Featured ಅಂಕಣ

ವಿನಯ ನಿನ್ನದಾದರೇ ವಿಜಯವೂ ನಿನ್ನದೇ, ಸಹನೆ ನಿನ್ನದಾದರೇ ಸಕಲವೂ ನಿನ್ನದೇ….

ಕೆಲವರಿಗೆ ಬರವಣಿಗೆಯಲ್ಲಿ ಪ್ರೌಢಿಮೆ ಇರುತ್ತದೆ ಮತ್ತೆ ಕೆಲವರಿಗೆ ಮಾತುಗಾರಿಕೆಯಲ್ಲಿ. ವಿರಳಾತಿವಿರಳ ಜನರು ಮಾತ್ರ ಎರಡರಲ್ಲೂ ಗೆಲ್ಲಬಲ್ಲರು. ಅಂಥ ಪ್ರತಿಭಾವಂತರು ಚಕ್ರವರ್ತಿ ಸೂಲಿಬೆಲೆ. ಮಾತಾಡಲು ನಿಂತರೆ ವಾಗ್ದೇವಿಯೇ ಧ್ಯಾನಸ್ಥಳಾಗಿ ಕೂತು ಕೇಳುವಷ್ಟು ಪ್ರಖರ ನಿಖರ‌ ಮಾತುಗಾರಿಕೆ. ಲೇಖನಿ ಹಿಡಿದರೆ ಒಂದಿಡಿ ಬರಹದಲ್ಲಿ ಪ್ರತಿ ಶಬ್ದವೂ ವಿಷಯವಸ್ತುವನ್ನು ಪುಷ್ಟಿಕರಿಸುತ್ತಲೇ ಹೋಗುತ್ತದೆ ವಿನಃ ಒಂದೇ ಒಂದು ಪದ ಔಚಿತ್ಯವಲ್ಲದ್ದು ಎನಿಸುವುದಿಲ್ಲ. ಇಷ್ಟೊಂದು ಪರಿಪಕ್ವತೆ ಬರಲು ಅವರು ಅದೆಷ್ಟು ಓದಿಕೊಂಡಿರಬೇಕು ಎಂಬುದನ್ನು ತಾವು ಊಹಿಸಬಲ್ಲಿರಿ.

ಜಾಸ್ತಿ ಓದಿಕೊಂಡವರಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಮಾತಾಡುತ್ತಾ ಅವರು ವಿಷಯಾಂತರ ಮಾಡುತ್ತಾ ಸಾಗುತ್ತಾರೆ. ಆದರೆ ಚಕ್ರವರ್ತಿಯವರು ತಮ್ಮನ್ನು ಯಾವ ಸಭೆಗೆ ಕರೆದಿದ್ದಾರೆ ಅದರ ರೂಪರೇಷೆಗಳೇನು? ಅಲ್ಲಿ ಏನು ಮಾತಾಡಿದರೆ ಒಳಿತು ? ಎಂಬುದರ  ಅರಿವಿನೊಂದಿಗೆ ತೂಕಬದ್ಧವಾಗಿ ಮಾತು ಮುಗಿಸುತ್ತಾರೆ. ಅಲ್ಲಿ ಎಲ್ಲೂ ರಾಜಕಾರಣಿ(?)ಗಳ ಭಾಷಣದಂತೆ ಕ್ಲಿಷೆಗಳಾಗಲಿ, ವಿನಾಕಾರಣ ದೋಷಾರೋಪಗಳಾಗಲಿ ನುಸುಳುವುದಿಲ್ಲ. ಅವರು ಖಂಡಿಸುವ ವಿಷಯವಿದ್ದರೂ ಅದನ್ನು ಸಾತ್ವಿಕ ಪದಗಳಲ್ಲೇ ಖಂಡಿಸುತ್ತಾರೆ.

ಮಳೆ, ಬಿಸಿಲು, ಚಳಿ ಎಂಬುದು ಆಗಿನ ಕಾಲಕ್ಕೆ ಮಾತ್ರ ಪ್ರಸ್ತುತ. ಬೆಳಿಗ್ಗೆ ಎದ್ದೊಡನೆ ಓದುವ ದಿನಪತ್ರಿಕೆ ಒಂದು ದಿನಕ್ಕೆ ಮಾತ್ರ ಪ್ರಸ್ತುತ. ಚುನಾಯಿತ ಪಕ್ಷಗಳು ಮತ್ತು ವ್ಯಕ್ತಿಗಳು ಐದು ವರ್ಷ ಮಾತ್ರ ಪ್ರಸ್ತುತ. ನಿರಂತರ ಚಟುವಟಿಕೆಯಲ್ಲಿರುವ ಚಕ್ರವರ್ತಿಯವರಂಥ ಜನ ಸರ್ವಕಾಲಕ್ಕೂ ಪ್ರಸ್ತುತರು. ಅವರನ್ನು ನೆನೆಯಲು ಮತ್ತು ಅವರ ಸತ್ಕಾರ್ಯಗಳನ್ನು ಪೋಷಿಸಲು ಯಾವುದೇ ನಿಗದಿತ ಸಮಯ (ಹುಟ್ಟುಹಬ್ಬ ಇತ್ಯಾದಿ) ಬೇಕಿಲ್ಲ. ಒಂದು ಸಲ ಹಿಂತಿರುಗಿ ಅವರ ಬದುಕಿನ ಸಣ್ಣ ಅವಲೋಕನ ಈ ಕ್ಷಣಕ್ಕೆ ಮಾಡಿಬಿಡಬೇಕು ಎನಿಸುತ್ತಿದೆ.  ಪ್ರಸ್ತುತ ಯಾವುದೇ ಘಟನೆಗೆ ಲೇಖನ ಥಳಕು ಹಾಕಿಕೊಂಡಲ್ಲಿ ಅದು ಉದ್ದೇಶಪೂರ್ವಕವಲ್ಲ ಕಾಕತಾಳೀಯವಷ್ಟೆ.

“ಭಾರತ ದರ್ಶನ” ಎಂಬ ನಾಮದಡಿಯಲ್ಲಿ ಭಾಷಣ ಮಾಡುತ್ತಾ ಹಳ್ಳಿ ಹಳ್ಳಿಗೂ ಭಾರತವನ್ನು ಮುಟ್ಟಿಸಲು ಪ್ರಯತ್ನಿಸುತ್ತಿದ್ದ ವಿದ್ಯಾನಂದ ಶೆಣೈಯವರು ಚಕ್ರವರ್ತಿ ಎಂಬ ‘ಪ್ರತಿಭಾ ವಾಹಿನಿ’ಗೆ ಹರಿಯುವ ದಿಕ್ಕನ್ನು ತೋರಿಸಿಕೊಟ್ಟ ಮೊದಲ ಗುರು. ಚಕ್ರವರ್ತಿಯವರ ಕಡೆಯಿಂದ ಭಾಷಣ ಮಾಡಿಸುವುದು, ಅವರ ಕೈಯಲ್ಲಿ ಪುಸ್ತಕಗಳನ್ನು ಬರೆಸುವುದು ಈ ತರಹದ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿದ ಗುರು ಅವರು. ಒಬ್ಬ ನಾಯಕ ನೇಪಥ್ಯಕ್ಕೆ ಸರಿಯುವ ಮುನ್ನ ಮತ್ತೊಬ್ಬನನ್ನು ತಯಾರು ಮಾಡಬೇಕು. ಉಳಿದೆಲ್ಲೆಡೆ ಅದರಲ್ಲೂ ರಾಜಕಾರಣದಲ್ಲಿ ಇಂಥದ್ದಕ್ಕೆ ಅವಕಾಶಗಳೇ ಇಲ್ಲ. ಆದರೆ ವಿದ್ಯಾನಂದಜಿ ತಮ್ಮ ನಂತರ ತಮ್ಮ ಮಾತುಗಳನ್ನಾಡಲು ಒಂದು ಧ್ವನಿ ರೂಪಿಸುತ್ತಾ ಹೋದರು. ಅವರಿಂದ ಚಕ್ರವರ್ತಿಯವರಿಗೆ ಒಲಿದ  ದೀಕ್ಷೆ ಬಹುಷಃ ಚಕ್ರವರ್ತಿಯವರಿಂದ “ಯುವಾಬ್ರಿಗೇಡ್” ಪೂರ್ತಿ ತಂಡಕ್ಕೆ ಒಲಿದಿದೆ ಎಂದರೆ ತಪ್ಪಾಗಲಾರದು. ಭವಿಷ್ಯದ ನಾಯಕರನ್ನು ಪ್ರಖರ ವಾಗ್ಮಿಗಳನ್ನು ಅದಕ್ಕಿಂತ ಹೆಚ್ಚಾಗಿ ಸಮಾಜವನ್ನು ಸುಧಾರಿಸುವ ಕಾರ್ಯಕರ್ತರನ್ನು ಚಕ್ರವರ್ತಿ ತಯಾರು ಮಾಡುತ್ತಿದ್ದಾರೆ. ಒಬ್ಬ ಚಕ್ರವರ್ತಿಯಿಂದ ಸಾವಿರಾರು ಚಕ್ರವರ್ತಿಗಳು ತಯಾರಾಗುತ್ತಿದ್ದಾರೆ.

ವಿದ್ಯಾನಂದ ಶೆಣೈ ಅವರಿಂದ ಶುರುವಾದ ಚಕ್ರವರ್ತಿಯವರ ಪಯಣಕ್ಕೆ ಒಂದೊಳ್ಳೆ ವೇದಿಕೆ ದಕ್ಕಿದ್ದು ರಾಜೀವ್ ದೀಕ್ಷಿತ್ ಅವರ  “ಸ್ವದೇಶಿ ಅಭಿಯಾನ”ದಿಂದ. ರಾಜೀವ್ ದೀಕ್ಷಿತ್ ಅವರ ಪುಸ್ತಕಗಳ ಅನುವಾದ ಅವರ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲು ಚಕ್ರವರ್ತಿ ಮುಂದಾದರು. “ನಿವೇದನೆ” ಎಂಬ ಕಾರ್ಯಕ್ರಮದಲ್ಲಿ‌ ಕಾಣಿಸಿಕೊಂಡರು. ಗೋಪಾಲ್ ವಾಜಪೇಯಿ ಅಂತ ಅಪರೂಪದ ಬರಹಗಾರ ಬರೆದದ್ದಕ್ಕೆ ಧ್ವನಿಯಾಗಿ “ತೀರ್ಥಯಾತ್ರೆ” ಕಾರ್ಯಕ್ರಮದ ನಿರೂಪಕರಾದರು. ಪತ್ರಿಕೆಗಳಿಗೆ ಬರಹಗಾರರಾದರು. “ಹರಟೆ”ಯಂಥ ಚರ್ಚಾ ವೇದಿಕೆಯಲ್ಲಿ ಕಾಣಿಸಿಕೊಂಡರು. ನಂತರ ತಮ್ಮದೇ ಒಂದು ಪಡೆ ಕಟ್ಟಿಕೊಂಡು “ಜಾಗೋಭಾರತ್” ಎಂಬ  ಎಲ್ಲರನ್ನೂ ಜಾಗೃತಗೊಳಿಸುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.

ಇದೆಲ್ಲರಿಗೂ ಗೊತ್ತಿರುವ ವಿಚಾರಗಳೇ. ಆದರೆ ಇಲ್ಲಿ ಉಲ್ಲೇಖಿಸಲು ಕಾರಣವಿಷ್ಟೆ. ಇಂಥ ಒಬ್ಬ ನಾಯಕನ ನಿರ್ಮಾಣ ಮಾಡಿದ್ದು ಯಾವುದೋ ಹೊಗಳು ಭಟ್ಟರಲ್ಲ, ಹುಂಬ ಪಡೆಯಲ್ಲ ಯಾವುದೋ ಚುನಾವಣೆಯಂತೂ ಅಲ್ಲವೇ ಅಲ್ಲ.  ಯಾವ ವಸ್ತು ತಯಾರಾಗಲು ಸಮಯ ತೆಗೆದುಕೊಳ್ಳುತ್ತೋ ಅದು ದಕ್ಷತೆಯಿಂದ ಕೆಲಸ ಮಾಡಬಲ್ಲದು. ಯಾವ ವ್ಯಕ್ತಿ ಸಂಘಟನೆಯ ಬೇರು ಮಟ್ಟದ ಕಾರ್ಯಕರ್ತನಾಗಿ ಕ್ರಿಯಾಶೀಲನಾಗಿ ಇರಬಲ್ಲನೋ ಅವನೊಬ್ಬ ಕರ್ಮಯೋಗಿ ನಾಯಕನಾಗಬಲ್ಲ ಮತ್ತು ಒಂದು ಕ್ರಿಯಾಶೀಲ ಪಡೆಯನ್ನೂ ಕಟ್ಟಬಲ್ಲ.  ವಿದ್ಯಾನಂದ ಶೆಣೈಯವರ ಮಾತುಗಾರಿಕೆ, ರಾಜೀವ್ ದೀಕ್ಷಿತ್ ಅವರ ಸ್ವದೇಶಿ ಚಿಂತನೆ, ಗೋಪಾಲ್ ವಾಜಪೇಯಿಯವರ ಬರಹಗಾರಿಕೆ ಮತ್ತು ಈ ಮೂವರಲ್ಲೂ ಇದ್ದ ಸನಾತನ ಧರ್ಮ ಮತ್ತು ದೇಶದೆಡೆಗಿನ ಅಭಿಮಾನದ ಒಟ್ಟು ಮೊತ್ತವೇ ಚಕ್ರವರ್ತಿ. ಕುಟುಂಬದಿಂದ ಪಡೆದ ಸಂಸ್ಕಾರಗಳು ಯೌವನಾವಸ್ಥೆಯಲ್ಲಿ ನಶಿಸುತ್ತಾ ಹೋಗುವುದು ವಾಡಿಕೆ. ಕುಟುಂಬ ಬಾಲ್ಯದಲ್ಲಿ ಕೊಟ್ಟ ಸಂಸ್ಕಾರವನ್ನು ನೂರ್ಮಡಿಗೊಳಿಸಲು ಚಕ್ರವರ್ತಿಯವರಿಗೆ ಸಾಧ್ಯವಾಗಿದ್ದು ಅವರಿಗವರೇ ಆಯ್ದುಕೊಂಡ ಪರಿಸರವೇ ಕಾರಣ. ಯೌವನಾವಸ್ಥೆಯಲ್ಲಿ ರಾಮಕೃಷ್ಣಾಶ್ರಮದಲ್ಲಿ ಬೆಳೆದುದ್ದರಿಂದ ದಿವ್ಯತ್ರಯರ ಚಿಂತನೆಗಳಿಂದ ಪ್ರಭಾವಿತರೂ ಆದರು. ಹೀಗೆ ಬೆಳೆದು ಬಂದದ್ದರಿಂದಲೇ ಒಬ್ಬ ಕ್ರಿಯಾಶೀಲ, ಸಹನಶೀಲ ವ್ಯಕ್ತಿಯ ನಿರ್ಮಾಣವಾಯಿತು. ಕಟುಕನ ಕೈಲಿ ಬೆಳೆದ ಗಿಳಿಯಾಡುವ ಅವಾಚ್ಯಗಳಿಗೂ ಸಂತನ ಕೈಲಿ ಬೆಳೆದ ಗಿಳಿಯಾಡುವ ಮೃದುನುಡಿಗಳಿಗೂ ಇರುವ ಅಂತರವನ್ನು

ತೌಲನಿಕವಾಗಿ ತೋರಿಸಿಕೊಡುವ ನೀತಿಕಥೆಯನ್ನು ಓದಿದ್ದೆವು. ಸಂತನ ಕೈಲಿ ಬೆಳೆದ ಆ ಕಾಲ್ಪನಿಕ ಗಿಳಿಯ ಮೂರ್ತರೂಪವೇ ಚಕ್ರವರ್ತಿ. ಅವರ ಜೊತೆಯಲ್ಲಿರುವವರಿಗೆ ಅವರ ಭಾಷಣಗಳನ್ನು ಕೇಳುವವರಿಗೆ ನನ್ನ ಮಾತುಗಳು ತಿಲದಷ್ಟು ಉತ್ಪ್ರೇಕ್ಷೆ ಅನಿಸುವುದಿಲ್ಲ.

ನಿಮ್ಮ ಮನೆಯಲ್ಲಿನ ಮಗು ಸಂಸ್ಕಾರವಂತ ಮತ್ತು ದೇಶಪ್ರೇಮಿಯಾಗಬೇಕೆಂದರೆ “ಜಾಗೋಭಾರತ್” ಭಾಷಣದ ಸರಣಿಯನ್ನೊಮ್ಮೆ ಕೇಳಿಸಿ. ಪಠ್ಯಪುಸ್ತಕಗಳು ಹರಡಬೇಕಾದ ಜ್ಞಾನವನ್ನು “ಜಾಗೋಭಾರತ್” ಹರಡುತ್ತದೆ. ದೇಶದ ನೈಜ ಇತಿಹಾಸ ಸದ್ಯದ ಪರಿಸ್ಥಿಯ ಬಗ್ಗೆ ಯಾವ ಪಠ್ಯಗಳು ಬೆಳಕು ಚೆಲ್ಲಬೇಕಾಗಿತ್ತೋ ಅವುಗಳೇ ಸುಂದರ ಸುಳ್ಳುಗಳನ್ನು ಕಟ್ಟಿಕೊಡುತ್ತಿರುವುದು ವಿಪರ್ಯಾಸದ ಸಂಗತಿ. ಎಷ್ಟೇ ಆದರೂ ಅವರವರ ಹಿತಾಸಕ್ತಿಗೆ ರೂಪಿಸಿಕೊಂಡ, ಬದಲಿಸಿಕೊಂಡ ಪುಸ್ತಕಗಳಲ್ಲಿ ರಾಷ್ಟ್ರದ ಹಿತಾಸಕ್ತಿ ತೆರೆದುಕೊಳ್ಳುವುದಾದರೂ ಹೇಗೆ? ಇಂತದ್ದನ್ನು ಓದುವ ಮಗು ತನ್ನ ಅಧ್ಯಯನದ ಅಂತ್ಯಕ್ಕೆ ದೇಶವನ್ನು ಕಟುವಾಗಿ ದ್ವೇಷಿಸುವ ವ್ಯಕ್ತಿಯಾಗಿರುತ್ತಾನೆ ತನ್ನತನವನ್ನು ಮಾರಿಕೊಂಡು ದಾಸನಾಗಿರುತ್ತಾನೆಯೇ ವಿನಃ ದೇಶಪ್ರೇಮಿಯಂತೂ ಆಗಲಾರ. ಭಗತ್ ಸಿಂಗ್, ಚಂದ್ರಶೇಖ‌ರ್ ಆಜಾದ್ , ವೀರ ಸಾವರ್ಕರ್, ಮದನ್ ಲಾಲ್ , ಮಹಾತ್ಮಾ ಗಾಂಧಿ ಇತ್ಯಾದಿ ಜನರ ಹೋರಾಟದಿಂದ ಸಂಕೋಲೆಯಿಂದ ತಾಯಿ ಭಾರತಾಂಬೆ ಮುಕ್ತಳಾಗಲು ಆ ಜನ ಪಟ್ಟ ಶ್ರಮವನ್ನು ಪಠ್ಯಪುಸ್ತಕಗಳು ತಲುಪಿಸುವುದು ತುಂಬಾ ಕಡಿಮೆ. ಅಂತ ಹೋರಾಟದಲ್ಲಿ ತೊಡಗಿಕೊಳ್ಳುವ ಸೌಭಾಗ್ಯ ನಮ್ಮ ಪೀಳಿಗೆಗಾಗಲಿ ಚಕ್ರವರ್ತಿಯವರಿಗಾಗಲಿ ಇಲ್ಲದೇ ಇರಬಹುದು. ಆದರೆ ಅಂತವರ ಸಂದೇಶವನ್ನು ತಲುಪಿಸಿ ಮತ್ತಷ್ಟು ಅಂತ ಜನರ ನಿರ್ಮಾಣಕ್ಕೆ ಈ ಭಾಷಣಗಳು ದಾರಿಯಾಗಬಲ್ಲವು.

“ಜಾಗೋಭಾರತ್” ನಂತರದ ದಿನಗಳಲ್ಲಿ ಅದೇ ತಂಡದೊಂದಿಗೆ ಶುರುವಾದದ್ದು “ನಮೋಭಾರತ್.” ಲೋಕಸಭೆ ಚುನಾವಣೆಯ ತಯಾರಿ ನಡೆಯುತ್ತಿತ್ತು. ದೇಶ ಸಮರ್ಥ ನಾಯಕನ ಹುಡುಕಾಟದಲ್ಲಿತ್ತು. UPA1 ಮತ್ತು UPA2 ಸರ್ಕಾರಗಳ ವೈಫಲ್ಯ ಮತ್ತು ಹಗರಣಗಳನ್ನು ಜನರಿಗೆ ತೋರಿಸಿಕೊಡಬೇಕಾಗಿತ್ತು. ಬಿಜೆಪಿಯ ಒಂದು ತಲೆಮಾರಿನ ನಾಯಕರೆಲ್ಲಾ ನೇಪಥ್ಯಕ್ಕೆ ಸರಿಯುವ ಸಮಯ ಬಂದಿತ್ತು. ಆ ನಿರ್ವಾತವನ್ನು ತುಂಬಿಕೊಟ್ಟು ದೇಶವನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋಗಲು ಒಬ್ಬ ನಾಯಕನ ಅವಶ್ಯಕತೆ ಇತ್ತು. ಅಂಥ ನಾಯಕನನ್ನು ಆ ಸ್ಥಾನಕ್ಕೆ ಪ್ರತಿಷ್ಟಾಪಿಸುವುದಷ್ಟೆ “ನಮೋಬ್ರಿಗೇಡ್” ನ ಉದ್ದೇಶವಾಗಿತ್ತು. ಚಕ್ರವರ್ತಿಯವರು ರಾಜಕೀಯಕ್ಕಿಳಿಯುವ ಆಕಾಂಕ್ಷೆಯಿಂದ ಈ ರೀತಿಯ ಅಭಿಯಾನದಲ್ಲಿದ್ದಾರೆ. ಇಂಥ ಪಡೆಯ ಮುಂದಾಳತ್ವ ವಹಿಸಿದ್ದಾರೆ ಎಂದು ಹೇಳುವವರಿದ್ದಾರೆ. ಅದಕ್ಕೆ “ನಮೋಬ್ರಿಗೇಡ್” ಉದ್ದೇಶವೇನು ಎಂಬುದರ ಸ್ಪಷ್ಟೀಕರಣ ಕೊಡಬೇಕಾಗಿ ಬಂತು. ಹುಟ್ಟಿದ ಮೇಲೆ ತನ್ನೆಲ್ಲಾ ಕೆಲಸ ಜವಾಬ್ದಾರಿಗಳನ್ನು ಮುಗಿಸಿದ ಮೇಲು ಬದುಕಿದ್ದರೆ ಭವಬಂಧನಗಳಿಗೆ ಸಿಲುಕಬೇಕಾಗುವ ಅನಿವಾರ್ಯತೆ ಅರಿತು ಅಗ್ನಿಯಲ್ಲಿ ಬೆಂದುಹೋದ ಕುಮಾರಿಲ ಭಟ್ಟರಂತೆ;

ಚುನಾವಣೆಯ ಸಂದರ್ಭಕ್ಕೆ ರೂಪಗೊಂಡ ಒಂದು ಸಂಘಟನೆ ಕೆಲಸ ಮುಗಿದ ಮೇಲೆ ಮೊಟಕುಗೊಂಡಿದ್ದರಲ್ಲೇ ಅದರ ಉದ್ದೇಶ ಸ್ಪಷ್ಟವಾಗುತ್ತೆ. ಚುನಾವಣೆಯ ನಂತರವೂ ಆ ಸಂಘಟನೆ ಮುಂದುವರೆದಿದ್ದರೆ ಅದು ಹೋಗುವ ದಿಕ್ಕೇ ಬೇರೆಯಾಗಿರುತ್ತಿತ್ತು. ಇದು ಚಕ್ರವರ್ತಿಯವರ ದೂರದೃಷ್ಟಿಗೆ ಸಾಕ್ಷಿ.

ಆದರೂ ಚಕ್ರವರ್ತಿಯವರು ರಾಜಕೀಯ ಆಕಾಂಕ್ಷಿ ಎಂಬ ಸುಳ್ಳು ವದಂತಿಗಳು ಆಗಾಗ ಕೇಳಿ ಬರುತ್ತವೆ.ಇತ್ತೀಚೆಗೆ ಖಾಸಗಿ ವಾಹಿನಿಯೊಂದು ಸಂತೋಷ್’ಜೀಯವರು ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಹೇಳಿದ್ದರು. ಅದನ್ನು ಚಕ್ರವರ್ತಿಯವರು ಒಳ್ಳೆಯ ಆಯ್ಕೆ ಎಂದಿದ್ದರಷ್ಟೆ. ಆದರೆ ಸಂತೋಷ್ ಅವರೇ ಆಗಲಿ ಎಂದು ಹೇಳಿರಲಿಲ್ಲ. ಇದನ್ನೇ ಇಟ್ಟುಕೊಂಡು ಚಕ್ರವರ್ತಿಯವರಿಗೆ ರಾಜಕಾರಣಕ್ಕೆ ಬರುವ ಆಸಕ್ತಿಯಿದೆ ಎಂಬ ಗಾಳಿಸುದ್ದಿಯನ್ನು ಕೆಲವರು ತೇಲಿಬಿಟ್ಟರು. ಅದನ್ನೇ ದೊಡ್ಡದು ಮಾಡಿ ಅವರ ಪ್ರತಿಕೃತಿ ದಹಿಸುವವರೆಗೆ ಪ್ರತಿಭಟನೆಗಳು ನಡೆದವು. ಅವರಿಗೆ ರಾಜಕಾರಣಕ್ಕೆ ಬರಲು “ನಮೋಬ್ರಿಗೇಡ್” ಕಾರ್ಯ ಚಟುವಟಿಕೆಯಲ್ಲಿದ್ದ ಕಾಲ ಸೂಕ್ತವಾಗಿತ್ತು ಅವಾಗಲೇ ರಾಜಕಾರಣ ನನಗೆ ಸೂಕ್ತವಲ್ಲದ ಕ್ಷೇತ್ರವೆಂದು ದೂರಸರಿದವರು ಈಗ ಬರಲು ಸಾಧ್ಯವೇ? “ನನ್ನ ಕನಸಿನ ಕರ್ನಾಟಕ” ಎಂಬ ಕಾರ್ಯಕ್ರಮ ರೂಪರೇಷೆ ತಯಾರಾಗುತ್ತಿದ್ದಂತೆ ಮತ್ತೊಮ್ಮೆ ರಾಜಕಾರಣಕ್ಕೆ ಬರುತ್ತಾರೆ ಎಂಬ ಮಾತು ಶುರುವಾಯಿತು. ಒಬ್ಬ ಸಾಮಾಜಿಕ ಕಾರ್ಯಕರ್ತನಿಗೆ ಇದೆಲ್ಲ ಸಾಮಾನ್ಯ. ಇದನ್ನೆಲ್ಲ ಮೆಟ್ಟಿ ನಿಂತು ತನ್ನ ಕೆಲಸದೆಡೆಗೆ ಮುನ್ನಡೆಯುವುದಿದೆಯಲ್ಲಾ ಅದು ಅಪರೂಪದ ಅಂತಃಶಕ್ತಿಯ ಪ್ರತಿಫಲವೇ ಸರಿ.

ಇತ್ತೀಚಿನ ಸೋಷಿಯಲ್ ಮೀಡಿಯಾ ಭರಾಟೆಯಲ್ಲಿ ಎಲ್ಲದಕ್ಕೂ ತಂದೊಂದಿರಲಿ ಎಂದು ಅಭಿಪ್ರಾಯ ಮಂಡಿಸುವುದು ಸಾಮಾನ್ಯ. ಅದರಿಂದಾಗುವ ಇಂಪ್ಯಾಕ್ಟ್ ಏನೇ ಇರಲಿ ಕೆಲವು ಲೈಕುಗಳು ಸಿಕ್ಕರೆ ಸಾಕು. ಉಡುಪಿಯಲ್ಲಿ ನಡೆದ ಇಫ್ತಾರ್ ಕೂಟವನ್ನು ಚಕ್ರವರ್ತಿಯವರು ಬೆಂಬಲಿಸಿದ್ದರು. ನಂತರದ ಕಾಲಘಟ್ಟದಲ್ಲಿ ಶರತ್ ಕೊಲೆಯಾದಾಗ “ಯಾಕೆ ಚಕ್ರವರ್ತಿ ಈಗ ಮಾತಾಡುತ್ತಿಲ್ಲ?” ಎಂದು ಕೇಳುವ ಸ್ಟೇಟಸ್ ಶೂರರು ಕಾಣಿಸಿಕೊಂಡರು. Burning Karnataka ಎಂಬ ಹ್ಯಾಶ್ ಟ್ಯಾಗ್ ಮೂಲಕ ದಶದಿಶೆಗಳಿಗೆ ಕರ್ನಾಟಕದ ಪರಿಸ್ಥಿತಿಯನ್ನು ತೋರಿಸಿಕೊಟ್ಟಿದ್ದು ಇದೇ ಚಕ್ರವರ್ತಿ. ಸ್ಟೇಟಸ್ ಹಾಕಿದವನ ಇಂಪ್ಯಾಕ್ಟಿಗೂ ಹ್ಯಾಶ್’ಟ್ಯಾಗ್ ಮಾಡಿದ ಇಂಪ್ಯಾಕ್ಟ್’ಗೂ ವ್ಯತ್ಯಾಸ ಬಿಡಿಸಿ ಹೇಳಬೇಕಿಲ್ಲ.  ಚಕ್ರವರ್ತಿಯವರೇ ಹೇಳಿದಂತೆ “ಯಾರು ಕಾದು ನೋಡಬಲ್ಲನೋ ಅವನು ಬದುಕಬಲ್ಲ”. ಅದಕ್ಕೆ ಪ್ರತಿ ಘಟನಾವಳಿಗಳ ನಂತರ ಕಾದು ನೋಡುತ್ತಾರೆ ಕೊನೆಗೊಮ್ಮೆ ಅವರು ಸೂಕ್ತ ಪ್ರತಿಕ್ರಿಯೆ ಕೊಟ್ಟರೆ ಅದಕ್ಕೆ ಗೆಲುವು ಖಚಿತ.

ಇನ್ನೂ ಒಂದು ಆರೋಪವಿದೆ ಚಕ್ರವರ್ತಿ ಬರೀ ಮಾತಿಗೆ ಸೀಮಿತವೇ. ಯಾರು ಬೇಕಾದರೂ ಮಾತಾಡಬಲ್ಲರು . ಅವರಿಂದಾದ ಸಾಮಾಜಿಕ ಕಾರ್ಯಗಳೇನು? ಈ ಎಲ್ಲಕ್ಕೂ ಉತ್ತರಿಸುವುದಕ್ಕೆ ಇನ್ನೂ ಒಂದು ಸುದೀರ್ಘ ಲೇಖನದ ಅವಶ್ಯಕತೆ ಇದೆ. ಅದನ್ನು‌ ಮುಂದಿನ ಭಾಗದಲ್ಲಿ ನೋಡೋಣ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!