ಅಂಕಣ

ಇಲ್ಲಿಯ ತನಕ ನೊಣಕ್ಕೆ ಆರು ನೊಬೆಲ್ ಸಿಕ್ಕಿದೆ, ಗೊತ್ತಾ?

ಮನುಷ್ಯನಿಗೆ ವಿಚಾರ ಮಾಡುವ ಶಕ್ತಿ ಬಂದಾಗಿನಿಂದ ಆತ ಈ ಪ್ರಕೃತಿಯ ಹುಟ್ಟಿನ ಬಗ್ಗೆ ವಿಚಾರ ಮಾಡುತ್ತಲೇ ಇದ್ದಾನೆ. ಜಗತ್ತಿನ ಉದ್ಭವ ಹೇಗಾಯಿತು? ಈ ಪ್ರಪಂಚದಲ್ಲಿ ನಮಗಿಂತ ಹೆಚ್ಚು ಪ್ರಬಲವಾದ ಮತ್ತೊಂದು ಜೀವಿ ಇರಬಹುದೇ? ಪೃಥ್ವಿಯ ಹಾಗೆ ಜೀವಿಸಲು ಇನ್ನೊಂದು ಪ್ರದೇಶ ಇದೆಯೇ? ಆಕಾಶದಲ್ಲಿ ಏನಾಗುತ್ತಿದೆ? ಇವತ್ತಿಗೂ ರಾತ್ರಿ ಮನೆಯ ಅಟ್ಟದ ಮೇಲೆ ಬಂದು ಕೂತು ಆಕಾಶವನ್ನು ನೋಡಿದಾಗಲೆಲ್ಲ ನಾನೂ ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ತಾರಾ ಮಂಡಲದಲ್ಲಿ ಕಳೆದು ಹೋಗುತ್ತೇನೆ. ಅಂತ್ಯಂತ ರಹಸ್ಯಮಯ, ರೋಮಾಂಚಕಾರಿ ಈ ನಭೋಮಂಡಲ. ಅದರ ಬಗ್ಗೆ ಕಲ್ಪನೆ ಮಾಡಿಕೊಂಡಷ್ಟು ಕಡಿಮೆ. ಆಕಾಶ ಹಾಗೂ ಈ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟ ವಿಜ್ಞಾನಿಗಳ ಗುಂಪಿಗೆ ಕಡಿಮೆ ಇಲ್ಲ. ಯುರೋಪಿನ ವಿಜ್ಞಾನಿಗಳ ಒಂದು ಗುಂಪು, ಅಮೇರಿಕಾದ ಇನ್ನೊಂದು ಗುಂಪು, ಚೈನಾದ ಹಾಗೂ ರಷ್ಯಾದ ಮತ್ತೊಂದು ಗುಂಪು. ಭಾರತದವರದ್ದು ಇವರೆಲ್ಲರ ಜೊತೆ ನಂಟು ಉಂಟು. ಶತಮಾನಗಳಿಂದ ಪ್ರತಿ ವರ್ಷವೂ ಆಕಾಶದ ವಿಸ್ಮಯದ ಕುರಿತು ಹೊಸ ಹೊಸ ಆಯಾಮಗಳು ಬರುತ್ತಲೇ ಇವೆ. ಚಂದ್ರಯಾನ, ಮಂಗಳಯಾನ ಹೀಗೆ ಸೌರಮಂಡಲದ ಪರ್ಯಟನೆಗೆ ಕೂಡ ಮನುಕುಲ ದಾಪುಗಾಲು ಹಾಕುತ್ತಿದೆ. ಕೋಪರ್ನಿಕಸ್, ಗೆಲಿಲಿಯೋ, ನ್ಯೂಟನ್ ನಿಂದ ಹಿಡಿದು ನೀಲ್ಸ್ ಬೋರ್, ಮ್ಯಾಕ್ಸ್‌‌ ಪ್ಲಾಂಕ್, ಅಲ್ಬರ್ಟ್ ಐನ್‍ಸ್ಟೈನ್ ವರೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಹೊಸ ಹೊಸ ಅನ್ವೇಷಣೆ ಮಾಡುತ್ತಾ ಬಂದಿದ್ದಾರೆ.‌ ಇವರೆಲ್ಲರ ವೈಶಿಷ್ಟ್ಯ ಅಂದರೆ ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ನಿಂತು ಜಗತ್ತನ್ನು ಇಣುಕುತ್ತಾ ಬಂದಿದ್ದು. ಅದರಲ್ಲೂ ವಿಶೇಷವಾಗಿ ಐನ್‍ಸ್ಟೈನ್ ಮಾಡಿದ್ದು ಅಂದರೆ ನ್ಯೂಟನ್, ಪ್ಲಾಂಕ್ ಇವರೆಲ್ಲರ ಹೆಗಲ ಮೇಲೆ ನಿಂತು ಜಗತ್ತನ್ನು ನಾವು ಶತಮಾನಗಳಿಂದ ನೋಡಿದ್ದಕ್ಕಿಂತ ಬೇರೆಯಾಗಿಯೇ ಕಂಡ. ಐನ್‍ಸ್ಟೈನ್ ಕಂಡ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಜಗತ್ತಿನ ವಿಜ್ಞಾನಿಗಳಿಗೆ‌ ಎಷ್ಟೋ ವರ್ಷ ಹಿಡಿದವು. ಅವರು ಹೇಳಿದ ಗುರುತ್ವಾಕರ್ಷಣೆಯ ಅಲೆಗಳನ್ನು ಭೂಮಿಯ ಮೇಲೆ ಸೆರೆ ಹಿಡಿಯಲು ನೂರು ವರ್ಷಗಳೇ ಬೇಕಾದವು. ಇದನ್ನು ಯಾಕೆ ಹೇಳಬೇಕಾಯಿತು ಅಂದರೆ ಈ ವರ್ಷ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಐನ್‍ಸ್ಟೈನ್ ನೂರು ವರ್ಷಗಳ ಹಿಂದೆ ಪ್ರತಿಪಾದಿಸಿದ್ದ ಗುರುತ್ವಾಕರ್ಷಣ ಅಲೆಯನ್ನು ಕಂಡು ಹಿಡಿದವರಿಗೆ ಕೊಡಲಾಗಿದೆ. Rainer Weiss, Barry C Bearish ಹಾಗೂ Kip S Thorne ಇವರು ಈ ವರ್ಷದ ನೊಬೆಲ್‌ ಪ್ರಶಸ್ತಿ ವಿಜೇತರು.

ನೀವು ‘ಇಂಟರ್ಸ್ಟೆಲ್ಲಾರ್’ ಎನ್ನುವ ಇಂಗ್ಲೀಷ್ ಸಿನೆಮಾ ನೋಡಿದ್ದೀರಾ? ಖಗೋಳಶಾಸ್ತ್ರ, ಕ್ವಾಂಟಮ್ ಮೆಕ್ಯಾನಿಕ್ಸ್, ಐನ್‍ಸ್ಟೈನ್ ಸಮೀಕರಣ ಇದರ ಕುರಿತು ಒಲವು ಇದ್ದವರು ನೋಡಲೇಬೇಕು. ‘ದ ಬ್ರೀಫ್ ಹಿಸ್ಟರಿ ಆಫ್ ಟೈಮ್’ಪುಸ್ತಕವನ್ನು ಓದಿ ಅರ್ಥ ಮಾಡಿಕೊಂಡವರಿಗೆ ಮೊದಲ ಸಲ ಅರ್ಧ ಭಾಗ ಅರ್ಥವಾಗಬಹುದು ಅಷ್ಟೇ. ಇಡೀ ಸಿನೆಮಾ ಅರ್ಥವಾಗಲು ಒಂದಲ್ಲ, ಎರಡಲ್ಲ, ಕನಿಷ್ಠ ಅಂದರೆ ಮೂರು ಸಲವಾದರೂ ಅದನ್ನು ನೋಡಬೇಕು. ಈ ಸಿನೆಮಾವನ್ನು,‌ ಭೌತಶಾಸ್ತ್ರದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ, ಕಿಪ್ ಎಸ್ ಥ್ರೋನ್ ಅವರ ‘ಸೈನ್ಸ್ ಆಫ್ ಇಂಟರ್ಸ್ಟೆಲ್ಲಾರ್’ ಎಂಬ ಪುಸ್ತಕದ ಮೇಲೆ ನಿರ್ಮಿಸಲಾಗಿದೆ. ಸಿನೆಮಾದಲ್ಲಿ ಗುರುತ್ವಾಕರ್ಷಣೆಯನ್ನು ಬಳಸಿ ಅಂತರಿಕ್ಷಕ್ಕೆ ಹೇಗೆ ಹೋಗಬಹುದು? ಬದುಕಲು ಪ್ರತಿಕೂಲವಾಗಿರುವ ಪ್ರದೇಶಗಳನ್ನು ಹೇಗೆ ಹುಡುಕಬಹುದು? ‘ಕಪ್ಪು ರಂಧ್ರ’ಗಳ ನಿರ್ಮಾಣದ ಹಂತಗಳನ್ನು ಬಳಸಿ ವೇಗವಾಗಿ ಹೇಗೆ ಪ್ರಯಾಣ ಮಾಡಬಹುದು? ಕಲ್ಪಿಸಲೂ ಕಠಿಣವಾದ ಐದನೆಯ ಆಯಾಮದ ಪರಿಚಯ ಕೂಡ ಇಲ್ಲಿ ಮಾಡಲಾಗಿದೆ. ಇದು ಯಾವ ಕಾಲ್ಪನಿಕ ಮೂವೀ ಅಲ್ಲ, ಬದಲಾಗಿ ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಮುಂದೊಂದು ದಿನ ನಾವು ಅಂತರಿಕ್ಷಕ್ಕೆ ವಲಸೆ ಹೋಗಲೇ ಬೇಕು. ಇವತ್ತು ಬೆಳಕನ್ನು ಬಳಸಿ ಅದರ ವೇಗದಲ್ಲಿ ಹೇಗೆ ಸಂಕೇತಗಳನ್ನು ರವಾನಿಸುತ್ತೇವೆಯೋ ಹಾಗೆಯೇ ಮುಂದೊಂದು ದಿನ ಗುರುತ್ವಾಕರ್ಷಣ ಅಲೆಗಳನ್ನು ಬಳಸಿ ಅಂತರಿಕ್ಷ ಪರ್ಯಟನೆ ಮಾಡಬಹುದಾದ ದಿನಗಳು ಬರಬಹುದು. ಕೇವಲ ಐದು ಆರು ದಶಕದೊಳಗೆ ಚಂದ್ರನಿಂದ ಮಂಗಳದವರೆಗೆ ಹೋಗಿದ್ದೇವೆ. ಹೀಗಾಗಿ ಇವತ್ತು ಗುರುತ್ವಾಕರ್ಷಣ ಅಲೆಯನ್ನು ಕಂಡು ಹಿಡಿದು, ಅಳೆದಿದ್ದು ಅಂತರಿಕ್ಷದ ಅಧ್ಯಯನದಲ್ಲಿ ಒಂದು ಹೊಸ ಅಧ್ಯಾಯವನ್ನೇ ಶುರುಮಾಡಿದಂತಿದೆ. ಇದು ಆರಂಭ ಅಷ್ಟೇ, ಇನ್ನು ಜಗತ್ತಿನ ಅಗೋಚರ ರಹಸ್ಯವನ್ನು ಅರಿಯುವ ಕಾಲ ಖಚಿತವಾಗಿದೆ. ನೊಬೆಲ್ ಪ್ರಶಸ್ತಿಯೇ ಹಾಗೆ, ಯಾರೆಲ್ಲ ಅದನ್ನು ಪಡೆದಿದ್ದಾರೋ ಅವರ ಸಾಧನೆಯನ್ನು ನೋಡಬೇಕು. ಅವರ ಸಾಧನೆಯನ್ನು ತೆಗೆದು ಬಿಟ್ಟರೆ ಜಗತ್ತು ನಿಂತೇ ಹೋಗಿಬಿಡುತ್ತದೆ.

ಗ್ರಾವಿಟಿ, ಅಂತರಿಕ್ಷ, ಸಾಪೇಕ್ಷತಾ ಸಿದ್ಧಾಂತ, ಐನ್‍ಸ್ಟೈನ್ ಲೆಕ್ಕಾಚಾರ, ವಸ್ತ್ರದ ಹಾಗಿನ ಬ್ರಹ್ಮಾಂಡದ ಜೋಡಣೆ

ಇವೆಲ್ಲ ವಿಷಯವನ್ನು ನನ್ನ ಗೆಳೆಯನಿಗೆ ಹೇಳುತ್ತಿದ್ದೆ. ನಾನು ಹೇಳುತ್ತಿದ್ದರೆ ಅವನು ಆಕಳಿಸುತ್ತಿದ್ದ. “ಯಾಕಪ್ಪಾ, ನೀನು ಒಂದು ಕಾಲದಲ್ಲಿ ಐನ್‍ಸ್ಟೈನ್ ಫ್ಯಾನ್ ಆಗಿದ್ದೆ, ಹಾಸ್ಟೆಲಿನಲ್ಲಿ ರಾತ್ರಿಯಿಡಿ ಅವನ ಹೆಸರಿನಲ್ಲಿ ಬಡಬಡಿಸುತ್ತಿದ್ದವನು ಈಗ ಐನ್‍ಸ್ಟೈನ್ ಅಂದಕೂಡಲೇ ನಿದ್ದೆ ಮಾಡ್ತಾ ಇದ್ದೀಯಾ” ಅಂದರೆ, “ಇಲ್ಲಪ್ಪಾ …ಜೆಟ್ ಲ್ಯಾಗ್” ಎಂದು ಹೇಳಿದ. ಆತ ಅಮೇರಿಕಾದಿಂದ ದೀಪಾವಳಿ ಹಬ್ಬಕ್ಕೆ ಅಂತ ರಜೆಯ ಮೇಲೆ ಬಂದವನು ರವಿವಾರ ಮಧ್ಯಾಹ್ನ ನಮ್ಮ ಮನೆಗೆ ಬಂದಿದ್ದ. ಒಂದು ದೇಶದ ಸಮಯಕ್ಕೆ ನಮ್ಮ ದೇಹ ಹೊಂದಿಕೊಂಡಿರುತ್ತದೆ, ಆ ದೇಶವನ್ನು ಬಿಟ್ಟು ಭೂಮಿಯ ಇನ್ನೊಂದು ಭಾಗದ ದೇಶಕ್ಕೆ ಬಂದರೆ ನಮ್ಮ ಜೈವಿಕ ಗಡಿಯಾರ ಬದಲಾದ ಸಮಯಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಗೆದುಕೊಳ್ಳುತ್ತದೆ. ಅಲ್ಲಿಯ ಸಮಯಕ್ಕೆ ಏನಾಗಬೇಕು ಹಾಗೆಯೇ ಅದಕ್ಕೆ ತಕ್ಕಂತೆ ದೇಹ ಸ್ಪಂದಿಸುತ್ತದೆ. ಈ ತರಹದ ದೇಹದ ಲಯವನ್ನು ಜೈವಿಕ ಗಡಿಯಾರ, circadian rhythm ಎನ್ನುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯ ತನಕ ಪ್ರಾಣಿ, ಪಕ್ಷಿ, ಮರ ಗಿಡಗಳ ತನ್ನದೇ ಆದ ಜೈವಿಕೆ ಪ್ರಕ್ರಿಯೆ ಇರುತ್ತದೆ. ಈ 24 ತಾಸುಗಳ ಪ್ರಕ್ರಿಯೆಯನ್ನು ಜೀವಿ ಗುರುತಿಸಿ ತನ್ನ ದೇಹವನ್ನು ಅದಕ್ಕೆ ತಕ್ಕಂತೆ ಅಳವಡಿಸಿಕೊಳ್ಳುತ್ತದೆ. ನಮ್ಮ ದೈಹಿಕ ಪ್ರಕ್ರಿಯೆಯನ್ನು ನಿಯಂತ್ರಿಸುವ ಜೈವಿಕ ಗಡಿಯಾರದ ಬಗ್ಗೆ ಹದಿನೆಂಟನೆಯ ಶತಮಾನದಿಂದಲೇ ಅಧ್ಯಯನ ನಡೆಸಿದ್ದರು. ನಂತರ 1970ರಲ್ಲಿ ರೊನಾಲ್ಡ್ ಕೊನೋಪ್ಕಾ ಹಾಗೂ ಸೇಯಮರ್ ಬೆನ್ಜರ್ ಜೈವಿಕ ಗಡಿಯಾರವು ನಮ್ಮ ಆನುವಂಶಿಕ ಧಾತುವಿನಲ್ಲಿ ಅಡಕವಾಗಿರುತ್ತದೆ ಎಂದು ಕಂಡುಹಿಡಿದಿದ್ದರು. ಆ ಜೀನಿಗೆ ‘ಪೀರಿಯಡ್’ ಎಂದು ಹೆಸರಿಡಲಾಗಿತ್ತು. ಇಷ್ಟೆಲ್ಲಾ ಗೊತ್ತಿದ್ದರು ಯಾಕೆ ನಮಗೆ ರಾತ್ರಿ ಮಲಗಬೇಕು ಅನಿಸುತ್ತದೆ, ಅಷ್ಟೇ ಸಮಯಕ್ಕೆ ಹಸಿವಾಗುತ್ತದೆ, ಕೆಲವು ಗಿಡಗಳು ಹೇಗೆ ಹಗಲಿಗೆ ಎಲೆ ತೆರೆದು ರಾತ್ರಿ ಮುಚ್ಚುಕೊಳ್ಳುತ್ತವೆ? ಅದಕ್ಕೆ ಕಾರಣ ಏನು? ಎನ್ನುವುದು ರಹಸ್ಯವಾಗಿಯೇ ಉಳಿದಿತ್ತು. ಈ ವರ್ಷದ ರಾಸಾಯನ ಶಾಸ್ತ್ರದ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಈ ಪ್ರಶ್ನೆಗೆ ಉತ್ತರ ಕಂಡುಹಿಡಿದವರಿಗೆ ಕೊಡಲಾಗಿದೆ.  ಅಮೇರಿಕಾದ ಜೀವಶಾಸ್ತ್ರಜ್ಞರಾದ Jeffrey G. Hall, Michael Rosbash ಹಾಗೂ Michael W. Young ತಮ್ಮ ಈ ಸಂಶೋಧನೆಗೆ ಈ ವರ್ಷದ ಮೆಡಿಸಿನ್ ನೊಬೆಲ್ ಪಡೆದಿದ್ದಾರೆ. ಅವರ ಸಂಶೋಧನೆಯ ಪ್ರಕಾರ ನಮ್ಮ ದೇಹದಲ್ಲಿರುವ ಪೀರಿಯಡ್ ಎನ್ನುವ ಜೀನ್, ಜೀವಕೋಶದಲ್ಲಿ ಪ್ರೋಟಿನ್ ಶೇಖರಣೆಯನ್ನು ನಿಯಂತ್ರಿಸುವ ಮೂಲಕ ಗಡಿಯಾರವನ್ನು ಓಡಿಸುತ್ತದೆ. ಹಗಲು ಹೆಚ್ಚು ಪ್ರೋಟಿನ ಶೇಖರಣೆ ಆದರೆ ರಾತ್ರಿ ಕಡಿಮೆ ಸಂಗ್ರಹವಾಗುತ್ತದೆ. ಇದರ ಮೇಲೆ ನಮ್ಮ ದೇಹದ ದಿನಚರಿಯ ಲಯ ನಿರ್ಧಾರವಾಗುತ್ತದೆ.

ಇದರ ಸಂಶೋಧನೆಗೆ ಸಂಬಂಧಿಸಿದ ಎಲ್ಲಾ ಪ್ರಯೋಗಗಳನ್ನು ಒಂದು ವಿಶಿಷ್ಠವಾದ ನೊಣದ ಪ್ರಜಾತಿಯ ಮೇಲೆ ಮಾಡಲಾಗಿದೆ. ಆ ನೊಣದ ಪ್ರಜಾತಿಯ ಹೆಸರು – ಫ್ರುಟ್ ಫ್ಲೈ. ನಿಮಗೊಂದು ವಿಷಯ ಗೊತ್ತಾ? ಈ ಫ್ರುಟ್ ಫ್ಲೈ ಇಲ್ಲಿಯ ತನಕ ಆರು ನೊಬೆಲ್ ಪ್ರಶಸ್ತಿಯನ್ನು ಪಡೆದಿದೆ. ಫ್ರುಟ್ ಫ್ಲೈ ಹಾಗೂ ನೊಬೆಲ್ ಪ್ರಶಸ್ತಿಯ ಜೋಡಿ ಶುರುವಾಗಿದ್ದು ಇಪ್ಪತ್ತನೆಯ ಶತಮಾನದ ಆರಂಭದಿಂದ. 1933ರಲ್ಲಿ ಮೊದಲ ಬಾರಿಗೆ ಫ್ರುಟ್ ಫ್ಲೈ ಗೆ ನೊಬೆಲ್ ಸಿಕ್ಕಿದ್ದು. ಆನುವಂಶಿಕತೆಯಲ್ಲಿ ಕ್ರೋಮೋಸೋಮುಗಳ ಪಾತ್ರದ ಬಗ್ಗೆ ನಡೆಸಿದ ಅಧ್ಯಯನಕ್ಕೆ ಥಾಮಸ್ ಮಾರ್ಗನ್ ನೊಬೆಲ್ ಪಡೆದಿದ್ದರು. ನಂತರ 1946, 1995, 2004, 2011ರಲ್ಲಿ ಹಾಗೂ ಈ ವರ್ಷ ಹೀಗೆ ಫ್ರುಟ್ ಫ್ಲೈಗೆ ಒಟ್ಟು ಆರು ಬಾರಿ ನೊಬೆಲ್ ಪ್ರಶಸ್ತಿ ಸಿಕ್ಕಿವೆ! ಉಳಿದೆಲ್ಲ ಜೀವಿಗಳಿಗಿಂತ ಫ್ರುಟ್ ಫ್ಲೈ ಮೇಲೆ ಪ್ರಯೋಗ ನಡೆಸಲು ಕಾರಣ ಅಂದರೆ ಇದರ ಹಾಗೂ ಮನುಷ್ಯನ ಡಿಎನ್ಎ ನಡುವೆ ಸುಮಾರು 60% ಸಾಮ್ಯತೆ ಇದೆಯಂತೆ. ಇನ್ನೊಂದು ಕಾರಣ ಅಂದರೆ ಸಮಯ. ಇಲಿಯ ಮೇಲೆ ಪ್ರಯೋಗ ನಡೆಸಿ ಫಲಿತಾಂಶ ಪರೀಕ್ಷಿಸಲು ಒಂದು ವರ್ಷ ಬೇಕಾದರೆ ಫ್ರುಟ್ ಫ್ಲೈ ಕೇವಲ ಮೂರು ವಾರದಲ್ಲಿ ಫಲಿತಾಂಶ ಕೊಡುತ್ತದೆ ಎನ್ನುತ್ತಾರೆ ಆಂಡರ್ಸ್ ಪ್ರೊಕೊಪ್ ಎನ್ನುವ ಜೀವಶಾಸ್ತ್ರಜ್ಞ. ಈ ವರ್ಷದ ನೊಬೆಲ್ ಪ್ರಶಸ್ತಿಯ ಘೋಷಣೆಯ ವಿಷಯವನ್ನು ತಿಳಿಸಲು ನೊಬೆಲ್ ಕಮಿಟಿ ಮೈಕೆಲ್ ರೊಸ್ಬಾಶ್ ಅವರಿಗೆ ಕಾಲ್ ಮಾಡಿದಾಗ ಅವರು ಸಂತೋಷದಲ್ಲಿ ಹೇಳಿದರಂತೆ ” I am very pleased for the fruit fly ”

ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಬರಹ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!