ಅಂಕಣ ಸ್ಪ್ಯಾನಿಷ್ ಗಾದೆಗಳು

ಜಗತ್ತು ಪೂಜಿಸುವುದು ಶಕ್ತಿಯನ್ನು ವ್ಯಕ್ತಿಯನ್ನಲ್ಲ !

ನಾವು ಬಲಿಷ್ಟರಾಗಿದ್ದರೆ, ಹಣವಂತರಾಗಿದ್ದರೆ, ಅಧಿಕಾರವಿದ್ದರೆ ನಮಗೆ ಸಿಗುವ ಮರ್ಯಾದೆ ನಾವು ಅಬಲರಾಗಿದ್ದರೆ ಸಿಗುವುದಿಲ್ಲ. ಜಯಶಾಲಿ ವ್ಯಕ್ತಿಯ ಹಿಂದೆ ಒಂದು ದಂಡೇ ಇರುತ್ತದೆ. ಆತನಿಗೆ ಸ್ನೇಹಿತರ ಸಂಖ್ಯೆಯೂ ಹೆಚ್ಚಿರುತ್ತದೆ. ಅಷ್ಟೇ ಏಕೆ ಆತನ ಜೀವನದಲ್ಲಿ ಯಾವುದೊ ಒಂದು ದಿನ ಭೇಟಿ ಮಾಡಿದವರು ಕೂಡ ಆತ ತಮಗೆ ಚೆನ್ನಾಗಿ ಗೊತ್ತು ಎನ್ನುವಂತೆ ಇತರರ ಮುಂದೆ ಮಾತನಾಡುತ್ತಾರೆ. ಹೀಗೆ ಯಶಸ್ವೀ ವ್ಯಕ್ತಿಯ ಪರಿಚಯ ನನಗೂ ಉಂಟು ಎಂದು ಹೇಳಿಕೊಳ್ಳುವುದು ತಮ್ಮ ಘನತೆ ಹೆಚ್ಚಿಸುತ್ತದೆ ಎನ್ನುವ ಜನರ ಸಂಖ್ಯೆ ನಮ್ಮ ಸಮಾಜದಲ್ಲಿ ಮಾತ್ರವಲ್ಲ. ಇದು ದೇಶ, ಭಾಷೆ, ಗಡಿಗಳ ಮೀರಿ ಜಗತ್ತಿನ ಎಲ್ಲಾ ದೇಶಗಳಲ್ಲಿ ಹೇರಳವಾಗಿದೆ. ಇಂತ ಯಶಸ್ವೀ ವ್ಯಕ್ತಿ ಸೋತರೆ ಆಳಿಗೊಂದು ಕಲ್ಲು ಆತನ ಮೇಲೆ ಎಸೆದು ಮತ್ತೊಬ್ಬ ಯಶಸ್ವಿಯ ಹಿಂದೆ ಹೋಗುತ್ತಾರೆ. ಇದು ಜಗದ ನಿಯಮ ಅಥವಾ ಮೆಜಾರಿಟಿ ಜನ ಮಾಡಿರುವ ವಿಧಾನ.

ಸ್ಪಾನಿಷ್ ಗಾದೆಗಳು ಕೆಲವೊಮ್ಮೆ  ಹೇಳುವುದನ್ನು ನೇರವಾಗಿ ಹೇಳುತ್ತದೆ. ಆದರೆ ಕೆಲವೊಮ್ಮೆ ಹೇಳಬೇಕೆಂದಿರುವ ವಿಷಯ ಗೌಪ್ಯವಾಗಿರುತ್ತದೆ. ಅಥವಾ ಆ ಮಟ್ಟಿನ ನಿಗೂಢತೆ ಅದರಲ್ಲಿ ಕಾಣಸಿಗುತ್ತದೆ. ಇಂದಿನ ಗಾದೆ ಅದಕ್ಕೊಂದು ಉತ್ತಮ ಉದಾಹರಣೆ  ‘Comida hecha, compania deshecha’ ( ಕೊಮಿದ ಹೆಚ್ಚ ಕಂಪನಿಯಾ ದಿಸೆಚ್ಛಾ )  ಪದಕೋಶದ ಅರ್ಥದ ಪ್ರಕಾರ ‘ಅಡುಗೆ ಆದ ಮೇಲೆ ನೆಂಟರು (ಅಥವಾ  ಮನೆಗೆ ಬಂದವರು) ಹೊರಟರು ‘ ಎನ್ನುವ ಅರ್ಥ ಕೊಡುತ್ತದೆ. ಅಡುಗೆ ಆದ ಮೇಲೆ ಮನೆಗೆ ಬಂದವರು ಏಕೆ ಹೋಗುತ್ತಾರೆ? ಅಚ್ಚುಕಟ್ಟಾಗಿ ಊಟ ಮಾಡದೆ? ಅದಕ್ಕೆ ಹೇಳಿದ್ದು ಇಂದಿನ ಗಾದೆ ನೇರವಾಗಿಲ್ಲ ಎಂದು. ಇದರ ಒಳಾರ್ಥ ‘ತಮ್ಮ ಕೆಲಸವಾಗುವವರೆಗೆ ಇರುತ್ತಾರೆ ನಂತರ ಅವರು ದೂರ ಹೋಗುತ್ತಾರೆ ‘ ಎನ್ನುವುದಾಗಿದೆ.  ಸ್ಪಾನಿಷ್ ಹಿರಿಯರು ತಮ್ಮ ನಂತರದ ತಲೆಮಾರಿಗೆ ಇಂತಹ ಕಾರ್ಯ ಸಾಧನೆಗಾಗಿ ಸಂಗ ಬಯಸುವ ವ್ಯಕ್ತಿಗಳಿಂದ ದೂರವಿರಲು ಸೂಕ್ಷ್ಮವಾಗಿ ಹೇಳಿದ ತಿಳುವಳಿಕೆಯ ಮಾತು ಇದಾಗಿದೆ.

ನಮ್ಮಲ್ಲಿ ಕೂಡ ಇದಕ್ಕೆ ಸರಿಸಮನಾದ ಅಥವಾ ಅದಕ್ಕೂ ಹೆಚ್ಚಿನ ಅರ್ಥವನ್ನು ನೀಡುವ ಗಾದೆಯಿದೆ  ‘ರಾಗಿ ಕಲ್ಲು ಬೀಸುತ್ತಿದ್ದರೆ ರಾಜ್ಯವೆಲ್ಲ ಬಳಗ’ ಎನ್ನುವುದು ನಮ್ಮಲ್ಲಿ ಎಲ್ಲಿಯ ತನಕ ಹಣ ಅಧಿಕಾರ ಇರುತ್ತದೋ ಅಲ್ಲಿಯ ತನಕ ನಮ್ಮ ಹಿಂದೆ ಹಿಂಬಾಲಕರ ದಂಡು ಇರುತ್ತದೆ. ಗೆಲುವು ಇಲ್ಲದಾದ ಮರುಕ್ಷಣ ಅವರು ‘ ಗೆದ್ದೆತ್ತಿನ ಬಾಲ ‘ ಹಿಡಿದು ಹೊರಟುಬಿಡುತ್ತಾರೆ ಎನ್ನುವುದನ್ನು ಹೇಳುತ್ತದೆ .

ಇಂಗ್ಲಿಷ್ ಭಾಷಿಕರಲ್ಲಿ  ‘ When good cheer is lacking, our friends will be packing’  ಎನ್ನುತ್ತಾರೆ . ಅರ್ಥ ಮಾತ್ರ ಸೇಮ್ ! ನಮ್ಮಲ್ಲಿ ಶಕ್ತಿ ಕುಂದಿದ ಮರುಗಳಿಗೆ ನಮ್ಮ ಬಂಧು ಮಿತ್ರರು ನಮ್ಮಿಂದ ದೂರ ಹೋಗುತ್ತಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ .

ಇದನ್ನೇ ಪೂಜ್ಯ ಜಗದಾತ್ಮಾನಂದ ರವರು ‘ ಜಗತ್ತು ಪೂಜಿಸುವುದು ಶಕ್ತಿಯನ್ನು, ವ್ಯಕ್ತಿಯನಲ್ಲ ‘ ಎಂದದ್ದು . ನಮಗೆ ಇಂದು ಸಿಗುತ್ತಿರುವ ಗೌರವ , ಮನ್ನಣೆ ಕೇವಲ ನಮ್ಮಲ್ಲಿನ ಶಕ್ತಿಗಾಗಿ ಅದಿಲ್ಲದ ಮರುಕ್ಷಣ ನಮ್ಮ ಕೇಳುವರಾರು ?

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :

Comida: ಅಡುಗೆ ಅಥವಾ ತಿನ್ನುವ ಪದಾರ್ಥ  ಎನ್ನುವ ಅರ್ಥ ಕೊಡುತ್ತದೆ. ಕೊಮಿದ ಎನ್ನುವುದು ಉಚ್ಚಾರಣೆ .

hecha: ಸಿದ್ದಪಡಿಸಿದ, ಮಾಡಿಟ್ಟ, ಮಾಡಿದ ಎನ್ನುವ ಅರ್ಥ ಕೊಡುತ್ತದೆ . ಹೆಚ್ಚ ಎನ್ನುವುದು ಉಚ್ಚಾರಣೆ .

compania: ಜನರ ಗುಂಪು, ಒಬ್ಬರಿಗಿಂತ ಹೆಚ್ಚು ಜನರ ಸಂಗದಲ್ಲಿ ಇರುವುದು ಎನ್ನುವ ಅರ್ಥ ಕೊಡುತ್ತದೆ . ಕಂಪನಿಯಾ ಎನ್ನುವುದು ಉಚ್ಚಾರಣೆ .

deshecha: ರದ್ದುಗೊಳಿಸು, ಬೇರ್ಪಡು, ಮಾಡದೆ ಹೋಗುವುದು ಎನ್ನುವ ಅರ್ಥ ಕೊಡುತ್ತದೆ. ದಿಸೆಚ್ಛಾ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!