ಇರುಳ ಗುರುತಿಸುತ್ತೇವೆ ಕೇವಲ
ಅದು ಹೊತ್ತು ತರುವ ತಾರೆಗಳಿಂದ..
ಇರಬಾರದೇನು ಅದಕೂ ಗಮನದ ಗುಂಗು?
ಜೀವವಿಲ್ಲದಿದ್ದರೂ ಗರ್ವವಿದೆ,
ಬಿಟ್ಟ ಬಿರುಕುಗಳಿಗೆಲ್ಲ ದೃಷ್ಟಿ ಬೀಳಬೇಕಿದೆ,
ವರ್ತಮಾನವೂ ಬೇಡುತ್ತದೆ ಕುತೂಹಲ..
ಹೆಣವೀಗ ಬಯಸುತಿದೆ ರಂಗಿನ ಶಾಲು,
ಭಾರವೇರಿದ್ದಕ್ಕೆ ಒಳಗೊಳಗೆ ಅದು ಮರುಗುತ್ತದೆ..|
ಯಾರಿಗೂ ಕೈಸೇರದ ಕಾಸಿನ ಸರಕ್ಕೆ
ಗುರಿಯಿಟ್ಟು ಎಸೆದ ರಿಂಗು ಬೀಳುತ್ತದೆ
ಸಕ್ಕರೆ ಗೊಂಬೆಯ ಮೇಲೆ..
ಗವುಜಿನಲ್ಲಿ ತಕ್ಕಡಿಯ ಏರುತ್ತದೆ
ಸುಮ್ಮನೆ ಕೊಳೆತ ಸವತೆ..
ವೈಚಿತ್ರ್ಯ ಮೂಲವಾಗುತ್ತದೆ ಅಸ್ತಿತ್ವಕ್ಕೆ..
ಗುರುತಾಗುತ್ತದೆ ಕಣ್ಣೀರು,
ಆವರ್ತಕ್ಕೂ ಬೇಕು ಭೂಮಿಯ ಪಾಲು,
ಸಣ್ಣತನವೆಲ್ಲ ಹತ್ತಿರ ಬರುತ್ತವೆ
ತಾವು ಹಿರಿಯರೆಂದು ರುಜುವಾತು ಮಾಡಲು..
ಚಲನೆಗೆ ಇನ್ನೊಂದು ಚಲನೆ ಗೇಲಿ ಮಾಡುತ್ತದೆ,
ಆದರೆ ಜಡತ್ವಕ್ಕಿದೆ ಒಗ್ಗಟ್ಟು,
ಇದೊಂದರಲ್ಲಾದರೂ ತಾ ಚುರುಕೆಂದುಕೊಳ್ಳುತ್ತದೆ..|
ಆಕಾರ ತಾನೇ ದೇವರೆನ್ನುತ್ತದೆ,
ಆರೋಪಿಸುತ್ತದೆ ರೂಪಗಳನ್ನು
ಹೀಗೆಯೇ ಇರಬೇಕೆಂದು..
ತನ್ನೊಳಗೆ ಆತ್ಮವಿದೆ ಎಂದುಕೊಳ್ಳುತ್ತದೆ
ಕನ್ನಡಿಯ ಪ್ರತಿಬಿಂಬ,
ಬದುಕು ಇರುವುದು ಶೂನ್ಯದಲ್ಲಾದರೂ,
ತಾನಿಟ್ಟುಕೊಂಡ ನಾಲ್ಕು ಗೋಡೆಗಳಿಂದ,
ಹೆಸರು ಪಡೆದುಕೊಳ್ಳುತ್ತದೆ ಮನೆ…
ಒಳಗೆ ಇರುವ ಸತ್ತವನ
ಹೆಸರ ಪಡೆಯುತ್ತದೆ ಗೋರಿ..
ಮುಗುಳ್ನಗುತ್ತದೆ ತನ್ನೊಳಗೆ ಅನಂತ
ರಿಕ್ತವೆಂದು ಹಳಿಸಿಕೊಳ್ಳುವಾಗ..||
–ಪ್ರಸಾದ ಸಿದ್ಧೇಶ್ವರ
ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿ,
ಮೂರನೇ ವರ್ಷ, ಸರ್ ಎಮ್ ವಿ ಐ ಟಿ ಬೆಂಗಳೂರು.