ಅಂಕಣ

ಅಳಿವಿನಂಚಿನಲ್ಲಿದ್ದ ಅಂಚೆಗೆ ಆಮ್ಲಜನಕ ಒದಗಿಸಿದವರಾರು??

ಸರ್ಕಾರಿ ಇಲಾಖೆಗಳು ಅವಸಾನದಂಚಿನಲ್ಲಿದ್ದವು. ಆಕಾಶವಾಣಿ, ದೂರದರ್ಶನ, BSNL, ಇಂಡಿಯನ್ ಪೋಸ್ಟ್ ಇತ್ಯಾದಿ. ಕಾರಣವಿಷ್ಟೆ ಸರ್ಕಾರಿ ಸಂಸ್ಥೆಗಳ ಸೇವೆಯ ಗುಣಮಟ್ಟ ಸಮಯಪಾಲನೆಯಲ್ಲಿ ಸಮಸ್ಯೆಗಳಿದ್ದವು. ಅದೆಲ್ಲವನ್ನು ದೂರವಿಟ್ಟು ಉತ್ಕೃಷ್ಟವಾದ ಸೇವೆ ಒದಗಿಸಿ ಮರಣದಂಚಿನಲ್ಲಿದ್ದ ಇಲಾಖೆಗಳಿಗೆ ಮತ್ತೊಮ್ಮೆ ನವಜೀವ ತುಂಬುವ ಕೆಲಸ ಸರ್ಕಾರ ಮಾಡಬೇಕಿತ್ತು. ಮೋದಿ ಸರ್ಕಾರ ಆ ಕೈಂಕರ್ಯವನ್ನು ಕೈಗೆತ್ತಿಕೊಂಡು ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

ಅಕ್ಟೋಬರ್  9ರಂದು ಅಂಚೆ ದಿನದ ಪ್ರಯುಕ್ತ ಅಂಚೆ ಇಲಾಖೆಯಲ್ಲಾದ ಬದಲಾವಣೆಗಳು ಮತ್ತು ಹೊಸ ಸೌಲಭ್ಯಗಳ  ಬಗ್ಗೆ ಬೆಳಕು ಚೆಲ್ಲೋಣ.

ವಾಟ್ಸಾಪ್ ಫೇಸ್ಬುಕ್ ಟ್ವೀಟರ್ ಈ-ಮೇಲ್ ಇಂಥ ಹಲವಾರು ಸಂದೇಶ ರವಾನೆಯ ಮಾರ್ಗಗಳಿರುವಾಗ ಮತ್ತು ಅವು ಶೀಘ್ರ ಗತಿಯ ಕೆಲಸ ಮಾಡುತ್ತಿರುವಾಗ ಪತ್ರವನ್ನು ಕೊಂಡು ಬರೆದು ಮೂರ್ನಾಲ್ಕು ದಿನ ಕಾಯ್ದು ಸಂದೇಶ ವಿನಿಮಯ ಮಾಡುವ ತಾಳ್ಮೆ ಯಾರಿಗಿದೆ? ಪೋಸ್ಟಲ್ ಡಿಪಾರ್ಟ್ಮೆಂಟ್ ಹೀಗಾಗಿ ಗೌಣವಾಗುತ್ತಾ ಸಾಗಿದ್ದಲ್ಲದೇ ಅಲ್ಲಿನ ನೌಕರರು ಕೆಲಸವಿಲ್ಲದೇ ಕುಳಿತಿದ್ದರು. ಮಾನವ ಸಂಪನ್ಮೂಲ ಸುಖಾಸುಮ್ಮನೇ ಹಾಳಾಗುತ್ತಿತ್ತು ಅದರ ಸದ್ವಿನಿಯೋಗದ ಜೊತೆಜೊತೆಗೆ ನಷ್ಟದಲ್ಲಿರುವ ಇಲಾಖೆಯನ್ನು ಮತ್ತೊಮ್ಮೆ ಲಾಭದ ಹಾದಿಯಲ್ಲಿ ನಡೆಸಬೇಕಾಗಿತ್ತು.

ಒಂದೆಡೆ ಪಾಸ್’ಪೋರ್ಟ್ ಸೇವಾ ಕೇಂದ್ರಗಳು ಜನಜಂಗುಳಿಯಿಂದ ತುಂಬಿಹೋಗಿದ್ದವು. ಅದಕ್ಕೆಂತದೋ ಅಪಾಯಿಂಟ್’ಮೆಂಟ್ ತೆಗೆದುಕೊಂಡು ವಾರಗಟ್ಟಲೇ ಕಾದುಕೂತು ಎಲ್ಲ ಕಾಗದ ಪತ್ರಗಳನ್ನು ತಯಾರಿ ಮಾಡಿಕೊಂಡು ಹೋದರೆ ಪಾಸ್’ಪೋರ್ಟ್ ಅಪ್ಲೈ ಮಾಡಿದರೆ ಮಾಡಬಹುದು ಇಲ್ಲವಾದರೆ ಇಲ್ಲ. ಇರುವ 85 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಜನರ ಅವಶ್ಯಕತೆ ನೀಗಿಸಲು ಕಷ್ಟಸಾಧ್ಯವಾಗಿತ್ತು. ದೇಶದ ಒಟ್ಟು 675 ಜಿಲ್ಲಾ  ಹೆಡ್’ ಪೋಸ್ಟ್ ಆಫೀಸಿನಲ್ಲಿ ಪಾಸ್’ಪೋರ್ಟ್ ಸೇವಾ ಕೇಂದ್ರ(POPSK)ಗಳನ್ನು ಅಳವಡಿಸಲಾಯಿತು. ಕೆಲಸ ವಿಭಜನೆಗೊಂಡು ಮೊದಲಿನ ಸೇವಾಕೇಂದ್ರಗಳ ಮೇಲಿನ ಭಾರ ಕಡಿಮೆಯಾಯಿತು. ಸಂಪನ್ಮೂಲಗಳ ಬಳಕೆಯೂ ಆಯಿತು. ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆಯೂ ದಕ್ಕಿತು. ಸುಮ್ಮನೇ ವಿಚಾರ ಮಾಡಿ ನೋಡಿ ಜನರ ಅವಶ್ಯಕತೆಯನ್ನು ಪೂರೈಸಲು  675 ಕಡೆ ಪಾಸ್‌ಪೋರ್ಟ್ ಸೇವಾಕೇಂದ್ರ ತೆಗೆಯಲು ಹೊರಟಿದ್ದರೆ ಖರ್ಚು ವೆಚ್ಚಗಳೇನಾಗುತ್ತಿದ್ದವು? ಹೊಸದಾಗಿ ಅದೆಷ್ಟು ಜನರನ್ನು ನೇಮಿಸಿಕೊಳ್ಳಬೇಕಿತ್ತು. ಅವೆಲ್ಲದರ ರಗಳೆಯೇ ಇಲ್ಲದೇ ಅಂಚೆ ಇಲಾಖೆಗೂ ಲಾಭ ಸೇವೆಯಲ್ಲೂ ಉತ್ಕೃಷ್ಟತೆ.

ಪೋಸ್ಟ್ ಆಫೀಸುಗಳು ಬ್ಯಾಂಕಿನಂತೆ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಕೆಲಸಕ್ಕೆ ಬಳಸಿಕೊಳ್ಳಲಾಯಿತು. ಮತ್ತೊಮ್ಮೆ ಎಲ್ಲ 675 ಕೇಂದ್ರಗಳಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ತೆರೆಯಲಾಯಿತು. ಅವಕ್ಕೊಂದು ATM card ಸೌಲಭ್ಯವನ್ನು ನೀಡಲಾಯಿತು. ಪೋಸ್ಟಿನ ATM ಮಷೀನುಗಳಲ್ಲಿ ಯಾವುದೇ ಬ್ಯಾಂಕಿನ ಕಾರ್ಡುಗಳಿಂದ ವ್ಯವಹರಿಸುವ ಅನುಕೂಲ ಮಾಡಿಕೊಡಲಾಯಿತು. ೫೦ ರೂಪಾಯಿ ಉಳಿತಾಯ ಖಾತೆ ೧೦ ರೂಪಾಯಿಯ ಆರ್.ಡಿ ಖಾತೆಯ ಸೌಲಭ್ಯಗಳು ಇವೆ . ಇನ್ನು ಮುಂದೆ ಪೋಸ್ಟ್ ಮ್ಯಾನ್ ಕೈಯಲ್ಲೊಂದು ಮೆಷೀನ್ ಕೊಟ್ಟು ಕಳುಹಿಸುತ್ತಾರೆ. ಗ್ರಾಹಕರಿಗೆ ಬೇಕಾದ ಎಲ್ಲ ವ್ಯವಹಾರಗಳನ್ನು ಅದರಲ್ಲಿಯೇ ಮಾಡಬಹುದು.ಆಧಾರ್ ಕಾರ್ಡ್ ಪಡೆಯುವಲ್ಲಿ ಆಗುವ ವಿಳಂಬ ಕಿರಿಕಿರಿ ಕಡಿಮೆ ಮಾಡಲು ಅದನ್ನು ಪೋಸ್ಟ್ ಆಫೀಸಿನವರೆಗೆ ವೃದ್ಧಿಸುವ ಯೋಜನೆ ಕೂಡಾ ಇದೆ. ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದ್ದು ಮೊದಲಿಗಿಂತ ವೇಗವಾಗಿ ಕೆಲಸ ಮಾಡಲಾಗುತ್ತಿದೆ.

ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನದಡಿಯಲ್ಲಿರುವ “ಸುಕನ್ಯಾ ಸಮೃದ್ಧಿ” ಎಂಬ ಯೋಜನೆ ಇದೆ. ಹೆಣ್ಣು ಮಕ್ಕಳನ್ನು ಹೆತ್ತರೆ ಅವರ ಖರ್ಚು ವೆಚ್ಚಗಳನ್ನು ತೂಗಿಸಲಾಗದೇ ಮನೆಗೆ ಭಾರವಾಗುತ್ತಾರೆ ಎಂಬ ಕಾರಣಕ್ಕೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿತ್ತು. ಇದರಿಂದ ಲಿಂಗಾನುಪಾತದಲ್ಲಾಗುವ ವಿಷಮ ಸ್ಥಿತಿಯನ್ನು ಊಹಿಸಬಹುದು. ಇದನ್ನು ಹೋಗಲಾಡಿಸಲು ಪಾಲಕರ ಪಾಲನೆಯ ಭಾರಕ್ಕೆ ಹೆಗಲು ಕೊಟ್ಟು  ಸರ್ಕಾರವೆ ಅರ್ಧಭಾರ ಹೊರುವಂತಾದರೆ ಪ್ರಶಂಸನೀಯ ಕೆಲಸವೇ ಸರಿ. “ಸುಕನ್ಯಾ ಸಮೃದ್ಧಿ” ಎಂಬ ಹೆಸರಿನಡಿಯಲ್ಲಿ ಅಕೌಂಟ್ ತೆಗೆಯುವ ಯೋಜನೆ ಜಾರಿಯಾಯಿತು.10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆಗೆಯಲಾಗುವುದು. 21 ವರ್ಷವಾಗುವ ಹೊತ್ತಿಗೆ ಆ ಖಾತೆ ಮೆಚ್ಯೋರಿಟಿಗೆ ಬಂದಿರುತ್ತದೆ. 8.6% ವಾರ್ಷಿಕ ದರದಲ್ಲಿ ಬಡ್ಡಿ ನೀಡಲಾಗುವುದು. ಹುಡುಗಿಗೆ 18 ವರ್ಷದ ನಂತರ 50% ಹಣವನ್ನು ಹಿಂಪಡೆಯುವ ಅವಕಾಶವೂ ಇದೆ. ಅಲ್ಲಿಯವರೆಗೆ ಪಾಲಕರೇ ಆ ಅಕೌಂಟಿನ ವ್ಯವಹಾರ ನೋಡಿಕೊಂಡು ಹೋಗುತ್ತಾರೆ. ಈ ಅಕೌಂಟುಗಳನ್ನು ಬ್ಯಾಂಕುಗಳಲ್ಲೂ ತೆರೆಯಬಹುದು. ಅಕೌಂಟನ್ನು ಬ್ಯಾಂಕುಗಳಿಂದ ಪೋಸ್ಟ್ ಆಫೀಸಿಗೆ ಅಥವಾ ಮತ್ತೊಂದು ಬ್ಯಾಂಕಿಗೆ ವರ್ಗಾವಣೆ ಮಾಡಬಹುದು. ಗ್ರಾಹಕರ ವಾಸಸ್ಥಳಕ್ಕೆ ಅನುಕೂಲಕರ ಪ್ರದೇಶದಲ್ಲಿರುವ ಬ್ಯಾಂಕು ಅಥವಾ ಪೋಸ್ಟ್ ಆಫೀಸಿಗೆ ವರ್ಗಾಯಿಸಬಹುದು.

ಅಕೌಂಟು‌ ಮೆಚ್ಯೋರಿಟಿಗೆ ಬಂದ ನಂತರವೂ ಹಣವನ್ನು ಹಿಂಪಡೆಯದೇ ಇದ್ದರೆ ಆ ಮೊತ್ತವು ಬಡ್ಡಿಯನ್ನು  ಗಳಿಸುತ್ತಲೇ ಸಾಗುತ್ತದೆ. ಈ ಯೋಜನೆ ಸ್ಥಾಪನೆಯಾದ ಎರಡೇ ತಿಂಗಳಲ್ಲಿ 1,80,000 ಅಕೌಂಟುಗಳು ತೆರೆಯಲ್ಪಟ್ಟವು. ಇಷ್ಟರ ಮೇಲೇಯೆ ಯೋಜನೆಯೊಂದರ ಅವಶ್ಯಕತೆಯನ್ನು ತಿಳಿಯಬಹುದು.

“ಸುಕನ್ಯಾ ಸಮೃದ್ಧಿಯ” ಜೊತೆಗೆ, ಅಟಲ್ ಪಿಂಚಣಿ ಯೋಜನಾ, ಪ್ರಧಾನ ಮಂತ್ರಿ ಸ್ವಾಸ್ಥ್ಯ ವಿಮೆ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಯೋಜನೆ, ಸಂಧ್ಯಾ ಸುರಕ್ಷಾ ಹೀಗೆ ಬ್ಯಾಂಕಿಗೆ ಸೀಮಿತವಾದ ಕೆಲಸಗಳನ್ನು ಅಂಚೆ ಇಲಾಖೆಯ ಮೂಲಕ ಜೋಡಿಸಲಾಗಿದೆ. ಕೆಲವು ಜೀವವಿಮೆಗಳನ್ನು ತಾವು ಅಂಚೆ ಇಲಾಖೆಗಳಲ್ಲಿ ತೆಗೆಯಬಹುದು.

ಇಂಟರ್ನೆಟ್ ಮೂಲಕ ಬುಕ್ ಮಾಡಲ್ಪಡುವ ಕೆಲವೊಂದಿಷ್ಟು ಪ್ರಾಡಕ್ಟ್’ಗಳು ಕೆಲವು ಹಳ್ಳಿಗಳಿಗೆ ತಲುಪುವುದಿಲ್ಲ. ಈ ರೀತಿಯಾಗುವುದರಿಂದ ಹಳ್ಳಿ ಜನರು ಇಂಥ ಸೌಲಭ್ಯದಿಂದ ವಂಚಿತರಾಗುತ್ತಾರೆ. ಅಮೇಜಾನ್ ಪ್ಲಿಪ್’ಕಾರ್ಟ್ ನ್ಯಾಪ್ಟಲ್ ಇಂಥ ಹತ್ತು‌ ಹಲವು ಆನ್’ಲೈನ್ ಶಾಪಿಂಗ್ ಕಂಪನಿಗಳ ಜೊತೆಗೆ ಒಟ್ಟು 24000 ಇನ್ನಿತರೆ ಕಂಪನಿಗಳು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇನ್ನು ಮುಂದೆ ಆನ್ಲೈನ್ ಬುಕ್ ಮಾಡಿದ ವಸ್ತುಗಳು ಕುಗ್ರಾಮಗಳವರೆಗೆ ತಲುಪುತ್ತವೆ. ಒಟ್ಟು 139000 ಗ್ರಾಮೀಣ ಅಂಚೆ ಇಲಾಖೆಗಳಿರುವುದರಿಂದ ಅಂಚೆಯಣ್ಣ ಕ್ಯಾಶ್ ಆನ್ ಡೆಲಿವರಿ ಪ್ರಾಡಕ್ಟ್ಸ್’ಗಳನ್ನು ನಗರದಿಂದ ಹಳ್ಳಿಗಳಿಗೆ ತಲುಪಿಸಲು ಸಂಪರ್ಕ ಸೇತುವಾಗಬಲ್ಲ. ಪೋಸ್ಟ್’ಮ್ಯಾನ್ ಕೈಗೊಂದು ಸ್ಮಾರ್ಟ್ ಫೋನ್ ಸರ್ಕಾರದ ವತಿಯಿಂದ ವಿತರಣೆಯಾಗಲಿದ್ದು ಅದರಲ್ಲಿ ಗ್ರಾಹಕರ ಕೈಯಿಂದ ಡಿಜಿಟಲ್ ಸಿಗ್ನೇಚರ್ ಪಡೆಯುತ್ತಾನೆ. 2016 ಜನವರಿಯಲ್ಲಿ ಇಂಡಿಯನ್ ಟೈಮ್ಸ್ ಮಾಡಿರುವ ವರದಿಯ ಪ್ರಕಾರ ಅಂಚೆ ಕಚೇರಿ ಗಮನಾರ್ಹ (900%) ಲಾಭ ಹೊಂದಲು ಈ ಸೇವೆಗಳು ಕಾರಣವಾಗಿವೆ. ಅವತ್ತಿನ ಆ ವರದಿಯ ಪ್ರಕಾರ ದೈನಿಕ ಸರಾಸರಿಯಲ್ಲಿ ಅಮೇಜಾನ್ 3,00,000; ಸ್ನಾಪ್ ಡೀಲ್ 80,000; ಯೆಪ್ ಮೀ 60,000; ಮೈಂತ್ರಾ 50,000 ಮತ್ತು ಪ್ಲಿಪ್’ಕಾರ್ಟ್ 30,000  ಪ್ಯಾಕೇಜುಗಳ ರವಾನೆಗೆ ಅಂಚೆ ಇಲಾಖೆಯನ್ನು ಬಳಸಿಕೊಳ್ಳುತ್ತವೆ.  ಇನ್ನೂ ಸ್ವಲ್ಪ ದಿನಗಳಲ್ಲಿ ಇಲಾಖೆಯ ಕಡೆಯಿಂದ ರವಾನೆಯಾಗುವ ಪ್ಯಾಕೇಜುಗಳ ಟ್ರ್ಯಾಕಿಂಗ್ ಮೆಸೇಜುಗಳು ಕಳಿಸಿದವರಿಗೂ ತಲುಪಬೇಕಾದವರಿಗೆ ಬರಲಿದೆ.

ನೋಟ್’ಬ್ಯಾನ್ ನಂತರ ದೇಶದೆಲ್ಲೆಡೆ ನಡೆದ ಕರೆನ್ಸಿ ಎಕ್ಸಚೆಂಜ್ ಅಂಚೆ ಇಲಾಖೆಯನ್ನೂ ಬಳಸಿಕೊಳ್ಳಲಾಯಿತು. ಬಹಳ ಬೇಗ ಜನರ ಕೈಯಲ್ಲಿರುವ ರದ್ದಾದ ನೋಟಿನ ಬದಲು ಹೊಸ ನೋಟು ತರುವ ಕೆಲಸದಲ್ಲಿ ಇಲಾಖೆ ಸಹಕಾರಿಯಾಯಿತು.

ತೊಂಬತ್ತರ ದಶಕದವರೆಗೆ ಚೆನ್ನಾಗಿಯೇ ಇದ್ದ ಅಂಚೆ ಇಲಾಖೆ ಮೊಬೈಲ್ ಇಂಟರ್ನೆಟ್ ತರಹದ ಸೌಲಭ್ಯಗಳು ದೊರೆತ ಮೇಲೆ ದಿನೇ ದಿನೇ ಕುಸಿಯುತ್ತಾ ಹೋಯಿತು. ನಂತರದ ಕಾಲಘಟ್ಟದಲ್ಲಿ ಅದಕ್ಕೊಂದು ಜಡತ್ವ ಆವರಿಸಿತ್ತು. ಜಡತನದಿಂದ ಚಟುವಟಿಕೆ ತುಂಬಿ ಅದರಿಂದ ಕೆಲಸ ತೆಗೆಯುವ ಯೋಜನೆಗಳ ಜಾರಿಯಾಗಬೇಕಿತ್ತು. ಅದರ ಕಾಲ ಕೂಡಿಬಂತು. ಮೋದಿ ಸರ್ಕಾರ ಬಂದ ನಂತರ ಚೇತರಿಕೆ ಕಂಡ ಸರ್ಕಾರಿ ಇಲಾಖೆಗಳಲ್ಲಿ ಅಂಚೆಯೂ ಕೂಡಾ ಒಂದು. ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತು ತುಟ್ಟಿ ಭತ್ಯೆಗಳಲ್ಲಿ ಏರಿಕೆಯೂ ಆಯಿತು. ಅಂತೂ ಇಂತೂ ಅಳಿವನಂಚಿನಲ್ಲಿದ್ದ ಅಂಚೆಗೆ ಆಮ್ಲಜನಕದಂತಾದದ್ದು ಸದ್ಯದ ಸರ್ಕಾರ ಎಂದರೆ ತಪ್ಪಾಗಲಾರದು. ಮುಂದಿನ ಅಂಚೆಯ ದಿನ ಬರುವುದರಲ್ಲಿ ಇನ್ನಷ್ಟು ಅಭಿವೃದ್ಧಿ ಕಂಡುಬರಲಿ ಅಂಚೆ ಇಲಾಖೆಯಲ್ಲಿನ ಎಲ್ಲ‌ ನೌಕರರಿಗೆ ಅಂಚೆದಿನದ ಶುಭಾಶಯಗಳು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!