“ಯಾರು ಏನೇ ಹೇಳಲಿ, ಎಷ್ಟೇ ವಿರೋಧಿಸಿದರೂ ಸರಿ, ನಾನು ಟಿಪ್ಪು ಜಯಂತಿ ಮಾಡಿಯೇ ಸಿದ್ಧ” ಎಂದು ನಮ್ಮ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಹೇಳಿಕೆ ನೀಡಿದಾಗಿನಿಂದ, ಮೊದಲೇ ಟಿಪ್ಪು ಜಯಂತಿ ವಿರೋಧಿಸುತ್ತಿದ್ದವರೆಲ್ಲರೂ ಮತ್ತಷ್ಟು ಉಗ್ರವಾಗಿ, ಕರ್ನಾಟಕದ ತುಂಬೆಲ್ಲಾ ಟಿಪ್ಪು ಜಯಂತಿ ವಿರೋಧಿ ಅಲೆಯೇ ಬಿಸಿ-ಬಿಸಿ ಸುದ್ದಿಯಾಗಿದೆ ಇಂದು. ಅಸಲಿಗೆ ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ ಎಂಬುದಕ್ಕೆ ಸಾವಿರಾರು ಐತಿಹಾಸಿಕ ನಿದರ್ಶನಗಳಿವೆ. ಅವನು ತನ್ನ ಅಧಿಕಾರಾವಧಿಯಲ್ಲಿ ನಡೆಸಿದ ಹಿಂಸಾಕಾಂಡಗಳು ಅದೆಷ್ಟು ಭೀಭತ್ಸವಾಗಿದ್ದವು ಎಂಬುದನ್ನು ಸಾಕ್ಷಿ ಸಮೇತ ಹೇಳುವಂತಹ ಐತಿಹಾಸಿಕ ಪುರಾವೆಗಳು ಲಭ್ಯವಿದೆ. ಇಷ್ಟೆಲ್ಲಾ ತಿಳಿದಿದ್ದರೂ, ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಎಂದು ತಿರುಚಿ ಬರೆಯಲಾದ ಇತಿಹಾಸವನ್ನೇ ನಿಜವೆಂದು ಸಾರತ್ತಾ ಅದನ್ನೇ ನೆಚ್ಚಿಕೊಂಡು, ಹಠಕ್ಕೆ ಬಿದ್ದು ಅಂತಹ ನರಹಂತಕ ದೇಶದ್ರೋಹಿಯ ಜಯಂತಿಯನ್ನು ಮಾಡಲು ಹೊರಟಿರುವ ನಮ್ಮ ಮುಖ್ಯಮಂತ್ರಿಗಳಿಗೆ ಏನೆನ್ನಬೇಕೋ? ಇದನ್ನೆಲ್ಲಾ ನೋಡುತ್ತಿದ್ದರೆ ನಮಗೆ ಒಂದು ಸತ್ಯವಂತೂ ತಿಳಿಯುತ್ತದೆ. ಮುಸ್ಲಿಮರ ಮನ ಓಲೈಕೆಗಾಗಿ ಸಿದ್ಧರಾಮಯ್ಯನವರು ಇದನ್ನು ಮಾಡುತ್ತಿದ್ದಾರೆಂಬುದು ಎಂತಹ ತಿಳಿಗೇಡಿಗೂ ತಿಳಿಯುವ ಸತ್ಯ. ಯಾಕೆಂದರೆ ಇಷ್ಟೊಂದಷ್ಟು ಹಠ ಹೊತ್ತು ಮಾಡುವ ಈ ಟಿಪ್ಪು ಜಯಂತಿಯಿಂದ ಯಾರಿಗೇನು ಲಾಭವಿದೆ? ಜೀವನೋಪಾಯವೇ ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ, ಹಾಸಿ-ಹೊದೆಯುವಷ್ಟು ಸಮಸ್ಯೆಗಳು ನಮ್ಮ ಕಣ್ಮುಂದೆ ಇರುವಾಗ, ಇಂತಹ ಸಮಸ್ಯೆಗಳ ಕುರಿತು ಗಮನ ಹರಿಸದೇ ಮುಖ್ಯಮಂತ್ರಿಗಳು ಕೆಲಸಕ್ಕೆ ಬಾರದ ಟಿಪ್ಪು ಜಯಂತಿಯನ್ನು ಮಾಡಲು ಹೊರಟಿದ್ದಾರೆ. ಟಿಪ್ಪುವನ್ನು, ಟಿಪ್ಪು ಜಯಂತಿಯನ್ನು ವಿರೋಧಿಸಿದವರನ್ನೆಲ್ಲಾ ಕೋಮುವಾದಿಗಳೆಂದು ಕರೆದು, ಗಲಾಟೆ ಇನ್ನಷ್ಟು ತೀವ್ರತರವಾಗುವಂತೆ ಮಾಡುತ್ತಿದ್ದಾರೆ. ಟಿಪ್ಪುವನ್ನು ವಿರೋಧಿಸುತ್ತಿರುವವರೆಲ್ಲಾ ಕೋಮುವಾದಿಗಳೆಂಬುದು ಶುದ್ಧ ತಪ್ಪು. ಅವರೆಲ್ಲಾ ಟಿಪ್ಪುವಿನ ಮತಾಂಧತೆ, ಅವನು ಮಾಡಿದ ಹಿಂಸಾಚಾರದಿಂದ ಅವನನ್ನು ವಿರೋಧಿಸುತ್ತಿದ್ದಾರೆಯೇ ವಿನಃ ಅವನೊಬ್ಬ ಮುಸ್ಲಿಂ ಎಂಬ ಕಾರಣಕ್ಕಲ್ಲ. ಆದ ಕಾರಣ ಟಿಪ್ಪು ಜಯಂತಿ ವಿರೋಧಿಸುವವರನ್ನು ಮುಸ್ಲಿಂ ವಿರೋಧಿಗಳು, ಕೋಮುವಾದಿಗಳು ಎಂದು ಕರೆಯುವುದು ಶುದ್ಧ ತಪ್ಪು. ಟಿಪ್ಪು ಎಂತಹ ಹಿಂಸಾಚಾರಿಯಾಗಿದ್ದ, ಮತಾಂಧನಾಗಿದ್ದ, ಹಾಗೂ ಮಾನವೀಯತೆಯೇ ಇಲ್ಲದ ಪಾಶವೀ ವರ್ತನೆಗೆ ಹೆಸರಾಗಿದ್ದ ಎಂಬುದನ್ನು ತಿಳಿಸುವ ನಿಜವಾದ ಇತಿಹಾಸವನ್ನೊಮ್ಮೆ ನೋಡಿದರೆ ನಿಮಗೇ ತಿಳಿಯುತ್ತದೆ, ಟಿಪ್ಪು ಜಯಂತಿಯನ್ನು ವಿರೋಧಿಸಲು ಕಾರಣವೇನೆಂಬುದು. ಅಷ್ಟೇ ಅಲ್ಲ ಈ ಟಿಪ್ಪು ಜಯಂತಿ ಆಚರಣೆ ಒಂದು ರಾಜಕೀಯ ಹುನ್ನಾರವೇ ಹೊರತು ಬೇರೆನಲ್ಲ ಎಂಬುದು ತಮಗೇ ತಿಳಿಯುತ್ತದೆ.
ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ ವಿಶಾಲ ಮೈದಾನ ದೇವಟ್ಟಿಪರಂಬು ಎಂಬುದು. ಇಲ್ಲಿ ಟಿಪ್ಪು ನಡೆಸಿದ ಹಿಂಸಾಚಾರ, ಕರ್ನಾಟಕದಲ್ಲೇ ಹಿಂದೆಂದೂ ಕೇಳಿರದ ಹಿಂಸಾಚಾರವೆಂದು ಹೆಸರಾಗಿದೆ. ಇಲ್ಲಿನ ಹಿಂಸಾಚಾರದ ಕುರಿತಾದ ಸಮಗ್ರ ವಿವರ “ಗೆಜಿಟಿಯರ್ ಆಫ್ ಕೂರ್ಗ, ಜಿ. ರಿಜಿಸ್ಟರ್-1870” ಎಂಬ ಗ್ರಂಥದಲ್ಲಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಉಲ್ಲೇಖವಾಗಿರುವಂತೆ, ಇಲ್ಲಿನ ಜನ ಅಲ್ಲಿನ ಬೆಟ್ಟಸಾಲುಗಳಲ್ಲಿ, ಅದರ ತಪ್ಪಲಿನ ಊರುಗಳಲ್ಲಿ ಅವಿತು ಟಿಪ್ಪುವಿನ ವಿರುದ್ಧ ಹೋರಾಟ ಮಾಡುತ್ತಿದ್ದರು. 1786 ರ ಒಂದು ದಿನ ಟಿಪ್ಪು ಡಂಗುರ ಸಾರಿಸಿ, “ನಾನು ಯುದ್ಧದಿಂದ ಬೇಸತ್ತಿದ್ದೇನೆ, ನನಗೆ ಕೊಡವರ ಭೂಮಿ ಬೇಡ, ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೇನೆ, ಆದ ಕಾರಣ ದೇವಟ್ಟಿಪರಂಬುವಿನ ಮೈದಾನದಲ್ಲಿ ಒಂದು ಔತಣಕೂಟ ಏರ್ಪಡಿಸಿದ್ದೇನೆ, ನನ್ನಂತೆ ತಾವೂ ಶಸ್ತ್ರಾಸ್ತ್ರ ತ್ಯಜಿಸಿ ಬನ್ನಿ, ಸ್ನೇಹದಿಂದ ಬಾಳೋಣ” ಎಂದು ಪ್ರಚಾರ ಮಾಡಿಸಿದ. ಟಿಪ್ಪುವಿನ ಈ ಮೋಸದ ಮಾತಿಗೆ ಮರುಳಾಗಿ, ಸುಮಾರು 70 ಸಾವಿರ ಕೊಡವರು ಆ ಮೈದಾನಕ್ಕೆ ಬಂದು ಸೇರಿದರು. ಮೈದಾನದ ಮುಕ್ಕಾಲು ಭಾಗ ಕಾಡಿನಿಂದಾವೃತವಾಗಿತ್ತು. ಆ ಕಾಡಿನಲ್ಲಿ ಟಿಪ್ಪುವಿನ ಸೈನಿಕರು ಹಾಗೂ ಫ್ರೆಂಚ್ ಸೈನಿಕರು ಅಡಗಿ ಕುಳಿತು, ಬರಿಗೈಯಲ್ಲಿ ಬಂದಿದ್ದ ಕೊಡವರ ಮೇಲೆ ದಾಳಿ ಮಾಡಿತು. ಅದು ಕರ್ನಾಟಕದಲ್ಲಿ ಹಿಂದೆಂದೂ ಕಾಣದ ನರಮೇಧ. ಹೆಂಗಸರು ಮಕ್ಕಳೆಂದು ನೋಡದೆ, ಸುಮಾರು 35 ಸಾವಿರಕ್ಕೂ ಹೆಚ್ಚು ಜನರನ್ನು ನಿರ್ದಯವಾಗಿ ಕೊಲ್ಲಲಾಯಿತು. ಇಷ್ಟಕ್ಕೆ ನಿಲ್ಲಲಿಲ್ಲ ಟಿಪ್ಪುವಿನ ಕ್ರೌರ್ಯ ಆ ನರಮೇಧದ ನಂತರ ಆ ಕೊಡವರ ಭೂಮಿಯನ್ನು ಮುಸ್ಲಿಮರಿಗೆ ಜಹಗೀರಾಗಿ ನೀಡಿ, “ಅಳಿದುಳಿದ ಕೊಡವರನ್ನು ನಿರ್ನಾಮ ಮಾಡಿ, ಅವರ ಕುಟುಂಬದ ಮಕ್ಕಳು, ಮುಸ್ಲಿಮರಿಗೆ ಗುಲಾಮರಾಗಿರತಕ್ಕದ್ದು” ಎಂದು ಆಜ್ಞೆ ಹೊರಡಿಸಿದ. ಇದರ ಕುರಿತು 1924 ರ “ಪಟ್ಟೋಲೆ ಪಳಮೆ” ಎಂಬ ಐತಿಹಾಸಿಕ ದಾಖಲೆ ಸಾರಿ ಹೇಳುತ್ತದೆ. ಟಿಪ್ಪುವಿನ ಹಿಂಸಾಚಾರಕ್ಕೆ ಇದು ಒಂದು ಉದಾಹರಣೆ ಮಾತ್ರ. ಇಂತಹ ಅದೆಷ್ಟೋ ಉದಾಹರಣೆಗಳಿವೆ ಟಿಪ್ಪು ಒಬ್ಬ ಹಿಂಸಾಚಾರಿ, ಅತ್ಯಾಚಾರಿ ಹಾಗೂ ಮತಾಂಧನಾಗಿದ್ದ ಎಂಬುದಕ್ಕೆ. ಟಿಪ್ಪು ಹಿಂದೂಗಳ ಮೇಲೆ ಯುದ್ಧ ಮಾಡಿ ಸೆರೆ ಸಿಕ್ಕವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎಂಬುದಕ್ಕೆ “ಮಾಕ್ರ್ಸ್ ವಿಲ್ಕ್ಸ್’ನ ಹಿಸ್ಟರಿ ಆಫ್ ಮೈಸೂರು” ಎಂಬ ಗ್ರಂಥದಲ್ಲಿ ಪುರಾವೆಗಳು ದೊರೆಯುತ್ತವೆ. ಆ ಪುಸ್ತಕದಲ್ಲಿ ಟಿಪ್ಪುವಿನ “ಗಂಜಾಂ ಮತಾಂತರ ಪ್ರಕರಣದ ಕುರಿತು ಉಲ್ಲೇಖವಿದೆ. ಅದರ ಪ್ರಕಾರ ಟಿಪ್ಪು ಗಂಜಾಂ ಎಂಬಲ್ಲಿ 80 ಸಾವಿರ ಕೊಡವರನ್ನು ಬಂಧಿಸಿ ಅವರನ್ನು ಚಿತ್ರಹಿಂಸೆ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿದ. ಮತಾಂತರಕ್ಕೆ ಒಪ್ಪದವರನ್ನು ಹುಲಿಯ ಬೋನಿಗೆ, ಮೊಸಳೆಗಳಿಗೆ ಆಹಾರವಾಗಿ ನೀಡಲಾಯಿತು. ಬಲಾತ್ಕಾರವಾಗಿ ಸುನ್ನತ್ (ಮುಸ್ಲಿಂ ಧರ್ಮದ ಮುಂಜಿ ಪದ್ಧತಿ – ಶಿಶ್ನದ ಮುಂದೊಗಲನ್ನು ಕತ್ತರಿಸುವುದು) ಮಾಡಿಸಲಾಯಿತು. ಟಿಪ್ಪುವಿನ ಮತಾಂಧತೆಯನ್ನು ಸಾರಲು ಇದಕ್ಕಿಂತ ಉತ್ತಮ ನಿದರ್ಶನ ಬೇಕಾ?
ಇವಿಷ್ಟೇ ಅಲ್ಲ ಟಿಪ್ಪು ಒಬ್ಬ ಹೆಣ್ಣುಬಾಕನಾಗಿದ್ದ. 1774 ರಲ್ಲಿ ತನ್ನ 24 ನೇ ವಯಸ್ಸಿನಲ್ಲಿ ಮೊದಲ ಮದುವೆಯಾದ ಟಿಪ್ಪು ತದನಂತರ ಆದ ಮದುವೆಗಳಿಗೆ ಲೆಕ್ಕವೇ ಇಲ್ಲ. ತಾನು ಸೋಲಿಸಿದ ಪ್ರದೇಶದ ರಾಜಮನೆತನಗಳ ಸ್ತ್ರೀಯರಿಂದ ಹಿಡಿದು ಬೇಕೆನಿಸಿದ ಪ್ರತಿಯೊಬ್ಬ ಸ್ತ್ರೀಯರನ್ನು ಶ್ರೀರಂಗ ಪಟ್ಟಣಕ್ಕೆ ಹೊತ್ತೊಯ್ಯುತ್ತಿದ್ದ. ದಿವಾನ್ ಪೂರ್ಣಯ್ಯನ ತಮ್ಮನ ಮಗಳನ್ನೇ ಟಿಪ್ಪು ಬಲಾತ್ಕಾರದಿಂದ ಅಂತಃಪುರಕ್ಕೆ ಎಳೆದುಕೊಂಡಿದ್ದ. 1779ರಲ್ಲಿ ಟಿಪ್ಪು ಸತ್ತ ನಂತರ ಕ್ಯಾಪ್ಟನ್ ಥಾಮಸ್ ಮ್ಯಾರಿಯೇಟ್ ನೀಡಿದ ಟಿಪ್ಪುವಿನ ಜನಾನದ (ರಾಣಿವಾಸ) ವರದಿಯು ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಆತನ ಪತ್ನಿ-ಉಪಪತ್ನಿಯರೂ ಸೇರಿದಂತೆ 300ಕ್ಕೂ ಹೆಚ್ಚು ಸ್ತ್ರೀಯರನ್ನು ಜನಾನದಲ್ಲಿ ಸೇರಿಸಲಾಗಿತ್ತು. ಅವನ ಪ್ರತಿಯೊಬ್ಬ ಪತ್ನಿಯ ಕೋಣೆಯನ್ನು ಕಾಯಲು ಖೋಜಾಗಳನ್ನು ನೇಮಿಸಲಾಗಿತ್ತು ಎಂದು ಅದರಲ್ಲಿ ತಿಳಿಸಲಾಗಿದೆ. ಅಲ್ಲದೇ ಟಿಪ್ಪುವಿನ ಆಸ್ಥಾನದಲ್ಲಿ ನಡೆಯುವ ಅತ್ಯಾಚಾರಗಳಿಗೆ ಲೆಕ್ಕವೇ ಇರುತ್ತಿರಲಿಲ್ಲ. ತಾನು ದಾಳಿಯಿಟ್ಟ ಸಂಸ್ಥಾನಗಳಲ್ಲಿ ತನ್ನ ಸೈನಿಕರಿಗೆ ಎಗ್ಗಿಲ್ಲದೇ ಸ್ಥಳೀಯ ಮಹಿಳೆಯರ ಮೇಲೆ ಅನಾಚಾರ, ಅತ್ಯಾಚಾರಗಳನ್ನೆಸಗಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ ಟಿಪ್ಪುವನ್ನು ಯಾವ ಲೆಕ್ಕದಲ್ಲಿ ಒಬ್ಬ ಒಳ್ಳೆಯ ನಾಯಕನೆಂದು ಹೇಳಲು ಸಾಧ್ಯ? ಹೀಗೆ ಹೇಳುತ್ತಾ ಸಾಗಿದರೆ ಟಿಪ್ಪುವಿನ ಕ್ರೂರತೆ, ಅನಾಚಾರಗಳ ಕುರಿತಾದ ಒಂದು ಇತಿಹಾಸ ಪುಸ್ತಕವನ್ನೇ ಬರೆಯಬಹುದು. ಇಲ್ಲಿ ತಿಳಿಸಿದ್ದು, ಅವನ ಅಮಾನವೀಯತೆಯ ಕೆಲವು ಮುಖಗಳು ಮಾತ್ರ. ಒಬ್ಬ ರಾಜನಿಗಿರಬೇಕಾದ ಧರ್ಮಸಹಿಷ್ಣುತೆ, ಪ್ರಜಾರಕ್ಷಣೆ, ಉತ್ತಮ ಆಡಳಿತ ಇಂತಹ ಯಾವ ಲಕ್ಷಣವೂ ಟಿಪ್ಪುವಿನಲ್ಲಿರಲಿಲ್ಲ. ಅವನು ಯಾವ ರೀತಿಯಲ್ಲೂ ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಅವನು ನಿಜವಾದ ಸ್ವಾತಂತ್ರ್ಯ ಹೋರಾಟಗಾರನಾಗಿದ್ದರೆ, ಫ್ರೆಂಚರ ಜೊತೆ ಸೇರಿ, ಅವರೊಂದಿಗೆ ಒಪ್ಪಂದ ಮಾಡಿಕೊಂಡು, ಹಿಂದೂ ಸಂಸ್ಥಾನಗಳ ಮೇಲೆ ದಾಳಿ ಮಾಡುತ್ತಿರಲಿಲ್ಲ. ತನ್ನ ಅಸ್ಥಿತ್ವಕ್ಕೆ, ತನ್ನ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎಂದಾಗ, ಅದನ್ನು ಉಳಿಸಿಕೊಳ್ಳಬೇಕೆಂದು ಬ್ರಿಟೀಷರೊಂದಿಗೆ ಹೋರಾಡಿದನೇ ಹೊರತು, ಪ್ರಜೆಗಳನ್ನು ರಕ್ಷಿಸಬೇಕು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂಬ ಯಾವ ಆಲೋಚನೆಯೂ ಅವನಿಗಿರಲಿಲ್ಲ. ತನ್ನ ಸ್ವಾರ್ಥಕ್ಕಾಗಿ ಬ್ರಿಟೀಷರೊಂದಿಗೆ, ಫ್ರೆಂಚರೊಂದಿಗೆ ಒಪ್ಪಂದ ಮಾಡಿಕೊಂಡ ಪರಮ ಸ್ವಾರ್ಥಿ, ರಣಹೇಡಿ ಟಿಪ್ಪು. ಇಂತಹ ದುರಾತ್ಮನ ಜಯಂತಿಯನ್ನು ಹಠಹೊತ್ತು ಮಾಡಲು ಹೊರಟಿರುವ ನಮ್ಮ ಇಂದಿನ ಮುಖ್ಯಮಂತ್ರಿಗಳಿಗೆ ಹಾಗೂ ಅಂದಿನ ಟಿಪ್ಪು ಸುಲ್ತಾನನಿಗೆ ಯಾವ ವ್ಯತ್ಯಾಸವೂ ಇಲ್ಲ ಬಿಡಿ.
ಅಗಸ್ಟ 9, 2017 ರಂದು ಕೊಡಗಿನ ಕೆ.ಪಿ. ಮಂಜುನಾಥ ಎಂಬುವವರು, ಟಿಪ್ಪು ಜಯಂತಿಯ ಸರ್ಕಾರಿ ಆಚರಣೆಯ ವಿರುದ್ಧ, ಪಿ.ಐ.ಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ದಾಖಲಿಸಿದ್ದರು. ಇದರ ವಿಚಾರಣೆಯ ಸಮಯದಲ್ಲಿ ಕರ್ನಾಟಕದ ಉಚ್ಛ ನ್ಯಾಯಾಲಯದ ಜಸ್ಟೀಸ್ ಆರ್.ಬಿ. ಬೂದಿಹಾಳ್ ಮತ್ತು ಚೀಫ್ ಜಸ್ಟೀಸ್ ಸುಬ್ರೋ ಕಮಲ್ ಮಖರ್ಜಿಯವರಿದ್ದ ವಿಭಾಗೀಯ ಪೀಠವೂ ಸಹ “ಟಿಪ್ಪು ತನ್ನ ಅಧಿಕಾರ, ರಾಜ್ಯವನ್ನು ರಕ್ಷಿಸಿಕೊಳ್ಳಲು ಹೋರಾಡಿದನೇ ಹೊರತು, ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟರ ಮೇಲೂ ಟಿಪ್ಪು ಜಯಂತಿಯನ್ನು ಮೊಂಡು ಹಠದಿಂದ ಮಾಡಲು ಹೊರಟಿರುವ ಮುಖ್ಯಮಂತ್ರಿಗಳು ಹಾಗೂ ಅವರ ಅನುಯಾಯಿಗಳ ಉದ್ದೇಶ ಏನಿರಬಹುದೆಂಬುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲ. ಹಾಗೇ ಮುಸ್ಲಿಂ ದೊರೆಯ ಜಯಂತಿಯನ್ನು ಮಾಡಲೇಬೇಕೆಂಬುದಿದ್ದರೆ, ಅಬ್ದುಲ್ ಕಲಾಮ್’ರ ಜಯಂತಿಯನ್ನು ಮಾಡಲಿ, ಅವರೂ ಮುಸ್ಲಿಂ ತಾನೆ? ಆಗ ದೇಶದ ಯಾವ ಪ್ರಜೆಯೂ ವಿರೋಧಿಸಲಾರ. ಯಾಕೆಂದರೆ ಅಬ್ದುಲ್ ಕಲಾಂ ಎಂತಹ ವ್ಯಕ್ತಿ ಎಂಬುದು ದೇಶಕ್ಕೇ ತಿಳಿದಿದೆ. ಒಳ್ಳೆಯ ಕೆಲಸವನ್ನು ಯಾವ ಧರ್ಮದವರೇ ಮಾಡಲಿ, ನಮ್ಮ ದೇಶ, ದೇಶದ ಜನ ಅವರನ್ನು ಗೌರವಿಸುತ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ವೋಟು ಮುಖ್ಯವೇ ಹೊರತು, ಯಾರು ನಿಜವಾದ ದೇಶ ಭಕ್ತ, ಯಾರು ದೇಶಭಕ್ತನಲ್ಲ ಎಂಬುದಲ್ಲ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಈ ಟಿಪ್ಪು ಜಯಂತಿ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರದ ಈ ಕಣ್ಣಾ-ಮುಚ್ಚಾಲೆಯ ದುರಾಡಳಿತಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಈ ಟಿಪ್ಪು ಜಯಂತಿಯನ್ನು ಎಲ್ಲರೂ ಬಹಿರಂಗವಾಗಿ ವಿರೋಧಿಸೋಣ. ಟಿಪ್ಪು ಜಯಂತಿಯನ್ನು ಆಚರಿಸದಿದ್ದರೆ, ರಾಜ್ಯಕ್ಕೆ ಯಾವ ನಷ್ಟವೂ ಇಲ್ಲ.