ಅಂಕಣ

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1

ಈ ಒಂದು ವಿಷಯದಲ್ಲಂತೂ ಅಂಬೇಡ್ಕರ್ ತಮ್ಮ ಸಮರ್ಥಕರಂತಲ್ಲದೆ ಕ್ಷಮಾಯಾಚಕರಾಗಿರಲೇ ಇಲ್ಲ.

ಆರ್ಯರಿಂದ ಔರಂಗಜೇಬ್‌ನವರೆಗೂ, ಸಂತ ಝೇವಿಯರ್‌ನಿಂದ ಶಿವಾಜಿಯವರೆಗೂ, ನಮ್ಮ ಇತಿಹಾಸಕಾರರು ಯಾವುದನ್ನು ಮುಚ್ಚಿಡಬೇಕು, ಏನನ್ನು ಸೃಷ್ಟಿಸಬೇಕು ಮತ್ತು ಎಂತಹುದನ್ನು ಬಯಲಾಗಿಸಬೇಕು ಎಂದೆಲ್ಲವನ್ನೂ ಮೊದಲೇ ನಿರ್ಧರಿಸಿದ್ದಾರೆ. ಹೀಗೆ ಮಾಡುವುದರ ಹಿಂದಿನ ಏಕಮಾತ್ರ ಕಾರಣ ತನ್ನ ಕೃಪಾಪೋಷಕನಾಗಿರುವ ಸರ್ಕಾರದ ಅಥವಾ ಸಿದ್ಧಾಂತದ, ಪರಿಸರ ವ್ಯವಸ್ಥೆಯ ಅಥವಾ ಗುಂಪಿನ ಓಲೈಕೆ ಮಾಡುವುದೇ ಆಗಿದೆ. ಹೀಗೆ ನಮ್ಮ ಇತಿಹಾಸಕಾರರು ವಾಸ್ತವವನ್ನು ತನ್ನಿಷ್ಟದಂತೆ ತಿರುಚಿದ್ದಾದ ಮೇಲೆ ಓದುಗರಾಗಿ ನಮಗೆ ಉಳಿಯುವುದು ಅವರ ಠಕ್ಕತನದ ಅನಿವಾರ್ಯ ಆಸ್ವಾದನೆಯಷ್ಟೆ .

ವಾಮಪಂಥವು ಬಲಪಂಥದ ಬೂಟಾಟಿಕೆಯನ್ನು ಹೊರಗೆಳೆಯತ್ತದೆ ಮತ್ತು ಬಲಪಂಥವು ವಾಮಪಂಥದ ಆಷಾಢಭೂತಿತನವನ್ನು ಬಹಿರಂಗಗೊಳಿಸುತ್ತದೆ. ಇವರಿಬ್ಬರ ಮಧ್ಯದ ತಿಕ್ಕಾಟಗಳ ಫಲಶೃತಿಯಾಗಿ ಅಪಾರ ಸ್ತಂಭಲೇಖಗಳು ಮಂಥನಕ್ಕೊಳಗಾಗುತ್ತವೆ. ಮತ್ತೊಬ್ಬರ ಪಾಖಂಡವನ್ನು ಹೊರಹಾಕುವುದು ಸಮ್ಮತವೇ ಸರಿ. ಆದರೆ ಸ್ವತಃ ತಾನೇ ಪಾಖಂಡಿಯಾಗಿರುವಾಗ ಅದು ಅನ್ವಯವಾಗುವದಿಲ್ಲ ಎಂಬುದೇ ಮರೆತಿರುತ್ತದೆ. ಆದರೂ ಇದು ನಡೆಯುವದಂತೂ ಹೀಗೆಯೇ, ಪ್ರತಿಬಾರಿಯೂ. ನಾಯಕರಾಗಿ ಮೆರೆಯಬೇಕಾದವರು ಖಳರಂತಾಗಿರುತ್ತಾರೆ, ಖೂಳರು ನಾಯಕರಾಗಿ ಮೆರೆಯುತ್ತಾರೆ. ನಮ್ಮ ಪಕ್ಷಪಾತ, ಸಿದ್ಧಾಂತಗಳ ನೊಗಭಾರವನ್ನು ಅಟ್ಲಾಸ್ ನಂತೆ ತಮ್ಮ ಹೆಗಲಮೇಲೆ ಹೊರಲು ಗಾಂಧಿ, ನೆಹರು, ಸಾರ್ವಕರ್, ಪಟೇಲ್ ಎಲ್ಲರನ್ನೂ ನಮಗಾಗಿ ಪೂಜ್ಯರಾಗಿಸಬೇಕಾಗುತ್ತದೆ, ಇವರೆಲ್ಲರೂ ದೇವರಾಗಬೇಕಾಗುತ್ತದೆ.

ವರ್ತಮಾನದ ಕುರಿತಾದ ನಮ್ಮ ಅನಿಶ್ಚಿತತೆ ಮತ್ತು ಭವಿಷ್ಯತ್ತಿನ ಕುರಿತಾದ ನಮ್ಮ ಭಯಗಳಿಗೆ ಅನುಗುಣವಾಗಿ ಇತಿಹಾಸ ಒಮ್ಮೆ ಕಟ್ಟುಕತೆಯಾದರೆ ಮತ್ತೊಮ್ಮೆ ಕಟ್ಟುಕತೆಯೇ ಇತಿಹಾಸವಾಗಿರುತ್ತದೆ. ಬಲಪಂಥದವರಿಗೆ ಸಾರ್ವಕರ್, ಗೋಳ್ವಲ್ಕರ್’ರನ್ನು ಕೆಟ್ಟದಾಗಿ ಚಿತ್ರಿಸುವ ಯಾವುದೇ ಪ್ರಸಂಗವನ್ನು ಕೇಳಬೇಕಾಗಿಲ್ಲ. ಅದರಂತೆಯೇ ವಾಮಪಂಥದವರಿಗೆ ನೆಹರು, ನಂಬೂದರಿಪಾಡರನ್ನು ಕೆಟ್ಟದಾಗಿ ಚಿತ್ರಿಸುವ ಎಂತಹುದನ್ನೂ ನೋಡಬೇಕಾಗಿಲ್ಲ. ತೇಪೆಗಾರರಂತಿರುವ ಇತಿಹಾಸಕಾರರಿಗಂತೂ ತಮ್ಮನ್ನೇ ಪ್ರಸಿದ್ಧಿ ವಿಮುಖರನ್ನಾಗಿಸಿಕೊಂಡು ಏಕಾಂತ ಬಂಧನಕ್ಕೆ ದೂಡಬಲ್ಲ ಯಾವುದನ್ನೂ, ಯಾರನ್ನೂ ಕುರಿತಾಗಿ ಮಾತಾಡಬೇಕಾಗಿಲ್ಲ. ಸಂಪೂರ್ಣ ದೇಶವೇ ಭಯ ಮತ್ತು ನಡುಕಗಳ ಉಸಿರಿಡುತ್ತಾ ಎಲ್ಲಿಗೂ ಅಲ್ಲದ ಪ್ರವಾಸಕ್ಕೆ , ತೆವಳುತ್ತ, ಬಳಲುತ್ತ ಸಾಗುತ್ತಿರುವುದು ಇದೇ ನಿರ್ಜೀವ ಇದ್ದಿಲ ಉರುವಲಿನ ಮೇಲೆ. ಆದರೆ ಇಂತಹ ಪ್ರಯಾಣ ಎಲ್ಲಿಯವರೆಗೆ? ಇದೆಲ್ಲದರ ಹಿಂದಿರುವ ವಿಶಾಲ ಯೋಜನೆಯೊಂದು ಅರ್ಥವಾಗುವವರೆಗೆ. ನಾವು ನಂಬಬಲ್ಲ, ಅನುಸರಿಸಬಲ್ಲ, ಹೌದೆಂದು ಸಮರ್ಥನೆಗಿಳಿಯಬಲ್ಲ ವ್ಯಕ್ತಿತ್ವದ ಸಾಕ್ಷಾತ್ಕಾರವಾಗುವವರೆಗೆ. ಇಂತಹ ವಿಶೇಷಣಗಳುಳ್ಳ , ನಮ್ಮವರೆನಿಸಬಲ್ಲ ಎಲ್ಲ ಮಹನೀಯರಲ್ಲಿ ಭೀಮ್‌ರಾವ್ ರಾಮ್ಜಿ ಅಂಬೇಡ್ಕರರಿಗಿಂತ ಸೂಕ್ತ ವ್ಯಕ್ತಿತ್ವ ಇನ್ನ್ಯಾರಾಗಿರಲು ಸಾಧ್ಯ!

ಅವರ ಮೇಲಣ ನಿಜವಾದ ಮೆಚ್ಚುಗೆಯಿಂದಾಗಿಯೂ ಮತ್ತು ನಿಜವಾದ ಭಯದಿಂದಾಗಿಯೂ ಎಡ, ಬಲ ಎಲ್ಲ ಪಂಥದವರಿಗೂ ನಾಯಕರಾದವರು ಅಂಬೇಡ್ಕರ್. ಅದು ಸಹಜವೂ ಹೌದು. ತಮ್ಮ ಅಪಾರ ಬುದ್ಧಿಮತ್ತೆ ಮತ್ತು ತಿಳಿವಳಿಕೆಗಳಿಂದಾಗಿ ಆಧುನಿಕ ಇತಿಹಾಸದಲ್ಲೇ ಅವರಂತೆ ಮತ್ತೊಬ್ಬರಿಲ್ಲ. ತೀರ ಭಾರತೀಯನಲ್ಲದ ಭಾರತೀಯರಾಗಿದ್ದವರು. ಬೆಚ್ಚಿಬೀಳಿಸುವ ಆದರೆ ಸುಭದ್ರ ತಳಮಟ್ಟದ ಜ್ಞಾನದಿಂದ ಎಲ್ಲರ ಮನ್ನಣೆಗಳಿಸಿದ್ದವರು. ಕಾಲಿಡಲು ಅವಕಾಶ ಸಿಕ್ಕಲ್ಲಿ ಯಾವತ್ತೂ ತಪ್ಪದ ಹೆಜ್ಜೆಯಿರಿಸಿದವರು. ಅನಾಮಿಕವಾಗಿ ಉದ್ಧರಿಸಿದಲ್ಲಿ ಪ್ರಸಕ್ತ ಭಾರತದ ಪರಿಸ್ಥಿತಿಗೆ ನೀಡುತ್ತಿರುವ ವಿವರಣೆಯೇನೋ ಅಂದೆನ್ನಿಸುತ್ತವೆ ಅವರ ಕಾಲಾತೀತವಾಗಿರುವ ಮಾತುಗಳು. ಕಾಲಕಳೆದಂತೆ ಅಂಬೇಡ್ಕರ್ ಇನ್ನೂ ಪಕ್ವರೆನಿಸುತ್ತಾರೆ. ಇಂತಹ ವಿಶೇಷತೆಗಳಿಂದಾಗಿಯೇ ಅವರು ತುಂಬಾ ಎತ್ತರದಲ್ಲಿ ಹಿರಿದಾಗಿ ಎದ್ದು ಕಾಣುತ್ತಾರೆ. ಆದರೆ, ಅಂಬೇಡ್ಕರ್‌ರಲ್ಲಿಯೇ ತಮ್ಮ ಆದರ್ಶವನ್ನು ಕಂಡವರಿಗೂ ಕಾಣದಂತಹ, ತಿಳಿಯದ, ಮಾತಾಡದ ಅಥವಾ ಬರಹಗಳಲ್ಲಿಯೂ ವ್ಯಕ್ತವಾಗದ ಮತ್ತೊಂದು ಪಾರ್ಶ್ವವೂ ಇದೆ.

ಜೀವನದ ರೀತಿ ಎಂದಾಗಿಯೋ, ಧರ್ಮವೆಂದಾಗಿಯೋ ಯಾವುದಾದರೂ ಹೆಸರಿನಲ್ಲಿರಲಿ ಹಿಂದುತ್ವದ ಕುರಿತಾಗಿ ಅಂಬೇಡ್ಕರ್ ಮಾಡಿರುವ ಟೀಕೆಗಳು ಸರ್ವವಿದಿತ. ಅವರ ಅನೇಕಾನೇಕ ಭಾಷಣಗಳಿಂದ, ವಿದ್ವತ್ಪೂರ್ಣ ಬರಹಗಳಿಂದ ನಾವು ಅಂಬೇಡ್ಕರರನ್ನು ಹಿಂದೂಧರ್ಮದಲ್ಲಿಯ ಹುಳುಕುಗಳನ್ನು ಎತ್ತಿ ತೋರಿಸಿ, ಅದರ ವಿರುದ್ಧ ಹೋರಾಡಿದ ಕೆಲಸಗಳಿಂದ ಅರಿತಿದ್ದೇವೆ ಮತ್ತು ಅವರ ಈ ಕೆಲಸಕ್ಕೆ ಶ್ಲಾಘಿಸಿಯೂ ಇದ್ದೇವೆ. ಅವರು ಬೌದ್ಧಮತಕ್ಕೆ ಮತಾಂತರವಾದ ಸಂಗತಿಯನ್ನು ಅಭಿನಂದಿಸುವುದೂ ಇದರ ಪ್ರಮಾಣವಾಗಿದೆ. ಅವರನ್ನು ತಿಳಿಯುವುದೆಂದರೇ ಹಿಂದೂ ಧರ್ಮದ ಟೀಕಾಕಾರ ಎಂಬುದಾಗಿ. ಅಂತಹ ಭರವಸೆಯನ್ನು ನಿಶ್ಚಿತವಾಗಿಯೂ ಅವರ ಮೇಲಿಡಬಹುದಾಗಿದೆ.

ಆದಾಗ್ಯೂ, ಅವರ ಬಗ್ಗೆ ನಮಗೆ ತಿಳಿಯದೇ ಇರುವ ಸಂಗತಿ ಎಂದರೆ ಜಗತ್ತಿನಲ್ಲೇ ಹಿರಿಮೆಯುಳ್ಳ ಮತ್ತೊಂದು ಮತವಾದ ಇಸ್ಲಾಮಿನ ಕುರಿತಾದ ಅವರ ವಿಚಾರಗಳದ್ದು. ಕಾರಣ, ಅಂಬೇಡ್ಕರ್ ಅವರ ಈ ಮುಖವನ್ನು ನಮ್ಮ ಸಾಮಾನ್ಯ ಚರ್ಚೆ ಮತ್ತು ಪಠ್ಯಪುಸ್ತಕಗಳಿಂದ ಸಂಪೂರ್ಣವಾಗಿ ಮುಚ್ಚಿಡಲಾಗಿದೆ. ಅಂಬೇಡ್ಕರ್ ಇಸ್ಲಾಮಿನ ಕುರಿತಾಗಿ ಬಹುವಾಗಿ ಚಿಂತಿಸಿದ್ದರು ಮತ್ತು ಬಹುವಾಗಿ ಮಾತನಾಡುತ್ತಿದ್ದರು ಎಂಬ ಅಂಶವೇ ಅನೇಕರಿಗೆ ಆಶ್ಚರ್ಯವೆನಿಸಬಹುದು. ಈ ಲೇಖಕನು ಇದಕ್ಕೂ ಮೊದಲೇ ಬರೆದಿರುವಂತೆ, ಎಳೆಯ ಅಂಬೇಡ್ಕರರ ವಿಚಾರಗಳಿಗೆ ಆಕಾರ ನೀಡಿದ ತಣ್ಣನೆಯ ಕ್ರೂರ ಭಾರತವೇ ಬಹು ಬೇಗನೆ ಪ್ರಬುದ್ಧ ಅಂಬೇಡ್ಕರ್‌ರಿಗೆ ಇಸ್ಲಾಂ ಮತ್ತು ಮುಸಲ್ಮಾನರ ಕುರಿತಾಗಿಯೂ ಅಭ್ಯಸಿಸುವಂತೆ ಎಳಸಿತು. ಇದುವೇ ಮುಂದೆ ಅವರು ರಕ್ತಸಿಕ್ತ ಮತ್ತು ಪೀಡಾದಾಯಕ ವಿಭಜನೆಯೆಡೆಗೆ ಮುನ್ನುಗ್ಗುತ್ತಿದ್ದ ದೇಶವೊಂದರ ಪರಿಸ್ಥಿತಿಯನ್ನು ಅರ್ಥೈಸಲು ಸಹಾಯಕವಾಯಿತು.

ಇಸ್ಲಾಂ ಮತ್ತು ಮುಸಲ್ಮಾನರ ಕುರಿತಾದ ಅಂಬೇಡ್ಕರ್ ಅವರ ಕೆನೆಗಟ್ಟಿದ ವಿಚಾರಗಳನ್ನು 1940ರಲ್ಲಿ ಮೊದಲ ಬಾರಿಗೆ ಪ್ರಕಾಶನಗೊಂಡ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಎಂಬ ಅವರ ಭಾಷಣ ಮತ್ತು ಬರಹಗಳ ಸಂಪಾದಿತ ಕೃತಿಯಲ್ಲಿ ಕಾಣಬಹುದಾಗಿದೆ. ಈ ಪುಸ್ತಕ ಮುಂದೆ 1945 ಮತ್ತು 1946 ರಲ್ಲಿ ಪರಿಷ್ಕರಗೊಂಡು ಮುದ್ರಿತವಾಯ್ತು. ತನ್ನ ವಿಷಯ ವ್ಯಾಪ್ತಿ ಮತ್ತು ತೀಕ್ಷ್ಣತೆಗಳಿಂದಾಗಿ ಇದೊಂದು ಅದ್ಭುತ ಕೃತಿ ಎನಿಸಿದೆ. ಇದನ್ನು ಒಮ್ಮೆ ಓದುವುದರಿಂದಲೇ ಚರ್ಚೆಗೆ ಬಾಹಿರವಾಗುಳಿದಿರುವ ಈ ಪುಸ್ತಕದ ವಿಶೇಷತೆಯ ಬಗ್ಗೆಯೂ ಅರಿವಾಗುತ್ತದೆ ಮತ್ತು ಅವರ ಎಡಪಂಥೀಯ ಆರಾಧಕರ ದೃಷ್ಟಿಯಲ್ಲಿ ಅಂಬೇಡ್ಕರರನ್ನು, ಇಸ್ಲಾಮಿನ ಭಯಗ್ರಸ್ತ,  ಪರಮತದ್ವೇಷಿಯಂತೆ ಚಿತ್ರಿಸಬಲ್ಲದಾಗಿದೆ.

ಇಲ್ಲಿದೋ ನೋಡಿ, ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ ಚಿಂತನೆ:

ಹಿಂದೂ ಧರ್ಮದ ಕುರಿತಾಗಿ ಅದು ಜನರನ್ನು ವಿಭಜಿಸುತ್ತದೆಂದು ಹೇಳಲಾಗುತ್ತದೆ, ಇದಕ್ಕೆ ವಿಪರೀತವಾಗಿ ಇಸ್ಲಾಂ ಜನರನ್ನು ಒಗ್ಗೂಡಿಸುತ್ತದೆಂದು ಹೇಳಲಾಗುತ್ತದೆ.

ಇದು ಅರ್ಧಸತ್ಯವಷ್ಟೇ. ಜನರನ್ನು ಒಗ್ಗೂಡಿಸಿದಷ್ಟೇ ನಿಷ್ಠುರವಾಗಿ ಇಸ್ಲಾಂ ಭೇದವನ್ನೂ ಹುಟ್ಟುಹಾಕುತ್ತದೆ. ಇಸ್ಲಾಂ ಒಂದು ಸೀಮಿತ ಸಂಸ್ಥೆಯಾಗಿದೆ. ಮುಸ್ಲಿಮರು ಮತ್ತು ಮುಸ್ಲಿ ಮೇತರರ ನಡುವೆ ಅದು ಭೇದವೆಣಿಸುತ್ತದೆ ಎಂಬುದು ಅತ್ಯಂತ ಸತ್ಯ, ನಿಸ್ಸಂದಿಗ್ಧ ಮತ್ತು ಅತಿ ವಿಭೇದಕ ಅಂತರವಾಗಿದೆ. ಇಸ್ಲಾಂ ಪ್ರಣೀತ ಭ್ರಾತೃತ್ವವು ಮಾನವನ ವೈಶ್ವಿಕ ಭ್ರಾತೃತ್ವವಂತೂ ಅಲ್ಲವೇ ಅಲ್ಲ. ಅದು ಮುಸ್ಲಿಮರ, ಮುಸ್ಲಿಮರಿಗೋಸ್ಕರವಾಗಿರುವ ಸಹೋದರತ್ವ. ಅಲ್ಲಿ ಬಂಧುತ್ವವೇನೋ ಇದೆ, ಆದರೆ ಅದು ತಮ್ಮ ಸಂಸ್ಥೆಯವರಿಗೋಸ್ಕರವಷ್ಟೇ ಸೀಮಿತವಾದದ್ದು. ಈ ಸಂಸ್ಥೆಯ ಹೊರಗಿರುವವರಿಗೆ ಅಲ್ಲಿ ಸಿಗುವುದು ಬರಿಯ ಅಪಮಾನ ಮತ್ತು ದ್ವೇಷಗಳಷ್ಟೇ. ಇಸ್ಲಾಮಿನ ಎರಡನೆಯ ದೋಷವೆಂದರೆ ಅದು ಸಾಮಾಜಿಕ ಸ್ವಯಂ-ಸರಕಾರದ ವ್ಯವಸ್ಥೆಯಾಗಿದ್ದು ಸ್ಥಳೀಯ ಸ್ವಯಂ-ಸರ್ಕಾರಕ್ಕೆ ಹೊಂದಿಕೆಯಾಗುವುದಿಲ್ಲ, ಏಕೆಂದರೆ, ಮುಸ್ಲಿಮರ ನಿಷ್ಠೆಯು ತಾನು ವಾಸಿಸುವ ದೇಶದ ಮೇಲಲ್ಲದೆ, ತಾನು ಪಾಲಿಸುವ ನಂಬಿಕೆಯ ಮೇಲೆಯೇ ಆಧಾರಿತವಾಗಿದೆ. ಒಳ್ಳೆಯತನವಿರುವಲ್ಲೇ ನನ್ನ ದೇಶ ಎಂಬುದು ಮುಸ್ಲಿಮರ ಮಟ್ಟಿಗೆ ಊಹಿಸಲೂ ಸಾಧ್ಯವಿಲ್ಲ. ಇಸ್ಲಾಮಿನ ಆಡಳಿತವಿರುವಲ್ಲೇ ಆತನಿಗದು ಸ್ವಂತ ದೇಶ. ಮತ್ತೊಂದು ಶಬ್ದಗಳಲ್ಲಿ ಹೇಳುವದಾದರೆ, ಒಬ್ಬ ನಿಜವಾದ ಮುಸ್ಲಿಮನಿಗೆ ಭಾರತವನ್ನು ತನ್ನ ತಾಯ್ನಾಡಾಗಿ ಮತ್ತು ಒಬ್ಬ ಹಿಂದುವನ್ನು ತನ್ನ ಬಂಧು-ಬಳಗವಾಗಿ ಸ್ವೀಕರಿಸಲು ಇಸ್ಲಾಂ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ.

ಇಸ್ಲಾಮಿನ ಕುರಿತು ಅಂಬೇಡ್ಕರರ ಇಂತಹ ಕಟು ದೋಷಾರೋಪಣೆಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಯಾವುದೇ ಜಾಗವಿಲ್ಲ. (ವಾಸ್ತವವಾಗಿ ambedkar.org ಎಂಬ ಅಂಬೇಡ್ಕರ್‌ರ ಕುರಿತಾದ ಮಾಹಿತಿ ಸಂಪನ್ಮೂಲ ಜಾಲತಾಣ ದಲ್ಲಿಯೂ ಈ ಸ್ಪೋಟಕ ಭಾಗವನ್ನು ಒಳಗೊಂಡಿರುವ ಅಧ್ಯಾಯಕ್ಕೆ ಮಾತ್ರ ಕೊಂಡಿಯೊಂದನ್ನು (Hyperlinked)ಒದಗಿಸಲಾಗಿದೆ. ಅದೂ ಸಹ ಹಿಂದಿನ ಇತರೆ ಅಧ್ಯಾಯಗಳಂತೆ, ಉಪ-ಶಿರೋನಾಮೆ ಭಾಗ 4ರ ಅಡಿಯಲ್ಲಿ ಸುಲಭವಾಗಿ ಕಾಣಿಸುವುದಿಲ್ಲ. ಹೀಗೆ ಮಾಡುವುದರ ಹಿಂದಿನ ಉದ್ದೇಶ. ಆ ಅಧ್ಯಾಯವನ್ನು ಕ್ಲಿಕ್ಕಿಸದೇ ಬಿಟ್ಟುಹೋಗುವಂತಾಗಲಿ ಎಂದಾಗಿದೆ).

ಆದರೆ ನಮ್ಮದು ಭಾರತ ದೇಶವಲ್ಲವೇ , ಅದಕ್ಕಾಗಿಯೇ ಹಾಗೆ ಕಾಣುವುದು ಮಾತ್ರ ನಮ್ಮ ತಿಳುವಳಿಕೆಯಲ್ಲಿನ ದೋಷವಿದ್ದಾಗ್ಯೂ ಓರ್ವ ನಾಯಕನನ್ನು ಖಳನಂತೆ ಕಾಣುವುದು ಸರಿಯಲ್ಲ. ಹಾಗಾಗಿ, ಇಸ್ಲಾಮಿನ ಕುರಿತಾದ ಮೇಲಿನ ಹೇಳಿಕೆಯೂ ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲವೆಂಬುದು ನಮಗೆ ಚನ್ನಾಗಿ ತಿಳಿದಿದೆ; ಬಹುಶಃ ಅವರಿಗೆ ದಿಕ್ಕುತಪ್ಪಿಸಲಾಗಿತ್ತು ಅದಕ್ಕಾಗಿ ಆ ರೀತಿ ಹೇಳಿದ ಸಂದರ್ಭದೆಡೆಗೆ ಗಮನಿಸಬೇಕು . ಆದರೆ,ಅದೂ ಸಹಾಯಕ್ಕೆ ಬರುತ್ತಿಲ್ಲವಲ್ಲ ! ಏನು ಗೊತ್ತೋ ? , ಮಹತ್ತರ ಒಳಿತಿಗಾಗಿ, ಸಾಂಪ್ರದಾಯಿಕ ಸೌಹಾರ್ದಕ್ಕಾಗಿ, IPC ಸೆಕ್ಷನ್ 295 ಅ ಮತ್ತು ನಮ್ಮ ಶಾಂತಿಯುತ ಭವಿಷ್ಯತ್ತಿಗಾಗಿ ಈ ಶಬ್ದಗಳು ಅವರ ಬಾಯಿಂದ ಹೊರಡಲೇ ಇಲ್ಲ ಎಂದು ಸಾರಿಸಿಬಿಡೋಣ!!.

ಅಂಬೇಡ್ಕರರ ಬರಹಗಳ ಆಯ್ದ ಓದುವಿಕೆ ಎಂದರೆ, ಹಿಂದೂಧರ್ಮದ ಕುರಿತಾಗಿ ಅವರ ಟೀಕೆ (ಅದು ಪೂರ್ಣವಾಗಿ ಸಮರ್ಥನೀಯವೂ ಹೌದು) ಎಂದಾಗಿಯೇ ಪರಿಭಾವಿಸುವ ದೃಷ್ಟಿಯಿಂದಾಗಿ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕುರೀತಿಗಳು ಬರಿಯ ಹಿಂದೂಧರ್ಮಕ್ಕೆ ಮಾತ್ರ ಸೀಮಿತವಾದದ್ದು ಎಂಬಂತಹ ನಂಬುಗೆ ಪ್ರಚಲಿತವಾಗಿದೆ. ತತ್ಪರಿಣಾಮವಾಗಿ, ಭಾರತದ ಕುರಿತು ಅಷ್ಟಾಗಿ ಪರಿಚಯವಿಲ್ಲದ ಯಾರಿಗಾದರೂ ನಮ್ಮನ್ನು ಪೀಡಿಸುತ್ತಿರುವ ಪ್ರತಿಯೊಂದು ಕೆಡುಕು ಮತ್ತು ಅಸಹಿಷ್ಣುತೆಗೆ ಹಿಂದೂ ಧರ್ಮ ಮತ್ತು ಹಿಂದೂಗಳನ್ನೇ ಆಪಾದಿತರಾಗಿಸಿ ನೋಡುವಂತಾಗುತ್ತದೆ.

ನೈಜತೆಯಲ್ಲಿ, ಸಾಮಾಜಿಕ ಮತ್ತು ಮತೀಯ ಅಸಹಿಷ್ಣುತೆಗಳು ನಮ್ಮ ಧಮನಿಗಳಲ್ಲಿಯೇ ಹರಿಯುತ್ತವೆ. ಅದು ಹಿಂದೆಯೂ ಹರಿಯುತ್ತಿತ್ತು ಮುಂದೆಯೂ ಹರಿಯುತ್ತಲೇ ಇರಲಿದೆ.ಎಲ್ಲ ಮತ ಸಂಪ್ರದಾಯಗಳ ಪವಿತ್ರ ಗ್ರಂಥಗಳೇ ಇವನ್ನು ಮುಖ್ಯಧಾರೆಯಲ್ಲಿ ಹರಿಯಬಿಟ್ಟಿವೆ. ಇಂತಹ ಆಷಾಢಭೂತಿತನವನ್ನು ದೂರದರ್ಶಿತ್ವ ಮತ್ತು ನಿರ್ಭಯತೆಯಿಂದ ಸೂಚಿಸಿದ್ದೇ ಸ್ವತ: ಅಂಬೇಡ್ಕರ್ .

ಹಿಂದೂ ಸಮಾಜವನ್ನು ಚಾರಿತ್ರೀಕರಿಸುವ ಸಾಮಾಜಿಕ ಕುರೀತಿಗಳು ಚೆನ್ನಾಗಿ ಪರಿಚಿತವಾಗಿವೆ. ಕುಮಾರಿ ಮಾಯೋರವರ ‘ಮದರ್ ಇಂಡಿಯಾ’ದ ಪ್ರಕಾಶನದೊಂದಿಗೆ ಈ ಕುರೀತಿಗಳಿಗೆ ಬಹುವಾದ ಪ್ರಚಾರ ದೊರಕಿತು. ’ಮದರ್‌ಇಂಡಿಯಾ’ ಬೆಳಕುಕಾಣುವದರೊಂದಿಗೆ ಈ ಕುರೀತಿಗಳನ್ನು ಬಹಿರಂಗಪಡಿಸುವ ತನ್ನ ಉದ್ದೇಶದಲ್ಲಿ ಮತ್ತು ಇಂತಹ ದುಷ್ಟ ಪದ್ಧತಿಗಳ ಜನಕರನ್ನು ವಿಶ್ವದ ವೇದಿಕೆಯಲ್ಲಿ ತಮ್ಮ ಪಾಪಗಳಿಗೆ ಉತ್ತರಿಸುವಂತೆ ಮಾಡುವಲ್ಲಿ ಸಫಲವೇನೋ ಆಗಿತ್ತು. ಅದರೊಟ್ಟಿಗೆ ಹಿಂದೂಗಳು ಈ ಸಾಮಾಜಿಕ ದುಷ್ಟಪದ್ಧತಿಗಳ ಕೆಸರಿನಲ್ಲಿ ತೊಳಲಾಡುತ್ತಿರುವಂತೆ ಮತ್ತು ಸಂಪ್ರದಾಯವಾದಿಗಳೆಂಬ, ಮುಸ್ಲಿಮರು ಇಂತಹ ವ್ಯಾಧಿಗಳಿಂದ ಮುಕ್ತರೆಂಬ ಮತ್ತು ಹಿಂದುಗಳ ಹೋಲಿಕೆಯಲ್ಲಿ ಪ್ರಗತಿಗಾಮಿ ಜನರೆಂಬ ದುರದೃಷ್ಟಕರವಾದ ಪ್ರಭಾವವನ್ನು ಪ್ರಪಂಚಾದ್ಯಂತ ಸೃಷ್ಟಿಸಿತು. ಇಂತಹ ಪ್ರಭಾವವು ಇನ್ನೂ ಮುಂದುವರೆದಿರುವದು ಭಾರತೀಯ ಮುಸ್ಲಿಂ ಸಮಾಜವನ್ನು ಹತ್ತಿರದಿಂದ ಬಲ್ಲವರಲ್ಲಿ ಅಚ್ಚರಿ ಮೂಡಿಸುತ್ತದೆ.

ನಂತರ ಅಂಬೇಡ್ಕರ್ ಅತ್ಯಂತ ಕಟುವಾದ ಶಬ್ದಗಳಲ್ಲಿ ಇಸ್ಲಾಂನ ಅನುಯಾಯಿಗಳಲ್ಲಿ ಜಾರಿಯಲ್ಲಿರುವ ಬಾಲ್ಯವಿವಾಹ, ಅಸಹಿಷ್ಣುತೆ, ಮತೀಯ ಅಂಧಾಭಿಮಾನ, ಮಹಿಳಾ ಸ್ಥಾನಮಾನ, ಬಹುಪತ್ನಿತ್ವ ಮತ್ತು ಇತರ ಸಾಮಾಜಿಕ ಪದ್ಧತಿಗಳ ಕುರಿತಾಗಿ ಮಾತನಾಡಲು ಮುಂದುವರಿಯುತ್ತಾರೆ. ಜಾತಿಗಳ ಸಂದರ್ಭದಲ್ಲಂತೂ ಅಂಬೇಡ್ಕರ್ ಆಳವಾದ ವಿವರಣೆ ನೀಡುತ್ತಾರೆ. ಅವರು ಕೊಟ್ಟ ಯಾವುದೇ ಹೊಡೆತಗಳಿಗೆ ಉತ್ತರವೇ ಇಲ್ಲ.

ಜಾತಿ ಪದ್ಧತಿಯನ್ನೇ ತೆಗೆದುಕೊಳ್ಳಿ, ಇಸ್ಲಾಂ ಸಹೋದರತ್ವದ ಕುರಿತಾಗಿ ಮಾತಾಡುತ್ತದೆ. ಗುಲಾಮಗಿರಿ ಮತ್ತು ಜಾತಿಗಳಿಂದ ಇಸ್ಲಾಂ ಮುಕ್ತವಾಗಿರಬೇಕೆಂದು ಪ್ರತಿಯೊಬ್ಬರೂ ಭಾವಿಸುತ್ತಾರೆ. ಗುಲಾಮಗಿರಿಯ ಬಗ್ಗೆ ಈಗೇನೂ ಹೇಳಬೇಕಾಗಿಲ್ಲ. ಇದು ಕಾನೂನಿನ ಮೂಲಕ ನಿಷೇಧಿಸಲ್ಪಟ್ಟಿದೆ. ಅದರ ಅಸ್ತಿತ್ವದಲ್ಲಿರುವಾಗ ಅದಕ್ಕೆ ಬೆಂಬಲವು ಇಸ್ಲಾಂ ಮತ್ತು ಇಸ್ಲಾಮಿಕ್ ದೇಶಗಳಿಂದಲೇ ದೊರಕುತ್ತಿತ್ತು. ಆದರೆ ಗುಲಾಮಗಿರಿಯು ಹೋದಮೇಲೂ, ಮುಸಲ್ಮಾನರಲ್ಲಿ ಜಾತಿ ಇನ್ನೂ ಉಳಿದಿದೆ. ಹೀಗಾಗಿ ಹಿಂದೂ ಸಮಾಜವನ್ನು ಕಾಡುವ ಸಾಮಾಜಿಕ ದುಷ್ಟಪದ್ಧತಿಗಳೇ ಭಾರತದ ಮುಸ್ಲಿಂ ಸಮಾಜವನ್ನೂ ಬಾಧಿಸುತ್ತಿವೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ವಾಸ್ತವವಾಗಿ, ಮುಸ್ಲಿಮರಲ್ಲಿ ಹಿಂದೂಗಳ ಎಲ್ಲಾ ಸಾಮಾಜಿಕ ದುಷ್ಟಪದ್ಧತಿಗಳೇ ಅಲ್ಲದೆ ಇನ್ನೂ ಹೆಚ್ಚಿನದನ್ನು ಹೊಂದಿದ್ದಾರೆ. ಆ ಹೆಚ್ಚಿನದ್ದೇ ಮುಸ್ಲಿಂ ಮಹಿಳೆಯರಿಗಿರುವ ಕಡ್ಡಾಯ ಪರ್ದಾದ ವ್ಯವಸ್ಥೆ.

ಹಿಂದೂಧರ್ಮವನ್ನು ತ್ಯಜಿಸಿ ಬೌದ್ಧಮತಕ್ಕೆ ಪರಿವರ್ತಿತರಾದ ಅಂಬೇಡ್ಕರರನ್ನು ಸಮಂಜಸವಾಗಿಯೇ ಮೆಚ್ಚಿಕೊಳ್ಳುವವರು ಅವರು ಬೌದ್ಧಮತಕ್ಕೇ ಯಾಕಾಗಿ ಮತಾಂತರಗೊಂಡಿದ್ದು ಇಸ್ಲಾಮಿಗೆ ಯಾಕಿಲ್ಲ ಅನ್ನುವ ಪ್ರಶ್ನೆಯನ್ನು ಯಾವತ್ತೂ ಮಾಡುವದಿಲ್ಲ. ಅಂಬೇಡ್ಕರರು ಇಸ್ಲಾಮನ್ನು ಹಿಂದೂಧರ್ಮಕ್ಕಿಂತ ಭಿನ್ನವಾಗೇನೂ ನೋಡಿರಲಿಲ್ಲ ಎಂಬುದೇ ಇದಕ್ಕೆ ಕಾರಣವಾಗಿತ್ತು.ರಾಜಕೀಯ ಮತ್ತು ಸಾಂಸ್ಕೃತಿಕ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಹೀಗೆ ಹೇಳಿದ್ದರು: ಇಸ್ಲಾಂ ಅಥವಾ ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ದಮನಿತ ವರ್ಗಗಳ ರಾಷ್ಟ್ರೀಯತೆಯೇ ಅಮಾನ್ಯಗೊಳ್ಳುತ್ತದೆ. ಅವರು ಇಸ್ಲಾಮಿಗೆ ಹೋದರೆ ಮುಸ್ಲಿಮರ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಮತ್ತು ಮುಸ್ಲಿಮರ ಪ್ರಾಬಲ್ಯದ ಅಪಾಯ ಕೂಡಾ ನಿಜವಾಗುತ್ತದೆ.

-ಆನಂದ್ ರಂಗನಾಥನ್

ಅನುವಾದ : ಶೈಲೇಶ್ ಕುಲಕರ್ಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!