Uncategorized

ಆಲ್ಕೋಲಾಹಲ!!

ಚುನಾವಣೆ ಹಾಗೂ ಮದ್ಯ, ಇವೆರಡಕ್ಕೂ ಒಂಥರಾ ಎಣ್ಣೆ-ಸೋಡಾದಂತೆ ಅವಿನಾಭಾವ ಸಂಬಂಧವಿದೆ. ಒಮ್ಮೊಮ್ಮೆ ಎಣ್ಣೆಯ ಅಮಲು ಮತದಾನವನ್ನು ಅಮೂಲಾಗ್ರವಾಗಿ ಪ್ರಭಾವಿಸಿದೆಯೇ ಎಂಬ ಸಂದೇಹ ಮೂಡದೇ ಇರಲಾರದು. ಚುನಾವಣೆಯಲ್ಲಿ ಗೆಲುವಿನ ನಿಯಂತ್ರಣ ಸಾಧಿಸಬೇಕೆಂದರೆ ಕೆಲವೊಂದಷ್ಟು ಮತದಾರರ ಯೋಚನೆಯ ನಿಯಂತ್ರಣವನ್ನೇ ತಪ್ಪಿಸಬೇಕೆನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಸಿದ್ಧಸೂತ್ರ. ಅದಕ್ಕಾಗಿ ಪಕ್ಷಗಳು ಅವಲಂಬಿಸಿರುವುದು ಹೆಂಡವನ್ನೇ ಎನ್ನುವುದು ಎಂಥಾ ಹೆಡ್ಡನಿಗೂ ಗೊತ್ತಿರುವ ಸಂಗತಿ. ಆದ್ದರಿಂದಲೇ ರಾಜಕೀಯದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕುಡುಕರು ಚುನಾವಣೆಯನ್ನು ಮಾತ್ರ ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಇದರಲ್ಲಿ ಎಣ್ಣೆದಾಸರ  ಪಾತ್ರದ ಬಗ್ಗೆ ಔದಾಸೀನ್ಯ ತಾಳುವಂತೆಯೇ ಇಲ್ಲ. ಅಸಲಿಗೆ ಚುನಾವಣೆಗೆ ಹರಿಯುವ ಎಣ್ಣೆಯ ಪ್ರಮಾಣ ಹಾಗೂ ಚುನಾವಣೆಗಾಗಿ ಅವರು ಹರಿಸುವ ಬೆವರಿನ ಪ್ರಮಾಣವು ಪರಸ್ಪರ ಅನುಲೋಮವಾಗಿರುತ್ತವೆ. ಈ ಪ್ರವಾಹವೇ ಒಮ್ಮೊಮ್ಮೆ ಫಲಿತಾಂಶದ ಲೆಕ್ಕಾಚಾರಗಳನ್ನೆಲ್ಲಾ ಕೊಚ್ಚಿಕೊಂಡು ಹೋಗುವುದಿದೆ. ಮದ್ಯ ನೀಡಿ ಚುನಾವಣೆ ಗೆಲ್ಲುವಂತೆ, ಮದ್ಯ ನಿಷೇಧಿಸುತ್ತೇವೆಂಬ ಪುಕಾರು ಹಬ್ಬಿಸಿ ಮತ ಧ್ರುವೀಕರಣಕ್ಕೆ ಇಳಿಯುವಲ್ಲಿಯೂ ರಾಜಕೀಯ ಪಕ್ಷಗಳ ನಾಯಕರು ಸಿದ್ಧಹಸ್ತರೇ ಸರಿ. ಎಂಬಲ್ಲಿಗೆ ಅವುಗಳ ನಡುವಿನ ನಂಟು ವೇದ್ಯವಾಗುತ್ತದೆ.

 

ಅಲ್ಲಲ್ಲಿ ಹರಿದಾಡುತ್ತಿರುವ, ಮದ್ಯನಿಷೇಧದ ಸುದ್ದಿ ಕೆಲವು ಜನರ ಅಮಲನ್ನು ಜರ್ರನೆ ಇಳಿಸಿದೆ. ಸಂಪೂರ್ಣವಾಗಿ ಅಬಕಾರಿಯನ್ನೇ, “ಅಬ್ ಕಹ್ಞಾಂ ರೀ?” ಎಂದು ಕೇಳುವಂತೆ ಮಾಡಲು ಹೊರಟಿದೆಯಂತೆ ಸರ್ಕಾರ. ಹಾಗಾಗಿ ಇದು ಜಾರಿಗೆ ಬಂದರೆ “ಅಬ್ ಕಿ ಬಾರ್, ಅಬಕಾರಿ ನಹೀ” ಎಂದೆನ್ನಬಹುದು. ಹಲವರಿಗೆ ಈ ಸಂಗತಿ ಹೃದ್ಯವೆನಿಸಿದರೆ ಇನ್ನು ಕೆಲವರಿಗೆ ಹೃದಯಾಘಾತಕಾರಿ. ಆದರೆ ಇದು ಚಾನೆಲ್ ಗಳಲ್ಲಿ ಪ್ರಸಾರವದಷ್ಟು ಸುಲಭಕ್ಕೆ ಚಾಲನೆಗೆ ಬರುವಂತಹದ್ದಲ್ಲ ಎನ್ನುವುದು ಪ್ರತಿಯೊಬ್ಬ ಎಣ್ಣೆಪ್ರಿಯನಿಗೂ ಚೆನ್ನಾಗಿಯೇ ತಿಳಿದಿದೆ. ಏಕೆಂದರೆ ಅದು ಕೇವಲ ‘ಕಾಯಿ’ದೆ. ಎಂದೂ ಮಾಗಿ ಹಣ್ಣಾಗದು ಎಂಬ ತುಂಬು ನಂಬಿಕೆ ಅವರದ್ದು.

 

ಆಡಳಿತ ಚುಕ್ಕಾಣಿ ಹಿಡಿದವರು ಇಂತಹ ಮಹತ್ವದ ಕಾಯಿದೆಗಳನ್ನು ಜಾರಿಗೆ ತರದೆ ಜಾರಿಕೊಳ್ಳುವಲ್ಲಿ ಚಾಣಾಕ್ಷ್ಯರು ಎನ್ನುವುದು ತಿಳಿದಿರುವುದರಿಂದಲೇ ಅನುಭವಿ ಕುಡುಕರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಣ್ಣಗೆ ಬಾಟಲಿಯ ತಲೆ ನೇವರಿಸುತ್ತಾರಷ್ಟೇ! ಆದಾಗ್ಯೂ ಹೀಗೊಂದು ಪುಕಾರು ಹಬ್ಬಿದ ನಂತರ ಬಾರುಗಳಲ್ಲಿ ಈ ಬಗ್ಗೆ ಬಾರ್ ಬಾರ್ ಬಿರುಸಿನ ಚರ್ಚೆ ನಡೆಯುತ್ತಿದೆಯಂತೆ. ‘ರಾಜಕಾರಣಿಗಳು ಹತ್ತಿದ ಏಣಿಯನ್ನು ಒದೆಯುತ್ತಾರೆನ್ನುವುದು ಸಹಜ. ಆದರೆ ಮದ್ಯದ ವಿಷಯದಲ್ಲಿ ಅದು ಲಾಗೂ ಆಗದೆನ್ನುವುದು ಅವರ ಖಚಿತ ಅಭಿಪ್ರಾಯ. ಅವರು ಜೊತೆಗೆ ಕೊಂಡೊಯ್ಯುವ ಏಕಮೇವ ಹತ್ತಿದ ಏಣಿಯೆಂದರೆ ಎಣ್ಣೆಯೊಂದೆ ಎಂಬ ಗಾಢ ನಂಬಿಕೆಯಿರುವುದರಿಂದಲೇ ಅವರೆಲ್ಲಾ ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಖುದ್ದು ಅಬಕಾರಿ ಮಂತ್ರಿಗಳೇ ಇವರಿಗೆ ಕಾನ್ಫಿಡೆನ್ಶಿಯಲ್ ಆಗಿ ತಿಳಿಸಿದ್ದಾರೋ ಎಂಬಂತೆ. ಇಷ್ಟೇ ಅಲ್ಲದೆ ಒಂದೊಮ್ಮೆ ಇದನ್ನು ಅನುಷ್ಠಾನಕ್ಕೆ ತಂದರೂ ಕುಳಿತ ಕೊಂಬೆಯನ್ನೇ ಕಡಿದುಕೊಂಡಂತೆ ಎಂದೆಲ್ಲಾ ತೊದಲು ನುಡಿಯಲ್ಲಿ ಕುಡುಕರೆಲ್ಲಾ ಮಾತನಾಡಿಕೊಳ್ಳುತ್ತಿರುವುದು ಮದ್ಯನಿಷೇಧದಂತೆ ಸುಳ್ಳು ಸುದ್ದಿಯಂತೂ ಆಗಿರಲಿಕ್ಕಿಲ್ಲ.

 

ಕಾಸು ಎಷ್ಟೇ ಖರ್ಚಾದರೂ ಈ ಸೀಸೆಯಲ್ಲಿ ಕೆಲವರಿಗೆ ಏನೇನೋ ಖುಷಿ ಕಾಣಿಸುವಾಗ ಇವುಗಳ ಮೇಲೆ ಹೇರುವ ನಿಷೇಧವೂ ಜೀವ ವಿರೋಧಿ ಎಂಬ ವಾದವನ್ನು ಕೆಲವು ಪ್ರಚಾರಪ್ರಿಯ ಪ್ರತಿಭಟನಾಕಾರರು ಮುಂದೊಡ್ಡಿದರೂ ಅಚ್ಚರಿಪಡಬೇಕಾಗಿಲ್ಲ.

ಅಬಕಾರಿಯಿಂದ ಸಿಗುವ ಲಾಭಕ್ಕಾಗಿ ಆಡಳಿತ ಯಂತ್ರ ಬಕಪಕ್ಷಿಯಂತೆ ಕಾಯುತ್ತಿರುವಾಗ ಇಂತಹ ಕಾಯಿದೆ ಜಾರಿಗೆ ಬರಲಾರದೆಂಬ ಅಭಿಪ್ರಾಯವನ್ನಂತೂ ಒಪ್ಪಲೇಬೇಕು. ಬಾರ್ ಗಳೆಲ್ಲ ಬರ್ಬಾದ್ ಆಗಿಹೋಗುವ ಈ ಯೋಜನೆ ಜಾರಿಗೆ ತಂದರೆ ತಮ್ಮವರೇ ಅದರ ಸಂತ್ರಸ್ತರಾದಾರೂ ಎಂಬ ಭೀತಿಯಿರುವುದರಿಂದ ರಾಜಕಾರಣಿಗಳೂ ಇದರ ಅನುಷ್ಠಾನಕ್ಕೆ ಮುಂದಾಗಲಾರರು. ಅಷ್ಟೇ ಅಲ್ಲದೆ ಕೆಲವರು ತಮ್ಮ ಹಕ್ಕು ಎಂದು ಭಾವಿಸಿರುವ ಲಿಕ್ಕರ್, ಕೆಲವರ ಅಧಿಕಾರದ ಹಾದಿಯ ಲಕ್ಕನ್ನೇ ಬದಲಾಯಿಸಿರುವಾಗ ಅದರ ಮೇಲೆ ನಿಷೇಧ ಹೇರುತ್ತಾರೆಂದು ನಂಬುವುದಾದರೂ ಹೇಗೆ?

 

ಓವರ್ ಡೋಸ್: ಒಟ್ಟಾರೆಯಾಗಿ ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರಗಳ ನೀತಿ “ಅಬಕಾರಿ ಆದಾಯದ ಮೇಲೆ ಆಸೆ, ಮದ್ಯ ನಿಷೇಧಿಸಿ ಗಳಿಸಬಹುದಾದ ಜನಮನ್ನಣೆಯ ಮೇಲೆ ಪ್ರೀತಿ” ಎಂಬಂತಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!