Featured ಅಂಕಣ

ವ್ಯಾಪ್ತಿಗಳಿಲ್ಲದ ವಿಶ್ವವಿಜಯಿ-ಅಟಲ್ ಬಿಹಾರಿ ವಾಜಪೇಯಿ.

ಭಾರತದ ಕಾಲಚಕ್ರ ಉರುಳುತ್ತಿತ್ತು. ಪ್ರತೀ ದಿನದ ಸೂರ್ಯೋದಯದೊಂದಿಗೆ ಜನ ಹೊಸದು ಘಟಿಸಲೆಂಬಂತೆ ಆಶಿಸುತ್ತಿದ್ದರು. ಸನ್ನಿವೇಶಗಳು ಎಂದಿನಂತೆ ಇರುವುದಿಲ್ಲ. ಹೊಸ ತಲೆಮಾರಿನ ಹುಡುಗರೀಗ ಕನಸುಗಳನ್ನು ಹೊರುವುದಕ್ಕೆ ಸನ್ನದ್ದರಾಗಿದ್ದಂತೆ ತೋರಿತು. ಅದು ಪ್ರವಹಿಸುವುದನ್ನೇ ಬದುಕಿನ ಧರ್ಮ ಮಾಡಿಕೊಂಡು ಮಂದಗಮನೆಯಾಗಿ ಚಲಿಸುವ ಕಾಳಿಂದೀ ನದಿ, ತಾರುಣ್ಯ ತುಂಬಿದ ತೋಳುಗಳನ್ನು ಯಮುನೆಯ ತೆಕ್ಕೆಯಲ್ಲಿ ತೇಲಿಸಿ ಮುಳುಗೇಳುತ್ತಿರುವ ಬಾಲಕರು, ಬೆಳಗಾದರೆ ತನ್ನದೇ ಲೋಕದತ್ತ ಹೊರಳಿಕೊಳ್ಳುವ ಬಟೇಶ್ವರ . ವರುಷದ ಹರಕೆಯೋ ಎಂಬಂತೆ ಗಿಜಿಗುಡುತ್ತ ಗಿರಾಕಿಗಳನ್ನು ಸೆಳೆಯುವ ಬಟೇಶ್ವರದ ಸುಪ್ರಸಿದ್ದ ಜಾನುವಾರು ಜಾತ್ರೆ, ಹೊಸತುಗಳ ಹೇಷಾರವಕ್ಕೆ ಮೆರುಗನ್ನೀಯಲು ಕಾಬೂಲಿನಿಂದ ದೌಡಾಯಿಸಿ ಬರುವ ಕೌತುಕದ ಕುದುರೆಗಳು, ಅಸ್ಸಾಂ ಬರ್ಮಾಗಳ ಪ್ರತಿನಿಧಿಗಳೆಂಬಂತೆ ಬಂದು ಸೊಂಡಿಲು ಬೀಸುವ ಮದಗಜಗಳು, ಪೇಶಾವರದಂತಹ ದೂರದ ಊರಿನಿಂದ ಕತ್ತು ತೂಗಿಸುತ್ತಾ ಹಣೆಬರಹದ ಹಾದಿ ಹುಡುಕುವ ಒಂಟೆಗಳ ಸಮೂಹ, ಇವೆಲ್ಲದರ ನಡುವೆ ದೇಶ ಕಾಲಗಳ ಅಷ್ಟೂ ಕಸರತ್ತು ತಿಳಿಯದ ಹುಡುಗನ ಮುಗ್ದತೆ, ಹುಡುಗನ ಹುರುಪುಗಳನ್ನು ಹರುಷವಾಗಿಸಿಕೊಂಡ ಅಜ್ಜ, ಹೆಗಲ ಮೇಲೆ ಹೊತ್ತು ಮಗು ಕಾಲಾಡಿಸುವಾಗ ಪುಳಕಗೊಳ್ಳುವ ಹಿರಿತನ, ಹೀಗೆ ಬಾಲ್ಯಕಾಲದ ಭರಪೂರ ಅನುಭವಗಳ ಎರಕದಲ್ಲಿ ಯಮುನೆಯ ಪಾತ್ರದಲ್ಲಿ ಬರುವ ಪ್ರಕೃತಿಗಳನ್ನು ಕಣ್ತುಂಬಿಕೊಳ್ಳುತ್ತಾ ದೇಶದ ನೇತಾರನೊಬ್ಬ ದಿನಗಳೆದಂತೆ ಹುಣ್ಣಿಮೆಗೆ ತಯಾರಾಗುವ ಚಂದ್ರನಂತೆ ಏಗುತ್ತಿದ್ದ. ಇಂತಹ ಬಾಲ್ಯ ಎಲ್ಲರಿಗೂ ದಕ್ಕುವುದಿಲ್ಲ. ಬಾಲ್ಯದ ಬಡಿದಾಟಗಳು ಬದುಕಿನ ಬೆಳಗುಗಳು ಎನ್ನುತ್ತಾರೆ. ಆದರೆ  ಬೆಳಗುಗಳನ್ನೇ ಬೆರಗು ಮಾಡಿಕೊಂಡವರು ವಿರಳ. ಬೆರಗು ಘಟಿಸಿದ್ದೇ ಆದರೆ ವ್ಯಕ್ತಿ ಏರುವ ಎತ್ತರ ಕೈಗೆ ನಿಲುಕದ್ದು ಕನಸಿಗೆ ಕಾಣಿಸದ್ದು. ಅಂತಹ ಸೋಜಿಗಗಳನ್ನು ಸವಾಲುಗಳ ಶರಧಿಯಲ್ಲಿ ಸತ್ಯ ಮಾಡಿಕೊಂಡ ಗಟ್ಟಿ ಗಾರುಡಿಗ ಯಮುನೆಯ ತಟದಲ್ಲಿ ಬದುಕು ರೂಪಿಸುತ್ತಿದ್ದ. ಆ ಬಾಲಕ ಅಟಲ್ ಬಿಹಾರಿ ವಾಜಪೇಯಿ ಆಗಿದ್ದರು.

ರಾಜಕಾರಣದ ನಿತ್ಯ ನಿದರ್ಶನಗಳಿಗೆ ಕಣ್ಣು ದಿಟ್ಟಿಸುತ್ತ ದೂರದರ್ಶನದ ಮುಂದೆ ಮಂಕಾಗಿ ಕೂರುವ ಹೊತ್ತಿಗೆ ಜನಪ್ರತಿನಿಧಿಗಳು ನಡೆಸುವ ನಾನಾ ಘಾತಕಗಳು ಕಣ್ಣ ಮುಂದೆಯೇ ಹಾಯುತ್ತವೆ. ನಮ್ಮ ಪ್ರತೀ ಅನುಭವದ ಮದ್ಯೆ ಕಾಡುವ, ನಮಗೆಲ್ಲ ನೋಡ ನೋಡುತ್ತಿದ್ದಂತೆ ಮತ್ತೆ ಸಿಗದೇ ಹೋದರಲ್ಲ ಎಂದು ಮನಸ್ಸು ಖಾಲಿಯಾಗಿ ಹಲುಬುವ ಮೇರು ವ್ಯಕ್ತಿತ್ವ ಈ ದೇಶದಲ್ಲಿದ್ದರೆ ಅದು ಅಟಲ್ ಬಿಹಾರಿ ವಾಜಪೇಯಿಯಲ್ಲದೆ ಇನ್ನಾರು? ನಿನ್ನೆ ಮೊನ್ನೆ ವಿಧಾನಸಭೆಗೆ ಆಯ್ಕೆಗೊಂಡ ಹುಡುಗರು ದೇಶದ ಗೌರವಾನ್ವಿತ ಪ್ರಧಾನಿಯನ್ನೇ ಮುದುಕ ಎಂದು ಜರೆದರು. ಹಿರಿತನ, ಅನುಭವಗಳನ್ನು ಯುವಕರು ಎಡಗಾಲಲ್ಲಿ ಒದ್ದಾಗಲೆಲ್ಲ ಮುಂದಿನ ದಿನಗಳ ಕಸರತ್ತುಗಳು ಯಾವ ಮಟ್ಟ ತಲುಪುವವೋ ಎನ್ನುವ ದಿಗಿಲಾಗುತ್ತದೆ. ಕ್ರಿಮಿನಲ್ ಹಿನ್ನಲೆಯುಳ್ಳ ಜನ ಆರಿಸಿ ಬಂದಾಗ ವ್ಯವಸ್ಥೆಯೇ ಹೀಗಾ ಎನ್ನುವ ವ್ಯಥೆಯೂ ಮೂಡುತ್ತದೆ. ಇಂತಹ ವ್ಯವಸ್ಥೆಗಳ ಮದ್ಯೆ ಸರಸ್ವತಿಯನ್ನೇ ನಾಲಗೆಯಲ್ಲಿ ಕುಳ್ಳಿರಿಸಿ ಶರಧಿಯಂತೆ ಸೇರಿದ ಜನಗಳನ್ನು ಭಾವದ ಬಂಡಿಗಳಲ್ಲಿ ಓಲಾಡಿಸುತ್ತಿದ್ದ ಪರಿಪಕ್ವತೆಯ ಪರಂಪರೆ  ಅಟಲ್‍ರದ್ದು. ಜನಸ್ತೋಮದ ಮುಂದೆ ಕವಿತೆಗಳ ಮೂಲಕವೇ ಕೌತುಕಗಳನ್ನು ಒಂದಾದ ಮೇಲೊಂದರಂತೆ ಕಿವಿಯಲ್ಲಿ ಉಸುರಿ ಬೆರಗುಗೊಳಿಸುತ್ತಲೇ ಇದ್ದವರವರು. ಬರಿಯ ಮಾತೇ ಏಕೆ ಮಾತಿನ ಮದ್ಯ ಕೊಡುವ ವಿರಾಮಗಳಲ್ಲಿ ನೀರವ ಮೌನ ಆವರಿಸುವಂತೆ ಜಾದೂ ಮಾಡುತ್ತಿದ್ದ ಮೋಡಿಗಾರ ವಾಜಪೇಯಿ. ಆ ಹಿರಿಜೀವ ಬರೆದ ಸಾಲುಗಳು ಎಷ್ಟು ಸತ್ವಭರಿತವೋ ಅಷ್ಟೇ ಮಾರ್ಮಿಕವೂ ಹೌದು. ಇವತ್ತಿನ ರಾಜಕೀಯ ಭಾಷಣ, ವಿರೋಧಿಸುವವರ ಪದಗಳನ್ನು ಕಂಡರೆ ರಾಜಕೀಯದ ಬಗೆಗೆ ಭ್ರಮನಿರಸನವೇ ಮೈಯನ್ನಾವರಿಸುತ್ತದೆ.

ಓ ನನ್ನ ಪ್ರಭುವೇ

ಅನ್ಯಾಯದ ಗಂಟಲು ಕಟ್ಟಿಸಲಾಗದಂತಹ

ಎತ್ತರವ ನನಗೆಂದಿಗೂ ನೀಡದಿರು

ಅಂತಹ ಎತ್ತರದ ಕಠೋರತೆಯನ್ನೂ ಅನುಗ್ರಹಿಸದಿರು.

ಎತ್ತರದ ಶಿಖರದ ಮೇಲೆ ಮರ ಬೆಳೆಯುವುದಿಲ್ಲ

ಗಿಡ ಚಿಗುರುವುದಿಲ್ಲ,

ಹುಲ್ಲು ಹುಟ್ಟುವುದಿಲ್ಲ ll

ನಮ್ಮ ದೇಶದ ಸುಕೃತ ಫಲವೋ  ಇಲ್ಲ ಈ ಕವಿಹೃದಯದ ಸಾಮ್ರಾಟನ ನೀವೇದನೆಯ ಘನ ಗಹನತೆಯೋ ಏನೋ; ವಾಜಪೇಯಿಯಂತಹ ಭಾವಜೀವಿ ವ್ಯಕ್ತಿತ್ವಕ್ಕೆ ಮತ್ತೆ ಪರ್ಯಾಯಗಳೇ ಹುಟ್ಟಲಿಲ್ಲ. ಶಿಖರದ ಎತ್ತರಕ್ಕೆ ಏರಲು ಬಯಸದ ಈ ವ್ಯಕ್ತಿತ್ವ ಅನೇಕರ ಪಾಲಿಗೆ ಭವ್ಯ ಶಿಖರವೇ ಆಗುಳಿಯಿತು. ಇಂದು ಆ ಶಿಖರದ ನೆರಳಲ್ಲಿ ಅದೆಷ್ಟು ಸುಮಗಳು ನಿತ್ಯ ಅರಳುತ್ತಿವೆಯೋ ಆ ತಾಯಿ ಭಾರತಿಯೇ ಬಲ್ಲಳು. ಭಾರತದಾದ್ಯಂತ ಕಮಲ ಸಮೂಹ ತಲೆಯೆತ್ತಿ ನಿಲ್ಲುತ್ತಿದೆ ಎಂದರೆ ಅದರ ಹಿಂದೆ ಈಮಹಾನುಭಾವನ ಬೆವರಿನ ಹನಿಯ ಅರ್ಪಣೆಗಳಿವೆ.

1924ರಲ್ಲಿ ಗ್ವಾಲಿಯರ್‍ನಲ್ಲಿ ಜನಿಸಿದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಕುಟುಂಬವೇ ಕವಿತ್ವದ ಅನೂಚಾನ ಪರಂಪರೆಯನ್ನು ಧಾರೆಯೆರೆದಿತ್ತು. ತಾತ ಸಂಸ್ಕೃತದ ಬಹುದೊಡ್ಡ ವಿಧ್ವಾಂಸರಾಗಿದ್ದರು. ಭಾಗವತದ ಕತೆಗಳನ್ನು ಹೇಳುತ್ತ ಊರೂರು ಸುತ್ತುತ್ತಿದ್ದರು. ತಂದೆ ಹಿಂದಿ ಕವಿತೆಗಳ ರಚನೆಕಾರರಾಗಿ ಬಹುದೊಡ್ಡ ಹೆಸರು ಮಾಡಿದ್ದರು. ಅವರ ಕವಿತೆಗಳು ಶಾಲೆಯ ಪ್ರಾರ್ಥನೆಯಲ್ಲಿ ಅನುರಣಿಸುತ್ತಲಿದ್ದವು. ಭಾರತದ ಪ್ರಧಾನಿಯಾಗಿ ಜಗಲಿಯಿಂದ ಜಗತ್ತಿಗೆ ನೆಗೆದರೂ ವಾಜಪೇಯಿ ತನ್ನ ಪ್ರೇರಣೆಗಳನ್ನು ಎಂದಿಗೂ ಮರೆಯಲಿಲ್ಲ. ಅವರು ಠೇವಣಿ ಕಳೆದುಕೊಂಡು ಕೇಳುವವರಿಲ್ಲದೆ ರೈಲಿನ ಬೋಗಿಯ ಪಾಯಿಖಾನೆಯ ಬದಿಯಲ್ಲಿ ನಿದ್ದೆ ಹೋದವರು. ತನ್ನ ಕೈಗೆ ಸಂಪತ್ತು, ಅಧಿಕಾರ ಬಂದಾಗಲೂ ಹಳೆಯದನ್ನು ಮರೆಯದೆ ಕನಸುಗಳನ್ನು ಮುಂದಿನ ಪೀಳಿಗೆಗೆ ಹೆಣೆದವರು.

“ನಮಸ್ತೇ ಸದಾ ವತ್ಸಲೇ ಮಾತೃಭೂಮೇ.. ತ್ವಯಾ ಹಿಂದು ಭೂಮೇ ಸುಖಂ ವರ್ಧಿತೋಹಮ್”  ಅಸಂಖ್ಯ ಸಂಘದ ಕಾರ್ಯಕರ್ತರಿಗೆ ನಿತ್ಯಪ್ರೇರಣೆ ನೀಡುವ ಸಂಘದ ಪ್ರಾರ್ಥನೆಯ ಸಾಲುಗಳಿವು. ತಾಯಿಯನ್ನು ಸ್ತುತಿಸುತ್ತ ಮೈಯೆಲ್ಲ ರೋಮಾಂಚನಗೊಂಡು ಭಾರತ ಮಾತೆಗೆ ಜೈಕಾರ ಹಾಕುವಲ್ಲಿಗೆ ಪಡೆವ ಚೈತನ್ಯದ ಹಿಂದೆ ಚರಿತ್ರೆಯೇ ಸಾವಿರವಿದೆ. ಗಿರಿಗಹ್ವರ, ಶಿಖರ, ಹಸಿರುಕಾನನ, ಬಳುಕಿ ಹರಿವ ನದಿಗಳು, ಮಳೆ ಹನಿದಾಗ ಸುವಾಸನೆ ಸೂಸುವ ತಾಯ್ನೆಲದ ಕತೆ ಕೇಳಿದರೆ ಯಾವ ಮನುಜನಾದರೂ ಮಾರು ಹೋಗದಿರಲು ಸಾಧ್ಯವೇ? ವಾಜಪೇಯಿಯವರು ಮೊದಲೇ ಭಾವಗಳ ಸಂಚಯನವಾಗಿದ್ದವರು. ಜೀವನದುದ್ದಕ್ಕೂ ಸಂಘದಿಂದ ಸಾವಿರ ಪ್ರೇರಣೆ ಪಡೆದರು. ಒಂದು ದಿನ ಸ್ವತಃ ತಾನೇ ಅನೇಕರಿಗೆ ದೀವಟಿಕೆಯಾಗುವತ್ತ ದಾಪುಗಾಲಿಕ್ಕಿದರು.  ಶಾಖೆಯಲ್ಲಿ ತೊಡಗಿಸಿಕೊಳ್ಳುವ ಅವರ ಉತ್ಕಟತೆ ಎಷ್ಟರ ಮಟ್ಟಿಗಿತ್ತೆಂದರೆ ಉಪನಯನದ ಕಿಕ್ಕಿರಿದ ನೆಂಟರಿಷ್ಟರ ಮದ್ಯೆ ವಾಜಪೇಯಿ ಶಾಖೆ ನಡೆಸುವ ಸಲುವಾಗಿ ಎಲ್ಲೋ ಓಡಿ ಮರೆಯಾಗಿದ್ದರು. ಅವರ ತಪಸ್ಸು, ತ್ಯಾಗ, ಮತ್ತು ಸಕ್ರಿಯತೆ ಅವರನ್ನು ಜನರ ನಡುವಿನ ಭಾವಬಿಂಬದಂತೆ ಜ್ವಾಜ್ಯಲ್ಯಮಾನವಾಗಿ ಬೆಳಗಿಸಿತು. ಭಾರತಕ್ಕೆ ಜೀವನಾನುಭವ ಮೈವೆತ್ತ ಕವಿಹೃದಯದ ರಾಜಕಾರಣಿ ದಕ್ಕಿದುದು ಈ ನೆಲದ ಹಿರಿಮೆಗಳಿಗೆ ಮತ್ತೊಂದು ಮೈಲಿಗಲ್ಲಾಯಿತು. ರಾಜಕೀಯ ಪರಂಪರೆಯ ಮೇಲ್ಪಂಕ್ತಿಗೆ ಅವರದ್ದೊಂದು ಪ್ರೇರಣಾದಾಯಿ ಕತೆ.

ಬರಹ , ಮಾತು ವಿಧ್ವತ್ತುಗಳನ್ನು ಈ ಮಹಾನ್ ವ್ಯಕ್ತಿತ್ವ ಸಂಘದ ಗರಡಿಯಲ್ಲಿ ಅಂತರ್ಗತ ಮಾಡುತ್ತ ಎಲ್ಲೆಡೆ ಹರಡುತ್ತಿತ್ತು. ಪ್ರಾಂತ ಪ್ರಚಾರಕರೊಬ್ಬರ ಮುತುವರ್ಜಿಯಿಂದ ರಾಷ್ಟ್ರಧರ್ಮ ಎನ್ನುವ ಮಾಸಿಕ ಪತ್ರಿಕೆಗೆ ಸಂಪಾದಕರಾದ ವಾಜಪೇಯಿಯವರ ಛಾತಿ ಕಮ್ಯೂನಿಷ್ಟರನ್ನೇ ದಂಗುಬಡಿಸಿತು. ಹೊಸತನಗಳನ್ನು ಓದುಗರು ಬಲುಬೇಗ ನೆಚ್ಚಿಕೊಂಡರು. ದೀನದಯಾಳ್ ಉಪಾಧ್ಯಾಯರು, ನಾನಾಜಿ ದೇಶ್‍ಮುಖ್‍ರಂತಹ ಮಹಾನ್ ಚೇತನಗಳ ಸಖ್ಯ ಹೇಗಿತ್ತೆಂದರೆ ಮಾತು, ಮಂಥನವಾಗುತ್ತ ಅಂತ್ಯದಲ್ಲಿ ಅವರೂ ಬಂಡಲು ಕಟ್ಟಲು, ಅಚ್ಚುಮೊಳೆ ಹೊಡೆಯಲು ಕೂರುತ್ತಿದ್ದರಂತೆ. ಇದು ಸಕ್ರಿಯತೆಯ ಪ್ರಖರತೆಗೆ ಹಿಡಿದ ಕೈಗನ್ನಡಿ.

ತನೆಗೆಂದೂ ಪ್ರೇರಣೆ ನೀಡುವ ತಾಯ್ನೆಲ ಇಲ್ಲಿಯ ಪರಂಪರೆ ಬಗೆಗೆ ಕವನ ಹೆಣೆಯುವುದೆಂದರೆ ಯಜ್ಞದೀಕ್ಷೆ ತೊಡುವಂತಹ ಭಾವ ಅವರದ್ದು. ‘ಹಿಂದೂ ತನ್‍ಮನ್ ಹಿಂದೂ ಜೀವನ್’ ಕವಿತೆಯನ್ನು  ಸಂಘಶಿಕ್ಷಾವರ್ಗದಲ್ಲಿ ಎರಡನೆಯ ಸರಸಂಘಚಾಲಕ್ ಗುರೂಜಿ ಮುಂದೆ ಭಾವಪರವಶವಾಗಿ ವಾಚಿಸಿದ ಹೆಗ್ಗಳಿಕೆ ವಾಜಪೇಯಿಯವರದ್ದು. ಪಾಂಚಜನ್ಯದಂತಹ ಪತ್ರಿಕೆ ನಡೆಸುವಾಗ ವಾಜಪೇಯಿ ಬಹುತೇಕ ರಾತ್ರಿಗಳನ್ನು ಪತ್ರಿಕಾ ಕಛೇರಿಯಲ್ಲೇ ಕಳೆದಿದ್ದರೆಂದರೆ ಅವರಿಗಿದ್ದ ಕಾರ್ಯಕ್ಷಮತೆ ಬಗ್ಗೆ ಯಾರಿಗಾದರೂ ಮನಸ್ಸು ತುಂಬಿ ಬರದಿರದು.

ಭಾವಜೀವಿಯಾಗಿದ್ದ ವಾಜಪೇಯಿಯವರ ಕವಿತೆಗಳನ್ನು ಚಂದ್ರಿಕಾಪ್ರಸಾದ್ ಶರ್ಮ ‘ಮೇರಿ ಇಕ್ಯಾವನ್ ಕವಿತಾಯೇ’ ಎಂಬ ಸಂಪಾದಿತ ಕೃತಿರೂಪದಲ್ಲಿ ಹೊರ ತಂದಿದ್ದಾರೆ. ಹಿಂದೂಸ್ಥಾನದ ಉನ್ನತಿಯ ಆಶಾಸೌಧಗಳು ಅಟಲ್ ಕವಿತೆಗಳಲ್ಲಿ ಹೇರಳವಾಗಿದೆ. ಅನುಭವಗಳು, ಕನಸುಗಳು, ಹಿನ್ನಡೆಗಳು, ಜೀವನಮೌಲ್ಯಗಳಿಂದಲೇ ಅವರು ಭಾಷಣ ಕಟ್ಟುತ್ತಿದ್ದರು ಅಂತೆಯೇ ಕವನಗಳೂ ಕುಸುಮಿಸುತ್ತಿದ್ದವು. ಪರ್ವತಗಳ ಮೇಲಿನ ಮಂಜನ್ನು ಶವದ ಮೇಲಿನ ಬಿಳಿಹೊದಿಕೆಗೆ ಹೋಲಿಸಿದ ದಿಟ್ಟತನವೂ ವಾಜಪೇಯಿಯವರಿಗಿದೆ. ತಾಜ್‍ಮಹಲಿನ ಸುತ್ತ ಹರವಿರುವ ನೂರಾರು ಊಹಾಪೋಹ, ರಮಣೀಯತೆಗಳನ್ನು ಪಕ್ಕಕ್ಕಿರಿಸಿ ವಾಸ್ತವಗಳನ್ನು ಪ್ರಶ್ನಿಸಿದ ಸಾಮಾಜಿಕ ಚಿಂತಕನ ಒಳನೋಟಗಳೂ ಅವರ ಪದಮಾಲೆಯಲ್ಲಿತ್ತು. ಅವರು ರಾಜಕಾರಣಿಯಾದರೂ ಪರಂಪರೆಯೆಡೆಗಿನ ಸೆಳೆತಗಳನ್ನು ಎಂದಿಗೂ ಯಾರಿಗೂ ಅಡವಿಡಲಿಲ್ಲ. ಕಾರ್ಯಕರ್ತರ ಮಡಿಲಲ್ಲಿ ಅದರ ಬೀಜಾಂಕುರ ಮಾಡಿ ಸಾರ್ಥಕತೆ ಕಂಡುಕೊಂಡರು. ಅದು ಇವತ್ತಿನ ಬೃಹತ್ ಹೆಮ್ಮರವೆಂಬುದೇ ಹೆಮ್ಮೆ.

ರಾಜಕೀಯ ವಿಪ್ಲವಗಳ ಮುಂದೆ ಮೂಕಸಾಕ್ಷಿಯಾಗಿ ನಡೆಯುವ ವ್ಯಕ್ತಿ ವಾಜಪೇಯಿ ಆಗಿರಲಿಲ್ಲ. ದೇಶವಿಭಜನೆ, ತುರ್ತುಪರಿಸ್ಥಿತಿ ಹೇರಿಕೆ, ಕುದುರೆ ವ್ಯಾಪಾರ, ಪ್ರಾದೇಶಿಕ ಪಕ್ಷಗಳ ಭಿನ್ನನಡೆಗಳು ಅವರನ್ನು ಅನೇಕ ಬಾರಿ ತಲ್ಲಣಕ್ಕೆ ಈಡು ಮಾಡಿದವು. ಆದರೂ ವಾಜಪೇಯಿಯವರ ಬಲುದೊಡ್ಡ ಯಶಸ್ಸಿನ ಗುಟ್ಟೆಂದರೆ ಅವರು ನಿರಂತರ ಆಶಾವಾದಿಯಾಗಿದ್ದುದು. ವಿದೇಶ ಮಂತ್ರಿಯಂತಹ ಹುದ್ದೆ ಸಿಕ್ಕಾಗಲೂ ಅವರು ವ್ಯಾಪ್ತಿಗಳನ್ನು ಮೀರಿ ವರ್ಚಸ್ಸು ವೃದ್ದಿಸಿಕೊಂಡವರು. “ಭಗ್ನಭಾರತವ ಬೆಸೆದು ಬಿಡುವೆವು ಮತ್ತೆ; ಗಿಲ್‍ಗಿಟ್‍ನಿಂದ ಗಾರೋವರೆಗೆ ಸ್ವಾತಂತ್ರ್ಯ ಸಂಭ್ರಮಿಸುತ್ತೇವೆ.” ಎನ್ನುವ ಅವರ ಕಳಕಳಿಗಳಲ್ಲಿ ಉತ್ಸಾಹ, ಮುಗ್ದತೆ, ಸಮಷ್ಟಿಯ ಪ್ರಜ್ಞೆಗಳು ಮತ್ತೆಮತ್ತೆ ಸ್ಪುರಿಸುತ್ತವೆ. ‘‘ಮನುಷ್ಯ ಯುದ್ದ ಮಾಡಬೇಕು, ಪರಿಸ್ಥಿತಿಯೊಂದಿಗೆ ಸೆಣಸಬೇಕು, ಕನಸೊಂದು ಛಿದ್ರವಾದರೆ ಇನ್ನೊಂದನು ಕಟ್ಟಬೇಕು”ಎನ್ನುವ ಮಹತ್ವಾಕಾಂಕ್ಷೆಗಳಿಗೂ ಅಕ್ಷರದ ಅಕ್ಕರೆ ನೀಡಿದ ಆದರ್ಶವಾದಿ ಅವರು.

ನೆಹರೂ ಸಮಕ್ಷಮದಲ್ಲಿ ಲತಾ ಮಂಗೇಷ್ಕರ್ ಏ ಮೇರೆ ವತನ್ ಕೆ ಲೋಗೋ ಹಾಡನ್ನು ಭಾವಪರವಶರಾಗಿ ಹಾಡುತ್ತ ಗದ್ಗದಿತರಾದರು, ಕಣ್ಣಲ್ಲಿ ಒಂದೇ ಸಮನೆ ಅಶ್ರುಧಾರೆಗಳು ಸುರಿಯಲಾರಂಭಿಸಿತು. ವಾಜಪೇಯಿಯವರು ಆಡಿದ ಮಾತು ಆ ಕ್ಷಣಕ್ಕೆ ಮಾತ್ರವಲ್ಲ ಸಾರ್ವಕಾಲಿಕವಾಗಿ ಪ್ರೇರಣಾದಾಯಿಯಾಗಿತ್ತು. ಅವರಂದಿದ್ದು ‘ಕಣ್ಣೀರೇಕೆ ತುಂಬಿಕೊಳ್ಳುತ್ತೀರಿ ಜ್ವಾಲೆಗಳನ್ನು ತುಂಬಿಸಿಕೊಳ್ಳಿ’ ಎಂಬುದಾಗಿ! ಎಂತಹ ಪ್ರೇರಣೆಗಳಿವೆ ಈ ಮಾತಿನಲ್ಲಿ?

ಅಡ್ವಾಣಿ ಜೊತೆಗೆ ಒಂದು ಜೀವ ಎರಡು ದೇಹ ಎಂಬಂತೆ ಬದುಕಿದ ಗಟ್ಟಿಗ ವಾಜಪೇಯಿ. ವ್ಯಾವಹಾರಿಕತೆಯನ್ನು ಮಾತಲ್ಲಿ ಬೆರೆಸದ ಹೃದಯವಂತಿಕೆ ವಾಜಪೇಯಿಯವರದ್ದು. ಕುಟುಂಬ ಜೀವನಕ್ಕೆ ತಾನು ಅಡಿಯಿಡದಿದ್ದರೂ ಅದರ ಅಷ್ಟೂ ಸಾರಗಳನ್ನು ಮೈವೆತ್ತ ಮೂರ್ತಿಯಂತೆ ಅವರು ಬದುಕಿದರು. ತಂಗಿಗೆ ರಕ್ಷೆ ಕಟ್ಟುವುದನ್ನು ಅವರೆಂದಿಗೂ ತಪ್ಪಿಸಿಕೊಳ್ಳಲಿಲ್ಲ. ಒಂದು ದೀಪಾವಳಿಗೆ ಇದ್ದಕ್ಕಿದ್ದಂತೆ ಬಾರದೇ ಹೋದ ತಂಗಿಯನ್ನು ಮೊಬೈಲು, ಫೇಸ್‍ಬುಕ್ಕು ಇಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಹುಡುಕಿದ ಹೃದಯವಂತ ವಾಜಪೇಯಿ. ತಂಗಿ ಮಗುವಿಗೆ ಜ್ವರ ಉಲ್ಬಣಿಸಿತೆಂದು ಆಸ್ಪತ್ರೆಯ ಹಾದಿ ಹಿಡಿದಿದ್ದಳು. ಚಿಕಿತ್ಸೆಯ ನಂತರ ತಂಗಿಯನ್ನು ಮಗು ಸಮೇತ ತವರಿಗೆ ಕರೆತಂದ ಮೇಲೆಯೇ ಅವರ ಮನೆಯಲ್ಲಿ ದೀಪಾವಳಿಯ ದೀಪ ಬೆಳಗಿತೆಂದರೆ ಅದೆಂತಹ ಬಾತೃತ್ವವಿದ್ದಿರಬಹುದು. ದೇಶದಲ್ಲಿ ಸಂಘದ ಮೇಲೆ ನಿಷೇಧ ಹೇರಿದಾಗ ಮಾತೃಪೂಜೆಗೆ ಪ್ರತಿಬಂಧನ ಎಂದು ಪದ್ಯ ಬರೆದು ಪ್ರತಿಭಟಿಸಿದ ವಿಭಿನ್ನ ಹೆಗ್ಗಳಿಕೆ ಅವರದ್ದು. ರಾಜಕೀಯವಾಗಿ ಸೆರೆವಾಸ, ಪ್ರತಿಭಟನೆ, ಮಾತಿನ ತಿವಿತಗಳನ್ನು ಅವರು ಎಂದಿಗೂ ಕೈಚೆಲ್ಲಿದವರಲ್ಲ.

ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಅವರು ಬಲರಾಮ ಪುರ, ಮಥುರಾ, ಲಕ್ನೋ ನವದೆಹಲಿಯಲ್ಲಿ ರಾತ್ರಿ ನಡೆದಾಡುತ್ತ ಯುವಕರನ್ನು ಪ್ರೇರಿತಗೊಳಿಸುತ್ತಿದ್ದರಂತೆ, ಆಗಲೆಲ್ಲ ಚುನಾವಣೆಗೆ ನಿಲ್ಲುವ ಸಲುವಾಗಿ ದೊಡ್ಡ ದೊಡ್ಡ ಜನರ ಬಳಿ ಪ್ರಸ್ತಾಪಿಸುತ್ತಿದ್ದರಂತೆ ಜನರು ನಕ್ಕು ‘ಠೇವಣಿಯಾದರೂ ಉಳಿದೀತೆ’ ಎಂಬಂತೆ ಅವಮಾನಿಸಿ ಕಳಿಸುತ್ತಿದ್ದರಂತೆ. ವಾಜಪೇಯಿ ಧೃತಿಗೆಡುತ್ತಿರಲಿಲ್ಲ. ಅವರಿಗೆ ಸೋಲುಗಳು ಸ್ವಪ್ನವಾಗಿರಲಿಲ್ಲ, ಅವು ಸಹಜವೇ ಆಗಿತ್ತು. ಇಂದಿನ ಸ್ಥಿತಿ ಕಲ್ಪಿಸಿಕೊಂಡರೆ ಎಲ್ಲವೂ ಪವಾಡದಂತೆ ಭಾಸವಾಗುತ್ತದೆ. ಅವರ ದಿಗ್ವಿಜಯಗಳು ಕಾರ್ಯಕರ್ತನ ಒಂದೊಂದು ಆಶಯದ ಮೆಟ್ಟಿಲಿನಂತೆಯೇ ದಾಖಲಾದವು. ಅವರು ಕಾರ್ಯಕರ್ತರನ್ನು ಗೆದ್ದರು. ಕ್ಷೇತ್ರ ಗೆದ್ದರು, ಪ್ರಧಾನಮಂತ್ರಿಯ ಸ್ಥಾನಗಳನ್ನೂ ಗೆದ್ದರು. ಅಷ್ಟೇ ಏಕೆ ಮಾತಿನ ಓಘದಲ್ಲಿ ವಿರೋಧಿಗಳನ್ನೂ ಗೆದ್ದರು. ನೂರಾರು ದೇಶದ ರಾಜತಾಂತ್ರಿಕರನ್ನೇ ಗೆದ್ದು ಚಕಿತಗೊಳಿಸಿದರು. ಅವರ ಬದುಕನ್ನು ನೆನೆದರೆ ಇಂದಿಗೂ ಗೆಲುವನ್ನೇ ಅವರು ಉಸಿರಾಡುತ್ತಿದ್ದಾರೆ. ಅವರ ಪ್ರೇರಣೆ ನಿತ್ಯ ನಿರಂತರವೇ ಆಗುಳಿಯಲಿ.

   –ಶಿವಪ್ರಸಾದ್ ಸುರ್ಯ ಉಜಿರೆ.

     (ಹೊಸದಿಗಂತ ಪತ್ರಿಕೆಯಲ್ಲಿ ದಿನಾಂಕ 24-12-2017ರಂದು ಪ್ರಕಟವಾಗಿರುವ ಬರಹ. ಚಿತ್ರಕೃಪೆ ವಸಂತ ಬಂಟಕಲ್)                  

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!