ಅಂಕಣ

ಯಾರು ವೀರಶೈವರು? ಯಾರು ಲಿಂಗಾಯತರು?

ಧರ್ಮ ಭಾರತದ ಮೂಲ ಸತ್ವ, ಆಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿಗಳು ರೂಪಗೊಂಡಿವೆ, ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ, ಜಗತ್ತಿನಲ್ಲಿ ಎಷ್ಟು ಧರ್ಮಗಳು ಹುಟ್ಟುಕೊಂಡಿವೆಯೋ ಗೊತ್ತಿಲ್ಲ, ಆದರೇ ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್’ನಂತಹ ಧರ್ಮಗಳು ಹಾಗೂ ರಾಮಾಯಣ, ಮಹಾಭಾರತದಾದಿಯಾಗಿ ಹಲವಾರು ಧಾರ್ಮಿಕ ನೈಜ ಘಟನೆಗಳು, ಆರ್ಯ ಸಮಾಜ, ದ್ವೈತ, ಅದ್ವೈತ, ಶೈವ, ವೈಷ್ಣವ, ಶಕ್ತಿ, ಸ್ಮಾರ್ಥ, ಬ್ರಹ್ಮ ಸಮಾಜ, ಲಿಂಗಾಯತನಂತಹ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಧಾರ್ಮಿಕ ಸುಧಾರಕರು ಕಾಲ ಕಾಲಕ್ಕೆ ಅವತರಿಸಿ ಧರ್ಮದ ಉದ್ಧಾರ ಮಾಡಿ ಹೋಗಿದ್ದಾರೆ. ತಮ್ಮ ವಿಶಿಷ್ಟ ಧಾರ್ಮಿಕ ವಿಚಾರಗಳಿಂದ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರೂ ಭಾರತಕ್ಕೆ ಆಧ್ಯಾತ್ಮದ ಮೂಲಕ ಜಗತ್ತಿನ ಗುರುವಾಗಬಲ್ಲ ಶಕ್ತಿ ಇದೆ ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರ್ನಾಟಕದಲ್ಲಿಯೂ ಶಂಕರಾಚಾರ್ಯ, ಮದ್ವಾಚಾರ್ಯ, ರಾಮಾನುಜಾಚಾರ್ಯ, ಬಸವಾದಿ ಶರಣರು, ಕನಕದಾಸ, ಪುರಂದರದಾಸ, ಸರ್ವಜ್ಞ, ರಾಘವೇಂದ್ರ ಸ್ವಾಮಿಗಳಂತಹ ಹಲವಾರು ಧಾರ್ಮಿಕ ಸುಧಾರಕರು ಕಾಲಕಾಲಕ್ಕೆ ಧರ್ಮದ ಜಾಗೃತಿ ಮೂಡಿಸಿ ಜನರ ಮೌಢ್ಯತೆಯನ್ನು ಹೋಗಲಾಡಿಸಿದ್ದಾರೆ. ಇವಲ್ಲದೇ ವಿದೇಶದಿಂದ ಬಂದ ಕ್ರಿಶ್ಚಿಯನ್, ಇಸ್ಲಾಂ, ಪಾರ್ಸಿ ಧರ್ಮಗಳಿಗೂ ಕೂಡಾ ಭರತ ಖಂಡದಲ್ಲಿ ಭವ್ಯ ಇತಿಹಾಸವಿದೆ.

ಇಂದು ಕರ್ನಾಟಕದಲ್ಲಿ ಬಹುಚರ್ಚಿತ ವಿಷಯಗಳಲ್ಲಿ ರಾಜಕಾರಣದೊಂದಿಗೆ ತಳುಕು ಹಾಕಿಕೊಂದಿರುವ ಧಾರ್ಮಿಕ ವಿಚಾರಗಳು ಮುಂಚೂಣಿಯಲ್ಲಿವೆ, ಕರ್ನಾಟಕದ ಇತಿಹಾಸದಲ್ಲಿ ಕಾಲಕಾಲಕ್ಕೆ ಧಾರ್ಮಿಕ ಗುರುಗಳು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರಾದರೂ ಬಹುದೊಡ್ಡ ಧಾರ್ಮಿಕ ಕ್ರಾಂತಿ ಎಂದರೆ 12ನೇಯ ಶತಮಾನದಲ್ಲಿ ಸರ್ವಜನಾಂಗದ ಸಮತಾವಾದವನ್ನು ಪ್ರತಿಪಾದಿಸಿದ ಬಸವಣ್ಣನವರ ಅನುಭವ ಮಂಟಪದ ಶರಣರ ವಚನ ಕ್ರಾಂತಿ. ತದನಂತರ ಅಲ್ಲಲ್ಲಿ ಆಶ್ರಮ, ದೇವಸ್ಥಾನ, ಮಠ-ಮಾನ್ಯಗಳು ಸರಳ ಭಾಷೆಯಲ್ಲಿ ರೂಪಿತವಾದ ವಚನಗಳ ಸಾರವನ್ನು ಜನರಿಗೆ ಉಣಬಡಿಸುತ್ತ ಧಾರ್ಮಿಕ ಜಾಗೃತಿ ಮೂಡಿಸುತ್ತಿವೆ, ಹೀಗಾಗಿ ಮಠಗಳಿಗೆ ಜನರೂ ಕೂಡಾ ತಮ್ಮ ತನು, ಮನ, ಧನಗಳನ್ನು ಅರ್ಪಿಸಿ ಗೌರವ ಪ್ರೀತಿಗೆ ಪಾತ್ರವಾಗಿಸಿದ್ದಾರೆ, ಆದರೆ ಇಂದು ಈ ಮಠ-ದೇವಸ್ಥಾನಗಳ ಗುರುಗಳ, ಸ್ವಾಮೀಜಿಗಳ ವಿಚಾರಗಳು, ತಮ್ಮ ನಡುವಿನ ಭಿನ್ನಾಭಿಪ್ರಾಯಗಳು, ದ್ವಂದ್ವ ನಿಲುವುಗಳು, ನಡುವಳಿಕೆಗಳು ವಿವಾದ ಹುಟ್ಟಿಸಿ ಜನರ ಮನಸ್ಸನ್ನು ಘಾಸಿಗೊಳಿಸುತ್ತಿವೆ, ಈ ವಿವಾದಕ್ಕೆ ತಾಜಾ ಉದಾಹರಣೆ ಎಂದರೆ ವೀರಶೈವ-ಲಿಂಗಾಯತದ ಭಿನ್ನಾಭಿಪ್ರಾಯಗಳು.

ಬಹುಶಃ ಈ ಬಿನ್ನಾಭಿಪ್ರಾಯಕ್ಕೆ ಬಹುದೊಡ್ಡ ಕಾರಣ ಈ ಪಂಗಡಕ್ಕೆ ಸೇರಿದ ಜನಸಂಖ್ಯೆ, ವೀರಶೈವ/ಲಿಂಗಾಯತ ಪಂಗಡ ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ರಾಜಕೀಯವಾಗಿ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ, ಒಬ್ಬರ ವಾದ ಲಿಂಗಧಾರಿಗಳೆಲ್ಲ ಸನಾತನ ಹಿಂದೂ ಧರ್ಮದ ಭಾಗವಾದ ವೀರಶೈವರು, ಇನ್ನೊಬ್ಬರ ಪ್ರಕಾರ ವಚನ ಕ್ರಾಂತಿಯ ಹರಿಕಾರ ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಧರ್ಮ ಪಾಲಿಸುವ ಲಿಂಗಾಯತರು, ಸ್ವಾಮೀಜಿಗಳ ಪ್ರಕಾರ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಆಚಾರ-ವಿಚಾರಗಳಲ್ಲಿ ಬಹುತೇಕ ಸಾಮ್ಯತೆ ಇರುವದರಿಂದ ಜನ ಸಾಮಾನ್ಯರ ಪ್ರಕಾರ ಇವೆರಡೂ ಒಂದೇ ಮತ್ತು ಭಕ್ತಾದಿಗಳೆಲ್ಲ ಕಾವಿ ಧರಿಸಿರುವ ಪಂಚಪೀಠಗಳ, ವಿರಕ್ತ ಮಠಗಳ, ಅದ್ವೈತ ಮಠಗಳ ಮತ್ತಿನ್ಯಾವುದೇ ಗುರುಗಳಿದ್ದರೂ ಅವರೆಲ್ಲರಿಗೂ ಸಮಾನ ಗೌರವ ನೀಡುತ್ತಾ ನಮ್ಮ ಮೌಢ್ಯವನ್ನು ತಿಳಿಗೊಳಿಸಿ ನಮ್ಮನ್ನು ಆಧ್ಯಾತ್ಮದ ದಾರಿಯಲ್ಲಿ ನಡೆಸುವ ದೇವರವತಾರಿ ಎಂದು ನಂಬಿರುತ್ತಾರೆ. ಇಲ್ಲಿ ಯಾರು ಸರಿ ಯಾರು ತಪ್ಪು ಎನ್ನುವದಕ್ಕಿಂತ ಈ ಭಿನ್ನಾಭಿಪ್ರಾಯಗಳ ಮೂಲ ಹುಡುಕುತ್ತಾ ಹೋದರೆ ಕೊನೆಗೆ ಬಂದು ನಿಲ್ಲುವದು ಸ್ವಪ್ರತಿಷ್ಠೆ, ಅಧಿಕಾರ, ಆಸೆ ಮತ್ತು ರಾಜಕಾರಣವೆಂಬ ಕೊಳಚೆಯ ಕೆರೆಯಲ್ಲಿ.

ವೀರಶೈವ/ಲಿಂಗಾಯತದಲ್ಲಿ ಕೆಲ ವ್ಯತ್ಯಾಸಗಳಿದ್ದರೂ, ಬಹುತೇಕ ಆಚಾರಗಳು, ಆಚರಣಾ ಪದ್ದತಿ, ರೀತಿ-ರಿವಾಜುಗಳು ಹಿಂದೂ ಧರ್ಮದ ನಕಲುಗಳೇ, ಬಸವಣ್ಣನವರೇ ಹೇಳಿಲ್ಲವೆ, ಆಚಾರವಿಲ್ಲದ ಧರ್ಮ ಅದಾವುದಯ್ಯ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು, ಹೀಗಾಗಿ ಧರ್ಮವೆಂಬುದು ಆಚಾರ-ವಿಚಾರ, ಆಚರಣೆ, ಸಂಪ್ರದಾಯಗಳಿಂದ ಹೊರತಾಗಿಲ್ಲ. ಲಿಂಗಧಾರಿಗಳಾದ ವೀರಶೈವ/ಲಿಂಗಾಯತ ಎರಡೂ ಹಿಂದೂ ಧರ್ಮದ ಭಾಗ ಮತ್ತು ಬೇರೆ-ಬೇರೆ ಹೆಸರಿನಿಂದ ಕರೆಯಲ್ಪಡುವ ಒಂದೇ ಪಂಗಡವೆಂದು ಶತ-ಶತಮಾನಗಳಿಂದಲೂ ನಂಬಿದ್ದು, ಇತ್ತಿಚೆಗೆ ಸಂಶೋಧಕರಾದ ಚಿದಾನಂದಮೂರ್ತಿ, ನಡೆದಾಡುವ ದೇವರೆಂದು ಜನಮಾನಸದಲ್ಲಿ ಚಿರಪರಿತರಾಗಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು ಕೂಡಾ ಇದನ್ನೇ ಪ್ರತಿಪಾದಿಸಿದ್ದಾರೆ. ಇದನ್ನೊಪ್ಪದ ಸ್ವತಂತ್ರ ಧರ್ಮ ಬಯಸುವ ಪ್ರತ್ಯೇಕತಾವಾದಿಗಳಿಗೆ ಸಾಮ್ಯಾನ್ಯ ಜನರ ಪ್ರಶ್ನೆಗಳು ಹೀಗಿರಬಹುದು,

1)    ಓಂ, ನಮಃ, ಕಾವಿ ಬಟ್ಟೆ, ಕುಂಕುಮ, ಬಸ್ಮ, ರುದ್ರಾಕ್ಷಿ, ಲಿಂಗ, ಬಿಲ್ವ ಪತ್ರೆ ಇವೆಲ್ಲ ಅನಾದಿ ಕಾಲದಿಂದಲೂ ಸನಾತನ ಹಿಂದೂ ಧರ್ಮದ ಸಂಕೇತಗಳಾಗಿ ಬಳಕೆಯಲ್ಲಿವೆ ಹಾಗೂ ಇವುಗಳ ಬಗೆಗೆ ಪುರಾಣ, ಶಾಸ್ತ್ರ, ವೇದ, ಆಗಮಗಳಲ್ಲಿ ವಿಶೇಷ ಅರ್ಥ-ಕಾರಣಗಳಿವೆ, ವೇದಾಗಮನಗಳನ್ನು ಒಪ್ಪದ ಪ್ರತ್ಯೇಕತಾವಾದಿಗಳು, ಇವನ್ನೆಲ್ಲ ಬಳಸುವ ನೀವು ಅದು ಹೇಗೆ ಸ್ವತಂತ್ರ ಧರ್ಮದವರಾಗುತ್ತೀರಿ?

2)    ಏಕದೇವೂಪಾಸಕರಾದ ಪ್ರತ್ಯೇಕತಾವಾದಿ ಲಿಂಗಾಯತರು ಹಿಂದೂಗಳ ಹಬ್ಬ-ಹರಿದಿನಗಳಾದ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಮಣ್ಣತ್ತಿನ ಹಬ್ಬ, ನಾಗರ ಪಂಚಮಿ, ಗಣೇಶ ಚತುರ್ಥಿ, ರಕ್ಷಾ ಬಂಧನ, ದಸರಾ, ದೀಪಾವಳಿ, ಗೌರಿ ಹುಣ್ಣಿಮೆ, ಶಿಗಿ ಹುಣ್ಣಿಮೆ, ಎಳ್ಳು ಅಮವಾಸ್ಯ, ಹೋಳಿ ಹುಣ್ಣಿಮೆ ಯಾವುದನ್ನೂ ಆಚರಿಸಬಾರದು. ಇದರಲ್ಲಿ ಯಾವುದೇ ಹಬ್ಬ ಆಚರಿಸಿದರೂ ಅವರು ಹಿಂದೂ ವೀರಶೈವರಾಗುತ್ತಾರೆ, ಅವರ್ಯಾರೂ ಪ್ರತ್ಯೇಕತಾವಾದಿ ಲಿಂಗಾಯತರಲ್ಲ.

 3)    ಹಣೆಗೆ ಕುಂಕುಮ, ಕೈ ಬಳೆ, ಕಿವಿಯೂಲೆ, ಮೂಗುನತ್ತು, ಕಾಲುಂಗುರ, ಮಂಗಳ ಸೂತ್ರ(ತಾಳಿ) ಇವೇಲ್ಲ ಹಿಂದೂ ಸಂಪ್ರದಾಯಗಳು. ನಿಮ್ಮ ಪ್ರತ್ಯೇಕ ಧರ್ಮದಲ್ಲಿ ಇವುಗಳ ಆಚರಣೆಗಳ ಉಲ್ಲೇಖವೇನಾದರೂ ಇದೆಯೇ, ಇಲ್ಲವಾದರೇ ಇವೆಲ್ಲವನ್ನೂ ಬಳಸುವ ಮಾತೆ, ಸಹೋದರಿಯರು ವೀರಶೈವರೇ ಹೊರತು, ಲಿಂಗಾಯತರಲ್ಲ.

4)    ಮಂತ್ರಗಳು, ಮಂಗಳಾರತಿಗಳು, ಅಮವಾಸ್ಯ-ಹುಣ್ಣಿಮೆಗಳು, ಪಂಚಾಂಗ, ಸಂವತ್ಸರಗಳು, ಮನ್ವಂತರಗಳು, ವಾರದ(ಮಂಗಳ ಗೌರಿ, ಶುಕ್ರ ಗೌರಿ)ವ್ರತಗಳು, ಪುರಾಣ ಪಾರಾಯಣ, ಹೋಮ, ಹವನ, ವೇದಘೋಷಗಳು, ಜ್ಯೋತಿಷ್ಯ ಶಾಸ್ತ್ರ ಹಿಂದೂ ಧರ್ಮಕ್ಕೆ ಸೇರಿದ ಆಚರಣೆಗಳು, ಲಿಂಗಧಾರಿಗಳಾಗಿ ಇದನ್ನೆಲ್ಲ ನಂಬುವ ದಿನನಿತ್ಯದ ಜೀವನದಲ್ಲಿ ಅರಿತೋ, ಅರಿಯದೆಯೋ ಇವನ್ನಾಚರಿಸುವ ಸಾಮಾನ್ಯ ಜನ ಮತ್ತು ತಮ್ಮ-ತಮ್ಮ ಮದುವೆಗಳಲ್ಲಿ ಹಿಂದೂ ಧರ್ಮದ ಸಂಸ್ಕೃತ ಭಾಷೆಯ “ಮಾಂಗಲ್ಯಂ ತಂತು ನಾನೆನಾ” ಮಂತ್ರ ಕೇಳಿ ಮದುವೆಯಾದವರಾರು ಲಿಂಗಾಯತರಲ್ಲ, ಅವರೆಲ್ಲ ಹಿಂದೂ ವೀರಶೈವರೇ?

5)    ಹಿಂದೂಗಳಿಗೆ ಯುಗಾದಿಯಿಂದ ಪ್ರಾರಂಭವಾಗುವ ಹುಣ್ಣಿಮೆ, ಅಮವಾಸ್ಯ, ಪಕ್ಷ(ಕೃಷ್ಣ- ಶುಕ್ಲ), ಋತುಗಳು, ಆಯನಗಳು(ಉತ್ತರಾಯಣ-ದಕ್ಷಿಣಾಯಣ) ಸಂವತ್ಸರಗಳಿರುವ ಸೂರ್ಯ-ಚಂದ್ರ, ಗ್ರಹಗಳಾಧರಿತವಾದ “ಲ್ಯೂನಿಸೋಲಾರ” ಪದ್ದತಿಯ ಕ್ಯಾಲೆಂಡರ್, ಇದೇ ರೀತಿ ಇಸ್ಲಾಂಗೂ ಹೀಜ್ರಿ ಆರಂಭದ ಅವರದೆ ಆದ ಕ್ಯಾಲೆಂಡರ್ ಪದ್ದತಿಯಿದೆ, ಕ್ರಿಶ್ಚಿಯನ್ ಧರ್ಮ ಕೂಡಾ ಜನವರಿ 1 ರಿಂದ ಆರಂಭಗೊಳ್ಳುವ ಗ್ರೆಗೋರಿಯನ ಪದ್ದತಿಯ ಕ್ಯಾಲೆಂಡರ್ ಜಾರಿಯಲ್ಲಿದೆ, ಇದೆಲ್ಲದರ ಹೊರತು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕಾಲಚಕ್ರ ಅಥವಾ ಪಂಚಾಂಗ ಸೂಚಿಸುವ ಪ್ರತ್ಯೇಕ ವ್ಯವಸ್ಥೆ ಏನಾದರೂ ಇದೆಯೇ? ಧರ್ಮ ಸಂಸ್ಥಾಪಕ ಬಸವಣ್ಣನವರ ಜಯಂತಿಯನ್ನೂ ಹಿಂದೂ ಪಂಚಾಂಗ ಪದ್ದತಿಯ ವೈಶಾಖ ಮಾಸದ 3ನೇಯ ದಿನ ಆಚರಿಸುತ್ತಿರಿ ಎನ್ನುವದು ನೆನಪಿರಲಿ.

6)ಮೂರ್ತಿ ಪೂಜೆ ಹಿಂದೂ ಧರ್ಮದ ನಂಬಿಕೆ, ಸಂಕೇತ, ಹೀಗಾಗಿ ಶತಮಾನಗಳಿಂದಲೂ ತಾವು ನೆಲೆಸಿರುವ ಸ್ಥಳಗಳಲ್ಲಿ ತಮ್ಮ ಇಷ್ಟದ ದೇವರ ಮೂರ್ತಿ ಪ್ರತಿಷ್ಟಾಪಿಸಿ ಮಠ, ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ, ಅಂದು ಮೂರ್ತಿ ಪೂಜೆ ವಿರೋಧಿಸಿ ಇಷ್ಟಲಿಂಗದ ಆಚರಣೆ ತಂದ ಶರಣರ ದೊಡ್ಡ-ದೊಡ್ಡ ಮೂರ್ತಿಗಳನ್ನು ಇಂದು ಪ್ರತ್ಯೇಕವಾದಿಗಳು ಸ್ಥಾಪಿಸಿರುವುದು, ಆ ಶರಣರ ಆದರ್ಶಗಳಿಗೆ, ಅವರ ಚಿಂತನೆಗಳಿಗೆ ಮಾಡಿದ ನಂಬಿಕೆ ದ್ರೋಹವಲ್ಲವೇನು? ಶರಣರ ಮೂರ್ತಿ ಸ್ಥಾಪಿಸುವದಾದರೇ ಇಷ್ಟಲಿಂಗದ ಅರ್ಥವೇನು? ಮೂರ್ತಿ ಸ್ಥಾಪಿಸಿ, ಪೂಜಿಸುವ ನೀವೂ ಹಿಂದುಗಳಲ್ಲವೇನು?

7)ತಮ್ಮ ವಚನ ಕ್ರಾಂತಿಯ ಮೂಲಕ ಸಂಚಲನ ಸೃಷ್ಟಿಸಿದ್ದ ಬಸವಣ್ಣ ಕೂಡಲ ಸಂಗಮನಾಥವೆಂಬ ಸ್ಥಾವರಲಿಂಗವನ್ನು, ಅಲ್ಲಮಪ್ರಭುಗಳು ಗುಹೇಶ್ವರನೆಂಬ ಸ್ಥಾವರಲಿಂಗವನ್ನು, ಅಕ್ಕಮಹಾದೇವಿ ಮಲ್ಲಿಕಾರ್ಜುನನೆಂಬ ಸ್ಥಾವರಲಿಂಗವನ್ನು, ಜೇಡರ ದಾಸಿಮಯ್ಯ ರಾಮನಾಥನೆಂಬ ಸ್ಥಾವರಲಿಂಗವನ್ನು ತಮ್ಮ ವಚನಗಳ ಅಂಕಿತವಾಗಿ ಬಳಸಿಕೊಂಡಿದ್ದೇಕೆ ಎಂಬ ಅನುಮಾನಗಳು ಸಾಮಾನ್ಯ ಮನುಷ್ಯರಲ್ಲಿ ಮೂಡುವದು ಸಹಜ.

8)    ಬಸವಣ್ಣ ಲಿಂಗಾಯತದ ಉಪಜಾತಿಗಳ ಜನರನ್ನು ಸೇರಿಸಿ ಅವರ ಶ್ರೇಯಾಭಿವೃದ್ಧಿಗೆ ಮಾತ್ರ ಶ್ರಮಿಸದೇ ಹಿಂದೂ ಧರ್ಮದ ಬ್ರಾಹ್ಮಣ ಮತ್ತು ಹರಿಜನ(ಮಾದಿಗ) ಜನಾಂಗದವರಿಗೆ ಮದುವೆ ಮಾಡಿಸಿದ್ದು ಯಾಕೆ? ಸಮಾನತೆಗಾಗಿ ಆದ ಮಹಾಕ್ರಾಂತಿಯಾಗಿ 8 ಶತಮಾನಗಳೇ ಕಳೆದರೂ ವಚನಕಾರರ ಜಾತಿ ಅವರನ್ನೂ ಬಿಟ್ಟಿಲ್ಲ, ಇಂದಿಗೂ ಅವರನ್ನು ಗುರುತಿಸುವದು ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚೀದೇವ, ಹಡಪದ ಅಪ್ಪಣ್ಣ, ಆಯ್ದಕ್ಕಿ ಲಕ್ಕಮ್ಮ, ಕುರುಬ ಗೊಲ್ಲಾಳೇಶ್ವರ, ಹೂಗಾರ ಮಾರಯ್ಯ, ಹೇಮರೆಡ್ಡಿ ಮಲ್ಲಮ್ಮ, ಜೇಡರ ದಾಸಿಮಯ್ಯ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯನೆಂದು ಯಾಕೆ?

9)    ನೀವೆಲ್ಲ ಹೇಳುವ ಏಕದೇವೋಪಾಸನೆ ಮಾಡುವ ಜನ ಎಷ್ಟಿದ್ದಾರೆ?. ಹುಟ್ಟಿನಿಂದ ಲಿಂಗಾಯತ/ವೀರಶೈವವಾದರೊ ಎಲ್ಲಾ ಜನರೊ ಬಹುದೇವೋಪಾಸಕರೇ. ಹಿಂದೂ ಧರ್ಮದ ಮೂಕ್ಕೋಟಿ ದೇವರಲ್ಲಿ ಬಸವಣ್ಣನೂ, ಅಲ್ಲಮಪ್ರಭುಗಳೂ, ಅಕ್ಕಮಹಾದೇವಿಯೂ, ಚನ್ನಬಸವಣ್ಣನೂ ಒಬ್ಬರೆಂದು ಪೂಜಿಸಲ್ಪಡುತ್ತಿದ್ದಾರೆ ಏಕದೇವೋಪಾಸನೆ ಎಂದರೆ ನಿರಾಕಾರಿಯಾದ ದೇವರನ್ನು ಲಿಂಗದ ರೂಪಿಯಾಗಿ ಪೂಜಿಸಲ್ಪಡುವ ಲಿಂಗವೇ? ಒಂದು ವೇಳೆ ಲಿಂಗ ಮಾತ್ರ ದೇವರು, ಬಸವಣ್ಣ ದೇವರಲ್ಲಿಗೆ ಮಾರ್ಗ ತೋರುವ ಪ್ರವಾದಿ ಎಂದಾದರೇ, ಅನುಭವ ಮಂಟಪದ ಸಭಾಧ್ಯಕ್ಷ ಅಲ್ಲಮ ಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಯಡಿಯೂರು ಸಿದ್ದಲಿಂಗ ಯತಿಗಳು, ಸೊನ್ನಲಿಗೆ ಸಿದ್ದರಾಮನಂತಹ ವಚನಕಾರರೆಲ್ಲ ಗುರುಗಳಲ್ಲವೇನು? 770 ಅಮರಂಗಗಳು, ಕಲಬುರುಗಿಯ ಶರಣಬಸವೇಶ್ವರ, ಮುರುಘಾ ಮಠ, ಸಿದ್ಧಗಂಗಾ ಮಠ, ಹಾನಗಲ್ಲ ಕುಮಾರಸ್ವಾಮಿ ಮಠ, ಮೂರುಸಾವಿರ ಮಠ, ನೀಡಸೂಸಿ ಮಠ, ಹಾವೇರಿಯ ಹುಕ್ಕೇರಿ ಮಠ, ತೋಂಟದಾರ್ಯ ಮಠ, ಶಿವಾನಂದ ಮಠ, ಬೇಲಿ ಮಠ, ಗಚ್ಚಿನ ಮಠ, ದಿಂಗಾಲೇಶ್ವರ ಮಠ, ಗುದ್ಲೇಶ್ವರ ಮಠ, ಇಳಕಲ್ ಮಠ, ಮೂರಗೊಡು ಹಿರೇಮಠನಂತಹ ಮಠ-ಮಾನ್ಯಗಳನ್ನು ಕಟ್ಟಿ ಧರ್ಮ ಪ್ರಚಾರ ಮಾಡಿದ ಪೂಜ್ಯ ಮಹನೀಯರಾರು ದೇವರಲ್ಲವೇ? ಅಥವಾ ಧರ್ಮ ಗುರುಗಳಲ್ಲವೇ? ಇಂದಿಗೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಸಹಿತ ಹಲವು ರಾಜ್ಯಗಳಲ್ಲಿ ವಚನಕಾರರ, ಧರ್ಮದ ಪೂಜ್ಯರ ಮಠ-ಮಂದಿರ ದೇವಾಲಯಗಳಿವೆ, ಇಷ್ಟಲಿಂಗ ಮಾತ್ರ ದೇವರಾದರೆ ದೇವಾಲಯ, ಶಿವಾನುಭವ, ಜಾತ್ರೆ, ರಥಗಳೇಕೆ ಬೇಕು?

ಧರ್ಮದ ಒಡಕಿಗೆ ರಾಜಕೀಯದ ಕರಿಛಾಯೆ :

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಗಳು ಭಾರತ ಸ್ವತಂತ್ರವಾದ ನಂತರದ ದಿನಗಳಲ್ಲಿ ಚಿಕ್ಕದಾಗಿ ಪ್ರಾರಂಭಗೊಂಡು, ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಂಡಿದ್ದು ಬೃಹತ್ ಸಭೆಗಳ ಮೂಲಕ ಹೋರಾಟದ ಕಿಚ್ಚು ಹೆಚ್ಚಿದೆ, ಆದರೆ  ಈ ಕಿಚ್ಚು ಯಾವುದೇ ಸೈದ್ಧಾಂತಿಕ ಚರ್ಚೆಗಳಿಲ್ಲದೆ, ಕೇವಲ ವೃತಾ ನಿಂದನೆ, ಆರೋಪ-ಪ್ರತ್ಯಾರೋಪಗಳಿಂದಾಗಿ ಗೊಂದಲಗಳ ಗೂಡಾಗಿ ರಾಜಕೀಯದ ಕರಿಛಾಯೆಯ ಲಕ್ಷಣಗಳು ಗೋಚರಿಸುತ್ತಿವೆ, ಇದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿರುವ ಶಂಕೆಗಳು ದಟ್ಟವಾಗಿವೆ, 2014ರಲ್ಲಿ ಮಾಹಾಪತನ ಕಂಡು ಪಾತಾಳಕ್ಕೆ ಕುಸಿದಿರುವ ಪಕ್ಷ, ಇಂದು ತನ್ನ ಅಸ್ತಿತ್ವಕ್ಕಾಗಿ ಭಾರತದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ನಡೆಗಳನ್ನು ಗಮನಿಸಿದರೆ ಹರಿಯಾಣದಲ್ಲಿ ಜಾಟ್ ಸಮುದಾಯ, ಆಂದ್ರದಲ್ಲಿ ಕಾಪು ಸಮುದಾಯ, ಮಹಾರಾಷ್ಟ್ರದಲ್ಲಿ ಮರಾಠಿ ಸಮುದಾಯ, ಗುಜರಾತಿನಲ್ಲಿ ಪಾಟಿದಾರ್/ಪಟೇಲ್ ಸಮುದಾಯಗಳು ಮೀಸಲಾತಿಗಾಗಿ ಮತ್ತು ಪ್ರತ್ಯೇಕ ಧರ್ಮಕ್ಕಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಲಿಂಗಾಯತರ ಹೊರಾಟಗಳೆಲ್ಲ ನರೇಂದ್ರ ಮೋದಿಯವರ ಕೆಂದ್ರ ಸರ್ಕಾರದತ್ತ ಬೆರಳು ಮಾಡಿರುವದು ಮತ್ತು ಈ ಎಲ್ಲಾ ಹೋರಾಟಗಳಲ್ಲಿ ಕಾಂಗ್ರೆಸ್ಸಿನ ನಾಯಕರು ಅಥವಾ ಬೆಂಬಲಿತ ನಾಯಕರು ಮುಂಚೂಣಿಯಲ್ಲಿರುವುದು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿವೆ.

ಸ್ವಾಮಿ ವಿವೇಕಾನಂದ, ಶಂಕರಾಚಾರ್ಯ, ಇಸ್ಕಾನಿನ ಸ್ವಾಮಿ ಪ್ರಭುಪಾದ, ಸದ್ಗುರು ಜಗ್ಗಿ ವಾಸುದೇವ್, ಮಂತ್ರಾಲಯದ ರಾಘವೇಂದ್ರ ಸ್ವಾಮಿ, ಶ್ರೀ ಶ್ರೀ ರವಿಶಂಕರ, ಮಾತಾ ಅಮೃತಾನಂದಮಯಿ, ಸಾಯಿಬಾಬಾನಂತಹ ಹಲವಾರು ಧಾರ್ಮಿಕ ಗುರುಗಳು ದೇಶ-ವಿದೇಶಗಳಲ್ಲಿ ಕೋಟಿ-ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ, ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅವರೇಕೆ ಪ್ರತ್ಯೇಕ ಧರ್ಮಕ್ಕೆ ಹೋರಾಟ ಮಾಡದೇ ಹಿಂದೂವಾಗಿರಲು ಇಚ್ಚಿಸುತ್ತಾರೆ? ಮೇಲು-ಕೀಳು ಎನ್ನದೇ ಹಿಂದೂ ಸಮಾಜದ ಜನರನ್ನೆಲ್ಲ ಒಗ್ಗೂಡಿಸುವ ಪ್ರಯತ್ನ ಮಾಡಿದ ಬಸವಣ್ಣನಿಗೆ ಇಂದು ಧರ್ಮ ಸಂಸ್ಥಾಪಕ, ಧರ್ಮ ಗುರು ಅಂತೆಲ್ಲ ಬಿರುದು ಕೊಡುತ್ತ ಜಾತಿಗೂಂದು ಮಠ-ಪೀಠ ಮಾಡಿಕೊಂಡಿದ್ದಿರೇಕೆ? ಇದು ಬಸವಣ್ಣನವರ ಆದಿಯಾಗಿ ಸಮಾಜದ ಎಲ್ಲಾ ವಚನಕಾರರಿಗೆ ಮಾಡಿದ ದ್ರೋಹವಲ್ಲವೇನು? ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದ ಬಸವಣ್ಣ ಕೇವಲ ಧರ್ಮಗುರು ಆದರೆ ಬಸವಾದಿ ಶರಣರ ತತ್ವಗಳನ್ನು ತಿಳಿಸುವ ಸ್ವಾಮೀಜಿಗಳು ಮಾತ್ರ ಜಗದ್ಗುರು(ಜಗತ್ತಿಗೆ ಗುರು), ಮಹಾಜಗದ್ಗುರು ಹೇಗೆ? ನೀವೆಲ್ಲ ಬಸವಣ್ಣನವರಿಗಿಂತ ದೊಡ್ದವರೆ? ಇದು ಶರಣರಿಗೆ ಮಾಡುವ ಅವಮಾನವಲ್ಲವೇನು?

ಸರ್ವರಿಗೂ ಲೇಸನ್ನೆ ಬಯಸಿದ ಬಸವಣ್ಣನವರನ್ನು ಧರ್ಮ ಸ್ಥಾಪಕ ಎಂಬ ಬಿರುದು-ಬಿನ್ನಾವಳಿಯನ್ನಿತ್ತು, ಕೇವಲ ಲಿಂಗಾಯತರಿಗಷ್ಟೇ ಸೀಮಿತರೆಂಬ ಧರ್ಮದ ಸಂಕೋಲೆ ತೊಡಿಸದಿರಿ, ಬಸವಣ್ಣನವರ ವಿಚಾರಧಾರೆಗಳು ಸರ್ವರಿಗೂ ಸಲ್ಲಬೇಕಾದ ವಿಶ್ವಮಾನವ ಸಂದೇಶಗಳು, ಅವರ ಹೆಸರನ್ನೇಳಿ ನಿಮ್ಮಗಳ ವೈಯಕ್ತಿಕ ವರ್ಚಸ್ಸು, ಲಾಭ, ಪ್ರಚಾರ, ಪೀಠ, ಪ್ರಶಸ್ತಿ, ಬಿರುದುಗಳಿಗಾಗಿ ಬಳಸಿಕೊಳ್ಳದೆ, ಎಲ್ಲರಿಗೂ ತಮಗಿಷ್ಟವಿರುವ ದೈವಾಚರಣೆ ಮಾಡುವುದನ್ನು ಅವರವರ ಇಷ್ಟಕ್ಕೆ ಬಿಟ್ಟು ಬಸವಣ್ಣನವರ ವಿಚಾರಗಳ ಮೂಲಕ ಜನರನ್ನು ಆಧ್ಯಾತ್ಮದತ್ತ ಕರೆದೊಯ್ಯುವ ಧರ್ಮ-ಜಾಗೃತಿ ಕಾಯಕದಲ್ಲಿ, ಕೈಲಾಸವನ್ನು ಕಂಡು ಅವರನ್ನು ವಿಶ್ವಮಾನವರನ್ನಾಗಿರಲು ಬಿಡಿ. ಹೀಗಾದರೆ ಧರ್ಮವೂ ಬೆಳೆಯುತ್ತದೆ, ತಮ್ಮಗಳ ಗೌರವವೂ ಬೆಳೆಯುತ್ತದೆ. ಇಂದು ವೀರಶೈವರೊಂದಿಗೆ ಬಂದಂತಹ ಭಿನ್ನಾಭಿಪ್ರಾಯಗಳು, ಸ್ವಪ್ರತಿಷ್ಠೆ, ಅಧಿಕಾರದ ಆಶೆಗಳು ಮುಂದೊಂದು ದಿನ ಲಿಂಗಾಯತದ ಉಪಪಂಗಡಗಳಲ್ಲಿಯೂ ಒಡಕು, ಮನಸ್ತಾಪಗಳು ಬರುವದಿಲ್ಲವೆಂಬ ಖಾತರಿ ಇದೆಯೇ? ಮಡಿವಾಳ ಪಂಗಡದವರೆಲ್ಲ ಮಾಚೀದೇವನನ್ನು, ಮಾದಿಗರೆಲ್ಲ ಚೆನ್ನಯ್ಯನವರನ್ನು, ಅಂಬಿಗರೆಲ್ಲ ಚೌಡಯ್ಯನವರನ್ನು, ಹಡಪದ ಪಂಗಡದವರೆಲ್ಲ ಅಪ್ಪಣ್ಣನವರನ್ನು ಗುರುವಾಗಿ ಮತ್ತು ಅವರ ವಚನಗಳನ್ನು ಗ್ರಂಥವಾಗಿ ಮಾಡುತ್ತಾ ಹೋದರೆ ಲಿಂಗಾಯತವು ಚೂರು-ಚೂರಾಗಿ ನಾಶವಾಗುತ್ತದೆ, ಎಲ್ಲರೂ ನಮ್ಮವರೆಂಬ ಭಾವ ಸೃಷ್ಟಿಸುವ ಬಸವಣ್ಣನವರ ವಚನವನ್ನೊಮ್ಮೆ ನೆನಪಿಸಿಕೊಳ್ಳಿ – ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ನಮ್ಮ ಮನೆ ಮಗನೆಂದಿಸಯ್ಯ ಕೂಡಲ ಸಂಗಮದೇವ.

ಹಿಂದೂ ಎನ್ನಲೂ ಭಯವೇಕೆ? ಕೇವಲ 800 ವರ್ಷಗಳ ಬಸವಣ್ಣನವರ ಕಾಲ್ಪನಿಕ ಧರ್ಮದ ಬಗ್ಗೆ ಇಷ್ಟೊಂದು ಪ್ರಶ್ನೆಗಳಿದ್ದರೆ, 5000 ವರ್ಷಗಳ ಧರ್ಮದಲ್ಲಿ ಸಾಕಷ್ಟು ವೈವಿಧ್ಯಮಯ ಆಚಾರಗಳಿರಿವುದು ಸಹಜವೆ, ಅಂಕು-ಡೊಂಕುಗಳಿದ್ದರೆ ಅದನ್ನು ತಿದ್ದಿ ತೀಡಲು ಅವಕಾಶಗಳಿಗೇನು ಕೊರತೆಯಿಲ್ಲ, ಆದರೆ ಅದನ್ನು ವಿರೋಧಿಸುತ್ತಾ ಪಲಾಯನವಾದ ಮಾಡಿ ಪ್ರತ್ಯೇಕತೆಯ ಕೂಗು ಝೇಂಕರಿಸುವದು ಇದ್ದ ಧರ್ಮಕ್ಕೂ ಪ್ರತ್ಯೇಕಿಸಿಸುವ ಹೊಸ ಧರ್ಮಕ್ಕೂ ಮಾಡುವ ಘನಘೋರ ಅಪಚಾರವಾದೀತು. ಸ್ವಾಮೀಜಿಗಳಿಗೆ ಬುದ್ದಿ ಹೇಳುವಷ್ಟು ದೊಡ್ಡವನು ನಾನಲ್ಲ, ಆದರೇ ಏನನ್ನೂ ಅರಿಯದ ಅಮಾಯಕ ಜನರನ್ನೂ ಹೊಸ ಧರ್ಮದಿಂದ ಲಾಭಗಳಾಗುತ್ತದೆ ಎಂಬ ಭಾವನೆಗಳಿಂದ ಬಂಧಿಸದಿರಿ, ಕೂಡಿ ಬಾಳಿದರೆ ಸ್ವರ್ಗಸುಖ ಎಂದು ಅರಿತು ನಡೆದರೆ ಸಮಾಜ ಸ್ವಸ್ಥವಾಗಿ ಆಧ್ಯಾತ್ಮದ ಉತ್ತುಂಗಕ್ಕೆ ತಲುಪಬಹುದು.

ಕೊನೆಗೆ ನಮಗೆಲ್ಲ ಕಾಡುವ ಕಟ್ಟ ಕಡೆಯ ಪ್ರಶ್ನೆ ಯಾರು ವೀರಶೈವ? ಯಾರು ಲಿಂಗಾಯತ?

-ಪರಪ್ಪ ಶಾನವಾಡ

ಗದಗ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!