ಅಂಕಣ

ದೇವೇಗೌಡರೇ, ನೀವು ನಿಜವಾದ ಜಾತ್ಯಾತೀತ ಆಗುವುದು ಯಾವಾಗ? ?

ಕೃಷಿಕ್ ಸರ್ವೋದಯದ  ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಇಬ್ಬರು  ಒಕ್ಕಲಿಗ  ರಾಜಕಾರಣಿಗಳು  (ಒಕ್ಕಲಿಗರ  ನಾಯಕರು ಎಂದು ಹೇಳುತ್ತಿಲ್ಲ) ಪರಸ್ಪರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಡಿಕೆಶಿಯವರನ್ನು ಉದ್ದೇಶಿಸಿ “ನಿಮ್ಮನ್ನು  ಸುಲಭವಾಗಿ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಳ್ಳಬೇಡಿ. ಒಕ್ಕಲಿಗರನ್ನು ಎರಡನೇ ದರ್ಜೆಯಯಲ್ಲಿಯೇ ಇರಿಸುತ್ತಾರೆ. ಮೊದಲಿನ ದರ್ಜೆಗೆ ಹೋಗಲು ಬಿಡುವುದಿಲ್ಲ” ಎಂಬ ಮಾತುಗಳನ್ನು ಆಡಿದ್ದಾರೆ. ತಮ್ಮ ಬಗ್ಗೆ ದೇವೇಗೌಡರು (?) ಅನುಕಂಪದ ಮಾತುಗಳನ್ನು ಕೇಳಿದ ಡಿಕೆಶಿಯವರು ಅಷ್ಟೇ ಪ್ರೀತಿಯಿಂದ “ದೇವೇಗೌಡರು ಸಾಧನೆ ಮಾಡಿ ಪ್ರಧಾನಿ ಆದರು. ಅದಕ್ಕಾಗಿ ಅವರು ಎಷ್ಟು ಉಳಿ ಏಟು ತಿಂದಿದ್ದರೋ ಏನೋ” ಎಂದು ಪ್ರತಿಕ್ರಿಯಿಸಿದ್ದಾರೆ.

ಮೇಲ್ನೋಟಕ್ಕೆ ದೇವೇಗೌಡರ ಮಾತುಗಳು ಡಿಕೆಶಿಯವರಿಗೆ ಅನುಕಂಪದ  ಮಾತಿನಂತೆ ಕಂಡರೂ,  ದೇವೇಗೌಡರನ್ನು ಅಲ್ಪಸ್ವಲ್ಪ ಬಲ್ಲವರಿಗೂ, ಇದು ಕಾಂಗ್ರೆಸ್ ಪಾಳಯದ ಮೇಲೆ ಎಸೆದ ಬಾಂಬು  ಎಂದು ಗೊತ್ತಾಗುತ್ತದೆ. ತಮ್ಮ ಪಕ್ಷದಲ್ಲಿಯೇ  ಬೆಳೆದು, ದೇವೇಗೌಡರ ವಿರೋಧ ಕಟ್ಟಿಕೊಂಡು, ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗಿಂತ, ಡಿಕೆಶಿ ಹೆಚ್ಚು ಆಪ್ಯಾಯಮಾನವಾಗಿರುವುದು ಸ್ಪಷ್ಟ. ಡಿಕೆಶಿಯವರನ್ನು ಉಪೇಕ್ಷೆ ಮಾಡಿ, ಕಾಂಗ್ರೆಸ್ ಒಕ್ಕಲಿಗರನ್ನು ಕಡೆಗಣಿಸುತ್ತಿದೆ ಎಂಬ ಸಂದೇಶವನ್ನು ಜನರಿಗೆ ಕೊಡಲು ಆಡಿದ ಮಾತುಗಳು ಇವು ಎಂದು ಸಣ್ಣ ಮಕ್ಕಳಿಗೂ ತಿಳಿಯುವ ವಿಷಯ. ಆದರೆ  ಇದನ್ನು ತಿಳಿಯದ (?) ಡಿಕೆಶಿಯವರು, ಕಾಂಗ್ರೆಸ್ ನಡೆಯನ್ನು ಸಮರ್ಥಿಸದೆ, ದೇವೇಗೌಡರ ಮಾತನ್ನು ಅನುಮೋದಿಸುತ್ತ, ‘ನಿಮ್ಮ ಆಶೀರ್ವಾದ   ಹೀಗೆ ಇರಲಿ ‘ ಎಂದು   ಎಂದು ಹೇಳಿ ಖೆಡ್ಡಾಕ್ಕೆ ಬಿದ್ದಿದ್ದಾರೆ. ಮುಖ್ಯಮಂತ್ರಿ ಆಕಾಂಕ್ಷಿಗೆ ಕಾಡಿ ಬೇಡಿ, ಮಂತ್ರಿ ಪದವಿ ಕೊಟ್ಟಿದ್ದು , ಒಂದು ಕಡೆಯಾದರೆ, ಐಟಿ ದಾಳಿಯಲ್ಲಿ ಸಿದ್ದರಾಮಯ್ಯನವರ ಕೈವಾಡ ಇರುವ ಅನುಮಾನ,  ಡಿಕೆಶಿಯವರ ಮನಸ್ಸಿನಲ್ಲಿ ಇದೆ. ಹಾಗಾಗಿ ‘ಶತ್ರುವಿನ ಶತ್ರು ಮಿತ್ರ’ ಎಂಬ ತೀರ್ಮಾನಕ್ಕೆ ಇಬ್ಬರು ಒಕ್ಕಲಿಗ ರಾಜಕಾರಣಿಗಳು ಬಂದಿದ್ದಾರೆ.

ಇದು ರಾಜಕೀಯ. ವಿಷಯ ಅದಲ್ಲ.

ನಾನು ದೇವೇಗೌಡರಿಗೆ ಕೇಳಬೇಕೆಂದಿರುವ ಪ್ರಶ್ನೆಗಳು:

೧) ನಿಮ್ಮನ್ನು ಅಥವಾ ನಿಮ್ಮ ಮಕ್ಕಳನ್ನು, ಕುಟುಂಬ ಸದಸ್ಯರನ್ನು ಮುಖ್ಯಮಂತ್ರಿ ಮಾಡಿದರೆ , ಒಕ್ಕಲಿಗರು ಪ್ರಥಮ ದರ್ಜೆ ಪ್ರಜೆಯಾಗುತ್ತಾರೆಯೇ? ಡಿಕೆಶಿಯವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದರೆ, ಒಕ್ಕಲಿಗರು ದ್ವಿತೀಯ ದರ್ಜೆಯಾಗುತ್ತಾರೆ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಉದ್ಧಾರವಾದರೆ, ಒಕ್ಕಲಿಗ ಸಮುದಾಯ ಉದ್ಧಾರವಾದಂತೆ ಎಂದು ನೀವು ಭಾವಿಸಿರುವಂತಿದೆ. ಇದು ನಿಜವೇ?ಒಬ್ಬ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಉದ್ಧಾರವಾಗುವುದು ಕುಮಾರಸ್ವಾಮಿಯವರೇ ಹೊರತು ಒಕ್ಕಲಿಗ ಸಮುದಾಯವಲ್ಲ. ಒಬ್ಬ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ಉದ್ಧಾರವಾಗುವುದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರೇ ಹೊರತು , ಕುರುಬ ಜನಾಂಗವಲ್ಲ . ಒಬ್ಬ ಪರಮೇಶ್ವರ ಮುಖ್ಯಮಂತ್ರೀಯಾದರೆ , ಉದ್ದಾರವಾಗುವುದು ಪರಮೇಶ್ವರ್ ಕುಟುಂಬವೇ ಹೊರತು, ದಲಿತ ಸಮುದಾಯವಲ್ಲ. ಒಬ್ಬ ಇಬ್ರಾಹಿಂ ಮುಖ್ಯಮಂತ್ರಿಯಾದರೆ ಉದ್ದಾರವಾಗುವುದು ಇಬ್ರಾಹಿಂ ಕುಟುಂಬವೇ ಹೊರತು ಮುಸ್ಲಿಂ ಸಮುದಾಯವಲ್ಲ . ಒಬ್ಬ ಜಾರ್ಜ್ ಮುಖ್ಯಮಂತ್ರಿಯಾದರೆ ಮುಂದುವರೆಯುವುದು , ಜಾರ್ಜ್ ಕುಟುಂಬವೇ ಹೊರತು, ಕ್ರೈಸ್ತ ಸಮುದಾಯವಲ್ಲ. ಇದು ಸರಳ ಕಟು ಸತ್ಯ . ಕಳೆದು ಐವತ್ತು ವರ್ಷಗಳಲ್ಲಿ , ತಮ್ಮ ಜೀವನದ  ರಾಜಕೀಯ ಘಟನೆಗಳನ್ನು ಜ್ಞಾಪಕವಿಟ್ಟಿರುವ ತಮಗೆ,  ಮುಂದಿನ ಜನುಮದಲ್ಲಿ ಹುಟ್ಟಿದರೆ ಮುಸ್ಲಿಮನಾಗಿ ಹುಟ್ಟುವೆ ಎಂದು ತಾವು ಹೇಳಿದ್ದು ನೆನಪಿದೆಯೇ?  ಮುಸ್ಲಿಂ  ಎಂದು ಹೇಳಿಕೊಂಡರೆ,  ಎರಡನೆಯ ಬಾರಿ ಪ್ರಧಾನಮಂತ್ರಿಯಾಗಲು  ಸಾಧ್ಯ ಎಂಬ ಕಾರಣದಿಂದಲೋ , ಅಥವಾ ಒಕ್ಕಲಿಗ ಎಂಬ ಎರಡನೇ ದರ್ಜೆ ಪ್ರಜೆಯಾಗಲು ಇಷ್ಟವಿಲ್ಲ ಎಂದೋ? ಜಾತಿವ್ಯವಸ್ಥೆಯಲ್ಲಿ ಅಷ್ಟೊಂದು ನಂಬಿಕೆ ಇಟ್ಟಿರುವ ತಾವು ತಮ್ಮ ಪಕ್ಷಕ್ಕೆ ಜಾತ್ಯತೀತ ಎಂದು ಹೆಸರು ಇಟ್ಟುಕೊಂಡಿರುವುದೇಕೆ?

೨೪ x ೭ ದಿನವೂ ರಾಜಕಾರಣ ಮಾಡುವ ದೇವಗೌಡರಿಂದ, ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಸಹಜವಾಗಿ ಇಂತಹ ಮಾತುಗಳನ್ನು ಆಡಿದ್ದಾರೆ. ವೀಕ್ ಎಂಡ್ ವಿಥ್ ರಮೇಶ್ ಎಂಬ ಕಾರ್ಯಕ್ರಮದ ಕೊನೆಯಲ್ಲಿ, ನೀವು ಯಾರಿದಾದರೂ ವೈಯಕ್ತಿಕವಾಗಿ ಕ್ಷಮೆ ಅಥವಾ ವಂದನೆ ಹೇಳಲು ಇಚ್ಛಿಸುತ್ತೀರಾ ಎಂಬ ಖಾಸಗಿ ಪ್ರಶ್ನೆಯನ್ನು ಕೂಡ, ದೇವೇಗೌಡರು ಬಳಸಿಕೊಂಡಿದ್ದು, ಮೋದಿಯವರನ್ನು ಹಳಿಯಲು. ಅದು ಕಳೆದು ಸ್ವಲ್ಪ ದಿನದಲ್ಲೇ ವಿರೋಧಪಕ್ಷದವರೆಲ್ಲ ಬಹಿಷ್ಕರಿಸಿದ್ದ ಸಮಾರಂಭದಲ್ಲಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡರು. ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಹೇಳಿದ್ದವರು, ಸ್ವಲ್ಪವೂ ನಾಚಿಕೊಳ್ಳದೆ  ಮೋದಿಯವರನ್ನು ಭೇಟಿಮಾಡಿ ಬರುತ್ತಾರೆ. ಒಕ್ಕಲಿಗರ ಸಭೆಯಲ್ಲಿ ಒಕ್ಕಲಿಗರಂತೆ, ಮುಸ್ಲಿಮರ ಸಭೆಯಲ್ಲಿ ಮುಸ್ಲಿಮರಾಗಿ, ದಲಿತರ ಮನೆಯಲ್ಲಿ ದಲಿತರಂತೆ, ಕ್ರೈಸ್ತರ ಮನೆಯಲ್ಲಿ ಫಾದರ್’ನಂತೆ  ನಡೆದುಕೊಳ್ಳುವ ಕಲೆ ಗೌಡರಿಗೆ ಸಿದ್ದಿಸಿದೆ. ಆದರೆ ಒಂದೇ ರೀತಿಯ ತಂತ್ರದಿಂದ ಜನರನ್ನು ಪದೇ ಪದೇ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂಬ ಸತ್ಯವನ್ನು  ದೇವೇಗೌಡರು ಅರಿತುಕೊಳ್ಳಬೇಕು .

ಈ ಸಂದರ್ಭದಲ್ಲಿ ಕರ್ನಾಟಕದ ಮೂರನೇ ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪರವರನ್ನು ನೆನೆಪಿಸಿಕೊಳ್ಳಬೇಕು. ಹುಟ್ಟಿನಿಂದ ಒಕ್ಕಲಿಗರಾದರೂ, ಸಾರ್ವಜನಿಕ ಜೀವನಕ್ಕೆ ಬಂದಮೇಲೆ  ತಮ್ಮ ಹೆಸರಿನಲ್ಲಿದ್ದ   ‘ಗೌಡ’ ಎಂಬ ಜಾತಿ ಸೂತಕ ಪದವನ್ನು ಕೈಬಿಟ್ಟರು. ಕಾರಣ ಸಾರ್ವಜನಿಕ ಬದುಕಿನಲ್ಲಿ ಇರುವರು ಜಾತ್ಯಾತೀತರಾಗಿರಬೇಕು ಎನ್ನುವ ನಿಲುವು. ಇದರಲ್ಲಿ ತೋರಿಕೆ, ಬೂಟಾಟಿಕೆ, ಪ್ರಚಾರಪ್ರಿಯತೆ ಯಾವುದು ಇರಲಿಲ್ಲ. ಅವರು ಎಂದೂ ಜಾತಿ ಬಳಸಿಕೊಂಡು ಮುಖ್ಯಮಂತ್ರಿಯಾಗಲು ಯತ್ನಿಸಲಿಲ್ಲ . ಅಧಿಕಾರ ಇರುವಾಗಲೂ, ಇಲ್ಲದಿರುವಾಗಲು ಸ್ವಜಾತಿ ರಾಜಕೀಯದಿಂದ ದೂರವೇ ಇದ್ದರು.

ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆ ಕುವೆಂಪುರವರು. ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪುರವರು, ತಾವು ಒಕ್ಕಲಿಗರು ಎಂದು ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಒಕ್ಕಲಿಗರ  ಜಾತಿ ಆಧಾರಿತ ಸಮಾರಂಭಗಳಿಗೆ ಕರೆದರೆ ಹೋಗುತ್ತಿರಲಿಲ್ಲ. ಜಾತಿ ಆಧಾರಿತ ಪಶಸ್ತಿಗಳಿಂದ ದೂರವೇ ಉಳಿಯುತ್ತಿದರು. ಬಲವಂತ ಮಾಡಿದರೆ “ನನ್ನನು ಒಂದು ಜಾತಿಗೆ ಸೀಮಿತ ಮಾಡಿ ಕುಬ್ಜನನ್ನಾಗಿ ಮಾಡಬೇಡಿ” ಎಂದು ಸಮುದಾಯದವರಿಗೆ ಖಡಾಖಂಡಿತವಾಗಿ ಹೇಳಿ ಬಿಡುತ್ತಿದರು. ಕುವೆಂಪುರವರಿಗೆ ಬಂದ ಪ್ರಶಸ್ತಿಗಳು, ಲೇಖನಿಯ ಗುಣಮಟ್ಟವನ್ನೇ ಆಧರಿಸಿ ಬಂದವೇ ಹೊರತು, ಬೇರೆ ಕಾರಣಗಳಿಂದಲ್ಲ.  ಆದ್ದರಿಂದಲೆ ಅವರು ವಿಶ್ವಮಾನವರಾಗಿ ಬೆಳೆಯಲು ಸಾಧ್ಯವಾಯಿತು.  ಇಂದಿಗೂ ಕನ್ನಡಕ್ಕೆ ಬಂದ  ಮೊದಲ ನಾಲ್ಕು ಜ್ಞಾನಪೀಠ ಪ್ರಶಸ್ತಿಗಳು ಪಡೆದುಕೊಂಡವು ಮಿಕ್ಕವು ಹೊಡೆದುಕೊಂಡವು ಎಂದು ಜನ ಆಡಿಕೊಳ್ಳುತ್ತಾರೆ.

ನಮಗೆ ಬೇಕಾಗಿರುವುದು ಒಕ್ಕಲಿಗ, ಬ್ರಾಹ್ಮಣ, ಲಿಂಗಾಯಿತ, ದಲಿತ ಅಥವಾ  ಮುಸ್ಲಿಂ ಮುಖ್ಯಮಂತ್ರಿಗಳಲ್ಲ. ಜಾತಿ ಮೀರಿದಂತ ವಿಶ್ವಮಾನವ ನಾಯಕರು ನಮಗೆ ಬೇಕಿರುವುದು. ಉತ್ತಮ ರಸ್ತೆ, ಚರಂಡಿ, ನೀರು, ವಿದ್ಯುತ್’ನಂತ ಮೂಲಸೌಕರ್ಯ ಒದಗಿಸುವ ರಾಜಕಾರಣಿಗಳು ನಮಗೆ ಬೇಕು. ನಮಗೆ ಬೇಕಿರುವುದು ಕುವೆಂಪುರವರಂತ ವಿಶ್ವಮಾನವರೇ ಹೊರತು , ಚಂಪಾ, ಕುಂವೀರಂತ ಜಾತಿವಾದಿಗಳಲ್ಲ. ನಮಗೆ ಕಾಂಗ್ರೆಸ್ಸಿನ ಜಾತ್ಯತೀತ ಕಡಿದಾಳು ಮಂಜಪ್ಪನಂತವರು ಬೇಕೇ ಹೊರತು,  ಜಾತ್ಯತೀತ ದಳದ ಹಿನ್ನಲೆ ಹೊಂದಿರುವ, ಜಾತಿ ಒಡೆಯುವ  ಸಿದ್ದರಾಮಯ್ಯನವರು  ಅಲ್ಲ. ನಮಗೆ ಬೇಕಿರುವುದು ಸ್ವಜಾತಿಯವರಿಗೆ ಕೆಲಸಕೊಡು ಎಂದು ಕೇಳಬಾರದು ಅಂದು ತಾಯಿಯಿಂದ ಭಾಷೆ ತೆಗೆದುಕೊಂಡ ವಿಶೇಶ್ವರಯ್ಯನಂತವರು ಬೇಕೇ ಹೊರತು, ಬಂಧುಬಳಗ ಸುತ್ತಿಕೊಂಡ ಡಿಕೆಶಿಯಂತ  ಮಂತ್ರಿಗಳಲ್ಲ.

ಸರ್ಕಾರದ ಪ್ರಮುಖ ಹುದ್ದೆಗಳಿಗೆ ಜಾತಿ ಆಧಾರದ ಮೇಲೆ ಆರಿಸುವುದನ್ನು ಎಲ್ಲಿಯವರೆಗೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಹೀಗೆಯೇ ಇರುತ್ತದೆ. ಉನ್ನತ ಹುದ್ದೆಗಳು, ಬುದ್ದಿಮತ್ತೆ, ಕಠಿಣ ಶ್ರಮ, ದೂರ ದೃಷ್ಟಿ ಮತ್ತು ಬದ್ಧತೆಯನ್ನು ಬೇಡುತ್ತವೆ . ಅದು ಇಲ್ಲದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ , ದೀರ್ಘಾವದಿಯಲ್ಲಿ ಎಲ್ಲರಿಗೂ ನಷ್ಟವೇ .  ನಮ್ಮದೇಶದಲ್ಲಿ ಕ್ರಿಕೆಟ್ ತಂಡಕ್ಕೆ ಒಬ್ಬ ಹಿಂದೂ, ಒಬ್ಬ ಮುಸ್ಲಿಂ, ಒಬ್ಬ ಕ್ರಿಶ್ಚಿಯನ್, ಬೌದ್ಧ , ಜೈನ, ಸಿಖ್ ಒಬ್ಬ ಲಿಂಗಾಯಿತ (!) , ಒಬ್ಬ ವೀರಶೈವ (!) ಇರಬೇಕು ಎಂದು ನಿಯಮ ಬಂದರೆ , ತಂಡದ ಪರಿಸ್ಥಿತಿ ಏನಾಗುತ್ತದೆ ಊಹಿಸಿ ಕೊಳ್ಳಿ . ಒಂದು ಸಾವಿರ ವರ್ಷವಾದರೂ ಒಂದು ಪಂದ್ಯ ಗೆಲ್ಲುವುದು ಕೂಡ ಕಷ್ಟ . ಹಾಗೆಯೇ ಉನ್ನತ ಸರ್ಕಾರೀ ಹುದ್ದೆಗಳಿಗೆ ಅರ್ಹತೆ ಮಾತ್ರವೇ ಒಂದೇ ಮಾನದಂಡವಾಗಬೇಕು. ಅಸಮರ್ಥ ಸ್ವಜಾತಿ ಸರ್ಕಾರೀ ಸೇವಕ ದೇಶಕ್ಕೆ ಎಂದೆಂದಿಗೂ ಭಾರವೇ . ಅದೇ ಕಾರಣಕ್ಕೆ ದೇವೇಗೌಡರು ದೇಶದ ಪ್ರಧಾನ ಮಂತ್ರಿಯಾದರೂ , ಹೆಮ್ಮೆಯ ಪ್ರಧಾನ ಮಂತ್ರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ ನೆಡೆದುಕೊಂಡಿಲ್ಲ .

ದೇವೇಗೌಡರು  ರಾಜ್ಯದ ಹಿರಿಯ ರಾಜಕಾರಣಿಗಳು. ಕರ್ನಾಟಕದ  ಅಭಿವೃದ್ಧಿಗೆ ಖಂಡಿತ ದೇವೇಗೌಡರ  ಕೊಡುಗೆಯು ಇದೆ. ಕರ್ನಾಟಕದ ಏಕೈಕ ಮಾಜಿ ಪ್ರಧಾನ ಮಂತ್ರಿಗಳು. ಅವರ ವಯಸ್ಸಿಗೆ ಹೊಂದುವಂತ  ಮುತ್ಸದಿಯ ಮಾತುಗಳನ್ನ ಕರ್ನಾಟಕದ ಜನತೆ ನಿರೀಕ್ಷಿಸುತ್ತದೆ. ಅವರು ತಮ್ಮ ನಡೆನುಡಿಗಳಿಂದ ಕಿರಿಯ ರಾಜಕಾರಣಿಗಳಿಗೆ ಆದರ್ಶವಾಗಬೇಕೆ ಹೊರತು, ಕೀಳು ಮಟ್ಟದ ರಾಜಕೀಯಕ್ಕೆ ಇಳಿಯಬಾರದು. ಈ ಜೀವನ ಘಟ್ಟದಲ್ಲಿ ನೀವು ಈ ರೀತಿ ನಡೆದುಕೊಂಡರೆ ಅದು ನಿಮಗೆ ಶೋಭೆ ತರುವುದಿಲ್ಲ. ಅಲ್ಲದೆ ಆಧುನಿಕ ಕರ್ನಾಟಕ ಜಾತ್ಯತೀತ ,  ದಾರ್ಶನಿಕ  ಮತ್ತು  ಕ್ರಿಯಾಶೀಲ, ನಾಯಕರನ್ನು ಬೇಡುತ್ತದೆ. ಆದ್ದರಿಂದ ದೇವೇಗೌಡರೇ ನೀವು ಏಕೆ ರಾಜಕೀಯದಿಂದ ನಿವೃತ್ತರಾಗಬಾರದು ?

ಡಾ ದಯಾನಂದ ಲಿಂಗೇಗೌಡ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!