ಅಂಕಣ

ಮಾಗಿದ ವ್ಯಕ್ತಿತ್ವಕ್ಕೆ ಮಾತ್ರ ಬಾಗುವುದೆಲ್ಲಿ,ಬೀಗುವುದೆಲ್ಲಿ ಎಂದು ಗೊತ್ತು

ಎಲ್ಲ ಸಮಯದಲ್ಲೂ ಒಂದೇ ತೆರನಾಗಿದ್ದರೆ ವ್ಯಕ್ತಿ ಸಮಾಜದ ವಿವಿಧೆಡೆಗಳಲ್ಲಿ ಬೆರೆಯುವುದು ಕಷ್ಟ. ಸಮಯ, ಪರಿಸ್ಥಿತಿ, ಪರಿಸರ ಇತ್ಯಾದಿಗಳಿಗನುಗುಣವಾಗಿ ನಡೆದಾಗಲೇ ಎಲ್ಲರೊಳಗೊಂದಾಗಲು ಸಾಧ್ಯ. ನಮ್ಮಲ್ಲಿ ಅಧಿಕಾರ, ಹಣ, ಶಕ್ತಿ, ಜಾಣ್ಮೆ ,ಸಾಮರ್ಥ್ಯಗಳೆಲ್ಲ ಇದ್ದರೂ ನಾವು ಯಾವಾಗ ಅವುಗಳನ್ನು ಪ್ರಯೋಗಿಸಬೇಕು ಎಂಬ ಅರಿವಿದ್ದಾಗಲೇ ವಿಶ್ವಮಾನ್ಯರಾಗಲು ಸಾಧ್ಯ. ಹಿಂದೆ ಶಾಸ್ತ್ರಿಯವರು ಪ್ರಧಾನಿಯಾದಾಗ ಪ್ರತಿಭಟನೆಗಳನ್ನು ನೀರನ್ನು ಚಿಮುಕಿಸಿ(ಲಾಠಿ ಚಾರ್ಜ್, ಗೋಲಿಬಾರ್ ಬದಲು) ಚದುರಿಸಿ ಎಂದು ಹೇಳಿ ಶಾಂತಿಧೂತನೆಂದು ಹೆಸರು ಪಡೆದರು. ಅದೇ ಶಾಸ್ತ್ರೀ ಪಾಕಿಸ್ತಾನದ ವಿಷಯಕ್ಕೆ ಬಂದಾಗ “ಆಜ್ ಹಮ್ ಹತ್ಯಾರೋಂಕಾ ಜವಾಬ್ ಹತ್ಯಾರೋಂಸೆ ದೇಂಗೆ” ಎಂದು ಕ್ಷಾತ್ರತೆ ಮೆರೆದಿದ್ದರು. ಅಪ್ಪಿ ತಪ್ಪಿ ಎರಡೂ ಸಂದರ್ಭಕ್ಕೆ ಒಂದೇ ತೆರನಾದ ಪ್ರತಿಕ್ರಿಯೆ ಕೊಟ್ಟಿದ್ದರೆ ಅಥವಾ ಪ್ರತಿಕ್ರಿಯೆಗಳು ಅದಲು ಬದಲಾಗಿದ್ದರೆ ಅವರೊಬ್ಬ ಜನಾನುರಾಗಿ ಪ್ರಧಾನಿಯಾಗಿ ಜನಪ್ರಿಯರಾಗುತ್ತಿರಲಿಲ್ಲ.

ಇತ್ತೀಚೆಗೆ ಮೋದಿಯವರು ಧರ್ಮಸ್ಥಳದ ಭೇಟಿ ನೀಡಿದಾಗ ಪರಿಸರಕ್ಕೆ ತಕ್ಕ ಹಾಗೆ ನಮ್ಮ ನಡೆ-ನುಡಿಗಳು ಹೇಗೆ ಬದಲಾಗಬೇಕು ಎಂಬುದಕ್ಕೆ ಮಾದರಿಯಾದರು. ಘಟನಾವಳಿಗಳು ನಡೆದು ಹೋಗುತ್ತವೆ ಅದಕ್ಕೆ ನಾವು ಪ್ರತಿಕ್ರಿಯಿಸುವಾಗ ಉಳಿಸುವ ಮೌಲ್ಯ ಮಾತ್ರ ಚಿರಕಾಲ ಉಳಿಯುತ್ತದೆ. ಮೋದಿ ಬಂದು ಹೋಗಿ ಎರಡು ವಾರವಾದರೂ ಅವರು ಉಳಿಸಿಹೋದ ನೈತಿಕ ಮೌಲ್ಯಗಳು ಯಾವತ್ತಿಗೂ ಪ್ರಸ್ತುತ. ಅದಕ್ಕೆ ಲೇಖನವನ್ನು ದಶಕಗಳಷ್ಟು ಹಿಂದೆ ಶಾಸ್ತ್ರಿಯವರು ಉಳಿಸಿಹೋದ ಮೌಲ್ಯವನ್ನು  ಉದಾಹರಿಸಿ ಶುರುಮಾಡಿದ್ದೇನೆ. ಮೌಲ್ಯಗಳು ತ್ರಿಕಾಲಕ್ಕೂ ಸಲ್ಲುವಂತವು ಅದಕ್ಕೆ  ಈ ಲೇಖನ ಅಪ್ರಸ್ತುತ ಎನಿಸಲಾರದು ಎಂದು ನನ್ನ ಭಾವನೆ.

ಧರ್ಮಸ್ಥಳಕ್ಕೆ ಕಾಲಿಟ್ಟಾರಭ್ಯ ಮೋದಿಯೊಳಗಿನ ಸಂತ ಅನಾವರಣಗೊಂಡನು. ಯಾವ ಸರ್ಕಾರವೂ ನಿರ್ಮಾಣ ಮಾಡದಂತಹ ಮಾದರಿ ನಗರವನ್ನು ಹೆಗ್ಗಡೆಯವರು ಮಾಡಿದ್ದಾರೆ. ರಾಮರಾಜ್ಯವೆಂಬುದು ಬರೀ ಕಾಲ್ಪನಿಕ ಮತ್ತು ಆದರ್ಶಸೂಚಿಯಷ್ಟೇ ಅಲ್ಲ. ಅಂಥ ಸಮೃದ್ಧ , ಶಾಂತ, ಸಂಸ್ಕಾರಯುತ ಊರನ್ನು ಕಟ್ಟಲು ಸಾಧ್ಯವೆಂಬುದನ್ನು ಹೆಗ್ಗಡೆಯವರು ತೋರಿಸಿಕೊಟ್ಟಿದ್ದಾರೆ. ಅಂಥ ಪುಣ್ಯಭೂಮಿಗೆ ಬಂದ ಮೋದಿ ಹುದ್ದೆಯ ದೊಡ್ಡಸ್ತಿಕೆಯನ್ನೆಲ್ಲಾ ಬದಿಗಿಟ್ಟು ಸರಳಾತಿಸರಳ ವ್ಯಕ್ತಿಯಂತೆ ನಡೆದುಕೊಂಡರು. ಧರ್ಮಸ್ಥಳದ ದೇವರ ದರ್ಶನವಾಗುವವರೆಗೆ ಉಪವಾಸವಿದ್ದರು. ಅಲ್ಲಿನ ಅರ್ಚಕರಿಗೆ ಅತ್ಯಂತ ವಿನಯವಾಗಿ ನಮಸ್ಕರಿಸಿದರು. ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡರು.

ನಿಮಗಿದು ಉತ್ಪ್ರೇಕ್ಷೆ ಎನಿಸಬಹುದು. ಎಲ್ಲರಂತೆ ಅವರೂ ಬಂದು ಹೋದರು ಅದರಲ್ಲೇನು ವಿಶೇಷ? ಎನಿಸಬಹುದು.  ದೊಡ್ಡ ವ್ಯಕ್ತಿಗಳು ಸರಳತೆಯಿಂದ ಬೆರೆತಾಗ ಅದೊಂದು ಗಮನಾರ್ಹ ವಿಷಯವಾಗುತ್ತದೆ.  ಅಸಲಿಗೆ ದೇವರು ಹೀಗೆ ಬಂದು ನನ್ನ ಸೇವೆ ಮಾಡು ಎಂದು ಯಾರನ್ನು ಕೇಳುವುದಿಲ್ಲ. ಅವನ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಲೇಬೇಕಿಲ್ಲ. ಎಲ್ಲೆಡೆಯಿದ್ದು ಯಾವುದಕ್ಕೂ ಅಂಟಿಕೊಳ್ಳದ ಚೈತನ್ಯ ಮತ್ತು ಸರ್ವಾಂತರ್ಯಾಮಿಯೇ ದೇವರು. ಬೇಡರ ಕಣ್ಣಪ್ಪ ಮಾಂಸವನ್ನಿಟ್ಟರೂ ಸ್ವೀಕರಿಸಿದವನವ. ದ್ರೌಪದಿಗೆ ಸೀರೆಯಾಗಿ, ಜೇಡರ ದಾಸಿಮಯ್ಯನಿಗೆ ಕಾಯಕದಲ್ಲಿ , ಪ್ರಹ್ಲಾದನಿಗೆ ಕಂಬದಿಂದೊಡೆದು ದರ್ಶನವಿತ್ತನು. “ಸಮಯಾಸಮಯ ಉಂಟೆ ಭಕ್ತವತ್ಸಲ ನಿನಗೆ” ಎಂದು ಹಾಡಿ ಅವರಿಗೆಲ್ಲ ದರ್ಶನ ನೀಡಿದ ನೀನು ನನಗೆ ನೀಡಲಾರೆಯಾ ಎಂದು ಕೇಳಿದ ಕನಕದಾಸರಿಗೆ ತನ್ನ ಇಡಿಯ ಭಕ್ತ ಸಮೂಹಕ್ಕೆ ಬೆನ್ನು ತೋರಿಸಿ ಗೋಡೆ ಒಡೆದು

ದರ್ಶನ ನೀಡಿದವನವನು. ರಾಜ್ಯಕ್ಕೆ ರಾಜ್ಯವೇ ಮಸ್ತಕಾಭಿಷೇಕ ನಡೆಸಿದಾಗ ತೃಪ್ತನಾಗದೇ ಗುಳ್ಳಕ್ಕಜ್ಜಿಯ ಗಿಂಡಿಯಷ್ಟೇ ಹಾಲಿನಲ್ಲಿ ಮಿಂದು ಹೋದ ಶ್ರವಣ ಬೆಳಗೊಳದ ಬಾಹುಬಲಿಯೂ ಒಲಿದಿದ್ದು ಪವಿತ್ರ ಭಕ್ತಿಗೆ. ಪ್ರಹ್ಲಾದ, ಕೋಳೂರು ಕೊಡಗೂಸುಗಳ ವಯಸ್ಸನ್ನು ಪ್ರಶ್ನಿಸದೇ; ಕನಕದಾಸರ ಜಾತಿಯನ್ನು ಕೇಳದೇ;  ಕಣ್ಣಪ್ಪ, ಗುಳ್ಳಕಜ್ಜಿಯರಿಗೆ ಏನು ತಂದೆ? ಎಷ್ಟು ತಂದೆ? ಎಂದೂ ಕೇಳದೆ ಸರ್ವರಿಗೂ ದರ್ಶನ ಕೊಡುವಷ್ಟು‌ ಉದಾರಿ.

ಹಾಗಾದರೆ ಈ ಪೂಜೆ ಪುನಸ್ಕಾರವೆಲ್ಲ ಏಕೆ ಬೇಕು? ಎಂಬ ವಾದವನ್ನಿಡುವ ಢೋಂಗಿ ನಾಸ್ತಿಕವಾದಿಗಳಿದ್ದಾರೆ. ಅವರ ಸಮರ್ಥನೆಗೆ ವಸ್ತುವಾಗಿ ಮೇಲಿನವರೆಲ್ಲರೂ ಬಳಕೆಯಾಗುತ್ತಾರೆ. ದಾಸಿಮಯ್ಯ, ಕಣ್ಣಪ್ಪ, ಗುಳ್ಳಕಜ್ಜಿ, ಕನಕದಾಸರು, ಬುದ್ಧ, ಬಸವಣ್ಣ, ಪ್ರಹ್ಲಾದರಿಗೆ ಮೂರ್ತಿಯಾಚೆಗಿನ ದೇವರನ್ನು ಕಾಣುವ ಅಂತಃಶಕ್ತಿಯಿತ್ತು. ಸಾತ್ವಿಕ ಭಕ್ತಿಯಿತ್ತು. ಆದರೆ ಸಾಮಾನ್ಯ ಭಕ್ತ ದೈವಾನುಗ್ರಹಕ್ಕೆ ತನ್ನದೇ ವಿಧಿವಿಧಾನಗಳನ್ನು ಕಂಡುಕೊಂಡ. ಅದನ್ನೆಲ್ಲ ಅನುಸರಿಸಿಕೊಂಡು ಹೋದಾಗಲೇ  ಪ್ರತಿಫಲ ಲಭಿಸಲು ಸಾಧ್ಯ ಎಂಬುದು ಆತನ ನಂಬಿಕೆ. ನಾವೊಬ್ಬರೇ ಈ ಜಗತ್ತಿನಲ್ಲಿಲ್ಲ. ನಮ್ಮನ್ನು ಸಮಾಜ ತನ್ನದೊಂದು ಭಾಗವಾಗಿ ನೋಡಿದಾಗ  ಸಮಾಜದ ನಂಬಿಕೆಗಳ ಕಳಕಳಿಯೂ ನಮ್ಮಲ್ಲಿರಬೇಕು. ಸೇವೆ, ಪೂಜೆ-ಪುನಸ್ಕಾರ , ಮಡಿ , ಉಪವಾಸ, ಶಿಷ್ಟಾಚಾರಗಳು ಪ್ರತಿಫಲ ಕೊಡದಿದ್ದರು ನಂಬಿದ ಭಕ್ತನಿಗೆ ಆ ಕ್ಷಣಕ್ಕೆ ನೆಮ್ಮದಿಯನ್ನು ಕೊಡುತ್ತವೆ. ಅಂಥ ಭಕ್ತ ಸಮೂಹದಲ್ಲಿ ನಾವಿದ್ದಾಗ ಅವರಂತೆ ನಾವು ನಡೆದುಕೊಳ್ಳಬೇಕು.

ದೇಶದ ಪ್ರಧಾನಿಯಾದವರು ಹೇಗೆ ಬೇಕೋ ಹಾಗೆ ನಡೆದುಕೊಳ್ಳಬಹುದಿತ್ತು. ವಿನಯದಿಂದ ಕ್ಷೇತ್ರದ ಹಿರಿತನಕ್ಕೆ ಪಾವಿತ್ರ್ಯಕ್ಕೆ ಧಕ್ಕೆ ಬರದಂತೆ ನಡೆದುಕೊಂಡರು. ಉಜಿರೆಯ ಪವಿತ್ರ ವೇದಿಕೆಗೆ ಕಿಂಚಿತ್ತು ರಾಜಕಾರಣದ ಲೇಪವಾಗದಂತೆ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಕುರಿತಾಗಿಯೇ ನಿರರ್ಗಳವಾಗಿ ಮಾತಾಡಿದರು. ವ್ಯಕ್ತಿಯೊಬ್ಬನಿಗೆ ತಾನಿರುವ ಜಾಗದ ಅರಿವಿದ್ದರೇ ಮಾತ್ರ ಸಾಧ್ಯ. ಆಗದವರು ಮಾತ್ರ ಚಪ್ಪಲಿ ಹಾಕಿಕೊಂಡು ಹೋದರು, ಒಂದು ದಿನ ಮಿಕ್ಕ ಭಕ್ತರಿಗೆ ನಿಷೇಧವಂತೆ ಎಂಬ ಸುಳ್ಳು ವದಂತಿ ಹಬ್ಬಿಸಿ ರಾಜಕೀಯದಾಟವಾಡಿದರು.

ಪ್ರಧಾನಿಯಾದವನಿಗಿರಬೇಕಾದ ಸಂದರ್ಭಕ್ಕನುಸಾರ ಪ್ರತಿಕ್ರಿಯಿಸುವ ಗುಣ ಮೋದಿಯವರಲ್ಲಿ ಕಾಣುತ್ತದೆ. ಪದೇ ಪದೇ ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಉದಾರ ನೀತಿ ತೋರದೇ ಸರ್ಜಿಕಲ್ ಸ್ಟ್ರೈಕ್’ನ ಮರ್ಮಾಘಾತ  ಕೊಟ್ಟವರೂ ಅವರೇ, ದೇಶದ ಭ್ರಷ್ಟರ ಮತ್ತು ಆತಂಕವಾದಿಗಳ “ಕೈ”ಯನ್ನು ನೋಟ್ ಬ್ಯಾನ್ ಮೂಲಕ ಮುರಿದವರೂ ಅವರೇ , ಚೀನಾದೊಂದಿಗೆ ನೇರವಾಗಿ ಯುದ್ಧಕ್ಕಿಳಿದರೆ ಆಗಬಹುದಾದ ಪರಿಣಾಮವರಿತು ಅದರ ಮೇಲೆ ಹತ್ತಾರು ಒತ್ತಡ ತಂದು ಡೊಕ್ಲಾಮ್ ವಿವಾದ(ಯುದ್ಧವಿಲ್ಲದೇ)ವನ್ನು ಬಗೆಹರಿಸಿಕೊಂಡವರು ಅವರೇ, ವಿದೇಶದಲ್ಲೆಲ್ಲಾ ತಿರುಗಾಡಿ ಇಡೀ ವಿಶ್ವವೇ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದವರೂ ಅವರೇ. ತಿಂಗಳಿಗೊಮ್ಮೆ ಆಕಾಶವಾಣಿಯಲ್ಲಿ ಕುಳಿತು ದೇಶದ ಮುಗ್ಧ ನಾಗರಿಕನೊಂದಿಗೆ ಮನದ ಮಾತನ್ನು ಹಂಚಿಕೊಳ್ಳುವವರು ಅವರೇ.  ತನಗೆಸೆಯಲ್ಪಡುವ ಸಾವಿರ ಪ್ರಶ್ನೆಗಳಿಗೆ ಅವುಗಳ ವೇಗ, ದಿಕ್ಕು, ಪ್ರಖರತೆಗೆ ತಕ್ಕಂತೆ ನಿಖರ ತಿರುಗುಬಾಣಗಳನ್ನು ಬಿಡುವ ಚಾಣಾಕ್ಷ್ಯ ಸಹಸ್ರಾವಧಾನಿಯಂತೆ ಮೋದಿ ಕಾಣುತ್ತಾರೆ.

ಕಷ್ಟಕ್ಕೆ ವಜ್ರದಷ್ಟೇ ಕಠೋರರೂ, ಒಳ್ಳೆಯದಕ್ಕೆ ಹೂವಿನಷ್ಟೇ ಮೃದುವಾಗಿ ಪ್ರತಿಕ್ರಿಯಿಸಿ ದೇಶವನ್ನು ಹೆಗಲಿಗೆ ಹೊತ್ತು ಹೋಗುತ್ತಿದ್ದಾರೆ. ಉರಿಯುವವರು ಉರಿಯಲಿ ಬೇಯುವವರು ಬೇಯಲಿ, ಉರಿದವರು ಬೂದಿಯಾಗುತ್ತಾರೆ ಬೆಂದವರು ಆವಿಯಾಗುತ್ತಾರೆ ಅದಕ್ಕೆಲ್ಲ ಜಗ್ಗದೇ ಒಳಿತನ್ನು ಮಾಡುತ್ತಾ ಸಾಗಿದಾಗಲೇ ನಾವು ಚಿರಾಸ್ತಿತ್ವವನ್ನು ಕಂಡುಕೊಳ್ಳಬಹುದು ಎಂಬುದು ಅವರ ನೀತಿ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಮ್ಮ ಪ್ರವಚನದಲ್ಲಿ ಒಮ್ಮೆ ಹೇಳಿದ್ದರು. “ಜಗತ್ತಿನಲ್ಲಿ ಪ್ರಪ್ರಥಮವಾಗಿ ಉದಿಸಿದ ಸೂಕ್ಷ್ಮಜೀವಿ ಅಮಿಬಾ. ನಂತರದ ಕಾಲಘಟ್ಟದಲ್ಲಿ ಅದಕ್ಕಿಂತ ಬೃಹದಾಕಾರದ ಜೀವಿಗಳು ಕಂಡುಬಂದವು. ಡೈನೋಸಾರ್ ಎಂಬ ಜೀವಿ ದೊಡ್ಡ ಗಾತ್ರದ್ದಾಗಿತ್ತು. ಆಕಾರದಲ್ಲಿ ತನಗಿಂತ ಚಿಕ್ಕದಾದ ಜೀವಿಗಳನ್ನು ಬಗ್ಗು ಬಡಿಯಲು ಶುರು ಮಾಡಿತು. ಈಡೀ ಜಗತ್ತಿಗೆ ತಾನೇ ಅಧಿಪತಿ ಎಂದುಕೊಳ್ಳುತ್ತಿದ್ದಾಗ ಪ್ರಾಕೃತಿಕ ವಿಕೋಪಕ್ಕೆ ಸಿಕ್ಕು ಮಣ್ಣಾಗಿ ಹೋಯಿತು. ಸಾತ್ವಿಕವಾದ ಅಮಿಬಾ ಎಲ್ಲರಿಗಿಂತ ಮೊದಲು ಬಂದರೂ ಇವತ್ತಿಗೂ ಅಸ್ತಿತ್ವ ಉಳಿಸಿಕೊಂಡಿದೆ. ದರ್ಪ ದೌರ್ಜನ್ಯದಿಂದ ತಾನು ಮಾಡಿದ್ದೆ ಸರಿ ಎಂದು ಮೆರೆದ ಡೈನೋಸಾರ್ನ್ನು ಪ್ರಕೃತಿಯೇ ಹೊಡೆದುರುಳಿಸಿತು.” ಎಂಥ ಮಾತು ಅಲ್ಲವೇ? ನಾವು ಚಪ್ಪಲಿಯನ್ನು ಮೆಟ್ಟಿದ್ದೇವೆ ಎಂಬ ಸೊಕ್ಕು ನಮ್ಮಲ್ಲಿದ್ದರೇ ಚಪ್ಪಲಿಗೆ ನಮ್ಮನ್ನು ಹೊತ್ತಿದ್ದೇನೆ ಎಂಬ ಸೊಕ್ಕು ಇರುತ್ತದೆ.

ತಾವು ಯಾವುದಾದರೂ ಜೈನ ಮಂದಿರಕ್ಕೆ ಕಾಲಿಟ್ಟರೆ ಎತ್ತರದ ಮಾನಸ್ಥಂಬವಿರುತ್ತದೆ. ಅದರರ್ಥ ನೀನು ವೈಯಕ್ತಿಕವಾಗಿ ಚಕ್ರವರ್ತಿಯಾಗಿದ್ದರೂ ದೇವಸ್ಥಾನದ ಅಂಗಳಕ್ಕೆ ಬಂದ ತಕ್ಷಣ ಸರ್ವಶಕ್ತನ ಮುಂದೆ ಅತೀ ಕುಬ್ಜ. ಅಲ್ಲಿ ಬಾಗಿ ನಡೆಯಬೇಕು. ನಿಮ್ಮದೆಲ್ಲವನ್ನು ಭಗವಂತನ ಪಾದಕ್ಕಿಟ್ಟಾಗಲೇ ದೈವಾನುಗ್ರಹಕ್ಕೆ ಒಳಗಾಗುತ್ತೀರಿ ಎಂಬುದಾಗಿದೆ. ನಾವು ಮಾಡಿದ್ದೇ ಸರಿ ಎಂದರೇ ತಪ್ಪಾಗುತ್ತದೆ.ಎಲ್ಲಿ ಹೇಗಿರಬೇಕು ಎಂಬುದನ್ನರಿತರೇ ಮೋದಿಯವರಂತಾಗಲು ಸಾಧ್ಯ. ಬೆಟ್ಟಕ್ಕೆ ಹುಲ್ಲಾಗಿ, ಮನೆಗೆ ಮಲ್ಲಿಗೆಯಾಗಿ, ವಿಧಿ ತರುವ ಕಷ್ಟಗಳನ್ನು ನೀಗಲು ಕಗ್ಗಲ್ಲಿನಷ್ಟೇ ಒರಟಾಗಿ, ದೀನ ದುರ್ಬಲರ ಜೊತೆ ಕಲ್ಲು ಸಕ್ಕರೆಯಂತೆ ಕರಗಿ ಏಕರಸವಾದಾಗಲೇ ಡಿ.ವ್ಹಿ.ಜಿಯವರು ಹೇಳಿದಂತೆ ಎಲ್ಲರೊಳಗೊಂದಾಗಲು ಸಾಧ್ಯ. ಕಷ್ಟಕ್ಕೆ ಮಲ್ಲಿಗೆಯಷ್ಟು ಮೆತ್ತಗಾಗಿ, ಮನೆಗೆ ಮಾರಿಯಾಗಿ, ದೀನ ದುರ್ಬಲರಿಗೆ ಕಠೋರವಾಗಿ  ಪ್ರತಿಕ್ರಿಯಿಸಿದರೆ ನಾವು  ಪ್ರಬುದ್ಧರಾಗಿಲ್ಲವೆಂದೇ ಅರ್ಥ. ತುಂಬಿದ ತೆನೆ ಹಸಿವನ್ನು ನೀಗಿಸುವ ಸೊಕ್ಕಿಲ್ಲದೇ ಬಾಗುತ್ತದೆ. ಹುಲ್ಲುಕಡ್ಡಿ ಸೊಕ್ಕಿನಿಂದ ಸೆಟೆದು ನಿಲ್ಲುತ್ತದೆ. ಮಾಗಿದ ವ್ಯಕ್ತಿತ್ವಕ್ಕೆ ಮಾತ್ರ ಎಲ್ಲಿ ಬಾಗಬೇಕು ಎಲ್ಲಿ ಬೀಗಬೇಕು ಎಂಬ ಅರಿವಿರುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ ನನ್ನನ್ನು ಮೋದಿ ಭಕ್ತ ಎಂದು ಜರಿಯುವವರಿದ್ದೀರಿ. ನನ್ನ ಕಣ್ಣಿಗೆ ಮೋದಿ ಹೇಗೆ ಕಂಡರೋ ಹಾಗೆ ಬರೆದಿದ್ದೇನೆ. ಅವರವರ ಭಾವಕ್ಕೆ ತಕ್ಕಂತೆ ದೃಷ್ಟಿಕೋನಗಳು ಬದಲಾಗುತ್ತವೆ. ಸುಳ್ಳುಗಾರರಿಗೆ ಸುಳ್ಳುಗಾರನಾಗಿ, ಮಾನಸಿಕ ಅಸ್ವಸ್ಥರಿಗೆ ಮಾನಸಿಕ ಅಸ್ವಸ್ಥನಂತೆ ,ಮೂರ್ಖನಿಗೆ ಮೂರ್ಖನಂತೆ ಪುಟಕ್ಕಿಟ್ಟ ಚಿನ್ನದಂತಹ ವ್ಯಕ್ತಿತ್ವ(ವೀರೇಂದ್ರ ಹೆಗ್ಗಡೆ)ದವರಿಗೆ ಪುಟಕ್ಕಿಟ್ಟ ಚಿನ್ನದಂತೆ ಮೋದಿ ಕಾಣುವರು. ಮೋದಿ ಬರೀ ಬಂದು ಹೋಗಲಿಲ್ಲ. ಕರ್ನಾಟಕದ ಭಕ್ತಿ, ಪೂಜೆ, ಪುನಸ್ಕಾರ ಧರ್ಮ, ಆಧ್ಯಾತ್ಮವನ್ನು ನಂಬಿಕೊಂಡ ಹಲವು ಜನರ ಮನದಲ್ಲಿ ಉಳಿದುಹೋದರು.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!