪಶ್ಚಾತ್ತಾಪವೂ ಇಲ್ಲ. ಅವರನ್ನು ಕಾಡುವ ದೊಡ್ಡ ಘಟನೆಯೆಂದರೆ ಅವರ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ನಡುವಿನ ಗೆಳೆತನದಲ್ಲಿ ಬಂದ ಬಿರುಕು. ಚಿಟ್ಟಾಣಿಯವರನ್ನು ಜೊತೆಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಯವರನ್ನು ಭೇಟಿಮಾಡಿ ಚಿಟ್ಟಾಣಿಯವರಿಗೆ ರಾಜ್ಯಪ್ರಶಸ್ತಿ ಕೊಡಿಸುವುದೇನೂ ಅವರಿಗೆ ಅಸಾಧ್ಯವಾಗುವುದಿಲ್ಲ. ಆದರೆ ಚಿಟ್ಟಾಣಿಯವರಿಗೆ ಜಿಲ್ಲೆಯಾದ್ಯಂತ ಆ ನಿಮಿತ್ತ ನಡೆದ ಸನ್ಮಾನ ಸಮಾರಂಭಗಳಿಗೆ ಇವರು ಕರೆಯಿಲ್ಲದ ನೋಡುಗನಾಗಿ ಹಿಂದಿನ ಬೆಂಚಿನಲ್ಲಿ ಕುಳಿತು ಬರಬೇಕಾಗುತ್ತದೆ. ಸಂಘಟಕರ ಅನಾದರದ ಪ್ರಶ್ನೆಗಿಂತ ಇವರನ್ನು ಹೆಚ್ಚು ಕಾಡಿದ್ದು ಚಿಟ್ಟಾಣಿಯವರ ಅನಾದರ. ಇದನ್ನು ಹತ್ತಾರು ಬಾರಿ ಆತ್ಮಕಥೆಯಲ್ಲಿ ಪ್ರಸ್ತಾಪಿಸುವ ರಾಮ ಹೆಗಡೆಯವರು ಅದನ್ನೆಲ್ಲಿಯೂ ತಳಮಟ್ಟ ಶೋಧಿಸುವುದಿಲ್ಲ.  ರಾಮ ಹೆಗಡೆಯವರ ದಶಾವತಾರದಲ್ಲಿ ಅಸಮಾಧಾನ ಹುಟ್ಟಿಸುವ ವಿಷಯವೆಂದರೆ ಇವರು ರಾಮ ಎನ್ನುವ ಹೆಸರು ಹೊತ್ತಿದ್ದರೂ ರಾಮಾವತಾರಕ್ಕೆ ಬರುವುದೇ ಇಲ್ಲ. ಇವರಿಗೆ ನಿತ್ಯ ಹಗಲು ಮತ್ತು ರಾತ್ರಿ ‘ಪಾನಕ ಪೂಜೆ’ ಆಗಲೇಬೇಕು. ಮೇಳ ತೆಗೆದುಕೊಂಡು ಎಲ್ಲಿಗೇ ಹೋಗಲಿ ಇವರಿಗೆ ರಾತ್ರಿ ‘ಮಲಗುವ ವ್ಯವಸ್ಥೆ’ಯೊಂದು ಅನಿವಾರ್ಯ. ಕುಟುಂಬ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟದಿರಲು ಇವರಿಗೆ ಈ ವ್ಯವಸ್ಥೆಯೂ ಕಾರಣವಾಗಿರಬಹುದು. ಡಾ ಎಂ.ಜಿ.ಹೆಗಡೆಯವರು ಮುನ್ನುಡಿಯಲ್ಲಿ ಗುರುತಿಸುವ ಹಾಗೆ “ಅವರ ನಿರೂಪಣೆಯಲ್ಲಿ ದಾಂಪತ್ಯ ಎಂಬುದು ಅವರು ಏರ್ಪಡಿಸಿಕೊಂಡಿದ್ದ ಹಲವು ಮಲಗುವ ವ್ಯವಸ್ಥೆಗಳಲ್ಲಿ ಒಂದು ಎಂಬಂತಿದೆ”. ಆದರೆ “ದಶಾವತಾರವನ್ನು ಸ್ವಾಗತಿಸದೆ ಗತ್ಯಂತರವಿಲ್ಲ” ಎಂದು ಡಾ ಎಂ.ಜಿ.ಹೆಗಡೆಯವರು ಮುನ್ನುಡಿಯನ್ನು ಮುಗಿಸುತ್ತ ಹೇಳಿದ ಮಾತು ನನಗೆ ಈಗಲೂ ಒಗಟಾಗಿಯೇ ಉಳಿದುಕೊಂಡಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!