ಕೆಲವೊಮ್ಮೆ ನಾವು ಕಲ್ಪನೆಯಲ್ಲೂ ಊಹಿಸಬಾರದು ಅಂದುಕೊಂಡಿರುವ ಘಟನೆ ಕಣ್ಣೆದುರಿಗೆ ನಡೆದರೆ ಹೇಗೆನಿಸಬಹುದು? ಮೊನ್ನೆ ಮುಂಬಯಿ ಪ್ರಭಾದೇವಿ ಅಥವಾ ಎಲ್ಪಿನಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಆದ ಘಟನೆ ಕಲ್ಪನೆಯಲ್ಲೂ ಊಹಿಸಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ಇಂತಹ ಘಟನೆ ನಡೆದ ಸುದ್ದಿ ಕೇಳಿ ನಿಂತ ನೆಲವೇ ಕಳಚಿಬಿದ್ದಂತಾಯಿತು. ಮೊನ್ನೆಯ ಈ ಘಟನೆ ಇಡೀ ಮುಂಬಯಿ ನಗರವನ್ನೇ ತಲ್ಲಣಗೊಳಿಸಿದೆ. ಕಾಲ್ತುಳಿತಕ್ಕೆ ಸಿಕ್ಕಿ ಸಾವನಪ್ಪಿದ, ಗಾಯಗೊಂಡವರ ವಸ್ತುಗಳನ್ನು, ಛತ್ರಿಗಳನ್ನು, ಬ್ಯಾಗುಗಳನ್ನು ಹೆಕ್ಕಿ ಪೋಲಿಸ್ ಠಾಣೆಯಲ್ಲಿ ಇಟ್ಟಿದ್ದಾರೆ. ಅದನ್ನು ನೋಡುವಾಗ ಯಾರೋ ನಮ್ಮವರಲ್ಲೇ ಒಬ್ಬವರಿಗೆ ಹೀಗಾಯಿತಲ್ಲ ಎನ್ನುವ ಆ ಭಾವನೆ ಹೃದಯವನ್ನು ಮತ್ತೆ ಮತ್ತೆ ಕುಕ್ಕುತ್ತಿದೆ. ಬಾಂಬ್ ಸ್ಫೋಟ ಆಗಲಿ, ಭಯೋತ್ಪಾದಕರ ದಾಳಿ ಆಗಲಿ, ಅತಿವೃಷ್ಟಿಯಾಗಿ ಪ್ರವಾಹ ಬಂದಿದ್ದಿರಲಿ ಮುಂಬಯಿ ಜನ ಎಲ್ಲದಕ್ಕೂ ತಾಳಿಕೊಂಡು ಬಾಳಿಕೊಂಡು ಹೋಗುತ್ತಾರೆ. ಕೆಲವೊಂದು ಸನ್ನಿವೇಶದಲ್ಲಿ ಅಲ್ಲಿ ಹಣಕ್ಕೆ ಇರುವ ಬೆಲೆ ಹೆಣಕ್ಕೆ ಇಲ್ಲವೇ ಅಂತ ಅನಿಸುತ್ತದೆ. ಈ ದುರದೃಷ್ಟಕರ ಘಟನೆಗೆ ಕಾರಣ ಏನು ಅಂತ ಕೇಳಿದರೆ ಜನ ಹತ್ತಾರು ಕಾರಣವನ್ನು ಕೊಡುತ್ತಾರೆ.
ಮೊದಲನೆಯದಾಗಿ ಹೇಳಬೇಕು ಅಂದರೆ ಜೋರಾಗಿ ಬರುತ್ತಿದ್ದ ಮಳೆಯೇ ಕಾರಣ ಎನ್ನುತ್ತಾರೆ. ಮಳೆ ವಿಪರೀತ ಜೋರಾಗಿ ಬರುತ್ತಿತ್ತು, ಮಳೆಯಿಂದ ತಪ್ಪಿಸಿಕೊಳ್ಳಲು ಮೇಲು ಸೇತುವೆಯ ಮೇಲೆ ಜನರು ಒಬ್ಬೊಬ್ಬರಾಗಿ ಜಮಾಯಿಸುತ್ತಾ ಹೋದರು. ಮೊದಲೇ ಬಂದಿದ್ದ ಹೂ ಮಾರುವವರು, ಮೀನು ಮಾರುವವರು ಮುಂದೆ ಹೋಗಿ ನಿಂತು ರಸ್ತೆಯನ್ನು ತಡೆದಿದ್ದರು. ಮೇಲುಸೇತುವೆಯಿಂದ ಇಳಿಯ ಬೇಕಾದ ಜನರು ಇಳಿಯಲೇ ಇಲ್ಲ. ಹಿಂದಿನಿಂದ ಜನರು ಒತ್ತಡ ಹೇರುತ್ತಾ ಹೋದಾಗ ಮಧ್ಯದಲ್ಲಿದ್ದ ಜನರು ಕುಸಿದು ಬಿದ್ದರು. ಮೊದಲ ಬಾರಿ ನೂಕು ನುಗ್ಗಲು ನಡೆದು ಕೆಲವು ಹೆಂಗಸರು ಕುಸಿದು ಬಿದ್ದಾಗ ಜನರೇ ಸೇರಿ ಅವರನ್ನೆಲ್ಲ ಎಬ್ಬಿಸಿದರು ಆದರೆ ಎರಡನೇ ಬಾರಿ ನೂಕು ನುಗ್ಗಲು ಹೆಚ್ಚಿದಾಗ ಜನರ ನಿಯಂತ್ರಣ ತಪ್ಪಿ ಬಿದ್ದ ಜನರು ಇನ್ನೊಬ್ಬರ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದರು. ಮೂವತ್ತಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡರು.
ಎರಡನೆಯದಾಗಿ ಸೇತುವೆಯ ಅಗಲ ತುಂಬಾ ಚಿಕ್ಕದು ಎನ್ನುವುದು. ಅಲ್ಲಿ ಖಾಯಂ ಆಗಿ ಪ್ರಯಾಣ ಮಾಡುವವರು ಹೇಳಿದ ಪ್ರಕಾರ ಆ ಸೇತುವೆ ಇಂಡಿಯಾ ಬುಲ್ಸ್ ಕಟ್ಟಡಕ್ಕೆ ಹೋಗಲಿಕ್ಕಿರುವ ಶಾರ್ಟ್ ಕಟ್. ಆ ಕಟ್ಟಡದಲ್ಲಿ ಬಹಳಷ್ಟು ಜನ ಕೆಲಸ ಮಾಡುತ್ತಾರೆ ಹೀಗಾಗಿ ಆ ಸೇತುವೆ ಯಾವಾಗಲೂ ಬ್ಯುಸಿ ಆಗಿಯೇ ಇರುತ್ತದೆ. ಆಫೀಸ್ ಸಮಯದಲ್ಲಂತೂ ಗಾಳಿಗೂ ಹರಿದಾಡಲು ಅವಕಾಶವಿಲ್ಲ. ಅಲ್ಲದೇ ಆ ಸೇತುವೆಯನ್ನು ಮುಂಬಯಿ ಸೆಂಟ್ರಲ್ ಹಾಗೂ ವೆಸ್ಟರ್ನ್ ಲೈನ್ಸ್ ಎರಡೂ ಕಡೆ ಹೋಗುವವರು ಬಳಸುತ್ತಾರೆ. ಆವತ್ತು ಆ ಸಮಯದಲ್ಲಿ ಒಮ್ಮೆಲೆ ಮೂರು -ನಾಲ್ಕು ರೈಲ್ವೆ ಪಾಸ್ ಆಯಿತಂತೆ, ಒಟ್ಟಿನಲ್ಲಿ ಆರು ಏಳು ಸಾವಿರ ಜನ ನಿಲ್ದಾಣದಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಾಲ್ಕು ಮಂದಿ ಒಮ್ಮೆ ನಡೆಯಲೂ ಸಾಧ್ಯವಾಗದಷ್ಟು ಚಿಕ್ಕದಾದ ನೂರು ವರ್ಷ ಹಳೆಯದಾದ ಸೇತುವೆ. ಇಷ್ಟು ಜನ ಎಲ್ಲಿಗೆ ಹೋಗಬೇಕು? ಇದು ನೂಕುನುಗ್ಗಲಿಗೆ ಕಾರಣವಾಯಿತು ಎನ್ನುತ್ತಾರೆ.
ಮೂರನೆಯ ಮುಖ್ಯವಾದ ಕಾರಣ ಅಂದರೆ ಸುಳ್ಳು ವದಂತಿಗಳು ಹಬ್ಬಿದ್ದು. ಸೇತುವೆಯನ್ನು ಇಳಿಯಲು ನೆರವಾಗಲು ಸ್ಟೀಲ್ ಟ್ಯೂಬ್ಗಳನ್ನು ಬಳಸಲಾಗಿದೆ. ಜನರು ಅದನ್ನು ಆಧಾರವಾಗಿ ಹಿಡಿದುಕೊಂಡು ಇಳಿಯುತ್ತಾರೆ. ಸೇತುವೆಯ ಪಕ್ಕವೇ ತಾಗುವಂತೆ ಒಂದು ಎಲೆಕ್ಟ್ರಿಕ್ ಕಂಬವಿದೆ, ಆದರೆ ಅದರಲ್ಲಿ ವಿದ್ಯುತ್ ಹರಿಯುವುದಿಲ್ಲ. ಆದರೆ ತುಸು ದೂರದಲ್ಲಿ ಒಂದು ಟ್ರಾನ್ಸಫಾರ್ಮರ್ ಟವರ್ ಇದೆ. ಮಳೆ ಜೋರಾಗಿತ್ತು, ಯಾರೋ ಕರೆಂಟು ಲೈಟ್ ಕಂಬದಿಂದ ಹರಿದು ಜನರು ಹಿಡಿದು ನಿಂತಿರುವ ಸೇತುವೆಯ ಸ್ಟೀಲ್ ಸರಳಿಗೆ ಹರಿಯುತ್ತಿದೆ ಎಂಬ ಸುದ್ದಿ ಹಬ್ಬಿಸಿದರಂತೆ. ಇದಕ್ಕೆ ಹೆದರಿ ಜನರು ಚೆಲ್ಲಾಪಲ್ಲಿಯಾದರು. ಇನ್ನು ಯಾರೋ, ಮೇಲು ಸೇತುವೆ ಕುಸಿದು ಬೀಳುತ್ತಿದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿದರು. ಇದರಿಂದ ಇನ್ನಷ್ಟು ಜನ ಭಯಭೀತರಾಗಿ ಓಡತೊಡಗಿದರು. ಇದೆಲ್ಲಾ ಸೇರಿ ‘ಕಾಂಪೌಂಡ್ ಎಫೆಕ್ಟ್’ ಆಗಿ ಹೃದಯವಿದ್ರಾವಕ ಘಟನೆ ನಡೆದು ಹೋಯಿತು. ಸೇತುವೆಯ ಒಂದೇ ಕಡೆಯಿಂದ ಹೊರಗೆ ಬರುಬಹುದಿತ್ತು. ಮುಂದೆ ಹೋಗುವ ಹಾಗಿಲ್ಲ, ಹಿಂದೆ ಬರುವ ಹಾಗಿಲ್ಲ, ಎಡಕ್ಕೆ ತೆರೆದಿದೆ, ಬಲಕ್ಕೆ ತಗಡು ಹೊದೆಸಿದ್ದಾರೆ. ಒಬ್ಬರ ಮೇಲೊಬ್ಬರು ಬಿದ್ದಾಗ ಎಲ್ಲಯೂ ಹೋಗುವ ಹಾಗಿರಲಿಲ್ಲ. ಅರ್ಧದಷ್ಟು ಮಂದಿ ಉಸಿರಾಡಿಸಲು ಸಾಧ್ಯವಾಗದೇ ಮೃತಪಟ್ಟಿದ್ದು ದುರದೃಷ್ಟಕರ.
ಈ ಘಟನೆಗೆ ಯಾರು ಕಾರಣ? ಮೋದಿಯವರು ಘೋಷಿಸಿದ ಬುಲೆಟ್ ಟ್ರೇನ್? ಮುಂಬಯಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವಾಜಿ ಮೂರ್ತಿಯೇ? ನಿಲ್ದಾಣದ ಎಲ್ಫಿನ್ಸ್ಟೋನ್ ಎಂಬ ಹೆಸರನ್ನು ಪ್ರಭಾದೇವಿ ಎಂದು ಬದಲಾಯಿಸಿದ್ದೇ? ಇಂತಹ ಸಂದರ್ಭದಲ್ಲಿ ಈ ತರಹದ ಕ್ಷುಲ್ಲಕ ಕಾರಣಗಳನ್ನು ತಂದು ಜನರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದನ್ನು ನೋಡಿದಾಗ ಬಹಳ ಬೇಸರವೆನಿಸುತ್ತದೆ. ಈ ಘಟನೆಯ ಹಿಂದೆ ಜನರ ಹಾಗೂ ಸರ್ಕಾರದ ಸಮಪಾಲು ಇದೆ. ಜನರಿಗೆ ಸ್ವಲ್ಪವೂ ಸಹನೆ ಬೇಡವೇ? ಹತ್ತು ನಿಮಿಷ ಕಾಯುವಷ್ಟು ತಾಳ್ಮೆ ನಮ್ಮಲ್ಲಿ ಇಲ್ಲ. ಟ್ರಾಫಿಕ್ ಇರಲಿ, ರೈಲ್ವೆ ನಿಲ್ದಾಣವಿರಲಿ ನಮಗೆ ಧಾವಂತ. ಮಳೆಯಲ್ಲಿ ನೆನೆಯಬಾರದು ಎಂದು ಮುಂದೆ ಹೋಗಿ ದಾರಿ ಕಟ್ಟಿ ನಿಲ್ಲುವುದು ಯಾವ ನ್ಯಾಯ? ಮುಂಬಯಿಯ ಹೆಚ್ಚಾಗಿ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿಯ ವರ್ತನೆಯನ್ನು ಕಾಣಬಹುದು ಎಂದು ಪರಿಚಯದೊಬ್ಬವರು ಹೇಳುತ್ತಿದ್ದರು. ನಾವು ಬದಲಾಗುವುದು ಯಾವಾಗ? ಹದಿನೈದು ನಿಮಿಷ ತಾಳಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳು ಹೇಳುತ್ತಿದ್ದಾರೆ. ಒಂದೇ ಸಲ ನಾಲ್ಕು ರೈಲ್ವೆ ನಿಂತಿದ್ದು ಜನರ ಸಂಖ್ಯೆ ಹೆಚ್ಚಾಗಲು ಕಾರಣ ಅನ್ನುವುದಾದರೆ ಒಬ್ಬರಾದ ಮೇಲೆ ಇನ್ನೊಬ್ಬರು ಹೋಗುವ ಶಿಸ್ತು ನಮ್ಮಲ್ಲಿ ಇಲ್ಲವೇ? ಶಿಸ್ತನ್ನು ಸರ್ಕಾರ ಎಲ್ಲರ ಮನೆಗೆ ಬಂದು ಕಲಿಸಲಾಗದು. ಇದನ್ನು ಕಲಿಸಬೇಕು ಅಂದರೆ ಮಿಲಿಟರಿಯ ಯೋಧರು ಬಂದೂಕು ಹಿಡಿದು ನಿಲ್ಲಬೇಕು, ಇಲ್ಲವೇ ನಾವು ನಾವಾಗಿಯೇ ಕಲಿತು ನಡೆಯಬೇಕು. ಇನ್ನೊಂದು ಮುಖ್ಯವಾಗಿ ಜನರು ಅರಿಯ ಬೇಕಾಗಿರುವ ವಿಷಯ ಅಂದರೆ ತಮ್ಮ ಜವಾಬ್ದಾರಿ ತಿಳಿದು ಅದಕ್ಕೆ ತಕ್ಕನಾಗಿ ವರ್ತಿಸುವುದು. ಸುಳ್ಳು ವದಂತಿ ಹಬ್ಬಿಸಿದ್ದು ಯಾಕೆ? ಅದರಿಂದ ಯಾರಿಗೆ ಲಾಭ ಆಗಿದ್ದು? ಯಾರೋ ಮಾಡಿದ ತಪ್ಪಿಗೆ ಇನ್ನಾರದ್ದೋ ಜೀವ ಹೋಯಿತಲ್ಲ? ಸರ್ಕಾರ ಏನೇ ಮಾಡಲಿ ನಮ್ಮ ಈ ರೀತಿಯ ವರ್ತನೆ ಬದಲಾಗದ ಹೊರತು ದೇಶ ಬದಲಾಗುವುದಿಲ್ಲ.
ಇನ್ನು ಸರ್ಕಾರ ಹಾಗೂ ರೈಲ್ವೆ ಅಧಿಕಾರಿಗಳ ಪಾತ್ರ ಎಷ್ಟು ದೂಷಿಸಿದರೂ ಕಡಿಮೆ. ಶಿವಸೇನಾ ಪಕ್ಷದ ಅರವಿಂದ್ ಸಾವಂತ್ ಹಾಗೂ ರಾಹುಲ್ ಶಿವಾಲೆ ರೈಲ ಮಂತ್ರಿಯಾಗಿದ್ದ ಸುರೇಶ್ ಪ್ರಭುವಿಗೆ ಹೊಸ ಸೇತುವೆ ಮಾಡಬೇಕು ಎಂದು ಒತ್ತಾಯಿಸಿ ಎರಡೆರಡು ಬಾರಿ ಪತ್ರ ಬರೆದಿದ್ದರಂತೆ. ಆದರೆ ಹಣಕಾಸಿನ ಕೊರತೆಯಿಂದ ಇವತ್ತಿನ ತನಕ ನೂರು ವರ್ಷದ ಹಳೆಯ ಬ್ರಿಡ್ಜ್ ಹೇಗಿತ್ತೋ ಹಾಗೆಯೇ ಇದೆ. ಅಷ್ಟೇ ಯಾಕೆ, ಅಲ್ಲಿ ಪ್ರತಿ ದಿನವೂ ಕಷ್ಟ ಪಡುವ ಜನರು ಅದೆಷ್ಟು ಬಾರಿ ಟ್ವಿಟರ್ ಮೂಲಕ, ಪತ್ರದ ಮೂಲಕ ವಿಲ್ಲಾ ಪಾರ್ಲೆ ಹಾಗೂ ಎಲ್ಪಿನ್ಸ್ಟೋನ್ ಮಧ್ಯೆ ಸರಿಯಾದ ಸೇತುವೆ ಬೇಕು ಅಂತ ಕೋರಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಅದು ಯಾವುದಕ್ಕೂ ಸರ್ಕಾರ ಸ್ಪಂದಿಸಲೇ ಇಲ್ಲ. ಇದು ಕೇವಲ ‘ಈ ಸರ್ಕಾರದ’ ಚರಿತ್ರೆಯ ವಧೆಯಲ್ಲ, ಮೊದಲು ಆಳಿ ಹೋದ ಎಲ್ಲ ಸರ್ಕಾರಗಳು ಮಾಡಿದ್ದೂ ಇಷ್ಟನ್ನೇ! ಈ ರೈಲ್ವೆ ನಿಲ್ದಾಣದ ಸುತ್ತಮುತ್ತಲು ಸಾಕಷ್ಟು ಕಂಪನಿಗಳಿವೆ. ಎಕ್ಸಿಸ್ ಬ್ಯಾಂಕ್ ಮುಖ್ಯ ಕಛೇರಿ, ಇಂಡಿಯಾ ಬುಲ್ಸ್, ಇತ್ಯಾದಿ. ಆಶ್ಚರ್ಯಕರ ಅಂದರೆ ಎಷ್ಟೊಂದು ಮಿಡೀಯಾ ಹೌಸ್ಗಳು ಅದರ ಸುತ್ತಮುತ್ತಲೇ ಇದೆ ಯಾರೊಬ್ಬರೂ ಇದನ್ನು ದೊಡ್ಡ ವಿಷಯವಾಗಿ ಮಾಡಲಿಲ್ಲ! ಜಾತಿ, ಧರ್ಮ, ವಿಶ್ವವಿದ್ಯಾಲಯ, ಸಲ್ಮಾನ್ ಖಾನ್, ಶಾರುಖ್ ಖಾನ್, ಇಂದ್ರಾಣಿ ಮುಖರ್ಜಿ, ಆ ಹೇಳಿಕೆ, ಈ ಹೇಳಿಕೆ ಅಂತ ತಿಂಗಳುಗಟ್ಟಲೆ ಚರ್ಚೆ ಮಾಡುವ ಮಿಡಿಯಾ ಮಹಾಪುರುಷರಿಗೆ ಇದು ಕಾಣಲೇ ಇಲ್ಲವೇ? ಟಿ.ಆರ್.ಪಿ. ಸಿಗುವುದಿಲ್ಲ ಅಲ್ಲವೇ? ಇರಲಿ ಬಿಡಿ. ನಿಲ್ದಾಣದಲ್ಲಿ ಜನರನ್ನು ನಿಯಂತ್ರಿಸಬಲ್ಲ ಒಂದು ಪ್ರಬಲವಾದ ಧ್ವನಿವರ್ಧಕವಿಲ್ಲ. ಸಿಸಿಟಿವಿ ಇಲ್ಲ. ಒಳಗೆ ಬರಲು, ಹೊರಗೆ ಹೋಗಲು ಸರಿಯಾದ ದಾರಿ ಇಲ್ಲ. ಶುರುವಾದ ಕೆಲಸ ವರ್ಷಾನುಗಟ್ಟಲೆ ಮುಗಿಯುವುದಿಲ್ಲ. ಜನರ ಕೂಗು ಸರ್ಕಾರದ ಕಿವಿಯ ತನಕ ಮುಟ್ಟುವುದಿಲ್ಲ. ಯಾವತ್ತು ಸರ್ಕಾರ ಜನರಿಗಾಗಿ ಕೆಲಸ ಮಾಡುವುದು? ಯಾವತ್ತು ನಮ್ಮ ಸರ್ಕಾರ ಜನಪರ ನೀತಿಗಳನ್ನು ತರುವುದು?
ಇದು ಕೇವಲ ಇಪ್ಪತ್ತೆರಡು ಸಾವಿಗೆ ಮುಗಿಯುವ ಕಥೆಯಲ್ಲ. ಸರ್ಕಾರಕ್ಕೆ ಹಾಗೂ ಜನರಿಗೆ ಹೊಡೆದೆಬ್ಬಿಸಿದ ದಿನ ಇದು. ಪ್ರತಿ ದಿನವೂ ಲೋಕಲ್ ಟ್ರೇನಿನಲ್ಲಿ ಸುಮಾರು ಎಂಬತ್ತು ಲಕ್ಷ ಜನ ಪ್ರಯಾಣಿಸುತ್ತಾರೆ. ಇದು ಸ್ವಿಟ್ಜರ್ಲೆಂಡ್ ಜನಸಂಖ್ಯೆಗಿಂತಲೂ ಜಾಸ್ತಿ. ಒಂದು ವರ್ಷಕ್ಕೆ ಸುಮಾರು ‘ಮೂನ್ನೂರು ಕೋಟಿ’ ಯಾತ್ರಿಗಳು ಲೋಕಲ್ ಟ್ರೇನಿನಲ್ಲಿ ಸವಾರಿ ಮಾಡುತ್ತಾರೆ. ಜಗತ್ತಿನ ಜನಸಂಖ್ಯೆಯು ಮೂರರಲ್ಲಿ ಒಂದು ಭಾಗ ಇದು. ಕೇವಲ ಎರಡೇ ಎರಡು ಗಂಟೆ ನಿಂತಿರುತ್ತದೆ, ದಿನದ ಇಪ್ಪತ್ತೆರಡು ಗಂಟೆಗಳ ಕಾಲ ಸುಮಾರು ಮೂರು ಸಾವಿರ ರೈಲುಗಳು ನಾಲ್ಕುನೂರಾ ಐವತ್ತು ಕಿಮೀ ದೂರವನ್ನು ಚಲಿಸುತ್ತಿರುತ್ತವೆ. ಬೆಂಗಳೂರಿನಿಂದ ಚೆನೈ ಮುನ್ನೂರೈವತ್ತು ಕಿ.ಮೀ. ದೂರವಿದೆ, ಅದಕ್ಕಿಂತ ಹೆಚ್ಚು ಲೋಕಲ್ ಟ್ರೇನ್ ಸಂಪರ್ಕ ಇದೆ. ಜನರು ಕಾಯುವುದೇ ಬೇಡ, ಪ್ರತೀ ಮೂರು ನಿಮಿಷಕ್ಕೊಮ್ಮೆ ಟ್ರೇನ್ ಬರುತ್ತಿರುತ್ತದೆ. ಜಗತ್ತಿನ ಅತೀ ಕಡಿಮೆ ದರದ ಪ್ರಯಾಣ ಇದಾಗಿದೆ. ನೂರಾ ಇಪ್ಪತ್ತು ಕಿಮೀ ದೂರವನ್ನು ಕೇವಲ ಮೂವತ್ತು ರೂಪಾಯಿ, ಅರ್ಧ ಡಾಲರ್ ಗಿಂತ ಕಡಿಮೆ, ದರದಲ್ಲಿ ಕ್ರಮಿಸಬಹುದು. ಇದೇ ಕಾರಣಗಳಿಂದ ಎಂಬತ್ತು ಜನರು ಕೂಡಬಹುದಾದ ಒಂದು ಬೋಗಿಯಲ್ಲಿ ಮುನ್ನೂರಕ್ಕೂ ಹೆಚ್ಚು ಜನ ತುಂಬಿಕೊಳ್ಳುತ್ತಾರೆ. ಕೆಲವೊಮ್ಮೆ ಅಲ್ಲಿ ಉಸಿರಾಡುವುದಕ್ಕೂ ಕಷ್ಟ. ಒಂದು ರೈಲಿನಲ್ಲಿ ಹನ್ನೆರಡು ಬೋಗಿ ಇರುತ್ತದೆ. ಒಮ್ಮೆ ರೈಲು ನಿಂತರೆ ಒಂದು ನಿಮಿಷದಲ್ಲಿ ಕೆಲವೊಂದು ಸ್ಟೇಷನ್ ನಲ್ಲಿ ಕಡಿಮೆ ಅಂದರೆ ಸಾವಿರ ಮಂದಿ ಇಳಿಯಬೇಕು, ಅಷ್ಟೇ ಹತ್ತಬೇಕು! ಮುಂಬಯಿ ಲೋಕಲ್ ನಿಂತರ ನಗರದ ರಕ್ತಸಂಚಾರವೇ ನಿಂತಂತೆ. ಈ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರ ಏನು ಮಾಡುತ್ತಿದೆ? ಮೆಟ್ರೋ, ಸ್ಕೈ ಲೈನ್ ಎಲ್ಲವೂ ಆಗುತ್ತಿದೆ. ಆದರೆ ಸಮಸ್ಯೆ ಬಗೆ ಹರಿದಿಲ್ಲ. ಟ್ರ್ಯಾಕ್ ಹೆಚ್ಚು ಮಾಡುವ ವಿಚಾರ ಇದೆಯೇ? ಬೋಗಿಯನ್ನು ಹೆಚ್ಚಿಸುವ ವಿಚಾರ ಇದೆಯೇ? ಅಥವಾ ಮುಂಬಯಿ ನಗರವನ್ನು ವಿಸ್ತಾರ ಮಾಡುವ ವಿಚಾರ ಇದೆಯೇ? ಯಾವುದು ಹತ್ತಿರದ ದಿನಗಳಲ್ಲಿ ನಡೆಯುವ ಹಾಗೆ ಕಾಣುತ್ತಿಲ್ಲ. ಮುಂಬಯಿ ಲೋಕಲ್ ಹಾಗೂ ಮುಂಬಯಿ ಶಹರ ತುಂಬಿ ತುಳುಕಾಡುತ್ತಿದೆ. ಅತ್ತ ವಿರಾರನಿಂದ, ಇತ್ತ ಕರ್ಜತನಿಂದ, ಇನ್ನು ಕಸಾರಾದಿಂದ ಹೀಗೆ ದೂರ ದೂರದಿಂದ ಜನಸಾಗರವೇ ಬರುತ್ತದೆ. ಇದನ್ನು ನಿಯಂತ್ರಣ ಮಾಡದ ಹೊರತು ಮುಂಬರುವ ದಿನಗಳಲ್ಲಿ ಇಂತಹ ಅವಘಡ ತಪ್ಪಿಸುವುದು ಕಷ್ಟ. ಜನರಿಗೆ ಮುಂಬಯಿ ಲೋಕಲ್ ಎನ್ನುವುದು ಒಂದು ಹಾಸ್ಯ ಅನಿಸಿದೆ. ಮೊನ್ನೆ ನಾವು ಕಂಡಿದ್ದು ಒಬ್ಬ ಮನುಷ್ಯನಾಗಿ ನೋಡಬೇಕಾಗಿ ಬಂದ ಅತ್ಯಂತ ದುರ್ದೈವ ಸಂಗತಿ. ವಿಲ್ಲಾ ಪಾರ್ಲೆ ಅಷ್ಟೇ ಅಲ್ಲ, ದಾದರ್, ಕುರ್ಲಾ ಇಂತಹ ನಿಲ್ದಾಣದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.
ಮನೇಕಾ ಗಾಂಧಿಯವರು ಕುರಿ, ಕೋಳಿ, ದನ ಕರಗಳ ಸಾಗಾಣಿಕೆಗೆ ಹೋರಾಟ ನಡೆಸುತ್ತಾರೆ ಒಮ್ಮೆ ಲೋಕಲ್ ಹತ್ತಿ ಪ್ರಯಾಣಿಸಿ ನೋಡಬೇಕು. ಚೆನೈ ಸೆಂಟ್ರಲ್ ಗೆ ಬಂದು ಒಮ್ಮೆ ಹಾವಡಾ ಟ್ರೇನ್ ನಲ್ಲಿಯ ಜನರಲ್ ಬೋಗಿಯನ್ನು ನೋಡಬೇಕು, ಬೆಂಗಳೂರಿನಿಂದ ಹೊಡರುವ ಗೌಹಾಟಿ ಟ್ರೇನಿನ ಜನರಲ್ ಬೋಗಿ ನೋಡಬೇಕು, ದೆಹಲಿಯಿಂದ ಹೊಡರುವ ಪಾಟ್ನಾ ರೈಲ್ ನೋಡಬೇಕು. ಮನುಷ್ಯನ ಜೀವನ ಪ್ರಾಣಿಗಿಂತಲೂ ಕಡೆಯಾಗಿದೆ! ಜೀವಕ್ಕೆ ಬೆಲೆಯಿಲ್ಲದ ಹಾಗಾಗಿದೆ. ಮೊನ್ನೆ ನಡೆದ ಘಟನೆಯನ್ನು ಮರೆಯುವ ಹಾಗಿಲ್ಲ. ಇದು ಕೇವಲ ಒಂದು ಘಟನೆ ಅಲ್ಲ. ನಾವು ಬದುಕುತ್ತಿರುವ ಪರಿಸರದ ಬಿಂಬ, ನಮ್ಮ ವರ್ತನೆಗಳ ಕನ್ನಡಿ, ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಕ್ಕ ಚೇತಾವಣಿ. ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಜನರು ಸಾಯುವ ಪರಿಸ್ಥಿತಿ ಬಂದಿದೆಯೇ? ಇವತ್ತು ಇಪ್ಪತ್ತೆರಡು, ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಎಪ್ಪತ್ತೆರಡು!
(ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಬರಹ)