೨೦೧೬ ರಲ್ಲಿ ವಿಜಯ್ ಅವರ ಭೈರವ ಚಿತ್ರದಲ್ಲಿ ನಾನೊಬ್ಬ ಜಡ್ಜ್ ಪಾತ್ರವನ್ನು ನಿರ್ವಹಿಸುತ್ತಿದ್ದೆ. ವಿಜಯ್ ಅವರು ಒಬ್ಬ ಸಾಮಾಜಿಕ ಕಾರ್ಯಕರ್ತನ ಪಾತ್ರದಲ್ಲಿದ್ದರು ಸಹಜವಾಗಿಯೇ ಒಂದಿಷ್ಟು ಡ್ರಾಮಾಟಿಕ್ ಡೈಲಾಗ್’ಗಳನ್ನು ನೀಡಲಾಗಿತ್ತು. ನಾನು ಕೋರ್ಟ್ ದೃಶ್ಯದಲ್ಲಿ, ಪ್ರಮುಖವಾಗಿ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಲ್ಪ ನೈಜತೆಯನ್ನು ತರುವುದಕ್ಕಾಗಿ ಡೈರಕ್ಟರ್ ಜೊತೆ ಕುಳಿತು ಕೆಲ ದೃಶ್ಯಗಳನ್ನ ಪುನಃ ಬರೆಸಿದ್ದು ಚೆನ್ನಾಗಿ ನೆನಪಿದೆ.
ನಾನು ಸಿನಿಮಾ ರಂಗಕ್ಕೆ ಸೇರಿದವಳು, ಒಂಭತ್ತನೇ ವಯಸ್ಸಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮದುವೆಯಾಗಿದ್ದು ಕೂಡ ೬೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಒಬ್ಬ ನಟನನ್ನು. ಇಲ್ಲಿಯತನಕವೂ ನಟರ ನಡುವೆಯೇ ನನ್ನ ಬದುಕು ಸಾಗುತ್ತಿರುವುದು. ಕೆಲ ನಟರು ಮುಖ್ಯಮಂತ್ರಿಯ ಪದವಿಯನ್ನು ಅಲಂಕರಿಸಿದ್ದು ನಿಜ, ಆದರೆ ಹೆಚ್ಚಾಗಿ ಸಿನಿಮಾ ರಂಗದಲ್ಲಿರುವವರಿಗೆ ಚನ್ನಾಗಿ ಗೊತ್ತಿರುವುದು ನಟನೆ ಮಾತ್ರ. ಅವರಲ್ಲಿ ಹೆಚ್ಚಿನವರಿಗೆ ರಾಜಕೀಯದ ಗಂಧಗಾಳಿಯೂ ಇರುವುದಿಲ್ಲ, ತಿಳಿದುಕೊಳ್ಳುವ ಹಂಬಲವೂ ಇಲ್ಲ. ಕೆಲವರು ತಮ್ಮನ್ನ ತಾವು ಸ್ಟಾರ್ ಕ್ಯಾಂಪೇನರ್ ಆಗಿ ತೊಡಗಿಸಿಕೊಳ್ಳುವವರಿದ್ದಾರೆ ಅದೂ ಕೂಡ ಯಾವುದೋ ಪದವಿ, ಪ್ರಶಸ್ತಿ ಅಥವಾ ಶಾಸಕ ಸಭೆಯ ಸದಸ್ಯತ್ವ ಪಡೆಯುವ ಸಲುವಾಗಿ ಆಗಿರುತ್ತದೆ. ತಮಿಳುನಾಡು, ಆಂಧ್ರಪದೇಶ್/ತೆಲಂಗಾಣಗಳಲ್ಲಿ ನಟರು ಎಮ್.ಜಿ.ಆರ್, ಎನ್.ಟಿ.ಆರ್ ಅಥವಾ ಜಯಲಲಿತಾ ಅವರಂತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಾರೆ. ಆದರೆ ಕರ್ನಾಟಕ ಹಾಗೂ ಕೇರಳಗಳಲ್ಲಿ ಕೆಲವೇ ಕೆಲವರು ಆ ನಿಟ್ಟಿನಲ್ಲಿ ಯೋಚಿಸುತ್ತಾರೆ ಯಾಕೆಂದರೆ ಇಲ್ಲಿಯ ಪ್ರೇಕ್ಷಕರು ತಮಿಳುನಾಡು, ಆಂಧ್ರದವರಂತೆ ನಟರ ಹಿಂದೆ ಮಾರುಹೋಗುವುದಿಲ್ಲ. ಎಮ್.ಜಿ.ಆರ್, ಎನ್.ಟಿ.ಆರ್ ಹಾಗೂ ಜಯಲಲಿತಾ ಅವರಂತೆಯೇ ಚಿರಂಜೀವಿ, ವಿಜಯಕಾಂತ್ ಅವರು ಕೂಡ ರಾಜಕೀಯದಲ್ಲಿ ತೊಡಗಿಕೊಳ್ಳುವ ಪ್ರಯತ್ನ ಮಾಡಿದ್ದರು ಆದರೆ ಅದರಲ್ಲಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಸದ್ಯ ಕಮಲ ಹಾಸನ್ ಕೂಡ ಅದೇ ದಾರಿಯಲ್ಲಿ ಸಾಗಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಇವರುಗಳನ್ನು ‘ಮುಖ್ಯಮಂತ್ರಿ’ ಅಥವಾ ಒಬ್ಬ ಜನನಾಯಕನಂತೆ ಬಿಂಬಿಸುವ ಸಲುವಾಗಿ ತೆಗಯುವ ಸಿನೆಮಾಗಳು ವಾಸ್ತವದಿಂದ ತುಂಬಾ ದೂರದಲ್ಲಿರುತ್ತದೆ. ಪಕ್ಷವೊಂದು ಬಹುಮತ ಗಳಿಸಿ ನಂತರ ಆ ಪಾರ್ಟಿಯಿಂದ ಸಿ.ಎಂ. ಆಗಿ ಆರಿಸಲಾಗುತ್ತದೆ ಎನ್ನುವುದು ಸಂಪೂರ್ಣವಾಗಿ ಅವರ ಮನಸ್ಸಿನಿಂದ ಹೊರಗುಳಿದಿರುತ್ತದೆ. ಅವರ ಯೋಚನೆ ಎಮ್.ಜಿ.ಆರ್ ಅವರ ಫಾರ್ಮುಲಾವನ್ನು ಅನುಸರಿಸುವುದು. ಆದರೆ ಎಮ್.ಜಿ.ಆರ್ ಅಣ್ಣಾದುರೈ ಅವರ ಆಶ್ರಯದಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಅದೂ ಅಲ್ಲದೇ ಅಂದಿನ ಜನ ತಮ್ಮ ನೆಚ್ಚಿನ ನಟನ್ನನ್ನು ಸ್ವಲ್ಪವೂ ಪ್ರಶ್ನಿಸದೇ ಪೂಜಿಸುತ್ತಿದ್ದರು. ಆದರೆ ಈಗ ಹಾಗಿದೆಯೇ?
ನಿರ್ದೇಶಕ ಕೆ. ಬಾಲಚಂದರ್ ಅವರು ಸಮುಥಿರ ಕಣಿ ಅವರ ಬಳಿ ಕೋರ್ಟ್ ದೃಶ್ಯಗಳ ವಿಷಯದಲ್ಲಿ ಎಲ್ಲ ಸರಿಯಿದೆಯೇ ಇಲ್ಲವೇ ಎಂದು ನನ್ನೊಂದಿಗೆ ಒಮ್ಮೆ ಕ್ರಾಸ್ ಚೆಕ್ ಮಾಡುವಂತೆ ಹೇಳಿದ್ದು ಚನ್ನಾಗಿ ನೆನಪಿದೆ. ನಾನಾಗ ಆ ಸಿನೆಮಾದಲ್ಲಿ ಲಾಯರ್ ಪಾತ್ರ ನಿರ್ವಹಿಸುತ್ತಿದ್ದೆ. ಈಗಿನ ಎಷ್ಟು ಜನ ಸಿನೆಮಾಗೆ ಬರೆಯುವವರು ಈ ರೀತಿಯ ನಡೆಯನ್ನು ತೋರಿಸುತ್ತಾರೆ? ಸೀತಾರಾಮ್ ತಲಗವಾರ್ ಸ್ವತಃ ಒಬ್ಬ ಲಾಯರ್ ಆಗಿದ್ದರೂ ಕೂಡ ಇಂತಹ ದೃಶ್ಯಗಳನ್ನು ಬರೆಯುವಾಗ ಈ ಕುರಿತು ಚರ್ಚಿಸಲೆಂದೇ ಒಂದಿಷ್ಟು ಲಾಯರ್’ಗಳನ್ನು ಇಟ್ಟುಕೊಂಡಿದ್ದರು. ನಮ್ಮ ಕೋರ್ಟ್ ದೃಶ್ಯ ಹಾಗೂ ಆಸ್ಪತ್ರೆ ದೃಶ್ಯಗಳಲ್ಲಿ, ಹೀರೋಗಳಿಗೆ ಉದ್ದುದ್ದವಾದ ಡ್ರಾಮಾಟಿಕ್ ಸಾಲುಗಳನ್ನು ಕೊಡುವುದೇನೋ ನಿಜ ಆದರೆ ಅಲ್ಲಿ ನೈಜತೆಯನ್ನು ಮೂಡಿಸಲು ಬೇಕಾದ ರೀಸರ್ಚ್ ಅಲ್ಲಿರುವುದಿಲ್ಲ. ಕಾನೂನಿನ ಬಗ್ಗೆ, ಮಹಿಳೆಯರ ಬಗ್ಗೆ, ಆರೋಗ್ಯದ ವಿಷಯಗಳ ಬಗ್ಗೆ ಹೇಳುವಾಗ, ಅದರಲ್ಲೂ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುವವಂತಹ ವಿಷಯಗಳನ್ನು ತೆರೆ ಮೇಲೆ ತರುವಾಗ ಅವುಗಳ ಬಗ್ಗೆ ಯಾಕೆ ಸರಿಯಾದ ಗಮನ ನೀಡದೆ ಮಾಡಲಾಗುತ್ತದೆ ಎಂದು ಆಶ್ಚರ್ಯವಾಗುತ್ತದೆ ನನಗೆ! ನನಗೇನೋ ಕಾನೂನಿನ ತಿಳುವಳಿಕೆ ಇದೆ, ನನ್ನ ಜಾಗದಲ್ಲಿ ಬೇರೆ ಯಾರೋ ಈ ವಿಷಯದಲ್ಲಿ ಸಾಕಷ್ಟು ತಿಳುವಳಿಕೆ ಇಲ್ಲದವರು ಇಂತಹ ಪಾತ್ರ ನಿರ್ವಹಿಸಿದಾಗ ಅಲ್ಲೇನೋ ಬರೆದಿದೆಯೋ ಅದನ್ನಷ್ಟೇ ಹೇಳಿ ಬರುವಂತಾಗುವುದಿಲ್ಲವೇ? ಸಿನೆಮಾಗಳು ದೊಡ್ಡಮಟ್ಟದಲ್ಲಿ ಜನರ ಮೇಲೆ ಪರಿಣಾಮ ಬೀರುವಂತದ್ದು. ಸಿನೆಮಾಗಳಿಗೆ ಬರೆಯುವವರು ಬಹಳ ಕಾಲದಿಂದಲೂ ಇಂತಹ ಸಾಕಷ್ಟು ತಪ್ಪುಗಳನ್ನ ಮಾಡುತ್ತಲೇ ಬಂದಿದ್ದಾರೆ. ಸಂಬಂಧಿ, ಮಗಳು, ಅಥವಾ ಮಗನನ್ನು ತಪ್ಪಿತಸ್ಥರನ್ನಾಗಿ ಮಾಡಿ, ಅಲ್ಲಿಯ ಜಡ್ಜ್ ಆ ತಪ್ಪಿತಸ್ಥನ ತಂದೆ ಅಥವಾ ತಾಯಿ ಆಗಿರುವತಂಹ ಸನ್ನಿವೇಶಗಳನ್ನ ರೂಪಿಸಿ ಇಡೀ ಸಿನೆಮಾ ಇದರ ಮೇಲೆ ನಿಂತಿರುವಂತೆ ಮಾಡಿರುತ್ತಾರೆ. ಆದರೆ ವಾಸ್ತವಿಕವಾಗಿ ಕಾನೂನಿನಲ್ಲಿ ಇದು ನಿಷಿದ್ಧ.
ಮರ್ಸಲ್’ನಲ್ಲಿ ಜಿ.ಎಸ್.ಟಿ ವಿಷಯದಲ್ಲಾಗಿರುವ ತಪ್ಪು ಕೂಡ ಇಂತದ್ದೇ! ರೀಸರ್ಚ್’ ಕೊರತೆ, ತಪ್ಪು ಮಾಹಿತಿಗಗಳಿರುವ ಪಂಚ್ ಲೈನ್, ಸಿಂಗಾಪೂರ್’ನೊಂದಿಗೆ ಮಾಡಿರುವ ಅಪ್ರಾಯೋಗಿಕ ತುಲನೆ ಬಹುಶಃ ವಿಜಯ್ ಕೂಡ ಅದನ್ನ ಕ್ರಾಸ್ ಚೆಕ್ ಮಾಡುವ ಗೋಜಿಗೆ ಹೋಗಲಿಲ್ಲ, ರಾಜಕೀಯವಾಗಿ ಬೇರೆಯದೇ ದೃಷ್ಟಿಕೋನ ಇಟ್ಟುಕೊಂಡಿದ್ದರಿಂದಲೇನೋ ಅವರ ಉದ್ದೇಶ ಕೇವಲ ಸರ್ಕಾರ, ಬಿಜೆಪಿ/ಮೋದಿಯ ವಿರುದ್ಧ ತಮ್ಮ ಅಸಮಾಧಾನ ತೋರಿಸಿಕೊಳ್ಳುವುದಾಗಿತ್ತು. ಜಿ.ಎಸ್.ಟಿ’ಯಲ್ಲಿ ಅಥವಾ ಅರ್ಥವ್ಯವಸ್ಥೆಯಲ್ಲಿನ ನ್ಯೂನತೆಗಳು ಅವರಿಗೆ ಅರ್ಥವಾಗಿಬಿಟ್ಟಿದೆ ಅಂತಲ್ಲ ಬದಲಾಗಿ ಒಂದಷ್ಟು ಪಂಚ್ ಲೈನ್’ಗಳನ್ನು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಷ್ಟಕ್ಕೇ ಇದು. ಕೆಲ ನಟರು ಸಿನೆಮಾ ಸನ್ನಿವೇಶಗಳಲ್ಲಿ ರಾಜಕೀಯ ಲಾಭವನ್ನು ಬಯಸುತ್ತಿರುವುದು ದುರದೃಷ್ಟಕರ, ಆದರೆ ಇಂದಿನ ಜನಗಳು ಹಿಂದಿನ ಹಾಗೆ ಅಷ್ಟೊಂದು ಮುಗ್ಧರಾ ಎನ್ನುವುದು ಪ್ರಶ್ನೆ? ಬೃಹತ್ತಾದ ದೇಶ ನಮ್ಮದು. ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದೆ ನಮ್ಮ ದೇಶ. ಆದರೆ ನಟರು ನಟರಷ್ಟೇ, ಸಂವಿಧಾನವನ್ನು ಓದುವುದು ಅವರಿಗೆ ಸಂಬಂಧಪಟ್ಟಿದ್ದಲ್ಲವಲ್ಲ.
ಸಿನೆಮಾಗಳಲ್ಲಿ ತಮ್ಮನ್ನ ತಾವು ಸಾಮಾಜಿಕ ಕಳಕಳಿಯುಳ್ಳವವರು ಅಥವಾ ಮುಖ್ಯಮಂತ್ರಿಯಂತೆ ತೋರಿಸಿ, ಪಂಚ್ ಲೈನ್’ಗಳನ್ನು ಎಸೆಯುವ ಮುನ್ನ ತಮ್ಮ ನಿರ್ದೇಶಕ ಹಾಗೂ ಬರಹಗಾರರಿಗೆ ಸ್ವಲ್ಪ ರೀಸರ್ಚ್ ಮಾಡಿಕೊಳ್ಳುವಂತೆ ಹೇಳುವುದು ಒಳ್ಳೆಯದು. ಹಾಗೇ ಸ್ವಲ್ಪ ದಿನಪತ್ರಿಕೆಗಳನ್ನು ಓದುವುದೂ ಒಳ್ಳೆಯದು!
(ಮಾಳವಿಕ ಅವಿನಾಶ್ ಅವರ ಫೇಸ್ಬುಕ್’ನಿಂದ ಆಯ್ದುಕೊಳ್ಳಲಾದ ಬರಹದ ಕನ್ನಡ ಅನುವಾದ)