ಅಂಕಣ

 ಮಾಡಿದ್ದು ಚೋರಿ ಆದರೂ ಸಂಶೋಧಕರ ಪಾಲಿನ ಬೆಳಕು ಈ ಕುವರಿ

Alexandra Elbakyan…

೨೮ ನೇ ವಯಸ್ಸು, ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನೌಕರಿಪಡೆದು, ಸಾಂಸಾರಿಕಲೋಕಕ್ಕೆ ಕಾಲಿಡುವ ಪರ್ವ. ಆದರೆ ಕೆಲವರು ಮಾತ್ರ ಇದೆಲ್ಲವನ್ನು ಬಿಟ್ಟು ಅಸಾಮಾನ್ಯ ಸಾಧನೆಗೆ ಕೈಹಾಕಿ, ಸಾಧಕರಾಗಿ ಹೊರಹೊಮ್ಮುತ್ತಾರೆ. ಈಗ ನಾನು ಹೇಳ ಹೊರಟಿರುವ ಹುಡುಗಿ ತನ್ನ ೨೮ನೇ ವಯಸ್ಸಿನಲ್ಲಿ, ತನ್ನ ಮೇಧಾವಿತನವನ್ನು ಉಪಯೋಗಿಸಿ ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳ ಪಾಲಿಗೆ ದೇವತೆ ಆದರೂ, ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಪ್ರಪಂಚದ ಅತಿದ್ಯೆತ್ಯ ವೈಜ್ಞಾನಿಕ ಪ್ರಕಾಶನ ಸಂಸ್ಥೆಗಳಾದ Elseiver, Springer ಮತ್ತು Nature Publication houseಗಳು ಅವಳನ್ನು ಬಂಧಿಸಲು ಮತ್ತು ತಮಗಾದ ನಷ್ಟ ಭರಿಸಲು ನ್ಯಾಯಾಲಯದ ಮೆಟ್ಟಲು ಏರಿದ ಮೇಲೆ, ನ್ಯಾಯಾಲಯ ಅವಳನ್ನು ಅಪರಾಧಿ ಎಂದು ತೀರ್ಮಾನಿಸಿ ನೂರಾರು ಕೋಟಿ ದಂಡ ವಿಧಿಸಿದೆ. ಅಷ್ಟಕ್ಕೂ ಅವಳು ಮಾಡಿದ್ದಾದರು ಏನು? ಇಲ್ಲಿದೆ ಅವಳ ಕಥೆ.

ಅಲೆಕ್ಸಾಂಡ್ರಾ ಏಲ್ಬಕ್ಯಾನ್ ಕಜಕೀಸ್ತಾನದ ಪದವೀಧರ ವಿದ್ಯಾರ್ಥಿನಿ. ಮೂಲತಃ ಕಂಪ್ಯೂಟರ್ ಪ್ರೋಗ್ರಾಮರ್. ನರವಿಜ್ಞಾನದ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ ನರವ್ಯವಸ್ಥೆಯನ್ನು ಹೇಗೆ ಕಂಪ್ಯೂಟರ್’ನಲ್ಲಿ ಅಳವಡಿಸಬಹುದು ಎಂಬ ವಿಷಯದಲ್ಲಿ ಸಂಶೋಧನೆ ಮಾಡಿದ ಮೇಧಾವಿ. ಕಂಪ್ಯೂಟರ್ ಹ್ಯಾಕ್ ಮಾಡುವುದರಲ್ಲಿ ನಿಪುಣತೆ ಹೊಂದಿದ ಇವಳು, ಅಮೇರಿಕಾದಲ್ಲಿ intern  ಆಗಿ ಪಡೆದ ಅನುಭವ ಬಳಕೆ ಮಾಡಿಕೊಂಡು, ತನ್ನ ವಿಶ್ವವಿದ್ಯಾಲಯದಲ್ಲಿ ಕುಳಿತು ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕೆಗಳನ್ನು ಹ್ಯಾಕ್ ಮಾಡಿ ಕೋಟಿಗಟ್ಟಲೆ ಹಣವನ್ನು ಪ್ರಕಾಶನ ಸಂಸ್ಥೆಗಳಿಗೆ ಕನ್ನಹಾಕಿದ್ದಾಳೆ. ಪ್ರತಿಯೊಂದು ಸಂಶೋಧನೆಯು ಜಗತ್ತಿನ ಓದುಗರಿಗೆ ತಲುಪಬೇಕಾದರೆ ಅದು ಪರಿಣಿತ ಸಂಶೋಧಕರಿಂದ ದೃಢೀಕರಿಸಿ, ಸಂಬಂಧಪಟ್ಟ ವಿಜ್ಞಾನದ ನಿಯತಕಾಲಿಕೆಯಲ್ಲಿ ಸ್ವೀಕೃತಗೊಳ್ಳುತ್ತದೆ ಮತ್ತು ನಂತರ ಪ್ರಕಟಗೊಳ್ಳುತ್ತದೆ. ಇಂಟರ್ನೆಟ್ ಬರುವುದಕ್ಕಿಂತ ಮುಂಚೆ ಇಂತಹ ಲೇಖನಗಳನ್ನು ಓದಬಯಸುವವರು ಆಯಾ ನಿಯತಕಾಲಿಕೆಗಳಿಗೆ ಚಂದಾದಾರರಾಗಬೇಕಿತ್ತು. ನಮ್ಮ ಕಸ್ತೂರಿ, ಕರ್ಮವೀರ, ಸುಧಾ ಇವೆಯಲ್ಲಾ, ಹಾಗೆ! ಆದರೆ, ಯಾವಾಗ ಇಂಟರ್ನೆಟ್ ಯುಗ ಆರಂಭವಾಯಿತೋ ಆಗ ಎಲ್ಲಾ ಲೇಖನಗಳು ಸುಲಭವಾಗಿ ಓನ್ಲೈನ್ ಇ-ಪೇಪರ್ ರೂಪದಲ್ಲಿ ಓದುಗರ ಕೈಸೇರುವಂತಯಾಯಿತು. ಹಾಗಿದ್ದೂ, ಕೆಲವು ಲೇಖನಗಳಿಗೆ ಹಣವನ್ನು ಭರಿಸಬೇಕಿತ್ತು. ಈಗ ಸದ್ಯಕ್ಕೆ ಸ್ವಿಕೃತವಾಗುವ ಸಂಶೋಧನಾ ಲೇಖನಗಳೆಲ್ಲವೂ ಓನ್ಲೈನ್ ಅಲ್ಲೇ ಸಿಗುತ್ತವೆ. ಆದರೆ, ಸಮಸ್ಯೆ ಏನೆಂದರೆ ಇ-ಎಡಿಷನ್ ಬಳಕೆಗೆ ಪ್ರಕಾಶನ ಸಂಸ್ಥೆಗಗಳು ಒಂದು ಲೇಖನಕ್ಕೆ ೪೦-೬೦ ಡಾಲರ್ ಬೆಲೆ ಇಟ್ಟಿವೆ. ಅಂದರೆ, ೬ ಪುಟದ ಲೇಖನಕ್ಕೆ ಕನಿಷ್ಟ ೨೫೦೦ ರಿಂದ ೩೦೦೦ ರೂಪಾಯಿ ತೆರಬೇಕು. ಅತಿ ಉತ್ಕೃಷ್ಟ ಸಂಶೋಧನಾ ಲೇಖನಗಳಿಗೆ ಅದಕ್ಕಿಂತಲೂ ಹೆಚ್ಚು ಬೆಲೆ ನಿಗದಿಪಡಿಸಿರುತ್ತಾರೆ, ಹೀಗೆ ೨೦ -೩೦ ಲೇಖನಗಳನ್ನು ಒಳಗೂಂಡ ಒಂದು ಪೂರ್ಣ ಸಂಚಿಕೆಯ ಬೆಲೆ ಒಂದು ಲಕ್ಷ ದಾಟುತ್ತದೆ. ಇದು ಒಂದು ವಿಷಯಕ್ಕೆ ಸಂಬಂಧಿಸಿದ ಒಂದು ತಿಂಗಳಿನ ನಿಯತಕಾಲಿಕೆಯ ಬೆಲೆ. ಒಂದು ವಿಶ್ವವಿದ್ಯಾಲಯ ಎಂದರೆ ಅಲ್ಲಿ ಇಂತಹ ೫೦ಕ್ಕೂ ಹೆಚ್ಚು ವಿಷಯಗಳಲ್ಲಿ ಸಂಶೋಧನೆ ನಡೆಯುವುದರಿಂದ ಓನ್ಲೈನ್ ಲೈಸನ್ಸ್ಅಥವಾ ಮುದ್ರಿತ ಪ್ರತಿಗಳನ್ನು ತರಿಸಲು ೧೦೦ ಕೋಟಿಗಿಂತಲೂ ಹೆಚ್ಚು ಬೆಲೆ ತೆರಬೇಕು.

ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಇದು ಕೇವಲ ಐ.ಐ.ಟಿ., ಐ.ಐ.ಎಸ್ಸಿ., ಐ.ಸಿ.ಎಸ್.ಆರ್. ಅಂತಹ ಸಂಶೋಧನಾ ಸಂಸ್ಥೆಗಳಿಗೆ ಮಾತ್ರ ಸಾಧ್ಯವೇ ವಿನಃ ಇತರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಈ ತರಹ ವೆಚ್ಚ ಮಾಡುವುದು ಬಹಳ ವಿರಳ. ಇಂತಹ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಂಶೋಧಕರ ಪಾಡು ಹೇಳತೀರದು. ತಮಗೆ ಬೇಕಾದ ಸಂಶೋಧನಾ ಲೇಖನಗಳನ್ನು ಪಡೆಯಲು ಅವರು ಹರಸಾಹಸ ಪಡಬೇಕು. ಇಂತಹ ಸಮಸ್ಯೆಗಳಿಂದ ಬಳಲಿದ ಸಂಶೋಧಕರಲ್ಲಿ ಅಲೆಕ್ಸಾಂಡ್ರಾ ಕೂಡ ಒಬ್ಬಳು. ಆದರೆ ಅವಳು ಎಲ್ಲರ ಹಾಗೆ ಸುಮ್ಮನೆ ಕೂರಲಿಲ್ಲ. ತನ್ನಲ್ಲಿದ್ದ ಹ್ಯಾಕಿಂಗ್ ನೈಪುಣ್ಯತೆಯನ್ನು ಬಳಸಿ ಎಲ್ಲ ಪ್ರಕಾಶನ ಸಂಸ್ಥೆಯ ಗೋಡೆಯ ಮೇಲಿನ ಲೇಖನಗಳನ್ನು ಡೌನ್ಲೋಡ್ ಮಾಡಲು ಒಂದು ವೆಬ್ಸೈಟನ್ನು ರೂಪಿಸಿದಳು. ಅದರ ಹೆಸರು Sci-Hub: To remove all barriers in the way of science. ಈ ವೆಬ್ಸೈಟ ಗೂಗಲ್ ಸರ್ಚ್ ಎಂಜಿನ್ ತರಹ ಕೆಲಸಮಾಡುತ್ತದೆ. ನಿಮಗೆ ಬೇಕಾದ ಲೇಖನದ ಲಿಂಕನ್ನು ನಕಲು ಮಾಡಿ ಈ ವೆಬ್ಸೈಟನಲ್ಲಿ ಮುದ್ರಿಸಿದರೆ ಆಯಿತು ೨೫೦೦ ರೂಪಾಯಿ ಬೆಲೆ ಬಾಳುವ ಒಂದು ಸಂಶೋಧನಾ ಲೇಖನ ನಿಮ್ಮ ಡೌನ್ಲೋಡ್ ಪಟ್ಟಿಯಲ್ಲಿ ಬಂದು ಕುಳಿತಿರುತ್ತದೆ. ಅಲೆಕ್ಸಾಂಡ್ರಿಯಾ ತಯಾರಿಸಿದ ಈ ವೆಬ್ಸೈಟ ಪ್ರಕಾಶನ ಸಂಸ್ಥೆಯ ಮಾರಾಟಗೋಡೆಯನ್ನು ಒಡೆದು ಅದರಲ್ಲಿನ ಲೇಖನಗಳನ್ನು ನಿಮಗೆ ಕೊಡುವ ಕೆಲಸ ಮಾಡುತ್ತದೆ. ಇದು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಏನಿಲ್ಲವೆಂದರೂ ೫ ಕೋಟಿಯಷ್ಟು ಸಂಶೋಧನಾ ಲೇಖನಗಳನ್ನು ಮಾರಾಟಗೋಡೆಯಿಂದ ಕದ್ದುತೆಗೆಯಲಾಗಿದೆ. ಇದರಿಂದ ಪ್ರಕಾಶನ ಸಂಸ್ಥೆಗಳಿಗೆ ಸಾವಿರ ಕೋಟಿಗಳಷ್ಟು ನಷ್ಟ ಉಂಟುಮಾಡಿದ್ದಾಳೆ ಈ ಹುಡುಗಿ. ಪ್ರಕಾಶನ ಸಂಸ್ಥೆಗಳು ಈ ವೆಬ್ಸೈಟನ್ನು ಬಂದು ಮಾಡಲು ತಾಕೀತುಮಾಡಿದವು. ಅದಕ್ಕೆ ಕ್ಯಾರೆ ಅನ್ನದಿದ್ದಾಗ ನ್ಯಾಯಾಲಯದ ಮೆಟ್ಟಿಲೇರಿದವು. ನ್ಯಾಯಾಲಯ ಮೊದಲ ತೀರ್ಪಿನನಲ್ಲಿ ವೆಬ್ಸೈಟನ್ನು ಬಂದು ಮಾಡಲು ಸೂಚಿಸಿತು. ಆದರೆ ಈ ಹುಡುಗಿ ಅದಕ್ಕೆ ಸೊಪ್ಪ್ಪುಹಾಕದಿದ್ದಾಗ, ethical hacker ಬಳಸಿ ಅದನ್ನು block ಮಾಡಿಸಿತು. ಪ್ರತಿಸಲ ವೆಬ್ಸೈಟ ಬಂದು ಮಾಡಿದಾಗಲೂ ಅಲೆಕ್ಸಾಂಡ್ರಾ ಬೇರೆ extension ನೊಂದಿಗೆ ಬೇರೆ ವೆಬ್ಸೈಟನ್ನು ತಯಾರಿಸತೊಡಗಿದಳು. ಇವಳ ಈ ಮೊಂಡುತನವನ್ನು ಅರಿತ ಪ್ರಕಾಶನ ಸಂಸ್ಥೆಗಳು ಇವಳ ವಿರುದ್ಧ ಲೇಖನಗಳನ್ನು ಗೀಚಿದವು. ವಿಶ್ವದ ವೈಜ್ನಾನಿಕ ಸಂಶೋಧನಾ ಲೇಖನಗಳ ಬಂಡಾರ Natue Publishing House ೨೦೧೬ನೇ ಸಾಲಿನ ೧೦ ಪ್ರಮುಖ ವ್ಯಕ್ತಿಗಳಲ್ಲಿ ಅಲೆಕ್ಸಾಂಡ್ರಾ ಏಲ್ಬಕ್ಯಾನಳನ್ನು ಹೆಸರಿಸಿತ್ತು. ಇವರಲ್ಲಿ, ಉಳಿದ ೯ ವ್ಯಕ್ತಿಗಳು ಅತ್ಯುನ್ನತ ಸಂಶೋಧನೆಗೆ ಗುರುತಿಸಲ್ಪಟ್ಟರೆ ಇವಳೊಬ್ಬಳೇ ಋಣಾತ್ಮಕ ವ್ಯಕ್ತಿತ್ವವಾಗಿ ಗುರುತಿಸಿಕೊಂಡವಳು. ಈಗ ಅಲೆಕ್ಸಾಂಡ್ರಾಳಿಗೆ ಅಮೇರಿಕಾ ನ್ಯಾಯಾಲಯ ೧೦೦ ಕೋಟಿ ಡಾಲರ್ ದಂಡ ವಿಧಿಸಿದೆ. ಅಲ್ಲದೇ, ಕಜಕಿಸ್ತಾನದಿಂದ ಈಕೆಯನ್ನು ಗಡೀಪಾರು ಮಾಡಲು ಸೂಚಿಸಿದೆ. ಈಗ ಇವಳು ಅಜ್ಞಾತ ವಾಸದಲ್ಲಿ ಬದುಕುತ್ತಿದ್ದಾಳೆ.

ಸಣ್ಣ ಮಟ್ಟದಲ್ಲಿ ಸಂಶೋಧನೆ ಮಾಡುವವರಿಗೆ ಇವಳು ದೇವತೆಯಾಗಿ ಕಂಡರೂ, ನ್ಯಾಯದ ಪರಿಧಿಯಲ್ಲಿ ಇವಳು ಅಪರಾಧಿ. Sci-Hub ವೆಬ್ಸೈಟನ್ನು ಮಾತ್ರ ಎಂದೂ ಬಂದು ಮಾಡಲಾಗದ ರೀತಿಯಲ್ಲಿ ವಿನ್ಯಾಸಗೊಳಿಸಿ ಮರೆಗೆ ಸರಿದಿದ್ದಾಳೆ. ಅವಳು ಮನಸ್ಸು ಮಾಡಿದ್ದಿದ್ದರೆ, ತನ್ನ ಹ್ಯಾಕಿಂಗ್ ನೈಪುಣ್ಯತೆಯಿಂದ ೧೦೦ ಕೋಟಿ ಡಾಲರನ್ನು ಕ್ಜಣಮಾತ್ರದಲ್ಲಿ ಪಾವತಿಸಬಹುದಿತ್ತು. Amazon, Alibaba, Flipkart ಅಂತಹ payed wall ವೆಬ್ಸೈಟಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣ ಗಳಿಸಬಹುದಿತ್ತು. ಆದರೆ, ಅವಳು ಮಾಡಿದ್ದು ವಿಜ್ಞಾನದ ಜ್ಞಾನವನ್ನು ಉಚಿತವಾಗಿ ಹಂಚುವ ಪ್ರಯತ್ನ. ಯುರೋಪಿನ ಕೆಲ ಸಂಶೋಧನಾ ಸಂಸ್ಥೆಗಳು ಇವಳ ಬೆಂಬಲಕ್ಕೆ ನಿಂತಿವೆ. ಪ್ರಕಾಶನ ಸಂಸ್ಥೆಗಳು ನಿದ್ದೆಗೆಡಿಸಿಕೊಂಡಿವೆ. ಅವು ತಮ್ಮ ನಿಯತಕಾಲಿಕೆಗಳ ಬೆಲೆಯನ್ನು ತಗ್ಗಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಏನೇ ಆಗಲಿ ಇವಳ ಬದುಕು, ಉಚಿತ ಜ್ಞಾನ ಎಂಬ ಚಳುವಳಿಗೆ ನಾಂದಿ ಹಾಡಿ ತನ್ನ ೨೦ನೇ ವಯಸ್ಸಿನಲ್ಲಿ ಕಠಿಣ ಕಾನೂನು ಕ್ರಮಗಳ ಶಿಕ್ಷೆಯನ್ನು ಎದುರಿಸಲಾರದೇ ಆತ್ಮಹತ್ಯೆ ಮಾಡಿಕೊಂಡ Aaron Swartz ರಂತೆ ದಾರುಣ ಅಂತ್ಯವಾಗದಿದ್ದರೆ ಸಾಕು.

Ravi Kashikar

Ph.D Student ,  IIT-Madars  

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!