ಅಂಕಣ

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 2

ಇಸ್ಲಾಮಿನ ಕುರಿತಾಗಿ ಅಂಬೇಡ್ಕರ್ – ಒಂದು ಹೇಳಬಾರದ ಕಥೆ – 1

ಮುಸ್ಲಿಂ ರಾಜಕೀಯದ ಕುರಿತಂತೂ ಅಂಬೇಡ್ಕರ್ ಇನ್ನೂ ಕಠಿಣ ಇನ್ನೂ ತೀಕ್ಷ್ಣರಾಗುತ್ತಾರೆ,

ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲದೆ ಭಾರತದ ಮುಸ್ಲಿಂ ಸಮುದಾಯದ ರಾಜಕೀಯ ಜೀವನದಲ್ಲಿಯೂ ನಿಶ್ಚಲತೆ ಇದೆ. ಮುಸ್ಲಿಮರು ರಾಜಕೀಯದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ. ಅವರ ಪ್ರಮುಖ ಆಸಕ್ತಿಯೇ ಮತ(ಪಂಥ). ಇದನ್ನು ಮುಸ್ಲಿಂ ಕ್ಷೇತ್ರವೊಂದು ಅಧಿಕಾರಕ್ಕಾಗಿ ಹೋರಾಡುವ ಅಭ್ಯರ್ಥಿಗೆ ತನ್ನ ಬೆಂಬಲ ಗಳಿಸಲು ವಿಧಿಸುವ ನಿಯಮ ಮತ್ತು ಷರತ್ತುಗಳಿಂದಲೇ ಸುಲಭವಾಗಿ ಕಾಣಬಹುದು. ಮುಸ್ಲಿಂ ಮತಕ್ಷೇತ್ರವು ಅಭ್ಯರ್ಥಿಯ ಕಾರ್ಯಪ್ರಣಾಲಿಯನ್ನು ಪರೀಕ್ಷಿಸಲು ಯಾವುದೇ ಕಾಳಜಿ ತೋರುವುದಿಲ್ಲ. ಮುಸ್ಲಿಂ  ಮತಕ್ಷೇತ್ರಕ್ಕೆ ಅಭ್ಯರ್ಥಿಯಿಂದಿರುವ ಅಪೇಕ್ಷೆಯೆಂದರೆ, ಮಸೀದಿಯ ಹಳೆಯ ದೀಪಗಳನ್ನು ಹೊಸ ದೀಪಗಳಿಂದ ಬದಲಿಸಲು ತನ್ನ ವೆಚ್ಚದಲ್ಲಿ ಸರಬರಾಜು ಮಾಡಲು ಒಪ್ಪಿಕೊಳ್ಳುವುದು, ಮಸೀದಿಯ ಹಳೆಯ ಜಮಖಾನೆಗಳು ಹರಿದು ಹೋಗಿರುವುದರಿಂದ ಹೊಸ ಜಮಖಾನೆಗಳನ್ನು ಒದಗಿಸುವುದು, ಅಥವಾ ಶಿಥಿಲಗೊಂಡ ಮಸ್ಜಿದನ್ನು ರಿಪೇರಿ ಮಾಡಿಸುವುದು. ಕೆಲವು ಸ್ಥಳಗಳಲ್ಲಿ ಮುಸ್ಲಿಂ ಮತಕ್ಷೇತ್ರವು ಅಭ್ಯರ್ಥಿಯಿಂದ ರುಚಿಕರವಾದ ಔತಣಕ್ಕೆ ತಮಗೆ ಸಿಕ್ಕ ಒಪ್ಪಿಗೆಯಲ್ಲೇ ತೃಪ್ತಿ ಹೊಂದುತ್ತದೆ. ಮತ್ತೊಂದರಲ್ಲಿ ಮತಗಳನ್ನು ಖರೀದಿಸಲು ಒಪ್ಪಿಕೊಳ್ಳುವುದರಲ್ಲಿ ತೃಪ್ತಿ ತೋರುತ್ತದೆ. ಮುಸ್ಲಿಮರೊಂದಿಗೆ, ಚುನಾವಣೆ ಎಂಬುದು ಕೇವಲ ಹಣದ ವಿಷಯವಾಗಿದೆ ಮತ್ತು ಅತ್ಯಂತ ವಿರಳವಾಗಿಯೇ ಅದು ಸಾಮಾನ್ಯ ಬೆಳವಣಿಗೆಯ ಸಾಮಾಜಿಕ ಕಾರ್ಯಕ್ರಮದ ವಿಷಯವಾಗಿರುತ್ತದೆ. ಮುಸ್ಲಿಂ ರಾಜಕೀಯವು ಜೀವನದ ಅಪ್ಪಟ ಜಾತ್ಯತೀತ ವರ್ಗೀಕರಣಗಳನ್ನು ಪರಿಗಣಿಸುವುದೇ ಇಲ್ಲ. ಕೆಲವನ್ನು ಹೆಸರಿಸುವುದಾದಲ್ಲಿ ಶ್ರೀಮಂತರು ಮತ್ತು ಬಡವರು, ಬಂಡವಾಳಶಾಹಿ ಮತ್ತು ಕಾರ್ಮಿಕ, ಭೂಮಾಲಿಕ ಮತ್ತು ಹಿಡುವಳಿದಾರ, ಪುರೋಹಿತ ಮತ್ತು ಸಾಮಾನ್ಯ , ಕಾರಣ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸಗಳು. ಮುಸ್ಲಿಂ ರಾಜಕೀಯವು ಮೂಲಭೂತವಾಗಿ ಧರ್ಮೋಪದೇಶವನ್ನೇ ನಂಬಿದೆ ಮತ್ತದು ಕೇವಲ ಹಿಂದೂ ಮತ್ತು ಮುಸ್ಲಿಮರ ನಡುವೆ ಅಸ್ತಿತ್ವದಲ್ಲಿರುವ ವ್ಯತ್ಯಾಸವನ್ನು ಗುರುತಿಸುತ್ತದೆ. ಜೀವನದ ಯಾವುದೇ ಜಾತ್ಯತೀತ ವರ್ಗೀಕರಣಗಳೂ ಮುಸ್ಲಿಂ ಸಮುದಾಯದ ರಾಜಕೀಯದಲ್ಲಿ ಯಾವುದೇ ಅವಕಾಶವನ್ನು ಹೊಂದಿಲ್ಲ. ಒಂದು ವೇಳೆ ಅವುಗಳು ಸ್ಥಾನ ಕಂಡುಕೊಂಡರೂ ಅವುಗಳು ಅದಮ್ಯವಾಗಿರುವ ಕಾರಣಕ್ಕೆ ತಮ್ಮದೇ ಸ್ಥಾನ ಕಂಡುಕೊಳ್ಳಲೇಬೇಕಾದರೂ ಅವು ಮುಸ್ಲಿಂ ರಾಜಕೀಯ ವಿಶ್ವದಲ್ಲಿನ ಏಕೈಕ ಆಕಾರಿಕ ತತ್ವವಾದ ‘ಮತ’ ಕ್ಕೇ ಅಧೀನವಾಗಿರುತ್ತವೆ.

ಅಂಬೇಡ್ಕರ್‌ರ ಭಾರತೀಯ ಮುಸ್ಲಿಮರ ಕುರಿತಾದ ಮನೋ ವಿಶ್ಲೇಷಣೆಯು ಅವರನ್ನು ಗುತ್ತಿಗೆ ಹಿಡಿದಿರುವ ಎಡಪಂಥೀಯರಿಗೆ ನಿಸ್ಸಂದೇಹವಾಗಿಯೂ ನೋವನ್ನುಂಟುಮಾಡುತ್ತದೆ. ಅಂತಹ ವಿಷಯಗಳನ್ನು ಅಂಬೇಡ್ಕರ್ ಎಂದಿಗೂ ಬರೆಯಬಾರದಿತ್ತೆಂದೇ ಅವರು ಬಯಸುತ್ತಾರೆ. ಇಸ್ಲಾಂ ಮತ್ತು ಮುಸ್ಲಿಮರ ಮೇಲೆ ಅಂಬೇಡ್ಕರರ ಬರಹಗಳನ್ನು ಅಲ್ಲಗಳೆಯಲು ಅವರು ತಮ್ಮ ಸಾಮರ್ಥ್ಯಾನುಸಾರ ಪ್ರಯತ್ನಿಸುತ್ತಾ ಕಾಲಪರೀಕ್ಷಿತ ನೆಪವಾದ ಸನ್ನಿವೇಶಕ್ಕೆ ಶರಣು ಹೋಗುತ್ತಾರೆ. ಹೌದು! ಪುಸ್ತಕಗಳು ನಿಮ್ಮನ್ನು ತೊಂದರೆಗೆ ದೂಡಿದಾಗಲೆಲ್ಲ ,ಅದರ ಸನ್ನಿವೇಶವನ್ನು ಕೆದಕಿ.

ಅಂಬೇಡ್ಕರ್‌ರ ವಿಷಯದಲ್ಲಿ ಮಾತ್ರ ಈ ಹುಸಿವಾದಗಳೆಲ್ಲ ಬೋರಲಾಗಿ ಬೀಳುತ್ತವೆ. ಇಸ್ಲಾಂ ಬಗೆಗಿನ ಅಂಬೇಡ್ಕರ್‌ರ ಅಭಿಪ್ರಾಯಗಳು – ಹದಿನಾಲ್ಕು ಅಧ್ಯಾಯಗಳ ಪುಸ್ತಕವೊಂದರಲ್ಲಿ ದಾಖಲಿಸುವುದು ಸಂಪೂರ್ಣವಾಗಿ ಮುಸ್ಲಿಮರು, ಮುಸಲ್ಮಾನರ ಮಾನಸಿಕತೆ ಮತ್ತು ಮುಸ್ಲಿಂ ಪರಿಸ್ಥಿತಿಗಳನ್ನೇ. ಇದೆಲ್ಲವನ್ನೂ ಸಮರ್ಥಿಸಲು ವಿದ್ವಾಂಸರ, ಮುಸ್ಲಿಮ್ ಮುಖಂಡರ, ಶಿಕ್ಷಣ ತಜ್ಞರ ಬೋಧನೆ ಮತ್ತು ಹೇಳಿಕೆಗಳ ದೃಢವಾದ ಬೆಂಬಲ ಪಡೆಯಲಾಗಿದೆ. ಇವೆಲ್ಲವೂ ಅವರಿಗೆ ನಿಯಮಬದ್ಧ ಸೂತ್ರಗಳು. ಅವರಿಲ್ಲಿ ಕಾಲ್ಪನಿಕ ಕಾದಂಬರಿಯನ್ನು ಬರೆಯುತ್ತಿಲ್ಲ. ಸನ್ನಿವೇಶವೆಂಬುದಕ್ಕಿಲ್ಲಿ ಅವಕಾಶವೇ ಇಲ್ಲ. ವಾಸ್ತವವಾಗಿ ಅದು ಅಸ್ತಿತ್ವದಲ್ಲೇ ಇಲ್ಲ. ಈ ಕೆಳಗಿನ ಹೇಳಿಕೆಗಳನ್ನೇ ಓದಿ :

ಇಸ್ಲಾಂ ಪ್ರಣೀತ ಭ್ರಾತೃತ್ವವು ಮಾನವನ ವೈಶ್ವಿಕ ಭ್ರಾತೃತ್ವವಂತೂ ಅಲ್ಲವೇ ಅಲ್ಲ. ಅದು ಮುಸ್ಲಿಮರ, ಮುಸ್ಲಿಮರಿಗೋಸ್ಕರವಾಗಿರುವ ಸಹೋದರತ್ವ. ಅಲ್ಲಿ ಬಂಧುತ್ವವೇನೋ ಇದೆ. ಆದರೆ ಅದು ತಮ್ಮ ಸಂಸ್ಥೆಯವರಿಗೋಸ್ಕರವಷ್ಟೇ ಸೀಮಿತವಾದದ್ದು. ಈ ಸಂಸ್ಥೆಯ ಹೊರಗಿರುವವರಿಗೆ ಅಲ್ಲಿ ಸಿಗುವುದು ಬರಿಯ ಅಪಮಾನ ಮತ್ತು ದ್ವೇಷಗಳಷ್ಟೇ. ಇಸ್ಲಾಮಿನ ಎರಡನೆಯ ದೋಷವೆಂದರೆ, ಅದು ಸಾಮಾಜಿಕ ಸ್ವಯಂ-ಸರಕಾರದ ವ್ಯವಸ್ಥೆಯಾಗಿದ್ದು ಸ್ಥಳೀಯ ಸ್ವಯಂ-ಸರ್ಕಾರಕ್ಕೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ, ಮುಸ್ಲಿಮರ ನಿಷ್ಠೆಯು ತಾನು ವಾಸಿಸುವ ದೇಶದ ಮೇಲಲ್ಲದೆ, ತಾನು ಪಾಲಿಸುವ ನಂಬಿಕೆಯ ಮೇಲೆಯೇ ಆಧಾರಿತವಾಗಿದೆ.

ಇಸ್ಲಾಮಿನ ಆಡಳಿತವಿರುವಲ್ಲೇ ಆತನಿಗದು ಸ್ವಂತ ದೇಶ. ಮತ್ತೊಂದು ಶಬ್ದಗಳಲ್ಲಿ ಹೇಳುವುದಾದರೆ, ಒಬ್ಬ ನಿಜವಾದ ಮುಸ್ಲಿಮನಿಗೆ ಭಾರತವನ್ನು ತನ್ನ ತಾಯ್ನಾಡಾಗಿ ಮತ್ತು ಒಬ್ಬ ಹಿಂದುವನ್ನು ತನ್ನ ಬಂಧು-ಬಳಗವಾಗಿ ಸ್ವೀಕರಿಸಲು ಇಸ್ಲಾಂ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ.

ಈ ಮೇಲಿನ ಹೇಳಿಕೆಗಳಿಗೆ ತಳಕು ಹಾಕಲು ಒಂದು ಸಂದರ್ಭಕ್ಕಾಗಿ ತಡಕಾಡುತ್ತಿದ್ದರೆ, ನೀವೊಬ್ಬ ಹತಾಶ ಕ್ಷಮಾಯಾಚಕರಾಗಿ ನಿಮ್ಮನ್ನೇ ಹೊರಗೆಡಹಿದ್ದೀರಿ. ಸರಿ, ಹಾಗೆ ಮಾಡಿದವರು ನೀವೊಬ್ಬರೇ ಮಾತ್ರವಲ್ಲ. ಭಾರತದ ಕೆಲ ಖ್ಯಾತನಾಮ ವಿದ್ವಾಂಸರು, ಬರಹಗಾರರು, ವಿಮರ್ಶಕರು, ಮತ್ತು ಅಂಕಣಕಾರರು, ರಾಮಚಂದ್ರ ಗುಹಾ ಮತ್ತು ಅರುಂಧತಿ ರಾಯ್‌ರಂತಹ ಅಂಬೇಡ್ಕರರ ಮೇಲೆ ಸಾಕಷ್ಟು ಸ್ವತಂತ್ರ ಅಧ್ಯಾಯಗಳನ್ನೂ ಅಥವಾ ಪುಸ್ತಕಗಳನ್ನೇ (The Doctor and the Saint; India after Gandhi; Democrats and Dissenters; Makers of Modern India)ಬರೆದವರಿಬ್ಬರನ್ನೂ ಸೇರಿಸಿ ಇಸ್ಲಾಂ ಮತ್ತು ಮುಸ್ಲಿಂ ಮಾನಸಿಕತೆಯ ಬಗ್ಗೆ ಅಂಬೇಡ್ಕರ್ ಹೊಂದಿದ್ದ ದೃಷ್ಟಿಕೋನದ ಮೇಲೆ ಇವರ ಮೌನ ಸ್ಪಷ್ಟವಾಗಿ ಗೋಚರಿಸುತ್ತದೆ.

ನಿಶ್ಚಿತವಾಗಿಯೂ ಇಂಥದೊಂದು ಕಥೆಯನ್ನು ಕ್ಷಮಾಯಾಚಕರು ಹೇಳಬಯಸುವುದೇ ಇಲ್ಲ.

ಈ ಒಂದು ವಿಷಯದಲ್ಲಂತೂ ಅಂಬೇಡ್ಕರ್ ಕ್ಷಮಾಯಾಚಕರಾಗಿರಲೇ ಇಲ್ಲ. ಅವರು ಯಾರನ್ನೂ ಬಿಟ್ಟಿಲ್ಲ, ಮಹಾತ್ಮಾ ಗಾಂಧಿಯರನ್ನೂ . ಇಂದಿಗೆ ಸರ್ವತ್ರವೂ ಕಾಣುವ ಪಕ್ಷಪಾತಕ್ಕೆ ಅಂದೇ ಒಳಗಾಗಿದ್ದ ಮಹಾತ್ಮರನ್ನು ಇನ್ನಿಲ್ಲದಂತೆ ಝಾಡಿಸಿಬಿಡುತ್ತಾರೆ. ಹಿಂದೂಗಳ ವಿರುದ್ಧದ ಹೀನಾತಿಹೀನ ಅಪರಾಧಗಳಿಗೆ ತಪ್ಪಿತಸ್ಥರಾಗಿದ್ದರೂ ಅವರು ಗಾಂಧಿಯವರು ಮುಸ್ಲಿಮರನ್ನು ಎಂದಿಗೂ ತಪ್ಪೊಪ್ಪಿಕೊಳ್ಳಲು ಕರೆಕೊಡಲಿಲ್ಲ.

ಮುಂದುವರೆದು ಅಂಬೇಡ್ಕರ್ ಮುಸ್ಲಿಮರಿಂದ ಕೊಲ್ಲಲ್ಪಟ್ಟ ಕೆಲ ಹಿಂದೂ ನಾಯಕರನ್ನು ಪಟ್ಟಿ ಮಾಡುತ್ತಾರೆ, ಅವರಲ್ಲಿ ಒಬ್ಬರು ರಾಜ್ಪಾಲ್. ‘ರಂಗೀಲಾ ರಸೂಲ್’ ಎಂಬ ಪುಸ್ತಕದ ಪ್ರಕಾಶಕ. ‘ರಂಗೀಲಾ ರಸೂಲ್’ ಕುರಿತಾಗಿ ಹೇಳುವುದಾದರೆ ಅದು ಸ್ವಾತಂತ್ರ್ಯಪೂರ್ವದ ‘Satanic Verses’ ಆಗಿತ್ತು. ರಶ್ದಿಯವರಿಗೇನಾಯ್ತು ಎಂಬುದು ನಮಗೆ ತಿಳಿದೇ ಇದೆ. ಇನ್ನು ರಾಜ್ಪಾಲರದು ಮಾತ್ರ ರಶ್ದಿಯವರಿಗಿಂತಲೂ ಹೀನವಾದ ಪಾಡಾಯಿತು. ಅವರನ್ನು ಹಾಡಹಗಲೇ ಕೊಚ್ಚಿ ಕೊಲ್ಲಲಾಗಿತ್ತು. ಇಲ್ಮ್-ಉದ್-ದಿನ್’ನಿಂದ ರಾಜ್ಪಾಲರು ಹತರಾದುದನ್ನು ಅಂದಿನ ಎಲ್ಲ ಪ್ರಖ್ಯಾತ ಮುಸ್ಲಿಂ ನಾಯಕರುಗಳು ಕೊಂಡಾಡಿದ್ದರು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಇಲ್ಮ್-ಉದ್-ದಿನ್ ಪರವಹಿಸಿ ಅಂದು ನ್ಯಾಯಾಲಯದಲ್ಲಿ ವಾದ ಹೂಡಿದವರು ಸ್ವತಃ ಜಿನ್ನಾ. ಅವನ ಶವಸಂಸ್ಕಾರದಲ್ಲಿ (ಹತ್ತಾರು ಸಾವಿರ ಜನರು ಹಾಜರಿದ್ದ ಶೋಕಾಚರಣೆಯ ಸಂದರ್ಭದಲ್ಲಿ) ಪ್ರಶಂಸಾ ಭಾಷಣವೊಂದನ್ನು ಮಾಡಿದ ವ್ಯಕ್ತಿಯೇ ಪ್ರಸಿದ್ಧ ಕವಿ ಅಲ್ಲಾಮಾ ಇಕ್ಬಾಲ್. ಕೊಲೆಗಡುಕನ ಶವಪೆಟ್ಟಿಗೆಯನ್ನು ಗೋರಿಯೊಳಕ್ಕೆ ಇಳಿಸಲಾಗುತ್ತಿದ್ದಂತೆಯೇ: ಈ ಬಡಗಿಯ ಮಗ ಮುಂದಡಿ ಇಡುತ್ತಿದ್ದಾಗ ನಾವು ಜಡವಾಗಿ ಕುಳಿತುಕೊಂಡೆವು ಎಂದು ಕಣ್ಣೀರಿಟ್ಟರು. ಇಕ್ಬಾಲರನ್ನು ಭಾರತದಲ್ಲಿಂದು ಪೂಜಿಸಲಾಗುತ್ತದೆ; ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಅವರಿಗೆ ತರಾನಾ-ಎ-ಹಿಂದ್ ಎಂಬ ಬಿರುದನ್ನು ಕೊಡಮಾಡಿದರು. ಇಕ್ಬಾಲ್‌ರನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ ಎಂದೂ ಆಕೆ ಹೇಳಿದರು.

ಅಂಬೇಡ್ಕರ್ ಬರೆಯುತ್ತಾರೆ: ಯಾವುದೇ ಗಲಭೆಯನ್ನೂ ಖಂಡಿಸುವ ವಿಷಯದಲ್ಲಿ ಗಾಂಧಿಯವರು ತುಂಬಾ ಶ್ರದ್ಧಾಭಕ್ತಿಯನ್ನು ಹೊಂದಿದ್ದಾರೆ ಮತ್ತು ಅದರಿಷ್ಟಕ್ಕೆ ವಿರುದ್ಧವಾಗಿದ್ದರೂ ಖಂಡಿಸುವಂತೆ ಕಾಂಗ್ರೆಸ್ ಅನ್ನೂ ಬಲವಂತಪಡಿಸಿದ್ದಾರೆ. ಆದರೆ ಹಿಂದೂಗಳ ಕೊಲೆಗಳ ವಿರುದ್ಧ ಗಾಂಧಿ ಎಂದಿಗೂ ಪ್ರತಿಭಟಿಸಲಿಲ್ಲ. ಈ ಹಿಂಸಾಚಾರಗಳನ್ನು ಮುಸ್ಲಿಮರು ಎಂದಿಗೂ ಖಂಡಿಸಿಲ್ಲ, ಆದರೆ ಹಾಗೆ ಮಾಡುವಂತೆ ಪ್ರಭಾವಿ ಮುಸ್ಲಿಮರಿಗೆ ಗಾಂಧಿಯವರೂ ಎಂದಿಗೂ ಕರೆಕೊಟ್ಟಿಲ್ಲ. ಈ ವಿಷಯದಲ್ಲಿ ಮೌನವಾಗೇ ಉಳಿದುಕೊಂಡಿದ್ದಾರೆ. ಇಂತಹ ಮನೋಭಾವದ ಸಮರ್ಥನೆಗಿರುವ ಏಕಮೇವ ಪಾತಳಿಯೆಂದರೆ, ಹಿಂದೂ-ಮುಸ್ಲಿಂ ಏಕತೆಯನ್ನು ಉಳಿಸಲು ಗಾಂಧಿಯವರು ಹೊಂದಿರುವ ಆಸಕ್ತಿ ಮಾತ್ರ. ಇದಕ್ಕಾಗಿ ಕೆಲ ಹಿಂದೂಗಳ ಹೆಣಗಳುರುಳಿದರೂ ಅವರು ತಲೆ ಕೆಡಿಸಿಕೊಳ್ಳದೇ ಇದ್ದರು. ಮುಸ್ಲಿಮರ ಯಾವುದೇ ತಪ್ಪನ್ನೂ ಮನ್ನಿಸುವ ಮನೋಭಾವ ಏಕತೆಯ ಭಾವಕ್ಕೇ ಸಂಚಕಾರ ತಂದೊಡ್ದಿತು. ಇದಾಗಲೇ ಮೋಪ್ಲಾ ದಂಗೆಗಳ ವಿಚಾರವಾಗಿ ಗಾಂಧಿಯವರ ಹೇಳಿಕೆಯಿಂದ ಚೆನ್ನಾಗಿಯೇ ಚಿತ್ರಿತವಾಗಿದೆ. ಹಿಂದೂಗಳ ವಿರುದ್ಧ ಮಲಬಾರ್‌ನಲ್ಲಿ ಮೋಪ್ಲಾಗಳು ಎಸಗಿದ ರಕ್ತಹೆಪ್ಪುಗಟ್ಟಿಸುವ ದೌರ್ಜನ್ಯಗಳು ವಿವರಿಸಲಾಗದಂಥವು. ದಕ್ಷಿಣ ಭಾರತದಾದ್ಯಂತ, ಆತಂಕದ ಭಾವನೆಯ ಅಲೆಯು ಎಲ್ಲ ಅಭಿಪ್ರಾಯ ವರ್ಗದ ಹಿಂದೂಗಳ ಮಧ್ಯೆ ಹರಡಿತು. ಇದು ಇನ್ನೂ ಉಲ್ಬಣಗೊಂಡಿದ್ದು ಧರ್ಮದ ಸಲುವಾಗಿ ವೀರ ಹೋರಾಟ ನಡೆಸುತ್ತಿರುವ ಮೋಪ್ಲಾಗಳಿಗೆ ಅಭಿನಂದನೆಗಳ ಠರಾವನ್ನು ಜಾರಿಗೊಳಿಸುತ್ತಿದ್ದ ಕೆಲ ದಿಕ್ಕುತಪ್ಪಿದ ಖಿಲಾಫತ್ ನಾಯಕರಿಂದಾಗಿ. ಎಂತಹವರೇ ಆದರೂ, ಇದು ಹಿಂದೂ-ಮುಸ್ಲಿಂ ಏಕತೆಗೆ ತೆತ್ತ ಅತಿದೊಡ್ಡ ಬೆಲೆಯಾಗಿದೆ ಎಂದು ಹೇಳಿರುತ್ತಿದ್ದರೆನೋ. ಆದರೆ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸ್ಥಾಪಿಸುವ ಅವಶ್ಯಕತೆಯ ಗೀಳಿನಿಂದ ಗ್ರಸ್ತರಾಗಿದ್ದ ಗಾಂಧಿಯವರು ಮೋಪ್ಲಾಗಳ ಕಾರ್ಯವನ್ನೂ ಮತ್ತು ಅವರನ್ನು ಕೊಂಡಾಡುತ್ತಿದ್ದ ಖಿಲಾಫತ್‌ಗಳ ಕೃತ್ಯಗಳನ್ನು ಅಲ್ಪವಿಷಯವೆಂಬಂತೆ ತೇಲಿಸಿಬಿಡಲು ಸಿದ್ಧರಾಗಿದ್ದರು. ಮೋಪ್ಲಾಗಳ ಕುರಿತಾಗಿ (ಗಾಂಧೀಜಿ) ದೈರ್ಯವಂತ, ದೈವಭೀತಿಯುಳ್ಳ ಮೋಪ್ಲಾಗಳು ತಾವು ಧರ್ಮವೆಂದು ಬಗೆದುದಕ್ಕಾಗಿ ಮತ್ತು ತಮ್ಮ ಧಾರ್ಮಿಕತೆ ಎಂದು ಪರಿಗಣಿಸುವ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು ಎಂದು ಹೇಳಿದರು.

ಎಂದಿನಂತೆ, ಗಾಂಧಿ ಅಂಬೇಡ್ಕರ್ ಅವರ ಗಂಭಿರ ಆರೋಪಗಳಿಗೆ ಯಾವುದೆ ತೃಪ್ತಿಕರ ಪ್ರತಿಕ್ರಿಯೆಯನ್ನು ಕೊಡುವಲ್ಲಿ ವಿಫಲರಾದರು. ಮಹಾತ್ಮರು ಎಂದಿಗೂ ಕೊಡರು. ಮೋಪ್ಲಾ ದಂಗೆಗಳ ಸಂದರ್ಭದಲ್ಲಿನ ಗಾಂಧಿಯವರ ನಡವಳಿಕೆ, ಮತ್ತು ಕಗ್ಗೊಲೆಗಳು ಕ್ಷೀಣಿಸಿದ ನಂತರದ ಅವರ ಅಭಿಪ್ರಾಯಗಳು, ಮಹಾತ್ಮರ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಉಳಿದಿವೆ. ಇದ್ಯಾವುದೂ, ಎಂದಿಗೂ ನಮ್ಮ ಇತಿಹಾಸ ಪುಸ್ತಕಗಳ ಭಾಗವಾಗುವುದಿಲ್ಲ.

ತನ್ನ ಮಾತೃಭೂಮಿ ಭಾರತಕ್ಕೆ ಮುಸಲ್ಮಾನರ ನಿಷ್ಠೆಯ ಕುರಿತಾಗಿ ಅಂಬೇಡ್ಕರ್ ಹೀಗೆ ಬರೆಯುತ್ತಾರೆ :

ಇಸ್ಲಾಮಿನ ಸಿದ್ಧಾಂತಗಳ ಪೈಕಿ ಗಮನವಹಿಸಬೇಕಾದ ಸಿದ್ಧಾಂತದ ಪ್ರಕಾರ, ಮುಸ್ಲಿಮ್ ಆಳ್ವಿಕೆಗೆ ಒಳಗಾಗದ ದೇಶದಲ್ಲಿ, ಮುಸ್ಲಿಮ್ ಕಾನೂನು ಮತ್ತು ನೆಲದ ಕಾನೂನಿನ ಮಧ್ಯೆ ಘರ್ಷಣೆಗಳುಂಟಾದಾಗ ಮೊದಲಿನದ್ದೇ ಮೇಲುಗೈ ಸಾಧಿಸುತ್ತದೆ ಮತ್ತು ಮುಸ್ಲಿಮರ ಕಾನೂನು ಅನುಸರಿಸುತ್ತಿರುವುದಕ್ಕಾಗಿ ಮತ್ತು ನೆಲದ ಕಾನೂನನ್ನು ಧಿಕ್ಕರಿಸುತ್ತಿರುವದಕ್ಕಾಗಿ ಒಬ್ಬ ಮುಸಲ್ಮಾನನು ಸಮರ್ಥಿಸಲ್ಪಡುತ್ತಾನೆ.

ಕೆಳಗಿನದನ್ನು ಉದ್ಧರಿಸುತ್ತ

ನಾಗರಿಕನಿರಲಿ ಅಥವಾ ಸೈನಿಕನಾಗಿರಲಿ, ಮುಸಲ್ಮಾನರ ಆಡಳಿತದಡಿಯಲ್ಲಿರಲಿ ಅಥವಾ ಮುಸ್ಲಿಮೇತರರ ಆಡಳಿತದಲ್ಲಿರಲಿ, ಒಬ್ಬ ಮುಸಲ್ಮಾನನ ನಿಷ್ಠೆಯು ಕುರಾನಿಗನುಗುಣವಾಗಿ, ತನ್ನ ದೇವರಲ್ಲಿ ,ತನ್ನ ಪ್ರವಾದಿಯಲ್ಲಿ ಮತ್ತು ಅಧಿಕಾರದಲ್ಲಿರುವ ಮುಸಲ್ಮಾನರಿಗೇ ನಿಷ್ಠನಾಗಿರಲು ಆದೇಶಿತನಾಗಿದ್ದಾನೆ…

ಮುಂದುವರೆದು, ಅಂಬೇಡ್ಕರ್

ಸ್ಥಿರ ಸರ್ಕಾರಕ್ಕಾಗಿ ಆಶಿಸುವ ಯಾರನ್ನಾದರೂ ಇದು ಅತ್ಯಂತ ಆತಂಕಿತರಾಗಿಸಲೇಬೇಕು. ಆದರೆ ಒಬ್ಬ ಮುಸಲ್ಮಾನನಿಗೆ ಯಾವಾಗ ಒಂದು ದೇಶ ತನ್ನ ತಾಯ್ನಾಡಾಗಬೇಕು ಮತ್ತು ಯಾವಾಗ ಆಗಲಿಕ್ಕಿಲ್ಲ ಎಂದು ಬೋಧಿಸುವ ಮುಸ್ಲಿಂ ತತ್ವಗಳಿಗೆ ಇದ್ಯಾವುದರ ಪರಿವೆಯೇ ಇಲ್ಲ. ಮುಸ್ಲಿಂ ಕಟ್ಟಳೆಗಳ ಅನುಸಾರವಾಗಿ ವಿಶ್ವವು, ದಾರ್-ಉಲ್-ಇಸ್ಲಾಮ್ (ಇಸ್ಲಾಂನ ವಾಸಸ್ಥಾನ) ಮತ್ತು ದಾರ್-ಉಲ್-ಹರ್ಬ್ (ಯುದ್ಧಸ್ಥಾನ) ಎಂಬ ಎರಡು ಶಿಬಿರಗಳಲ್ಲಿ ವಿಂಗಡಿಸಲಾಗಿದೆ.

ಒಂದು ದೇಶವು ಮುಸ್ಲಿಮರು ಆಳ್ವಿಕೆಯಲ್ಲಿರುವಾಗ ‘ದಾರ್-ಉಲ್-ಇಸ್ಲಾಮ್’ ಆಗಿರುತ್ತದೆ. ಮುಸ್ಲಿಮರು ಆಡಳಿತಗಾರರಲ್ಲದೆ ಮಾತ್ರ ಆ ದೇಶದಲ್ಲಿ ವಾಸಿಸುವವರಾದಾಗ ಅದು ‘ದಾರ್-ಉಲ್-ಹರಬ್’ ಆಗಿರುತ್ತದೆ. ಮುಸ್ಲಿಮರ ಕಟ್ಟಳೆಯೇ ಹೀಗಿರುವಾಗ , ಭಾರತವು ಹಿಂದೂ ಮತ್ತು ಮುಸಲ್ಮಾನರಿಬ್ಬರಿಗೂ ಸಾಮುದಾಯಿಕ ತಾಯ್ನಾಡಾಗಿರಲು ಸಾಧ್ಯವೇ ಇಲ್ಲ. ಇದು ಮುಸಲ್ಮಾನ ಮಾತ್ರರ ಭೂಮಿಯಾಗಬಹುದು, ಆದರೆ ’ಹಿಂದೂಗಳು ಮತ್ತು ಮುಸಲ್ಮಾನರು ಸಮಾನರಾಗಿ ವಾಸಿಸುವ ಭೂಮಿ’ಯಾಗಿರಲು ಸಾಧ್ಯವಿಲ್ಲ. ಇದಲ್ಲದೆ, ಇದು ಮುಸ್ಲಿಮರೇ ಆಡಳಿತ ನಡೆಸಿದಾಗ ಮಾತ್ರ ಮುಸಲ್ಮಾನರ ಭೂಮಿಯಾಗಬಹುದು.

 ಮುಸ್ಲಿಮೇತರರ ಕೈಗೆ ಅಧಿಕಾರ ಬಂದ ತಕ್ಷಣವೇ ಅದು ಮುಸ್ಲಿಮರ ಭೂಮಿಯಾಗಿ ಉಳಿಯುವದಿಲ್ಲ. ದಾರ್-ಉಲ್-ಇಸ್ಲಾಮ್ ಆಗಿರದೆ ದಾರ್-ಉಲ್-ಹರಬ್ ಆಗಿ ಬದಲಾಗಿರುತ್ತದೆ.

ಈ ದೃಷ್ಟಿಕೋನವು ಕೇವಲ ಬೋಧನಾಸಕ್ತಿಗೆ ಮಾತ್ರವೇ ಸೀಮಿತ ಎಂದು ಭಾವಿಸಬಾರದು. ಇದು ಮುಸ್ಲಿಮರ ವರ್ತನೆಯ ಮೆಲೆ ಪ್ರಭಾವ ಬೀರುವ, ಸಕ್ರಿಯ ಶಕ್ತಿಯಾಗುವಲ್ಲಿ ಸಮರ್ಥವಾಗಿದೆ. ಹಿಜ್ರತ್ (ವಲಸೆ ಹೋಗುವುದು) ಮಾತ್ರವೇ ದಾರ್-ಉಲ್-ಹರಬ್‌ನಿಂದ ತಪ್ಪಿಸಿಕೊಳ್ಳಲು ಮುಸ್ಲಿಮರಿಗಿರುವ ಏಕೈಕ ಮಾರ್ಗವಲ್ಲ ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಬಹುದು. ಮುಸ್ಲಿಂ ಕಟ್ಟಳೆಗಳಲ್ಲಿ ಜಿಹಾದ್ ಎಂಬ ಹೆಸರಿನ ಮತ್ತೊಂದು ಕಟ್ಟಳೆಯೂ ಇದೆ. ಅದರನ್ವಯ ಅಧಿಕಾರಾರೂಢ ಮುಸ್ಲಿಮನಿಗೆ ಸಮಸ್ತ ಜಗತ್ತನ್ನೇ ಇಸ್ಲಾಮಿನ ಆಳ್ವಿಕೆಗೆ ಒಳಪಡುವಂತೆ ಮಾಡುವುದು ಬಾಧ್ಯತೆಯಾಗಿದೆ.

ವಿಶ್ವವನ್ನು ದಾರ್-ಉಲ್-ಇಸ್ಲಾಮ್ (ಇಸ್ಲಾಂನ ವಾಸಸ್ಥಾನ), ದಾರ್-ಉಲ್-ಹರಬ್ (ಯುದ್ಧಸ್ಥಾನ) ಎಂಬ ಎರಡು ಶಿಬಿರಗಳಾಗಿ ವಿಂಗಡಿಸಿದಾಗ, ಎಲ್ಲಾ ದೇಶಗಳು ಒಂದು ಅಥವಾ ಮತ್ತೊಂದು ವರ್ಗದಡಿಯಲ್ಲಿ ಬರುತ್ತವೆ. ತಾಂತ್ರಿಕವಾಗಿ, ಹಾಗೆ ಮಾಡಲು ಶಕ್ತನಾಗಿರುವ ಮುಸ್ಲಿಮ್ ಆಡಳಿತಗಾರನ ಕರ್ತವ್ಯವೆಂದರೆ, ದಾರ್-ಉಲ್-ಹರಬ್ ಅನ್ನು ದಾರ್-ಉಲ್-ಇಸ್ಲಾಮ್ ಆಗಿ ಮಾರ್ಪಡಿಸುವುದು. ಭಾರತದಲ್ಲಿ ಹಿಜ್ರತ್ ಅನ್ನು ಕೈಕೊಂಡ ಮುಸ್ಲಿಮರ ನಿದರ್ಶನಗಳಿದ್ದರೂ, ಜಿಹಾದ್ ಘೋಷಿಸಲೂ ಹಿಂಜರಿಯದ ನಿದರ್ಶನಗಳೂ ಕಾಣಸಿಗುತ್ತವೆ.

ಚುನಾಯಿತ ಸರ್ಕಾರದ ಅಧಿಕಾರವನ್ನು ಗೌರವಿಸುವ ಮುಸ್ಲಿಮನ ಬಗ್ಗೆ, ಅಂಬೇಡ್ಕರ್ ಬರೆಯುತ್ತ

ಸರ್ಕಾರದ ತಳಹದಿಯು ರಾಜಕೀಯ ಪಕ್ಷಗಳ ಐಕ್ಯತೆಗೆ ಅಗತ್ಯವಾದಷ್ಟೇ, ಸರ್ಕಾರದ ಅಧಿಕಾರವ್ಯಾಪ್ತಿಗೆ ವಿಧೇಯನಾಗಿರುವುದೂ ಸಾರಭೂತವಾಗಿ ಸ್ಥಿರ ಸರ್ಕಾರದ ಅಗತ್ಯತೆಯಾಗಿರುತ್ತದೆ.

ಸರ್ಕಾರದ ನಿರ್ವಹಣೆಯಲ್ಲಿ ವಿಧೇಯತೆಯ ಪ್ರಾಮುಖ್ಯತೆಯನ್ನು ಪ್ರಶ್ನಿಸುವುದು ವಿವೇಕಯುತರಿಂದಂತೂ ಅಸಾಧ್ಯ. ನಾಗರಿಕ ಅಸಹಕಾರವನ್ನು ನಂಬುವುದೆಂದರೆ ಅರಾಜಕತೆಯಲ್ಲಿ ನಂಬಿಕೆಯಿರಿಸಿದಂತೆ … ಹಿಂದೂಗಳಿಂದ ನಡೆಯುವ ಮತ್ತು ನಿಯಂತ್ರಿಸಲ್ಪಡುವ ಸರ್ಕಾರದ ಅಧಿಕಾರವ್ಯಾಪ್ತಿಯನ್ನು ಮುಸ್ಲಿಮರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ? ಈ ಪ್ರಶ್ನೆಯ ಉತ್ತರಕ್ಕೆ ಹೆಚ್ಚಿನ ವಿಚಾರಣೆಗಳೇನೂ ಬೇಕಾಗಿಲ್ಲ.

ಈ ದೃಷ್ಟಿಕೋನವು ಜಿನ್ನಾ ಮತ್ತು ಮುಸ್ಲಿಂ ಲೀಗ್‌ನ ದೃಷ್ಟಿಕೋನಗಳಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ವಾಸ್ತವವಾಗಿ, ಆಗಿನ ಪ್ರಚಲಿತ ವಾತಾವರಣದಲ್ಲಿ, ಈ ಅಭಿಪ್ರಾಯಗಳು ವ್ಯಕ್ತವಾಗಿರುವ ಅಲ್ಪಸಂಖ್ಯಾತರ ದೃಷ್ಟಿಕೋನದಿಂದ ಕಂಡಾಗ ಕಾನೂನುಬದ್ಧವಾಗಿಯೇ ಕಾಣಬಹುದು. ಆದರೂ, ಈ ಆಶಯಕ್ಕೆ ಅಂಬೇಡ್ಕರ್ ನೀಡುವ ಕಾರಣವು ಮಾತ್ರ ರಾಜಕೀಯವಲ್ಲದೆ ಮತೀಯತೆಯಲ್ಲಿದೆ.

ಮುಸ್ಲಿಮರಿಗೆ ಹಿಂದೂ ಒಬ್ಬ ಕಾಫಿರ್. ಕಾಫಿರನು ಗೌರವಕ್ಕೆ ಯೋಗ್ಯನಲ್ಲ. ಅವನು ಹುಟ್ಟು ಕೀಳು ಮತ್ತು ಯಾವುದೇ ಅಂತಸ್ತಿಲ್ಲದವ. ಆದ್ದರಿಂದಲೇ ಕಾಫಿರರಿಂದ ಆಳ್ವಿಕೆ ನಡೆಸಲ್ಪಡುವ ದೇಶವು ಮುಸಲ್ಮಾನನಿಗೆ ದಾರ್-ಉಲ್-ಹರಬ್ ಆಗಿದೆ. ಮುಸ್ಲಿಮರು ಹಿಂದೂ ಸರಕಾರಕ್ಕೆ ವಿಧೇಯರಾಗಿರುವುದಿಲ್ಲವೆಂದು ಸಾಬೀತುಪಡಿಸಲು ಹೆಚ್ಚಿನ ಪುರಾವೆಗಳ ಅಗತ್ಯವಿಲ್ಲವೆನ್ನುವುದಕ್ಕೆ ಇದೊಂದೇ ಅಂಶ ಸಾಕು. ಸರ್ಕಾರದ ಅಧಿಕಾರವನ್ನು ಪಾಲಿಸುವ ಮನೋಭಾವ ಮತ್ತು ಅನುಕಂಪದ ಮೂಲ ಭಾವನೆಗಳು, ಸುಮ್ಮನೆ ಅಸ್ತಿತ್ವಕ್ಕೆ ಬರುವದಿಲ್ಲ. ಪುರಾವೆಗಳು ಬೇಕಾದಲ್ಲಿ ಅವುಗಳು ಪುಷ್ಕಳವಾಗಿವೆ. ಆದರೆ ಇಲ್ಲಿರುವ ಸಮಸ್ಯೆಯೆಂದರೆ, ಯಾವುದನ್ನು ಹೊಂಚುವುದು ಮತ್ತು ಯಾವುದನ್ನು ಬಿಡುವುದೆಂಬುದರ ಕುರಿತು. ಖಿಲಾಫತ್ ಚಳುವಳಿಯ ಮಧ್ಯದಲ್ಲಿ, ಮುಸಲ್ಮಾನರಿಗೆ ಹಿಂದೂಗಳು ಅಷ್ಟೊಂದು ಸಹಾಯ ನೀಡುತ್ತಿದ್ದಾಗ ಮುಸಲ್ಮಾನರೂ ಹಿಂದೂಗಳು ತಮ್ಮ ಹೋಲಿಕೆಯಲ್ಲಿ ಕೀಳುಹುಟ್ಟಿನವರು ಮತ್ತು ಕೀಳುಜನಾಂಗದವರೆಂಬುದನ್ನು ಮರೆಯಲಿಲ್ಲ.

ಅಂಬೇಡ್ಕರ್ ಇಲ್ಲಿಗೆ ನಿಲ್ಲುವದಿಲ್ಲ . ಮುಸ್ಲಿಂ ಸಮಾಜದಲ್ಲಿ ಸುಧಾರಣೆಗಳ ಕೊರತೆಯ ಕುರಿತಾಗಿ ಈ ರೀತಿ ಬರೆಯುತ್ತಾರೆ :

ಆ ವಿಶೇಷವಾದ ಕಾರಣವಾದರೂ ಏನಾಗಿರಬಹುದು ? ಭಾರತೀಯ ಮುಸಲ್ಮಾನನಲ್ಲಿ ಬದಲಾವಣೆಯ ಚೈತನ್ಯದ ಅನುಪಸ್ಥಿತಿಗೆ ಕಾರಣವು, ಭಾರತದಲ್ಲಿ ಆತನಿಗಿರುವ ವಿಲಕ್ಷಣ ಸ್ಥಾನದಲ್ಲಿ ಹುಡುಕಬೇಕೆಂದು ನನಗೆ ತೋರುತ್ತದೆ. ಸಾಮಾಜಿಕವಾಗಿ ಹಿಂದು ಪ್ರಧಾನವಾಗಿರುವ ಪರಿಸರದಲ್ಲಿ ಮುಸಲ್ಮಾನರು ಸ್ಥಾನಪಡೆದಿದ್ದಾರೆ. ಆ ಹಿಂದೂ ಪರಿಸರವು ನಿಶ್ಶಬ್ದವಾಗಿ ಆದರೆ ನಿಶ್ಚಿತವಾಗಿಯೂ ಆತನನ್ನು ಆಕ್ರಮಿಸಿಕೊಳ್ಳುತ್ತಿದೆ.ಇದುವೇ ತನ್ನನ್ನು ಅಮುಸ್ಲಿಮನನ್ನಾಗಿ ಮಾಡುತ್ತಿದೆ ಎಂದಾತ ಭಾವಿಸುತ್ತಾನೆ. ಕ್ರಮೇಣವಾಗಿ ತನ್ನತನವನ್ನು ಕಳೆದುಕೊಳ್ಳುವತ್ತ ಸಾಗುವುದರ ವಿರುದ್ಧದ ರಕ್ಷಣೆಗೆಂದು ಇಸ್ಲಾಮಿಕ್ ಎಂಬ ಎಲ್ಲವನ್ನೂ ಸಂರಕ್ಷಿಸಲು ಅದು ತನ್ನ ಸಮಾಜಕ್ಕೆ ಮಾಡಬಹುದಾದ ಒಳಿತು-ಕೆಡಕುಗಳ ಪರಿವೆಯಿಲ್ಲದೇ ಪುರಸ್ಸರನಾಗುತ್ತಾನೆ. ಎರಡನೆಯದಾಗಿ, ಭಾರತದಲ್ಲಿ ಮುಸಲ್ಮಾನ ರಾಜಕೀಯವಾಗಿಯೂ ಹಿಂದು ಪ್ರಧಾನವಾಗಿರುವ ಪರಿಸರದಲ್ಲಿಯೇ ಸ್ಥಾನಪಡೆದಿದ್ದಾನೆ. ತಾನು ಅವರಿಂದ ದಮನಿಸಲ್ಪಡುವೆನು ಮತ್ತು ರಾಜಕೀಯ ನಿಗ್ರಹವು ಮುಸ್ಲಿಮರನ್ನು ದಮನಿತ ವರ್ಗವಾಗಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಮೊದಲು ಆತ ತನ್ನನ್ನು ರಕ್ಷಿಸಿಕೊಳ್ಳಬೇಕಾದ್ದು ಇಂತಹ ಪ್ರಜ್ಞೆಯಿಂದಲೇ . ಹಿಂದೂಗಳಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ತಾನು ಮುಳುಗುವುದರಿಂದ ತಪ್ಪಿಸಿಕೊಳ್ಳಬೇಕಾಗಿದೆ, ಎಂಬ ಭಾವನೆಯಿಂದಾಗಿಯೇ ನನ್ನ ಅರಿವಿನ ಪ್ರಕಾರ ಭಾರತೀಯ ಮುಸ್ಲಿಮರು ಸಾಮಾಜಿಕ ಸುಧಾರಣೆಯ ವಿಷಯದಲ್ಲಿ ಹಿಂದುಳಿದವರೆಂದು ಹೋಲಿಸಲ್ಪಡುತ್ತಾರೆ .

ಮುಸ್ಲಿಮರ ಚೈತನ್ಯವೇನಿದ್ದರೂ ಹಿಂದೂಗಳ ವಿರುದ್ಧದ ಸ್ಥಾನ ಮತ್ತು ಹುದ್ದೆಗಳ ಸತತವಾದ ಹೋರಾಟದಲ್ಲಿಯೇ ಹರಿದುಹೋಗುತ್ತದೆ. ಇವರಲ್ಲಿ ಸಾಮಾಜಿಕ ಸುಧಾರಣೆಗಾಗಿ ಯಾವುದೇ ಸಮಯ, ವಿಚಾರ ಮತ್ತು ಯಾವುದೇ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ. ಅಂತಹ ಯಾವುದೇ ಆಸ್ಪದವಿದ್ದರೂ ಕೋಮು ಉದ್ವಿಗ್ನತೆಯ ಒತ್ತಡದಿಂದಾಗಿ ಹಿಂದುಗಳನ್ನು ಸರಿಗಟ್ಟಲು ಮತ್ತು ಹಿಂದೂ ಧರ್ಮದ ಕೆಡುಕನ್ನು ಎಂತಹದೇ ಪರಿಸ್ಥಿತಿಯಲ್ಲಿ ಎದುರಿಸಲು ತಮ್ಮ ಸಾಮಾಜಿಕ-ಧಾರ್ಮಿಕ ಐಕ್ಯತೆಯನ್ನು ಕಾಪಾಡಿಕೊಳ್ಳುವುದರಲ್ಲಿಯೇ ಅದು ಹುದುಗಿಹೋಗುತ್ತದೆ . ಇದೇ ಮುಸ್ಲಿಮರ ರಾಜಕಿಯ ನಿಶ್ಚಲತೆಗೂ ವಿವರಣೆಯಾಗಿದೆ.

ಮುಸ್ಲಿಮ್ ರಾಜಕಾರಣಿಗಳು ಜೀವನದ ಜಾತ್ಯತೀತ ವರ್ಗಗಳನ್ನು ತಮ್ಮ ರಾಜಕೀಯದ ಆಧಾರದ ಮೆಲೆ ಗುರುತಿಸುವುದಿಲ್ಲ . ಏಕೆಂದರೆ ಇದರಲ್ಲಿ ಅವರಿಗೆ ಹಿಂದೂಗಳ ವಿರುದ್ಧದ ಹೋರಾಟದಲ್ಲಿ ಸಮುದಾಯದ ದುರ್ಬಲತೆ ಕಂಡುಬರುತ್ತದೆ. ಬಡ ಮುಸ್ಲಿಮರು ಶ್ರೀಮಂತರಿಂದ ನ್ಯಾಯ ಪಡೆಯಲು ಬಡ ಹಿಂದೂಗಳ ಜೊತೆ ಸೇರುವುದಿಲ್ಲ. ಜಮೀನುದಾರನ ದಬ್ಬಾಳಿಕೆ ತಡೆಯಲು ಮುಸ್ಲಿಮ್ ಹಿಡುವಳಿದಾರ ಹಿಂದೂ ಹಿಡುವಳಿದಾರರನ್ನು ಸೇರುವುದಿಲ್ಲ. ಬಂಡವಾಳದ ವಿರುದ್ಧದ ಕಾರ್ಮಿಕರ ಹೋರಾಟದಲ್ಲಿ ಮುಸ್ಲಿಂ ಕಾರ್ಮಿಕರು ಹಿಂದೂ ಕಾರ್ಮಿಕರನ್ನು ಸೇರುವುದಿಲ್ಲ. ಯಾಕೆ? ಉತ್ತರ ಸರಳವಾಗಿದೆ. ಬಡ ಮುಸ್ಲಿಮನೊಬ್ಬ ಶ್ರೀಮಂತರ ವಿರುದ್ಧದ ಹೋರಾಟದಲ್ಲಿ ಸೇರಿಕೊಂಡರೆ, ಅದನ್ನು ಶ್ರೀಮಂತ ಮುಸ್ಲಿಮನ ವಿರುದ್ಧದ ಹೋರಾಟವಾಗಿ ನೋಡುತ್ತಾನೆ. ಮುಸ್ಲಿಂ ಹಿಡುವಳಿದಾರನು ಜಮೀನುದಾರನ ವಿರುದ್ಧ ಪ್ರಚಾರದಲ್ಲಿ ಸೇರಿಕೊಂಡರೆ, ಮುಸ್ಲಿಮ್ ಜಮೀನುದಾರನ ವಿರುದ್ಧ ಹೋರಾಡಬೇಕಾಗುತ್ತದೆ. ಮುಸ್ಲಿಂ ಕಾರ್ಮಿಕ ಶ್ರಮದ ವಿರುದ್ಧ ಬಂಡವಾಳದ ಆಕ್ರಮಣವನ್ನು ಕಾರ್ಮಿಕರ ವಿರುದ್ಧದ ಆಕ್ರಮಣದಂತಲ್ಲದೆ , ಮುಸ್ಲಿಂ ಮಿಲ್-ಮಾಲಿಕನೊಬ್ಬನನ್ನು ಘಾಸಿಗೊಳ್ಳುತ್ತಿದ್ದಾನೆಂದು ಭಾವಿಸುತ್ತಾನೆ. ಶ್ರೀಮಂತ ಮುಸ್ಲಿಮರಿಗೆ, ಮುಸ್ಲಿಂ ಭೂಮಾಲಿಕರಿಗೆ ಅಥವಾ ಮುಸ್ಲಿಂ ಮಿಲ್ ಮಾಲಿಕರಿಗೆ ಆದ ಯಾವುದೇ ಗಾಯವು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅಪಚಾರವಾಗಿದೆಯೆಂದು ಅವನು ಭಾವಿಸುತ್ತಾನೆ. ಹೀಗಾಗಿಯೇ ಅದು ಹಿಂದೂ ಸಮುದಾಯದ ವಿರುದ್ಧದ ಹೋರಾಟದಲ್ಲಿ ದುರ್ಬಲಗೊಂಡಿದೆ.

ನಂತರ, ಅಂಬೇಡ್ಕರ್ ತಮ್ಮನ್ನು ಗುತ್ತಿಗೆ ಹಿಡಿರುವವರ ಕಾಮಾಲೇ ಕಣ್ಣುಗಳಲ್ಲೇ ತಾನೊಬ್ಬ ದೃಢಿೀಕರಿಸಿದ ಇಸ್ಲಾಂ ಭಯಗ್ರಸ್ತ (Islamophobe) ಎಂದು ಕರೆಯಿಸಿಕೊಳ್ಳುವದನ್ನು ಬರೆಯುತ್ತಾರೆ :

ಮುಸ್ಲಿಮ್ ರಾಜಕಾರಣವು ಮುಸ್ಲಿಂ ಮುಖಂಡರ ವರ್ತನೆಯಿಂದಾಗಿಯೇ ಹೇಗೆ ವಿರೂಪಗೊಂಡಿದೆ ಎಂಬುದನ್ನೂ  ಸುಧಾರಣೆಗಳಿಗಾಗಿ ಈ ಮುಸ್ಲಿಂನಾಯಕರಲ್ಲಿನ ಮನೋಭಾವವೇ ತೋರಿಸುತ್ತದೆ. ಮುಸ್ಲಿಮರು ಮತ್ತವರ ನಾಯಕರು ಕಾಶ್ಮೀರದ ಹಿಂದೂ ರಾಜ್ಯದಲ್ಲಿ ಪ್ರತಿನಿಧಿತ್ವದ ಸರ್ಕಾರದ ಪರಿಚಯಕ್ಕಾಗಿ ದೊಡ್ಡ ಆಂದೋಲನವನ್ನೇ ನಡೆಸಿದರು.

ಅದೇ ಮುಸ್ಲಿಮರು ಮತ್ತು ಅವರ ಮುಖಂಡರು ಇತರ ಮುಸ್ಲಿಂ ರಾಜ್ಯಗಳಲ್ಲಿ ಪ್ರತಿನಿಧಿ ಸರ್ಕಾರಗಳನ್ನು ಪರಿಚಯಿಸುವುದಕ್ಕೆ ಖಂಡತುಂಡ ವಿರೋಧ ವ್ಯಕ್ತಪಡಿಸುತ್ತಾರೆ. ಈ ವಿಚಿತ್ರ ವರ್ತನೆಗೆ ಕಾರಣ ತುಂಬಾ ಸರಳವಾಗಿದೆ. ಎಲ್ಲಾ ವಿಷಯಗಳಲ್ಲಿಯೂ , ಮುಸ್ಲಿಮರೆದುರಿನ ನಿರ್ಣಾಯಕ ಪ್ರಶ್ನೆಯೆಂದರೆ, ಮುಸ್ಲಿಮರ ವಿರುದ್ಧ ಇದರ ಪರಿಣಾಮವೇನು ಮತ್ತು ಹಿಂದೂಗಳ ವಿರುದ್ಧ ಇದರ ಪರಿಣಾಮವೇನು ಎನ್ನುವುದು. ಪ್ರತಿನಿಧಿ ಸರ್ಕಾರದಿಂದ ಮುಸ್ಲಿಮರಿಗೆ ಸಹಾಯವಾಗುವ ಪಕ್ಷದಲ್ಲಿ ಅದರ ಪರವಾಗಿ ಒತ್ತಾಯಿಸುತ್ತಾರೆ ಮತ್ತು ಅದಕ್ಕಾಗಿ ಹೋರಾಡುತ್ತಾರೆ. ಕಾಶ್ಮೀರ ರಾಜ್ಯದಲ್ಲಿ ಆಡಳಿತಗಾರನೋ ಹಿಂದೂ, ಆದರೆ ಬಹುಪಾಲು ಪ್ರಜೆಗಳು ಮುಸ್ಲಿಮರು. ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರಕ್ಕಾಗಿ ಮುಸ್ಲಿಮರು ಹೋರಾಡಿದರು, ಏಕೆಂದರೆ ಕಾಶ್ಮೀರದ ಪ್ರಜಾಸತ್ತಾತ್ಮಕ ಸರ್ಕಾರದಿಂದಾಗಿ ಅಧಿಕಾರವು ಹಿಂದು ರಾಜರಿಂದ ಮುಸ್ಲಿಮ್ ಪ್ರಜೆಗಳಿಗೆ ವರ್ಗವಾಯಿತು. ಇತರ ಮುಸ್ಲಿಂ ರಾಜ್ಯಗಳಲ್ಲಿ, ಆಡಳಿತಗಾರನು ಮುಸ್ಲಿಮರಾಗಿದ್ದರೂ ಅವನ ಬಹುಸಂಖ್ಯ ಪ್ರಜೆಗಳು ಹಿಂದೂಗಳಾಗಿದ್ದಾರೆ. ಅಂತಹ ರಾಜ್ಯಗಳ ಪ್ರತಿನಿಧಿ ಸರ್ಕಾರದಲ್ಲಿ ಮುಸ್ಲಿಂ ಆಡಳಿತಗಾರರಿಂದ ಹಿಂದೂ ಜನಸಂಖ್ಯೆಗೆ ಅಧಿಕಾರದ ವರ್ಗವಾಗುವುದು ಎಂದರ್ಥ. ಅದಕ್ಕಾಗಿಯೆ ಮುಸ್ಲಿಮರು ಒಂದು ಪ್ರಕರಣದಲ್ಲಿ ಪ್ರತಿನಿಧಿ ಸರ್ಕಾರದ ಪರವಾಗಿ ಬೆಂಬಲಿಸುತ್ತಾರೆ ಮತ್ತು ಅದನ್ನು ಇನ್ನೊಂದರಲ್ಲಿ ವಿರೋಧಿಸುತ್ತಾರೆ. ಪ್ರಜಾಪ್ರಭುತ್ವವು ಮುಸ್ಲಿಮರ ಪರಿಗಣಿಕೆಯಲ್ಲಿ ಮೇಲುಗೈಯಾಗಿ ಕಾಣುವುದಿಲ್ಲ. ಮುಸ್ಲಿಮರ ಪರಿಗಣಿಕೆಯಲ್ಲಿ ಮೇಲುಗೈ ಎಂಬುದು ಹಿಂದೂಗಳ ವಿರುದ್ಧದ ಹೋರಾಟದಲ್ಲಿ ಬಹುಮತದ ಆಡಳಿತದ ಪ್ರಜಾಪ್ರಭುತ್ವವು ಮುಸಲ್ಮಾನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಪ್ರಾಮುಖ್ಯತೆ ಪಡೆದಿದೆ. ಅದು ಅವರನ್ನು ಬಲಪಡಿಸುತ್ತದಯೇ ಅಥವಾ ಅದನ್ನು ದುರ್ಬಲಗೊಳಿಸುವುದೆ? ಒಂದು ವೇಳೆ ಪ್ರಜಾಪ್ರಭುತ್ವವು ಅವರನ್ನು ದುರ್ಬಲಗೊಳಿಸುತ್ತಿದ್ದರೆ, ಅವರು ಪ್ರಜಾಪ್ರಭುತ್ವವನ್ನು ಬಯಸುವುದಿಲ್ಲ. ಮುಸ್ಲಿಂ ಆಡಳಿತಗಾರನ ಆಡಳಿತವನ್ನು ದುರ್ಬಲಗೊಳಿಸುವುದಕ್ಕಿಂತ ಹಿಂದೂ ಪ್ರಜೆಗಳ ಮೇಲೆ ಮುಸ್ಲಿಂ ಆಡಳಿತಗಾರನ ಹಿಡಿತದಲ್ಲಿನ ಕೊಳೆತ ಸರ್ಕಾರಕ್ಕೆ ತಮ್ಮ ಆದ್ಯತೆ ತೋರುತ್ತಾರೆ.

ಮುಸ್ಲಿಂ ಸಮುದಾಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ನಿಶ್ಚಲತೆಯನ್ನು ಕೇವಲ ಒಂದೇ ಒಂದು ತರ್ಕದ ಆಧಾರದಲ್ಲಿ ವಿವರಿಸಬಹುದು.

ಮುಸ್ಲಿಮರು, ಹಿಂದೂಗಳು ಮತ್ತು ಮುಸ್ಲಿಮರು ನಿರಂತರವಾಗಿ ಹೋರಾಡಬೇಕು ಎಂದೇ ಭಾವಿಸುತ್ತಾರೆ; ಮುಸ್ಲಿಮರ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಹಿಂದುಗಳು ಮತ್ತು ಆಳ್ವಿಕೆಯ ಸಮುದಾಯವಾಗಿ ಮುಸ್ಲಿಮರು ತಮ್ಮ ಐತಿಹಾಸಿಕ ಸ್ಥಾನವನ್ನು ಸ್ಥಾಪಿಸುವಂತಾಗಲು – ಈ ಹೋರಾಟದಲ್ಲಿ ಶಕ್ತಿವಂತರೇ ಗೆಲ್ಲುತ್ತಾರೆ . ತಮ್ಮ ಶ್ರೇಣಿಯಲ್ಲಿನ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಬಲ್ಲ ಎಲ್ಲವನ್ನೂ ನಿಗ್ರಹಿಸಬೇಕು ಇಲ್ಲವೇ ಶಿತಲ ಶೇಖರಣೆಗೆ ದೂಡಬೇಕು. ಬೇರೆ ದೇಶಗಳಲ್ಲಿನ ಮುಸ್ಲಿಮರು ತಮ್ಮ ಸಮಾಜವನ್ನು ಸುಧಾರಿಸುವ ಕಾರ್ಯವನ್ನು ಕೈಗೊಂಡಿದ್ದಾರೆ ಮತ್ತು ಭಾರತದ ಮುಸ್ಲಿಮರು ಹಾಗೆ ಮಾಡಲು ನಿರಾಕರಿಸಿದ್ದಾರೆ, ಏಕೆಂದರೆ ಮೊದಲಿನವರು (ಬೇರೆ ದೇಶಗಳಲ್ಲಿನ ಮುಸ್ಲಿಮರು) ತಮ್ಮ ಪ್ರತಿಸ್ಪರ್ಧಿ ಸಮುದಾಯಗಳೊಂದಿಗಿನ ಕೋಮು ಮತ್ತು ರಾಜಕೀಯ ಘರ್ಷಣೆಯಿಂದ ಮುಕ್ತರಾಗಿದ್ದಾರೆ, ಆದರೆ ನಂತರದವರು (ಭಾರತದ ಮುಸ್ಲಿಮರು) ಹಾಗಲ್ಲ.

ಇತಿಹಾಸವನ್ನು ನಮ್ಮಿಂದ ಮರೆಮಾಡಲಾಗಿದೆ ಅಥವಾ ಕಂಡುಹಿಡಿಯಲಾಗಿದೆ. ನಾವು ಅದರಲ್ಲಿ ಯಾವುದನ್ನು ಇಷ್ಟಪಡುತ್ತೇವೆಯೋ ಅದರ ಕುರಿತಾಗಿಯೇ ಹೇಳುತ್ತೇವೆ ಮತ್ತು ಪುನರಾವರ್ತಿಸುತ್ತೇವೆ. ಮತ್ತು ಇಷ್ಟವಾಗದಿರುವುದನ್ನು ನಾವು ಹಾಸಿಗೆಯ ಬುಡಕ್ಕೆ ಜಾರಿಸುತ್ತೇವೆ ನಂತರ ಚಕ್ಕಳಮಕ್ಕಳಾಗಿ ಕುಳಿತು ಮತ್ತಿನ್ನಷ್ಟು ಪುನರಾವರ್ತಿಸಲು ತೊಡಗುತ್ತೇವೆ. ನಾವು ಹುಟ್ಟು ಕಥೆಗಾರರು. ನಮ್ಮ ಕಥೆ ಕೇಳಲು ಒಂದು ತಲೆ ಮತ್ತು ಮಡಿಲಷ್ಟೆ ನಮಗೆ ಬೇಕಾಗಿರುವುದು. ಹಾಗಾದರೆ ಸತ್ಯ ? ಅದು ಅಲ್ಲಿಲ್ಲ; ದೃಷ್ಟಿಗೋಚರದಿಂದ ಎಂದೋ ಮರೆಯಾಯಿತು; ಹಾಗಾಗಿ ಅದು ಎಂದಿಗೂ ಸಂಭವಿಸಲೇ ಇಲ್ಲ.

ಆದರೆ ಇದು ಸಂಭವಿಸಿತ್ತು . ಅಂಬೇಡ್ಕರ್ ಇಸ್ಲಾಂ ಮತ್ತು ಭಾರತೀಯ ಮುಸ್ಲಿಮರ ಬಗ್ಗೆ ಈ ವಿಷಯಗಳನ್ನು ಹೇಳಿದ್ದಾರೆ. ಮತ್ತು ಹಾಗೆ ಮಾಡುವಾಗ, ನಮ್ಮನ್ನು ಚೆನ್ನಾಗಿ ಬಲ್ಲವರಾದ್ದರಿಂದ ಅವರು ಒಂದು ಆಯ್ಕೆಯನ್ನೂ ನಮಗೆ ಕೊಟ್ಟರು. ನಾವು ಹಿಂದೂ ಧರ್ಮದ ಬಗ್ಗೆ ಅವರ ದೃಷ್ಟಿಕೋನಗಳನ್ನು ಮುಕ್ತವಾಗಿ ಚರ್ಚಿಸುವಂತೆ ಇಸ್ಲಾಂ ಬಗೆಗಿನ ಅವರ ಅಭಿಪ್ರಾಯಗಳನ್ನೂ ಚರ್ಚಿಸಬಹುದು ಇಲ್ಲವೇ ಪ್ಲಾಸ್ಟಿಕ್ ಚೀಲದಂತೆ ಅವುಗಳನ್ನು ಜಜ್ಜಿ ಮುದುರಿಸಿ ನಮ್ಮ ಹಾಸಿಗೆಯಡಿಯಲ್ಲಿ ಜಾರಿಸಬಹುದು. ನಾವು ಮಾಡಿದ ಆಯ್ಕೆಗೆ ಸಾಕ್ಷಿಯಾಗಲು ಅವರು ದೀರ್ಘಕಾಲ ಬದುಕಲಿಲ್ಲ, ಆದರೆ ಕಾಲಜ್ಞಾನಿಯಾಗಿ ಇದರ ಕುರಿತಾದ ಒಂದು ಸೂಕ್ಷ ್ಮಸುಳಿವಂತೂ ಅವರಿಗಿತ್ತು .

ತಮ್ಮ ಪುಸ್ತಕದ ಪ್ರಸ್ತಾವನೆಯಾಗಿ ಅವರು ಹೀಗೆ ಬರೆದಿದ್ದಾರೆ :

‘ನನ್ನ ಪುಸ್ತಕಕ್ಕೆ ದೊರೆತ ಪ್ರತಿಕ್ರಿಯೆಗೆ ನಾನೇನು ಕ್ಷಮಾರ್ಥಿಯಲ್ಲ. ಹಿಂದೂಗಳಿಂದ ನಿರಾಕರಿಸಲ್ಪಟ್ಟಿದ್ದು ಮತ್ತು ಮುಸ್ಲಿಮರಿಂದ ಬಹಿಷ್ಕರಿಸಲ್ಪಟ್ಟಿರುವುದೇ ಇದರಲ್ಲಿ ಇಬ್ಬರ ಕುರಿತಾಗಿಯೂ ಯಾವುದೇ ದುರುದ್ದೇಶಗಳಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯದ ಮತ್ತು ವಾಸ್ತವದ ನಿರ್ಭೀತ ಪ್ರಸ್ತುತಿಯ ದೃಷ್ಟಿಯಿಂದ ಈ ಪುಸ್ತಕವು ಪಕ್ಷವೊಂದರ ಉತ್ಪಾದನೆಯಾಗಿಲ್ಲ.ಕೆಲವರು ಮುನಿಸಿಕೊಂಡಿದ್ದಾರೆ. ಏಕೆಂದರೆ ನಾನು ಹೇಳಿದ್ದು ಅವರಿಗೆ ನೋವುಂಟುಮಾಡಿದೆ. ವ್ಯಕ್ತಿಗಳನ್ನು ಅಥವಾ ವರ್ಗಗಳನ್ನು ಅಥವಾ ಆಘಾತಕಾರಿ ಅಭಿಪ್ರಾಯಗಳನ್ನು ಘಾಸಿಗೊಳಿಸುವ ಭೀತಿಯಿಂದ ಅವು ಎಷ್ಟೇ ಗೌರವಾನ್ವಿತವಾಗಿದ್ದಾಗಲೂ ನಾನು ಪ್ರಭಾವಿತನಾಗಿಲ್ಲ ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಈ ದಿಸೆಯಲ್ಲಿ ಮುಂದುವರಿದುದಕ್ಕಾಗಿ ನನಗೆ ವಿಷಾದವಿದೆ, ಆದರೆ ಪಶ್ಚಾತ್ತಾಪ ಎಂದಿಗೂ ಇಲ್ಲ.’

‘ಎರಡೂ ಕಡೆಗಳಿಗೆ ಸಲಹೆ ನೀಡುವಲ್ಲಿ, ಅಗತ್ಯಕ್ಕಿಂತಲೂ ಹೆಚ್ಚು ಭಾವೋದ್ರಿಕ್ತ ಪದಗಳನ್ನು ನಾನು ಬಳಸಿದ್ದೇನೆ ಎಂದು ಹೇಳಬಹುದು. ಆದರೆ ಹಾಗೆ ಮಾಡಿದ್ದಲ್ಲಿ ಅದು ಚಿಕಿತ್ಸಕನೊಬ್ಬ ಪಾರ್ಶ್ವವಾಯು ಪೀಡಿತನ ಪ್ರತಿ ಅಂಗಕ್ಕೆ ಚುಚ್ಚುಗೋಲಿನ ಮೂಲಕ ತಿವಿದು ಕ್ರಿಯಾಶೀಲಗೊಳಿಸಲು ಪ್ರಯತ್ನಿಸುವ ವೈದ್ಯಕ್ರಮವನ್ನೇ ಪ್ರಯತ್ನಿಸಿ, ಅದರಿಂದ ನಿದ್ರೆಯಲ್ಲಿರದಿದ್ದರೂ ಆತ್ಮಸಂತುಷ್ಟನಾದ, ಕೆಟ್ಟತಿಳಿವಳಿಕೆಯವನಲ್ಲದಿದ್ದರೂ , ಸಂಶಯದೃಷ್ಟಿಯಿಂದ ನೋಡದ ಸಾಧಾರಣ ಭಾರತೀಯನಿಗೆ ಏನಾಗುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ನನ್ನ ಪ್ರಯತ್ನವು ಅಪೇಕ್ಷಿತ ಪರಿಣಾಮವನ್ನು ಹೊಂದಿರುತ್ತದೆ ಎಂದು ಭಾವಿಸುತ್ತೇನೆ.’

ಎಂತಹ ಪದಗಳು. ಸುಂದರ, ಶಕ್ತಿಯುತ, ನವಿರಾದ ಪದಗಳು. ಇಲ್ಲಿದ್ದರು ಅಂಬೇಡ್ಕರ್, ವೈದ್ಯನೊಬ್ಬನ ಪಾರ್ಶ್ವವಾಯು ಪೀಡಿತ ಅಂಗಗಳಿಗೆ ಚುಚ್ಚುಗೋಲಿನ ಚಿಕಿತ್ಸೆಯಂತೆ ನಮ್ಮನ್ನೂ ತಿವಿಯುತ್ತಾರೆೆ. ಆದರೆ, ಅವರು ನಮ್ಮನ್ನು ತಪ್ಪಾಗೆಣಿಸಿದರು. ನಾವು ಭಯಗ್ರಸ್ತರಾಗಿಯೂ, ಅಸಡ್ಡೆಯಿಂದಲೂ, ಪಾರ್ಶ್ವವಾಯುಪೀಡಿತರಾಗಿಯೇ  ಇರುತ್ತೇವೆ.

ತಮ್ಮ ಭೂತಕಾಲಕ್ಕೆ ಹೆದರುವ, ಭವಿಷ್ಯತ್ತಿಗೆ ಭಯಪಡುವ ರಾಷ್ಟ್ರಗಳು ಶ್ರೇಷ್ಟ ಪುರುಷರನ್ನು ಮತ್ತು ಮಹಿಳೆಯರನ್ನು ಪೂಜಿಸುತ್ತವೆ. ಆದರೆ ಎಂದಿಗೂ ಅನುಸರಿಸುವುದಿಲ್ಲ. ಅಂಬೇಡ್ಕರರೂ ಇದಕ್ಕೆ ಹೊರತಾಗಿಲ್ಲ.

-ಆನಂದ್ ರಂಗನಾಥನ್

ಅನುವಾದ : ಶೈಲೇಶ್ ಕುಲಕರ್ಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!