ಅಂಕಣ ಸ್ಪ್ಯಾನಿಷ್ ಗಾದೆಗಳು

ಮನಸ್ಸಿದ್ದರೆ ಮಾರ್ಗ…!

ಸ್ಪ್ಯಾನಿಷ್ ಗಾದೆಗಳು :೧) Donde hay gana, hay maña

ನಾವೆಲ್ಲಾ ಒಂದೇ ಎನ್ನುವುದಕ್ಕೆ ಹತ್ತಾರು ಪುರಾವೆ ಕೊಡಬಹುದು. ಆಹಾರ, ವೇಷ-ಭಾಷೆ, ಬಣ್ಣದ ಜೊತೆಗೆ ನಮ್ಮ ದೇಶವೂ ಬದಲಾಗಿರಬಹದು. ಆದರೇನು ನಾವೆಲ್ಲಾ ಒಂದೇ ಎನ್ನಲು ಗಾದೆಗಳು ಸಾಮಾನ್ಯ ದಾರದಂತೆ ನಮ್ಮಲ್ಲಿ ಉಳಿದಿವೆ. ಅದು ಸ್ಪ್ಯಾನಿಷ್ ಇರಬಹದು ಫ್ರೆಂಚ್ ಅಥವಾ ಜರ್ಮನ್!  ಗಾದೆಗಳ ಸಾರ ಒಂದೇ. ಅವು ಅನುಭವದ ಮಾತುಗಳು!  ನಮ್ಮ ಹಿರಿಯರು ಬದುಕಲು ನಮಗೆ ಹೇಳಿಕೊಟ್ಟ ಪಾಠಗಳು. ಹತ್ತಾರು ಪುಟಗಳಲ್ಲಿ ಬರೆದಿಟ್ಟರೆ ಮುಂದಿನ ಜನಾಂಗ ಓದುವುದೂ ಇಲ್ಲವೋ ಎನ್ನುವ ಭಯವೋ ತಿಳಿಯದು ಬದುಕಿನ ಪಾಠವ ಒಂದು ಸಾಲಿನಲ್ಲಿ ಹಿಡಿದಿಡುವ ಗಾದೆಗಳು ಜಗತ್ತಿನ ಎಲ್ಲಾ ದೇಶಗಳಲ್ಲೂ ಇವೆ.

ಒಂದು ಹೊಸ ಭಾಷೆ, ಹೊಸ ಸಂಸ್ಕೃತಿ ಕಲಿಯುತ್ತಾ ಹೋದಂತೆ ಅಚ್ಚರಿಯಾಗುತ್ತೆ. ಅದಕ್ಕೆ ಕಾರಣ ಸಾಮ್ಯತೆ. ಮೇಲ್ನೋಟಕ್ಕೆ ನಾವು ಭಿನ್ನ ಎನಿಸುವ ಜೀವನ ಶೈಲಿ, ಭಾಷೆ, ಒಮ್ಮೆಲೇ ವಾಹ್ ಇಷ್ಟೊಂದು ಸಾಮ್ಯತೆ ಇದೆಯಲ್ಲ ಎನ್ನುವ ಅಚ್ಚರಿಯ ಕೂಪಕ್ಕೆ ದೂಡುತ್ತದೆ. ನಮ್ಮ ಹಿರಿಯರು ಯೋಚಿಸುತ್ತಿದ್ದ ರೀತಿ ಗಡಿ ಭಾಷೆಗಳ ಮೀರಿ ಒಂದೇ ಆಗಿತ್ತು. ಅವರೆಲ್ಲರ ಚಿಂತನೆ ಸರಳ ಬದುಕು-ಸುಂದರ ಬದುಕು ಎನ್ನವುದೇ ಆಗಿತ್ತು. ಹಿರಿಯರು ಟಿಪ್ಸ್ ರೀತಿಯಲ್ಲಿ ಕೊಟ್ಟ ಗಾದೆಗಳ ಮರೆತದ್ದು ಇವತ್ತಿನ ಸಂಕೀರ್ಣತೆಗೆ ಕಾರಣವಿರಬಹದೇ? ಎನ್ನುವ ಪ್ರಶ್ನೆ  ಉದ್ಭವವಾಗುತ್ತದೆ. ಇರಲಿ.

‘Donde hay gana, hay maña’ ಇದನ್ನು ಇಂಗ್ಲಿಷಿಗೆ ಅನುವಾದಿಸಿದರೆ “Where there’s a will, there’s a way.” ಎನ್ನುವ ಅರ್ಥ ಕೊಡುತ್ತದೆ. ಕನ್ನಡದಲ್ಲಿ ‘ಮನಸಿದ್ದರೆ ಮಾರ್ಗ’ ಎನ್ನಲು ಅಡ್ಡಿಯಿಲ್ಲ. ಹೌದಲ್ವಾ ನಾವು ಯಾವುದನ್ನೇ ಆಗಲಿ ಮಾಡಬೇಕು ಎನ್ನುವ ಉತ್ಕಟ ಆಕಾಂಕ್ಷೆ ಹುಟ್ಟಿಬಿಟ್ಟರೆ ಮಿಕ್ಕ ದಾರಿ ತಾನಾಗೆ ತೆರೆದುಕೊಳ್ಳುತ್ತದೆ. ಆಸೆ ಎನ್ನವುದು ಎಲ್ಲರಲ್ಲೂ ಇರುತ್ತದೆ ಆದರೇನು ಏನಾದರಾಗಲಿ ಅದನ್ನ ಸಾಧಿಸಿಯೆ ತೀರುವೆ ಎನ್ನುವ ತೀವ್ರ ಸೆಳೆತ ಮಾತ್ರ ಮಾರ್ಗವನ್ನು ತೋರಬಲ್ಲದು. ಡಿಸೈರ್ (ಆಸೆ) ಸಾಲದು ಬರ್ನಿಂಗ್ ಡಿಸೈರ್ (ಉತ್ಕಟ ಆಸೆ) ಇದ್ದಲ್ಲಿ ಯಾವ ಕಾರ್ಯವೂ ಅಸಾಧ್ಯವಲ್ಲ ಎನ್ನುವ ಸಂದೇಶವನ್ನ ಈ ಗಾದೆ ನೀಡುತ್ತದೆ .

ಸ್ಪ್ಯಾನಿಷ್ ಪದಗಳ ಅರ್ಥ :  ೧ ) Donde = ಎಲ್ಲಿ  ೨)hay = ಇದೆ ೩)gana = ಆಸಕ್ತಿ , ಆಸೆ , ಬಯಕೆ  ೪)maña = ಪದಕೋಶದ ಪ್ರಕಾರ ಗುಣ ಅಥವಾ ಸ್ಕಿಲ್ ಎನ್ನುವ ಅರ್ಥ ಕೊಡುತ್ತೆ . ಭಾವಾರ್ಥ ತೆಗೆದುಕೊಂಡರೆ ದಾರಿ ಅಥವಾ ಮಾರ್ಗ ಎನ್ನುವ ಅರ್ಥ ನೀಡುತ್ತದೆ.

ಮುಂದಿನ ವಾರ ಸ್ಪೇನ್ ಅಲ್ಲಿ ಚಾಲ್ತಿಯಲ್ಲಿರುವ ಇನ್ನೊಂದು ಗಾದೆಮಾತಿನೊಂದಿಗೆ ನಿಮ್ಮೊಂದಿಗೆ..

– ರಂಗಸ್ವಾಮಿ ಮೂಕನಹಳ್ಳಿ

<mookanahalli@gmail.com>

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!