Featured ಅಂಕಣ

ಅಪ್ಪನಂತಾಗದ ದಿಟ್ಟ ಮಗಳು ಇಂದಿರಾ!

ಇಂದಿರಾ ಗಾಂಧಿಯವರ ವ್ಯಕ್ತಿತ್ವವನ್ನು ಅವಲೋಕಿಸುವಾಗ, ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದದ್ದು ಕಾಣುತ್ತದೆ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇವೆಲ್ಲವೂ ಮೊಳಕೆಯೊಡೆದದ್ದೇ ಆ ಅಭದ್ರತೆಯ ಕಾರಣದಿಂದ. ಅವರ ಜೀವನದ ವೈರುಧ್ಯಗಳನ್ನೇ ನೋಡಿ, ಒಮ್ಮೊಮ್ಮೆ ಗಟ್ಟಿತನದಿಂದ ಗರ್ಜಿಸಿದರೂ ಮಗದೊಮ್ಮೆ ಮಗುವಿನಂತೆ ಅತ್ತಿದ್ದು, ಅಳುಕಿನಿಂದ ಹಿಂದೆ ಸರಿದದ್ದು, ಕೀಳರಿಮೆಯಿಂದ ನರಳಿದ್ದು ಎಲ್ಲವೂ ಇದೆ. ಇವೆಲ್ಲದರ ಒಟ್ಟು ರೂಪವೇ ಇಂದಿರಾ ಪ್ರಿಯದರ್ಶಿನಿ. ಹಾಗೇ ನೋಡಿದರೆ ದೇಶದ ಪ್ರಧಾನಿಯ ಸ್ಥಾನದಲ್ಲಿ ಕೂತು ಭಾರತವನ್ನು ಹೆಚ್ಚು ಅವಧಿಗೆ ಆಳಿದ ಎರಡನೆಯ ಪ್ರಧಾನಿ ಇಂದಿರಾ ಗಾಂಧಿ. ಆದರೆ ಅವರ ಬದುಕಿನಲ್ಲಿ ನೆಮ್ಮದಿ, ಸಂತಸ, ಧನ್ಯತಾಭಾವ ಇತ್ತಾ ನೋಡಿದರೆ ಕಾಣುವುದು ಶೂನ್ಯ. ಬಾಲ್ಯದಿಂದಲೂ ಒಂದು ಕಡೆ ಹಾಸಿಗೆ ಹಿಡಿದ ತಾಯಿ, ಅಧಿಕಾರ ರಾಜಕೀಯದ ತುಡಿತದಿಂದ ಸಾಂಸಾರಿಕ ಜೀವನವನ್ನು ಕಡೆಗಣಿಸಿದ ತಂದೆ, ವಿದೇಶಕ್ಕೆ ಹೋದರೂ ಕೈಹಿಡಿಯದ ಓದು, ಇಷ್ಟಪಟ್ಟು ಕಟ್ಟಿಕೊಂಡವನ ದುಷ್ಟತನ, ದುರಭ್ಯಾಸ. ಅಷ್ಟೇನೂ ಎತ್ತರಕ್ಕೇರದ ಮಗ ರಾಜೀವ್, ದಾರ್ಷ್ಟ್ಯವನ್ನು ರೂಢಿಸಿಕೊಂಡ ಕಿರಿಮಗ ಸಂಜಯ್, ಸೊಸೆಯರ ನಡುವಿನ ಜಗಳ, ಕೊನೆಗೆ ರಸ್ತೆಯಲ್ಲಿ ಗುಂಡಿಗೆ ಬಲಿಯಾಗಬೇಕಾದ ಸಂದರ್ಭ, ಯಾವುದರಲ್ಲಿತ್ತು ನೆಮ್ಮದಿ, ಸಂತಸ?

ಒಮ್ಮೊಮ್ಮೆ ದೊಡ್ಡವರ ಜೀವನದ ಪುಟ ಸರಿಸುವಾಗ ಅವರ ಸಾಧನೆಗಳು ಅಚ್ಚರಿ ಉಂಟು ಮಾಡಿದರೆ, ಬದುಕಿನ ಪುಟಗಳಲ್ಲಿ ಸಣ್ಣತನ ಕಂಡಾಗ ಕಸಿವಿಸಿಯಾಗುತ್ತದೆ. ಈ ಹಿಂದೆ ಪಪುಲ್ ಜಯಕರ್ ಅವರು ಬರೆದ ಇಂದಿರಾ ಗಾಂಧಿಯವರ ಜೀವನಚರಿತ್ರೆಯ ಪುಟಗಳನ್ನು ಸರಿಸುವಾಗ, ಇಂದಿರಾರನ್ನು ಪೂರ್ಣವಾಗಿ ತೆರೆದಿಡುವ ಪ್ರಯತ್ನ ಆ ಕೃತಿಯಲ್ಲಿ ಆಗಿಲ್ಲವೇನೋ ಎನಿಸಿತು. ಪಪುಲ್ ಜಯಕರ್ ಇಂದಿರಾರನ್ನು ತೀರಾ ಹತ್ತಿರದಿಂದ ಕಂಡವರು, ಇಂದಿರಾ ಸಮಸ್ಯೆಗಳಿಗೆ ಕಿವಿಯಾದವರು. ಸಾಂತ್ವನದ ಮಾತುಗಳಾಡಿದವರು. ಆದರೂ ಆ ಆಪ್ತತೆ ಇಂದಿರಾ ವೈಯಕ್ತಿಕ ಜೀವನದ ಯಾರಿಗೂ ಗೊತ್ತಿರದ ವಿಷಯವನ್ನೇನು ತೆರೆದಿಡಲು ನೆರವಾಗಲಿಲ್ಲ. ಅದೇ ಜೆ.ಬಂದೋಪಾಧ್ಯರು ನೆಹರೂ ಬಗ್ಗೆ ಬರೆದಿರುವ ಕೃತಿ ನೋಡಿ, ಇಂದಿರಾರ ಬಾಲ್ಯದ ಹಲವು ಸಂಗತಿಗಳ ಪ್ರಸ್ತಾಪ ಅದರಲ್ಲಿದೆ. ಬಾಲ್ಯದಿಂದಲೂ ಇಂದಿರಾ ಅಳುಕಿನಿಂದಲೇ ಬೆಳೆದವರು. ಹೆಚ್ಚು ಮಾತನಾಡುತ್ತಿರಲಿಲ್ಲ. ಶಾಂತಿನಿಕೇತನದಿಂದ ವಿದೇಶಕ್ಕೆ ತೆರಳಿ ಬ್ರಿಸ್ಟಲ್ ನಲ್ಲಿ ವಿದ್ಯಾಭ್ಯಾಸಕ್ಕೆ ಹೋದರೂ ಅಲ್ಲೂ ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಜೊತೆಗೆ ಅನಾರೋಗ್ಯವೂ ಕಾಡಿದ್ದಿದೆ. ಇದೆಲ್ಲವುಗಳಿಂದ ಅವರಲ್ಲಿ ಕೀಳರಿಮೆ ಮೂಡಿತ್ತು. ಆ ಕೀಳರಿಮೆ ಮುಂದೆ ಅವರು ಪ್ರಧಾನಿಯಾದಾಗ ಕೂಡ ಅವರ ವರ್ತನೆಯಲ್ಲಿ ಅಭಿವ್ಯಕ್ತವಾಗಿತ್ತು.

ಇನ್ನು ಇಂದಿರಾರಿಗೆ ತೀರಾ ಆಪ್ತರಾಗಿದ್ದ ಮತ್ತು ಅವರ ಎಲ್ಲ ತಪ್ಪುಗಳನ್ನು ಮತ್ತು ತುರ್ತುಪರಿಸ್ಥಿತಿಯಂತಹ ಅಕ್ಷಮ್ಯವನ್ನು ಕೂಡ ಒಂದು ಹಂತದಲ್ಲಿ ಸಮರ್ಥಿಸುತ್ತಿದ್ದ ಪತ್ರಕರ್ತ ಖುಷವಂತ್ ಸಿಂಗ್ ಇಂದಿರಾ ಬಗ್ಗೆ ಹೇಳುತ್ತಾ ’ಇಂದಿರಾ ಯಾವುದೇ ಟೀಕೆಗಳನ್ನು ಕೂಡ ಧನಾತ್ಮಕವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ತಮಗೆ ಪ್ರತಿಸ್ಪರ್ಧಿಯಾಗಿ ಯಾರಾದರೂ ಕಂಡರೆ ಅವರನ್ನು ತೆರೆಯ ಹಿಂದೆ ಸರಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದರು. ಜಯಪ್ರಕಾಶ ನಾರಾಯಣರು ತನಗೆ ಪ್ರತಿಸ್ಪರ್ಧಿಯಾಗಬಲ್ಲರು ಎಂದು ಅವರಿಗೆ ಅನ್ನಿಸಿತ್ತು. ಆದ್ದರಿಂದಲೇ ಜೆಪಿಯವರನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಮುಖ್ಯವಾಗಿ ತೀರಾ ಓದಿಕೊಂಡ, ಸಜ್ಜನರ ಸಹವಾಸ ಅವರಿಗೆ ಅಪಥ್ಯವಾಗಿತ್ತು. ಬಹುಶಃ ಇದಕ್ಕೆ ಕಾರಣ ಅವರ ಕೀಳರಿಮೆ, ತಾನು ವಿದ್ಯಾಭ್ಯಾಸದಲ್ಲಿ ಹಿಂದುಳಿದವಳೆಂಬ ಅಳುಕು. ಆದ್ದರಿಂದಲೇ ತಮ್ಮ ಸುತ್ತ ಕೇವಲ ಹೊಗಳುಭಟರನ್ನು, ಅವಿವೇಕಿಗಳನ್ನು ಬಿಟ್ಟುಕೊಂಡರು’ ಎನ್ನುತ್ತಾರೆ.

ಯಾರೆಲ್ಲಾ ಇಂದಿರಾ ಸುತ್ತ ಇದ್ದರೋ ಅವರ ಅರ್ಹತೆಗಳೇನು ಎಂದು ನೋಡಿದರೆ ಖುಷವಂತ್ ಸಿಂಗ್ ಅವರ ಮಾತು ಸತ್ಯವೆನಿಸುತ್ತದೆ. ಯಶಪಾಲ್ ಕಪೂರ್, ಆರ್.ಕೆ ಧವನ್, ಮೊಹಮದ್ ಯೂನಸ್ ಎಲ್ಲರೂ ಇಂದಿರಾ ಆಪ್ತರೆಂಬ ಕಾರಣಕ್ಕೆ ಸರ್ಕಾರದ ಪ್ರಮುಖ ವಿಷಯದಲ್ಲಿ ಮೂಗು ತೂರಿಸಿದವರು. ನೆಹರು ಕುಟುಂಬದೊಂದಿಗೆ ಆಪ್ತರಾಗಿದ್ದರೆಂಬ ಕಾರಣಕ್ಕೆ ಜಿ.ಪಾರ್ಥಸಾರತಿ, ’ಪಾಲಿಸಿ ಅಂಡ್ ಪ್ಲಾನಿಂಗ್ ಕಮಿಷನ್ನಿನ’ ಮುಖ್ಯಸ್ಥರಾದರು. ಖಾನ್ ಅಬ್ದುಲ್ ಗಫರ್ ಖಾನರ ಪುತ್ರ ಎಂಬ ಕಾರಣಕ್ಕೆ ಮೊಹಮದ್ ಯೂನಸ್’ರನ್ನು ತಮ್ಮ ಆಪ್ತ ಪಾಳಯಕ್ಕೆ ಇಂದಿರಾ ಕೆರೆದುಕೊಂಡರು. ಪರಮೇಶ್ವರ ನಾರಾಯಣ ಹಸ್ಕರ್ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸದೆ ಅಧಿಕಾರಿಯಾಗಿ ಸೇರ್ಪಡೆಯಾದರು. ಇಂದಿರಾರ ಅವಧಿಯಲ್ಲೇ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದದ್ದು. ಅಧಿಕಾರಿಗಳು, ಸಚಿವರುಗಳು ಎಷ್ಟೇ ಭ್ರಷ್ಟರಾದರೂ ಇಂದಿರಾ ಸಹಿಸುತ್ತಿದ್ದರು. ಹಾಗೊಮ್ಮೆ ಅವರು ಇಂದಿರಾರ ವಿರುದ್ಧ ಧ್ವನಿಯೆತ್ತಿದರೆ, ಅದೇ ಭ್ರಷ್ಟಾಚಾರದ ನೆಪ ಒಡ್ಡಿ ಅವರನ್ನು ಕಿತ್ತೊಗೆಯುತ್ತಿದ್ದರು.

ತೀರಾ ಅಚ್ಚರಿ ಎನಿಸುವ ಅವರ ವೈಯಕ್ತಿಕ ವಿಷಯಗಳಲ್ಲಿ ಒಂದೆಂದರೆ ಅವರಿಗೆ ತಮ್ಮ ಸುತ್ತ ಇತರ ಹೆಂಗಸರು ಸುಂದರವಾಗಿ ಕಂಡರೆ ಕರುಬುವ ಗುಣವಿತ್ತು. ಸಚಿವೆ ತಾರಕೇಶ್ವರಿ ಇಂತಹ ಕರುಬುವಿಕೆಗೆ ಬಲಿಯಾಗಿದ್ದರು. ತಮ್ಮ ಪತಿ ಫಿರೋಜ್ ಗಾಂಧಿಯೊಂದಿಗೆ ತಾರಕೇಶ್ವರಿ ಸಲಿಗೆಯಿಂದ ನಡೆದುಕೊಳ್ಳುತ್ತಾರೆಂಬ ಗುಮಾನಿ ಇಂದಿರಾರಿಗಿತ್ತು. ಒಂದೊಮ್ಮೆ ತಾರಕೇಶ್ವರಿ ಅವರು ಇಂದಿರಾರ ಕಾಲು ಹಿಡಿದು ಕ್ಷಮೆ ಕೇಳಿದ್ದರಂತೆ, ಆದರೆ ಇಂದಿರಾ ಅವರನ್ನು ಕ್ಷಮಿಸಿರಲಿಲ್ಲ. ನಿಮಗೆ ಗೊತ್ತಿದ್ದ ಹಾಗೆ ಗರಿಗರಿ ಇಸ್ತ್ರಿಯ ಸೀರೆ, ಒಪ್ಪವಾಗಿ ಬಾಚಿದ ಕೂದಲಿನೊಂದಿಗೆ ಲಕ್ಷಣವಾಗಿ ಅಲಂಕಾರಗೊಂಡೇ ಇಂದಿರಾ ಗಾಂಧಿಯವರು ಮನೆಯಿಂದ ಹೊರ ಬೀಳುತ್ತಿದ್ದರು. ತಮ್ಮನ್ನು ಆಕರ್ಷಣೀಯವಾಗಿ ಬಿಂಬಿಸಿಕೊಳ್ಳಬೇಕೆಂಬ ಅಭಿಲಾಷೆ ಅವರಿಗಿತ್ತು. ಅವರು ಗುಂಡೇಟಿಗೆ ಬಲಿಯಾದ ದಿನ ಕೂಡ ಕನ್ನಡಿ ಮುಂದೆ ಕೂತು ಅಚ್ಚುಕಟ್ಟಾಗಿ ಸಿಂಗಾರಗೊಂಡು, ’ನನ್ನ ಮೇಕಪ್ ಹೇಗಿದೆ? ಟಿ.ವಿ ಸಂದರ್ಶನಕ್ಕೆ ಒಪ್ಪುವಂತಿದೆಯಾ? ಎಂದು ಕೇಳಿಯೇ ಮನೆಯಿಂದ ಹೊರಬಿದ್ದಿದ್ದರಂತೆ.

ಬಿಡಿ, ಇವೆಲ್ಲವುಗಳ ಹೊರತಾಗಿ ಇಂದಿರಾರಲ್ಲಿ ಇಷ್ಟವಾಗುವುದು ಅವರ ಗಟ್ಟಿತನದ ನಿರ್ಧಾರಗಳು. ನೆಹರೂರ ವಿಚಾರಧಾರೆಯಿಂದ ಪ್ರೇರಿತರಾದರೂ, ತಮ್ಮ ತಂದೆ ತೋರಿದ ಅಸಹಾಯಕತೆ, ಅಂಜುಬುರುಕುತನವನ್ನು ಇಂದಿರಾಗಾಂಧಿಯವರು ಪ್ರದರ್ಶಿಸಲಿಲ್ಲ. ಅವರು 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಿಭಾಯಿಸಿದ್ದೇ ಅವರ ದಿಟ್ಟತನಕ್ಕೆ ಉದಾಹರಣೆ. 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿತು, ಪರಿಸ್ಥಿತಿ ಹದಗೆಟ್ಟಿತು. ಪರಿಣಾಮವಾಗಿ ಸಾವಿರಾರು ನಿರಾಶ್ರಿತರು ಭಾರತದತ್ತ ಮುಖ ಮಾಡಿದರು. ಇದು ಮುಂದುವರಿದರೆ ಭಾರತದ ಅರ್ಥವ್ಯವಸ್ಥೆ ಕುಸಿಯುವುದೆಂದು ಅರಿತ ಭಾರತ, ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸುವ ಆಂದೋಲನಕ್ಕೆ ಸಹಕರಿಸಲು ನಿರ್ಧರಿಸಿತು. ಆದರೆ ಅದಾಗಲೇ ಚೀನಾದೊಂದಿಗೆ ಭಾರತದ ಬಾಂಧವ್ಯ ಹಳಸಿತ್ತು. ಈ ವಿಷಯದಲ್ಲಿ ಭಾರತ ಮೂಗು ತೂರಿಸಬಾರದೆಂದು ಚೀನಾ ಎಚ್ಚರಿಸಿತು. ಚೀನಾದ ಬೆನ್ನಿಗೆ ಅಮೆರಿಕ ನಿಂತಿತು. ಹಾಗೊಮ್ಮೆ ಭಾರತ ಮುಂದುವರಿದರೆ, ಚೀನಾ ಭಾರತದ ಮೇಲೆರಗಬಹುದು, ಅದನ್ನು ನಾವು ವಿರೋಧಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಅಮೆರಿಕದಿಂದ ರವಾನೆಯಾಯಿತು.

ಬಹುಶಃ ನೆಹರೂ ಆಗಿದ್ದರೆ ಮತ್ತೊಮ್ಮೆ ವಿಶ್ವಸಂಸ್ಥೆಯ ಕದತಟ್ಟಿ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದರೇನೋ. ಆದರೆ ಇಂದಿರಾ ಸುಮ್ಮನಾಗಲಿಲ್ಲ ರಣತಂತ್ರ ರೂಪಿಸಿದರು. ದುರ್ಗಾಪ್ರಸಾದ್ ಧರ್’ರನ್ನು ರಷ್ಯಾಕ್ಕೆ ಕಳುಹಿಸಿ, ರಷ್ಯಾದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಮುಂದಾದರು. ನಿಮಗೆ ಅಚ್ಚರಿಯೆನಿಸಬಹುದು ಈ ಒಪ್ಪಂದದ ಬಗ್ಗೆ ಸಹಿ ಮಾಡುವ ಮುಂಜಾನೆಯವರೆಗೂ ಸಂಪುಟದ ಯಾವ ಸಚಿವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ರಷ್ಯಾದೊಂದಿಗಿನ ಒಪ್ಪಂದ ಭಾರತಕ್ಕೆ ಬಲ ನೀಡಿತು. ಆ ಒಪ್ಪಂದದಂತೆ ಉಭಯ ದೇಶಗಳಲ್ಲಿ ಯಾವ ದೇಶದ ಭದ್ರತೆಗೆ ಧಕ್ಕೆಯುಂಟಾದರೂ ಮತ್ತೊಂದು ದೇಶ ಸಹಾಯಕ್ಕೆ ನಿಲ್ಲಬೇಕೆಂಬ ಅಂಶವಿತ್ತು. ಸೇನೆಗೆ ಯುದ್ಧದ ಮುನ್ಸೂಚನೆ ನೀಡಿ, ಸಿದ್ಧವಾಗುವಂತೆ ಸೂಚಿಸಿದರು. ಇಂದಿರಾ ನೆಹರೂರಂತೆ ಸೇನೆಯ ಅಧಿಕಾರಿಗಳ ಮಾತು ಧಿಕ್ಕರಿಸುತ್ತಿರಲಿಲ್ಲ. ಆದ್ದರಿಂದಲೇ ಯುದ್ಧಕ್ಕೆ ಚಳಿಗಾಲ ಸೂಕ್ತ ಸಮಯ ಎಂಬ ಅಧಿಕಾರಿಗಳ ಮಾತಿಗೆ ಸಮ್ಮತಿಯಿತ್ತು ಇಂದಿರಾ ಕಾದರು. ಅಷ್ಟರ ಒಳಗೆ ಬೆಲ್ಜಿಯಂ, ಆಸ್ಟ್ರೆಲಿಯಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗೆ ಭೇಟಿಕೊಟ್ಟು ಭಾರತಕ್ಕೆ ಎದುರಾಗಿರುವ ಸಮಸ್ಯೆಯನ್ನು ವಿವರಿಸಿ, ಅನುಕಂಪಗಿಟ್ಟಿಸುವ ಪ್ರಯತ್ನ ಮಾಡಿದರು. ಅಂತೂ ಯುದ್ಧಕ್ಕೆ ಕಾಲ ಪ್ರಶಸ್ತವಾಯಿತು. ಡಿಸೆಂಬರ್ 3 ರಂದು ಪಾಕಿಸ್ತಾನ ಮೂರ್ಖತನ ಪ್ರದರ್ಶಿಸಿ ಭಾರತದ ವಿಮಾನವೊಂದನ್ನು ಭಸ್ಮ ಮಾಡಿತು. ಇಷ್ಟು ನೆಪ ಸಾಕಾಗಿತ್ತು. ಭಾರತದ ಸೈನಿಕರು ಚುರುಕುತನದಿಂದ ಮುಂದುವರಿದು ಪೂರ್ವ ಪಾಕಿಸ್ತಾನವನ್ನು ವಶಮಾಡಿಕೊಂಡರು. ಪಾಕಿಸ್ತಾನ ಮಂಡಿಯೂರಿತು.  ಇಂದಿರಾ ತೋರಿದ ದಿಟ್ಟತನದಿಂದ ಚೀನಾ ಮತ್ತು ಅಮೆರಿಕ ದಿಕ್ಕೆಡುವಂತಾಯಿತು. ಭಾರತ ಜಯದ ನಗೆ ಬೀರಿತು. ಅದರ ಹಿಂದಿದದ್ದು ಇಂದಿರಾರ ಚಾಣಾಕ್ಷತೆ ಮತ್ತು ಧೀರೋದ್ಧಾತ ನಿಲುವು ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ.

ಇಂದಿರಾ ಗಾಂಧಿಯವರ ಬದುಕಿನ ಬೆಳವಣಿಗೆ ನೋಡಿದರೆ ಅಚ್ಚರಿಯೆನಿಸುವುದು ಸತ್ಯ. ಬಾಲ್ಯದಲ್ಲಿ ಅಷ್ಟೇನೂ ಚುರುಕುತನ ತೋರದ, ಸದಾ ಮೌನಿಯಾಗಿರುತ್ತಿದ್ದ ಇಂದಿರಾ, ಅಪ್ಪ ಬರೆದ ಪತ್ರಗಳ ಮೂಲಕ ಪ್ರಪಂಚವನ್ನು ನೋಡಿದವರು. ನೆಹರು ಮನೆತನ, ಮೋತಿಲಾಲರ ಮೊಮ್ಮಗಳು, ಜವಹರಲಾಲರ ಮಗಳು ಎಂಬೆಲ್ಲಾ ಅಂಶಗಳು ಅವರ ಬೆಳವಣಿಗೆಗೆ ಕಾರಣವಾದವು ದಿಟ. ಆದರೆ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಎಲ್ಲರನ್ನೂ ಮತ್ತು ಎಲ್ಲವನ್ನೂ ತಮ್ಮ ಸುಪರ್ಧಿಗೆ ತೆಗೆದುಕೊಂಡು ಬೆಳೆದ ಪರಿ ಸೋಜಿಗ ಹುಟ್ಟಿಸದೆಯಿರದು. ’ಇಂದಿರಾ ಇಸ್ ಇಂಡಿಯಾ, ಇಂಡಿಯಾ ಇಸ್ ಇಂದಿರಾ’, ’ಇಂದಿರಾಗಾಂಧಿಯವರ ಸಂಪುಟದ ಏಕೈಕ ಗಂಡಸು ಇಂದಿರಾ ಆಗಿದ್ದರು’ ಎನ್ನುವ ಮಾತು ಚಾಲ್ತಿಗೆ ಬಂದದ್ದೂ ಅವರ ಆ ನಡುವಳಿಕೆಯಿಂದಲೇ. ಅಧಿಕಾರ ದುರುಪಯೋಗ ಮಾಡಿ, ತುರ್ತುಪರಿಸ್ಥಿತಿ ಹೇರಿದ್ದು, ಮಗ ಮಾಡಿದ್ದೆಲ್ಲವನ್ನೂ ಪುತ್ರವ್ಯಾಮೋಹದಿಂದ ಸಹಿಸಿಕೊಂಡಿದ್ದು, ಭ್ರಷ್ಟತೆಯ ಬೇರಿಗೆ ನೀರೆರೆದಿದ್ದು,’ಆಪರೇಷನ್ ಬ್ಲೂಸ್ಟಾರ್’ ಕಾರ್ಯಚರಣೆಗೆ ಮುಂದಾಗಿದ್ದು ಎಲ್ಲವೂ ಅಕ್ಷಮ್ಯಗಳೇ. ಆದರೆ ಇದರ ಜೊತೆಗೆ ಚೀನಾ ಕುತಂತ್ರದಿಂದ ಕಾಲುಕೆರೆದು ಬಂದಾಗ ಗದರಿದ್ದು, ಚಾಣಾಕ್ಷತನದಿಂದ ಯುದ್ಧ ನಿಭಾಯಿಸಿದ್ದು, ಭಾರತಕ್ಕೆ ಗೆಲುವು ತಂದು ಕೊಟ್ಟದ್ದು, ಪಾಕಿಸ್ತಾನವನ್ನೇ ಮುರಿದಿದ್ದು, ಅಣು ಪರೀಕ್ಷೆಯಂತಹ ಸಾಹಸಕ್ಕೆ ಕೈ ಹಾಕಿದ್ದು ಇಷ್ಟಪಡುವ ವಿಷಯಗಳು. ಅಪ್ಪನಂತಾಗದ ದಿಟ್ಟಮಗಳು ಇಂದಿರಾ ವೈಯಕ್ತಿಕ ಬದುಕಿನ ಎಲ್ಲ ಅಪಸವ್ಯಗಳ ನಡುವೆ ಮೆಚ್ಚುಗೆಯಾಗುವುದು ಆ ಕಾರಣಕ್ಕೆ.

-ಸುಧೀಂದ್ರ ಬುದ್ಯ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!