Featured ಅಂಕಣ

ಗ್ರಾಮ ವಿಕಾಸದ ಕಲ್ಪನೆಗೆ ನಾಂದಿ ಹಾಡಿದ ದಿಟ್ಟ ಮಹಿಳೆ

‘ಕಡ್ಡಾಯವಾಗಿ ಹಸಿಕಸವನ್ನು ಮತ್ತು ಪ್ಲಾಸ್ಟಿಕ್‍ನ್ನು ಬೇರ್ಪಡಿಸಿ ಕೊಡಿ, ಇಲ್ಲದಿದ್ದರೇ ನಿಮ್ಮ ಮನೆಯಿಂದ ತ್ಯಾಜ್ಯ ವಸ್ತುಗಳನ್ನೇ ವಿಲೇವಾರಿ ಮಾಡುವುದಿಲ್ಲ’ ಈಗೆನ್ನುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಲ್ಯಾಲ ಗ್ರಾಮದ ಮಹಿಳೆಯೊಬ್ಬರು ಸಮಗ್ರ ಗ್ರಾಮವನ್ನು ಸ್ವಚ್ಚ, ಸುಂದರ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವ ಕಲ್ಪನೆಯೊಂದಿಗೆ ವಿನೂತನವಾದ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಪ್ರಸ್ತುತ ಲ್ಯಾಲ ಗ್ರಾಮದಲ್ಲಿ ಸ್ವಚ್ಚ ಪರಿಸರ, ವ್ಯಸನಮುಕ್ತ ಸಮಾಜ, ಬಾಲಕಾರ್ಮಿಕ ನಿರ್ಮೂಲನೆ ಮುಂತಾದ ಘೋಷಣೆಗಳೇ ರಾರಾಜಿಸುತ್ತಿವೆ. ಈ ಮಾದರಿ ವಿಕಾಸ ಗ್ರಾಮಕ್ಕೆ ಮೂಲ ಕಾರಣವಾಗಿದ್ದು ಮಾತ್ರ ಇಲ್ಲಿನ ನಿವಾಸಿ ಮತ್ತು ಮಾದರಿ ವಿಕಾಸ ಸಂಸ್ಥೆಯ ಪ್ರೇರಕಿಯಾಗಿರುವ ಯಶೋಧರವರ ಸಮಾಜಮುಖಿ ಕಾರ್ಯ. ಪ್ರಾರಂಭದ ದಿನಗಳಲ್ಲಿ ಕ್ರಿಯಾಶೀಲ ಚಟುವಟಿಕೆಯೊಂದಿಗೆ ಸಮಾಜಕಾರ್ಯ ಮಾಡಬೇಕೆಂಬ ಉತ್ಸಾಹದಿಂದಿದ್ದ ಯಶೋಧರವರಿಗೆ ಓದು ಬರಹ ಬಾರದ ಅನಕ್ಷರಸ್ಥೆ ಎಂಬ ಅಂಜಿಕೆ ಪ್ರತಿನಿತ್ಯ ಕಾಡುತ್ತಲಿತ್ತು. ಕುಡುಕ ಗಂಡನ ಜೊತೆ ಹೆಣ್ಣು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದ ಇವರಿಗೆ ಏನಾದರೂ ಸಾಧನೆ ಮಾಡಬೇಕೆಂಬ ಛಲ ಮನದಲ್ಲಿ ಪ್ರತಿನಿತ್ಯ ಬೇರೂರುತ್ತಲೆ ಇತ್ತು. ಆದರೆ ಅನಕ್ಷರಸ್ಥೆ ಎಂಬ ಭಯ, ನಿರಾಸೆ ಅವರ ಉತ್ಸಾಹಿ ಚಿಂತನೆಗೆ ಅಡ್ಡಿಪಡಿಸುತ್ತಿದ್ದ ಕಾರಣ ಒಂದು ಕಾಲವಧಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಜೀವನವನ್ನು ಸಾಗಿಸುತ್ತಿದ್ದರು. ಬಾಲ್ಯದಲ್ಲಿಯೇ ತಾನೂ ಕೂಡ ಎಲ್ಲರಂತೆ ಶಾಲೆಗೆ ತೆರಳಿದ್ದರೆ ತನ್ನ ಆಸೆ, ಆಕಾಂಕ್ಷೆಗಳ ಗುರಿಯನ್ನು ತಲುಪಬಹುದಿತ್ತು, ಆ ಮೂಲಕ ಸಮಾಜಕ್ಕೆ ತಾನೊಂದು ಕೊಡುಗೆ ನೀಡಬಹುದಿತ್ತು ಎಂಬ ಆಲೋಚನೆ ಅವರಲ್ಲಿ ನಿರಂತರವಾಗಿ ಮೂಡುತ್ತಿತ್ತು. ಇವರ ಈ ಕ್ರಿಯಾಶೀಲ ಚಟುವಟಿಕೆಯಲ್ಲಿ ತೋಡಗಿಸಿಕೊಳ್ಳಬೇಕೆಂಬ ಹಂಬಲಕ್ಕೆ ವೇದಿಕೆಯಾಗಿದ್ದು ಮಾತ್ರ 1991 ಸಾಕ್ಷರತಾ ಅಭಿಯಾನ ಕಾರ್ಯಕ್ರಮ.

ಈ ಕಾರ್ಯಕ್ರಮದ ಮೂಲಕ ನವಸಾಕ್ಷರೆಯಾಗಿ ಹೊರಹೊಮ್ಮಿದ ಯಶೋಧರವರು ಸರಕಾರದ ಪ್ರತಿಯೊಂದು ಕಛೇರಿಗಳಿಗೂ ಭೇಟಿ ನೀಡಲು ಆರಂಭಿಸಿ, ತನ್ಮೂಲಕ ಸರಕಾರದ ಹಲವು  ಯೋಜನೆಗಳನ್ನು ಅರಿತುಕೊಂಡು ಗ್ರಾಮದ ಪ್ರತಿಯೊಬ್ಬರಿಗೂ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಂಡರು. ಹೊಸ ಯೋಜನೆಗಳಿಂದಾಗುವ ಪ್ರಯೋಜನವನ್ನು ಮತ್ತು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಬಗೆಯನ್ನು ತಿಳಿಸಿಕೊಟ್ಟಿದ್ದು ಮಾತ್ರವಲ್ಲದೆ ಪ್ರತಿ ಮನೆಗಳಿಗೂ ಭೇಟಿ ಕೊಟ್ಟು ಅಕ್ಷರಜ್ಞಾನದ ಉಪಯೋಗಗಳ ಬಗ್ಗೆ ಅರಿವು ಮೂಡಿಸಿದರು. ನವ ಸಾಕ್ಷರತೆಗಾಗಿ ಅದರ ತಾಲೂಕು ಸಮಿತಿ ಅಧ್ಯಕ್ಷರಾಗಿ ತಾಲೂಕು, ರಾಜ್ಯ, ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಮಾಜಸೇವೆಯನ್ನು ಮಾಡಲಾರಂಭಿಸಿದ್ದು ಇವರ ವ್ಯಕ್ತಿತ್ವಕ್ಕೆ ಮೆರಗನ್ನು ನೀಡಿದೆ.

ಮನೆಯಲ್ಲಿ ಗಂಡನ ಕುಡಿತದಿಂದ ಬೇಸೆತ್ತಿದ್ದ ಇವರು ಅದರ ಶಾಶ್ವತ ಪರಿಹಾರಕ್ಕೆ ಮುಂದಾಗಿ ಮತ್ತು ಹಣ ಪೋಲಾಗುವುದನ್ನು ತಪ್ಪಿಸಲು ಪ್ರಜ್ಞಾ ಸಲಹಾ ಕೇಂದ್ರದ ಮೊರೆ ಹೋದರು. ತನ್ನ ಗಂಡನನ್ನು ಮದ್ಯವರ್ಜನಾ ಶಿಬಿರಕ್ಕೆ  ದಾಖಲು ಮಾಡಿ ಸತತ ಪ್ರಯತ್ನದಿಂದ ಅವರನ್ನು ಮದ್ಯ ಮುಕ್ತಗೊಳಸಿದರು. ಆತ್ಮ ಶುದ್ಧಿಯಾಗಿದ್ದರೆ ಎಲ್ಲಾ ಕಾರ್ಯವೂ ಸುಲಲಿತ, ನಮ್ಮ ಮನೆಯ ದೀಪವನ್ನು ಮೊದಲು ಬೆಳಗಿದ ನಂತರವೇ ಇತರರ ಮನೆಯನ್ನು ಬೆಳಗಿಸಬೇಕು ಎನ್ನುವ ಇವರು ಗ್ರಾಮದ ಮದ್ಯ ವ್ಯಸನಿಗಳ ಮನೆಗಳಿಗೆ ಭೇಟಿ ಕೊಟ್ಟು ಅವರೊಂದಿಗೆ ಸಂವಾದ ನಡೆಸಿ ವ್ಯಸನಮುಕ್ತ ಸಮಾಜದ ಕಡೆಗೆ ಗ್ರಾಮವನ್ನು ಕೊಂಡೊಯ್ದರು. ಇವರ ಸತತ ಪ್ರಯತ್ನದಿಂದಾಗಿ 190 ರಿಂದ 200 ಜನರು ಮದ್ಯಮುಕ್ತರಾಗುವುದರ ಜೊತೆಗೆ ಗ್ರಾಮ ವಿಕಾಸದ ಕಲ್ಪನೆಗೆ ಕೈ ಜೋಡಿಸಿದ್ದು ಯಶೋಧರ ಸಾಮಾಜಿಕ ಚಿಂತನೆಗೆ ಕೈಗನ್ನಡಿಯಾಗಿದೆ. ಈ ರೀತಿಯಾಗಿ ಹಲವು ಬಡ ಕುಟುಂಬದ ಹೆಣ್ಣು ಮಕ್ಕಳ ಕಣ್ಣಿರು ಒರೆಸಿದ್ದು ಮಾತ್ರವಲ್ಲದೆ ಹಲವಾರು ಮದ್ಯವರ್ಜನ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿ ವ್ಯಸನಮುಕ್ತ ಸಮಾಜಕ್ಕೆ ತನ್ನದೆ ರೀತಿಯಲ್ಲಿ ಪ್ರಯತ್ನಿಸಿದರು. ಇವರ ಈ ಕಾರ್ಯಕ್ಕೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿ ಸತತವಾಗಿ ಪ್ರೋತ್ಸಾಹಿಸಿದ್ದವು.

ಅಲ್ಲದೆ ಮುಂದುವರೆದ ಕಲಿಕಾ ಕೇಂದ್ರದ ಪ್ರೇರಕಿಯಾಗಿ ಶಾರದ ಕಲಿಕಾ ಕೇಂದ್ರದಲ್ಲಿ ಸುಮಾರು ಐದು ವರ್ಷ ಸೇವೆ ಸಲ್ಲಿಸಿ ಸ್ವಸಹಾಯ ಗುಂಪುಗಳ ರಚನೆ ಮಾಡಿ ಮಹಿಳೆಯರ ಉಳಿತಾಯ ಮತ್ತು ಆರ್ಥಿಕ ಮಟ್ಟ ಏರಿಕೆ ಮಾಡುವಲ್ಲಿಯೂ ಬಹಳ ಯಶಸ್ವಿಯಾಗಿದ್ದಾರೆ.  ತಮ್ಮ ಗ್ರಾಮವನ್ನು ಸ್ವಚ್ಛ, ಸುಂದರ, ಮಾದರಿ ಗ್ರಾಮ ಮಾಡಬೇಕೆಂದು ಕನಸು ಕಂಡ ಇವರು ಆ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಲಾರಂಭಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿಯ ಹೊಣೆ ಹೊತ್ತುಕೊಂಡಾಗ ಹಸಿ ಕಸ ಮತ್ತು ಪ್ಲಾಸ್ಟಿಕ್ ಕಸವನ್ನು ಒಟ್ಟುಗೂಡಿಸಿ ಜನರು ನೀಡುತ್ತಿರುವುದು ಅವರ ಗಮನಕ್ಕೆ ಬಂತು. ಇದರಿಂದ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ  ಪರಿಸರ ಮಾಲಿನ್ಯ ಅಗಾಧವಾಗಿ ಆಗುತ್ತಿರುವ ವಿಚಾರ ತಿಳಿದು ಈ ಸಮಸ್ಯೆಯನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ  ದಿಟ್ಟ ಹೆಜ್ಜೆ ಇಟ್ಟರು. ಲ್ಯಾಲ ಗ್ರಾಮದ ಸುಮಾರು 2000 ಮನೆಗಳಿಗೆ ಭೇಟಿ ಕೊಟ್ಟು ಹಸಿ ಕಸವನ್ನು ಮತ್ತು ಪ್ಲಾಸ್ಟಿಕ್ ಕಸವನ್ನು ಬೇರ್ಪಡಿಸುವ ಕ್ರಮವನ್ನು ಹೇಳಿಕೊಡುವುದರ ಮೂಲಕ ಕ್ರಮಬದ್ಧವಾದ ಕಸ ವಿಲೇವಾರಿಗೆ ಅಡಿಪಾಯ ಹಾಕಿದರು. ಪ್ರತಿ ಮನೆಯಲ್ಲೂ ಹಸಿ ಮತ್ತು ಪ್ಲಾಸ್ಟಿಕ್ ಕಸಗಳಿಗಾಗಿಯೇ ಪ್ರತ್ಯೇಕ ಡಸ್ಟ್‍ಬಿನ್ ಇರುವ ಹಾಗೆ ನೋಡಿಕೊಂಡರು. ಇದಕ್ಕಾಗಿ ಬೇರು ಮಟ್ಟದಿಂದಲೇ ಅರಿವು ಮೂಡಿಸಬೇಕೆಂದು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ಜಾಗೃತಿ ಅಭಿಯಾನವನ್ನು ಕೈಗೊಂಡು ಸ್ವಚ್ಚತೆಯ ಬಗ್ಗೆ ಹಲವು ಹಂತಗಳಲ್ಲಿ ಅರಿವು ಮೂಡಿಸಿದರು. ಮಾತ್ರವಲ್ಲದೆ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿದರು. ಇದರಿಂದ ಇಂದು ಲ್ಯಾಲ ಗ್ರಾಮ ಸ್ವಚ್ಚತೆಯ ದೃಷ್ಟಿಯಿಂದಲೇ ಗಮನ ಸೆಳೆದಿದೆ.  

ನವಸಾಕ್ಷರರ ವೃತ್ತಿ ಕೌಶಲ್ಯ ತರಭೇತಿಯಲ್ಲಿ ಭಾಗವಹಿಸಿ ಸ್ವ ಉದ್ಯೋಗವನ್ನು ಕಲಿತದ್ದು ಮಾತ್ರವಲ್ಲದೆ ಹಲವರಿಗೆ ಆ ವಿದ್ಯೆಯನ್ನು ಧಾರೆಯೆರದರು. ಸ್ವ ಉದ್ಯೋಗದ ಮೂಲಕ ಮನೆಯಲ್ಲಿಯೇ ಕುಳಿತು ಸೋಪು, ಫೆನಾಯಿಲ್, ಆರ್ಯುವೇದಿಕ್ ಎಣ್ಣೆ ಮುಂತಾದ ಹಲವು ವಸ್ತುಗಳನ್ನು ತಯಾರಿಸುವ ಮೂಲಕ ಸುಲಭವಾಗಿ ಮನೆಯಲ್ಲಿಯೇ ಕುಳಿತು ಹಣವನ್ನು ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ತಾವು ಕಲಿತ ಜ್ಞಾನವನ್ನು ಇತರರಿಗೂ ರವಾನಿಸಬೇಕೆಂಬ ಅವರ ಈ ಗುಣದಿಂದಲೇ ಗ್ರಾಮದಲ್ಲಿ ಎಲ್ಲರಿಗೂ ಆತ್ಮಿಯರಾಗಿದ್ದಾರೆ ಎನ್ನಬಹುದು.

ಹಲವು ಕಡೆ ಇರುವಂತೆಯೇ ತಮ್ಮ ಗ್ರಾಮದಲ್ಲಿಯೂ ಮಕ್ಕಳು ಶಾಲೆಗೆ ತೆರಳದೆ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ವಿಷಯ ಅರಿತ ಇವರು  ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಶ್ರಮ ಪಟ್ಟರು. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ಕ್ರಮ ಕೈಗೊಂಡು ಹಲವು ಮಕ್ಕಳ ಬಾಳಿಗೆ ನಂದಾದೀಪವಾಗಿದ್ದಾರೆ. ಈ ರೀತಿಯಾಗಿ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೂ ಕೂಡ ಪಣ ತೊಟ್ಟು ಜೀವನದಲ್ಲಿ ಹಣ ಮಾತ್ರವೇ ಮುಖ್ಯವಲ್ಲ, ಜ್ಞಾನವು ಅತೀ ಅವಶ್ಯ ಎನ್ನುವ ಮೂಲಕ ನವಸಾಕ್ಷರತೆಗಾಗಿ ದುಡಿದ ಇವರ ಪ್ರಯತ್ನಕ್ಕೆ ಹಲವರಿಂದ ಮೆಚ್ಚುಗೆ ದೊರೆತಿದೆ. ಹಲವು ಸಂಘ ಸಂಸ್ಥೆಗಳ ಇವರ ಈ ಸಾಮಾಜಿಕ ಕಾರ್ಯವನ್ನು ಗಮನಿಸಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿವೆ.  ಇವರ ಗ್ರಾಮ ವಿಕಾಸ ಕಲ್ಪನೆಗೆ ಗ್ರಾಮಾದಾದ್ಯಂತ ಭಾರಿ ಬೆಂಬಲ ದೊರೆತಿದ್ದು ಒಬ್ಬ ಮಹಿಳೆ ಮನಸ್ಸು ಮಾಡಿದರೆ ಎನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಯಶೋಧರವರು ಸಾಕ್ಷಿಯಾಗಿದ್ದಾರೆ.

-ಮಿಥುನ್ ಪಿ.ಜಿ

 ಮಡಿಕೇರಿ

                                                             

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!